'ದಂಡುಪಾಳ್ಯ'ದ ಮಹಾರಾಯ...!
'ದೊಡ್ಡ ಮಗ ಇಲ್ಲೇ ಕೂಗಳತೆ ದೂರದಲ್ಲಿದ್ದಾನೆ. ನಾಲ್ಕು ವರ್ಷದ ಹಿಂದೆ ಆಕಸ್ಮಿಕವಾಗಿ ಎದುರಾಗಿದ್ದ. ಅಂದಿನಿಂದ ಇಲ್ಲಿಯವರೆಗೂ ಆತನ ಮುಖ ನಾ ನೋಡಿಲ್ಲ'
ಈತ ಮುಗ್ದ, ಬಡಕಲು ದೇಹದವನಾದರೂ ಸದಾ ನಗುಮೊಗದ ವ್ಯಕ್ತಿ. ಹೊಟೆಲ್ಗೆ ಬಂದವರನ್ನು ಮನೆಯವರಂತೆ ಸತ್ಕರಿಸಿ ಆದರಿಸುವ ಅಪರೂಪದ ಮನುಷ್ಯ. ನಯ, ವಿನಯ, ಸೌಜನ್ಯ, ಪ್ರೀತಿ, ವಿಶ್ವಾಸ ಹೀಗೆ ಎಲ್ಲವನ್ನೂ ಮೈಗೂಡಿಸಿಕೊಂಡ ಮಹಾರಾಯ!
ಇದು ದಂಡುಪಾಳ್ಯ ಹೊಟೆಲ್(ನಮ್ಮ ಸಹದ್ಯೋಗಿಗಳು ಇಟ್ಟ ಹೆಸರು)ನಲ್ಲಿರುವ ವೇರ್ಟ ನಾರಾಯಣನ ಹತಾಶೆ ನುಡಿಗಳು.
ಎಂದಿನಂತೆ, ಮಧ್ಯಾಹ್ನ ಊಟಕ್ಕೆ ಹೋದಾಗ ನಗುನಗುತ್ತಲೇ ಸ್ವಾಗತಿಸಿ 'ಅನ್ನ-ಸಾಂಬಾರ' ಮುಂದಿಟ್ಟ. ಸುಮ್ಮನೆ ಮಾತಿಗೆಳೆದೆ. ಆತ, ಒಂದೊಂದಾಗಿ ತನ್ನ ಬದುಕಿನ ಕಥೆಯನ್ನೇ ಬಿಚ್ಚಿಡುತ್ತ ಹೋದ. ಅದನ್ನು ಕೇಳುತ್ತಿದ್ದ ನನಗೆ ಬಾಯಿಗೆ ಹಾಕುತ್ತಿರುವ ತುತ್ತೆಲ್ಲ, ಗಂಟಲಲ್ಲಿಯೇ ಉಳಿದಿದ್ದವು. ಕಣ್ಣಂಚು ಒದ್ದೆಯಾಗುತ್ತಿದ್ದರೂ, ಬಲವಂತವಾಗಿ ತಡೆದುಕೊಳ್ಳುತ್ತಿದ್ದೆ. ಆದರೆ ಆತ ಮಾತ್ರ ಒಂದೇ ಓಘದಲ್ಲಿ ಯಾವ ಮುಚ್ಚು-ಮರೆಯಿಲ್ಲದೆ ತನ್ನ ಬದುಕನ್ನು ಬೆತ್ತಲಾಗಿಸುತ್ತಿದ್ದ. ಸಂದರ್ಭದಲ್ಲಿ ಆತ ನೋವನ್ನು ನುಂಗಿಕೊಳ್ಳುವ ಪರಿ, ಭಾವನೆಯ ಏರುಪೇರು ಮನಸ್ಸನ್ನು ಶಾಂತತೆಗೆ ನೂಕಿತ್ತು.
