ಶುಕ್ರವಾರ, ಮೇ 19, 2017

ಕಡಲ ಕನವರಿಕೆ

ಓ ಕಡಲೇ...
ಯಾಕೋ... ನಿನ್ನ ಎದೆ ಹರಿವಿನ ಮೇಲೆ ಅಂಗಾತ ಬಿದ್ದು ತೇಲಾಡಬೇಕೆನಿಸಿದೆ. ನಿನ್ನ ಕಡು ನೀಲ ಬಣ್ಣದ ಎದೆಯಾಳದಲ್ಲಿ ಧುಮುಕಿ ಉಸಿರು ಬಿಗಿಡಿಯಬೇಕೆನಿಸಿದೆ. ನಿನ್ನ ನೆತ್ತಿಯ ಮೇಲೆ ಓಡಾಡುವ ಕಾರ್ಮೋಡದೊಳಗೆ ಅವಿತುಕೊಳ್ಳಬೇಕೆನಿಸಿದೆ....

ಹೌದು.... ಒಂದು ದಿನ ಪೂರ್ತಿ ನಿನ್ನ ಜೊತೆ ಕಳೆದು ಭಾರವಾದ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕಿದೆ. ನಾಚುತ್ತ ಬಂದು ಕಾಲಿಗೆ ಕಚಗುಳಿಯಿಡುವ ನಿನ್ನ ಹಾಲ್ನೊರೆಯ ಗುಳ್ಳೆಯನ್ನು ಬೆರಳಲ್ಲಿ ಎತ್ತಿ ಆಡಬೇಕು. ಕೆನ್ನೆ ಕೆಂಪೇರಿಸಿಕೊಂಡು ಪ್ರಸ್ತದ ಕೋಣೆಗೆ ಹೋಗುವ ಮಧುವಣಗಿತ್ತಿಯಂತೆ ಕಾಣುವ ಭಾನುವನ್ನು ಕಣ್ತುಂಬಿಸಿಕೊಳ್ಳಬೇಕು. ನಿನ್ನ ಉಬ್ಬರದ ಆರ್ಭಟದಲ್ಲಿ ನೀರ್ಗಲ್ಲು ಮುರಿವ ಸದ್ದನ್ನು ಕೇಳಿ ಎದೆ ಬಡಿತ ಹೆಚ್ಚಿಸಿಕೊಳ್ಳಬೇಕು. ಹೀಗೆ, ಏನೇನೋ ಹುಚ್ಚು ಆಸೆ... ಕಲ್ಪನೆಯಂತೂ ಅಲ್ಲ. ಯಾಕೆಂದರೆ, ನಾ ನಿನ್ನ ಮಡಿಲಲ್ಲೇ ಬೆಳೆದ ಹುಚ್ಚ ಹುಡುಗ.
ಇರಲಿ, ಹತ್ತಿರದವರಲ್ಲಿ ಹೇಳಿಕೊಳ್ಳಲಾಗದ ಭಾವವನ್ನು ನಿನ್ನ ಮುಂದಾದರೂ ಹೇಳಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ, ಅಬ್ಬರಿಸುವ ನೀನೇ ಬಿಸಿಲ ಬೇಗೆಗೆ ತಣ್ಣಗಾಗಿ ಹೋಗಿದ್ದೀಯ. ನಾನೇ ಆದಿ, ನಾನೇ ಅಂತ್ಯ ಎಂದೆಲ್ಲ ಬೀಗುತ್ತಿದ್ದ ನೀನು, ಎಷ್ಟೊಂದು ಕೃಶವಾಗಿದ್ದೀಯ?  ನಿನ್ನ ತಟಕ್ಕೆ ಬಂದು ಒಂದು ಹೆಜ್ಜೆ ಊರಿದರೆ ಸಾಕಿತ್ತು, ಓಡೋಡಿ ಬಂದು ಪಾದಸ್ಪರ್ಶಿಸಿ ಪುನೀತರನ್ನಾಗಿಸುತ್ತಿದ್ದೆ. ಆದರೆ, ಈಗ... ಗಾವುದ ದೂರ ಸುಡುವ ಮರಳ ರಾಶಿ ಮೇಲೆ ಹೆಜ್ಜೆ ಹಾಕಬೇಕು. ಎರಡ್ಮೂರು ಮೈಲಿ ದೂರವಿದ್ದರೂ ನಿನ್ನ ಅಬ್ಬರದ ಸದ್ದು ರಾತ್ರಿ ನಿದ್ದೆಗೆ ಜೋಗುಳ ಹಾಡಿದಂತಿರುತ್ತಿತ್ತು. ನಿನ್ನ ಸನಿಹ ಬಂದರೂ ಈಗ ಆ ಸದ್ದು ಕೇಳಲೊಲ್ಲದು. ಬಿರು ಬೇಸಿಗೆ ನಿನ್ನನ್ನು ಸಹ ಇಷ್ಟು ಹೈರಾಣಾಗಿಸಿದೆಯೇ?

ಬಿಡು, ಇನ್ನೊಂದು ವಾರವಷ್ಟೇ! ಕೊತ ಕೊತನೆ ಕುದಿಯುತ್ತಿದ್ದ ನಿನ್ನ ಮೈ-ಮನವೆಲ್ಲ ತಣ್ಣಗಾಗಲಿದೆ. ಮುಗ್ಧನಂತೆ ಶಾಂತವಾಗಿದ್ದ ನೀನು ಹುಚ್ಚೆದ್ದು ಅಬ್ಬರಿಸುತ್ತೀಯಾ. ಎಷ್ಟು ಹುಚ್ಚನೆಂದರೆ, ಆಗತಾನೆ ಅಂಬೆಗಾಲಿಡುವ ಮಗುವನ್ನು ಮಣ್ಣಲ್ಲಿ ಬಿಟ್ಟರೆ, ಏನೆಲ್ಲ ಮಾಡುತ್ತದೆಯೋ.. ಹಾಗೆ! ಅಂದರೆ, ಈಗಿರುವ ಶುಭ್ರ ನೀಲಿಯ ಬದಲಾಗಿ, ಹೊಲಸನ್ನು ಮೈಗೆ ಮೆತ್ತಿಕೊಂಡ ಕೊಳಕನಂತೆ! ನಿನ್ನ ಅಲೆಗಳ ಆರ್ಭಟಕ್ಕೆ ನಿನ್ನದೇ ತಟದಲ್ಲಿದ್ದ ಮರಗಳೆಷ್ಟು ಧರೆಗುರಳಬೇಕೋ? ನಿನ್ನಂಗಳದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಂಡಿದ್ದ ಗುಡಿಸಲುಗಳೆಷ್ಟು ನುಚ್ಚು-ನೂರಾಗಬೇಕೋ? ಇಂತಹದ್ದೇ ಹುಚ್ಚಾಟಕ್ಕೆ ನೀನು ಎದುರು ನೋಡುತ್ತಿದ್ದೀಯಾ ಎನ್ನುವುದು ನನಗೆ ಚೆನ್ನಾಗಿ ಗೊತ್ತು!

ದೂರದ ಅಂಡಮಾನ-ನಿಕೋಬಾರ ಸಮುದ್ರ ತೀರಕ್ಕೆ ಮುಂಗಾರು ಕಾಲಿಟ್ಟು, ಅದಾಗಲೇ ವಾರ ಕಳೆದಿದೆ. ಇನ್ನೊಂದು ವಾರದಲ್ಲಿ ಬಂಗಾಳಕೊಲ್ಲಿ ಮೂಲಕ ಕೇರಳ ಪ್ರವೇಶಿಸಿ ನಿನ್ನನ್ನು(ಅರಬ್ಬೀ) ಬಿಗಿದಪ್ಪಿಕೊಳ್ಳಲಿದೆ. ಆ ಸಂದರ್ಭದಲ್ಲಿ ನೀ ವರ್ತಿಸುವ ರೀತಿ ಹಾಗೂ ಆ ದೃಶ್ಯ ನಿಜಕ್ಕೂ ಭಯಾನಕ. ನೆನೆಸಿಕೊಂಡರೆ ಎದೆ ಸಣ್ಣಗೆ ಕಂಪಿಸುತ್ತದೆ. ನೆತ್ತಿಯ ಮೇಲೆ ಕಾಪಿಟ್ಟ ಮೋಡಗಳ ಸಾಲು ಸಾಲು, ಶರವೇಗದಿಂದ ಎಲ್ಲಿಂದಲೂ ತೂರಿ ಬರುವ ಬಿರುಗಾಳಿ, ನಿನ್ನ ಕಡಲಿನ ಮೊರೆತದ ಅಬ್ಬರ, ಬಾನಂಗಳದಿಂದ ಕಬ್ಬಿಣ ಚೂರನ್ನು ಎಸೆದಂತೆ ಭಾಸವಾಗುವ ಮಳೆ ಹನಿಗಳ ಥಕಧಿಮಿತ, ಸುತ್ತೆಲ್ಲ ಆವರಿಸುವ ಕತ್ತಲು, ನೋಡು ನೋಡುತ್ತಲೇ ಮಂಜಿಗೆ ಮುಸುಕಾಗುವ ಕಾಗಾಲ ಗುಡ್ಡ, ಗಾಳಿ ರಭಸಕೆ ಎಲ್ಲಿಯೋ ತೂರಿ ಹೋಗುವ ಚಿತೆಯೇರಿದವರ ಭಸ್ಮ.......

ಈ ಭೀಭತ್ಸ ಸನ್ನಿವೇಶದಲ್ಲಿ ನಾನು ಏಕಾಂಗಿಯಾಗಿ, ಧರಿಸಿದ ಮೇಲಂಗಿಯ ಗುಂಡಿ ತೆಗೆದು, ಎರಡು ಕೈ ಅಗಲಿಸಿ ‘ಈ ಕಡಲೆಲ್ಲ ನನ್ನದು’ ಎನ್ನಬೇಕು! ಮನದಣಿಯೇ ‘ಕಣ್ಣಂಚು ಒದ್ದೆ ’ ಮಾಡಿಕೊಳ್ಳಬೇಕು.

ಇಂತಿ ನಿನ್ನ.. 
ಎದೆಯಾಳೋ ಹುಡುಗ


ಬುಧವಾರ, ಮೇ 3, 2017

ನನ್ನ ಮನೆಯಂಗಳದ ಸೌಂದರ್ಯ ರಾಶಿ
ಕಣ್ಣ ಅಳತೆಗೆ ನಿಲುಕದಷ್ಟು ವಿಶಾಲವಾದ ಗದ್ದೆ ಬಯಲು. ಈ ಅನಂತವನ್ನು ಸೀಳಿವೆಯೇನೋ ಎಂದೆನಿಸುವ ಹೆಬ್ಬಾವಿನಂತೆ ಸುಮ್ಮನೆ ಮಲಗಿದ ರಸ್ತೆ. ಕತ್ತೆೆತ್ತಿದರೆ ಹತ್ತಿಯ ರಾಶಿ ಒಂದೆಡೆ ಕೂಡಿ ಹಾಕಿದ ಬಿಳಿ ಮೋಡಗಳ ಸರತಿಯ ಓಟ. ಬಯಲಿಗೆ ಎದುರಾಗಿ ನಾಲ್ಕು ಹೆಜ್ಜೆ ಹಾಕಿದರೆ ಅಘನಾಶಿನಿಯ ಝುಳು ಝುಳು ನಾದ. ಸುತ್ತೆಲ್ಲ ಕಣ್ಣಾಡಿಸಿದರೆ ಮಂಜು ಮುಸುಕಿದ ಸಹ್ಯಾದ್ರಿ ಪರ್ವತಗಳ ಸಾಲು...
ಇದು ನಮ್ಮನೆಯಂಗಳದ ಸೌಂದರ್ಯ ರಾಶಿ. ತೆಂಗು, ಅಡಿಕೆ, ಮಾವು, ಹಲಸು, ಪೇರಲ, ಚಿಕ್ಕು ಮರಗಳ ಜೊತೆ ಜೊತೆಗೆ ಅಬ್ಬಲ್ಲಿ, ಮಲ್ಲಿಗೆ, ಮುತ್ತು ಮಲ್ಲಿಗೆ, ಕಾಬಾಳಿ, ಸಂಪಿಗೆ, ಮಧ್ಯಾಹ್ನ ಮಲ್ಲಿಗೆ, ಜಿನ್ನಿ, ತುಳಸಿಯಂತಹ ಚಿಕ್ಕ ಪುಟ್ಟ ಗಿಡಗಳ ಹಸಿರ ತೋರಣದ ನಡುವೆ ಪುಟ್ಟದೊಂದು ಮನೆ. ಮನೆ ಹೊಸ್ತಿಲು ತುಳಿದು ಐದತ್ತು ಹೆಜ್ಜೆ ಇಟ್ಟರೆ ಮೈ-ಮನಗಳ ಬೇಗುದಿಗೆ ಮುಲಾಮು ಹಚ್ಚುವ ಗದ್ದೆ ಬಯಲು. ದೂರದಿಂದ ತೂರಿ ಬರುವ ಬಿಸಿ ಗಾಳಿಯನ್ನು ಸಹ ಈ ಗದ್ದೆ, ತಂಪು ಗಾಳಿಯನ್ನಾಗಿ ಬದಲಾಯಿಸುತ್ತದೆ. ಅಳತೆಗೋಲಾಗಿ ಕಾಲುದಾರಿಯಾಗಿರುವ ಕಂಟದ ಮೇಲಿನ ಪ್ರತಿ ನಡಿಗೆ ಹೊಸ ಹೊಸ ಭಾವಾನುಭವಕ್ಕೆ ನಾಂದಿ. ಅಲ್ಲೇ ಕಂಟದ ಮೇಲೆ ಗಂಭೀರವಾಗಿ ತಲೆ ಎತ್ತಿ ನಿಂತಿದ್ದ ತೆಂಗಿನ ಮರ, ಈಗ ಬಳಲಿ ಬೆಂಡಾಗಿ ಗೂನು ಬೆನ್ನು ಹಾಕಿದೆ.
ಗದ್ದೆಗುಂಟ ಸರತಿ ಸಾಲಾಗಿ ನಿಂತಿರುವ ವಿದ್ಯುತ್ ಕಂಬಗಳು, ಅಘನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲು ಗಾಳ ಹಾಕಿದೆಯೇನೋ ಎನ್ನುವ ಭಾವ ಒಡಮೂಡಿಸುತ್ತದೆ. ವಿದ್ಯುತ್ ತಂತಿಯ ಮೇಲೆ ಕುಳಿತು ಮರಿ ಹಕ್ಕಿಗೆ ಗುಟುಕು ನೀಡುವ ತಾಯಿ ಹಕ್ಕಿಯ ತಾಯ್ತನ, ಜೀಕುತ್ತ ಜೋಕಾಲಿಯಾಡುವ ಹರೆಯದ ಹಕ್ಕಿಗಳ ತುಂಟತನ, ಪಕ್ಕದಲ್ಲಿ ಬೇಲಿ ಮೇಲಿನ ಹಸಿರು ಪದೆಯೊಳಗೆ ಅವಿತು ಟುವ್ವಿ... ಟುವ್ವಿ.. ಎಂದು ಕೂಗುವ ಪಿಳ್ಳಕ್ಕಿಗಳ ಇಂಚರ, ಒಣಗಿದ ತರಗೆಲೆಯ ಅಡಿಯಲ್ಲಿ ಸದ್ದು ಮಾಡುತ್ತ ಹರಿದಾಡುವ ಸರಿಸೃಪಗಳು, ಇವುಗಳ ಹರಿದಾಟವನ್ನು ಬಾನಂಗಳದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತ ಹೊಂಚು ಹಾಕಿ ರೆಕ್ಕೆ ಬಿಚ್ಚಿ ಹಾರಾಡುವ ಹದ್ದುಗಳು, ಗದ್ದೆ ಮಣ್ಣಿನಲ್ಲಿಯೇ ಕಣ್ಣಿಗೆ ಕಾಣದಷ್ಟು ಚಿಕ್ಕ ಗೂಡು ಕಟ್ಟಿಕೊಂಡು ವಾಸಿಸುವ ಗುಬ್ಬಿ ಹುಳಗಳು, ಆ ಗೂಡುಗಳ ಮೇಲೆಯೇ ಆಹಾರ ಹುಡುಕುತ್ತ ಸಾಗುವ ಇರುವೆಯ ಸರತಿ ಸಾಲುಗಳು.... ಒಂದೇ ಎರಡೇ, ಪ್ರಕೃತಿಯ ಎಲ್ಲ ಅನುಭೂತಿಗಳು ಒಂದೆಡೆ ಸೆರೆಯಾದ ಪವಿತ್ರ ಸ್ಥಳ.
ಗದ್ದೆ ಮೇಲಿನ ಕಂಟದ ಮೇಲೆ ಅಘನಾಶಿನಿ ಕಡೆ ಮುಖ ಮಾಡಿ ಹೆಜ್ಜೆ  ಹಾಕಿದರೆ, ತಾತ, ಮುತ್ತಾರ ಕಾಲದ ಮಾರ್ಗ ಸೂಚಕ ಬೃಹತ್ ಅರಳಿ ಮರ ಎದುರಾಗುತ್ತದೆ. ಅಲ್ಲಲ್ಲಿ ಇರುವ ಈ ಅರಳಿ ಮರಗಳು ಅಂದಿನ ಕಾಲುದಾರಿಯ ಪಯಣದಲ್ಲಿ ಹಿರಿಯರಿಗೆ ದಾರಿಯ ಹೆಗ್ಗುರುತಾಗಿತ್ತು. ನಡೆದು ಸುಸ್ತಾದಾಗ ಅರಳಿ ಕಟ್ಟೆಯ ಮೇಲೆಯೇ ವಿಶ್ರಮಿಸಿ, ಬುತ್ತಿ ತಿಂದು ಮುಂದೆ ಪಯಣಿಸುತ್ತಿದ್ದರು. ಈಗ ಈ ಅರಳಿ ಮರ ಕಾಗೆ, ಪಾರಿವಾಳ, ಹದ್ದುಗಳಿಗೆ ನೆಲೆ ನೀಡಿದ ಮಹಾ ವೃಕ್ಷ. ಮುಂಜಾನೆಯ ಸೂರ್ಯೋದಯದ ಮೊದಲ ಕಿರಣ, ಅಘನಾಶಿನಿಯ ಬಳಕುವ ಮೈ ಮೇಲೆ ಬಿದ್ದು ಈ ಅರಳಿಗೆ ನಮಿಸಿ ಮೇಲೇಳುತ್ತದೆ. ಹಾಗೆಯೇ, ಮುಸ್ಸಂಜೆಯ ಸೂರ್ಯಾಸ್ತದ ಕೊನೆಯ ಕಿರಣ ಅರಳಿಯ ನೆತ್ತಿಯ ಮೇಲಿರುವ ಚಿಗುರೆಲೆಗೆ ಸ್ಪರ್ಶಿಸಿ ಮಾಯವಾಗುತ್ತದೆ.
ದೈವೀದತ್ತ ಈ ಹಸಿರು ಹೊನ್ನ ರಾಶಿಯ ಪ್ರಕೃತಿಯ ಮಡಿಲಲ್ಲಿ ಉಸಿರು ಪಡೆದ ನಾನೇ ಧನ್ಯ! ಕ್ಷಮಿಸಿ..... ನಾವೇ ಧನ್ಯ!!

