ಗುರುವಾರ, ಆಗಸ್ಟ್ 24, 2017

ಇದೊಂದು ಅದ್ಭುತ ಪ್ರಪಂಚ!

ಇನ್ನು ಹತ್ತತ್ರ ನಿಲ್ಲಿ... ಮುಖ ಸ್ವಲ್ಪ ಮೇಲೆ ಮಾಡಿ... ಓಕೆ... ರೆಡಿನಾ... ಸ್ಮೈಲ್ ಪ್ಲೀಸ್... ಇದೊಂದು ಮಗ್ಗುಲಾದರೆ, ಜನದಟ್ಟಣೆಯ ನೂಕುನುಗ್ಗಲಿನ ನಡುವೆಯೇ ಮುನ್ನಗ್ಗಬೇಕು. ಮಳೆ-ಗಾಳಿ, ನಿಷೇಧಾಜ್ಞೆ, ಲಾಠಿ ಚಾರ್ಜ್ ಯಾವುದನ್ನೂ ಲೆಕ್ಕಿಸದೆ ಪ್ರಾಣದ ಹಂಗು ತೊರೆದು ಘಟನಾ ಸ್ಥಳದಲ್ಲಿರಬೇಕು. ಅರೆಕ್ಷಣ ತಡವಾದರೂ ಸಹ ಬಹು ಮುಖ್ಯವಾದ ಸ್ನ್ಯಾಪ್ ತಪ್ಪಿಹೋಗುತ್ತದೆ!! ಸದಾ ಧಾವಂತದ ಬದುಕು, ಸಮಯದ ಹಿಂದೆಯೇ ಓಡುತ್ತಿರಬೇಕು. ಇದು ಇನ್ನೊಂದು ಮಗ್ಗಲು.
ಇದು ವೃತ್ತಿ ನಿರತ ಛಾಯಾಗ್ರಾಹಕರು ಪ್ರತಿನಿತ್ಯ ಎದುರಿಸಬೇಕಾದ ಸವಾಲುಗಳು. ಪ್ರತಿನಿತ್ಯ ಒಂದಿಲ್ಲೊಂದು ಸಮಾರಂಭದಲ್ಲಿ ಪಾಲ್ಗೊಂಡು, ಭಿನ್ನ-ವಿಭಿನ್ನ ನೋಟದ ಚಿತ್ರಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಆಯೋಜಕರ ಮನ ಗೆಲ್ಲುವ ಛಾಯಾಗ್ರಾಹಕರು ಒಂದು ಕಡೆಯಾದರೆ, ಮಾಧ್ಯಮಕ್ಕೆ ಬೇಕಾಗುವ ಪತ್ರಿಕಾ ಫೊಟೋಗಳನ್ನು ಸೆರೆ ಹಿಡಿಯಲು ಸಮಯದ ಹಿಂದೆ ಓಡುವ ಛಾಯಾಗ್ರಾಹಕರು ಇನ್ನೊಂದೆಡೆ. ಹಾಗೆಯೇ ಹವ್ಯಾಸಿ ಛಾಯಾಗ್ರಾಹಕರು, ವನ್ಯಜೀವಿ ಛಾಯಾಗ್ರಾಹಕರು ಕೂಡಾ ತಮ್ಮ ಆಸಕ್ತಿಗನುಗುಣವಾಗಿ ಫೊಟೋಗಳನ್ನು ಕ್ಲಿಕ್ಕಿಸುತ್ತಾರೆ.
ಫೊಟೋಗ್ರಫಿ ಎನ್ನುವುದು ಒಂದು ತಪಸ್ಸು. ತಾಳ್ಮೆ ಇದ್ಸವನು ಮಾತ್ರ ಇಲ್ಲಿ ಯಶಸ್ವಿಯಾಗುತ್ತಾನೆ. ಈ ಮೊದಲು ಹಣವಿದ್ದವರ ಕೈಯ್ಯಲ್ಲಿ ಮಾತ್ರ ಕ್ಯಾಮರಾ ಕಂಡು ಬರುತ್ತಿತ್ತು. ಅವರ ಕೈಯ್ಯಲ್ಲಿರುವ ಕ್ಯಾಮರಾ ನೋಡಿ ‘ಏಯ್, ಅವನು ಕ್ಯಾಮರಾ ತಗೊಂಡಿದ್ದಾನೆ, ನೋಡ್ರೋ...’ ಎಂದು ಹುಬ್ಬೇರಸುತ್ತಿದ್ದರು. ಆದರೆ, ಈಗ ಕ್ಯಾಮರಾ ಎನ್ನುವುದು ಮಕ್ಕಳ ಆಟಿಕೆ ಸಾಮಾನಿನಂತಾಗಿದೆ. ಶ್ರೀಸಾಮಾನ್ಯನ ಕೊರಳಲ್ಲೂ ಅದು ತೂಗಾಡುತ್ತ, ಸುತ್ತಮುತ್ತಲಿನ ಚಿತ್ರಗಳನ್ನು ಸೆರೆಹಿಡಿಯುತ್ತಲೇ ಇರುತ್ತವೆ. ಕ್ಯಾಮರಾದ ಕುರಿತು ಸ್ವಲ್ಪ ಮಾಹಿತಿಯಿದ್ದರೆ ಯಾರೂ ಬೇಕಾದರೂ ಸಹ ಫೊಟೋ ತೆಗೆಯಬಹುದು. ಆದರೆ, ತೆಗೆದ ಫೋಟೋ ಎಷ್ಟು ಚೆನ್ನಾಗಿದೆ, ಅದರ ಹಿನ್ನೆಲೆ ಹೇಗಿದೆ, ಯಾವ ಶೈಲಿಯಲ್ಲಿ ಬಂದಿದೆ ಜೊತೆಗೆ ಆ ಫೋಟೋ ಸಕಾಲಿಕವೋ ಅಥವಾ ಸರ್ವಕಾಲಿಕವೋ ಎನ್ನುವುದು ಅತೀ ಮುಖ್ಯ.
