ಶಿವಪ್ಪನಿಗೊಂದು ಓಲೆ......
ಪ್ರೀತಿಯ ಅಪ್ಪಾ,
ಹೇಗಿದ್ದೀಯಾ...? ಪಾರ್ವತಮ್ಮ ಏನ್ಮಾಡ್ತಾ ಇದ್ದಾಳೆ. ನಿನ್ನ ಗಣಗಳೆಲ್ಲ ಸೌಖ್ಯ ತಾನೆ? ನೀನು ಮತ್ತು ನಿನ್ನ ಸುತ್ತೆಲ್ಲ ಇರೋರು ಸಕತ್ತಾಗಿಯೇ ಇರ್ತಿರಿ ಬಿಡಿ. ಮೃಷ್ಟಾನ್ನ ಭೋಜನ ತಿನ್ಕೋತಾ, ಅಡ್ಡಾಡ್ತಾ ಕೈಲಾಸವಷ್ಟೇ ಅಲ್ಲದೆ, ಭೂಲೋಕದ ಮೇಲೂ ಒಂದು ಕಣ್ಣು ಇಟ್ಟಿರ್ತೀರಿ. ಅದ್ರಲ್ಲೂ ನೀನಂತೂ ಹಣೆ ಮೇಲಿರುವ ಮೂರನೇ ಕಣ್ಣನ್ನು ಇಲ್ಲೇ ಇಟ್ಟಿರ್ತಿಯಾ ಬಿಡು.. ಯಾರ್ಯಾರು ಏನೇನು ಮಾಡ್ತಾ ಇದ್ದಾರೆ? ಒಳ್ಳೆ ಕೆಲಸ ಎಷ್ಟ ಮಾಡಿದ್ರು, ಪಾಪದ ಕಾರ್ಯ ಎಷ್ಟ ಮಾಡಿದ್ರು ಅಂತ ಲೆಕ್ಕ ಹಾಕ್ತಾ ಇರ್ತಿಯ. ಶಿಷ್ಟ ರಕ್ಷಕ, ದುಷ್ಟ ಶಿಕ್ಷಕನಾಗಿ ನಮ್ಮನ್ನೆಲ್ಲ ಪರಿಪಾಲನೆ ಮಾಡ್ತಾ ಇರ್ತಿಯಾ.ಆದ್ರೂ ನೀ ಏನೇ ಹೇಳು ಅಪ್ಪಾ, ಇಲ್ಲಿ ಪಾಪ ಮಾಡಿದವ್ರೆ ಝೇಂಕರಿಸಿ ಮೆರೆದಾಡುತ್ತಾರೆ. ಪುಣ್ಯ ಮಾಡಿದವ್ರೆಲ್ಲ ಬೇಗನೇ ನಿನ್ನ ಪಾದ ಸೇರ್ಕೋತಾರೆ...! ಇದೆಂಥ ನ್ಯಾಯನೋ ಅಪ್ಪ? ಹೀಗಾದ್ರೆ ಪುಣ್ಯದ ಕೆಲಸ ಯಾಕೆ ಮಾಡ್ಬೇಕು ಹೇಳು? ಸ್ವಲ್ಪ ಯೋಚನೆ ಮಾಡು. ಮಗನೇ ನಿಂಗೆ ಹೇಳ್ತಾನೆ ಅಂತ ಬೇಜಾರು ಮಾಡ್ಕೋಬೇಡ.
ಶಿವಪ್ಪ, ಇತ್ತೀಚೆಗೆ ಈ ಭೂಲೋಕದಲ್ಲಿ ಶಾಂತಿ ಅನ್ನೋದೆ ಮರೆಯಾಗ್ಬಿಟ್ಟದ್ಯೊ. ಎಲ್ಲ ನೋಡಿದ್ರಲ್ಲಿ ಕಚ್ಚಾಟ, ಹಿಂಸೆ, ಕೊಲೆ, ಸುಲಿಗೆ ಇದ್ರದ್ದೆ ಪಾರುಪಥ್ಯ. ಬೆಳಿಗ್ಗೆ ಮನೆಯಿಂದ ಕೆಲ್ಸಕ್ಕೆ ಹೋದವ್ರು, ರಾತ್ರಿ ಸರಿಯಾಗಿ ಮನೆಗೆ ಬರ್ತಾರೆ ಅಂತ ಹೇಳೋಕು ಆಗಲ್ವೊ. ಎಲ್ಲಿ ಬಾಂಬ್ ಬ್ಲಾಸ್ಟ್ ಆಗತ್ತೋ, ಎಲ್ಲಿ ಎದೆಗೆ ಗುಂಡು ಬೀಳತ್ತೋ, ಯಾರು ಹಿಂಬದಿಯಿಂದ ಬಂದು ಹಲ್ಲೆ ಮಾಡ್ತಾರೋ ಅಂತ ಒಂದೂ ಗೊತ್ತಾಗಲ್ಲ ಅಪ್ಪ. ಅಷ್ಟೊಂದು ಆತಂಕದ ವಾತಾವರಣ. ಒಂದ್ಕಡೆ ಹೊರಗಡೆ ಭಯೋತ್ಪಾದಕರ ಆತಂಕ, ಇನ್ನೊಂದಕಡೆ ನಮ್ಮೊಳಗೇ ಭಯೋತ್ಪಾದನೆ ಮಾಡುವ ರಾಜಕಾರಣಿಗಳ ಆತಂಕ. ಒಟ್ಟಾರೆ, ನೆಮ್ಮದಿ, ಸಮಾಧಾನ ಅನ್ನೋದೆ ಇಲ್ಲ. ಇದನ್ನೆಲ್ಲ ನೀ ನೋಡ್ತಾ ಇದ್ರೂ ಯಾಕೋ ಅಪ್ಪಾ, ಏನೂ ಗೊತ್ತಾಗದೆ ಇರೋ ಥರ ಇರ್ತಿಯಾ..? ಅದ್ರಲ್ಲೂ ಯಾರಿಗೂ ಇಲ್ದೆ ಇರೋ ಎಕ್ಸಟ್ರಾ ಕಣ್ಣು ಬೇರೆ ಇದೆ ನಿಂಗೆ. ಹೀಗಿದ್ದಾಗ್ಲೂ ನೀ ಸುಮ್ನೆ ಇರೋದು ನಂಗೆ ಯಾಕೋ ಸರಿ ಕಾಣ್ಸತಾ ಇಲ್ಲ.
