ಮಂಗಳವಾರ, ಮಾರ್ಚ್ 1, 2016

ನಿಮ್ಮ ರಾಜಕೀಯಕ್ಕೆ ಕಸಾಪನೇ ಬೇಕಾ...?

ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಅಕ್ಷರಶಃ ರಾಜಕೀಯ ಮನೆಯಾಗಿಬಿಟ್ಟಿದೆ. ಅದರಲ್ಲೂ ಧಾರವಾಡದ ಕಸಾಪ ಸಾಹಿತಿಗಳ ಬಣವಂತೂ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆಯಿಲ್ಲ ಎನ್ನುವಂತಾಗಿದೆ. ಒಳಗೊಳಗೆ ಪರಸ್ಪರ ಕತ್ತಿ ಮಸೆಯುತ್ತಿದ್ದವರು ಈಗ, ಬೀದಿಗೆ ಬಂದು ಅದನ್ನು ಪ್ರಯೋಗ ಮಾಡುತ್ತಿದ್ದಾರೆ. ಇವರ ಸ್ವಾರ್ಥಲೋಲುಪತೆ, ಅಧಿಕಾರ ದಾಹ, ನಿಸ್ವಾರ್ಥದಿಂದ ಹುಟ್ಟಿಕೊಂಡ ಕಸಾಪ ಎನ್ನುವ ಸಾಹಿತ್ಯ ಸಂಸ್ಥೆಗೆ ಅವಮಾನ!
-----------------
ಕನ್ನಡ ಕಟ್ಟುವ ಕೆಲಸ ಮಾಡಬೇಕಿದ್ದ ಕಸಾಪ ಅಧ್ಯಕ್ಷರು, ಯಾರಯಾರ ಅವಧಿಯಲ್ಲಿ ಎಷ್ಟೆಷ್ಟು ಹಣ ಖಚರ್ು ಮಾಡಿದ್ದಾರೆ, ಎಲ್ಲೆಲ್ಲಿ ಉಪಯೋಗಿಸಿದ್ದಾರೆ, ಹೇಗೆ ಅವ್ಯವಹಾರ ಮಾಡಿದ್ದಾರೆ ಎನ್ನುವುದನ್ನು ದುಬರ್ೀನು ಹಾಕಿಕೊಂಡು ಲೆಕ್ಕಾಚಾರದ ಕೂಡುಕಳೆಯುವಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಅವ್ಯವಹಾರ ನಡೆದಿದ್ದರೆ ಒಂದರ್ಥದಲ್ಲಿ ಇದು ಉತ್ತಮ ಬೆಳವಣಿಗೆ. ಹಾಗೆ ನಿಷ್ಪಕ್ಷಪಾತ ತನಿಖೆಯೂ ನಡೆಯಬೇಕು. ಆದರೆ, ನಿಜವಾಗಿಯೂ ಇದು ಕಸಾಪ ಅಧ್ಯಕ್ಷ ಗಾದಿಗೆ ನಡೆಯುತ್ತಿರುವ ರಾಜಕೀಯ ತಂತ್ರವಾಗಿದ್ದರೆ ಅಕ್ಷರ ಸರಸ್ವತಿಗೆ ಮಾಡುವ ದೊಡ್ಡ ಅವಮಾನ. ಇದನ್ನು ಸಾಹಿತ್ಯಾರಾಧಕರು ಅವಶ್ಯವಾಗಿ ಗಮನಿಸಬೇಕಿದೆ.
ಏನೇ ಇರಲಿ. ಸರಸ್ವತಿಯ ಆರಾಧನೆಗೆ ಪ್ರೋತ್ಸಾಹ ನೀಡುತ್ತ ಬೆನ್ನು ತಟ್ಟಿ ಗುರುತರ ಜವಾಬ್ದಾರಿ ಸ್ಥಾನದಲ್ಲಿ ನಿಲ್ಲಬೇಕಾದ ಅಧ್ಯಕ್ಷರೇ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಿರುವುದು ನೋವಿನ ಸಂಗತಿ.