ಮಂಗಳವಾರ, ಮೇ 2, 2017

ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ
ಮುಂಗಾರು ಆರಂಭಕ್ಕೂ ಪೂರ್ವವೇ ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ...! ಎಂದೂ ಬಾರದ ವಿರಹಾಗ್ನಿ ಇಂದು ಮೈ ಮನವನ್ನೆಲ್ಲ ಆವರಿಸಿ ಧಗಧಗನೆ ಬೇಯಿಸುತ್ತಿತ್ತು. ಅದರ ಬೇಗುದಿಗೆ ಬೆಂದು ಹೋಗುತ್ತೇನೋ ಎನ್ನುವ ಭೀಭತ್ಸ ಭಾವ ಕಾಡುತ್ತಲೇ ಇತ್ತು.   ಇನಿಯನ ತೊಳಲಾಟ ನೋಡದ ವರ್ಷೆ, ಮುಸ್ಸಂಜೆ ಹೊತ್ತಲ್ಲಿ ಬಾನಂಗಳದಿಂದ ಓಡೋಡಿ ಬಂದಳು. ಎದೆಯ ಹರವಿನ ಮೇಲೆ ಬಿದ್ದು ಓಲಾಡಿದಳು. ಕಚಕುಳಿ ಇಡುತ್ತ ಮನದಣಿಯೇ ಕುಣಿದಾಡಿದಳು. ಕೊತಕೊತನೆ ಕುದಿಯುತ್ತಿದ್ದ ಇನಿಯನ ವಿರಹಾಗ್ನಿಯನ್ನು ತನ್ನ ತಣ್ಣನೆಯ ಸ್ಪರ್ಷದಿಂದ ಮಾಯವಾಗಿದಳು. ನನ್ನ ವರ್ಷೆಯ ಧ್ಯಾನದಲ್ಲಿಯೇ ಇನ್ನೊಂದೆರಡು ದಿನ ಕಳೆಯಬಹುದು. ತದನಂತರ ಮತ್ತೆ ಆರಂಭ, ವಿರಹ, ವೇದನೆ... ಮುಂಗಾರು ಆರಂಭವಾಗುವವರೆಗೂ!

ಸರ್ವಜನಾಂಗದ ಶಾಂತಿಯ ತೋಟ
(ಹೂಬಳ್ಳಿಯಲ್ಲಿ  ಇದು ನಿಮ್ಮ ಗಮನಕ್ಕೂ ಬಂದಿರಬಹುದು....!)