ನಾವೆಲ್ಲ ಸಕಾಲಿಕ ಛಾಯಾಗ್ರಾಹಕರು...!! ಕೈಯ್ಯಲ್ಲಿರುವ ಕ್ಯಾಮಾರಾದಲ್ಲಿ ಮನಸ್ಸಿಗೆ ಬಂದ ಫೋಟೋ ಕ್ಲಿಕ್ಕಿಸಿ, ‘ಅದ್ಭುತ ಫೊಟೋ’ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. ನಮ್ಮ ಸುತ್ತಲಿರುವವರಿಗೆಲ್ಲ ಆ ಫೊಟೋವನ್ನು ಬಲವಂತಾಗಿ ತೋರಿಸಿ, ಹೊಗಳಿಸಿಕೊಳ್ಳುತ್ತೇವೆ. ಆ ಫೊಟೋ ಬಗ್ಗೆ ಅವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು ಅಂದ ಮೇಲೆ, ಅದರ ಜೀವಿತಾವಧಿ ಬಹುತೇಕ ಮುಗಿದಂತೆ...!! ಅಂದರೆ ಅದು ಆ ಸಮಯಕ್ಕಷ್ಟೇ ಸೀಮಿತ. ಸಕಾಲಿಕ. ಆದರೆ, ವೃತ್ತಿನಿರತ ಛಾಯಾಗ್ರಾಾಹಕರು ತೆಗೆಯುವ ಕೆಲವು ಫೊಟೋಗಳು ಸಕಾಲಿಕವಾಗಿಯೂ, ಸರ್ವಕಾಲಿಕವಾಗಿಯೂ ವೇದ್ಯವಾಗಿರುತ್ತದೆ. ವನ್ಯಜೀವಿ ಛಾಯಾಗ್ರಾಹಕರು ತೆಗೆಯುವ ನೂರಾರು ಚಿತ್ರಗಳಲ್ಲಿ ಒಂದೋ-ಎರಡೋ ಫೋಟೋಗಳು ಮಾತ್ರ ಆಯ್ಕೆಗೆ ಯೋಗ್ಯವಾಗಿರುತ್ತವೆ. ಒಮ್ಮೊಮ್ಮೆ ಅಷ್ಟೊಂದು ಫೊಟೋಗಳನ್ನು ಕ್ಲಿಕ್ಕಿಸಿದರೂ ಸಹ ಬೇಕಾದ ಕೋನದಲ್ಲಿ ಫೋಟೋ ದೊರೆಯುವುದಿಲ್ಲ.
