ಗುರುವಾರ, ಮೇ 23, 2013



ಪಲ್ಲವಗಳ ಪಲ್ಲವಿಯಲಿ
ಗರಿಗೆದರಿದ ಪ್ರೇಮ...

ಪ್ರೇಮ, ಅದು ದೈವ ಸ್ವರೂಪ. ಆತ್ಮ ಸಂಬಂಧದ ಪ್ರತೀಕ. ನವಿರಾದ ಭಾವಕ್ಕೆ, ಬೆಚ್ಚನೆಯ ಸ್ಪಂದನ... ಮೌನ ಸಂಭಾಷಣೆಯ ಮ್ಲಾನ ಭಾವ.. ಹೇಳಲಾಗದ, ಅನುಭವಿಸಲಾರದ ಮಧುರ ಯಾತನೆ... ಕನಸಲ್ಲೂ ಕನವರಿಸುವ ಭಾವ ಪ್ರವಾಹ... !

ಪ್ರೀತಿ,
ಹೌದು, ಪ್ರೀತಿ ಪ್ರೇಮ ಎಂಬ ಪದಗಳು ಬದುಕಿಗೆ ಚಿರಪರಿಚಿತವಾಗಿದ್ದರೂ, ಸ್ವತಃ ಬದುಕಲ್ಲಿ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಹಾಗಂತ ಅದರ ದ್ವೇಷಿಯಂತೂ ಆಗಿರಲಿಲ್ಲ. ಸುಮ್ಮನೆ ಪ್ರೀತಿ-ಪ್ರೇಮ ಎಂಬ ಜಂಜಾಟ ಯಾಕೆ ಬೇಕು ಎಂದು ನಿರ್ಲಿಪ್ತನಾಗಿದ್ದೆ. ಆದರೆ ಆ ನಿರ್ಲಿಪ್ತತೆಯೆ ನನ್ನನ್ನು ಪ್ರೀತಿಯ ಬಲೆಗೆ ಬೀಳುವಂತೆ ಮಾಡಿ ಬಿಟ್ಟಿತು....!?
ಬಿಡುವಿಲ್ಲದ ಕಾಯಕಕ್ಕೆ ದೇಹ ಮತ್ತು ಮನಸ್ಸು ಎರಡನ್ನು ಮೀಸಲಾಗಿಟ್ಟು, ವಿಶ್ರಾಂತಿಗಾಗಿ ರೂಮಿಗೆ ಹೋದಾಗ, ಒಂದೇ ಸಮನೇ ನನಗೆ ಕಾಡುತ್ತಿದ್ದದ್ದು ಏಕಾಂಗಿತನ. ಮನೆಯಲ್ಲಿದ್ದಾಗ ಸದಾ ಕುಟುಂಬದವರ, ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದ ನನಗೆ, ಅವರನ್ನೆಲ್ಲ ಬಿಟ್ಟು ಬಂದಿದ್ದು ಬದುಕಿನಲ್ಲಿ ಏನೋ ಕಳೆದುಕೊಂಡಂತಾಗಿತ್ತು. ಕೆಲಸದ ಸಮಯದಲ್ಲಿ ಇದ್ಯಾವುದು ನೆನಪಿಗೆ ಬರುತ್ತಿರಲಿಲ್ಲ. ರೂಮಿಗೆ ಬಂದಾಗ ಅವೆಲ್ಲ ಒಂದೇ ಸಮನೆ ಮುತ್ತಿಕೊಳ್ಳುತ್ತಿದ್ದವು. ಈ ಕಾಡುವ, ತದುಕುವ ಭಾವನೆಗಳು ನನ್ನನ್ನು ಏಕಾಂಗಿಯನ್ನಾಗಿಸಿತ್ತು. ಒಮ್ಮೊಮ್ಮೆ ಈ ಏಕಾಂಗಿತನ ನನ್ನನ್ನು ಕಿತ್ತು ತಿನ್ನುತ್ತಿವೆಯೇನೋ ಎಂದೆನಿಸುತ್ತಿತ್ತು. ಇದರಿಂದ ಹೊರಬರಲು ಏನೆಲ್ಲ ಹರಸಾಹಸ ಮಾಡಿ, ಶಕ್ತಿಮೀರಿ ಪ್ರಯತ್ನಿಸಿದ್ದೆ. ಉಹೂಂ... ಸಾಧ್ಯವಾಗಿಲ್ಲ. ಆಗಲೇ ನೀನು ನನ್ನ ಕಣ್ಣಿಗೆ ಬಿದ್ದಿದ್ದು...!
ಹೌದು ಕಣೇ, ಏಕಾಂಗಿತನಕ್ಕೆ ಮದ್ದಾಗಿ ಬಂದ ನೀ, ಮನಸ್ಸಲ್ಲಿಯೇ ಶಾಶ್ವತವಾಗಿ ಬೇರೂರಿ ಬಿಟ್ಟೆ. ಹಾಗಂತ ಅಂದಿನ ದಿನಗಳಲ್ಲಿ ನಾನು ನಿನ್ನನ್ನು ಪ್ರೀತಿಸಿರಲಿಲ್ಲ. ಬದಲಾಗಿ, ಏಕಾಂಗಿಯಾಗಿ ನರಳಾಡುತ್ತಿದ್ದ ನನಗೆ ಅದನ್ನು ಹೊಡೆದೋಡಿಸಲು ಒಬ್ಬಳು ಸ್ನೇಹಿತೆ ದೊರಕಿದಳಲ್ಲ ಎಂದು ಸಂಭ್ರಮಿಸಿದ್ದೆ.... ಕುಣಿದು ಕುಪ್ಪಳಿಸಿದ್ದೆ.... ಬಿಡುವು ದೊರೆತಾಗಲೆಲ್ಲ ನಿನ್ನನ್ನೆ ನೆನಪಿಸಿಕೊಳ್ಳುತ್ತಾ ಮನಸಾರೆ ಹಿಗ್ಗುತ್ತಿದ್ದೆ. ಕೆಲವು ಭಾವನೆಗಳನ್ನು, ನೋವುಗಳನ್ನು ನಿನ್ನಲ್ಲಿ ಹಂಚಿಕೊಂಡಿದ್ದೂ ಇದೆ. ಲೆಕ್ಕವಿಲ್ಲದಷ್ಟು ಸಂದೇಶಗಳು ಪರಸ್ಪರ ಸುಮ್ಮನೆ ಹರಿದಾಡುತ್ತಿದ್ದವು. ನಿಷ್ಕಲ್ಮಶ ಸ್ನೇಹ ಇಬ್ಬರನ್ನು ಸೆಳೆದು ಹತ್ತಿರವಾಗುವಂತೆ ಮಾಡಿತು. ಇವೆಲ್ಲವು ಹಂತಹಂತವಾಗಿ ನನ್ನಲ್ಲಿ ಬೀಡುಬಿಟ್ಟಿದ ಏಕಾಂಗಿತನಕ್ಕೆ ಅಂತ್ಯ ಹಾಡಲು ಸಹಕಾರಿಯಾಯಿತು.
ನಾನು ಮತ್ತೆ ಮೊದಲಿನಂತಾದೆ.ಸ್ಪೂರ್ತಿಯ ಚೈತನ್ಯ ಮೈಮನವೆಲ್ಲ ಆವರಿಸಿ ಮೈಕೊಡವಿ ಎದ್ದು ನಿಂತೆ. ಬಹುಶಃ ಇಲ್ಲೆ ಇರಬೇಕು, ನಾ ನಿನ್ನ ಪ್ರೀತಿಸಿದ್ದು! ಅರಿವಿಲ್ಲದೆ ಮನಸ್ಸಿನ ಖಾಲಿ ಪುಟದ ಹಾಳೆಯಲ್ಲಿ ನಿನ್ನ ಹೆಸರನ್ನು ಗೀಚಿ, ಅದಕ್ಕೊಂದು ಸುಂದರ ಮುನ್ನುಡಿಯನ್ನೂ ಸಹ ಬರೆದು ಬಿಟ್ಟೆ!
ಯಾರನ್ನಾದರು ಪ್ರೀತಿಸಬೇಕಾಗಿರುವುದು ಅವರು ಹೇಗಿದ್ದಾರೆ ಎಂಬುದಕ್ಕಾಗಿ ಅಲ್ಲ. ಅವರ ಜೊತೆಯಿರುವಾಗ ನಾವು ಹೇಗಿರುತ್ತೇವೆ ಎಂಬ ಕಾರರಣಕ್ಕಾಗಿ. ಅದೇ ರೀತಿ ನಿನ್ನ ಅಂದ, ಚಂದಕ್ಕೆ ನಾ ಎಂದೂ ಮಾರು ಹೋಗಿಲ್ಲ. ನಿನ್ನಲ್ಲಿರುವ ನಿರ್ಲಿಪ್ತತೆ .... ಸ್ಪಟಿಕದಂತ ಸ್ವಚ್ಛಂದ ಗುಣ.... ಮಾತಿನ ಓಘ.... ಹೃದಯ ವೈಶಾಲ್ಯತೆ.... ಮಗುವುನಂಥ ಮುಗ್ದ ನಗು... ಪ್ರಾಣಿ-ಪಕ್ಷಿಗಳ ಮೇಲಿರುವ ಅದಮ್ಯ
ಪ್ರೀತಿ.... ಇವುಗಳೇ ನನ್ನನ್ನು ನಿನ್ನೆಡೆಗೆ ಸೆಳೆಯುವಂತೆ ಮಾಡಿದ್ದು... ಹಗಲಿರುಳು ನಿನಗಾಗಿ ಪರಿತಪಿಸುವಂತೆ ಮಾಡಿದ್ದು...!
ಏಕಾಂಗಿಯಾಗಿ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ಮಾನಸಿಕವಾಗಿ ಕೈ ಹಿಡಿದೆತ್ತಿ, ಬದುಕಿಗೊಂದು ಅರ್ಥ ನೀಡಿದ ನೀನು, ಇಂದು ಏಕಾಂತಕ್ಕೆ ಜಾರುವಂತೆ ಮಾಡುತ್ತಿದ್ದೀಯಾ. ಹೊತ್ತಲ್ಲದ ಹೊತ್ತಲ್ಲಿ ಬಂದು ಸುಮ್ಮನೆ ಕಾಡುತ್ತೀಯಾ. ಬೇಡ ಎಂದು ದೂರ ತಳ್ಳಿದರೂ ಹಿಂದಿನಿಂದ ಬಂದು ಬಿಗಿದಪ್ಪಿಕೊಳ್ಳುತ್ತೀಯಾ. ಒಮ್ಮೊಮ್ಮೆ ನಿನ್ನ ನೆನಪು ಧುತ್ತೆಂದು ಆವರಿಸಿಕೊಂಡು ಬಿಡುತ್ತವೆ .... ಆಗ ಅರೆ ಹುಚ್ಚನಂತಾಗಿ ಮಾನಸಿಕ ಸ್ಥೀಮಿತವನ್ನೆ ಕಳೆದುಕೊಂಡು ಬಿಡುತ್ತೇನೆ. ಆ ನರಳಾಟ, ತಾಕಲಾಟ, ವೇದನೆ.... ಅಬ್ಬಾ! ಸಹಿಸಲಸಾಧ್ಯವಾಗಿ ಅದರಲ್ಲೆ ಬೆಂದು ಹೋಗಬಾರದಾ ಎಂದೆನಿಸಿ ಬಿಡುತ್ತವೆ. ಆದರೂ ಕೂಡಾ ಆ ವೇದನೆ ಒಂಥರ ಹಿತನಾಭವವೇ! ಅದರಲ್ಲೆ ಮೈಮರೆತು ನಿನ್ನಲ್ಲೆ ಒಂದಾಗಿ ಬಿಡುತ್ತೇನೆ.
ನನ್ನಲ್ಲಿ ಮೂಡಿದ ನಿನ್ನ ಕಲ್ಪನಾತೀತ ಚಿತ್ತಾರಕ್ಕೆ ಏನೆಂದು ಹೆಸರಿಡಲಿ .....? ಎಲ್ಲೆ ಮೀರಿ ವರ್ತಿಸುವ ಈ ಮನಸ್ಸಿಗೆ ಒಂದು ಲಗಾಮು ಹಾಕಬೇಕಿದೆ. ಅಸ್ಪಷ್ಟತೆಯ ಹಾದಿಯಲ್ಲಿ ಸ್ಪಷ್ಟತೆಯ ಬದುಕು ಕಾಣಬೇಕಿದೆ. ವರ್ಣನಾತೀತ ಭಾವಕ್ಕೆ ತೋರಣ ಕಟ್ಟಿ, ತಾರ್ಕಿಕ ಅಂತ್ಯ ಹಾಡಬೇಕಿದೆ. ಈ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕಿದೆ. ಇದಕ್ಕೆ ನಿನ್ನ ವಿವೇಚನಾಯುಕ್ತ ವ್ಯಾಖ್ಯಾನ ಅತಿ ಅವಶ್ಯ. ಹಾಗೂ ಅಷ್ಟೇ, ಅನಿವಾರ್ಯ.
(ಹೇಳಬೇಕೆಂದು ತವಕಿಸುತ್ತಿದ್ದರೂ.... ಆ ಹೇಳಲಾಗದ ಮಾತೊಂದು ತುಟಿ ಅಂಚಿನಲ್ಲಿ ಹಾಗೆಯೇ ಉಳಿದು ಬಿಟ್ಟಿದೆ)
ಹೀಗೆ ಸುಮ್ಮನೆ................................. 

