ಮಂಗಳವಾರ, ಮೇ 31, 2016


ಅಲ್ಲಾದರೂ ನಿನ್ನಾತ್ಮಕ್ಕೆ ಶಾಂತಿ ಸಿಗಲಿ.....

ಸಣ್ಣ ನಿದ್ದೆಗೆ ಜಾರಿದ ಹುಡುಗಿ, ಕೊನೆಗೂ ಮುಚ್ಚಿದ ಕಣ್ಣನ್ನು ತೆರೆಯಲೇ ಇಲ್ಲ. ಬದುಕಿನ ಜಂಜಾಟ ಸಾಕು ಸಾಕೆನ್ನುತ್ತ ಶಾಶ್ವತ ನಿದ್ದೆಗೆ ಜಾರಿಬಿಟ್ಟಳು......!
ಸಂಬಂಧದಲ್ಲಿ ಮಾವನ ಮಗಳಾದರೂ, ಅಣ್ಣ-ತಂಗಿಯಂಥ ಮಧುರ ಬಾಂಧವ್ಯದ ಲೇಪ. ಬಾಯ್ತುಂಬ 'ಅಣ್ಣ...' ಎಂದು ಅವಳು ಕರೆವಾಗ, 'ಮರಿ' ಎನ್ನುವ ಪ್ರತಿಕ್ರಿಯೆ. ಚಿಕ್ಕಂದಿನಿಂದಲೂ ಕಣ್ಮುಂದೆಯೇ ಆಡಿ, ಬೆಳೆದ ಹುಡುಗಿ. ನೋಡು ನೋಡುತ್ತಲೇ ದೊಡ್ಡವಳಾಗಿ, ಹಸೆಮಣೆ ಏರಿದ್ದಳು. ಕೈ ಹಿಡಿದಾತನ ಮನೆ ಬೆಳಗಿದ್ದಲ್ಲದೆ, ಪುಟ್ಟ ಕೃಷ್ಣನಿಂದ ತನ್ನ ಮಡಿಲನ್ನು ಸಹ ತುಂಬಿಕೊಂಡಿದ್ದಳು. ಈಗಷ್ಟೇ ಆ ಹಸುಳೆಗೆ ಒಂದು ವಸಂತ. ಅಮ್ಮನ ಕೈ ಬೆರಳು ಹಿಡಿದು ಓಡಾಡಿಕೊಂಡಿದ್ದ; ಚಂದಮಾಮನ ನೋಡಿ ಕೈ ತುತ್ತು ತಿಂದಿದ್ದ; ಬಿದ್ದಾಗ ಓಡೋಡಿ ಬಂದು ಅಮ್ಮನ ಮಡಿಲು ಹಿಡಿದುಕೊಂಡಿದ್ದ; ತೊದಲು ನುಡಿಯಿಂದ ಅಮ್ಮಮ್ಮ ಎನ್ನುತ್ತಿದ್ದ. ಎಲ್ಲ ಮರೆತು ಅಮ್ಮನೇ ಶಾಶ್ವತ ಎಂದು ಅವಳ ಕೈಯ್ಯಲ್ಲಿ ನಿದ್ದೆಗೆ ಜಾರುತ್ತಿದ್ದ... ಇನ್ನುಮುಂದೆ ಆ ಹಸುಳೆಗೆ ಅಮ್ಮನ ಸಾನ್ನಿಧ್ಯ ಮುಸುಕು.... ಮುಸುಕು.
ಮದುವೆಯಾಗಿ ಅಮ್ಮ ಆದರೂ ತನ್ನ ತುಂಟಾಟ ಇನ್ನೂ ಬಿಟ್ಟಿರದ ಹುಡುಗಿ. ಮಾತಿನ ಮಲ್ಲಿ. ಚೆನೈ ಎಕ್ಸಪ್ರೆಸ್ ನಂತೆ ಒಂದೇ ಓಘದಲ್ಲಿ ಮಾತು ಮಾತು ಮಾತು. ಮಾತಿನ ಮಧ್ಯೆಯೇ ಹಾಸ್ಯ ಚಟಾಕಿ. ಅವಳ ಮಾತಿಗೆ ಮನಸೋಲದವರೇ ಇಲ್ಲ. ಅವಳ ಮಾತು, ಹಾಸ್ಯ ಇನ್ನೊಬ್ಬರ ಮನಸ್ಸು ಅರಳಿಸುತ್ತಿತ್ತೇ ಹೊರತು, ಎಂದೂ ಮನಸ್ಸು ನೋಯಿಸುತ್ತಿರಲಿಲ್ಲ. ಈಗ ಅವೆಲ್ಲಕ್ಕೂ ಪೂರ್ಣವಿರಾಮ. 
'ಸಾವು' ಎಲ್ಲಿ, ಹೇಗೆ, ಯಾವಾಗ, ಯಾವ ರೂಪದಲ್ಲಿ ಹೊಂಚು ಹಾಕಿ ಕುಳಿತಿರುತ್ತದೆ ಎಂದು ಹೇಳಲು ಅಸಾಧ್ಯ. ಅದು ನಿಷ್ಕರುಣಿ, ಕ್ರೂರಿ, ಪಾಪಿ. ಯಾವ ಭೇದ-ಭಾವವೂ ಇಲ್ಲದೆ ತನ್ನ ನೀಳ ತೋಳ ತೆಕ್ಕೆಯಲ್ಲಿ ಹೊತ್ತು, ಗೊತ್ತಿಲ್ಲದೆ ಬಾಚಿ ಸೆಳೆದು ಬಿಡುತ್ತದೆ. ಅದರ ಕಪಿ ಮುಷ್ಟಿಯಲ್ಲಿ ಸಿಲುಕಿದ ಪುಟ್ಟ ಹುಡುಗಿ, ಉಸಿರುಗಟ್ಟಿ ಅಲ್ಲಿಯೇ ಕಣ್ಮುಚ್ಚಿದಳು. ನನ್ನಿಂದಾದ ತಪ್ಪನ್ನು ಮನ್ನಿಸಿ ಎಂದು ಬಾರದ ಲೋಕಕ್ಕೆ ಪಯಣಿಸಿಬಿಟ್ಟಳು. ಹೆತ್ತ ಕರುಳನ್ನು ಒಬ್ಬಂಟಿ ಮಾಡಿ....
ಇಲ್ಲಿ ಸಿಗದ ಶಾಂತಿ, ಕಾಣದ ಲೋಕದಲ್ಲಾದರೂ ನಿನ್ನಾತ್ಮಕ್ಕೆ ಸಿಗಲಿ....😭 😢

ಶುಕ್ರವಾರ, ಮೇ 13, 2016

ಬೀಡಿ ವೆಂಕ ಮತ್ತು ಸತ್ತ ಗಿಳಿ...

