ಸರ್ವಜನಾಂಗದ ಶಾಂತಿಯ ತೋಟ
(ಹೂಬಳ್ಳಿಯಲ್ಲಿ ಇದು ನಿಮ್ಮ ಗಮನಕ್ಕೂ ಬಂದಿರಬಹುದು....!)
ಇಲ್ಲಿ ಜಾತಿ-ಧರ್ಮದ ಹಂಗಿಲ್ಲ, ಬಡವ-ಬಲ್ಲಿದ ಎನ್ನುವ ಭೇದವಿಲ್ಲ. ಕಂಠಪೂರ್ತಿ ಕುಡಿದು ನಶೆ ಏರಿದವರೂ ಬರುತ್ತಾರೆ, ಒಂದರ್ಧ ಗಂಟೆ ಧ್ಯಾನಕ್ಕೆ ಮೊರೆ ಹೋಗುವವರೂ ಬರುತ್ತಾರೆ. ಒಂದರ್ಥದಲ್ಲಿ ಎಲ್ಲರನ್ನೂ ಒಂದೆಡೆ ಸೆಳೆದುಕೊಳ್ಳುವ ಆಕರ್ಷಣೀಯ ಸ್ಥಳ!
ಈ ಭಿನ್ನ ಸೆಳೆತದ ಸ್ಥಳ ಇನ್ನೂ ಬೆಳಕಿಗೆ ಬಾರದ ಊರ ಹೊರಗಡೆಯೆಲ್ಲೆಲ್ಲೂ ಇಲ್ಲ. ಹುಬ್ಬಳ್ಳಿ ನಗರದ ಕೇಂದ್ರ ಭಾಗವಾದ ಹುಧಾ ಮಹಾನಗರ ಪಾಲಿಕೆಯ ಬೆನ್ನಿಗೆ ಒರಗಿಕೊಂಡೇ ಇದೆ. ಹೌದು, ಅಂದ ಹಾಗೆ ಈ ಸ್ಥಳದ ಹೆಸರು ಚಿಟಗುಪ್ಪಿ ಪಾರ್ಕ್!
ಹೆಸರಿಗೆ ಇದು ಉದ್ಯಾನವಾದರೂ ಹೇಳಿಕೊಳ್ಳಲು ಸಹ ಒಂದೇ ಒಂದು ಅಂದದ ಗಿಡ ಇಲ್ಲಿಲ್ಲ. ಎಲ್ಲಿಯಾದರೂ ಹಸಿರು ಹುಲ್ಲಿನ ಹಾಸಿಗೆ ಇದೆಯೇ ಎಂದು ಕಣ್ಣಾಡಿಸಿದರೆ, ಅದು ಕೂಡಾ ಗೋಚರಿಸದು. ಉದ್ಯಾನದ ಮಧ್ಯ ಭಾಗದಲ್ಲಿ ಇತಿಹಾಸದ ಕಥೆ ಹೇಳುತ್ತ ಗಾಂಭೀರ್ಯದಿಂದ ಬೃಹದಾಕಾರವಾಗಿ ಅರಳಿ ಮರ ಬೆಳೆದು ನಿಂತಿದ್ದರೆ, ಸುತ್ತೆಲ್ಲ ಅಲ್ಲಲ್ಲಿ ಎಂದು ಒಂದಿಷ್ಟು ಮರಗಳು ತಲೆದೂಗುತ್ತ ನಿಂತಿವೆ. ಈ ಮರಗಳು ಮನುಷ್ಯ ಎಂಬ ಪ್ರಾಣಿಗೆ ನೆರಳನ್ನು ನೀಡಿದರೆ, ಚಿಕ್ಕಪುಟ್ಟ ಪಕ್ಷಿಗಳಿಗೆ ತನ್ನ ಮಡಿಲಲ್ಲಿ ಬೆಚ್ಚನೆಯ ಜಾಗವನ್ನೇ ನೀಡಿ ಸಾರ್ಥಕತೆ ಪಡೆದುಕೊಡಿದೆ.
ವಾಣಿಜ್ಯ ನಗರಿಯ ಕೇಂದ್ರ ಭಾಗದಲ್ಲಿ ಇಂದಿರಾ ಗಾಜಿನ ಮನೆ ಉದ್ಯಾನ ಹಾಗೂ ಈ ಚಿಟಗುಪ್ಪಿ ಉದ್ಯಾನ ಹೊರತು ಪಡಿಸಿದರೆ ಮತ್ಯಾವ ಉದ್ಯಾನವೂ ಇಲ್ಲ. ಈ ಚಿಟಗುಪ್ಪಿ ಉದ್ಯಾನಕ್ಕೆ ಹೊಂದಿಕೊಂಡು ಮಹಾನಗರ ಪಾಲಿಕೆ, ಆಸ್ಪತ್ರೆ, ಸಂಸದರ ಕಚೇರಿ ಹಾಗೂ ಕಲಾ ಮಹಾವಿದ್ಯಾಲಯ ಇರುವುದರಿಂದ ಸಹಜವಾಗಿಯೇ ದಿನಪೂರ್ತಿ ಉದ್ಯಾನ ಜನಜಂಗುಳಿಯಿಂದ ತುಂಬಿರುತ್ತದೆ. ಒಂದಿಲ್ಲೊಂದು ಕಾರ್ಯದ ನಿಮಿತ್ತ ಪಾಲಿಕೆಗೆ ಬರುವ ನಾಗರಿಕರು, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು, ಕಲಾ ಮಹಾವಿದ್ಯಾಲಯಕ್ಕೆ ಬರುವ ನೂರಾರು ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆ ಕಳೆಯಲು ಇಲ್ಲಿಯ ಮರದ ನೆರಳನ್ನೇ ಆಶ್ರಯಿಸುತ್ತಾರೆ. ಇವರ ಹೊರತಾಗಿಯೂ ಈ ಪುಟ್ಟ ಉದ್ಯಾನ ಎಷ್ಟೋ ಜೀವಗಳಿಗೆ ಆಸರೆಯಾಗಿದೆ ಎನ್ನುವುದು ಸೋಜಿಗವೇ!
