ನನ್ನ ಮನೆಯಂಗಳದ ಸೌಂದರ್ಯ ರಾಶಿ
ಕಣ್ಣ ಅಳತೆಗೆ ನಿಲುಕದಷ್ಟು ವಿಶಾಲವಾದ ಗದ್ದೆ ಬಯಲು. ಈ ಅನಂತವನ್ನು ಸೀಳಿವೆಯೇನೋ ಎಂದೆನಿಸುವ ಹೆಬ್ಬಾವಿನಂತೆ ಸುಮ್ಮನೆ ಮಲಗಿದ ರಸ್ತೆ. ಕತ್ತೆೆತ್ತಿದರೆ ಹತ್ತಿಯ ರಾಶಿ ಒಂದೆಡೆ ಕೂಡಿ ಹಾಕಿದ ಬಿಳಿ ಮೋಡಗಳ ಸರತಿಯ ಓಟ. ಬಯಲಿಗೆ ಎದುರಾಗಿ ನಾಲ್ಕು ಹೆಜ್ಜೆ ಹಾಕಿದರೆ ಅಘನಾಶಿನಿಯ ಝುಳು ಝುಳು ನಾದ. ಸುತ್ತೆಲ್ಲ ಕಣ್ಣಾಡಿಸಿದರೆ ಮಂಜು ಮುಸುಕಿದ ಸಹ್ಯಾದ್ರಿ ಪರ್ವತಗಳ ಸಾಲು...
ಇದು ನಮ್ಮನೆಯಂಗಳದ ಸೌಂದರ್ಯ ರಾಶಿ. ತೆಂಗು, ಅಡಿಕೆ, ಮಾವು, ಹಲಸು, ಪೇರಲ, ಚಿಕ್ಕು ಮರಗಳ ಜೊತೆ ಜೊತೆಗೆ ಅಬ್ಬಲ್ಲಿ, ಮಲ್ಲಿಗೆ, ಮುತ್ತು ಮಲ್ಲಿಗೆ, ಕಾಬಾಳಿ, ಸಂಪಿಗೆ, ಮಧ್ಯಾಹ್ನ ಮಲ್ಲಿಗೆ, ಜಿನ್ನಿ, ತುಳಸಿಯಂತಹ ಚಿಕ್ಕ ಪುಟ್ಟ ಗಿಡಗಳ ಹಸಿರ ತೋರಣದ ನಡುವೆ ಪುಟ್ಟದೊಂದು ಮನೆ. ಮನೆ ಹೊಸ್ತಿಲು ತುಳಿದು ಐದತ್ತು ಹೆಜ್ಜೆ ಇಟ್ಟರೆ ಮೈ-ಮನಗಳ ಬೇಗುದಿಗೆ ಮುಲಾಮು ಹಚ್ಚುವ ಗದ್ದೆ ಬಯಲು. ದೂರದಿಂದ ತೂರಿ ಬರುವ ಬಿಸಿ ಗಾಳಿಯನ್ನು ಸಹ ಈ ಗದ್ದೆ, ತಂಪು ಗಾಳಿಯನ್ನಾಗಿ ಬದಲಾಯಿಸುತ್ತದೆ. ಅಳತೆಗೋಲಾಗಿ ಕಾಲುದಾರಿಯಾಗಿರುವ ಕಂಟದ ಮೇಲಿನ ಪ್ರತಿ ನಡಿಗೆ ಹೊಸ ಹೊಸ ಭಾವಾನುಭವಕ್ಕೆ ನಾಂದಿ. ಅಲ್ಲೇ ಕಂಟದ ಮೇಲೆ ಗಂಭೀರವಾಗಿ ತಲೆ ಎತ್ತಿ ನಿಂತಿದ್ದ ತೆಂಗಿನ ಮರ, ಈಗ ಬಳಲಿ ಬೆಂಡಾಗಿ ಗೂನು ಬೆನ್ನು ಹಾಕಿದೆ.
ಗದ್ದೆಗುಂಟ ಸರತಿ ಸಾಲಾಗಿ ನಿಂತಿರುವ ವಿದ್ಯುತ್ ಕಂಬಗಳು, ಅಘನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲು ಗಾಳ ಹಾಕಿದೆಯೇನೋ ಎನ್ನುವ ಭಾವ ಒಡಮೂಡಿಸುತ್ತದೆ. ವಿದ್ಯುತ್ ತಂತಿಯ ಮೇಲೆ ಕುಳಿತು ಮರಿ ಹಕ್ಕಿಗೆ ಗುಟುಕು ನೀಡುವ ತಾಯಿ ಹಕ್ಕಿಯ ತಾಯ್ತನ, ಜೀಕುತ್ತ ಜೋಕಾಲಿಯಾಡುವ ಹರೆಯದ ಹಕ್ಕಿಗಳ ತುಂಟತನ, ಪಕ್ಕದಲ್ಲಿ ಬೇಲಿ ಮೇಲಿನ ಹಸಿರು ಪದೆಯೊಳಗೆ ಅವಿತು ಟುವ್ವಿ... ಟುವ್ವಿ.. ಎಂದು ಕೂಗುವ ಪಿಳ್ಳಕ್ಕಿಗಳ ಇಂಚರ, ಒಣಗಿದ ತರಗೆಲೆಯ ಅಡಿಯಲ್ಲಿ ಸದ್ದು ಮಾಡುತ್ತ ಹರಿದಾಡುವ ಸರಿಸೃಪಗಳು, ಇವುಗಳ ಹರಿದಾಟವನ್ನು ಬಾನಂಗಳದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತ ಹೊಂಚು ಹಾಕಿ ರೆಕ್ಕೆ ಬಿಚ್ಚಿ ಹಾರಾಡುವ ಹದ್ದುಗಳು, ಗದ್ದೆ ಮಣ್ಣಿನಲ್ಲಿಯೇ ಕಣ್ಣಿಗೆ ಕಾಣದಷ್ಟು ಚಿಕ್ಕ ಗೂಡು ಕಟ್ಟಿಕೊಂಡು ವಾಸಿಸುವ ಗುಬ್ಬಿ ಹುಳಗಳು, ಆ ಗೂಡುಗಳ ಮೇಲೆಯೇ ಆಹಾರ ಹುಡುಕುತ್ತ ಸಾಗುವ ಇರುವೆಯ ಸರತಿ ಸಾಲುಗಳು.... ಒಂದೇ ಎರಡೇ, ಪ್ರಕೃತಿಯ ಎಲ್ಲ ಅನುಭೂತಿಗಳು ಒಂದೆಡೆ ಸೆರೆಯಾದ ಪವಿತ್ರ ಸ್ಥಳ.
ಗದ್ದೆ ಮೇಲಿನ ಕಂಟದ ಮೇಲೆ ಅಘನಾಶಿನಿ ಕಡೆ ಮುಖ ಮಾಡಿ ಹೆಜ್ಜೆ ಹಾಕಿದರೆ, ತಾತ, ಮುತ್ತಾರ ಕಾಲದ ಮಾರ್ಗ ಸೂಚಕ ಬೃಹತ್ ಅರಳಿ ಮರ ಎದುರಾಗುತ್ತದೆ. ಅಲ್ಲಲ್ಲಿ ಇರುವ ಈ ಅರಳಿ ಮರಗಳು ಅಂದಿನ ಕಾಲುದಾರಿಯ ಪಯಣದಲ್ಲಿ ಹಿರಿಯರಿಗೆ ದಾರಿಯ ಹೆಗ್ಗುರುತಾಗಿತ್ತು. ನಡೆದು ಸುಸ್ತಾದಾಗ ಅರಳಿ ಕಟ್ಟೆಯ ಮೇಲೆಯೇ ವಿಶ್ರಮಿಸಿ, ಬುತ್ತಿ ತಿಂದು ಮುಂದೆ ಪಯಣಿಸುತ್ತಿದ್ದರು. ಈಗ ಈ ಅರಳಿ ಮರ ಕಾಗೆ, ಪಾರಿವಾಳ, ಹದ್ದುಗಳಿಗೆ ನೆಲೆ ನೀಡಿದ ಮಹಾ ವೃಕ್ಷ. ಮುಂಜಾನೆಯ ಸೂರ್ಯೋದಯದ ಮೊದಲ ಕಿರಣ, ಅಘನಾಶಿನಿಯ ಬಳಕುವ ಮೈ ಮೇಲೆ ಬಿದ್ದು ಈ ಅರಳಿಗೆ ನಮಿಸಿ ಮೇಲೇಳುತ್ತದೆ. ಹಾಗೆಯೇ, ಮುಸ್ಸಂಜೆಯ ಸೂರ್ಯಾಸ್ತದ ಕೊನೆಯ ಕಿರಣ ಅರಳಿಯ ನೆತ್ತಿಯ ಮೇಲಿರುವ ಚಿಗುರೆಲೆಗೆ ಸ್ಪರ್ಶಿಸಿ ಮಾಯವಾಗುತ್ತದೆ.
ದೈವೀದತ್ತ ಈ ಹಸಿರು ಹೊನ್ನ ರಾಶಿಯ ಪ್ರಕೃತಿಯ ಮಡಿಲಲ್ಲಿ ಉಸಿರು ಪಡೆದ ನಾನೇ ಧನ್ಯ! ಕ್ಷಮಿಸಿ..... ನಾವೇ ಧನ್ಯ!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