ಸ್ವಾರ್ಥ.... ಅವರವರ ದೃಷ್ಟಿಕೋನ
ಅಂಕೋಲಾದ ಸಾಹಿತಿ ವಿಷ್ಣು ನಾಯ್ಕ ಸಂಪಾದನೆ ಮಾಡಿರುವ 'ಗೌರೀಶ ಕಾಯ್ಕಿಣಿ ಅವರ ಆಯ್ದ ಲೇಖನಗಳು' ಅತ್ಯಂತ ಇಷ್ಟ ಪಡುವ ಹಲವು ಹೊತ್ತಿಗೆಗಳಲ್ಲಿ ಒಂದು. ಅದರಲ್ಲಿಯ ತೆನೆ- 1ರ ಭಾಗದಲ್ಲಿನ ವಿಚಾರವಾದದಲ್ಲಿ ಗೌರೀಶ ಕಾಯ್ಕಿಣಿಯವರು ಭಯ, ಪೂರ್ವಗ್ರಹಿಕೆ, ಅಜ್ಞಾನ, ಅರೆಬರೆಜ್ಞಾನ, ಸ್ವಾರ್ಥ, ಅಭಿನಿವೇಷ, ಬಗೆಗುದುರೆಯ ಪಟ್ಟಿ, ಮನೋದೌರ್ಬಲ್ಯ, ಭಾವೋದ್ರೇಕ ಮತ್ತು ಅನುಮಾನದ ಕುರಿತು ಅರ್ಥವತ್ತಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿಯ ' ಸ್ವಾರ್ಥ' ಭಾಗದ ಅವರ ಬರವಣಿಗೆ ಮನುಷ್ಯನ ದೃಷ್ಟಿಕೋನದ ಕುರಿತು ಮಾರ್ಮಿಕವಾಗಿ ತಿಳಿಸುತ್ತದೆ. ಕಾಯ್ಕಿಣಿಯವರ ಆ ಬರಹ ಯಥಾರೂಪದಲ್ಲಿ......
ಪ್ರತಿಯೊಬ್ಬನೂ ಒಂದಲ್ಲ ಒಂದು ಅರ್ಥಕ್ಕೆ ಕಟ್ಟುಬಿದ್ದಿರುತ್ತಾನೆ. ಅದು ಆತನ ಕೇವಲ ಸಂಕುಚಿತ ಸ್ವಾರ್ಥವೇ ಆಗಬೇಕೆಂದಿಲ್ಲ. ಪ್ರತಿಷ್ಠೆ, ಅಭಿಮಾನ, ಭಾವಾವೇಶಗಳಿಂದ, ಅಭಿರುಚಿ, ಆಸಕ್ತಿ, ವ್ಯಾಮೋಹ ಇವೆಲ್ಲವೂ ಆತನ ಮನೋದಾಸ್ಯಕ್ಕೆ ಕಾರಣವಾಗುವ 'ಅರ್ಥಟಗಳು' ಆಗಬಲ್ಲವು. ಈ ಕೆಳಗಿನ ಒಂದು ಸಂವಾದ ಇದರದೊಂದು ಪರಿಚಯ ಕೊಡಬಹುದು.ಮಗ ತನ್ನ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕೆಂಬ ಹಟದಿಂದ ತಂದೆಯನ್ನು ಕೇಳಿದ.
'ಅಪ್ಪಾ, ಧರ್ಮಾಂತರ ಅಂದರೇನು?'
ತಂದೆ ಹೇಳಿದ. 'ಮಗು, ಯಾವನೊಬ್ಬನು ಬೇರೊಂದು ಧರ್ಮ ಬಿಟ್ಟು ನಮ್ಮ ಧರ್ಮಕ್ಕೆ ಬಂದರೆ ಅದಕ್ಕೆ ಧರ್ಮಾಂತರ ಎನ್ನುವರು. ತಿಳಿಯಿತೇ?'
ಮಗನ ಜ್ಞಾನ ಪಿಪಾಸೆ ಅಷ್ಟಕ್ಕೇ ತಣಿಯಲಿಲ್ಲ. ' ಹಾಗಾದರೆ ಅಪ್ಪಾ, ಯಾವನೊಬ್ಬ ನಮ್ಮ ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಸೇರಿದರೆ....?'ತಂದೆ ತಾಳ್ಮೆಗೆಟ್ಟು ಹೆದರಿಸಿದ, 'ಛೀ ಮಂಕೇ, ಆ ಮಾತೇ ಬಿಡು. ಅದು ಶುದ್ಧ ಧರ್ಮದ್ರೋಹ! ಅಂಥವರನ್ನು ನಂಬಬಾರದು. ದ್ರೋಹಿ ಮುಂಡೆ ಮಕ್ಕಳು!'
ಒಟ್ಟಾರೆ ಎಲ್ಲವೂ ದೃಷ್ಟಿಕೋನದಲ್ಲಿದೆ. ಅದು ಧರ್ಮಾಂತರ. ಇದು ಧರ್ಮದ್ರೋಹ. ಕ್ರಿಯೆ ಎರಡೂ ಕಡೆಗೆ ಒಂದೇ. ಧರ್ಮವನ್ನು ಬದಲಿಸುವವರು ಯಾವ ನಿಟ್ಟಿನಿಂದ ನೋಡುತ್ತಾರೆ ಎಂಬುದನ್ನು ಹೊಂದಿಕೊಂಡಿದೆ. ಹೀಗೆ ನಮ್ಮ ವಿಚಾರಸರಣಿಯ ಸ್ವರೂಪವನ್ನೇ ಬೇರೆ ಮಾಡುವ ಶಕ್ತಿ ನಮ್ಮ ಸ್ವಾರ್ಥದ, ಸ್ವಾಭಿಮಾನದ- ಸ್ವಜನಾಭಿಮಾನದ ಸೆಳೆತದಲ್ಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