ಜಾತಿ, ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರೂ ಚಿಟಗುಪ್ಪಿ ಉದ್ಯಾನಕ್ಕೆ ಬಂದು ಬಿಡುವಿನ ಕಾಲ ಕಳೆಯುತ್ತಾರೆ. ಅಪರಿಚಿತರಾಗಿ ಬಂದು ಪರಿಚಿತರಾಗಿ ಹೆಜ್ಜೆ ಕೀಳುತ್ತಾಾರೆ. ಧರ್ಮದ ಎಲ್ಲೆ ಮೀರಿದ ಸಣ್ಣದಾದ ಎಳೆಯೊಂದು ಉದ್ಯಾನ ಅನ್ಯ ಧರ್ಮಿಯರನ್ನು ಒಂದುಗೂಡಿಸುತ್ತದೆ. ಉದ್ಯಾನದ ಪ್ರವೇಶ ದ್ವಾರದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿರುವುದರಿಂದ ಕೆಲವರು ದಾಹ ನೀಗಿಸಿಕೊಳ್ಳಲು ಬಾಟಲು ಹಿಡಿದು ಬಂದರೆ, ಬೀದಿ ವ್ಯಾಪಾರಸ್ಥರು ತಮ್ಮ ಉದ್ಯಮಕ್ಕೆಂದು ಕ್ಯಾನ್ ಹಿಡಿದು ಬರುತ್ತಾರೆ. ಹಾಗೆಯೇ, ದೃಷ್ಟಿಯನ್ನು ಪಕ್ಕಕ್ಕೆ ಹೊರಳಿಸಿದರೆ ಪುಟ್ಟ ಮಕ್ಕಳು ಜೋಕಾಲಿಯಲ್ಲಿ ಕುಳಿತು ತೂಗುಯ್ಯಾಲೆಯಲ್ಲಿ ತೂಗುವುದು ಕಂಡು ಬರುತ್ತದೆ. ಅನತಿ ದೂರದಲ್ಲಿ ಮಕ್ಕಳ ಈ ಆಟವನ್ನು ನೋಡುತ್ತ ಕುಳಿತಿರುವ ಹೆತ್ತಾಕೆಯ ಕಣ್ಣಲ್ಲಿ ಸಂಭ್ರಮದ ಬುಗ್ಗೆ ಎದ್ದೇಳುತ್ತದೆ.
ಉದ್ಯಾನದ ಮೂಲೆಯಲ್ಲಿರುವ ಮರದ ನೆರಳಲ್ಲಿ, ಇಲ್ಲವೇ ಅಲ್ಲಿಯೇ ಇರುವ ಆಸನದಲ್ಲಿ ಬದುಕಿನ ಯಾವ ಜಂಜಾಟವೂ ಇಲ್ಲದೆ ನಿಶ್ಚಿಂತೆಯಿಂದ ಮಲಗಿರುವವರು ಇಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತಾರೆ. ಅವರಲ್ಲಿ ಕೆಲವರು ಹಿರಿಯರಾದರೆ ಇನ್ನು ಕೆಲವರು ದೂರದ ಊರಿನಿಂದ ನಗರಿಗೆ ವಲಸೆ ಬಂದವರೋ ಇನ್ಯಾರೋ ಆಗಿರುತ್ತಾರೆ. ಮಾನಸಿಕ ಸ್ಥೀಮಿತ ಕಳೆದುಕೊಂಡವರು ಸಹ ಉದ್ಯಾನದಲ್ಲಿ ಆಶ್ರಯ ಪಡೆದು, ತಮ್ಮಲ್ಲಿರುವ ಒಬ್ಬಂಟಿತನದ ಬೇಗುದಿಯನ್ನು ಬಾನಿಗೆ ಬಾಯಾನಿಸಿರುವ ಮರದ ಬುಡದ ಕೆಳಗೆ ಕೂತು ತೋಡಿಕೊಳ್ಳುತ್ತಾರೆ. ಅಲ್ಲಿಯೇ ಪಕ್ಕದ ಕಟ್ಟೆಯ ಮೇಲೆ ಸಾರ್ವಜನಿಕರು ಕೂತು, ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತ ಪಂಚಾಯಿತಿ ಕಟ್ಟೆಯನ್ನು ಸೃಷ್ಟಿಸುತ್ತಾರೆ. ಇದ್ಯಾವುದರ ಅರಿವಿಲ್ಲದ ಯುವಕನೋರ್ವ ಅಂದಿನ ಪತ್ರಿಕೆಯೊಂದು ಕೈಯ್ಯಲ್ಲಿ ಹಿಡಿದು, ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಮಸ್ತಕಕ್ಕೆ ತುರುಕುತ್ತಿರುತ್ತಾನೆ.