ತುಂಬಾ ದಿನಗಳ ನಂತರ ಆಕೆಗೆ ಫೋನ್ ಮಾಡಿದ್ದೆ. ಅವಳು ಬದಲಾಗಿದ್ದು ಗೊತ್ತಿತ್ತು. ಆದರೆ, ಆ ಬದಲಾವಣೆಯಲ್ಲಿ ನನ್ನ ಪ್ರೀತಿಯನ್ನೂ ಸಹ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾಳೆ ಎಂದುಕೊಂಡಿದ್ದೆ! ಆದರೆ ಅವೆಲ್ಲ ಹುಸಿಯೆಂದು, ಅವಳ ಮಾತಿನಿಂದಲೇ ಅರಿವಾಯಿತು. ಅರಿವಿಲ್ಲದೆ ಹೃದಯ ಭಾರವಾಗುತ್ತ, ಕಣ್ಣಂಚುಗಳು ತೇವಗೊಂಡವು.
ಜೊತೆ ಜೊತೆಯಾಗಿಯೇ ಅರ್ಥೈಸಿಕೊಂಡು ಬದುಕಿದವಳು. ಅರಿಯದ ವಯಸ್ಸಲ್ಲಿ ಪ್ರಬುದ್ಧತೆ ಮೆರೆದವಳು. ನನ್ನೆಲ್ಲ ಸರ್ವಸ್ವ ನೀನೆ ಎಂದು ನನ್ನಲ್ಲೇ ಒಂದಾದವಳು. ಅಗಲಿಕೆಯ ಸಹಿಸದೆ ಅತ್ತು ಕರಗಿ ಬಳಲಿ ಬೆಂಡಾದವಳು. ಪರಿಸ್ಥಿಯ ಕೈಗೊಂಬೆಯಾಗಿ ಪ್ರೀತಿಸುತ್ತಲೇ ದೂರ ದೂರಕೆ ಪಯಣಿಸಿದವಳು! ಅವಳ ಪಯಣದ ಹಾದಿಯಲಿ, ಪ್ರೀತಿ ಮಸುಕಾಗಿ ಹೋಗಿತ್ತು? ಪ್ರತೀ ನೋವಿಗೂ ಕಾಲವೇ ದಿವ್ಯೌಷಧ ಎಂಬಂತೆ, ಅವಳಿಗೆ ನನ್ನ ಅಗಲಿಕೆಯ ನೋವಿಗೂ ಸಹ `ಕಾಲ'ವೇ ಸಾಂತ್ವನ ಹೇಳಿ ಸಂತೈಸಿತ್ತು.
 ಅನಿರೀಕ್ಷಿತವಾಗಿ ಅಂದು ನನಗೆ ಅವಳ ದೂರವಾಣಿ ನಂ. ದೊರೆಯಿತು. ಪರಸ್ಪರ ದೂರವಾಗಿ ಹಲವು ವರ್ಷಗಳು ಸಂದಿದ್ದವು. 'ಹೇಗೂ ನಂ. ದೊರೆತಿದೆಯಲ್ಲಾ, ಸಂಪರ್ಕಿಸಿ ನೋಡೋಣ, ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ವಿಚಾರಿಸೋಣ' ಎಂದು ಅವಳ ನಂ.ಗೆ ಕರೆ ಮಾಡಿದೆ. ಒಮ್ಮೆಲೆ ನನ್ನ ಧ್ವನಿ ಗ್ರಹಿಸಿದ ಆಕೆ, 'ನೀನಾ...?' ಎಂದು ಉದ್ಗಾರ ತೆಗೆದು, ಒಂದೇ ಸಮನೆ ಹುಸಿಕೋಪದಿಂದ 'ಹೋಗೆಲೋ...' ಎಂದು ಎರ್ರಾಬಿರ್ರಿ ಬಯ್ಯತೊಡಗಿದಳು.
ನಂತರ ನಿಧಾನವಾಗಿ 'ಕಷ್ಟಪಟ್ಟು ಹಾಗೋ ಹೀಗೋ ಎಂದು ವಿದ್ಯಾಭ್ಯಾಸ ಮಾಡಿ ಒಂದು ಉದ್ಯೋಗಕ್ಕೆ ಸೇರಿದೆ. ಬದುಕಲ್ಲಿ ಅನುಭವಿಸಿದ ನೋವು ಹತಾಶೆಗಳೇ ನನ್ನ ಸಾಧನೆಯ ಮೆಟ್ಟಿಲುಗಳಾದವು. ಕಷ್ಟದಲ್ಲೇ ಬದುಕಿದ ನಾನು ಎಲ್ಲಿಯೂ ಸಂತೋಷದ ಬದುಕು ಕಂಡಿಲ್ಲ. ಓದು ಅಭ್ಯಾಸ ಎನ್ನುತ್ತಲೇ ಭವಿಷ್ಯದ ಗೂಡು ಹಣೆದೆ. ಅದರಲ್ಲಿ ಕೆಲವಷ್ಟು ಕನಸು ನನಸಾದರೂ... ಬಹಳಷ್ಟು ಕನಸು ಕನಸಾಗೇ ಉಳಿದು ಬಿಟ್ಟಿದೆ' ಎಂದು ನಿರಾಸೆಯಿಂದಲೇ ಏನೇನೋ ಹೇಳತೊಡಗಿದಳು.
'ಹುಂ........ ' `ಹಾಂ......... ' ಎನ್ನುತ್ತ ಸುಮ್ಮನೆ ಕೇಳುತಲಿದ್ದೆ.
'ಕೆಲವೊಮ್ಮೆ ಮನಸ್ಸು ಕಾರಣವಿಲ್ಲದೆ ಮೌನಕ್ಕೆ ಜಾರಿ ಬಿಡ್ತವೆ. ಆಗ ಅರಿವಿಲ್ಲದೆ ನನ್ನ ಕಣ್ಣಾಲಿಳು ತೇವಗೊಂಡು, ನೀರು ಜಿನುಗುತ್ತವೆ. ಆ ಸಂದರ್ಭದಲ್ಲೆಲ್ಲ ನೀನೇ ನೆನಪಾಗ್ತೀಯ. ಆಗ ಸುಮ್ಮನೆ ಆಕಾಶ ನೋಡುತ್ತ ಕುಳಿತು ಬಿಡ್ತೇನೆ' ಎಂದು ಮೌನಕ್ಕೆ ಜಾರಿಬಿಟ್ಟಳು.
ಆದರೆ ಅವಳಾಡಿದ ಬಹಳಷ್ಟು ಮಾತುಗಳಲ್ಲಿ, ಈ ಮಾತು ಮಾತ್ರ ನನ್ನ ಹೃದಯವನ್ನೇ ತಾಕುವಂತೆ ಮಾಡಿತು. ಬೇಡ ಬೇಡ ಎಂದರೂ ಮನಸ್ಸು ಹಿಂದಿನ ದಿನಗಳತ್ತ ಜಾರುತ್ತಿತ್ತು. ಬಲವಂತವಾಗಿ ಮನಸ್ಸನ್ನು ಹಿಡಿದಿಡಲು ಪ್ರಯತ್ನಿಸಿದೆ. ಇಲ್ಲ, ಅದು ಯಾವ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹಿಡಿದ ಹಠ ಸಾಧಿಸುವಂತೆ, ನನ್ನನ್ನು ಧಿಕ್ಕರಿಸಿ ಹಳೆಯ ನೆನಪಿನ ಗೂಡಿನ ಬಾಗಿಲಿಗೆ ತಂದು ನಿಲ್ಲಿಸಿ ಬಿಟ್ಟಿತು...!
ಅವಳ ಜೊತೆ ಕಳೆದ, ನಲಿದ, ಹರಟಿದ ಎಲ್ಲ ಕ್ಷಣಗಳನ್ನು ಮನಸ್ಸು ಒಂದಾದಾಗಿ ಮೆಲುಕು ಹಾಕತೊಡಗಿತು.
-------------------------------------------------------------------------------------------------------
ಕಡಲ ತಡಿಯಲಿ...
ಅವತ್ತು ಯಾರಿಗೂ ಹೇಳದೆ, ನಾವಿಬ್ಬರೂ ಅರಬ್ಬೀಯ ತಟಕ್ಕೆ ತೆರಳಿದ್ದೇವು. ಆಗ ತಾನೆ ಸೂರ್ಯ ತನ್ನ ಕಾರ್ಯ ಮುಗಿಸಿ ವಿಶ್ರಾಂತಿಗೆ ತೆರಳುತ್ತಿದ್ದ. ಭೋರ್ಗರೆವ ಕಡಲ ಮೊರೆತದ ನಡುವೆ, ತುಂತುರು ಮಳೆ ಹನಿಗಳು ಹನಿ ಹನಿಯಾಗಿ ಜಿನುಗುತ್ತ ಮುಸ್ಸಂಜೆಯ ಸೊಬಗನ್ನು ಹೆಚ್ಚಿಸಿದ್ದವು. ಏರಿಳಿತದ ಅಲೆಗಳ ಮೇಲೆ ನಮ್ಮಿಬ್ಬರದು ಭಾವ ಲಹರಿಯ ಪಯಣ. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ, ಕತ್ತಲಾವರಿಸಿಬಿಟ್ಟಿತ್ತು. ತುಸು ತಡವರಿಸಿದ ಆಕೆ, 'ಏನೋ... ಕತ್ತಲಾಯ್ತಲ್ಲೊ... ಭಯವಾಗ್ತಿದೆ, ಹೋಗೋಣ ಬಾ' ಎಂದಳು. 'ಇಲ್ಲ ಕಣೆ, ಇನ್ನೊಂದು ಹತ್ತು ನಿಮಿಷ ಬಿಟ್ಟು ಹೊರಡೋಣ' ಎಂದೆ.
