ಶುಕ್ರವಾರ, ಮೇ 19, 2017

ಕಡಲ ಕನವರಿಕೆ

ಓ ಕಡಲೇ...
ಯಾಕೋ... ನಿನ್ನ ಎದೆ ಹರಿವಿನ ಮೇಲೆ ಅಂಗಾತ ಬಿದ್ದು ತೇಲಾಡಬೇಕೆನಿಸಿದೆ. ನಿನ್ನ ಕಡು ನೀಲ ಬಣ್ಣದ ಎದೆಯಾಳದಲ್ಲಿ ಧುಮುಕಿ ಉಸಿರು ಬಿಗಿಡಿಯಬೇಕೆನಿಸಿದೆ. ನಿನ್ನ ನೆತ್ತಿಯ ಮೇಲೆ ಓಡಾಡುವ ಕಾರ್ಮೋಡದೊಳಗೆ ಅವಿತುಕೊಳ್ಳಬೇಕೆನಿಸಿದೆ....

ಹೌದು.... ಒಂದು ದಿನ ಪೂರ್ತಿ ನಿನ್ನ ಜೊತೆ ಕಳೆದು ಭಾರವಾದ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕಿದೆ. ನಾಚುತ್ತ ಬಂದು ಕಾಲಿಗೆ ಕಚಗುಳಿಯಿಡುವ ನಿನ್ನ ಹಾಲ್ನೊರೆಯ ಗುಳ್ಳೆಯನ್ನು ಬೆರಳಲ್ಲಿ ಎತ್ತಿ ಆಡಬೇಕು. ಕೆನ್ನೆ ಕೆಂಪೇರಿಸಿಕೊಂಡು ಪ್ರಸ್ತದ ಕೋಣೆಗೆ ಹೋಗುವ ಮಧುವಣಗಿತ್ತಿಯಂತೆ ಕಾಣುವ ಭಾನುವನ್ನು ಕಣ್ತುಂಬಿಸಿಕೊಳ್ಳಬೇಕು. ನಿನ್ನ ಉಬ್ಬರದ ಆರ್ಭಟದಲ್ಲಿ ನೀರ್ಗಲ್ಲು ಮುರಿವ ಸದ್ದನ್ನು ಕೇಳಿ ಎದೆ ಬಡಿತ ಹೆಚ್ಚಿಸಿಕೊಳ್ಳಬೇಕು. ಹೀಗೆ, ಏನೇನೋ ಹುಚ್ಚು ಆಸೆ... ಕಲ್ಪನೆಯಂತೂ ಅಲ್ಲ. ಯಾಕೆಂದರೆ, ನಾ ನಿನ್ನ ಮಡಿಲಲ್ಲೇ ಬೆಳೆದ ಹುಚ್ಚ ಹುಡುಗ.
ಇರಲಿ, ಹತ್ತಿರದವರಲ್ಲಿ ಹೇಳಿಕೊಳ್ಳಲಾಗದ ಭಾವವನ್ನು ನಿನ್ನ ಮುಂದಾದರೂ ಹೇಳಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ, ಅಬ್ಬರಿಸುವ ನೀನೇ ಬಿಸಿಲ ಬೇಗೆಗೆ ತಣ್ಣಗಾಗಿ ಹೋಗಿದ್ದೀಯ. ನಾನೇ ಆದಿ, ನಾನೇ ಅಂತ್ಯ ಎಂದೆಲ್ಲ ಬೀಗುತ್ತಿದ್ದ ನೀನು, ಎಷ್ಟೊಂದು ಕೃಶವಾಗಿದ್ದೀಯ?  ನಿನ್ನ ತಟಕ್ಕೆ ಬಂದು ಒಂದು ಹೆಜ್ಜೆ ಊರಿದರೆ ಸಾಕಿತ್ತು, ಓಡೋಡಿ ಬಂದು ಪಾದಸ್ಪರ್ಶಿಸಿ ಪುನೀತರನ್ನಾಗಿಸುತ್ತಿದ್ದೆ. ಆದರೆ, ಈಗ... ಗಾವುದ ದೂರ ಸುಡುವ ಮರಳ ರಾಶಿ ಮೇಲೆ ಹೆಜ್ಜೆ ಹಾಕಬೇಕು. ಎರಡ್ಮೂರು ಮೈಲಿ ದೂರವಿದ್ದರೂ ನಿನ್ನ ಅಬ್ಬರದ ಸದ್ದು ರಾತ್ರಿ ನಿದ್ದೆಗೆ ಜೋಗುಳ ಹಾಡಿದಂತಿರುತ್ತಿತ್ತು. ನಿನ್ನ ಸನಿಹ ಬಂದರೂ ಈಗ ಆ ಸದ್ದು ಕೇಳಲೊಲ್ಲದು. ಬಿರು ಬೇಸಿಗೆ ನಿನ್ನನ್ನು ಸಹ ಇಷ್ಟು ಹೈರಾಣಾಗಿಸಿದೆಯೇ?

