ಸುಮ್ಮನೆ ಅಳುತ್ತಿದ್ದಳು... ನಕ್ಕು ನಲಿಯುತ್ತಿದ್ದಳು...
ಏನೂ ಅರಿಯದ ಎರಡು ವರ್ಷದ ಆ ಮಗು ಒಮ್ಮೊಮ್ಮೆ ಅಳುತ್ತಿತ್ತು. ಮತ್ತೆ ಕೆಲವೊಮ್ಮೆ ಸುಮ್ಮನೆ ಕೇಕೇ ಹಾಕಿ ನಗುತ್ತಿತ್ತು. ಅತ್ತಾಗ ಬಿಸ್ಕಿಟ್ ನೀಡಿ ಸುಮ್ಮನಿರಿಸಿದರೆ, ನಕ್ಕಾಗಿ ಗಲ್ಲ ಹಿಡಿದು ಇನ್ನಷ್ಟು ನಗಿಸುತ್ತಿದ್ದರು. ಬಂದ ಕೆಲ ಗಣ್ಯರು ಆಕೆಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು. ಗುರುಗಳು ತಲೆ ಮೇಲೆ ಕೈ ಇಟ್ಟು ನೂರ್ಕಾಲ ಬಾಳವ್ವ ಎಂದು ಆಶೀರ್ವದಿಸುತ್ತಿದ್ದರು.
ಇದು ಶುಕ್ರವಾರ ನಗರದ ನೆಹರು ಮೈದಾನದಲ್ಲಿ ಹನುಮಂತಪ್ಪನ ಪ್ರಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವೇಳೆ ಕಂಡು ಬಂದ ಮಾನವೀಯ ದೃಶ್ಯಗಳು. ಆಕೆ ಮೃತ ಯೋಧ ಹನುಮಂತಪ್ಪನ ಮಗಳು ನೇತ್ರಾ. ಕುಟುಂಬ ವರ್ಗದವರಿಗಾಗಿ ಅಲ್ಲಿ ವಿಶೇಷ ಆಸನಗಳ ವ್ಯವಸ್ಥೆ ಮಾಡಿ ಗ್ಯಾಲರಿ ನಿರ್ಮಿಸಲಾಗಿತ್ತು. ಹನುಮಂತಪ್ಪನ ತಾಯಿ ಬಸಮ್ಮ, ಪತ್ನಿ ಮಾದೇವಿ ಸೇರಿದಂತೆ ಆತನ ಅಣ್ಣ, ಅತ್ತಿಗೆ, ಮಕ್ಕಳು ಹಾಗೂ ಇತರ ಸಂಬಂಧಿಗಳೆಲ್ಲ ಅಲ್ಲಿ ಆಗಮಿಸಿದ್ದರು. ಅವರಲ್ಲಿ ಈ ಪುಟ್ಟ ಮಗು ನೇತ್ರಾ ಎಲ್ಲರ ಕೇಂದ್ರ ಬಿಂದು.
ಕೆಲವು ಗಣ್ಯರು ಕೊಪ್ಪದ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಗ್ಯಾಲರಿಯೊಳಗೆ ಬಂದು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುತ್ತಿದ್ದರು. ಹನುಮಂತಪ್ಪರ ಮಗಳು ಎಂದು ತಿಳಿಯುತ್ತಿದ್ದಂತೆ, ಆಕೆಯನ್ನು ಎತ್ತಿ ಮುದ್ದು ಮಾಡುತ್ತಿದ್ದರು. ಅವರು ಎತ್ತಿಕೊಳ್ಳುತ್ತಿದ್ದಂತೆ ಆಕೆ ಜೋರಾಗಿ ಅಳುತ್ತಿದ್ದಳು. ಸಂದರ್ಭದಲ್ಲಿ ಬಿಸ್ಕಿಟ್ ನೀಡಿ ಅವಳನ್ನು ಸುಮ್ಮನಿರಿಸಲಾಗುತ್ತಿತ್ತು.
ಕೆಲ ಜನಪ್ರತಿನಿಧಿಗಳು ಆಕೆಯನ್ನು ಎತ್ತಿಕೊಳ್ಳಲು ಮುಂದಾದಾಗ ಒಲ್ಲೆ ಎಂದು ವರಾತ ತೆಗೆದವಳು, ಆರ್ಮಿ ಅಧಿಕಾರಿಗಳು ಎತ್ತಿಕೊಂಡಾಗ ಸುಮ್ಮನೆ ಇರುತ್ತಿದ್ದಳು. ಸಂದರ್ಭದಲ್ಲಿ 'ನನ್ನಪ್ಪನೂ ಆರ್ಮಿಯಲ್ಲಿದ್ದ' ಎನ್ನುವ ಭಾವ ಆಕೆಯ ಒಳಮನಸ್ಸಿಗೆ ಅರ್ಥವಾಗುತ್ತಿತ್ತೇ ಎನ್ನುವ ಪ್ರಶ್ನೆ ಅಲ್ಲಿದ್ದವರನ್ನು ಕಾಡುತ್ತಿತ್ತು.
ಆಕೆ ಒಂದೇ ಸಮನೆ ಅಳುತ್ತಿದ್ದದ್ದನ್ನು ಗಮನಿಸಿದ ಹಿರಿಯ ಆರ್ಮಿ ಅಧಿಕಾರಿಯೊಬ್ಬರು ಸುಮ್ಮನಿರಿಸಲು ಅವಳನ್ನು ಎತ್ತಿಕೊಂಡರು. ಅವರ ತೋಳಲ್ಲಿ ಬಂಧಿಯಾಗುತ್ತಿದ್ದಂತೆ ಅವಳು ಅಳು ನಿಲ್ಲಿಸಿದಳು. ಸುಮ್ಮನೇ ಕತ್ತೆತ್ತಿ ಅವರ ಮುಖ ನೋಡಿದ ಆಕೆ, ನಸುನಕ್ಕು ಎದೆ ಭಾಗದ ಮೇಲೆ ಕಣ್ಣಾಡಿಸಿದಳು. ಅಲ್ಲಿ ಮಿಲಿಟರಿ ಸಂಕೇತದ ಪದಕ ಜೋತಾಡುತ್ತಿತ್ತು. ಕೈಯ್ಯಲ್ಲಿ ಬಿಗಿಯಾಗಿ ಹಿಡಿದು, ಅವರ ಮುಖವನ್ನು ಪದೆ ಪದೇ ನೋಡುತ್ತಿದ್ದಳು. 'ನನ್ನಪ್ಪನ ಆಫೀಸರ್ಸ್ ನೀವು' ಎಂದು ಆಂಗಿಕ ಭಾವದಿಂದ, ಮೂಕ ಸಂವೇದನೆ ಮೂಲಕ ಆಕೆ ಹೇಳಿದಂತೆ ಭಾಸವಾಗಿತ್ತು.
ತನ್ನ ತುಂಟಾದಿಂದ, ಅರ್ಥ ಗರ್ಭಿತ ಭಾವದಿಂದ, ಸೂಕ್ಷ್ಮ ಸಂವೇದನೆಯಿಂದ ಭಾವನೆ ತೋರ್ಪಡಿಸುತ್ತಿದ್ದ ಪುಟ್ಟ ನೇತ್ರಾಳಿಗೆ, 'ಅಪ್ಪ ಇನ್ನಿಲ್ಲ' ಎನ್ನುವ ನೋವು ಕಾಡುತ್ತಿತ್ತೇನೋ ಎಂದೆನಿಸುತ್ತಿತ್ತು.
ಆದರೂ, ಪ್ರಪಂಚ ಅರಿಯದ ಮುಗ್ಧ ಮಗುವದು. ಅಳು, ನಗು, ತುಂಟಾಟ ಬಿಟ್ಟು ಇನ್ನೇನು ಅರ್ಥವಾದೀತು? ಒಟ್ಟಾರೆ, ಆ ನೇತ್ರಾ ನೆಹರು ಮೈದಾನದಲ್ಲಿ ನೆರೆದ ಪ್ರತಿಯೊಬ್ಬರ ಕೇಂದ್ರ ಬಿಂದುವಾಗಿದ್ದಂತು ಸತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