ಅದೇ ವೇಳೆ ಆಕೆಗೆ ದೂರದಲ್ಲಿ ಯಾವುದೋ ಒಂದು ಆಕೃತಿ ಕಣ್ಣಿಗೆ ಗೋಚರಿಸಿತು! ಭಯಭೀತಳಾದ ಅವಳು ಏದುಸಿರು ಬಿಡುತ್ತ ಬಾಚಿ ನನ್ನನ್ನು ತಬ್ಬಿಕೊಂಡು, 'ಅಲ್ಲಿ ನೋಡು....' ಎಂದು ಬೆರಳು ತೋರಿಸಿದಳು. ಅವಳು ತೋರಿಸಿದ ಬೆರಳ ದಿಕ್ಕಿಗೆ ದಿಟ್ಟಿಸಿ ನೋಡಿದೆ! ನಮ್ಮೂರ ವೆಂಕ ಬೀಡಿ ಸೇದುತ್ತ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ!
ಮನಸ್ಸಲ್ಲೆ 'ವೆಂಕ'ನಿಗೊಂದು ಧನ್ಯವಾದ ಅರ್ಪಿಸಿ, ಇಂತಹ ಕ್ಷಣಗಳು ಸದಾ ಎದುರಾಗುತ್ತಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದೆ.
----------------------------------------------------------------------------------------------
ಹಣೆಯ ಮೇಲೊಂದು ಮುತ್ತು...
ಆಗ ತಾನೆ ಶಾಲೆಯಿಂದ ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಬಂದ ಆಕೆ, 'ನಾನು ಇಂದು ತುರ್ತಾಗಿ ಮನೆಗೆ ಹೋಗ್ತಾ ಇದ್ದೇನೆ. ಬರಲು ಎರಡು ದಿನ ತಡವಾಗಬಹುದು' ಎಂದಳು. ಯಾಕೆ? ಏನು? ಎಂದು ಕೇಳುವಷ್ಟರಲ್ಲಿ, ಭರಭರನೆ ಮನೆ ಕಡೆ ಹೆಜ್ಜೆ ಹಾಕಿದಳು. ಹುಚ್ಚು ಹಿಡಿದಂತಾಗ ಅವಳಿದ್ದ ಮನೆಯೆಡೆ ನಾನು ಕೂಡಾ ಹೆಜ್ಜೆ ಹಾಕಿದೆ. ಮನೆಯ ಮೂಲೆಯೊಂದರಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಒಮ್ಮೆ ಸುತ್ತಲೂ ಕಣ್ಣಾಡಿಸಿದೆ.... ಯಾರೂ ಇಲ್ಲದಿರುವದನ್ನು ಗಮನಿಸಿ, ಅವಳ ಪಕ್ಕ ಹೋಗಿ ಕುಳಿತು, ತಲೆ ನೇವರಿಸುತ್ತ 'ಏನಾಯ್ತೋ ಪಾಪು..? ಯಾಕೆ ಹೀಗೆ ಅಳ್ತಾ ಇದ್ದೀಯಾ.... ?' ಎಂದು ಕೇಳಿದೆ.
ಒತ್ತರಿಸಿ ಬರುವ ದುಃಖವನ್ನು ಹಿಡಿದುಕೊಳ್ಳುತ್ತ 'ನನ್ನ ಮುದ್ದಿನ ಗಿಳಿ ಸತ್ತೊಯ್ತಂತೆ! ಎಲ್ಲಿಯದೋ ಬೆಕ್ಕು ಬಂದು ಅದನ್ನು ಮುರಿದು ತಿಂದು ಬಿಟ್ಟಿದೆಯಂತೆ' ಎಂದಳು.
ನನ್ನವಳ ಮುಗ್ದತೆಗೆ ಮರುಗಿದೆ. ಅವಳಲ್ಲಿರುವ ಸ್ನಿಗ್ದ ಪ್ರೀತಿಗೆ ಸೋತು ಹೋದೆ. ಸಾಂತ್ವನಕ್ಕೆಂದು 'ನನಗೂ ಕೂಡಾ ತುಂಬಾ ನೋವಾಗ್ತಿದೆ ಪಾಪು. ಏನು ಮಾಡುವುದು? ಅದರ ಆಯುಷ್ಯಾನೇ ಅಷ್ಟು ಅಂತ, ಸುಮ್ಮನಾಗಬೇಕು. ಇವತ್ತು ನಿನ್ನ ಗಿಣಿ... ನಾಳೆ ಇನ್ನೇನೋ? ನಾಡಿದ್ದು ನಾನು....!' ಎನ್ನುವಷ್ಟರಲ್ಲಿ, ತನ್ನ ಕೈಯಿಂದ ನನ್ನ ಬಾಯಿಯನ್ನು ಬಲವಂತವಾಗಿ ಒತ್ತಿ ಹಿಡಿದಳು.
ಬೇಡ ಕಣೋ.... ಇನ್ಯಾವತ್ತೂ ಅಂಥಹ ಮಾತನ್ನು ಆಡ್ಬೇಡ. ಎಲ್ಲರೂ ಸಾಯಲೂ ಬಂದವರೇ! ಆದರೆ, ನೀನು ಮಾತ್ರ ಎಂದಿಗೂ ನಗು ನಗುತ್ತ ಇರ್ಬೇಕು. ಇನ್ಮುಂದೆ 'ತಮಾಷೆ'ಗೂ ಕೂಡಾ ಅಂತಹ ಮಾತುಗಳನ್ನಾಡಬೇಡ' ಎಂದು ಅಳುತ್ತಲೇ ತಾಕೀತು ಮಾಡಿದಳು.
ಹುಚ್ಚಿ.... ಅದಕ್ಕೆಲ್ಲ ಯಾಕೆ ಹೀಗಾಡ್ತಿಯಾ?' ಎಂದು ಪ್ರೀತಿಯಿಂದ ಅವಳ ಕೆನ್ನೆ ಸವರಿದೆ. ಕೆನ್ನೆ ಸವರಿದ ಕೈಯನ್ನೆ ಆಕೆ ಹಿಡಿದುಕೊಳ್ಳುತ್ತ, 'ಈ ಕೈ ಯಾವಾಗಲೂ ನನ್ನದೇ ಅಲ್ವಾ? ಇದೇ ಕೈ ನನ್ನ ಕೈಯನ್ನು ಹಿಡಿಯೋದು ಅಲ್ವಾ? ಈ ಕೈಯಲ್ಲೇ ಅಲ್ವಾ ನಾನು ನೆಮ್ಮದಿಯಾಗಿ ಬದುಕೋದು? ಎಂದು ತನ್ನೆದೆಗೆ ಒತ್ತಿಕೊಂಡು ಅರೆ ಕ್ಷಣ ಕಣ್ಮುಚ್ಚಿದಳು.
ಮಾತು ಬರದವನಾಗಿ ಅವಳನ್ನೇ ನೋಡುತ್ತ ಕುಳಿತು ಬಿಟ್ಟೆ.
'ನಿನಗೆ ಏನೋ ಕೊಡಬೇಕು ಎಂದುಕೊಂಡಿದ್ದೆ, ನೆನಪೇ ಇಲ್ಲ. ಕಣ್ಣು ಮುಚ್ಕೊ' ಎಂದು ತನ್ನ ಶಾಲಾ ಬ್ಯಾಗ್ ತೆರೆದಳು. ಅವಳ ಆಣತಿಯಂತೆ ನಾನು ಕಣ್ಣು ಮುಚ್ಚಿಕೊಂಡಿದ್ದೆ. ಏನು ಕೊಡುತ್ತಾಳೆ ಎಂದು ಊಹಿಸುವಷ್ಟರಲ್ಲಿ ಹಣೆಯ ಮೇಲೊಂದು ಅವಳ 'ಹೂ ಮುತ್ತು' ಇತ್ತು..!
ಬೆಕ್ಕು ತಿಂದ ನನ್ನವಳ ಗಿಳಿಯ ಆತ್ಮಕ್ಕೆ ಮನಸ್ಸಲ್ಲೆ ಶಾಂತಿ ಕೋರಿದೆ..!