ಅದೆಲ್ಲ ಬಿಡು ಅಪ್ಪಾ, ಇವತ್ತು ನಾಳೆ ನಿನ್ನ ಹಬ್ಬ. ನಿನ್ನ ಗುಡಿಯನ್ನೆಲ್ಲ ಸಕತ್ತಾಗಿ ಅಲಂಕಾರ ಮಾಡಿದ್ದಾರೆ. ಇವತ್ತು ರಾತ್ರಿ ಪೂರ್ತಿ ನಿನ್ನ ಭಜನೆ ಮಾಡ್ತಾ ಜಾಗರಣೆ ಮಾಡ್ತಾರೆ. ಕೋಟಿ ಕೋಟಿ ಭಕ್ತರು ನಿನ್ನ ಒಲಿಸಿಕೊಳ್ಳೋಕೆ, ನಿನ್ನ ಕೃಪೆಗೆ ಪಾತ್ರರಾಗೋಕೆ ಕರ ಮುಗಿದು ಪ್ರಾರ್ಥಿಸುತ್ತಾರೆ. ಆತ್ಮಶುದ್ಧಿಯಿಂದ, ನಿಜ ಭಕ್ತಿಯಿಂದ ನಿನ್ನಲ್ಲಿ ಬೇಡ್ಕಳ್ಳೋ ಭಕ್ತರಿಗೆ ನೀ ಆಶೀರ್ವಾದ ಮಾಡ್ಲೇಬೇಕು ಅಪ್ಪ. ನಾ ಹೇಳದಿದ್ರು ನೀ ಹರಸಿ, ಹಾರೈಸ್ತೀಯಾ. ಯಾಕೆಂದ್ರೆ ನೀ ಯಾವತ್ತೂ 'ನಿಜ ಭಕ್ತಿ' ಗೆ ಸೋಲುವ ಶಿವಪ್ಪ.ಅಂದಹಾಗೆ ಅಪ್ಪ, ಮರ್ತೆ ಹೋಗಿತ್ತು ನೋಡು. ಇವತ್ತು ಉಪವಾಸ, ಜಾಗರಣೆ. ನಾಳೆ ಅಮವಾಸ್ಯೆ, ಅಂದ್ರೆ ನಿನ್ನ ಹಬ್ಬ. ಈ ಎರಡು ದಿನಗಳಲ್ಲಿ ನೀ ಯಾವಾಗ, ಎಲ್ಲಿ ಬರ್ತಿಯಾ ಅಂತ ಹೇಳು. ಪಾರ್ವತಮ್ಮಗೆ ನಾನೇ ಕಟ್ಟಿರುವ ದುಂಡು ಮಲ್ಲಿಗೆ ಹೂವಿನ ದಂಡೆ ಕೊಡ್ಬೇಕಿದೆ. ಅವಳಿಗೆ ಹೇಳಿದ್ದೀನಿ, ಶಿವಪ್ಪ ಇಲ್ಲಿಗೆ ಬಂದಾಗ ಮಲ್ಲಿಗೆ ದಂಡೆ ಕಳ್ಸಿ ಕೊಡ್ತೀನಿ ಅಂತ. ನೀ ಏನಾದ್ರೂ ನಂಗೆ ಸಿಗದೆ ವಾಪಾಸ್ ಹೋದೆ ಅಂದ್ರೆ ಪಾರ್ವತಮ್ಮ ಮಾತ್ರ ನಿಂಗೆ ಬಿಡಲ್ಲ...! ಅದೆಲ್ಲ ಯಾಕೆ ಬೇಕು ಅಲ್ವಾ ಅಪ್ಪಾ.. ನಾ ಇದ್ದಲ್ಲಿಯೇ ಬಂದು ನಿನ್ನ ಮಗನ ನೋಡ್ಕೊಂಡು, ಮಲ್ಲಿಗೆ ದಂಡೆ ತಗೊಂಡು ಹೋಗ್ಬಿಡು. ನನಗೂ ನಿನ್ನ ನೋಡಿದ ಹಾಗೆ ಆಗುತ್ತೆ. ಜೊತೆಗೆ, ಮುನಿಸಿಕೊಂಡಿರುವ ಅಮ್ಮನನ್ನು ನೀ ಒಲಿಸಿಕೊಳ್ಳಬಹುದು. ಅಲ್ವೇನಪ್ಪಾ....?
- ನಿನ್ನ ಮಗ
ನಾಗರಾಜ್ ಬಿ.ಎನ್.