ನಾರಾಯಣ ಮಂಗಳೂರಿನಿಂದ ಹುಬ್ಬಳ್ಳಿಗೆ ಬಂದು ಒಂಬತ್ತು ವರ್ಷಗಳು ಗತಿಸಿವೆ. ದುಡಿದು ತಿಂದರೆ ಮಾತ್ರ ಹೊಟ್ಟೆಗೆ ಕೂಳು ಎನ್ನುವ ಪರಿಸ್ಥಿತಿ ಮನೆಯದ್ದಾಗಿತ್ತು. ಹೆಂಡತಿ ಜೊತೆ ಎರಡು ಜನ ಗಂಡು ಮಕ್ಕಳು. ಒಬ್ಬ ಮಗ ಹುಬ್ಬಳ್ಳಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದರೆ, ಇನ್ನೊಬ್ಬ ಊರಲ್ಲಿ ಹೊಟೆಲ್ ಉದ್ಯಮದಲ್ಲಿ ತೊಡಗಿದ್ದಾನೆ.
ನಾಲ್ಕು ವರ್ಷದ ಹಿಂದೆ ದೊಡ್ಡ ಮಗ ತನ್ನದಲ್ಲದ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದ. ಅದಕ್ಕೆ ನಾರಾಯಣ ವಿರೋಧ ವ್ಯಕ್ತಪಡಿಸಿದರು ಎಂದು, ಮನೆಯವರನ್ನೆಲ್ಲ ದೂರ ಮಾಡಿಕೊಂಡು ಪ್ರೀತಿಸಿದವಳನ್ನೇ ಮದುವೆಯಾಗಿ ಹುಬ್ಬಳ್ಳಿಯಲ್ಲಿಯೇ ನೆಲೆಸಿದ್ದಾನೆ. ಕೈತುಂಬ ಸಂಬಳ ಪಡೆಯುವ ಆ ಮಗ, ಐಷಾರಾಮಿ ಜೀವನ ನಡೆಸುತ್ತಿದ್ದಾನೆ!
'ಮಗನ ಇಚ್ಛೆಯ ವಿರುದ್ಧವಾಗಿ ಅಂದು ನಾನು ನಡೆದುಕೊಂಡ ಪರಿಣಾಮ, ಕೂಗಳತೆ ದೂರದಲ್ಲಿ ಮಗ-ಸೊಸೆ ಇದ್ದರೂ ಅವರನ್ನು ನೋಡಲಾಗದ ಪರಿಸ್ಥಿತಿ ನನ್ನದು. ಅಂದು ಆಕಸ್ಮಿಕವಾಗಿ ಅಂಗಡಿಯೊಂದರಲ್ಲಿ ಭೇಟಿಯಾಗಿದ್ದ. ಜನ್ಮ ನೀಡಿದ ತಂದೆ ಎನ್ನುವ ಭಾವವೂ ಆತನಲ್ಲಿ ಕಂಡು ಬಂದಿಲ್ಲ. ನಾನು ಮಾಡಿದ್ದು ತಪ್ಪು ಎಂದು ಹೇಳಬೇಕೆಂದು ಬಾಯಿ ತೆರೆಯುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದ' ಎಂದು ನಾಲ್ಕು ವರ್ಷದ ಹಿಂದೆ ಮಗನನ್ನು ಕಣ್ತುಂಬಿಸಿಕೊಂಡ ಕ್ಷಣ ನೆನಪಿಸಿಕೊಂಡಿದ್ದ ವೇರ್ಟ ನಾರಾಯಣ.