ಶುಕ್ರವಾರ, ಮೇ 6, 2016

ಮುಂಜಾನೆಯ ಸಾರ್ಥಕ್ಯ ಬೈಗುಳ...!

ಕೌಶಲ್ಯಾ ಸುಪ್ರಜಾರಾಮ....... ಎಂದಿನಂತೆ ಇವತ್ತು ಕೂಡಾ ಬೆಳ್ಳಂಬೆಳ್ಳಿಗೆ ಮೊಬೈಲ್ ಸುಪ್ರಭಾತ ಹೇಳುತ್ತಿತ್ತು. ಮುಂಜಾನೆಯ ಜೊಂಪು ನಿದ್ದೆಯಲ್ಲಿಯೇ ಕರೆ ರಿಸೀವ್ ಮಾಡಿ ಕಿವಿ ಹತ್ತಿರ ತಂದೆ. ಆ ಕಡೆಯಿಂದ ಒಂದೇ ಸಮನೆ ಬೈಗುಳದ ಸುಪ್ರಭಾತ. ಅದು ಕೂಡಾ ಒಂದೇ ಓಘದಲ್ಲಿ. ಅಬ್ಬಾ...! ಅರೆ ಕ್ಷಣದಲ್ಲಿ ಜೊಂಪು ನಿದ್ದೆಯೆಲ್ಲ ಮಾಯ.
ಬಂಗಾಳಕೊಲ್ಲಿಯ ತಟದಲ್ಲಿರು ತಂಗಿ, ಪ್ರತಿದಿನವೂ ಕೆಲಸಕ್ಕೆ ಹೋಗುವ ವೇಳೆ ನನಗೆ ಕರೆ ಮಾಡುವುದು ಒಂದು ಪರಿಪಾಠ. ಇಂದು ಕೂಡಾ ಎಂದಿನಂತೆಯೇ ಕರೆ ಮಾಡಿದ್ದಳು. ಆದರೆ ಮಾತಿನ ಒರಸೆ ಬದಲಾಗಿತ್ತು. ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಳು. 'ಏನಾಯ್ತೋ... ನಿದ್ದೆ ಮಾಡ್ತಾ ಇದ್ದಂವ್ಗೆ ಎಬ್ಸಿ ಬೈತಾ ಇದ್ಯಲ್ಲೋ' ಎಂದೆ. ಉಹೂಂ... ಅದ್ಯಾವುದು ಅವಳು ಕೇಳೋ ಸ್ಥಿತಿಲೇ ಇರಲಿಲ್ಲ. ಒಂದೆರಡು ನಿಮಿಷ ಬಿಟ್ಟು, ಅವಳೇ ' ಜಾ..' ಎಂದು ಕರೆದಳು. ಅಷ್ಟರಲ್ಲಿ ಅವಳು ಶಾಂತ ಆಗಿದ್ಲು.
ಆಗಿದ್ದು ಇಷ್ಟೇ... ಆದರೂ ಚಿಂತನಾರ್ಹ.
ಪ್ರತಿದಿನ ಅವಳು ಕೆಲಸಕ್ಕೆ ಹೋಗುವಾಗ ಬೀದಿನಾಯಿಗಳಿಗೆಂದು ಒಂದೊಂದು ಬಿಸ್ಕೆಟ್ ಪ್ಯಾಕ್ ಖರೀದಿಸಿಕೊಂಡು ಹೋಗುತ್ತಾಳೆ. ಇವತ್ತು ಕೂಡಾ ಒಂದು ಬಿಸ್ಕೆಟ್ ಪ್ಯಾಕ್ ಖರೀದಿಸಿ ಸೈದಾಪೇಟೆ ಸಬರಬನ್ ರೈಲ್ವೆ ನಿಲ್ದಾಣ ಕಡೆ ಹೆಜ್ಜೆ ಹಾಕ್ತಾ ಇದ್ದಳು. ಮಾರ್ಗ ಮಧ್ಯದಲ್ಲಿರುವ ಶಿವಪ್ಪನ ದೇವಸ್ಥಾನದ ಬಳಿ ಒಂದು ಬೀದಿ ನಾಯಿ ಅವಳ ಕಣ್ಣಿಗೆ ಕಂಡಿದೆ. ಆ ನಾಯಿ ರಸ್ತೆ ದಾಟಿ ಇವಳಿದ್ದ ಕಡೆ ಆಗಮಿಸುತ್ತಿತ್ತು. ಅದೇ ವೇಳೆ ಬೈಕ್ ಸವಾರನೊಬ್ಬ ನಿಧಾನವಾಗಿ ಬಂದು, ಆ ನಾಯಿಯ ಕಾಲ ಮೇಲೆ ಬೈಕ್ ಹಾಯಿಸಿದ್ದಾನೆ. ನೋವು ತಾಳದ ಆ ಮೂಕಪ್ರಾಣಿ ಒಂದೇ ಸಮನೆ ಅಳುತ್ತಿತ್ತು. ಪುಣ್ಯಾತ್ಮ ಬೈಕ್ ಸವಾರನಿಗೆ ತಾನು ತಪ್ಪು ಮಾಡಿದ್ದೇನೆ ಎನ್ನುವ ಪಾಪ ಪ್ರಜ್ಞೆಯೂ ಕಾಡದೆ, ಯಾವುದೋ ಸಾಧನೆ ಮಾಡಿದ ನಗುಮೊಗದಿಂದ ಮುಂದೆ ಸಾಗಿದ್ದಾನೆ. ಇದೆಲ್ಲವನ್ನೂ ನೋಡುತ್ತಿದ್ದ ಸಹೋದರಿಗೆ, ಕೋಪ ನೆತ್ತಿಗೇರಿತ್ತು. ಹಿಂದೆ ಮುಂದೆ ನೋಡದೆ, 'nonsence, ರಾಕ್ಷಸ' ಎಂದು ಆತನ ಮೇಲೆ ರೇಗಾಡಿದ್ದಾಳೆ.
ನೋವು ತಾಳದ ಆ ನಾಯಿ, ಅಲ್ಲಿಯೇ ಇರುವ ಶಿವಪ್ಪನ ಗುಡಿಯ ಮೈದಾನದ ಮೂಲೆಯಲ್ಲಿ ಅಳುತ್ತಾ ಕೂತಿತ್ತು. ಸಹೋದರಿ ಅದಿದ್ದಲ್ಲಿಗೆ ಹೋಗಿ, ತನ್ನಲ್ಲಿರುವ ಬಾಟಲಿ ನೀರನ್ನು ತಲೆಗೆ, ಕಾಲಿಗೆ ಹಾಕಿ, ಮೈದವಡಿ... ಬಿಸ್ಕಿಟ್ ನೀಡಿ ಬಂದಿದ್ದಾಳೆ. ಬೈಕ್ ಸವಾರನ ಅಮಾನವೀಯತೆ ಅವಳ ಕೋಪಕ್ಕೆ ಕಾರಣವಾಗಿತ್ತು.
'ಬೈಕ್ ನಿಲ್ಲಿಸಿ, ಕಣ್ಣಲ್ಲಾದರೂ ತಾನು ತಪ್ಪು ಮಾಡಿದ್ದೇನೆ ಎಂದು ನಾಯಿ ನೋಡಿ ಮರುಕಪಡಬಹುದಿತ್ತು. ಅದು ಮಾಡದ ಆತ, ಅದಕ್ಕಿಂತ ಹೆಚ್ಚು ನೋವು ಅನುಭವಿಸುತ್ತಾನೆ. ಏನೂ ಅರಿಯದ ಮೂಕ ಪ್ರಾಣಿ ಮೇಲೆ ದೌರ್ಜನ್ಯ ಎಸಗುವ ಇವರು, ಮನುಷ್ಯರಾಗಿ ಜೀವಿಸಲು ಯೋಗ್ಯತೆಯಿಲ್ಲ. ರಾಕ್ಷಸ ಕುಲದವರು. ಅವುವೇಕಿಗಳು. ಛೀ.. ಥೂ...' ಎಂದು ಏನೇನೋ ಬೈಯ್ಯುತ್ತುದ್ದಳು.
ಹೌದು.... ನಾವು ಮನುಷ್ಯರು. ನಮ್ಮ ಭಾವನೆಯನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತೇವೆ. ಆದರೆ, ಮಾತು ಬರದ ಮೂಕ ಪ್ರಾಣಿಗಳು ಅದರದೇ ರಾಗ, ಸ್ವರದ ಮೂಲಕ ನೋವನ್ನು ಹೊರಹಾಕುತ್ತದೆ. ಮಾತು ಬರುವ ನಾವು, ಮಾತು ಬರದ ಅವರ ನೋವನ್ನು ಅರಿಯಬೇಕು. ನಮ್ಮ ಹಾಗೆ, ಆ ಮೂಕ ಪ್ರಾಣಿಗಳಿಗೂ ಹಸಿವೆ, ಸಂಸಾರ, ಬದುಕು, ನೋವು, ನಲಿವು ಎಂಬುದಿರುತ್ತದೆ. ಅದನ್ನು ಅರ್ಥೈಸಿಕೊಳ್ಳದಿದ್ದರೆ, ಮನುಷ್ಯನಾಗಿ ಹುಟ್ಟಿಯೂ ಪ್ರಯೋಜನವಿಲ್ಲ. ಇವೆಲ್ಲ ನೊಡಿದರೆ, ಪ್ರಾಣಿಗಳೇ ಎಷ್ಟೋ ಮೇಲು ಮನುಷ್ಯರಿಗಿಂತ.
ತಂಗಿಯ ಮಾನವೀಯ ಕಳಕಳಿಗೆ ಹೆಮ್ಮೆ ಪಡಲೇ, ಅಥವಾ, ಮನುಷ್ಯನಲ್ಲಿ ಮನುಷ್ಯತ್ವವೇ ಸತ್ತು ಹೋಗಿದೆ ಎಂದು ಮರುಕ ಪಡಲೇ...?

ಬುಧವಾರ, ಮೇ 4, 2016


ಗೆದ್ದಿದ್ದು ನನ್ನ ಪುಟ್ಟ ಸ್ನೇಹಿತನೆ...!

ಆತ ನನ್ನ ಸೂಪರ್, ಸೂಪರ್..... ಜ್ಯೂನಿಯರ್. ಹಾಗನ್ನುವುದಕ್ಕಿಂತ ಪುಟ್ಟ ಸ್ನೇಹಿತ ಎನ್ನಬಹುದು. ಅಗಷ್ಟೇ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಮುಗಿಸಿ, ಬದುಕಿಗೆ ನೆಲೆ ಕಂಡುಕೊಳ್ಳಲು ತರಬೇತಿಗೆಂದು ಪತ್ರಿಕಾಲಯದ ಕಚೇರಿಗೆ ಬಂದಿದ್ದ. ಕಲಿಕೆಯಬೇಕೆಂಬ ಬಯಕೆ ಅವನಲ್ಲಿ ಬೆಟ್ಟದಷ್ಟಿದ್ದರೂ, ಕ್ರಮೇಣ ಅದು ಕಡಿಮೆಯಾಗುತ್ತ ಬಂದಿತ್ತು.
ಪತ್ರಿಕೋದ್ಯಮದ ಕುರಿತಾಗಿ ಪಠ್ಯಪುಸ್ತಕದಲ್ಲಿರುವ ವಿಷಯವನ್ನು ಎರಡು ವರ್ಷಗಳ ಕಾಲ ನಾಲ್ಕು ಗೋಡೆಯೊಳಗೆ ಕುಳಿತು ಕಲಿತು ಬಂದ ಅವನಿಗೆ, ಕಚೇರಿ ಕಾರ್ಯ ಒಗ್ಗಿ ಬರುತ್ತಿರಲಿಲ್ಲ ಅಂದುಕೊಂಡಿದ್ದೆ. ಆದರೆ, ವಿಷಯವೇ ಬೇರೆಯಾಗಿತ್ತು.......!
ಆತ ಗೌರೀಶ( ಹೆಸರು ಬದಲಿಸಿದ್ದೇನೆ). ಗದಗ ಮೂಲದ ಬಡ ಕುಟುಂಬದ ಸುಂದರ ಹುಡುಗ. ಓದು, ಬರಹದಲ್ಲಿ ಆಸಕ್ತಿಯಿದ್ದರಿಂದ journalist ಆಗಬೇಕೆಂದು, ಪತ್ರಿಕೋದ್ಯಮ ಆಯ್ದುಕೊಂಡು, ಧಾರವಾಡದ ಶಾಲ್ಮಲೆಯ ತಟಕ್ಕೆ ಬಂದಿದ್ದ. ಮನಸ್ಸು ಬೇಡ ಅಂದರೂ ಹುಡುಗು ಬುದ್ಧಿ ಕೇಳಬೇಕಲ್ಲ; ಕಾಲೇಜ್ ಕ್ಯಾಂಪಸ್ ನಲ್ಲಿ ಕಂಡ ಚೆಲುವೆಯೊಬ್ಬಳ ಪ್ರೇಮ ಬಂಧನಕ್ಕೆ ಒಳಗಾದ. ಎರಡು ವರ್ಷಗಳಲ್ಲಿ ಆ ಪ್ರೇಮ ಬಲಿತು ಹೆಮ್ಮರವಾಗಿತ್ತು. ತನ್ನ ಅಪ್ಪ, ಅಮ್ಮರಿಗೆ, ಅವಳನ್ನು ಮದುವೆಯಾಗುವುದಾಗಿ ಹೇಳಿ ಅನುಮತಿಯನ್ನು ಸಹ ಪಡೆದಿದ್ದ.
ಎರಡು ವರ್ಷ ಅಭ್ಯಾಸ ಮುಗಿಸಿ ಅಂದು ನಮ್ಮ ಪತ್ರಿಕಾ ಕಚೇರಿಗೆ ಬಂದ ಆತನಲ್ಲಿ, ಕಲಿಯಬೇಕೆಂಬ ಉತ್ಸಾಹ ತುಂಬಿ ತುಳುಕುತ್ತಿತ್ತು. ಸಮಯ, ಸಂದರ್ಭ ನೋಡದೆ, ಒಂದೇ ಸಮನೆ ಎಡತಾಕಿ ತನ್ನ ಸಂದೇಹ ಪರಿಹರಿಸಿಕೊಳ್ಳುತ್ತಿತ್ತ. ಆದರೆ, ಅವತ್ತು ಯಾಕೋ ತೀರಾ ಎನ್ನುವಷ್ಟು ಮಂಕನಾಗಿದ್ದ. ಸಂದೇಹ ಬೇಡ, ಒಂದಕ್ಷರ ಸಹ ಆತನ ಬೆರಳಿನಿಂದ ಅಚ್ಚೊತ್ತುತ್ತಿರಲಿಲ್ಲ. ಕೋಪದಿಂದಲೇ ಬುದ್ಧಿ ಹೇಳಿದೆ. ಆದರೆ, ಬುದ್ಧಿ ಮಾತಿಗೆ ಕಿವಿಗೊಡುವ ಸಹನೆಯನ್ನೇ ಆತ ಕಳೆದುಕೊಂಡಿದ್ದ. ಎರಡು ದಿನಗಳಲ್ಲಿ ಆತನ ವಿಶ್ವಾಸಗಳಿಸಿ, ಕಣ್ಣಂಚಲ್ಲೆ 'ನಿನ್ನ ನೋವೇನು ಪುಟ್ಟಾ' ಎಂದು ಕೇಳಿದೆ. 'ಅಣ್ಣಾ, ಹುಡುಗಿ ಕೈ ಕೊಟ್ಟಳು' ಎಂದು ಗದ್ಗದಿತನಾದ.