ಇಲ್ಲಿ ಜಾತಿ-ಧರ್ಮದ ಹಂಗಿಲ್ಲ, ಬಡವ-ಬಲ್ಲಿದ ಎನ್ನುವ ಭೇದವಿಲ್ಲ. ಕಂಠಪೂರ್ತಿ ಕುಡಿದು ನಶೆ ಏರಿದವರೂ ಬರುತ್ತಾರೆ, ಒಂದರ್ಧ ಗಂಟೆ ಧ್ಯಾನಕ್ಕೆ ಮೊರೆ ಹೋಗುವವರೂ ಬರುತ್ತಾರೆ. ಒಂದರ್ಥದಲ್ಲಿ ಎಲ್ಲರನ್ನೂ ಒಂದೆಡೆ ಸೆಳೆದುಕೊಳ್ಳುವ ಆಕರ್ಷಣೀಯ ಸ್ಥಳ!
ಈ ಭಿನ್ನ ಸೆಳೆತದ ಸ್ಥಳ ಇನ್ನೂ ಬೆಳಕಿಗೆ ಬಾರದ ಊರ ಹೊರಗಡೆಯೆಲ್ಲೆಲ್ಲೂ ಇಲ್ಲ. ಹುಬ್ಬಳ್ಳಿ ನಗರದ ಕೇಂದ್ರ ಭಾಗವಾದ ಹುಧಾ ಮಹಾನಗರ ಪಾಲಿಕೆಯ ಬೆನ್ನಿಗೆ ಒರಗಿಕೊಂಡೇ ಇದೆ. ಹೌದು, ಅಂದ ಹಾಗೆ ಈ ಸ್ಥಳದ ಹೆಸರು ಚಿಟಗುಪ್ಪಿ ಪಾರ್ಕ್!
 ಹೆಸರಿಗೆ ಇದು ಉದ್ಯಾನವಾದರೂ ಹೇಳಿಕೊಳ್ಳಲು ಸಹ ಒಂದೇ ಒಂದು ಅಂದದ ಗಿಡ ಇಲ್ಲಿಲ್ಲ. ಎಲ್ಲಿಯಾದರೂ ಹಸಿರು ಹುಲ್ಲಿನ ಹಾಸಿಗೆ ಇದೆಯೇ ಎಂದು ಕಣ್ಣಾಡಿಸಿದರೆ, ಅದು ಕೂಡಾ ಗೋಚರಿಸದು. ಉದ್ಯಾನದ ಮಧ್ಯ ಭಾಗದಲ್ಲಿ ಇತಿಹಾಸದ ಕಥೆ ಹೇಳುತ್ತ ಗಾಂಭೀರ್ಯದಿಂದ ಬೃಹದಾಕಾರವಾಗಿ ಅರಳಿ ಮರ ಬೆಳೆದು ನಿಂತಿದ್ದರೆ, ಸುತ್ತೆಲ್ಲ ಅಲ್ಲಲ್ಲಿ ಎಂದು ಒಂದಿಷ್ಟು ಮರಗಳು ತಲೆದೂಗುತ್ತ ನಿಂತಿವೆ. ಈ ಮರಗಳು ಮನುಷ್ಯ ಎಂಬ ಪ್ರಾಣಿಗೆ ನೆರಳನ್ನು ನೀಡಿದರೆ, ಚಿಕ್ಕಪುಟ್ಟ ಪಕ್ಷಿಗಳಿಗೆ ತನ್ನ ಮಡಿಲಲ್ಲಿ ಬೆಚ್ಚನೆಯ ಜಾಗವನ್ನೇ ನೀಡಿ ಸಾರ್ಥಕತೆ ಪಡೆದುಕೊಡಿದೆ.
ವಾಣಿಜ್ಯ ನಗರಿಯ ಕೇಂದ್ರ ಭಾಗದಲ್ಲಿ ಇಂದಿರಾ ಗಾಜಿನ ಮನೆ ಉದ್ಯಾನ ಹಾಗೂ ಈ ಚಿಟಗುಪ್ಪಿ ಉದ್ಯಾನ ಹೊರತು ಪಡಿಸಿದರೆ ಮತ್ಯಾವ ಉದ್ಯಾನವೂ ಇಲ್ಲ. ಈ ಚಿಟಗುಪ್ಪಿ ಉದ್ಯಾನಕ್ಕೆ ಹೊಂದಿಕೊಂಡು ಮಹಾನಗರ ಪಾಲಿಕೆ, ಆಸ್ಪತ್ರೆ, ಸಂಸದರ ಕಚೇರಿ ಹಾಗೂ ಕಲಾ ಮಹಾವಿದ್ಯಾಲಯ ಇರುವುದರಿಂದ ಸಹಜವಾಗಿಯೇ ದಿನಪೂರ್ತಿ ಉದ್ಯಾನ ಜನಜಂಗುಳಿಯಿಂದ ತುಂಬಿರುತ್ತದೆ. ಒಂದಿಲ್ಲೊಂದು ಕಾರ್ಯದ ನಿಮಿತ್ತ ಪಾಲಿಕೆಗೆ ಬರುವ ನಾಗರಿಕರು, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು, ಕಲಾ ಮಹಾವಿದ್ಯಾಲಯಕ್ಕೆ ಬರುವ ನೂರಾರು ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆ ಕಳೆಯಲು ಇಲ್ಲಿಯ ಮರದ ನೆರಳನ್ನೇ ಆಶ್ರಯಿಸುತ್ತಾರೆ. ಇವರ ಹೊರತಾಗಿಯೂ ಈ ಪುಟ್ಟ ಉದ್ಯಾನ ಎಷ್ಟೋ ಜೀವಗಳಿಗೆ ಆಸರೆಯಾಗಿದೆ ಎನ್ನುವುದು ಸೋಜಿಗವೇ!