ಕಾಡು ಹಕ್ಕಿಯ ಅಥವಾ ಪ್ರಾಣಿಗಳ ಜೀವನ ಕ್ರಮ ಸಮಗ್ರವಾಗಿ ಸೆರೆ ಹಿಡಿಯಲು ಈ ಛಾಯಾಗ್ರಾಹಕರು ಮನೆ-ಮಠಗಳನ್ನು ತೊರೆದಿರುತ್ತಾರೆ. ಮಳೆ-ಗಾಳಿ-ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ತಿಂಗಳಾನುಗಟ್ಟಲೇ ದಟ್ಟ ಕಾನನದ ನಡುವೆ ಅಲೆಯುತ್ತಾರೆ. ಆ ಸಂದರ್ಭದಲ್ಲಿ ಅವರು ಅನುಭವಿಸುವ ಯಾತನೆಗಳೆಷ್ಟೋ? ಅದ್ಯಾವುದೂ ನಮ್ಮ ಕಲ್ಪನೆಗೂ ನಿಲುಕದಂತಹದ್ದು! ಹಕ್ಕಿಯ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡಬೇಕೆಂದರೆ ಅಥವಾ ತಾಯಿ ಹಕ್ಕಿ ಮರಿ ಹಕ್ಕಿಗೆ ಗುಟುಕು ನೀಡುವಂತಹ ಅಪರೂಪದ ದೃಶ್ಯ ಸೆರೆ ಹಿಡಿಯಬೇಕೆಂದರೆ ಗಂಟೆ, ಒಪ್ಪತ್ತು, ದಿನ, ತಿಂಗಳಾನುಗಟ್ಟಲೇ ಛಾಯಾಗ್ರಾಹಕ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಭಿನ್ನವಾದ ಚಿತ್ರ ಬೇಕೆಂದರೆ ವಿಭಿನ್ನ ದೃಷ್ಟಿಕೋನ, ಚಿಂತನೆ, ಅಧ್ಯಯನ ಜೊತೆಗೆ ಸಹನೆ ಅನ್ನೋದು ಆತನಿಗೆ ಅತಿಮುಖ್ಯ.
ಮಾಧ್ಯಮ ಕ್ಷೇತ್ರದಲ್ಲಿರುವ ಛಾಯಾಗ್ರಾಹಕರು ಇನ್ನೂ ಭಿನ್ನವಾಗಿ ಕಂಡು ಬರುತ್ತಾರೆ. ಸದಾ ಸಮಯದ ಜೊತೆ-ಜೊತೆಗೇ ಓಡುತ್ತಿರಬೇಕು. ಸಭೆ, ಸಮಾರಂಭದ ಉದ್ಘಾಟನೆ ಚಿತ್ರ ಸಾಮಾನ್ಯವಾಗಿ ಎಲ್ಲರಿಗೂ ದೊರೆಯುತ್ತದೆ. ಇಂದಿನ ಮಾಧ್ಯಮಗಳಲ್ಲಿ ಅಂತಹ ಚಿತ್ರಗಳಿಗೆ ಅಷ್ಟೊಂದು ಬೇಡಿಕೆಯೂ ಇಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವ ಚಿತ್ರ ಛಾಯಾಗ್ರಾಹರಿಂದ ಮಾಧ್ಯಮ ಎದುರು ನೋಡುತ್ತವೆ. ಪ್ರಚಲಿತ ವಿದ್ಯಮಾನಕ್ಕೆ ಚಿತ್ರ ಪೂರಕವಾಗಿದೆ ಎಂದಾದರೆ ಪತ್ರಿಕೆ ಎಂಟು ಕಾಲಂಗಳನ್ನು ಅದೇ ಚಿತ್ರಕ್ಕೆ ಮೀಸಲಿಟ್ಟು ಬಿಡುತ್ತದೆ. ನಡೆಯುತ್ತಿರುವ ಸಭೆಗೆ ಪೂರಕವಾದ ಇನ್ನೊಂದು ದೃಷ್ಟಿಕೋನದ ಚಿತ್ರ, ಅತಿಥಿ-ಮಹೋದಯರ ಹಾವ-ಭಾವ, ಪ್ರಸ್ತುತ ಸನ್ನಿವೇಶ ಹಾಗೂ ಪ್ರಚಲಿತ ವಿದ್ಯಮಾನಕ್ಕೆ ಹೊಂದಿಕೆಯಾಗುವ ಚಿತ್ರ, ಸಾವಿರಾರು ಸಭಿಕರ ನಡುವೆ ಅರೆ ಕ್ಷಣದಲ್ಲಿ ಸೆರೆಯಾಗಬಹುದಾದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾದರೆ ಅದಕ್ಕಿರುವ ತಾಕತ್ತೇ ಬೇರೆ! ಅಂದರೆ, ಸಭೆ, ಸಮಾರಂಭ ನಡೆಯುವ ವೇಳೆ ಛಾಯಾಗ್ರಾಹಕ ಕಣ್ಣಲ್ಲಿ ಕಣ್ಣಿಟ್ಟು, ಹದ್ದಿನ ಕಣ್ಣಿನಂತೆ ಸುತ್ತೆಲ್ಲ ಸೂಕ್ಷ್ಮವಾಗಿ ಗ್ರಹಿಸುತ್ತಲೇ ಇರಬೇಕಾಗುತ್ತದೆ.
ಕೆಲವು ಸಂದರ್ಭದಲ್ಲಿ ಮಾಧ್ಯಮ ಛಾಯಾಗ್ರಾಾಹಕ ಪ್ರಾಣವನ್ನೇ ಒತ್ತೆಯಿಡಬೇಕಾಗುತ್ತದೆ. ಲಾಠಿ ಚಾರ್ಜ್, ಗೋಲಿಬಾರ್, ಯುದ್ಧ, ಗುಂಪು ಘರ್ಷಣೆಯಂತಹ ಸಂದರ್ಭ, ಎದುರಾಗುವ ಎಲ್ಲ ಅಡೆ-ತಡೆಗಳನ್ನು ಅವರು ಎದುರಿಸಬೇಕು. ಗಲಭೆ ನಿಯಂತ್ರಿಸಲು ಪೊಲೀಸ್‌ರು ಎಲ್ಲಿಯಾದರೂ ಗುಂಡು ಹಾರಿಸಿದರೆ ಅದು ಛಾಯಾಗ್ರಾಹಕನ ಎದೆಯನ್ನೂ ಸೀಳಬಹುದು, ಲಾಠಿ ಚಾರ್ಜ್ ವೇಳೆ ಬೆನ್ನಿನ ಮೂಳೆಯೂ ಮುರಿಯಬಹುದು! ಯುದ್ಧದಂತಹ ಅಪರೂಪದ ದೃಶ್ಯ ಸೆರೆ ಹಿಡಿಯಲು ಹೋಗುವ ಛಾಯಾಗ್ರಾಹಕ ಬದುಕುವ ಎಲ್ಲ ಸಾಧ್ಯತೆಯನ್ನೂ ದೂರ ತಳ್ಳಿಯೇ ರಣರಂಗಕ್ಕೆ ಕಾಲಿಡಬೇಕು. ಗಟ್ಟಿ ಎದೆಗಾರಿಕೆ ಜೊತೆಗೆ, ಸಾವಿನ ಜೊತೆ ಪಯಣಿಸುತ್ತಿದ್ದೇನೆ ಎನ್ನುವ ಮೊಂಡು ಧೈರ್ಯ ಮೈಗೂಡಿಸಿಕೊಂಡು ಆತ ಕ್ಯಾಮರಾ ಆನ್ ಮಾಡಬೇಕು. ಯುದ್ಧದ ಚಿತ್ರಣ ಸೆರೆ ಹಿಡಿಯುವ ಅವಕಾಶ ಎಲ್ಲರಿಗೂ ಒಲಿದು ಬರುವಂತಹದ್ದಲ್ಲ, ಬಂದಿತೆಂದರೆ ಅದನ್ನು ತಪ್ಪಿಸಿಕೊಳ್ಳುವುದು ಸರಿಯಲ್ಲ!
ಫೋಟೋಗ್ರಫಿ ಒಂದು ಅದ್ಭುತ ಪ್ರಪಂಚ. ಒಂದು ಬಾರಿ ಅದರ ಹುಚ್ಚು ಹಿಡಿಯಿತೆಂದರೆ ಜೀವಿತಾವಧಿಯವರೆಗೂ ಅದು ಬೆನ್ನು ಬಿಡದು. ಫೋಟೋಗ್ರಫಿ ಬದುಕಿಗಾಗಿ ಎಷ್ಟೋ ಜನರು ಮನೆ, ಮಠಗಳನ್ನು ಸಹ ತೊರೆದಿದ್ದಾರೆ. ಸಾಲ ಮಾಡಿ ತೀರಿಸಲಾಗದೆ ಎಲ್ಲೆಲ್ಲೋ ನಾಪತ್ತೆಯಾಗಿದ್ದಾರೆ. ಅದು ಈಗಲೂ ಮುಂದುವರಿದಿದೆ. ಅಂದರೆ, ಸಾವಿರ ಚಿತ್ರಗಳ ನಡುವೆ ದೊರೆಯುವ ಒಂದೇ ಒಂದು ಅದ್ಭುತ ಚಿತ್ರ, ಸೆರೆ ಹಿಡಿದಾತನ ಆತ್ಮ ತೃಪ್ತಿಗೆ ಕಾರಣವಾಗುತ್ತದೆ. ಆತನಿಗೆ ಆ ಚಿತ್ರ ಜಗತ್ತೆ ಗೆದ್ದಷ್ಟು ಸಂತೃಪ್ತಿ ನೀಡಿರುತ್ತದೆ. ಸಾವಿರ ಪದಗಳು ಹೇಳಲಾಗದ ಭಾವವನ್ನು ಒಂದೇ ಒಂದು ಚಿತ್ರ ಹೇಳಿ ಬಿಡುತ್ತದೆ.
ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಛಾಯಾಗ್ರಾಹಕ ಕಂಡ....!
ವನ್ಯಜೀವಿ, ಹವ್ಯಾಸಿ, ವೃತ್ತಿನಿರತ, ಮೊಬೈಲ್ ಹಾಗೂ ಮಾಧ್ಯಮ ಕ್ಷೇತ್ರದ ನನ್ನೆಲ್ಲ ಛಾಯಾಗ್ರಾಹಕರಿಗೆ ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು.

ಕಾಮೆಂಟ್‌ಗಳಿಲ್ಲ: