ಕಾಡಿಗೆ ಬೆಂಕಿಯಿಡುವ 'ನಂಬಿಕೆ'ಯ ಕಥೆಯಿದು...!
ಕಾಡಂಚಿನ ನಿವಾಸಿಗಳ ನಂಬಿಕೆಯೊಂದು, ಕಾಡಿಗೆ ಕಾಡೇ ಸಂಪೂರ್ಣ ಭಸ್ಮಮಾಡಿಬಿಡುತ್ತದೆ ಎನ್ನುವ ಭಯಾನಕ ಸುದ್ದಿಯೊಂದು ಇಲ್ಲಿದೆ. ಬಿರು ಬೇಸಿಗೆಯಲ್ಲಿ ಹುಲ್ಲು ಬೆಳೆಯುವ ಕಾಡಿನ ಪ್ರದೇಶಕ್ಕೆ ತರಗೆಲೆಯಿಂದ ಬೆಂಕಿ ಇಟ್ಟರೆ, ಮಳೆ ಬಿದ್ದಾಗ ಅಲ್ಲಿ ಹುಲುಸಾಗಿ ಹುಲ್ಲು ಬೆಳೆಯುತ್ತದಂತೆ!
ಇಂಥಹ ನಂಬಿಕೆಯೊಂದು ಕಾಡಂಚಿನ ನಿವಾಸಿಗಳಲ್ಲಿ ಬಲವಾಗಿ ಬೇರೂರಿದೆ. ಸುಟ್ಟ ತರಗೆಲೆ ಬೆಳೆಯುವ ಹುಲ್ಲಿಗೆ ಗೊಬ್ಬರ. ಅದರಿಂದ ಮುಂಗಾರಿನ ಮೊದಲ ಮಳೆ ಭೂಮಿಗೆ ಬೀಳುತ್ತಿದ್ದಂತೆ ಹುಲ್ಲು ಮೊಳಕೆಯೊಡೆದು, ವಾರದಲ್ಲಿ ಯಥೇಚ್ಛವಾಗಿ ಎದ್ದು ನಿಲ್ಲುತ್ತದೆ. ಬೆಂಕಿ ಹಾಕದ ಪ್ರದೇಶಗಳಲ್ಲಿ ಹುಲ್ಲು ಎದ್ದು ನಿಲ್ಲಲು ತಿಂಗಳುಗಳ ಕಾಲ ಕಾಯಬೇಕು. ಹೀಗೆ ಬೆಂಕಿ ಹಾಕಿದರೆ ದನ-ಕರುಗಳಿಗೆ ಮೇವು ಭರಪೂರ ದೊರೆಯುತ್ತದೆ ಎನ್ನುವುದು ಅವರ ಬಲವಾದ ನಂಬಿಕೆ. ಪರಿಣಾಮ, ಸುಡು ಬೇಸಿಗೆಯಲ್ಲಿ ಕಾಡಿನ ತರಗೆಲೆಗಳನ್ನೆಲ್ಲ ಒಂದೆಡೆ ಕಲೆಹಾಕಿ ಬೆಂಕಿ ಇಡುತ್ತಾರೆ. ಮೊದಲೇ ಬಿಸಿಲಿನ ಉರಿಗೆ ಗರಿಗರಿಯಾದ ತರಗೆಲೆಗಳು, ಕಾಡಿನ ಚಿಕ್ಕಪುಟ್ಟ ಮರಗಳು ಬೆಂಕಿಯ ಪ್ರಖರತೆಗೆ ಕ್ಷಣಾರ್ಧದಲ್ಲಿ ಪಟಪಟನೆ ಉರಿದು ಬಿಡುತ್ತವೆ. ಅಲ್ಲದೆ, ಆ ಬೆಂಕಿಯ ತೀವ್ರತೆ ಅಕ್ಕ ಪಕ್ಕ ಬಿದ್ದಿರುವ ತರಗೆಲೆ, ಒಣ ಮರಗಳಿಗೆಲ್ಲ ವ್ಯಾಪಿಸಿ ಕಾಡ್ಗಿಚ್ಚಾಗಿ ಪರಿವರ್ತಿತವಾಗುತ್ತದೆ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರ, ದಾಂಡೇಲಿ ಭಾಗದ ಹುಣಶೆಟ್ಟಿಕೊಪ್ಪ, ಯಲ್ಲಾಪುರ, ಕಿರುವತ್ತಿ, ಕಾತೂರ, ಮುಂಡಗೋಡ, ಮಂಚಿಕೇರಿ, ಇಡಗುಂದಿ, ಅರಬೈಲ, ರಾಮಗುಳಿ, ಕತಗಾಲ, ದೇವಿಮನೆ ಹೀಗೆ ಅನೇಕ ಅರಣ್ಯ ಪ್ರದೇಶಗಳಲ್ಲಿ ಇಂಥಹ ಘಟನೆ ಪ್ರತಿ ಬೇಸಿಗೆಯಲ್ಲಿ ಪುನರಾವರ್ತಿತವಾಗುತ್ತಲೇ ಇರುತ್ತದೆ. ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಎಷ್ಟೇ ಹರಸಾಹಸ ಪಟ್ಟರೂ ಅವರಿಂದ ಸಾಧ್ಯವಾಗದು. ನಿರೀಕ್ಷೆ ಮೀರಿ ಅನಾಹುತ ಘಟಿಸಿರುತ್ತದೆ. ಲಕ್ಷಾಂತರ, ಕೋಟ್ಯಾಂತರ ರು. ಮೌಲ್ಯದ ಅರಣ್ಯ ಸಂಪತ್ತು ಬೆಂಕಿಗಾಹುತಿ ಆಗಿರುತ್ತದೆ. ಅಲ್ಲದೆ, ಹತ್ತಾರು ವನ್ಯಜೀವಿಗಳು, ಅಪರೂಪದ ಜೀವ ಸಂಕುಲಗಳು, ಗಿಡಮೂಲಿಕೆ ಸಸ್ಯಗಳು ಸುಟ್ಟು ಕರಕಲಾಗಿರುತ್ತವೆ.
ಹೊಂದಾಣಿಕೆ ಎಂದರೆ ಬೆಂಕಿ ಇಡುವುದಲ್ಲ!ಕಾಡಂಚಿನಲ್ಲಿ ವಾಸಿಸುವ ಬಹುತೇಕ ಕುಟುಂಬಗಳಿಗೆ ಕಾಡೇ ಜೀವನಾಧಾರ. ಅರಣ್ಯ ಸಿಬ್ಬಂದಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅನಿವಾರ್ಯವಾಗಿ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಯಾಕೆಂದರೆ, ಅನಾದಿ ಕಾಲದಿಂದಲೂ ಅಲ್ಲಿನ ನಿವಾಸಿಗಳು ಕಾಡನ್ನು ಆಶ್ರಯಿಸಿ ಬದುಕು ಕಟ್ಟಿಕೊಂಡು ಬಂದವರು. ಅರಣ್ಯ ಸಂರಕ್ಷಣೆ, ಕಾನೂನು ಪಾಲನೆ ಎಂದರೆ ಸಾವಿರಾರು ಕುಟುಂಬ ಅನ್ನಾಹಾರ ಇಲ್ಲದೆ ಬೀದಿಗೆ ಬೀಳಬೇಕಾಗುತ್ತದೆ. ಹಾಗಂತ, ಕಾಡಿಗೆ ಬೆಂಕಿ ಇಟ್ಟು ಬದುಕು ಕಟ್ಟಿಕೊಳ್ಳಬೇಕೆನ್ನುವ ಹೊಂದಾಣಿಕೆ ಅರಣ್ಯ ಸಿಬ್ಬಂದಿಯದಲ್ಲ. ಇರುವ ಅರಣ್ಯ ಸಂಪತ್ತನ್ನು ಹಿತಮಿತವಾಗಿ ಬಳಸಿ, ನೀವೂ ಬದುಕಿ, ಅವುಗಳನ್ನೂ ಸಂರಕ್ಷಿಸಿ ಎಂಬುದು. ಆದರೆ, ಕಾಡನ್ನು ರಕ್ಷಿಸುವ ಬದಲು ಅವೈಜ್ಞಾನಿಕ ನಂಬಿಕೆಯಿಂದ ಅವರು ಕಾಡಿಗೆ ಬೆಂಕಿ ಇಡುತ್ತಾರೆ ಎನ್ನುವುದು ವಿಪರ್ಯಾಸ.
ಇವರೂ ಬೆಂಕಿ ಇಡುತ್ತಾರೆ...
ರಸ್ತೆ ಅಂಚಿನಲ್ಲಿ ಬಿದ್ದಿರುವ ತರಗೆಲೆಗಳನ್ನು ಅರಣ್ಯ ಸಿಬ್ಬಂದಿ ಸಾಲಾಗಿ ಒಟ್ಟುಗೂಡಿಸಿ ಅವುಗಳಿಗೆ ಬೆಂಕಿ ಇಡುತ್ತಾರೆ. ಯಾರಾದರೂ ಸಿಗರೇಟ್, ಬೀಡಿ ಸೇದು ಅಲ್ಲಿಯೇ ಬೀಸಾಡಿದರೆ, ಒಣಗಿದ ತರಗೆಲೆಗೆ ಹತ್ತಿಕೊಂಡ ಸಣ್ಣ ಕಿಡಿ, ಕಾಡೆಲ್ಲ ವ್ಯಾಪಿಸುವ ಸಾಧ್ಯತೆಯಿರುತ್ತದೆ. ಮುಂಜಾಗ್ರತ ಕ್ರಮವಾಗಿ ಅರಣ್ಯ ಸಿಬ್ಬಂದಿ ಬೇಸಿಗೆ ದಿನಗಳು ಹತ್ತಿರ ಬಂದಂತೆ, ಕಾಡಿನ ಮೂಲಕ ಹಾದುಹೋಗುವ ರಸ್ತೆಯ ಅಕ್ಕಪಕ್ಕ ಬಿದ್ದಿರುವ ತರಗೆಲೆಗಳಿಗೆ ಬೆಂಕಿ ಇಡುತ್ತಾರೆ.
ಬೆಂಕಿ ಇಡುವವರೇ ಹೆಚ್ಚು!
ಎರಡು ಸಾವಿರದಿಂದ ಐದು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒಂದು ಬೀಟ್(ಗಸ್ತು) ಎಂದು ಗುರುತಿಸಿ ಒಬ್ಬ ಗಾಡರ್್ನನ್ನು ನೇಮಕ ಮಾಡಲಾಗುತ್ತದೆ. ಇಂಥಹ ಮೂರು-ನಾಲ್ಕು ಬೀಟ್ಗೆ ಒಬ್ಬ ಫಾರೆಸ್ಟರ್ ಹಾಗೂ ಒಬ್ಬ ಬೆಂಕಿ ವೀಕ್ಷಕನನ್ನು ನಿಯೋಜಿಸಲಾಗುತ್ತದೆ. ಈ ಮೊದಲು ದಟ್ಟ ಕಾಡುಗಳು ಇರುತ್ತಿದ್ದರಿಂದ ಬೇಸಿಗೆಯಲ್ಲಿ ಮರಗಳ ತಿಕ್ಕಾಟದಿಂದ ಕಾಡಿಗೆ ಬೆಂಕಿ ಬೀಳುತ್ತಿತ್ತು. ಆದರೆ, ಇತ್ತೀಚೆಗೆ ಕಾಡುಗಳು ಕ್ಷೀಣವಾಗುತ್ತಿರುವುದರಿಂದ ಆಕಸ್ಮಿಕವಾಗಿ ಬೆಂಕಿ ಬೀಳುವುದು ಕಡಿಮೆಯಾಗಿದೆ. ಆದರೆ, ಕಾಡಂಚಿನ ಜನರು ಉದ್ದೇಶಪೂರ್ವಕವಾಗಿ ಹಾಗೂ ಮೂಢನಂಬಿಕೆಗೆ ಜೋತು ಬಿದ್ದು ಬೆಂಕಿ ಇಡುತ್ತಿದ್ದಾರೆ. ಐದಾರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲ್ಲಿ, ಯಾವಾಗ ಬೆಂಕಿ ಇಡುತ್ತಾರೆ ಎನ್ನುವುದು ಗಾರ್ಡ್ ಗಳಿಗಾಗಲಿ, ಬೆಂಕಿ ವೀಕ್ಷಕ ಸಿಬ್ಬಂದಿಗಾಗಲಿ ತಿಳಿಯದು. ದಟ್ಟ ಹೊಗೆ ಮೇಲೆದ್ದಾಗಲೇ ನಿರ್ದಿಷ್ಟ ಪ್ರದೇಶದ ಗುರುತು ಸಿಗುತ್ತದೆ. ಅಷ್ಟರಲ್ಲಾಗಲೇ ಕಾಡಿನ ಬಹುತೇಕ ಭಾಗ ಸುಟ್ಟು ಹೋಗಿರುತ್ತದೆ. ವ್ಯಾಪಿಸುವ ಬೆಂಕಿ ನಂದಿಸಬೇಕೆಂದರೆ ಯಾವುದೇ ಆಧುನಿಕ ಉಪಕರಣಗಳಿಲ್ಲ. ಮರಗಳ ಟೊಂಗೆಯನ್ನು ಮುರಿದು ಬೆಂಕಿಗೆ ಬಡಿಯಬೇಕು. ಅದು ಪ್ರಾಣಾಪಾಯದ ಕಾಯರ್ತವೇ.
ಕೆಂದಳಿಲಿನ ಗೂಡಿಗೆ ಬೆಂಕಿ
ಉತ್ತರ ಕನ್ನಡ ಅರಣ್ಯದಲ್ಲಿ ಕಾಣ ಸಿಗುವ ಬಹು ಅಪರೂಪದ ಜೀವ ಸಂಕುಲಗಳಲ್ಲಿ ಕೆಂದಳಿಲು(ಕೆಂಪು ಅಳಿಲು) ಒಂದು. ಅವು ಹೆಚ್ಚಾಗಿ ಬಾಂಬು(ಬಿದುರು)ಗಳ ಒಳಗೆ ಗೂಡು ಕಟ್ಟಿ ಬದುಕುತ್ತವೆ. ಬಿರು ಬೇಸಿಗೆಯ ತಾಪಕ್ಕೆ ಬಾಂಬು ತಂಪನೆಯ ವಾತಾವರಣ ನೀಡುತ್ತದೆ. ಆದರೆ, ಬೆಂಕಿ ಇಟ್ಟಾಗ ಮೊದಲು ಆಹುತಿಯಾಗುವುದು ಈ ಬಾಂಬು ಗಿಡಗಳೇ. ಯಾಕೆಂದರೆ, ಇವುಗಳ ಬುಡಕ್ಕೆ ಬೆಂಕಿ ತಗುಲಿದಾಗ ಒಂದೇ ಸಮನೆ ಅದರ ಗಾವು ಮೇಲಿನವರೆಗೂ ಹಬ್ಬಿ ಬಡುತ್ತದೆ. ಅದರ ಒಳಗಡೆ ಗೂಡು ಕಟ್ಟಿಕೊಂಡಿರುವ ಕೆಂದಳಿಲು ಹಾಗೂ ಅದರ ಸಂಸಾರ ಅಲ್ಲಿಯೇ ಕರಕಲಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