ಜಾತಿ, ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರೂ ಚಿಟಗುಪ್ಪಿ ಉದ್ಯಾನಕ್ಕೆ ಬಂದು ಬಿಡುವಿನ ಕಾಲ ಕಳೆಯುತ್ತಾರೆ. ಅಪರಿಚಿತರಾಗಿ ಬಂದು ಪರಿಚಿತರಾಗಿ ಹೆಜ್ಜೆ ಕೀಳುತ್ತಾಾರೆ. ಧರ್ಮದ ಎಲ್ಲೆ ಮೀರಿದ ಸಣ್ಣದಾದ ಎಳೆಯೊಂದು ಉದ್ಯಾನ ಅನ್ಯ ಧರ್ಮಿಯರನ್ನು ಒಂದುಗೂಡಿಸುತ್ತದೆ. ಉದ್ಯಾನದ ಪ್ರವೇಶ ದ್ವಾರದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿರುವುದರಿಂದ ಕೆಲವರು ದಾಹ ನೀಗಿಸಿಕೊಳ್ಳಲು ಬಾಟಲು ಹಿಡಿದು ಬಂದರೆ, ಬೀದಿ ವ್ಯಾಪಾರಸ್ಥರು ತಮ್ಮ ಉದ್ಯಮಕ್ಕೆಂದು ಕ್ಯಾನ್ ಹಿಡಿದು ಬರುತ್ತಾರೆ. ಹಾಗೆಯೇ, ದೃಷ್ಟಿಯನ್ನು ಪಕ್ಕಕ್ಕೆ ಹೊರಳಿಸಿದರೆ ಪುಟ್ಟ ಮಕ್ಕಳು ಜೋಕಾಲಿಯಲ್ಲಿ ಕುಳಿತು ತೂಗುಯ್ಯಾಲೆಯಲ್ಲಿ ತೂಗುವುದು ಕಂಡು ಬರುತ್ತದೆ. ಅನತಿ ದೂರದಲ್ಲಿ ಮಕ್ಕಳ ಈ ಆಟವನ್ನು ನೋಡುತ್ತ ಕುಳಿತಿರುವ ಹೆತ್ತಾಕೆಯ ಕಣ್ಣಲ್ಲಿ ಸಂಭ್ರಮದ ಬುಗ್ಗೆ ಎದ್ದೇಳುತ್ತದೆ.
ಉದ್ಯಾನದ ಮೂಲೆಯಲ್ಲಿರುವ ಮರದ ನೆರಳಲ್ಲಿ, ಇಲ್ಲವೇ ಅಲ್ಲಿಯೇ ಇರುವ ಆಸನದಲ್ಲಿ ಬದುಕಿನ ಯಾವ ಜಂಜಾಟವೂ ಇಲ್ಲದೆ ನಿಶ್ಚಿಂತೆಯಿಂದ ಮಲಗಿರುವವರು ಇಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತಾರೆ. ಅವರಲ್ಲಿ ಕೆಲವರು ಹಿರಿಯರಾದರೆ ಇನ್ನು ಕೆಲವರು ದೂರದ ಊರಿನಿಂದ ನಗರಿಗೆ ವಲಸೆ ಬಂದವರೋ ಇನ್ಯಾರೋ ಆಗಿರುತ್ತಾರೆ. ಮಾನಸಿಕ ಸ್ಥೀಮಿತ ಕಳೆದುಕೊಂಡವರು ಸಹ ಉದ್ಯಾನದಲ್ಲಿ ಆಶ್ರಯ ಪಡೆದು, ತಮ್ಮಲ್ಲಿರುವ ಒಬ್ಬಂಟಿತನದ ಬೇಗುದಿಯನ್ನು ಬಾನಿಗೆ ಬಾಯಾನಿಸಿರುವ ಮರದ ಬುಡದ ಕೆಳಗೆ ಕೂತು ತೋಡಿಕೊಳ್ಳುತ್ತಾರೆ. ಅಲ್ಲಿಯೇ ಪಕ್ಕದ ಕಟ್ಟೆಯ ಮೇಲೆ ಸಾರ್ವಜನಿಕರು ಕೂತು, ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತ ಪಂಚಾಯಿತಿ ಕಟ್ಟೆಯನ್ನು ಸೃಷ್ಟಿಸುತ್ತಾರೆ. ಇದ್ಯಾವುದರ ಅರಿವಿಲ್ಲದ ಯುವಕನೋರ್ವ ಅಂದಿನ ಪತ್ರಿಕೆಯೊಂದು ಕೈಯ್ಯಲ್ಲಿ ಹಿಡಿದು, ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಮಸ್ತಕಕ್ಕೆ ತುರುಕುತ್ತಿರುತ್ತಾನೆ.