ಆತನ ಎರಡೂ ಕೈಯ್ಯನ್ನು ಗಟ್ಟಿಯಾಗಿ ಅದುಮಿ, ಅವನನ್ನು ಎದೆಗಪ್ಪಿಕೊಂಡೆ. ಎರಡು ದಿನ ಬಿಟ್ಟು, ನನ್ನ ಒಡನಾಟದ ಅಕ್ಕನ ಮನೆಗೆ ಕರೆದೊಯ್ದೆ. ಆವರೆಗೆ ಗೊತ್ತಿಲ್ಲದ ಜಗತ್ತೊಂದನ್ನು ಆತ ಅಲ್ಲಿ ನೋಡಿದ್ದ. ನೋವಿನಲ್ಲಿ ನಗುವುದು ಹೇಗೆಂಬುದನ್ನು ಪ್ರತ್ಯಕ್ಷವಾಗಿ ಕಂಡಿದ್ದ. ಯಾರನ್ನು ಸಹ 'ಅವರು ಹೀಗೆಯೇ...' ಎಂದು ನಿರ್ಧರಿಸಬಾರದು ಎನ್ನುವ ಪಾಠ ಕಲಿತಿದ್ದ. ಅಲ್ಲಿಗೆ ಹೋಗುವಾಗ ಭಾರವಿದ್ದ ಆತನ ಹೃದಯ, ಬರುವಾಗ ಹತ್ತಿಯಂತಾಗಿತ್ತು. ವಿಚಿತ್ರ ಎಂದರೆ, ಅವತ್ತು ನಾ ಅವನ ಕೈ ಹಿಡಿದು, ತಬ್ಬಿಕೊಂಡರೆ, ಅಂದು ನನ್ನ ಕೈ ಅದುಮಿ, ಆತ ತಬ್ಬಿಕೊಂಡಿದ್ದ...!
ಹಂತ ಹಂತವಾಗಿ ಗೌರೀಶ, ತಾನು ಪ್ರೀತಿಸಿದವಳ ನೆನಪಿನಿಂದ ಹೊರಬರುತ್ತಿದ್ದ. ತರಬೇತಿ ಅವಧಿ ಮುಗಿದ ನಂತರ ಧಾರವಾಡದಲ್ಲಿಯೇ, ಪತ್ರಿಕೆಗೆ ಸಂಬಂಧಿಸಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸ್ವಲ್ಪ ದಿನಗಳ ನಂತರ ಕೈ ತುಂಬಾ ಸಂಬಳದ ಉದ್ಯೋಗ ಅವನನ್ನು ಹುಡುಕಿಕೊಂಡು ಬಂತು. ಹಿಂದೆ ಮುಂದೆ ನೋಡದೆ, ಗಂಟು, ಮೂಟೆ ಕಟ್ಟಿಕೊಂಡು ' ರೈಟ್' ಅಂದ. ಯಾವೊಂದು ತಾಕಲಾಟ, ತೊಳಲಾಟವಿಲ್ಲದೆ ಪುಟ್ಟ ಸ್ನೇಹಿತ ಅಲ್ಲಿ ನಿಶ್ಚಿಂತೆಯಿಂದ ಇದ್ದಾನೆ. ಪ್ರತಿದಿನ ಸಂಪರ್ಕದಲ್ಲಿದ್ದು, 'ಅಣ್ಣಾ, ಹೇಗಿದ್ಯಾ?' ಎಂದು ಕೇಳುತ್ತಾನೆ. ಸುಮ್ಮನೆ, ಹರಟೆ ಹೊಡೆದು 'good night' ಹೇಳಿ ಮಲಗುತ್ತೇವೆ.
ಪುಟ್ಟ ಸ್ನೇಹಿತನನ್ನು ಎರಡು ವರ್ಷ ಕಾಲ ಪ್ರೀತಿಸಿದ ಹುಡುಗಿಯ ಮದುವೆ ಆಯಿತು ಎನ್ನುವ ಸುದ್ದಿ ಎರಡು ದಿನದ ಹಿಂದೆ ಕಿವಿಗೆ ಬಿದ್ದಿತ್ತು. ಆ ಕುರಿತು ಅವನಲ್ಲಿ ಕೇಳಿದರೆ, 'ಅಣ್ಣಾ, ನನ್ನದು ಪವಿತ್ರ ಪ್ರೀತಿ. ಅವಳಿಗಾಗಿ ಕೊರಗಿದ್ದು, ಕನವರಿಸಿದ್ದು ಹೌದು. ಮದುವೆ ಆಗುವ ನಿರ್ಧಾರ ತೆಗೆದುಕೊಂಡು, ಅಪ್ಪ, ಅಮ್ಮನನ್ನು ಸಹ ಒಪ್ಪಿಸಿದ್ದೆ. ಅದಾಗಲಿಲ್ಲ. ಅವಳು ಎಲ್ಲೇ ಇರಲಿ; ನಗ್ತಾ ಇದ್ರೆ ಸಾಕು. ದೂರದಿಂದಲೇ ಅವಳಿಗಾಗಿ ಭಗವಂತನಲ್ಲಿ ಕೈ ಜೋಡಿಸ್ತೀನಣ್ಣಾ' ಅಂತಾನೆ.
ಅವಳು ಚೆನ್ನಾಗಿರಲಿ. ಬಾಳು ಬೆಳಗುತ್ತಿರಲಿ. ಆದರೆ, ಪ್ರೀತಿಯ ಚದುರಂಗದಾಟದಲ್ಲಿ ಗೆದ್ದಿದ್ದು ಮಾತ್ರ ನನ್ನ ಪುಟ್ಟ ಸ್ನೇಹಿತನೆ. ಹ್ಯಾಟ್ಸ್ ಅಪ್ ಅಪ್ಪಿ....!