ಕಳೆದ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಅಧ್ಯಕ್ಷ ಡಿ.ಎಂ. ಹಿರೇಮಠ ಹೇಳಿದರೆ, ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿಲ್ಲ, ತನಿಖೆ ನಡೆಸುವುದಾದರೆ ಈ ಹಿಂದಿನ ಅವಧಿಯ ವ್ಯವಹಾರವೂ ತನಿಖೆಯಾಗಲಿ ಎಂದು ಹಾಲಿ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳುತ್ತಾರೆ. ಅಂದರೆ, ಇಲ್ಲಿ ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು? ಇವರಿಬ್ಬರ ಅವಧಿಯಲ್ಲೂ ಅವ್ಯವಹಾರ ಆಗಿದೆಯಾ? ಇಲ್ಲ ಅಂದರೆ ಯಾರನ್ನು ಮಂಗ ಮಾಡಲು ಹೊರಟಿದ್ದಾರೆ?
ಬೆಂಕಿ ಇಲ್ಲದೆ ಹೊಗೆಯಾಡದು! ಅಕ್ಷರ ದೇವಿಗೆ ಅವಮಾನ ಮಾಡುವ, ಅಧಿಕಾರಕ್ಕಾಗಿ ಕೆಸರೆರಚಾಡುವ, ಹಣಕ್ಕಾಗಿ ಲಾಬಿ ಮಾಡುವ ಸಾಹಿತಿ ಮುಖವಾಡ ಧರಿಸಿದವರಿಗೆ ಧಿಕ್ಕಾರ! ಯಾರೇ ಆಗಿರಲಿ, ಕನ್ನಡ ಭಾಷೆಯ ಹೆಸರಲ್ಲಿ ರಾಜಕಾರಣ ಮಾಡುವವರನ್ನು ಹೆಡೆಮುರಿಕಟ್ಟಿ ಮೇಲೇಳದಂತೆ ಮಾಡಬೇಕು.
ರಾಜಕೀಯ ಮಾಡುವುದೇ ಆದರೆ, ಹಣಗಳಿಕೆ ಮಾಡುವುದೇ ಉದ್ದೇಶವಾಗಿದ್ದರೆ, ಕೆಸರೆರಚಾಡುವುದೇ ಮಜಾ ಎನ್ನುವುದಾದರೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇಕರ್ೊಳ್ಳಿ ಸ್ವಾಮಿ. ಕನ್ನಡ ಭಾಷೆ ಕಟ್ಟಿ, ಬೆಳೆಸುವಂಥ ಕನ್ನಡ ಸಾಹಿತ್ಯ ಪರಿಷತ್ ಗೆ ಯಾಕೆ ಬತರ್ೀರಾ. ಪವಿತ್ರ ದೇವಸ್ಥಾನದಂತಿರುವ ಕಸಾಪ ಮನೆಯನ್ನು ಯಾಕೆ ಅಪವಿತ್ರ ಮಾಡ್ತೀರಾ. ನಿಮ್ಮಥವರ ಅವಶ್ಯಕತೆ ಇಲ್ಲಿ ಇಲ್ಲಾರೀ....
ಪ್ರಾಮಾಣಿಕ, ಪರಿಶುದ್ಧ ಸಾಹಿತಿಗಳು ಲೆಕ್ಕವಿಲ್ಲದಷ್ಟು ಜನ ಇಲ್ಲಿದ್ದಾರೆ. ಸಾಹಿತಿ ಎಂದು ಗುರುತಿಸಿಕೊಂಡವರಿಗಿಂತಲೂ ಉತ್ತಮವಾಗಿ, ಸಾಹಿತ್ಯ ರಚನೆ ಮಾಡುವವರು ಇಲ್ಲಿ ಸಾಕಷ್ಟು ಜನರಿದ್ದಾರೆ. ಕಸಾಪ ಸದಸ್ಯರಾಗದೆ ಇರುವ ಸಾವಿರಾರು ಜನರು ನಮ್ಮ-ನಿಮ್ಮ ನಡುವೆ ಇದ್ದಾರೆ. ಎಲೆಮರೆ ಕಾಯಿಯಾಗಿರುವ ಅಂಥಹ ಸರಸ್ವತಿ ಆರಾಧಕರಿಗೆ ನಿಮ್ಮ ಕಸಾಪ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ. ನಿಮಗೆ ಶೆಡ್ಡು ಹೊಡೆಯುವಂತೆ ಅವರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುತ್ತಾರೆ. ಅದು ಬಿಟ್ಟು ರಾಜಕೀಯ ಮಾಡುತ್ತ ಯಾಕ್ರೀ ಇನ್ನೊಬ್ಬರಿಗೆ ಊಟದ ಉಪ್ಪಿನಕಾಯಿ ಆಗ್ತೀರಾ? ಇದೇನಾ ನಿಮ್ಮ ನಾಡು, ನುಡಿ ಕೆಲಸ... ಛೀ.

ಕಾಮೆಂಟ್‌ಗಳಿಲ್ಲ: