ಗೆದ್ದಿದ್ದು ನನ್ನ ಪುಟ್ಟ ಸ್ನೇಹಿತನೆ...!
ಆತ ನನ್ನ ಸೂಪರ್, ಸೂಪರ್..... ಜ್ಯೂನಿಯರ್. ಹಾಗನ್ನುವುದಕ್ಕಿಂತ ಪುಟ್ಟ ಸ್ನೇಹಿತ ಎನ್ನಬಹುದು. ಅಗಷ್ಟೇ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಮುಗಿಸಿ, ಬದುಕಿಗೆ ನೆಲೆ ಕಂಡುಕೊಳ್ಳಲು ತರಬೇತಿಗೆಂದು ಪತ್ರಿಕಾಲಯದ ಕಚೇರಿಗೆ ಬಂದಿದ್ದ. ಕಲಿಕೆಯಬೇಕೆಂಬ ಬಯಕೆ ಅವನಲ್ಲಿ ಬೆಟ್ಟದಷ್ಟಿದ್ದರೂ, ಕ್ರಮೇಣ ಅದು ಕಡಿಮೆಯಾಗುತ್ತ ಬಂದಿತ್ತು.ಪತ್ರಿಕೋದ್ಯಮದ ಕುರಿತಾಗಿ ಪಠ್ಯಪುಸ್ತಕದಲ್ಲಿರುವ ವಿಷಯವನ್ನು ಎರಡು ವರ್ಷಗಳ ಕಾಲ ನಾಲ್ಕು ಗೋಡೆಯೊಳಗೆ ಕುಳಿತು ಕಲಿತು ಬಂದ ಅವನಿಗೆ, ಕಚೇರಿ ಕಾರ್ಯ ಒಗ್ಗಿ ಬರುತ್ತಿರಲಿಲ್ಲ ಅಂದುಕೊಂಡಿದ್ದೆ. ಆದರೆ, ವಿಷಯವೇ ಬೇರೆಯಾಗಿತ್ತು.......!
ಆತ ಗೌರೀಶ( ಹೆಸರು ಬದಲಿಸಿದ್ದೇನೆ). ಗದಗ ಮೂಲದ ಬಡ ಕುಟುಂಬದ ಸುಂದರ ಹುಡುಗ. ಓದು, ಬರಹದಲ್ಲಿ ಆಸಕ್ತಿಯಿದ್ದರಿಂದ journalist ಆಗಬೇಕೆಂದು, ಪತ್ರಿಕೋದ್ಯಮ ಆಯ್ದುಕೊಂಡು, ಧಾರವಾಡದ ಶಾಲ್ಮಲೆಯ ತಟಕ್ಕೆ ಬಂದಿದ್ದ. ಮನಸ್ಸು ಬೇಡ ಅಂದರೂ ಹುಡುಗು ಬುದ್ಧಿ ಕೇಳಬೇಕಲ್ಲ; ಕಾಲೇಜ್ ಕ್ಯಾಂಪಸ್ ನಲ್ಲಿ ಕಂಡ ಚೆಲುವೆಯೊಬ್ಬಳ ಪ್ರೇಮ ಬಂಧನಕ್ಕೆ ಒಳಗಾದ. ಎರಡು ವರ್ಷಗಳಲ್ಲಿ ಆ ಪ್ರೇಮ ಬಲಿತು ಹೆಮ್ಮರವಾಗಿತ್ತು. ತನ್ನ ಅಪ್ಪ, ಅಮ್ಮರಿಗೆ, ಅವಳನ್ನು ಮದುವೆಯಾಗುವುದಾಗಿ ಹೇಳಿ ಅನುಮತಿಯನ್ನು ಸಹ ಪಡೆದಿದ್ದ.