ಭಾನುವಾರ, ಮೇ 19, 2013


ತ್ಯಾಗ...

ಪಲ್ಲಟದ ತಲ್ಲಣ!

ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಎದುರಿನ ಗೋಡೆಗೆ ನೇತು ಹಾಕಿದ್ದ ಗಡಿಯಾರವನ್ನೊಮ್ಮೆ ತಲೆ ಎತ್ತಿ ನೋಡಿದೆ. ಗಂಟೆ ಆಗಲೇ ರಾತ್ರಿ 12.35! ಎದುರಿಗೆ ಕುಳಿತಿದ್ದ ಸ್ನೇಹಿತನ ಕಣ್ಣಿಂದ ನೀರು ಒಂದೇ ಸಮನೆ ಧಾರಾಕಾರವಾಗಿ ಸುರಿಯುತ್ತಿತ್ತು. ನನ್ನನ್ನು ದೃಷ್ಟಿಯಿಟ್ಟು ನೋಡಲಾರದೆ ಆತ ತಲೆ ತಗ್ಗಿಸಿ ಅಳುತ್ತಿದ್ದ. ಅವನಲ್ಲಿ ಏನೋ ಚಡಪಡಿಕೆ... ಏನೋ ಹೇಳಬೇಕೆಂದು ಬಯಸಿ, ಹೇಳಲಾಗದೆ ನಿಟ್ಟುಸಿರಿಡುತ್ತಿದ್ದ. ಅಸಹಾಯಕನಾಗಿ ತನ್ನಲ್ಲಿರುವ ನೋವನ್ನು ಹೊರ ಹಾಕಲಾಗದೆ ತಾನೇ ಬೇಯುತ್ತಿದ್ದನು. ಅವನ ನರಳಾಟದ ವೇದನೆ ಸಹಿಸದೆ ಮೌನವನ್ನು ಸೀಳುತ್ತ, `ಯಾಕೀತರ...? ಏನಾಯ್ತು ಹೇಳು... ಸ್ನೇಹಿತ!' ಎಂದು ತಣ್ಣನೆ ಕೇಳಿದೆ. ಒತ್ತರಿಸಿ ಬರುವ ದುಃಖವನ್ನು ತಡೆಯುತ್ತ... ಬಾಚಿ ತಬ್ಬಿಕೊಂಡನು!
ಕೋಣೆಯಲ್ಲಿ ಸಣ್ಣಗೆ ಉರಿಯುತ್ತಿರುವ ದೀಪವನ್ನು ನೋಡಿ ಆತ, `ಕಣ್ಣು ಚುಚ್ಚಿದಂತಾಗುತ್ತಿದೆ, ಪ್ಲೀಸ್, ದಯವಿಟ್ಟು ದೀಪ ಆರಿಸುತ್ತೀಯಾ' ಎಂದು ವಿನಂತಿಸಿದ. ಮರುಮಾತನಾಡದೆ ಅವನ ಮನಸ್ಥಿತಿಯನ್ನು ಅರಿತು ದೀಪ ಆರಿಸಿ, ಅವನ ಪಕ್ಕದಲ್ಲಿಯೇ ಬಂದು ಕುಳಿತೆ. ಕೋಣೆಯ ತುಂಬ ಕತ್ತಲಾವರಿಸಿದ್ದು, ಅದರದೆ ಕಾರುಬಾರಾಗಿತ್ತು. ಅದಕ್ಕೆ ಜೊತೆಯೆಂಬಂತೆ ನಿಶ್ಶಬ್ದ.... ನೀರವ ಮೌನ!! ಆದರೆ, ಕಾರ್ಗತ್ತಲಲ್ಲಿ ನನ್ನ ಸ್ನೇಹಿತನ ಉಚ್ಛ್ವಾಸ ಮತ್ತು ನಿಶ್ವಾಸದ ಸದ್ದು ಮಾತ್ರ ಕೇಳಿ ಬರುತ್ತಿತ್ತು. ಆತನ ಈ ಏರಿಳಿತದ ಉಸಿರಿನ ಹೊರತು, ಮತ್ತಿನ್ಯಾವ ಸದ್ದು ಅಲ್ಲಿರಲಿಲ್ಲ. ಕ್ಷಣ ಕಾಲ ಆತನ ಬಿಸಿಯುಸಿರು ತಣ್ಣಗಿನ ಕೋಣೆಯನ್ನೆಲ್ಲ ವ್ಯಾಪಿಸಿಬಿಟ್ಟಿತು.
ಇದೇ ಕತ್ತಲೆಗಾಗಿ ತವಕಿಸುತ್ತಿದ್ದವನಂತೆ.... ಮಡುಗಟ್ಟಿದ ಹೃದಯದಿಂದ `ರಾಜ' ಎಂದು ಮೆಲ್ಲನೆ ಉಸುರಿದ. ಮಾತು ಕೇಳಿತು ಎಂಬಂತೆ, `ಹೇಳೋ' ಎಂದೆ. ಹುಣ್ಣಿಮೆಗೆ ಸಾಗರ ಭೋರ್ಗರೆವಂತೆ, ಒಮ್ಮೆಲೆ ದುಃಖ ಉಮ್ಮಳಿಸಿ, ಅದನ್ನು ಬಿಗಿಹಿಡಿಯುವ ಪ್ರಯತ್ನ ಮಾಡುತ್ತಲೇ, `ಅವಳು ನನ್ನನ್ನು ಬಿಟ್ಟು ಹೋದಳೋ, ಅವಳಿಗೆ ನಾನು ಬೇಡವಂತೆ. ಮನೆಯಲ್ಲಿ ಒಪ್ಪುತ್ತಿಲ್ಲವಂತೆ. ಅವಳನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ವೋ..' ಎಂದನು. ಹಲವು ವರ್ಷಗಳಿಂದ ಆರಾಧಿಸುತ್ತ ಬಂದಿದ್ದ ಪ್ರೀತಿ ಅಂದು ಅವನಿಂದ ದೂರವಾಗಿತ್ತು. ಪ್ರೀತಿಯ ಗೋಪುರ ಏಕಾಏಕಿ ಕುಸಿದು ಬಿದ್ದಿದ್ದು, ಅವನನ್ನು ಹುಚ್ಚನನ್ನಾಗಿಸಿತ್ತು. ಆಗಲೇ ಅವನೆದೆಯಲ್ಲಿ ಮಡುಗಟ್ಟಿದ ದುಃಖ ಕಟ್ಟೆ ಒಡೆದು ಪ್ರವಾಹೋಪಾದಿಯಲ್ಲಿ ಹರಿದುಬಿಟ್ಟಿತು. ಬಿಕ್ಕಿಬಿಕ್ಕಿ ಒಂದೇ ಸಮನೇ ಅಳುತ್ತಿದ್ದನು. ಅವನನ್ನು ಸಮಾಧಾನಿಸುವ ಪ್ರಯತ್ನ ಮಾಡದೆ, ಅವನನ್ನೆ ನೋಡುತ್ತ ಕುಳಿತೆ. ಸಮಾಧಾನದ ಮಾತು ಕೂಡಾ ತೀರಾ ಕಠೋರ ಎಂದೆನಿಸಿ ಬಿಡಬಹುದಾದ ಸೂಕ್ಷ್ಮ ಕ್ಷಣವದು. ಆರಾಧನಾ ಪ್ರೀತಿ ಕಳೆದುಕೊಂಡ ಸ್ನೇಹಿತನ ದುಃಖದ ರಭಸ ಮಲೆನಾಡಿನ ಮಳೆಯನ್ನು ಮೀರಿಸುವಂತಿತ್ತು.
ಪ್ರೀತಿಯ ಆರಂಭಕ್ಕೆ ಒಂದು ನಿರ್ಧಿಷ್ಟ ದಿನವಿದ್ದಂತೆ, ಅದರ ಸಾವಿಗೆ ಇಂತಹದ್ದೆ ದಿನ ಎಂದು ಹೇಳಲಾಗದು. ಏಕೆಂದರೆ, ಅದೊಂದು ದೀರ್ಘ ಪ್ರಕ್ರಿಯೆ ಹಾಗೂ ವ್ಯವಸ್ಥಿತ ಹೊಂಚು. ಪ್ರೀತಿ ಹುಟ್ಟಿದ ದಿನವನ್ನು ಮನದ ಮೂಲೆಯೊಂದರಲ್ಲಿ ಎಲ್ಲೋ ಬರಿದಿಟ್ಟು, ವರ್ಷಗಳ ನಂತರವೂ ಅದನ್ನು ಹುಡುಕಿ ಕೆದಕಿದರೆ, ಒಮ್ಮೆಲೆ ದೊರೆತು ಬಿಡುತ್ತದೆ. ಆದರೆ ಪ್ರೀತಿ ಕಳೆದು ಹೋದ ಬಗ್ಗೆ `ಇದೇ ದಿನ ಹೀಗಾಯಿತು' ಎಂದು ಯಾರಿಂದಲೂ ಹೇಳಲು ಬಹುಶಃ ಅಸಾಧ್ಯ. `ಅಪ್ಪ, ಅಮ್ಮ, ಜಾತಿ' ಎಂಬುದು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು. ಆ ಹೃದಯಕ್ಕೆ ನಿಜ ಪ್ರೀತಿಯ ಅರ್ಥ ಗೊತ್ತಿಲ್ಲ ಎಂದರೂ ತಪ್ಪಾಗಲಾರದು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇದ್ಯಾವುದು ಕೂಡಾ ಅವರು ತಮ್ಮ ತಪ್ಪಿಗೆ ಕೊಡುತ್ತಿರುವ ಕಾರಣಗಳಲ್ಲ. ತಾವು ಮಾಡಿದ್ದೇ ಸರಿ ಎಂದು ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ನೀಡುವ ಸಮಜಾಯಿಷಿಗಳು. ಇತ್ತ ಹುಡುಗ/ಹುಡುಗಿ ಪ್ರೀತಿಸುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಅತ್ತ ಅಪ್ಪ, ಅಮ್ಮ ತನ್ನ ಮಗ/ಮಗಳ ಬರುವಿಕೆಗಾಗಿ ಕಾದು ಕುಳಿತಿರುತ್ತಾರೆ. `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂಬ ವಿಷಯ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆತ್ತವರ ನೆನಪು ಅವರಿಗೆ ಬಂದರೆ ನಿಜಕ್ಕೂ ಅದು ಗೌರವಯುತ. ಅಂತಹ ಯುವ ಹೃದಯಗಳನ್ನು ಗೌರವಿಸಿ, ಬೆಂಬಲಿಸೋಣ. ಆದರೆ, ಒಮ್ಮಿಂದೊಮ್ಮೆಲೆ ಇದ್ದಕ್ಕಿದ್ದಂತೆ `ಈ ಸಂಬಂಧ ಇನ್ನು ಮುಂದುವರಿಸಲು ಅಸಾಧ್ಯ, ದಯವಿಟ್ಟು ನನ್ನನ್ನು ಮರೆತು ಬಿಡು' ಎಂದು ಹೇಳುವುದು ನಿಜಕ್ಕೂ ಒಂದು ಹೀನ ಕೃತ್ಯ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದವರು ಬೇಡವಾಗುತ್ತಾರೆ... ಎಲ್ಲ ನೋವಿಗೆ ದನಿಯಾಗಿ ಸ್ಪಂದಿಸಿದವರು ಕ್ಷುಲ್ಲಕ ಕಾರಣಕ್ಕೆ ಹೊರೆಯಾಗಿ ಬಿಡುತ್ತಾರೆ... ಆ ವಿಕೃತ ಹೃದಯದವರಿಗೆ ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ, ಅದರ ಅಗತ್ಯವಿಲ್ಲ ಎಂದೆನಿಸಿ ಬಿಡುತ್ತವೆ.
ಪ್ರೀತಿಯ ಸಂಬಂಧ ಶ್ರದ್ಧೆ ಬೇಡುತ್ತ, ಪರಸ್ಪರರ ಬಗ್ಗೆ ನಂಬಿಕೆ ವಿಶ್ವಾಸವನ್ನು ಬಯಸುತ್ತವೆ. ಈ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸ ದಿಢೀರ ಎಂದು ಒಮ್ಮೆಲೆ ಬೆಳೆದು ನಿಲ್ಲುವಂತಹದ್ದಲ್ಲ. ಸಾಕಷ್ಟು ಸಮಯ ಕೇಳುತ್ತ, ದಿನ ಕಳೆದಂತೆ ಪಕ್ವಗೊಳ್ಳುತ್ತ ಸಾಗುತ್ತವೆ. ಇಂದಿನ ಧಾವಂತದ ಯುಗದಲ್ಲಿ ಪ್ರೀತಿ ತನ್ನ ಸೊಬಗನ್ನು ಕಳೆದುಕೊಂಡು ಅರ್ಥಹೀನವಾಗುತ್ತ ಯಾಂತ್ರಿಕವಾಗಿ ಸಾಗುತ್ತಿವೆ. ಶ್ರದ್ಧೆಯಿಲ್ಲದ ಪ್ರೀತಿಯ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಮೂಡಿ ಬಿಡುತ್ತವೆ. ಅವನೇ ನನ್ನ ಪ್ರಪಂಚ ಎಂದು ನವ-ನವೀನ ಕನಸು ಕಾಣುತ್ತ ಬದುಕು ನಡೆಸುತ್ತಿದ್ದ ಹುಡುಗಿಗೆ, ಇನ್ನೊಂದು ಜಗತ್ತು ರಂಗು ರಂಗಾಗಿ ಕಾಣುತ್ತವೆ. ಇಷ್ಟು ದಿನ ಜೊತೆಯಿದ್ದು, ಉಸಿರಲ್ಲಿ ಉಸಿರಾದ ಹುಡುಗ ಬಣ್ಣ ಕಳೆದುಕೊಂಡು ಬಿಳಿಚಿ ಕೊಂಡಂತೆ ಭಾಸವಾಗುತ್ತಾನೆ. ಧುತ್ತೆಂದು ಅಪ್ಪ, ಅಮ್ಮ, ಜಾತಿಯ ಸಬೂಬು ಹೊಂಚು ಹಾಕಿ ಕುಳಿತವರಂತೆ ಅಲ್ಲಿ ಬೇರು ಬಿಟ್ಟಿರುತ್ತದೆ. ಹೀಗೆ ಸುಳ್ಳೇ ಸುಳ್ಳು ಹುಟ್ಟಿಕೊಳ್ಳುವ ತಳುಕು ಪ್ರೀತಿ ಬಿಡಿಸಿಕೊಂಡು ಓಡುವ ಹುನ್ನಾರ ನಡೆಸುತ್ತಿರುತ್ತವೆ. ಆದರೆ, ನಿಜವಾದ ಪ್ರೀತಿ ಹೇಗಾದರೂ ಸೈ, ಎಲ್ಲರನ್ನು ಎದುರಿಸಿ ಒಪ್ಪಿಸೋಣ ಎನ್ನುತ್ತಿರುತ್ತದೆ. ಪ್ರೀತಿಯಿಂದ ವಿಮುಖವಾದ ಜೀವ ನರಳುತ್ತ, ತನ್ನ ಬದುಕನ್ನು ಹಾಳುಗೆಡುವಿಕೊಂಡು, ತಾನು ಉಳಿದು ಹೋದದಕ್ಕೆ ಕಾರಣ ಹುಡುಕಿ, ಕೆದಕಿ ಸೋಲುತ್ತ, ಏಳುತ್ತ ತನ್ನ ಬಗ್ಗೆ ಒಂದು ವಿಧವಾದ ಕೀಳರಿಮೆ ಬೆಳೆಸಿಕೊಂಡು, ಕಾಣದ ಕತ್ತಲೆಗಾಗಿ ಹಂಬಲಿಸುತ್ತಿರುತ್ತವೆ. ವರ್ಷಗಟ್ಟಲೇ ಶ್ರದ್ಧಾ-ಭಕ್ತಿಯಿಂದ ಪ್ರೀತಿಯಿಂದ ನಿರ್ಮಿಸಿದ ಪ್ರೀತಿಯ ಕನಸಿನ ಗೋಪುರ ಕೆಲವೇ ದಿನಗಳಲ್ಲಿ ನೆಲಸಮವಾಗಿರುತ್ತವೆ.
ನನ್ನಷ್ಟಕ್ಕೆ ನಾನು ಏನೇನೋ ಯೋಚನೆ ಮಾಡುತ್ತ ಕುಳಿತಿದ್ದೆ, ಅತ್ತ ಸ್ನೇಹಿತನ ಬಿಕ್ಕಳಿಕೆ ಒಂದೇ ಸಮನೆ ಕೇಳುತಲಿತ್ತು. ಆತ, ಅತ್ತು ಅತ್ತು ಕಣ್ಣೀರಾಗಿದ್ದ. ನಾನಿನ್ನು ಮೇಲೇಳಲಾರೆ ಎಂದು ಬದುಕು ಕಳೆದುಕೊಂಡವರಂತೆ ರೋಧಿಸುತ್ತಿದ್ದ. ಅವನ ಮುಂಗೈಯನ್ನು ನನ್ನ ಅಂಗೈಯಲ್ಲಿಟ್ಟು ಹೇಳಿದೆ, `ಗೆಳೆಯಾ, ಆದದ್ದೆಲ್ಲ ಒಳ್ಳೆಯದಕ್ಕೆ ಅಂದುಕೋ. ಒಂದು ಸುಂದರವಾದ ಬಾಳ್ವೆ ನಡೆಸು. ಅವಳ ನೆನಪು ಬಾರದಂತೆ ಬದುಕಿ ಬಿಡು. ಇಷ್ಟು ವರ್ಷಗಳ ಕಾಲ ನಿಮ್ಮಿಬ್ಬರಲ್ಲಿದ್ದದ್ದು ಪ್ರೀತಿಯಲ್ಲ. ಅದೊಂದು ಕೇವಲ ಆಕರ್ಷಣೆಯ ಸೆಳೆತವಷ್ಟೆ. ಪ್ರೀತಿ ಹೀಗೆ ಇರೋದಿಲ್ಲ. ಅದು ಯಾವತ್ತೂ ಪರಸ್ಪರ ಒಬ್ಬರಿಗೊಬ್ಬರಿಗೆ ಸ್ಫೂರ್ತಿ ಯಾಗಿರುತ್ತದೆ. ಅಲ್ಲಿ ಸೋಲು ಎಂಬುದೇ ಇರುವುದಿಲ್ಲ. ಅದು ಸೋಲಲು ಬಿಡದ ಅದಮ್ಯ ಶಕ್ತಿ. ನಿನ್ನ ಬದುಕಿನ ಬಗ್ಗೆ ನಿನಗೆ ಅತೀವ ಶ್ರದ್ಧೆಯಿರಲಿ, ನಿನ್ನ ಸ್ನೇಹಿತನಾಗಿ ಸದಾ ನಿನ್ನ ಜೊತೆಯಿರುತ್ತೇನೆ, ನಿನ್ನ ನೋವಿಗೆ ದನಿಯಾಗಿ. ಕಿವಿಯಾಗಿ'.
ಮಾತು ಬರದವನಾಗಿ ತನ್ನೆಲ್ಲ ಚೈತನ್ಯ ಕಳೆದುಕೊಂಡಿದ್ದ ಆತ ನನ್ನ ಮಡಿಲಿಗೆ ಕುಸಿದಿದ್ದ. ನೂರ್ಮಡಿಸಿದ್ದ ದುಃಖವನ್ನು ನುಂಗಿಕೊಳ್ಳುತ್ತ, ನನ್ನನ್ನು ನೋಡದೆ ಕೇಳಿದ, `ಅವಳು ನನ್ನನ್ನು ಯಾರಿಗೋಸ್ಕರ, ಯಾಕಾಗಿ ತ್ಯಾಗ ಮಾಡಿದಳು..?'. ಮನಸಲ್ಲೆ ನಕ್ಕು ಉತ್ತರಿಸಿದೆ, `ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ. ಪ್ರೀತಿಯನ್ನು ಧಿಕ್ಕರಿಸಿ ಹೊರ ನಡೆಯುವವರು, ತಮಗೆ ಇನ್ನೂ ಉತ್ತಮ ಎನ್ನುವ ಆಯ್ಕೆಯ ಕಡೆ ಪಯಣ ಬೆಳೆಸಿರುತ್ತಾರೆ. ದೂರಾಗುವ ಮುನ್ನ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು, ಅವರು ಉಪಯೋಗಿಸುವ ಸಮರ್ಥ ಅಸ್ತ್ರವೇ ತ್ಯಾಗ. ಕಾಣದ ಬದುಕಿಗೆ ಯಾರೂ ಕೂಡಾ, ಕೈಯಲ್ಲಿರುವ ಸುಂದರ ಬದುಕನ್ನು ತ್ಯಾಗ ಮಾಡುವುದಿಲ್ಲ. ಅದು ಯಾರೊಬ್ಬರ ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ'.
ಅತ್ತು ಅತ್ತು ಸೋತಿದ್ದ ಗೆಳೆಯ ಅರೆ ಕ್ಷಣದಲ್ಲಿ ನಿದ್ರೆಗೆ ಜಾರಿದ್ದ. ಯಾಕೋ ಅರಿವಿಲ್ಲದೆ ನಾನು ಕೂಡಾ ತುಸು ದುಃಖಿತನಾದೆ. ಮನಸ್ಸು ಪ್ರಕ್ಷುಬ್ಧವಾಗಿತ್ತು. ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಸ್ನೇಹಿತನಿಗೆ ಸಮಾಧಾನ ಪಡಿಸಲು ಪ್ರಯತ್ನಿಸಿದ ಮನಸ್ಸೇ ಮೂಕವಾಗುತ್ತಿತ್ತು. ಕಿಟಕಿಯಾಚೆ ಒಮ್ಮೆ ದಿಟ್ಟಿಸಿದೆ.. ಯಾವುದೋ ಹಿಂದಿನ ನೆನಪು ಮರುಕಳಿಸಿದಂತಾಗಿ ಒಂದೇ ಸಮನೆ ಕಾಡುತ್ತಿದ್ದವು.
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....