ಇವೆಲ್ಲಕ್ಕೂ ಮಿಗಿಲಾಗಿ ಚಿಟಗುಪ್ಪಿ ಉದ್ಯಾನ ವಧು-ವರರ ಅನ್ವೇಷಣಾ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಸಂಬಂಧಿಗಳು ವಧು-ವರರನ್ನು ಕರೆತಂದು ಪರಸ್ಪರ ಒಪ್ಪಿಗೆಯನ್ನು ಪಡೆದು ಸಂಬಂಧಕ್ಕೆ ನಾಂದಿ ಹಾಡುತ್ತಾರೆ. ಕೆಲವು ಪಡ್ಡೆ ಹುಡುಗರು ಕೇಕೆ ಹಾಕುತ್ತ, ಪೋಲಿ ಮಾತುಗಳ ಡೈಲಾಗ್ ಹೇಳುತ್ತ ಹರಟೆ ಹೊಡೆದರೆ, ಕೆಲವು ಕುಡುಕರು ಉದ್ಯಾನದ ಉದ್ದ-ಅಗಲ ಎಷ್ಟಿದೆ ಎಂದು ಓಲಾಡುತ್ತ ಸರ್ವೇ ನಡೆಸುತ್ತಾರೆ. ಹೆಂಗಳೆಯರೇನಾದರೂ ಎದುರಾದರೆ, ಅಮಲಿನ ಕಣ್ಣಲ್ಲೇ ಅವರನ್ನು ದುರುಗುಟ್ಟಿ ನೋಡುತ್ತಾರೆ. ಯ್ಯಾಕ್... ಥೂ... ಎಂದು ಉಗಿಸಿಕೊಳ್ಳುತ್ತಾರೆ. ಸುತ್ತೆಲ್ಲ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಮಯ ಕಳೆಯುತ್ತಿದ್ದರೆ, ಕಡ್ಲೆ-ಪುರಿ ಮಾರುವ ಅಂಗವಿಲಕ ಸ್ವಾಭಿಮಾನಿಯೊಬ್ಬ ಅವರಿಗೆ ಎದುರಾಗಿ, 'ಸರ್.... ಪ್ಲೀಸ್' ಎನ್ನುತ್ತಾನೆ. ಅಷ್ಟಾದ ಕೆಲವೇ ಕ್ಷಣದಲ್ಲಿ ಟೀ ಮಾರುವ ಹುಡುಗ ಬಂದು, 'ಟೀ...' ಎಂದು ಮುಗುಳ್ನಗುತ್ತಾನೆ. ಇವೆಲ್ಲದ ನಡುವೆ ಕೊರವಂಜಿಯರು ಸದ್ದಿಲ್ಲದೆ ಅಲ್ಲಿದ್ದವರ ಹಣೆ ಬರಹ ಓದಿ ಹೇಳಿ, ತಮ್ಮ ಬದುಕಿನ ಚೀಲ ತುಂಬಿಸಿಕೊಳ್ಳುತ್ತಾರೆ.

