ಪಲ್ಲವಗಳ ಪಲ್ಲವಿಯಲಿ
ಗರಿಗೆದರಿದ ಪ್ರೇಮ...
ಪ್ರೇಮ, ಅದು ದೈವ ಸ್ವರೂಪ. ಆತ್ಮ ಸಂಬಂಧದ ಪ್ರತೀಕ. ನವಿರಾದ ಭಾವಕ್ಕೆ, ಬೆಚ್ಚನೆಯ ಸ್ಪಂದನ... ಮೌನ ಸಂಭಾಷಣೆಯ ಮ್ಲಾನ ಭಾವ.. ಹೇಳಲಾಗದ, ಅನುಭವಿಸಲಾರದ ಮಧುರ ಯಾತನೆ... ಕನಸಲ್ಲೂ ಕನವರಿಸುವ ಭಾವ ಪ್ರವಾಹ... !
ಪ್ರೀತಿ,
ಹೌದು, ಪ್ರೀತಿ ಪ್ರೇಮ ಎಂಬ ಪದಗಳು ಬದುಕಿಗೆ ಚಿರಪರಿಚಿತವಾಗಿದ್ದರೂ, ಸ್ವತಃ ಬದುಕಲ್ಲಿ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಹಾಗಂತ ಅದರ ದ್ವೇಷಿಯಂತೂ ಆಗಿರಲಿಲ್ಲ. ಸುಮ್ಮನೆ ಪ್ರೀತಿ-ಪ್ರೇಮ ಎಂಬ ಜಂಜಾಟ ಯಾಕೆ ಬೇಕು ಎಂದು ನಿರ್ಲಿಪ್ತನಾಗಿದ್ದೆ. ಆದರೆ ಆ ನಿರ್ಲಿಪ್ತತೆಯೆ ನನ್ನನ್ನು ಪ್ರೀತಿಯ ಬಲೆಗೆ ಬೀಳುವಂತೆ ಮಾಡಿ ಬಿಟ್ಟಿತು....!?ಬಿಡುವಿಲ್ಲದ ಕಾಯಕಕ್ಕೆ ದೇಹ ಮತ್ತು ಮನಸ್ಸು ಎರಡನ್ನು ಮೀಸಲಾಗಿಟ್ಟು, ವಿಶ್ರಾಂತಿಗಾಗಿ ರೂಮಿಗೆ ಹೋದಾಗ, ಒಂದೇ ಸಮನೇ ನನಗೆ ಕಾಡುತ್ತಿದ್ದದ್ದು ಏಕಾಂಗಿತನ. ಮನೆಯಲ್ಲಿದ್ದಾಗ ಸದಾ ಕುಟುಂಬದವರ, ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದ ನನಗೆ, ಅವರನ್ನೆಲ್ಲ ಬಿಟ್ಟು ಬಂದಿದ್ದು ಬದುಕಿನಲ್ಲಿ ಏನೋ ಕಳೆದುಕೊಂಡಂತಾಗಿತ್ತು. ಕೆಲಸದ ಸಮಯದಲ್ಲಿ ಇದ್ಯಾವುದು ನೆನಪಿಗೆ ಬರುತ್ತಿರಲಿಲ್ಲ. ರೂಮಿಗೆ ಬಂದಾಗ ಅವೆಲ್ಲ ಒಂದೇ ಸಮನೆ ಮುತ್ತಿಕೊಳ್ಳುತ್ತಿದ್ದವು. ಈ ಕಾಡುವ, ತದುಕುವ ಭಾವನೆಗಳು ನನ್ನನ್ನು ಏಕಾಂಗಿಯನ್ನಾಗಿಸಿತ್ತು. ಒಮ್ಮೊಮ್ಮೆ ಈ ಏಕಾಂಗಿತನ ನನ್ನನ್ನು ಕಿತ್ತು ತಿನ್ನುತ್ತಿವೆಯೇನೋ ಎಂದೆನಿಸುತ್ತಿತ್ತು. ಇದರಿಂದ ಹೊರಬರಲು ಏನೆಲ್ಲ ಹರಸಾಹಸ ಮಾಡಿ, ಶಕ್ತಿಮೀರಿ ಪ್ರಯತ್ನಿಸಿದ್ದೆ. ಉಹೂಂ... ಸಾಧ್ಯವಾಗಿಲ್ಲ. ಆಗಲೇ ನೀನು ನನ್ನ ಕಣ್ಣಿಗೆ ಬಿದ್ದಿದ್ದು...!