ಶುಕ್ರವಾರ, ಮೇ 17, 2013


ಅನುಭವದ ಮರ್ಮ..

`ಅಯ್ಯೋ... ನಡೆದುಕೊಂಡು ಹೋದರೆ ಸುಸ್ತಾಗುತ್ತೇರಿ. ಆಟೋಗೆ ಹೋಗೋಣ' ಎಂದಾಕೆಯ ಮೊಗದಲ್ಲಿ ಬಸವಳಿದ ಕುರುಹು. ಜೊತೆಯಲ್ಲಿಯೇ ಹೆಜ್ಜೆ ಹಾಕಿ ನಡೆಯಬೇಕು ಎಂದುಕೊಂಡ ನನ್ನ ಮನಸ್ಸಿಗೆ ತುಸು ಘಾಸಿಯಾಯಿತಾದರೂ... ಆಕೆಯ ಆರೋಗ್ಯ ಮುಖ್ಯ ಎಂದರಿತು, ಅದೇ ದಿಕ್ಕಿನತ್ತ ಬರುವ ಆಟೋಗೆ ಕೈಮಾಡಿದೆ. ಆಟೋ ಹತ್ತಿದಾಗ ಬಸವಳಿದ ಆಕೆಯ ಮೊಗದಲ್ಲಿ ಕಂಡು ಕಾಣದ ನಿರಾಳತೆ!! ಒಮ್ಮೆ  `ಉಸ್ಸಪ್ಪಾ...' ಎಂದಳು. ಆಟೋ ಚಾರ್ಜ್ ನೀಡಲೆಂಬಂತೆ ಪ್ಯಾಂಟ್ ಜೇಬಿಗೆ ಕೈ ಹಾಕಿದೆ. ಆಗಲೇ ಗೊತ್ತಾಗಿದ್ದು `ಪರ್ಸ್ ' ಎಲ್ಲೋ ಕಳೆದು ಹೋಗಿದೆ' ಎಂದು!
ಆಟೋಗೆ ಹಣ ನೀಡುವುದು ಎಲ್ಲಿಂದ? ಆಕೆಯಲ್ಲಿ ಕೇಳಲು ಮನಸ್ಸು ಬರುತ್ತಿಲ್ಲ. ಏನು ಮಾಡುವುದು...!? ಅನಿವಾರ್ಯ ಕೇಳಲೇ ಬೇಕು. `ಆಟೋಗೆ ನೀಡಲು ಹಣ ಇದೆಯಾ? ನನ್ನ `ಪರ್ಸ್ ' ಎಲ್ಲಿಯೋ ಕಳೆದುಕೊಂಡು ಬಿಟ್ಟೆ' ಎಂದೆ. 30ರೂ. ತೆಗೆದು ಕೊಟ್ಟಳು. ಮಾರ್ಗ ಮಧ್ಯದಲ್ಲಿಳಿದು ಅವಳು ಮನೆ ಕಡೆ ಹೆಜ್ಜೆ ಹಾಕಿದಳು. ನಾನು ನನ್ನ  ಮನೆ ಸನಿಹ ಇಳಿದೆ. ಭಗವಂತ! ಜೀವನದಲ್ಲಿ ಹೊಸ ಅನುಭವವೊಂದನ್ನು ನೀಡಿದಕ್ಕೆ ಮನಸ್ಸಲ್ಲೆ ಥ್ಯಾಂಕ್ಸ್ ಎಂದೆ. ಕಳೆದುಕೊಂಡ `ಪರ್ಸ್ 'ಲ್ಲಿ 4,500 ರೂಪಾಯಿ, 2 ಎಟಿಎಂ ಕಾ ಹಾಗೂ ಕಾರ್ಡ್ ಅವಶ್ಯಕ ಸಣ್ಣಪುಟ್ಟ ಕಾಗಪತ್ರಗಳು ಇದ್ದವು. 2 ಎಟಿಎಂ ಕಾರ್ಡನ್ನು ಸಹಾಯ ವಾಣಿಗೆ ಕರೆ ಮಾಡಿ ಬ್ಲಾಕ್ ಮಾಡಿಸಿದೆ.(ಸಮಯ ರಾತ್ರಿ 8.30).
ಸ್ನೇಹಿತೆಗೆ ಏನೋ ನಂಬಿಕೆಯಿತ್ತು. `ಪರ್ಸ್ ' ಕಚೇರಿಯಲ್ಲಿ ಬಿಟ್ಟಿರಬಹುದೇನೋ ಎಂದು. ಆದರೆ, ಕಳೆದುಕೊಂಡ ಬಗ್ಗೆ ಖಚಿತ ಪಡಿಸಿದಾಗ ಬೇಸರ ವ್ಯಕ್ತಪಡಿಸಿದಳು. ಆದರೆ ನನಗೆ ಮಾತ್ರ ಒಂದಿನಿತು ನೋವಾಗಲಿಲ್ಲ. ಆದರೆ, ಸ್ವಲ್ಪ ಬೇಜಾರಾಗಿತ್ತು! ನಗುನಗುತ್ತಲೇ `ಪರ್ಸ್ ' ಕಳೆದು ಕೊಂಡ ಪುರಾಣದ ಬಗ್ಗೆ ಆಕೆಗೆ ಹೇಳಿದೆ. `ಅಲ್ಲಾ.. ನೋವಿನ ವಿಷಯಕ್ಕೆ ನಗು ಯಾಕೆ?' ಎಂದು ಅವಳು ನನ್ನ ಮೇಲೆ ತುಸು ಕುಪಿತಳಾದಳು. ನೋವಿಲ್ಲದಿದ್ದರೂ ಬೇಸರವಿತ್ತಲ್ಲ... ಅದು ಕೂಡಾ ಕೆಲ ಸಮಯದ ನಂತರ ಮಾಯವಾಯಿತು!
ಆಕೆಯ ಜನ್ಮದಿನಕ್ಕೆಂದು `ನಮ್ಮಮ್ಮ ಅಂದ್ರೆ ನಂಗಿಷ್ಟ' ಎಂಬ ಪುಸ್ತಕವನ್ನು ಅಂದೆ ಉಡುಗೊರೆಯಾಗಿ ನೀಡಿದ್ದೆ. ಮನೆಗೆ ಹೋಗಿ ನೋಡಿದ ಆಕೆಗೆ ಅದರಿಂದಾದ ಸಂತೋಷ ಅಷ್ಟಿಷ್ಟಲ್ಲ! `ನನ್ನ ಇಷ್ಟದ ಪುಸ್ತಕ ನೀಡಿದ್ದಕ್ಕೆ ಧನ್ಯವಾದ' ಎಂದಳು. ಆಕೆಯ ಮೊಗ ಹಾಗೂ ಮನಸ್ಸು ಆ ಒಂದು ಪುಸ್ತಕ ಅರಳಿಸಿತ್ತಲ್ಲ ಅಷ್ಟು ಸಾಕು.(ನಾವು ನೋವಲ್ಲಿದ್ದರೂ ಇನ್ನೊಬ್ಬರ ಮೊಗದಲ್ಲಿ ನಗು ತರಬೇಕು) `ಕಳೆದು ಕೊಂಡ`ಪರ್ಸ್ ' ಹಾಗೂ ಹಣ ಅವಳ ಸತೋಷದ ಮುಂದೆ ಏನೂ ಅಲ್ಲ...!'


ಸ್ನೇಹಿತನೊಬ್ಬನಿಗೆ ತಿಳಿಸಿದೆ, ಆತ ಕೇಳುತ್ತಿದ್ದಂತೆ ಬೇಸರದಿಂದ... ಏನೇನೋ ಹಲುಬಿದ. ಆತನೂ ಕೂಡಾ ಒಂದೆರಡು ಬಾರಿ `ಪರ್ಸ್ ' ಕಳೆದುಕೊಂಡಿದ್ದ. ಅದರ ಅನುಭವ ಏನೂ ಎನ್ನುವುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಪೊಲೀಸ್ ದೂರು ನೀಡು! ಎಲ್ಲಿ ಬಿಟ್ಟಿದ್ದೀಯಾ ನೆನಪಿಸಿಕೊ! ಸಾಧ್ಯವಾದರೆ ಆ ಸ್ಥಳಕ್ಕೆ ಒಮ್ಮೆ ಹೋಗಿ ಹುಡುಕು! ಎಂದೆಲ್ಲ ಸಲಹೆ ನೀಡಿದ. 50ಪೈಸೆ ರಸ್ತೆಯಲ್ಲಿ ಬಿದ್ದರೆ ಬಿಡದ ನಮ್ಮವರು,`ಪರ್ಸ್ ' ಬಿದ್ದರೆ ಬಿಡುತ್ತಾರೆಯೇ? ಅದರಲ್ಲೂ ಸಾವಿರಾರು ರೂಪಾಯಿಗಳಿರುವ `ಪರ್ಸ್ ' ನಮಗೆ ಪುನಃ ದೊರೆಯುತ್ತವೆಯೇ? ಹಣವಿದ್ದ ಪರ್ಸ್ ಸಿಕ್ಕಾತ ವಿಳಾಸ ಪತ್ತೆ ಮಾಡಿ ನನಗೆ ತಂದು ಕೊಡುವಷ್ಟು ಪ್ರಾಮಾಣಿಕನೇ? ಇಂತಹ ಯಾವ ಪ್ರಶ್ನೆಗೂ ನನಗೆ `ಅಸಾಧ್ಯ ಎಂಬ ಉತ್ತರ'ವೇ ದೊರಕಿತ್ತು. ಇತಿಹಾಸದಿಂದ ಪಾಠ ಕಲೆಯಬೇಕೆ ಹೊರತು, ಅದನ್ನು ಚಿಂತಿಸುತ್ತ ಕಾಲಹರಣ ಮಾಡಿ, ಮನಸ್ಸನ್ನು ಹಾಳುಗೆಡುವುದು ತರವಲ್ಲ. ಇದು ನನ್ನ ಧ್ಯೇಯ.
`ಪರ್ಸ್ ' ಕಳೆದುಕೊಂಡ ಮಾರನೆ ದಿನ ಸಂಕ್ರಾತಿ. ಮನೆಕಡೆ ಮುಖ ಹಾಕದೆ ಐದಾರು ತಿಂಗಳಾಗಿತ್ತು. ಹಬ್ಬದ ಸಡಗರದ ವಾತಾವರಣ ಮನೆಯೆಲ್ಲ ಪಸರಿಸಿತ್ತು. ಹಬ್ಬದ ಖರ್ಚಗೆ ನನ್ನಲ್ಲಿ ಹಣವಿರಲಿಲ್ಲ. ಎಟಿಎಂ ಕಾರ್ಡನಲ್ಲಿದೆ? ಆದರೆ, ಅದನ್ನು ಕಳೆದುಕೊಂಡಿದ್ದೇನೆ. ಬ್ಯಾಂಕಿಗೆ ಹೋಗಿ ತರೋಣ ಎಂದರೆ ಸಂಕ್ರಾತಿಯ ಸೂಟಿ! `ಸಂಕ್ರಾಂತಿ ಕಾಳು' ನೀಡಲು ಬಂದವರಿಗೆ ಹಣ ನೀಡುವ ಪರಿಪಾಠ ಬೆಳಿಸಿಕೊಂಡು ಬಂದ ನಾನು ತೆಪ್ಪಗೆ ಕುಳಿತುಬಿಟ್ಟೆ! `ಕಾಳು ನೀಡಿದವರಿಗೆ... ಬಾಳು ಚೆನ್ನಾಗಿರಲಿ' ಎಂದಷ್ಟೆ ಹಾರೈಸಿ ಕಳುಹಿಸಿದೆ!
ಎಟಿಎಂ ಕಾರ್ಡ್ ಕಳೆದರೇನಂತೆ, ನೆಟ್ ಬ್ಯಾಂಕಿಂಗ್ ಇದೆಯಲ್ಲ. ಬ್ಯಾಂಕ್ ಖಾತೆಯ ಸ್ಥಿತಿಗತಿ ಏನಾಗಿದೆಯೆಂದು ತಿಳಿಯಲು ಮನೆಯ ಕಂಪ್ಯೂಟರ್ ಸ್ಟಾರ್ಟ್ ಮಾಡಿ, ಅಂತರ್ಜಾಲಕ್ಕೆ ಲಗ್ಗೆ ಇಟ್ಟೆ!! ನೆಟ್ ಬ್ಯಾಂಕಿಂಗ್ ಗೆ ಪ್ರವೇಶ ಪಡೆದು, ಸ್ಥಿತಿಗತಿ ಪರಿಶೀಲಿಸಿದೆ. ಆಗ ಮತ್ತೊಂದು ಷಾಕ್!! ದಿ. 13, ರಾತ್ರಿ 7.25.30 ಸೆ.ಗೆ ಯಾರೋ ಅಪರಿಚಿತರು, ಎಟಿಎಂ ಕಾರ್ಡಿನಿಂದ ಶಾಪಿಂಗ್ ಮಾಡಿದ್ದಾರೆ! ಅದು ಬರೋಬ್ಬರಿ 7,300 ರೂಗಳಷ್ಟು!! ಯಾರಂತ ಪತ್ತೆ ಹಚ್ಚುವುದು? ಏನು ಮಾಡುವುದು? ಎನ್ನುತ್ತ ಯೋಚಿಸುತ್ತಿದ್ದೆ. ಅಮ್ಮನಿಗೆ ಎಲ್ಲ ವಿಷಯವನ್ನು ತಿಳಿಸಿದೆ. ನನ್ನ ಮನದ ಭಾವನೆಯನ್ನು ಅರಿತ ಮಾತೃ ಹೃದಯ... `ಅದಕ್ಕೆಲ್ಲ ಯಾಕೋ ಬೇಜಾರು ಪುಟ್ಟು...? ನೀ ಜೋಪಾನ ಇದ್ದೀಯಲ್ವಾ.. ನೀ ಕಳೆದು ಹೋಗಿಲ್ಲ ಅಲ್ವಾ... ಅಷ್ಟು ಸಾಕು' ಎಂದಳು. ಅಮ್ಮನಿಗೆ ಗೊತ್ತು, ಮಗ ಎಂದೂ ಈ ರೀತಿ ನಿರ್ಲಕ್ಷ್ಯ ಮಾಡಿದವನಲ್ಲ. ಯಾವುದೋ `ಮನಸ್ಥಿತಿ'ಯಲ್ಲಿ ಎಡವಿ ಬಿದ್ದಿದ್ದಾನೆ. ಅದಕ್ಕೆ ಹೀಗಾಗಿದೆ ಎಂದು. ಒಟ್ಟಾರೆ, 11,700 ರೂಪಾಯಿಗಳನ್ನು ಕಳೆದುಕೊಂಡ `ಅಪ್ಪ-ಅಮ್ಮ'ರ ಹೆಮ್ಮೆಯ ಪುತ್ರ ಎಂದು ಆ ಕ್ಷಣದಲ್ಲಿ ಹೆಸರು ಪಡೆದೆ!
ನನ್ನ ಇನ್ನೊಂದು ಬ್ಯಾಂಕ್ ಖಾತೆಯಲ್ಲಿ ಅಲ್ಪಸ್ವಲ್ಪ ಹಣವಿತ್ತು. ದಿ. 15ರಂದು ಬ್ಯಾಂಕ್ಗೆ ಹೋಗಿ ಅದನ್ನೆ ತೆಗೆದುಕೊಂಡು ಬಂದೆ. ಮಗನ ದಾರುಣ ಸ್ಥಿತಿಯನ್ನು ಕಂಡು ಅಪ್ಪ ಖರ್ಚಿಗೆಂದು 8ಸಾವಿರ ರೂ. ನೀಡಲು ಬಂದರು. ಆಗ `ಅಪ್ಪಾ, ಹಣದ ಅವಶ್ಯವಿದ್ದಾಗ ಇದಕ್ಕಿಂತಲೂ ಹೆಚ್ಚಿಗೆ ಕೇಳುತ್ತೇನೆ. ಆಗ ಖಂಡಿತ ಕೊಡಬೇಕು' ಎಂದೆ. ಅಪ್ಪನಿಗೆ ಬೇಸರವಾಯಿತು. 11ಸಾವಿರ ರೂ. ಕಳೆದುಕೊಂಡಾಗಲೂ ಕಣ್ಣಲ್ಲಿ ನೀರು ಹಾಕದ ನಾನು, ಅಪ್ಪನ ಆ ಕ್ಷಣದ ಮುಖ ನೋಡಿ, ಅತ್ತುಬಿಟ್ಟೆ!! 2ಸಾವಿರ ರೂ. ತೆಗೆದುಕೊಂಡು, `ಅಪ್ಪ, ಸದ್ಯ ಇಷ್ಟು ಸಾಕು' ಎಂದೆ.
ಪ್ರಬುದ್ಧತೆಯಿಂದ ಜವಾಬ್ದಾರಿ ನಿಭಾಯಿಸುವ ಮಗ`ಪರ್ಸ್ ' ಕಳೆದುಕೊಂಡಿದ್ದು ಹೇಗೆ...? ಸ್ಪಷ್ಟ-ದಿಟ್ಟ ಹೆಜ್ಜೆ ಮೂಲಕ ಗುರಿ ತಲುಪುತ್ತಿರುವ ಸುಪುತ್ರ ಎಡವಿದ್ದು ಹೇಗೆ...? ಎಂದು ನನ್ನಮ್ಮ ದಾರಿಗುಂಟ ಕೇಳುತ್ತ ಬಂದಳು. ನನ್ನ ಆತ್ಮ ಸ್ವರೂಪಿಯಾದ ಆ ಮಾತೆಗೆ ತಿಳಿಯದ್ದು ಏನಿದೆ? `ಏನು ಮಗಾ.... ಯಾವ್ದಾದ್ರೂ ಹುಡುಗಿಯನ್ನ ಪ್ರೀತಿಸ್ತಿದ್ದೀಯಾ? ನಿನ್ನ ಹೃದಯಕ್ಕೆ ಲಗ್ಗೆ ಇಟ್ಟ ಆ ಮುದ್ದು ಮಗು ಯಾರಂತ ಹೇಳೋ ಕಂದಾ...!? ಎಂದು ಒತ್ತಾಯಿಸಿದಳು. ಅವಳ ಮಾತಿಗೆ ಕಟ್ಟುಬಿದ್ದು ಉತ್ತರಿಸುವಷ್ಟರಲ್ಲಿ ಬಸ್ ಹಾರ್ನ್ ಮಾಡುತ್ತ ಹತ್ತಿರದಲ್ಲಿಯೇ ಬಂದು ನಿಂತು ಬಿಟ್ಟಿತು. ಮುಗುಳ್ನಗುತ್ತ `ಅಮ್ಮಾ.... ಬರ್ತೀನಿ' ಎಂದು ಟಾಟಾ ಮಾಡಿ... ಉಸಿರನ್ನೊಮ್ಮೆ ಮೇಲಕ್ಕೆಳೆದುಕೊಂಡೆ!!
(ಇದು ಕೇವಲ ಕಾಲ್ಪನಿಕ)

ಸೋಮವಾರ, ಮೇ 13, 2013


ಪ್ರೀತಿ ಹುಟ್ಟೋದು......?

ಜಿದ್ದಿಗೆ ಬಿದ್ದು ಪ್ರೀತಿಸಲೇ ಬೇಕು ಅಂತ, ಅದರ ಹಿಂದೆಯೇ ಹೊರಟರೆ, ಖಂಡಿತ ಅದು ದೊರಕದು. ಹಾಗೆ ಇಷ್ಟ ಪಟ್ಟಾಗ ಪ್ರೀತಿ ಬೇಕು ಅಂದಾಗ ಅದು ಹುಟ್ಟುವುದೂ ಇಲ್ಲ. ಅದು ಅನಿರೀಕ್ಷಿತ ಕ್ಷಣದಲ್ಲಿ ಅರಿವಿಲ್ಲದೆ ಪರಸ್ಪರ ಎರಡು ಹೃದಯಗಳಲ್ಲಿ ಹುಟ್ಟಿಕೊಳ್ಳುವಂತಹದ್ದು.
ಯಾವುದೋ ಚೆಂದದ ಹುಡುಗ/ಹುಡುಗಿ ಕಂಡಾಗ ಇವನೇ/ಇವಳೇ ಇಷ್ಟ ಎಂದು ಅವರ ಮುಂದೆ ಪ್ರೇಮ ನಿವೇದನೆ ಮಾಡಿ, `ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ, ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ' ಎಂದು ಕೇಳಿಕೊಳ್ಳುವುದು ಆಕರ್ಷಣೆ ಪ್ರೀತಿಯಷ್ಟೇ! ಅದು ನಿಜವಾದ ಪ್ರೀತಿಯಾಗಲಾರದು. ಪ್ರೀತಿ ಹುಟ್ಟೋದೆ ಒಂದು ಆಕಸ್ಮಿಕ... ಅದು ಒಂದು ವಿಸ್ಮಯ. ಅದು ನಿಜವಾಗಿಯೂ ಮೊಳಕೆ ಒಡೆಯೋದು ಕಣ್ಣಿನಿಂದ. ಪರಸ್ಪರ ಎರಡು ಕಣ್ಣುಗಳು ಒಂದನ್ನೊಂದು ಕ್ಷಣಕಾಲ ಬೆರೆತಾಗ, ಹೃದಯಕ್ಕೆ ತಾಗಿ, ಅದರ ಅಂತರಾಳದಲ್ಲಿ ನಡುಕವಾಗಿ, ಮನಸ್ಸು ಮರ್ಕಟನಂತಾಗಿ ಯಾವುದೋ ಒಂದು ಅರಿವಿಲ್ಲದ ಲೋಕದಲ್ಲಿ ಪಯಣಿಸಿದಂತಾಗುತ್ತದೆ. ನೋಟದ ಸಮ್ಮಿಲನದ ಸಂದರ್ಭದಲ್ಲಿ ಇಬ್ಬರ ಮೊಗದಲ್ಲಿಯೂ ಸೂಕ್ಷ್ಮ ಬದಲಾವಣೆ, ಕಣ್ಣಂಚಿನಲ್ಲಿ ಚಂಚಲತೆ, ನೋಟಕ್ಕೆ ಸಿಕ್ಕಿಹಾಕಿಕೊಂಡನೆಂಬ ಭಾವನೆಯಿಂದ ತಪ್ಪಿಸಿಕೊಳ್ಳುವ ಆತುರ ಮನದಲ್ಲಿ ಮೇಳೈಸುತ್ತವೆ. ಈ ವರ್ಣನಾತೀತ ಮಧುರ ಅನುಭವ ಮತ್ತು ಆತುರದ ಕ್ಷಣಗಳೇ ಪ್ರೀತಿಯ ವಸಂತ ಕಾಲ....!


ಕಣ್ಣಂಚಿನಿಂದ ಹುಟ್ಟಿದ ಪ್ರೀತಿ ಅನಿರೀಕ್ಷಿತವಾಗಿ ಎದುರಾಗುತ್ತಲೇ ಹೋಗುತ್ತವೆ. ಅರಿವಿಲ್ಲದೆ ಆ ಪ್ರೀತಿಯ ಸುತ್ತ ಮನಸ್ಸು ಓಡಾಡುತ್ತ, ಅದರ ಸನಿಹದಲ್ಲಿರಲು ಚಡಪಡಿಸುತ್ತವೆ. ಎದುರಿಗೆ ಬರಲು ಭಯ... ಬಿಟ್ಟಿರಲು ಬೇಸರ... ಮಾತನಾಡ ಬೇಕೆಂದರೆ ಸಂಕೋಚ... ತೊದಲುವ ನಾಲಗೆ... ಇವುಗಳ ನಡುವೆಯೇ, `ಪ್ರೀತಿಯನ್ನು ನೋಡಬೇಕು, ಅದರ ಜೊತೆ ಮಾತನಾಡಬೇಕು' ಎಂದು ಮನಸ್ಸು ಒಂದೇ ಸಮನೆ ಹಪಹಪಿಸುತ್ತಿರುತ್ತವೆ. ಪರಸ್ಪರ ಮನಸ್ಸುಗಳು ಒಂದನ್ನೊಂದು ಕಲೆತು, ಕಲ್ಪನೆಯಲ್ಲೇ ಒಂದಾಗಿ ಬಿಟ್ಟಿರುತ್ತವೆ. `ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ' ಎಂಬ ಒಲವಿನ ನುಡಿ ಝರಿಯಾಗಿ ಹರಿದು, ಇನ್ನೊಂದು ಹೃದಯದಿಂದ ಹೊರಬರುವ ಬಿಸಿಯುಸಿರಿಗೆ ತಾಗಿ ಪ್ರೀತಿಯ ಅಧಿಕೃತ ಮುದ್ರೆ ಒತ್ತಿ ಬಿಡುತ್ತವೆ. ಚಂಚಲ ನಯನಗಳಿಂದ ಹುಟ್ಟಿದ ಪ್ರೀತಿ ಎರಡು ಹೃದಯಗಳನ್ನು ಬೆಸೆದು ತನ್ನ ಅಧಿಪತ್ಯ ಸಾಧಿಸುತ್ತವೆ. ನಂತರ ಏನಿದ್ದರೂ ಪ್ರೇಮದ್ದೆ ಸಾಮ್ರಾಜ್ಯ.....!
ಸಾಮಾನ್ಯವಾಗಿ ಎಲ್ಲರೂ ಪ್ರೀತಿಯ ಹಿಂದೆ ಬೀಳಲು ತವಕಿಸುತ್ತಾರೆ. ಅದು ತಪ್ಪಲ್ಲ. ಬದುಕಿನ ಅನಿರೀಕ್ಷಿತ ಸಂದರ್ಭದಲ್ಲಿ ಎದುರಾಗೋ ಆ ಪ್ರೀತಿ, ವರ್ಣನಾತೀತ. ಸುಂದರ ಭಾವನೆಗಳ ಪಲ್ಲಕ್ಕಿಯ  ಮೆರವಣಿಗೆ. ಹೇಳಲಾಗದ ಅನುಭವಿಸಲಾರದ ಮಧುರ ಯಾತನೆ. ಪ್ರೀತಿ ಕಣ್ಣಿನಿಂದ ಚಿಗುರೊಡೆಯುತ್ತವೆ ಎಂದು ಕಂಡಕಂಡವರ, ಇಷ್ಟಪಟ್ಟವರ ಕಣ್ಣನ್ನೆ ನೋಡುತ್ತ ಅದನ್ನು ಹುಡುಕುವುದು ತರವಲ್ಲ. ಆ ಪ್ರೀತಿಯ ನೋಟಕ್ಕೆ ಇನ್ನೊಂದು ನೋಟ ಸೇರುವುದು ಕೇವಲ ಆಕಸ್ಮಿಕ. ಹಾಗೆ ಅರಿವಿಲ್ಲದೆ ಸಂಭವಿಸುವ ಒಂದು ವಿಸ್ಮಯ.
ಪ್ರೀತಿಸಬೇಕೆಂಬ ಗುಂಗಿನಲ್ಲಿ ಸೌಂದರ್ಯದ ಹಿಂದೆ ಬಿದ್ದು, ಇನ್ನಿಲ್ಲದ ಮೋಹ, ಆಸೆಗೆ ಬಲಿಯಾಗಿ ಪ್ರೀತಿಯಿಲ್ಲದೆ ಇದ್ದರೂ ಯಾರ್ಯಾರನ್ನೋ ಇಷ್ಟಪಟ್ಟು, ಬದುಕನ್ನು ಕುರುಡು ಪ್ರೀತಿಗೆ ಬಲಿ ಕೊಡಬಾರದು. ಪ್ರೀತಿಸುವ ಪ್ರೀತಿ ಜೀವನಕ್ಕೆ ಚೈತನ್ಯದ ಚಿಲುಮೆಯಾಗಬೇಕು. ಮುಗ್ಗರಿಸಿ ಬೀಳುವ ಬದುಕನ್ನು ಕೈ ಹಿಡಿದು ಆಲಂಗಿಸಬೇಕು. ಉಸಿರು ಇರುವವರೆಗೂ ಉಸಿರಲ್ಲಿ ಉಸಿರಾಗಿ ಅದು ಬೆರೆತಿರಬೇಕು. ಸುಳ್ಳೆ, ಆ ಪ್ರೀತಿಯ ಹೆಸರಲ್ಲಿ ಬದುಕನ್ನು ದುರ್ಗತಿಗೆ ಕೊಂಡೊಯ್ಯುವುದು ಸರಿಯಲ್ಲ.... ಏನಂತಿರಾ ಸ್ನೇಹಿತರೇ.....?

(ಪ್ರೀತಿ ಕೇವಲ ಕಣ್ಣಿನಿಂದ ಮಾತ್ರ ಹುಟ್ಟುವುದಿಲ್ಲ... ಅದು ಕೂಡಾ ಒಂದು ಕಾರಣವಷ್ಟೇ! ಪ್ರೀತಿ ಹುಟ್ಟಲು ನಾನಾ ಕಾರಣಗಳಿವೆ....... 

ಭಾನುವಾರ, ಮೇ 5, 2013


ಹೀಗೊಂದು ಭಾವ...

ನಿನಗಾಗಿ ಕಾಯುತ್ತಾ... 

ಅದು ನನ್ನದೇ ಆದ ಒಂದು ಭಾವ ಲೋಕ. ಅಲ್ಲಿ ನಾನೊಬ್ಬನೇ ಹೊರತು, ಮತ್ತ್ಯಾರು ಇಲ್ಲ. ಆದರೆ ನನ್ನೊಂದಿಗೆ ಕಾಡಿದ ಆಕೆಯ
ಒಂದಿಷ್ಟು ನೆನಪುಗಳಿವೆ. ಆ ನೆನಪುಗಳೇ ನನ್ನ ಸಂಗಾತಿ..... ಒಂಟಿತನದ ಭಾವ ಸಂಗಾತಿ!
ಸಂಬಂಧಗಳನ್ನು ಭಗವಂತ ಬೆಸೆದಿರುತ್ತಾನಂತೆ. ನಾನೇನು ಆಕೆಯ ಬಂಧುವಲ್ಲ, ಬಳಗವಲ್ಲ, ಪ್ರೇಮಿಯಲ್ಲ. ನನಗೂ ಆಕೆಗೂ ಯಾವುದೇ ಸಂಬಂಧವೂ ಇಲ್ಲ. ಸ್ನೇಹ ಎಂಬ ಪ್ರಶ್ನೆ ಮೂಡಿದರೂ ಆಕೆಯಿಂದ ಸರಿಯಾದ ಉತ್ತರ ದೊರೆತಿಲ್ಲ. ಆದರೂ ಹೊತ್ತಲ್ಲದ ಹೊತ್ತಲ್ಲಿ ನನ್ನನ್ನು ಕಾಡುತ್ತಿರುತ್ತಾಳೆ!
ಆಕೆಯ ಕಿರುನಗೆ, ಸ್ವಾಭಿಮಾನದ ನಡಿಗೆ, ಸೌಮ್ಯಗುಣ, ಮುದ್ದು ಮಾತು, ತುಸು ನೋಟ, ನೀಡಿದ ಭರವಸೆ, ರಾತ್ರಿಯೆಲ್ಲ ಹರಿದಾಡಿದ ಸಂದೇಶಗಳು, ಲೆಕ್ಕವಿಲ್ಲದಷ್ಟು ಮಾತುಗಳು ಹೀಗೆ ಪ್ರತಿಯೊಂದು ಕೂಡಾ ಸ್ಮೃತಿ ಪಟಲದೊಳಗೆ ಸುಳಿಯುತ್ತ ಕಾಡುತ್ತಿರುತ್ತವೆ. ಅದು ನನ್ನನ್ನು ಕಾಡುವ ಸವಿ ನೆನಪಾಗಿ ಬಿಟ್ಟಿವೆ. ಪ್ರತಿ ಉಸಿರು ಅವಳೇನೆ... ದೇಹದಲ್ಲಿನ ಪ್ರತಿ ಹನಿ ಹನಿಯ ರಕ್ತದಲ್ಲೂ ಅವಳೇ.. ಅವಳ ಕಣ್ಣಿನ ಸೌಂದರ್ಯ ನನ್ನ ಕಣ್ಣಲ್ಲಿ ತುಂಬಿಕೊಳ್ಳುವ ತವಕ. ಆಕೆಯ ಗೆಜ್ಜೆಯ ಶಬ್ದದೊಂದಿಗೆ ಹೆಜ್ಜೆಯಿಡುವ ಬಯಕೆ. ಅವಳ ಕೈ ಬೆರಳ ಸಂದಿಯಲ್ಲಿ ನನ್ನ ಕೈಬೆರಳ ಬೆಸೆದು, ಮೌನವಾಗಿ ನಡೆಯುವ ಆಸೆ. ಅವಳ ಪರಿಚಯವಾದಾಗಿನಿಂದ ಏನೇನೋ ಕನಸುಗಳು... ನೂರಾರು ವಿಚಾರಗಳು!
ನಿದ್ರೆಯಿಲ್ಲದ ರಾತ್ರಿಗಳು ತೀರಾ ಮಾಮೂಲು. ಕಾರಣವೇ ಇರಲಿಲ್ಲ ನಾ ಅವಳನ್ನು ಇಷ್ಟಪಡಲು. ಅವಳಿಗೆಂದು ಬರೆದಿಟ್ಟ ಅಪೂರ್ಣ ಪತ್ರದ ಸಾಲುಗಳು ಲೆಕ್ಕವಿಲ್ಲ! ಅರ್ಧಕ್ಕೆ ನಿಂತ ಪತ್ರಗಳನ್ನೆಲ್ಲ ಮುಂದುವರೆಸಲು ಪ್ರಯತ್ನಿಸಿದಾಗ ಮನಸ್ಸು ವಿಪರೀತ ಹೋರಾಟಕ್ಕಿಳಿಯುತ್ತವೆ. ಪತ್ರದ ಅಂತ್ಯ ದೂರವಿದ್ದರೂ, ಬರೆಯಲು ಪದಗಳೇ ಸಿಗದೇ ಪೇಚಾಡುತ್ತೇನೆ.
ಸುಮ್ಮನೆ ಎದುರಾಗುತ್ತಾಳೆ, ತುಸು ನೋಟದಲ್ಲೆ ಎಲ್ಲವನ್ನು ಹೇಳಿ ಕ್ಷಣಾರ್ಧದಲ್ಲಿಯೇ ಮರೆಯಾಗುತ್ತಾಳೆ. ಇಬ್ಬರೂ ಮುನಿಸಿಕೊಳ್ಳದ ದಿನಗಳಿಲ್ಲ... ಆದರೂ ಪ್ರೀತಿಯ ಪದಗಳಿಗೆ ಬರವಿಲ್ಲ. ಪ್ರತಿ ದಿನದ ಮುಂಜಾನೆ ದೇವರ ಪ್ರಾರ್ಥನೆಯ ಬದಲು, ಪರಸ್ಪರ ಸಂಭಾಷಣೆಯ ಮೂಲಕ ಪ್ರಾರಂಭವಾಗುತ್ತವೆ. ಅವಳು ಹೇಳಬಾರದ, ಹೇಳಲಾಗದ ಎಲ್ಲ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ. ಆಗಷ್ಟೆ ಅವಳ ಮನಸ್ಸಿಗೆ ತುಸು ಸಮಾಧಾನ. ಅದಕ್ಕೆ ಪ್ರತಿಯಾಗಿ ನಾಲ್ಕು ಸಾಂತ್ವನದ ಮಾತುಗಳು ನನ್ನಿಂದ.
ಹಮ್ಮು ಬಿಮ್ಮಿಲ್ಲದ ಆಕೆಯ ಮನಸ್ಸು ಒಂದು ಮಗುವಿನಂತೆ. ಆದರೆ, ಕೆಲವು ಬಾರಿ ಜಿದ್ದಿಗೆ ಬಿದ್ದಳೆಂದರೆ ಎದುರಿಗಿದ್ದವರು ಸೋಲಲೇಬೇಕು. ಒಮ್ಮೊಮ್ಮೆ ಅವಳು, `ನಿನ್ನ ನೋಡಬೇಕು, ಒಂದೆರಡು ನಿಮಿಷ ಮಾತನಾಡಬೇಕು' ಸಿಗ್ತಿಯಾ ತಾನೆ?' ಎಂದು ಕೇಳುತ್ತಾಳೆ. ಇಲ್ಲ ಎಂದರೆ ಗೋಗರೆಯುತ್ತಾಳೆ. `ಕ್ಷಮಿಸು ಆಗಲ್ಲ' ಎಂದು ಹೇಳಿದರೆ ದಿನವಿಡೀ ರಾದ್ದಾಂತ, ಕೋಪ ಅವಳನ್ನು ಬಿಗಿದಪ್ಪಿರುತ್ತವೆ. ಪರಿಚಯದವರು ಎದುರಿದ್ದಾಗ ಅವಳು ಎಂದಿಗೂ, ನಾವಿಬ್ಬರು ಪರಸ್ಪರ ಹಚ್ಚಿಕೊಂಡಿದ್ದೇವೆ ಎಂಬ ಸಣ್ಣ ಕುರುಹನ್ನು ನೀಡುವುದಿಲ್ಲ. ನಾನೆ ಎಲ್ಲಿಯಾದರೂ ಆ ವಿಷಯದಲ್ಲಿ ಎಡುವುತ್ತೇನೇನೋ ಎಂಬ ಭಯ. ಆದರೆ ಬೆರಳೆಣಿಕೆಯಷ್ಟು ಸ್ನೇಹಿತರಿಗಷ್ಟೇ ಗೊತ್ತು, ನಾವು ಪರಸ್ಪರ ಇಷ್ಟಪಟ್ಟಿದ್ದೀವಿ ಅಂತ? ಅದರಲ್ಲಿ ಒಬ್ಬ ಸ್ನೇಹಿತನಿಗಂತೂ ಸಂಪೂರ್ಣ ಗೊತ್ತು `ನಾವಿಬ್ಬರೂ ತುಂಬಾ ಹಚ್ಚಿಕೊಂಡಿದ್ದೇವೆ' ಎಂದು! ಆತ ಆಗೊಮ್ಮೆ ಈಗೊಮ್ಮೆ ನನ್ನನ್ನು ಕಾಡಿಸುತ್ತ ಪೀಡಿಸುತ್ತಲೇ ಇರುತ್ತಾನೆ. ಸ್ವಾಭಿಮಾನದ ಗೋಡೆ ನಾನು ಕೆಡವುತ್ತೇನೆ ಎಂದು....!
ಅವಳು ನನ್ನ ಬದುಕಿನ ಸ್ಪೂರ್ತಿ. ಕಾಡುತ್ತ ನೆನಪಾಗುತ್ತ ಹೊಸ ಉತ್ಸಾಹವನ್ನು ತುಂಬುವ ಚಿಲುಮೆ. ಪದೇ ಪದೇ ಮೌನವಾದರೂ, ಮರಳಿ ಮುನಿಸಿಕೊಂಡರೂ, ಕೊನೆಗೆ ಅವಳು ನನ್ನ ದ್ವೇಷಿಸಿದರೂ ನನಗೆ ಇಷ್ಟಾನೆ!
ಆದರೆ, ಹೇಳಲಾಗದ ಮಾತೊಂದು ಇಬ್ಬರನ್ನು ಕಟ್ಟಿಹಾಕಿದೆ. ಅವಳು ನಾ ಹೇಳಲಿ ಎಂದು.... ನಾ ಅವಳು ಹೇಳಲಿ ಎಂದು....  ಇಬ್ಬರೂ ಮೌನವಾಗೆ ದಿನ ದೂಡುತ್ತಿದ್ದೇವೆ!!! ಕಾದು ನೋಡೋಣ... ಏನು ಎತ್ತ ನಮ್ಮಗಳ ಚಿತ್ತ ಎಂದು?

ಶುಕ್ರವಾರ, ಮೇ 3, 2013


ಹೀಗೊಂದು ವಿಷಾದದ ಓಲೆ.....