ಇವೆಲ್ಲಕ್ಕೂ ಮಿಗಿಲಾಗಿ ಚಿಟಗುಪ್ಪಿ ಉದ್ಯಾನ ವಧು-ವರರ ಅನ್ವೇಷಣಾ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಸಂಬಂಧಿಗಳು ವಧು-ವರರನ್ನು ಕರೆತಂದು ಪರಸ್ಪರ ಒಪ್ಪಿಗೆಯನ್ನು ಪಡೆದು ಸಂಬಂಧಕ್ಕೆ ನಾಂದಿ ಹಾಡುತ್ತಾರೆ. ಕೆಲವು ಪಡ್ಡೆ ಹುಡುಗರು ಕೇಕೆ ಹಾಕುತ್ತ, ಪೋಲಿ ಮಾತುಗಳ ಡೈಲಾಗ್ ಹೇಳುತ್ತ ಹರಟೆ ಹೊಡೆದರೆ, ಕೆಲವು ಕುಡುಕರು ಉದ್ಯಾನದ ಉದ್ದ-ಅಗಲ ಎಷ್ಟಿದೆ ಎಂದು ಓಲಾಡುತ್ತ ಸರ್ವೇ ನಡೆಸುತ್ತಾರೆ. ಹೆಂಗಳೆಯರೇನಾದರೂ ಎದುರಾದರೆ, ಅಮಲಿನ ಕಣ್ಣಲ್ಲೇ ಅವರನ್ನು ದುರುಗುಟ್ಟಿ ನೋಡುತ್ತಾರೆ. ಯ್ಯಾಕ್... ಥೂ... ಎಂದು ಉಗಿಸಿಕೊಳ್ಳುತ್ತಾರೆ. ಸುತ್ತೆಲ್ಲ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಮಯ ಕಳೆಯುತ್ತಿದ್ದರೆ, ಕಡ್ಲೆ-ಪುರಿ ಮಾರುವ ಅಂಗವಿಲಕ ಸ್ವಾಭಿಮಾನಿಯೊಬ್ಬ ಅವರಿಗೆ ಎದುರಾಗಿ, 'ಸರ್.... ಪ್ಲೀಸ್' ಎನ್ನುತ್ತಾನೆ. ಅಷ್ಟಾದ ಕೆಲವೇ ಕ್ಷಣದಲ್ಲಿ ಟೀ ಮಾರುವ ಹುಡುಗ ಬಂದು, 'ಟೀ...' ಎಂದು ಮುಗುಳ್ನಗುತ್ತಾನೆ. ಇವೆಲ್ಲದ ನಡುವೆ ಕೊರವಂಜಿಯರು ಸದ್ದಿಲ್ಲದೆ ಅಲ್ಲಿದ್ದವರ ಹಣೆ ಬರಹ ಓದಿ ಹೇಳಿ, ತಮ್ಮ ಬದುಕಿನ ಚೀಲ ತುಂಬಿಸಿಕೊಳ್ಳುತ್ತಾರೆ.
ವೈವಿಧ್ಯಮಯ ಬದುಕು, ಭಿನ್ನ-ವಿಭಿನ್ನ ಮನಸ್ಸುಗಳು, ನಾನಾ ತೆರನಾದ ಬದುಕುಗಳು, ನಗುವಿನ ಜತೆಗೆ ಅಳು, ಕಷ್ಟ-ಸುಖದ ಪಾಠ... ಹೀಗೆ ಜೀವನದ ಸೂಕ್ಷ್ಮಾತಿ ಸೂಕ್ಷ್ಮತೆಯ ಎಷ್ಟೋ ಸಂಗತಿಗಳನ್ನು ಚಿಟಗುಪ್ಪಿ ಉದ್ಯಾನ ತಿಳಿಸಿಕೊಡುತ್ತದೆ. ಇಷ್ಟೊಂದು ಜೀವಿಗಳಿಗೆ ಅವರಿಷ್ಟದಂತೆ ನೆಮ್ಮದಿಯ ಆಸರೆ ನೀಡುತ್ತಿರುವ ಚಿಟಗುಪ್ಪಿ ಉದ್ಯಾನ ಆದಷ್ಟು ಬೇಗ ಹಸಿರಿನಿಂದ ನಳನಳಿಸುವಂತಾಗಲಿ.
(ಮೇ. ೨, ೨೦೧೭... ವಿಶ್ವವಾಣಿಯಲ್ಲಿ ಪ್ರಕಟಿತ ಬರಹ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