ಎರಡು ವರ್ಷ ಅಭ್ಯಾಸ ಮುಗಿಸಿ ಅಂದು ನಮ್ಮ ಪತ್ರಿಕಾ ಕಚೇರಿಗೆ ಬಂದ ಆತನಲ್ಲಿ, ಕಲಿಯಬೇಕೆಂಬ ಉತ್ಸಾಹ ತುಂಬಿ ತುಳುಕುತ್ತಿತ್ತು. ಸಮಯ, ಸಂದರ್ಭ ನೋಡದೆ, ಒಂದೇ ಸಮನೆ ಎಡತಾಕಿ ತನ್ನ ಸಂದೇಹ ಪರಿಹರಿಸಿಕೊಳ್ಳುತ್ತಿತ್ತ. ಆದರೆ, ಅವತ್ತು ಯಾಕೋ ತೀರಾ ಎನ್ನುವಷ್ಟು ಮಂಕನಾಗಿದ್ದ. ಸಂದೇಹ ಬೇಡ, ಒಂದಕ್ಷರ ಸಹ ಆತನ ಬೆರಳಿನಿಂದ ಅಚ್ಚೊತ್ತುತ್ತಿರಲಿಲ್ಲ. ಕೋಪದಿಂದಲೇ ಬುದ್ಧಿ ಹೇಳಿದೆ. ಆದರೆ, ಬುದ್ಧಿ ಮಾತಿಗೆ ಕಿವಿಗೊಡುವ ಸಹನೆಯನ್ನೇ ಆತ ಕಳೆದುಕೊಂಡಿದ್ದ. ಎರಡು ದಿನಗಳಲ್ಲಿ ಆತನ ವಿಶ್ವಾಸಗಳಿಸಿ, ಕಣ್ಣಂಚಲ್ಲೆ 'ನಿನ್ನ ನೋವೇನು ಪುಟ್ಟಾ' ಎಂದು ಕೇಳಿದೆ. 'ಅಣ್ಣಾ, ಹುಡುಗಿ ಕೈ ಕೊಟ್ಟಳು' ಎಂದು ಗದ್ಗದಿತನಾದ.
ಆತನ ಎರಡೂ ಕೈಯ್ಯನ್ನು ಗಟ್ಟಿಯಾಗಿ ಅದುಮಿ, ಅವನನ್ನು ಎದೆಗಪ್ಪಿಕೊಂಡೆ. ಎರಡು ದಿನ ಬಿಟ್ಟು, ನನ್ನ ಒಡನಾಟದ ಅಕ್ಕನ ಮನೆಗೆ ಕರೆದೊಯ್ದೆ. ಆವರೆಗೆ ಗೊತ್ತಿಲ್ಲದ ಜಗತ್ತೊಂದನ್ನು ಆತ ಅಲ್ಲಿ ನೋಡಿದ್ದ. ನೋವಿನಲ್ಲಿ ನಗುವುದು ಹೇಗೆಂಬುದನ್ನು ಪ್ರತ್ಯಕ್ಷವಾಗಿ ಕಂಡಿದ್ದ. ಯಾರನ್ನು ಸಹ 'ಅವರು ಹೀಗೆಯೇ...' ಎಂದು ನಿರ್ಧರಿಸಬಾರದು ಎನ್ನುವ ಪಾಠ ಕಲಿತಿದ್ದ. ಅಲ್ಲಿಗೆ ಹೋಗುವಾಗ ಭಾರವಿದ್ದ ಆತನ ಹೃದಯ, ಬರುವಾಗ ಹತ್ತಿಯಂತಾಗಿತ್ತು. ವಿಚಿತ್ರ ಎಂದರೆ, ಅವತ್ತು ನಾ ಅವನ ಕೈ ಹಿಡಿದು, ತಬ್ಬಿಕೊಂಡರೆ, ಅಂದು ನನ್ನ ಕೈ ಅದುಮಿ, ಆತ ತಬ್ಬಿಕೊಂಡಿದ್ದ...!
ಹಂತ ಹಂತವಾಗಿ ಗೌರೀಶ, ತಾನು ಪ್ರೀತಿಸಿದವಳ ನೆನಪಿನಿಂದ ಹೊರಬರುತ್ತಿದ್ದ. ತರಬೇತಿ ಅವಧಿ ಮುಗಿದ ನಂತರ ಧಾರವಾಡದಲ್ಲಿಯೇ, ಪತ್ರಿಕೆಗೆ ಸಂಬಂಧಿಸಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸ್ವಲ್ಪ ದಿನಗಳ ನಂತರ ಕೈ ತುಂಬಾ ಸಂಬಳದ ಉದ್ಯೋಗ ಅವನನ್ನು ಹುಡುಕಿಕೊಂಡು ಬಂತು. ಹಿಂದೆ ಮುಂದೆ ನೋಡದೆ, ಗಂಟು, ಮೂಟೆ ಕಟ್ಟಿಕೊಂಡು ' ರೈಟ್' ಅಂದ. ಯಾವೊಂದು ತಾಕಲಾಟ, ತೊಳಲಾಟವಿಲ್ಲದೆ ಪುಟ್ಟ ಸ್ನೇಹಿತ ಅಲ್ಲಿ ನಿಶ್ಚಿಂತೆಯಿಂದ ಇದ್ದಾನೆ. ಪ್ರತಿದಿನ ಸಂಪರ್ಕದಲ್ಲಿದ್ದು, 'ಅಣ್ಣಾ, ಹೇಗಿದ್ಯಾ?' ಎಂದು ಕೇಳುತ್ತಾನೆ. ಸುಮ್ಮನೆ, ಹರಟೆ ಹೊಡೆದು 'good night' ಹೇಳಿ ಮಲಗುತ್ತೇವೆ.ಪುಟ್ಟ ಸ್ನೇಹಿತನನ್ನು ಎರಡು ವರ್ಷ ಕಾಲ ಪ್ರೀತಿಸಿದ ಹುಡುಗಿಯ ಮದುವೆ ಆಯಿತು ಎನ್ನುವ ಸುದ್ದಿ ಎರಡು ದಿನದ ಹಿಂದೆ ಕಿವಿಗೆ ಬಿದ್ದಿತ್ತು. ಆ ಕುರಿತು ಅವನಲ್ಲಿ ಕೇಳಿದರೆ, 'ಅಣ್ಣಾ, ನನ್ನದು ಪವಿತ್ರ ಪ್ರೀತಿ. ಅವಳಿಗಾಗಿ ಕೊರಗಿದ್ದು, ಕನವರಿಸಿದ್ದು ಹೌದು. ಮದುವೆ ಆಗುವ ನಿರ್ಧಾರ ತೆಗೆದುಕೊಂಡು, ಅಪ್ಪ, ಅಮ್ಮನನ್ನು ಸಹ ಒಪ್ಪಿಸಿದ್ದೆ. ಅದಾಗಲಿಲ್ಲ. ಅವಳು ಎಲ್ಲೇ ಇರಲಿ; ನಗ್ತಾ ಇದ್ರೆ ಸಾಕು. ದೂರದಿಂದಲೇ ಅವಳಿಗಾಗಿ ಭಗವಂತನಲ್ಲಿ ಕೈ ಜೋಡಿಸ್ತೀನಣ್ಣಾ' ಅಂತಾನೆ.
ಅವಳು ಚೆನ್ನಾಗಿರಲಿ. ಬಾಳು ಬೆಳಗುತ್ತಿರಲಿ. ಆದರೆ, ಪ್ರೀತಿಯ ಚದುರಂಗದಾಟದಲ್ಲಿ ಗೆದ್ದಿದ್ದು ಮಾತ್ರ ನನ್ನ ಪುಟ್ಟ ಸ್ನೇಹಿತನೆ. ಹ್ಯಾಟ್ಸ್ ಅಪ್ ಅಪ್ಪಿ....!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