ಭಾನುವಾರ, ಮೇ 1, 2016

ಕಾಡಿಗೆ ಬೆಂಕಿಯಿಡುವ 'ನಂಬಿಕೆ'ಯ ಕಥೆಯಿದು...!

ಕಾಡಂಚಿನ ನಿವಾಸಿಗಳ ನಂಬಿಕೆಯೊಂದು, ಕಾಡಿಗೆ ಕಾಡೇ ಸಂಪೂರ್ಣ ಭಸ್ಮಮಾಡಿಬಿಡುತ್ತದೆ ಎನ್ನುವ ಭಯಾನಕ ಸುದ್ದಿಯೊಂದು ಇಲ್ಲಿದೆ. ಬಿರು ಬೇಸಿಗೆಯಲ್ಲಿ ಹುಲ್ಲು ಬೆಳೆಯುವ ಕಾಡಿನ ಪ್ರದೇಶಕ್ಕೆ ತರಗೆಲೆಯಿಂದ ಬೆಂಕಿ ಇಟ್ಟರೆ, ಮಳೆ ಬಿದ್ದಾಗ ಅಲ್ಲಿ ಹುಲುಸಾಗಿ ಹುಲ್ಲು ಬೆಳೆಯುತ್ತದಂತೆ!
ಇಂಥಹ ನಂಬಿಕೆಯೊಂದು ಕಾಡಂಚಿನ ನಿವಾಸಿಗಳಲ್ಲಿ ಬಲವಾಗಿ ಬೇರೂರಿದೆ. ಸುಟ್ಟ ತರಗೆಲೆ ಬೆಳೆಯುವ ಹುಲ್ಲಿಗೆ ಗೊಬ್ಬರ. ಅದರಿಂದ ಮುಂಗಾರಿನ ಮೊದಲ ಮಳೆ ಭೂಮಿಗೆ ಬೀಳುತ್ತಿದ್ದಂತೆ ಹುಲ್ಲು ಮೊಳಕೆಯೊಡೆದು, ವಾರದಲ್ಲಿ ಯಥೇಚ್ಛವಾಗಿ ಎದ್ದು ನಿಲ್ಲುತ್ತದೆ. ಬೆಂಕಿ ಹಾಕದ ಪ್ರದೇಶಗಳಲ್ಲಿ ಹುಲ್ಲು ಎದ್ದು ನಿಲ್ಲಲು ತಿಂಗಳುಗಳ ಕಾಲ ಕಾಯಬೇಕು. ಹೀಗೆ ಬೆಂಕಿ ಹಾಕಿದರೆ ದನ-ಕರುಗಳಿಗೆ ಮೇವು ಭರಪೂರ ದೊರೆಯುತ್ತದೆ ಎನ್ನುವುದು ಅವರ ಬಲವಾದ ನಂಬಿಕೆ. ಪರಿಣಾಮ, ಸುಡು ಬೇಸಿಗೆಯಲ್ಲಿ ಕಾಡಿನ ತರಗೆಲೆಗಳನ್ನೆಲ್ಲ ಒಂದೆಡೆ ಕಲೆಹಾಕಿ ಬೆಂಕಿ ಇಡುತ್ತಾರೆ. ಮೊದಲೇ ಬಿಸಿಲಿನ ಉರಿಗೆ ಗರಿಗರಿಯಾದ ತರಗೆಲೆಗಳು, ಕಾಡಿನ ಚಿಕ್ಕಪುಟ್ಟ ಮರಗಳು ಬೆಂಕಿಯ ಪ್ರಖರತೆಗೆ ಕ್ಷಣಾರ್ಧದಲ್ಲಿ ಪಟಪಟನೆ ಉರಿದು ಬಿಡುತ್ತವೆ. ಅಲ್ಲದೆ, ಆ ಬೆಂಕಿಯ ತೀವ್ರತೆ ಅಕ್ಕ ಪಕ್ಕ ಬಿದ್ದಿರುವ ತರಗೆಲೆ, ಒಣ ಮರಗಳಿಗೆಲ್ಲ ವ್ಯಾಪಿಸಿ ಕಾಡ್ಗಿಚ್ಚಾಗಿ ಪರಿವರ್ತಿತವಾಗುತ್ತದೆ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರ, ದಾಂಡೇಲಿ ಭಾಗದ ಹುಣಶೆಟ್ಟಿಕೊಪ್ಪ, ಯಲ್ಲಾಪುರ, ಕಿರುವತ್ತಿ, ಕಾತೂರ, ಮುಂಡಗೋಡ, ಮಂಚಿಕೇರಿ, ಇಡಗುಂದಿ, ಅರಬೈಲ, ರಾಮಗುಳಿ, ಕತಗಾಲ, ದೇವಿಮನೆ ಹೀಗೆ ಅನೇಕ ಅರಣ್ಯ ಪ್ರದೇಶಗಳಲ್ಲಿ ಇಂಥಹ ಘಟನೆ ಪ್ರತಿ ಬೇಸಿಗೆಯಲ್ಲಿ ಪುನರಾವರ್ತಿತವಾಗುತ್ತಲೇ ಇರುತ್ತದೆ. ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಎಷ್ಟೇ ಹರಸಾಹಸ ಪಟ್ಟರೂ ಅವರಿಂದ ಸಾಧ್ಯವಾಗದು. ನಿರೀಕ್ಷೆ ಮೀರಿ ಅನಾಹುತ ಘಟಿಸಿರುತ್ತದೆ. ಲಕ್ಷಾಂತರ, ಕೋಟ್ಯಾಂತರ ರು. ಮೌಲ್ಯದ ಅರಣ್ಯ ಸಂಪತ್ತು ಬೆಂಕಿಗಾಹುತಿ ಆಗಿರುತ್ತದೆ. ಅಲ್ಲದೆ, ಹತ್ತಾರು ವನ್ಯಜೀವಿಗಳು, ಅಪರೂಪದ ಜೀವ ಸಂಕುಲಗಳು, ಗಿಡಮೂಲಿಕೆ ಸಸ್ಯಗಳು ಸುಟ್ಟು ಕರಕಲಾಗಿರುತ್ತವೆ.
ಹೊಂದಾಣಿಕೆ ಎಂದರೆ ಬೆಂಕಿ ಇಡುವುದಲ್ಲ!
ಕಾಡಂಚಿನಲ್ಲಿ ವಾಸಿಸುವ ಬಹುತೇಕ ಕುಟುಂಬಗಳಿಗೆ ಕಾಡೇ ಜೀವನಾಧಾರ. ಅರಣ್ಯ ಸಿಬ್ಬಂದಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅನಿವಾರ್ಯವಾಗಿ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಯಾಕೆಂದರೆ, ಅನಾದಿ ಕಾಲದಿಂದಲೂ ಅಲ್ಲಿನ ನಿವಾಸಿಗಳು ಕಾಡನ್ನು ಆಶ್ರಯಿಸಿ ಬದುಕು ಕಟ್ಟಿಕೊಂಡು ಬಂದವರು. ಅರಣ್ಯ ಸಂರಕ್ಷಣೆ, ಕಾನೂನು ಪಾಲನೆ ಎಂದರೆ ಸಾವಿರಾರು ಕುಟುಂಬ ಅನ್ನಾಹಾರ ಇಲ್ಲದೆ ಬೀದಿಗೆ ಬೀಳಬೇಕಾಗುತ್ತದೆ. ಹಾಗಂತ, ಕಾಡಿಗೆ ಬೆಂಕಿ ಇಟ್ಟು ಬದುಕು ಕಟ್ಟಿಕೊಳ್ಳಬೇಕೆನ್ನುವ ಹೊಂದಾಣಿಕೆ ಅರಣ್ಯ ಸಿಬ್ಬಂದಿಯದಲ್ಲ. ಇರುವ ಅರಣ್ಯ ಸಂಪತ್ತನ್ನು ಹಿತಮಿತವಾಗಿ ಬಳಸಿ, ನೀವೂ ಬದುಕಿ, ಅವುಗಳನ್ನೂ ಸಂರಕ್ಷಿಸಿ ಎಂಬುದು. ಆದರೆ, ಕಾಡನ್ನು ರಕ್ಷಿಸುವ ಬದಲು ಅವೈಜ್ಞಾನಿಕ ನಂಬಿಕೆಯಿಂದ ಅವರು ಕಾಡಿಗೆ ಬೆಂಕಿ ಇಡುತ್ತಾರೆ ಎನ್ನುವುದು ವಿಪರ್ಯಾಸ.