ವೈವಿಧ್ಯಮಯ ಬದುಕು, ಭಿನ್ನ-ವಿಭಿನ್ನ ಮನಸ್ಸುಗಳು, ನಾನಾ ತೆರನಾದ ಬದುಕುಗಳು, ನಗುವಿನ ಜತೆಗೆ ಅಳು, ಕಷ್ಟ-ಸುಖದ ಪಾಠ... ಹೀಗೆ ಜೀವನದ ಸೂಕ್ಷ್ಮಾತಿ ಸೂಕ್ಷ್ಮತೆಯ ಎಷ್ಟೋ ಸಂಗತಿಗಳನ್ನು ಚಿಟಗುಪ್ಪಿ ಉದ್ಯಾನ ತಿಳಿಸಿಕೊಡುತ್ತದೆ. ಇಷ್ಟೊಂದು ಜೀವಿಗಳಿಗೆ ಅವರಿಷ್ಟದಂತೆ ನೆಮ್ಮದಿಯ ಆಸರೆ ನೀಡುತ್ತಿರುವ ಚಿಟಗುಪ್ಪಿ ಉದ್ಯಾನ ಆದಷ್ಟು ಬೇಗ ಹಸಿರಿನಿಂದ ನಳನಳಿಸುವಂತಾಗಲಿ.
(ಮೇ. ೨, ೨೦೧೭... ವಿಶ್ವವಾಣಿಯಲ್ಲಿ ಪ್ರಕಟಿತ ಬರಹ)