ನೊಂದ ಹೃದಯದ ಕಥೆ


ಎಲ್ಲ ಮರೆತು ನಾನು ಇರುವಾಗ
ಇಲ್ಲ ಸಲ್ಲದ ನೆಪವ ಹೂಡಿ
ಮತ್ತೆ ಮೂಡಿಬರದಿರು ಹಳೆಯ ನೆನಪೇ...!
ಕವಿ ಕೆ.ಎಸ್. ನಿಸಾರ್ ಅಹ್ಮದರ ಈ ಸಾಲುಗಳು ಅದೆಷ್ಟು ಸತ್ಯ ಅಲ್ವಾ? ನನ್ನನ್ನು ನನಗಿಂತ ನೀನು ಹೆಚ್ಚಾಗಿ ಅರ್ಥ ಮಾಡಿಕೊಂಡಿದ್ದೀಯಾ ವಿಶು! ಹೇಳು, ನಾನು ಮಾನಸಾಳನ್ನು ಹೇಗೆ ಮರೆಯಲಿ ಎಂದು? ಇಂದು ನಾನು ಅವಳಿಂದ ದೂರವಾಗಿ ಹಲವರ್ಷಗಳೇ ಕಳೆದಿರಬಹುದು. ಆದರೆ, ಅವಳು ಈಗಲೂ ನನ್ನಲ್ಲೆ ಇದ್ದಾಳೆ. ನನ್ನ ಪ್ರತಿಯೊಂದು ಮಾತಿನಲ್ಲೂ ಇದ್ದಾಳೆ. ವಿಶು, ನಾನು ಮಾನಸಾಳಿಗೆ ಸ್ನೇಹದ ಸವಿಯನ್ನು ನೀಡಿದೆ. ಅದಕ್ಕೆ ಪ್ರತಿಯಾಗಿ ಅವಳು ಪ್ರೇಮಾಮೃತವನ್ನು ಉಣಿಸಿದಳು. ಅವಳ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ನನ್ನ ಜೀವನದಲ್ಲಿ ಮರೆಯಲಾರದಂಥವು.
ಕೆಲವರಿಗೆ ಪ್ರೀತಿ ಭೋಗದ ವಸ್ತು. ಆದರೆ, ನನಗೆ ಅದು ಆರಾಧನೆಯಾಗಿತ್ತು. ವಿಶು, ನಾ ಅವಳ ಕನಸುಗಳಿಗೆ ಬಣ್ಣ ತುಂಬಿದೆ. ಅವಳ ಭಾವನೆಗೆ ಪ್ರೀತಿಯಿಂದ ಸ್ಪಂದಿಸಿದೆ. ಅದಕ್ಕೆ ಬೆಲೆ ಕೊಟ್ಟೆ. ಅವಳು ಸೋತಾಗ ಕೈ ಹಿಡಿದೆತ್ತಿದೆ. ಗೆದ್ದಾಗ ಹುರಿದುಂಬಿಸಿದೆ. ಅವಳ ನೋವು ನನ್ನದೆಂದು ತಿಳಿದೆ. ಅವಳ ತುಂಟ ತನಕೆ ಗೆಳೆಯನಾದೆ.... ಮುಗ್ದತೆಗೆ ಮಗುವಾದೆ... ಮೌನಕ್ಕೆ ಮಾತಾದೆ... ಮಾತಿಗೆ ಕೃತಿಯಾದೆ.... ಆದರೆ, ವಿಶು, ನಾನು ಎಂದಿಗೂ ಅವಳ ಬಳಿ ಕೆಟ್ಟದಾಗಿ ವತರ್ಿಸಲಿಲ್ಲ. ಅವಳನ್ನು ಒಂದು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿದ್ದೆ.
ಅವಳು ತುಂಬಾ ಚೆಂದಾಗಿ ಕಾಣುತ್ತಿದ್ದಾಗ ಎಷ್ಟೋ ಹುಡುಗರು ಅವಳನ್ನು ಹೊಗಳುತ್ತಿದ್ದರು. ಕಾಡಿಸಿ ರೇಗಿಸುತ್ತಿದ್ದರು. ಆದರೆ, ನಾನು ಮೌನವಾಗಿ ಅವಳನ್ನೇ ನೋಡುತ್ತಿದ್ದೆ. ಆಗ ಅವಳು `ಏನೋ... ಹಾಗೆ? ಎಂದರೆ, `ನನ್ನ ಹುಡುಗಿಯ ಅಂದವನ್ನು ವಣರ್ಿಸಲು ಯಾವುದಾದರೂ ಪದಗಳಿವೆಯೇ? ಎಂದು ಯೋಚಿಸುತ್ತಿದ್ದೆ' ಎನ್ನುತ್ತಿದ್ದೆ. ನಮ್ಮ ಪ್ರೀತಿಯ ಪರಿಯನ್ನು ಕಂಡಾಗ, ಕೆಲವು ಬಾರಿ ನಮಗೆ ತುಂಬಾ ಭಯವಾಗುತ್ತಿತ್ತು ವಿಶು. ನಾವು ಹರಟದ ಮಾತುಗಳಿಲ್ಲ. ನಾವಿಬ್ಬರು ನಮ್ಮ ಕನಸಿನ ಗೂಡನ್ನು ಸಹ ಕಟ್ಟುತ್ತಿದ್ದೆವು. ಅದರಲ್ಲಿ ಪ್ರೀತಿನೇ ಎಲ್ಲ ಆಗಿರಬೇಕು ಎಂದುಕೊಳ್ಳುತ್ತಿದ್ದೆವು. ಜೊತೆಗೆ ವಯಸ್ಸಿಗೆ ಮೀರಿದ ಪ್ರೀತಿ ನಮ್ಮದಾಗಿತ್ತು. ಒಮ್ಮೊಮ್ಮೆ ನಾವಿಬ್ಬರು ತುಂಬಾ ಮಾತನಾಡುತ್ತಿದ್ದೆವು. ಒಮ್ಮೊಮ್ಮೆ ತುಂಬಾ ಮೌನವಾಗಿರುತ್ತಿದ್ದೆವು. ಆಗ ಮೌನವೇ ಹಿತವೆನಿಸುತ್ತಿತ್ತು. ಅದೇ ಮಾತಾಗುತ್ತಿತ್ತು. ಬಹುಶಃ ಪ್ರೀತಿಯ ಆಳ ಮೌನವೆಂದೋ... ಏನೋ? ವಿಶು, ಮಾನಸಾ, ನನ್ನ ಮನಸ್ಸಿನ ಕನ್ನಡಿಯಾಗಿದ್ದಳು. ಪ್ರತಿಬಿಂಬವಾಗಿದ್ದಳು. ಅವಳು ನನ್ನ ಕಣಕಣದಲ್ಲಿಯೂ ಬೆರೆತು ಹೋಗಿದ್ದಳು.
ವಿಶು, ಅಂದು ನನ್ನ ಹುಟ್ಟಿದ ಹಬ್ಬ. ಆಗ, ಮಾನಸ ಕೊಟ್ಟ ಉಡುಗೊರೆ ಏನು ಗೊತ್ತೆ...? `ನವಿಲು ಗರಿ..!' ಅದರ ಕೆಳಗೆ ಬರೆದಿದ್ದಳು `ಮನಸ್ಸಿನ ಪುಟಗಳ ನಡುವೆ ನೆನೆಪಿನಾ ನವಿಲುಗರಿ' ಎಂದು. ವಿಶು, ಇದಕ್ಕಿಂತ ದೊಡ್ಡ ಉಡುಗೊರೆ ಬೇರೆ ಯಾವುದಿದೆ? ಅದೇನೋ.. ಅವಳಿಗೆ `ರಾಧೆ-ಮಾಧವ' ಎಂದರೆ ಬಹಳ ಇಷ್ಟ. ಅವರಿಬ್ಬರ ಪ್ರೀತಿಯ ಸಂಕೇತವನ್ನೇ ಮಾನಸಾ ನನಗೆ ಕೊಟ್ಟಿದ್ದು. `ರಾಧೆ, ಮಾಧವನನ್ನು ಆರಾಧಿಸುತ್ತಿದ್ದಳು. ಪ್ರೀತಿಯ ಉನ್ನತ ಮಟ್ಟ ಆರಾಧನೆಯೇ ಅಲ್ವಾ ವಿಶು? ರಾಧೆಯ ಕಣ್ಣಂಚಿನಿಂದ ಮಾತ್ರ ಮಾಧವ ದೂರವಾದ, ಆದರೆ ಅವಳ ಮನಸ್ಸಿನಲ್ಲಿ ಮಾಧವ ಶಾಶ್ವತ. ಹಾಗೆಯೇ ವಿಶು, ನನ್ನ ರಾಧೆಯು ನನ್ನಿಂದ ದೂರವಾದರೂ, ಅವಳು ಸದಾ ನನ್ನಲ್ಲಿಯೇ ಇರುತ್ತಾಳೆ. ಅವಳ ನೆನಪು ಸದಾ ಹಸಿರು.
ಅವಳು ಕೂಡಾ ತನ್ನೆಲ್ಲಾ ಪ್ರೀತಿಯನ್ನು ನನಗೆ ಧಾರೆ ಎರೆದಿದ್ದಳು. ಒಂದು ದಿನ ವಿಶು, ಅವಳು ಊರಿಗೆ ಹೋಗಿದ್ದಳು.(ನನಗದು ತಿಳಿದಿರಲಿಲ್ಲ). ಆ ದಿನ ನನಗವಳು ಸಿಗಲಿಲ್ಲ. ಅಂದು ನೀ ನನ್ನ ಪರಿಸ್ಥಿತಿ ನೋಡಬೇಕಿತ್ತು. ನನ್ನ ಮನಸ್ಸು ನೀರಿನಿಂದ ಮೇಲೆ ಬಿದ್ದ ಮೀನಿನ ಪರಿಸ್ಥಿತಿಯಂತಿತ್ತು. ಆದರೆ, ಮರುದಿನ ಊರಿಂದ ವಾಪಾಸ್ಸು ಬಂದ ಮಾನಸಾಳ `ಮಾನಸಾ, ನಾ ಜ್ಞಾಪಕ ಇದ್ದೀನಾ? ಅಂತ ಸುಮ್ಮನೆ ರೇಗಿಸಿದೆ. ಅದಕ್ಕೆ ಅವಳ ಉತ್ತರವೇನು ಗೊತ್ತಾ ವಿಶು? `ಅಲ್ವೋ.. ನಾ ನಿನ್ನ ಮರೆತರೆ ತಾನೆ, ಜ್ಞಾಪಿಸಿಕೊಳ್ಳೊದಿಕ್ಕೆ..? ಎಂದಳು. ಎಂಥಹ ಅರ್ಥಗರ್ಭಿತ  ಮಾತು ಅಲ್ವಾ? ಅವಳ ಮಾತಿನ ಶೈಲಿಯೇ ಹಾಗಿತ್ತು. ಪ್ರೀತಿ ಇದ್ದೆಡೆ ನಂಬಿಕೆ, ಅನುಮಾನಗಳು ಇದ್ದೇ ಇರುತ್ತದೆಯೆಂದು, ಪ್ರೀತಿಯನ್ನು ಪ್ರೀತಿಯಿಂದಲೇ ಹೇಳುತ್ತಿದ್ದಳು. ಇಂಥಹ ಮಾತುಗಳಿಂದ ಒಂದೊಂದು ಸಲ ನನಗೆ ಅವಳದು ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯ ಮಾತುಗಳೇನೋ..? ಎಂದು ಭಾಸವಾಗುತ್ತಿತ್ತು.
ವಿಶು, ಕಣ್ಣಿಗೆ ಕಾಣದಿರೋ.... ಕಿವಿಗೆ ಕೇಳಿಸದಿರೋ..... ಈ ಭಾವನಾತ್ಮ ಪ್ರೀತಿ ನಮ್ಮಿಬ್ಬರನ್ನು ಪರಸ್ಪರ ಪ್ರೀತಿಯಿಂದಲೇ ಬಂಧಿಸಿತು. ಬಂಧಿಸಿ ನಮ್ಮಿಬ್ಬರಲ್ಲಿ ನಂಬಿಕೆಯನ್ನು ಸೃಷ್ಠಿಸಿತು. ಅದು ಮುಂದಿನ ಕನಸಿನ ಗೂಡನ್ನು ಕಟ್ಟಲು ಪ್ರೇರೇಪಿಸಿತು. ಇಷ್ಟೆಲ್ಲ ಮಾಡಿದ ಈ ಪ್ರೀತಿ ಕೊನೆಗೆ.....? ಇದಕ್ಕೆ `ಅತಿ' ಅನ್ನೋ ಅರ್ಥ ಕೊಟ್ಟು `ಅವನತಿ'ಯೆಡೆಗೆ ಮುಖ ಮಾಡಿಸಿತು.
ಹೀಗೆ.... ಹಲವು ವರ್ಷಗಳು ಕಾಲಗರ್ಬದಡಿ ಹೂತು ಹೋದವು ವಿಶು. ಜಗದ ನಿಯಮದಂತೆ ಅನೇಕ ಬದಲಾವಣೆಗಳು, ಪರಿವರ್ತನೆಗಳು ನಮಗರಿವಿಲ್ಲದೆ ನಡೆದವು. ಅಂದು ಅನಿವಾರ್ಯ ಕಾರಣದಿಂದ ಪರಸ್ಪರ ದೂರಾದ ನಾವು, ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಭೆಟ್ಟಿಯಾದೆವು. ತುಂಬಾ ಚೆನ್ನಾಗಿಯೇ ಮಾತನಾಡಿದಳು. ಅವಳ ದೃಷ್ಠಿಯಲ್ಲಿ ಅಪರಾಧಿ ಸ್ಥಾನದಲ್ಲಿದ್ದ ನಾನು, ಅವಳ ಜೊತೆ ಸರಿಯಾಗಿ ಮಾತನಾಡದೆ ಅಲ್ಲಿಂದ ಕಾಲ್ಕಿತ್ತೆ. ನಂತದ ಅವಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ಕ್ಷಮೆ ಕೇಳಿದೆ.(ಸಿಕ್ಕಾಗ ಮಾತನಾಡದೇ ಇದ್ದುದ್ದಕ್ಕೆ ತುಂಬಾ ಹೊತ್ತು ಮನಸ್ಸು ಬಿಚ್ಚಿ ಮಾತನಾಡಿದೆ) ಅವಳು ನನ್ನ ಪ್ರೀತಿ ಮರೆತಿಲ್ಲವೇನೋ..... ಅಂದುಕೊಂಡೆ. ಹೀಗೆ ದಿನಗಳು ಉರುಳುತ್ತಿದ್ದವು.
ನನಗೆ ಅವಳ ನೆನಪು ಮತ್ತೆ ಮತ್ತೆ, ದಿನದಿಂದ ದಿನಕ್ಕೆ `ಅತಿ'ಯಾಗುತ್ತ ಹೋಯಿತು. ಆ `ಅತಿ' ಅನ್ನುವುದು ಪರಾಕಾಷ್ಠೆಯ ಹಂತ ತಲುಪಿತು. ಅವಳ ಜೊತೆ ಮಾತನಾಡಲೇ ಬೇಕು ಎಂದು ಮನಸ್ಸು ಚಡಪಡಿಸುತ್ತಿತ್ತು.ಪ್ರಾರಂಭದಲ್ಲಿ ಚೆನ್ನಾಗಿಯೇ ಮಾತನಾಡಿದ ಅವಳು, ಒಮ್ಮೆಲೆ ಸಿಟ್ಟಿಗೆದ್ದಳು. ಏಕೆ.. ಏನಾಯ್ತು? ಅಂತ ಗೊತ್ತಾಗಲಿಲ್ಲ. ಹಾಗಂತ ನಾನವಳಲ್ಲಿ ನನ್ನ ಯಾವ ವಿಷಯವನ್ನು ಹೇಳಲಿಲ್ಲ. ಯಾಕಾಗಿ ಅವಳು ಹಾಗೆ ಮಾಡಿದಳು? ಅಂತ ತುಂಬಾ ಯೋಚಿಸಿದೆ. ಉತ್ತರ ದೊರೆಯಲಿಲ್ಲ... ಮನಸ್ಸಲ್ಲೆ ಅತ್ತು, ನೊಂದುಕೊಂಡೆ.
ವಿಶು, ಆ ದಿನಗಳಲ್ಲಿ ಅವಳು ನನಗೆ, ನಾನು ಅವಳಿಗೆ ಹೀಗೆ ಪರಸ್ಪರ ಒಬ್ಬರಿಗೊಬ್ಬರು ಪ್ರತಿಯೊಂದು ಆಗಿರುತ್ತಿದ್ದೆವು. ಅವಳು ಸದಾ ನನ್ನ ಜೊತೆ ಮಾತನಾಡುತ್ತಿದ್ದಳು. ಸುಳ್ಳೇ ನನ್ನ ರೇಗಿಸುತ್ತಿದ್ದಳು. ಇಡೀ ಜಗತ್ತಿನಲ್ಲಿ ಎಂದೂ.... ಯಾರೂ.... ಪ್ರೀತಿಸದಷ್ಟು ನಾನು ಅವಳನ್ನು, ಅವಳ ನನ್ನನ್ನು ಪ್ರೀತಿಸುತ್ತಿದ್ದಳು. ಪರಸ್ಪರ ಪೂಜಿಸುತ್ತಿದ್ದೆವು... ಆರಾಧಿಸುತ್ತಿದ್ದೆವು... ಆದರೆ, ಅಂತಹ ಪ್ರೀತಿ ಇಂದು...? ಈ ದಿನಗಳಲ್ಲಿ....?
ನನಗೊಂದು ಅರ್ಥವಾಗುತ್ತಿಲ್ಲ ವಿಶು. ಆದರೆ ನನಗವಳು ಬೇಕು. ಅವಳ ಪ್ರೀತಿ ನನಗೆ ಬೇಕು. ಈಗಷ್ಟೇ ಅಲ್ಲ... ಜೀವನ ಪರ್ಯಂತ ಅವಳ ಜೊತೆಯಲ್ಲಿಯೇ ಇರಬೇಕು. ದಿನದಿಂದ ದಿನಕ್ಕೆ ಅವಳ ನೆನಪು ಹೆಚ್ಚಾಗ್ತಾ ಇದೆ. ಅವಳ ಜೊತೆ ಯಾವಾಗ ಪ್ರೀತಿಯಿಂದ ಮಾತನಾಡುವೆನೋ... ಅವಳ ಮುಖ ಯಾವಾಗ ನೋಡುವೆನೋ.... ಎಂದೆನಿಸುತ್ತಿದೆ. ಇಷ್ಟು ವರ್ಷಗಳ ಕಾಲ ತಟಸ್ಥವಾಗಿದ್ದ ನನ್ನ ಮನಸ್ಸು ಈಗ ಯಾಕೆ ಹೀಗಾಡುತ್ತಿದೆ? ಹೇಳು ವಿಶು, ಹೇಳು. ನನ್ನ ಹೃದಯದಲ್ಲಿ ಮೂಡಿದ ಪ್ರಥಮ ಪ್ರೇಮ ಅದು ಅಂತಲಾ...? ಅಥವಾ, ಆ ಪ್ರೀತಿನೆ ಹಾಗೆನಾ...? ಗೊತ್ತಿಲ್ಲ, ಒಟ್ಟಾರೆ, ನನ್ನ ಹೃದಯ, ನನ್ನ ಪ್ರಾಣ, ನನ್ನ ಜೀವ, ನನ್ನ ಉಸಿರು ಆದಂಥ ನನ್ನ ಪ್ರೀತಿ ನನಗೆ ಬೇಕು ಅಷ್ಟೆ!
ಪ್ರೀತಿ ಬದುಕಲೇ ಬೇಕು... ಬದುಕಿ ಪ್ರೀತಿಸಬೇಕು
ನೋವ ನುಂಗಲೇ ಬೇಕು... ಅಲ್ಲೂ ಅವಳಿರಬೇಕು..
ಎದೆಯ ಪುಸ್ತಕದ ಪುಟಗಳಲ್ಲಿ, ಅವಳು ಬರೆದ ನೂರು ಸಾಲು
ಪ್ರತಿ ಸಾಲಿನಲ್ಲೂ ನಾನಭವಿಸೋ ಅವಳ ನೆನಪೆ ನನ್ನ ಸೋಲು
ಆಸೆಗೆ ನೆಲೆಯಿಲ್ಲ.. ಈ ಪ್ರೀತಿಗೆ ಬೆಲೆಯಿಲ್ಲ...!
ವಿಶು, ಅವಳ ನೆನಪು ನನಗೆ `ಅತಿ'ಯಾದಾಗ, ಹಿಂದಿನ ದಿನಗಳೆಲ್ಲ ಮರುಕಳಿಸಿ ಹೀಗೆಲ್ಲ ಭಾವನೆಗಳ ಕಟ್ಟೆಯೇ ಒಡೆದು ಬಿಡುತ್ತವೆ. ಹಾಗೆಯೆ, ವಾಸ್ತವದ ಬಗ್ಗೆ ಯೋಚನೆ ಮಾಡಿದಾಗ- ಆದದ್ದೆಲ್ಲ ಒಳ್ಳೆಯದಕ್ಕಾಗಿಯೇ ಆಗಿದೆಯೇನೋ... ಅಂತ ಅನಿಸುತ್ತದೆ. ಆಗ ಅವಳೆಲ್ಲೆ ಇರಲಿ, ಹೇಗೆ ಇರಲಿ ಸಂತೋಷವಾಗಿ ನಗ್ತಾ ಇದ್ರೆ ಸಾಕು. ಅವಳಿಗಾಗಿ, ಅವಳ ಒಳಿತಿಗಾಗಿ, ದೂರದಿಂದಲೇ ಹಾರೈಸುತ್ತ, ಭಗವಂತನಲ್ಲಿ ಪ್ರಾಥರ್ಿಸಿಕೊಳ್ಳೋಣ ಅನಿಸುತ್ತದೆ.
ಇವುಗಳ ಜಂಜಾಟದಲ್ಲಿ ವಿಶು, ಏನು ಮಾಡಬೇಕೆಂದೆ ತೋಚುತ್ತಿಲ್ಲ. ಆದರೂ ನಗು ನಗುತ್ತಾ ಇರುತ್ತೇನೆ. ಯಾಕೆ ಗೊತ್ತಾ? ನನ್ನ ಮುಖದಲ್ಲಿ ಆ ನೋವಿನ ಗೆರೆ ಕಾಣಬಾರದು, ನನ್ನ ನೋವಿನಲ್ಲಿ ಇನ್ನೊಬ್ಬರು ಬಾಗಿಯಾಗಬಾರದು ಅಂತ! ಮುಖದಲ್ಲಿ ನೋವಿನ ಗೆರೆ ಕಾಣದೆ ಇರಬಹುದು, ನನ್ನ ನೋವಿನಲ್ಲಿ ಇನ್ನೊಬ್ಬರು ಭಾಗಿಯಾಗದೆ ಇರಬಹುದು. ಆದರೆ, ಆ ನೋವು, ಯಾತನೆ, ಅಳು ನನ್ನಲ್ಲೆ ಇದ್ದೇ ಇರುತ್ತದೆ ಅಲ್ವಾ? ಅದಕ್ಕಾಗಿ ಬೇಡುವೆ ಆ ದೇವರ,
ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು..... ಎಂದು!
ನನಗೊತ್ತು ವಿಶು, `ನಿನಗೆ ನನ್ನ ನೋವಿನ ಕಲ್ಪನೆ ಇರಬಹುದು, ಆದರೆ ಅದರ ಆಳ ತಿಳಿಯದು ಎಂದು! ಆದರೂ, ಇಲ್ಲಿ ಬರೆದಂತಹ ಪ್ರತಿಯೊಂದು ಸಾಲುಗಳು ಕೂಡಾ ನಿನ್ನ ಪಾದದ ಮೇಲಿಟ್ಟ ಪುಟ್ಟ ಪಾರಿಜಾತ. ಆ ಕಾರಣ ಹಗುರವಾಗಿ ಮಾತ್ರ ತಿಳಿಯಬೇಡ. ದಯವಿಟ್ಟು.... ದಯವಿಟ್ಟು..... ದಯವಿಟ್ಟು...

ಬುಧವಾರ, ಮೇ 1, 2013


ಪ್ರೇಮಾಗ್ನಿ...

ದಾವಾಗ್ನಿಯ ಬೇಗುದಿಗೆ ಸಿಲುಕಿ,
ಕರಕಲಾಯಿತೇ ಬದುಕು...?
ಹೃನ್ಮನಗಳಲ್ಲಿ ಬಿಡಿಸಿದ ಚಿತ್ರ
ಕಂಬನಿಗೆ ಅಳಿಸಿ ಹೋಯ್ತೇ...?

ಆಗಿಲ್ಲ ಯಾವೊಂದು ಆಕಸ್ಮಿಕವು
ವಿನಿಮಯವೇ ಇದ್ದಿಲ್ಲ ಸಿನಿಕವು
ಎದುರಾದ ಸ್ವಾಭಿಮಾನದ ಕಿಚ್ಚು
ಮೇಲೇಳದಾಗಿಸಿದೆ ಮನದ ಹುಚ್ಚು


ಬೆತ್ತಲಾಗಿದೆ ಬದುಕು
ಅರಿಯದ ಮಾಯೆಗೆ ಸಿಲುಕಿ
ಅಂತರಪಟ ಸರಿದಾಗ ನಿಲರ್ಿಪ್ತ
ಯಾಕೆ ಬೇಕು ಅನ್ಯತಾ ತಾಕಲಾಟ?

ಹುಚ್ಚೆದ್ದು ಕುಣಿವ ಅಲೆಗಳ ಆರ್ಭಟ
ಕೆಚ್ಚೆದೆಯಲಿ ಉಳಿಸಿದೆ ದಿಟ್ಟಹಠ
ಸೋಲು-ಗೆಲುವಲ್ಲ ಬದುಕಿನ ಹೋರಾಟ
ಗೆದ್ದರೆ ಮೆಲ್ಲುಸಿರು, ಸೋತರೆ ನಿಟ್ಟುಸಿರು....