ಇವರೂ ಬೆಂಕಿ ಇಡುತ್ತಾರೆ...
ರಸ್ತೆ ಅಂಚಿನಲ್ಲಿ ಬಿದ್ದಿರುವ ತರಗೆಲೆಗಳನ್ನು ಅರಣ್ಯ ಸಿಬ್ಬಂದಿ ಸಾಲಾಗಿ ಒಟ್ಟುಗೂಡಿಸಿ ಅವುಗಳಿಗೆ ಬೆಂಕಿ ಇಡುತ್ತಾರೆ. ಯಾರಾದರೂ ಸಿಗರೇಟ್, ಬೀಡಿ ಸೇದು ಅಲ್ಲಿಯೇ ಬೀಸಾಡಿದರೆ, ಒಣಗಿದ ತರಗೆಲೆಗೆ ಹತ್ತಿಕೊಂಡ ಸಣ್ಣ ಕಿಡಿ, ಕಾಡೆಲ್ಲ ವ್ಯಾಪಿಸುವ ಸಾಧ್ಯತೆಯಿರುತ್ತದೆ. ಮುಂಜಾಗ್ರತ ಕ್ರಮವಾಗಿ ಅರಣ್ಯ ಸಿಬ್ಬಂದಿ ಬೇಸಿಗೆ ದಿನಗಳು ಹತ್ತಿರ ಬಂದಂತೆ, ಕಾಡಿನ ಮೂಲಕ ಹಾದುಹೋಗುವ ರಸ್ತೆಯ ಅಕ್ಕಪಕ್ಕ ಬಿದ್ದಿರುವ ತರಗೆಲೆಗಳಿಗೆ ಬೆಂಕಿ ಇಡುತ್ತಾರೆ.
ಬೆಂಕಿ ಇಡುವವರೇ ಹೆಚ್ಚು!
ಎರಡು ಸಾವಿರದಿಂದ ಐದು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒಂದು ಬೀಟ್(ಗಸ್ತು) ಎಂದು ಗುರುತಿಸಿ ಒಬ್ಬ ಗಾಡರ್್ನನ್ನು ನೇಮಕ ಮಾಡಲಾಗುತ್ತದೆ. ಇಂಥಹ ಮೂರು-ನಾಲ್ಕು ಬೀಟ್ಗೆ ಒಬ್ಬ ಫಾರೆಸ್ಟರ್ ಹಾಗೂ ಒಬ್ಬ ಬೆಂಕಿ ವೀಕ್ಷಕನನ್ನು ನಿಯೋಜಿಸಲಾಗುತ್ತದೆ. ಈ ಮೊದಲು ದಟ್ಟ ಕಾಡುಗಳು ಇರುತ್ತಿದ್ದರಿಂದ ಬೇಸಿಗೆಯಲ್ಲಿ ಮರಗಳ ತಿಕ್ಕಾಟದಿಂದ ಕಾಡಿಗೆ ಬೆಂಕಿ ಬೀಳುತ್ತಿತ್ತು. ಆದರೆ, ಇತ್ತೀಚೆಗೆ ಕಾಡುಗಳು ಕ್ಷೀಣವಾಗುತ್ತಿರುವುದರಿಂದ ಆಕಸ್ಮಿಕವಾಗಿ ಬೆಂಕಿ ಬೀಳುವುದು ಕಡಿಮೆಯಾಗಿದೆ. ಆದರೆ, ಕಾಡಂಚಿನ ಜನರು ಉದ್ದೇಶಪೂರ್ವಕವಾಗಿ ಹಾಗೂ ಮೂಢನಂಬಿಕೆಗೆ ಜೋತು ಬಿದ್ದು ಬೆಂಕಿ ಇಡುತ್ತಿದ್ದಾರೆ. ಐದಾರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲ್ಲಿ, ಯಾವಾಗ ಬೆಂಕಿ ಇಡುತ್ತಾರೆ ಎನ್ನುವುದು ಗಾರ್ಡ್ ಗಳಿಗಾಗಲಿ, ಬೆಂಕಿ ವೀಕ್ಷಕ ಸಿಬ್ಬಂದಿಗಾಗಲಿ ತಿಳಿಯದು. ದಟ್ಟ ಹೊಗೆ ಮೇಲೆದ್ದಾಗಲೇ ನಿರ್ದಿಷ್ಟ ಪ್ರದೇಶದ ಗುರುತು ಸಿಗುತ್ತದೆ. ಅಷ್ಟರಲ್ಲಾಗಲೇ ಕಾಡಿನ ಬಹುತೇಕ ಭಾಗ ಸುಟ್ಟು ಹೋಗಿರುತ್ತದೆ. ವ್ಯಾಪಿಸುವ ಬೆಂಕಿ ನಂದಿಸಬೇಕೆಂದರೆ ಯಾವುದೇ ಆಧುನಿಕ ಉಪಕರಣಗಳಿಲ್ಲ. ಮರಗಳ ಟೊಂಗೆಯನ್ನು ಮುರಿದು ಬೆಂಕಿಗೆ ಬಡಿಯಬೇಕು. ಅದು ಪ್ರಾಣಾಪಾಯದ ಕಾಯರ್ತವೇ.
ಕೆಂದಳಿಲಿನ ಗೂಡಿಗೆ ಬೆಂಕಿ
ಉತ್ತರ ಕನ್ನಡ ಅರಣ್ಯದಲ್ಲಿ ಕಾಣ ಸಿಗುವ ಬಹು ಅಪರೂಪದ ಜೀವ ಸಂಕುಲಗಳಲ್ಲಿ ಕೆಂದಳಿಲು(ಕೆಂಪು ಅಳಿಲು) ಒಂದು. ಅವು ಹೆಚ್ಚಾಗಿ ಬಾಂಬು(ಬಿದುರು)ಗಳ ಒಳಗೆ ಗೂಡು ಕಟ್ಟಿ ಬದುಕುತ್ತವೆ. ಬಿರು ಬೇಸಿಗೆಯ ತಾಪಕ್ಕೆ ಬಾಂಬು ತಂಪನೆಯ ವಾತಾವರಣ ನೀಡುತ್ತದೆ. ಆದರೆ, ಬೆಂಕಿ ಇಟ್ಟಾಗ ಮೊದಲು ಆಹುತಿಯಾಗುವುದು ಈ ಬಾಂಬು ಗಿಡಗಳೇ. ಯಾಕೆಂದರೆ, ಇವುಗಳ ಬುಡಕ್ಕೆ ಬೆಂಕಿ ತಗುಲಿದಾಗ ಒಂದೇ ಸಮನೆ ಅದರ ಗಾವು ಮೇಲಿನವರೆಗೂ ಹಬ್ಬಿ ಬಡುತ್ತದೆ. ಅದರ ಒಳಗಡೆ ಗೂಡು ಕಟ್ಟಿಕೊಂಡಿರುವ ಕೆಂದಳಿಲು ಹಾಗೂ ಅದರ ಸಂಸಾರ ಅಲ್ಲಿಯೇ ಕರಕಲಾಗುತ್ತದೆ.