ದೊಡ್ಡ ಮಗ ಸಣ್ಣ ಮಗನ ಸಂಪರ್ಕದಲ್ಲಿದ್ದಾನಂತೆ. ಕರೆ ಮಾಡಿದಾಗ ತಾಯಿಯ ಯೋಗ-ಕ್ಷೇಮವಷ್ಟೇ ವಿಚಾರಿಸುತ್ತಾನಂತೆ. ಆದರೆ, 'ಅಪ್ಪ ಹೇಗಿದ್ದಾನೆ, ಎಲ್ಲಿದ್ದಾನೆ' ಎಂದು ಎಂದೂ ಕೇಳಿಲ್ಲವಂತೆ. 'ಇಲ್ಲೇ ಇರುವ ಮಗನನ್ನು ಒಮ್ಮೆ ನೋಡಿಕೊಂಡು ಬರಬೇಕು ಎಂದೆನಿಸಿದರೂ, ಅವನಿಗೆ ನಾ ಬೇಡವಾದ ಮೇಲೆ ಮತ್ಯಾಕೆ ಅಲ್ಲಿಗೆ ಹೋಗಿ ಅವನ ನೆಮ್ಮದಿ ಹಾಳು ಮಾಡಲಿ' ಎಂದು ತನಗೆ ತಾನೇ ನಾರಾಯಣ ಸಾಂತ್ವನ ಹೇಳಿಕೊಳ್ಳುತ್ತಾನೆ.
--------------------------------------------
ವಿಷಯವಿಷ್ಟೇ.... ಬೆಳೆದು ನಿಂತ ಮಕ್ಕಳನ್ನು ಸ್ನೇಹಿತರ ಹಾಗೆ ಕಾಣಬೇಕು ಎನ್ನುವ ಹಿತೋಕ್ತಿಯಿದೆ. ಅವರ ಇಚ್ಛೆಯ ವಿರುದ್ಧವಾಗಿ ನಡೆದುಕೊಂಡರೆ, ಹೆತ್ತವರನ್ನೂ ದೂರ ತಳ್ಳಿಬಿಡುತ್ತಾರೆ. ಇದು ಮಕ್ಕಳ ತಪ್ಪು, ಹೆತ್ತವರ ತಪ್ಪು ಎನ್ನುವ ವಿಮಶರ್ೆಗಿಂತ.... ಬೆಳೆದು ಬಂದ ಸಂಸ್ಕಾರ ಎಂತಹದ್ದು ಎಂದು ಯೋಚಿಸಬೇಕು. ಹಾಗಂತ ಇಲ್ಲಿ ನಾರಾಯಣನ ನಿಧರ್ಾರ ತಪ್ಪು ಎಂದಲ್ಲ, ಸರಿ ಎಂತಲೂ ಅಲ್ಲ. ನಾರಾಯಣ ಬೆಳೆದು ಬಂದ ಪರಿಸರ ಹಾಗಿತ್ತು, ಅದಕ್ಕೆ ತನ್ನ ಜಾತಿಯ ಹುಡುಗಿಯಲ್ಲ ಎಂದು ಮಗನ ಆಯ್ಕೆಯನ್ನು ವಿರೋಧಿಸಿದ್ದ.
ಈಗ ನಾರಾಯಣನಿಗೆ ತನ್ನ ತಪ್ಪಿನ ಅರಿವಾಗಿದೆ. ಬದಲಾಗಿದ್ದಾನೆ. ಮಗ ಆಧುನಿಕ ಜಗತ್ತಿಗೆ ತೆರದುಕೊಂಡಿದ್ದಾನೆ. ಕೈ ತುಂಬಾ ದುಡಿದು, ಸುಖಿ ಜೀವನ ನಡೆಸುತ್ತಿದ್ದಾನೆ. ಆದರೆ ಮನದಲ್ಲಿ ಇನ್ನೂ ಅಪ್ಪನ ಬಗ್ಗೆ ತಾತ್ಸಾರ ಪುಟಿದೇಳುತ್ತಲೇ ಇದೆ.ಈಗ ಹೇಳಿ ತಪ್ಪು ಯಾರದ್ದು...? ತಪ್ಪಿಗೆ ಕ್ಷಮೆ ಎನ್ನುವುದೇ ಇಲ್ಲವೇ..? ಇಂತಹ ಎಷ್ಟೋ ಕಥೆಗಳು ನಮ್ಮ ಕಣ್ಮುಂದೆಯೇ ಇವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