ಹೌದು ಕಣೇ, ಏಕಾಂಗಿತನಕ್ಕೆ ಮದ್ದಾಗಿ ಬಂದ ನೀ, ಮನಸ್ಸಲ್ಲಿಯೇ ಶಾಶ್ವತವಾಗಿ ಬೇರೂರಿ ಬಿಟ್ಟೆ. ಹಾಗಂತ ಅಂದಿನ ದಿನಗಳಲ್ಲಿ ನಾನು ನಿನ್ನನ್ನು ಪ್ರೀತಿಸಿರಲಿಲ್ಲ. ಬದಲಾಗಿ, ಏಕಾಂಗಿಯಾಗಿ ನರಳಾಡುತ್ತಿದ್ದ ನನಗೆ ಅದನ್ನು ಹೊಡೆದೋಡಿಸಲು ಒಬ್ಬಳು ಸ್ನೇಹಿತೆ ದೊರಕಿದಳಲ್ಲ ಎಂದು ಸಂಭ್ರಮಿಸಿದ್ದೆ.... ಕುಣಿದು ಕುಪ್ಪಳಿಸಿದ್ದೆ.... ಬಿಡುವು ದೊರೆತಾಗಲೆಲ್ಲ ನಿನ್ನನ್ನೆ ನೆನಪಿಸಿಕೊಳ್ಳುತ್ತಾ ಮನಸಾರೆ ಹಿಗ್ಗುತ್ತಿದ್ದೆ. ಕೆಲವು ಭಾವನೆಗಳನ್ನು, ನೋವುಗಳನ್ನು ನಿನ್ನಲ್ಲಿ ಹಂಚಿಕೊಂಡಿದ್ದೂ ಇದೆ. ಲೆಕ್ಕವಿಲ್ಲದಷ್ಟು ಸಂದೇಶಗಳು ಪರಸ್ಪರ ಸುಮ್ಮನೆ ಹರಿದಾಡುತ್ತಿದ್ದವು. ನಿಷ್ಕಲ್ಮಶ ಸ್ನೇಹ ಇಬ್ಬರನ್ನು ಸೆಳೆದು ಹತ್ತಿರವಾಗುವಂತೆ ಮಾಡಿತು. ಇವೆಲ್ಲವು ಹಂತಹಂತವಾಗಿ ನನ್ನಲ್ಲಿ ಬೀಡುಬಿಟ್ಟಿದ ಏಕಾಂಗಿತನಕ್ಕೆ ಅಂತ್ಯ ಹಾಡಲು ಸಹಕಾರಿಯಾಯಿತು.
ನಾನು ಮತ್ತೆ ಮೊದಲಿನಂತಾದೆ.ಸ್ಪೂರ್ತಿಯ ಚೈತನ್ಯ ಮೈಮನವೆಲ್ಲ ಆವರಿಸಿ ಮೈಕೊಡವಿ ಎದ್ದು ನಿಂತೆ. ಬಹುಶಃ ಇಲ್ಲೆ ಇರಬೇಕು, ನಾ ನಿನ್ನ ಪ್ರೀತಿಸಿದ್ದು! ಅರಿವಿಲ್ಲದೆ ಮನಸ್ಸಿನ ಖಾಲಿ ಪುಟದ ಹಾಳೆಯಲ್ಲಿ ನಿನ್ನ ಹೆಸರನ್ನು ಗೀಚಿ, ಅದಕ್ಕೊಂದು ಸುಂದರ ಮುನ್ನುಡಿಯನ್ನೂ ಸಹ ಬರೆದು ಬಿಟ್ಟೆ!
ಯಾರನ್ನಾದರು ಪ್ರೀತಿಸಬೇಕಾಗಿರುವುದು ಅವರು ಹೇಗಿದ್ದಾರೆ ಎಂಬುದಕ್ಕಾಗಿ ಅಲ್ಲ. ಅವರ ಜೊತೆಯಿರುವಾಗ ನಾವು ಹೇಗಿರುತ್ತೇವೆ ಎಂಬ ಕಾರರಣಕ್ಕಾಗಿ. ಅದೇ ರೀತಿ ನಿನ್ನ ಅಂದ, ಚಂದಕ್ಕೆ ನಾ ಎಂದೂ ಮಾರು ಹೋಗಿಲ್ಲ. ನಿನ್ನಲ್ಲಿರುವ ನಿರ್ಲಿಪ್ತತೆ .... ಸ್ಪಟಿಕದಂತ ಸ್ವಚ್ಛಂದ ಗುಣ.... ಮಾತಿನ ಓಘ.... ಹೃದಯ ವೈಶಾಲ್ಯತೆ.... ಮಗುವುನಂಥ ಮುಗ್ದ ನಗು... ಪ್ರಾಣಿ-ಪಕ್ಷಿಗಳ ಮೇಲಿರುವ ಅದಮ್ಯ
ಪ್ರೀತಿ.... ಇವುಗಳೇ ನನ್ನನ್ನು ನಿನ್ನೆಡೆಗೆ ಸೆಳೆಯುವಂತೆ ಮಾಡಿದ್ದು... ಹಗಲಿರುಳು ನಿನಗಾಗಿ ಪರಿತಪಿಸುವಂತೆ ಮಾಡಿದ್ದು...!
ಏಕಾಂಗಿಯಾಗಿ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ಮಾನಸಿಕವಾಗಿ ಕೈ ಹಿಡಿದೆತ್ತಿ, ಬದುಕಿಗೊಂದು ಅರ್ಥ ನೀಡಿದ ನೀನು, ಇಂದು ಏಕಾಂತಕ್ಕೆ ಜಾರುವಂತೆ ಮಾಡುತ್ತಿದ್ದೀಯಾ. ಹೊತ್ತಲ್ಲದ ಹೊತ್ತಲ್ಲಿ ಬಂದು ಸುಮ್ಮನೆ ಕಾಡುತ್ತೀಯಾ. ಬೇಡ ಎಂದು ದೂರ ತಳ್ಳಿದರೂ ಹಿಂದಿನಿಂದ ಬಂದು ಬಿಗಿದಪ್ಪಿಕೊಳ್ಳುತ್ತೀಯಾ. ಒಮ್ಮೊಮ್ಮೆ ನಿನ್ನ ನೆನಪು ಧುತ್ತೆಂದು ಆವರಿಸಿಕೊಂಡು ಬಿಡುತ್ತವೆ .... ಆಗ ಅರೆ ಹುಚ್ಚನಂತಾಗಿ ಮಾನಸಿಕ ಸ್ಥೀಮಿತವನ್ನೆ ಕಳೆದುಕೊಂಡು ಬಿಡುತ್ತೇನೆ. ಆ ನರಳಾಟ, ತಾಕಲಾಟ, ವೇದನೆ.... ಅಬ್ಬಾ! ಸಹಿಸಲಸಾಧ್ಯವಾಗಿ ಅದರಲ್ಲೆ ಬೆಂದು ಹೋಗಬಾರದಾ ಎಂದೆನಿಸಿ ಬಿಡುತ್ತವೆ. ಆದರೂ ಕೂಡಾ ಆ ವೇದನೆ ಒಂಥರ ಹಿತನಾಭವವೇ! ಅದರಲ್ಲೆ ಮೈಮರೆತು ನಿನ್ನಲ್ಲೆ ಒಂದಾಗಿ ಬಿಡುತ್ತೇನೆ.
ನನ್ನಲ್ಲಿ ಮೂಡಿದ ನಿನ್ನ ಕಲ್ಪನಾತೀತ ಚಿತ್ತಾರಕ್ಕೆ ಏನೆಂದು ಹೆಸರಿಡಲಿ .....? ಎಲ್ಲೆ ಮೀರಿ ವರ್ತಿಸುವ ಈ ಮನಸ್ಸಿಗೆ ಒಂದು ಲಗಾಮು ಹಾಕಬೇಕಿದೆ. ಅಸ್ಪಷ್ಟತೆಯ ಹಾದಿಯಲ್ಲಿ ಸ್ಪಷ್ಟತೆಯ ಬದುಕು ಕಾಣಬೇಕಿದೆ. ವರ್ಣನಾತೀತ ಭಾವಕ್ಕೆ ತೋರಣ ಕಟ್ಟಿ, ತಾರ್ಕಿಕ ಅಂತ್ಯ ಹಾಡಬೇಕಿದೆ. ಈ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕಿದೆ. ಇದಕ್ಕೆ ನಿನ್ನ ವಿವೇಚನಾಯುಕ್ತ ವ್ಯಾಖ್ಯಾನ ಅತಿ ಅವಶ್ಯ. ಹಾಗೂ ಅಷ್ಟೇ, ಅನಿವಾರ್ಯ.
(ಹೇಳಬೇಕೆಂದು ತವಕಿಸುತ್ತಿದ್ದರೂ.... ಆ ಹೇಳಲಾಗದ ಮಾತೊಂದು ತುಟಿ ಅಂಚಿನಲ್ಲಿ ಹಾಗೆಯೇ ಉಳಿದು ಬಿಟ್ಟಿದೆ)
ಹೀಗೆ ಸುಮ್ಮನೆ.................................
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