ಬಿಡು, ಇನ್ನೊಂದು ವಾರವಷ್ಟೇ! ಕೊತ ಕೊತನೆ ಕುದಿಯುತ್ತಿದ್ದ ನಿನ್ನ ಮೈ-ಮನವೆಲ್ಲ ತಣ್ಣಗಾಗಲಿದೆ. ಮುಗ್ಧನಂತೆ ಶಾಂತವಾಗಿದ್ದ ನೀನು ಹುಚ್ಚೆದ್ದು ಅಬ್ಬರಿಸುತ್ತೀಯಾ. ಎಷ್ಟು ಹುಚ್ಚನೆಂದರೆ, ಆಗತಾನೆ ಅಂಬೆಗಾಲಿಡುವ ಮಗುವನ್ನು ಮಣ್ಣಲ್ಲಿ ಬಿಟ್ಟರೆ, ಏನೆಲ್ಲ ಮಾಡುತ್ತದೆಯೋ.. ಹಾಗೆ! ಅಂದರೆ, ಈಗಿರುವ ಶುಭ್ರ ನೀಲಿಯ ಬದಲಾಗಿ, ಹೊಲಸನ್ನು ಮೈಗೆ ಮೆತ್ತಿಕೊಂಡ ಕೊಳಕನಂತೆ! ನಿನ್ನ ಅಲೆಗಳ ಆರ್ಭಟಕ್ಕೆ ನಿನ್ನದೇ ತಟದಲ್ಲಿದ್ದ ಮರಗಳೆಷ್ಟು ಧರೆಗುರಳಬೇಕೋ? ನಿನ್ನಂಗಳದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಂಡಿದ್ದ ಗುಡಿಸಲುಗಳೆಷ್ಟು ನುಚ್ಚು-ನೂರಾಗಬೇಕೋ? ಇಂತಹದ್ದೇ ಹುಚ್ಚಾಟಕ್ಕೆ ನೀನು ಎದುರು ನೋಡುತ್ತಿದ್ದೀಯಾ ಎನ್ನುವುದು ನನಗೆ ಚೆನ್ನಾಗಿ ಗೊತ್ತು!

ದೂರದ ಅಂಡಮಾನ-ನಿಕೋಬಾರ ಸಮುದ್ರ ತೀರಕ್ಕೆ ಮುಂಗಾರು ಕಾಲಿಟ್ಟು, ಅದಾಗಲೇ ವಾರ ಕಳೆದಿದೆ. ಇನ್ನೊಂದು ವಾರದಲ್ಲಿ ಬಂಗಾಳಕೊಲ್ಲಿ ಮೂಲಕ ಕೇರಳ ಪ್ರವೇಶಿಸಿ ನಿನ್ನನ್ನು(ಅರಬ್ಬೀ) ಬಿಗಿದಪ್ಪಿಕೊಳ್ಳಲಿದೆ. ಆ ಸಂದರ್ಭದಲ್ಲಿ ನೀ ವರ್ತಿಸುವ ರೀತಿ ಹಾಗೂ ಆ ದೃಶ್ಯ ನಿಜಕ್ಕೂ ಭಯಾನಕ. ನೆನೆಸಿಕೊಂಡರೆ ಎದೆ ಸಣ್ಣಗೆ ಕಂಪಿಸುತ್ತದೆ. ನೆತ್ತಿಯ ಮೇಲೆ ಕಾಪಿಟ್ಟ ಮೋಡಗಳ ಸಾಲು ಸಾಲು, ಶರವೇಗದಿಂದ ಎಲ್ಲಿಂದಲೂ ತೂರಿ ಬರುವ ಬಿರುಗಾಳಿ, ನಿನ್ನ ಕಡಲಿನ ಮೊರೆತದ ಅಬ್ಬರ, ಬಾನಂಗಳದಿಂದ ಕಬ್ಬಿಣ ಚೂರನ್ನು ಎಸೆದಂತೆ ಭಾಸವಾಗುವ ಮಳೆ ಹನಿಗಳ ಥಕಧಿಮಿತ, ಸುತ್ತೆಲ್ಲ ಆವರಿಸುವ ಕತ್ತಲು, ನೋಡು ನೋಡುತ್ತಲೇ ಮಂಜಿಗೆ ಮುಸುಕಾಗುವ ಕಾಗಾಲ ಗುಡ್ಡ, ಗಾಳಿ ರಭಸಕೆ ಎಲ್ಲಿಯೋ ತೂರಿ ಹೋಗುವ ಚಿತೆಯೇರಿದವರ ಭಸ್ಮ.......

ಈ ಭೀಭತ್ಸ ಸನ್ನಿವೇಶದಲ್ಲಿ ನಾನು ಏಕಾಂಗಿಯಾಗಿ, ಧರಿಸಿದ ಮೇಲಂಗಿಯ ಗುಂಡಿ ತೆಗೆದು, ಎರಡು ಕೈ ಅಗಲಿಸಿ ‘ಈ ಕಡಲೆಲ್ಲ ನನ್ನದು’ ಎನ್ನಬೇಕು! ಮನದಣಿಯೇ ‘ಕಣ್ಣಂಚು ಒದ್ದೆ ’ ಮಾಡಿಕೊಳ್ಳಬೇಕು.

ಇಂತಿ ನಿನ್ನ.. 
ಎದೆಯಾಳೋ ಹುಡುಗ


ಕಾಮೆಂಟ್‌ಗಳಿಲ್ಲ: