ಅನುಭವದ ಮರ್ಮ..
`ಅಯ್ಯೋ... ನಡೆದುಕೊಂಡು ಹೋದರೆ ಸುಸ್ತಾಗುತ್ತೇರಿ. ಆಟೋಗೆ ಹೋಗೋಣ' ಎಂದಾಕೆಯ ಮೊಗದಲ್ಲಿ ಬಸವಳಿದ ಕುರುಹು. ಜೊತೆಯಲ್ಲಿಯೇ ಹೆಜ್ಜೆ ಹಾಕಿ ನಡೆಯಬೇಕು ಎಂದುಕೊಂಡ ನನ್ನ ಮನಸ್ಸಿಗೆ ತುಸು ಘಾಸಿಯಾಯಿತಾದರೂ... ಆಕೆಯ ಆರೋಗ್ಯ ಮುಖ್ಯ ಎಂದರಿತು, ಅದೇ ದಿಕ್ಕಿನತ್ತ ಬರುವ ಆಟೋಗೆ ಕೈಮಾಡಿದೆ. ಆಟೋ ಹತ್ತಿದಾಗ ಬಸವಳಿದ ಆಕೆಯ ಮೊಗದಲ್ಲಿ ಕಂಡು ಕಾಣದ ನಿರಾಳತೆ!! ಒಮ್ಮೆ `ಉಸ್ಸಪ್ಪಾ...' ಎಂದಳು. ಆಟೋ ಚಾರ್ಜ್ ನೀಡಲೆಂಬಂತೆ ಪ್ಯಾಂಟ್ ಜೇಬಿಗೆ ಕೈ ಹಾಕಿದೆ. ಆಗಲೇ ಗೊತ್ತಾಗಿದ್ದು `ಪರ್ಸ್ ' ಎಲ್ಲೋ ಕಳೆದು ಹೋಗಿದೆ' ಎಂದು!ಆಟೋಗೆ ಹಣ ನೀಡುವುದು ಎಲ್ಲಿಂದ? ಆಕೆಯಲ್ಲಿ ಕೇಳಲು ಮನಸ್ಸು ಬರುತ್ತಿಲ್ಲ. ಏನು ಮಾಡುವುದು...!? ಅನಿವಾರ್ಯ ಕೇಳಲೇ ಬೇಕು. `ಆಟೋಗೆ ನೀಡಲು ಹಣ ಇದೆಯಾ? ನನ್ನ `ಪರ್ಸ್ ' ಎಲ್ಲಿಯೋ ಕಳೆದುಕೊಂಡು ಬಿಟ್ಟೆ' ಎಂದೆ. 30ರೂ. ತೆಗೆದು ಕೊಟ್ಟಳು. ಮಾರ್ಗ ಮಧ್ಯದಲ್ಲಿಳಿದು ಅವಳು ಮನೆ ಕಡೆ ಹೆಜ್ಜೆ ಹಾಕಿದಳು. ನಾನು ನನ್ನ ಮನೆ ಸನಿಹ ಇಳಿದೆ. ಭಗವಂತ! ಜೀವನದಲ್ಲಿ ಹೊಸ ಅನುಭವವೊಂದನ್ನು ನೀಡಿದಕ್ಕೆ ಮನಸ್ಸಲ್ಲೆ ಥ್ಯಾಂಕ್ಸ್ ಎಂದೆ. ಕಳೆದುಕೊಂಡ `ಪರ್ಸ್ 'ಲ್ಲಿ 4,500 ರೂಪಾಯಿ, 2 ಎಟಿಎಂ ಕಾ ಹಾಗೂ ಕಾರ್ಡ್ ಅವಶ್ಯಕ ಸಣ್ಣಪುಟ್ಟ ಕಾಗಪತ್ರಗಳು ಇದ್ದವು. 2 ಎಟಿಎಂ ಕಾರ್ಡನ್ನು ಸಹಾಯ ವಾಣಿಗೆ ಕರೆ ಮಾಡಿ ಬ್ಲಾಕ್ ಮಾಡಿಸಿದೆ.(ಸಮಯ ರಾತ್ರಿ 8.30).
ಸ್ನೇಹಿತೆಗೆ ಏನೋ ನಂಬಿಕೆಯಿತ್ತು. `ಪರ್ಸ್ ' ಕಚೇರಿಯಲ್ಲಿ ಬಿಟ್ಟಿರಬಹುದೇನೋ ಎಂದು. ಆದರೆ, ಕಳೆದುಕೊಂಡ ಬಗ್ಗೆ ಖಚಿತ ಪಡಿಸಿದಾಗ ಬೇಸರ ವ್ಯಕ್ತಪಡಿಸಿದಳು. ಆದರೆ ನನಗೆ ಮಾತ್ರ ಒಂದಿನಿತು ನೋವಾಗಲಿಲ್ಲ. ಆದರೆ, ಸ್ವಲ್ಪ ಬೇಜಾರಾಗಿತ್ತು! ನಗುನಗುತ್ತಲೇ `ಪರ್ಸ್ ' ಕಳೆದು ಕೊಂಡ ಪುರಾಣದ ಬಗ್ಗೆ ಆಕೆಗೆ ಹೇಳಿದೆ. `ಅಲ್ಲಾ.. ನೋವಿನ ವಿಷಯಕ್ಕೆ ನಗು ಯಾಕೆ?' ಎಂದು ಅವಳು ನನ್ನ ಮೇಲೆ ತುಸು ಕುಪಿತಳಾದಳು. ನೋವಿಲ್ಲದಿದ್ದರೂ ಬೇಸರವಿತ್ತಲ್ಲ... ಅದು ಕೂಡಾ ಕೆಲ ಸಮಯದ ನಂತರ ಮಾಯವಾಯಿತು!
ಆಕೆಯ ಜನ್ಮದಿನಕ್ಕೆಂದು `ನಮ್ಮಮ್ಮ ಅಂದ್ರೆ ನಂಗಿಷ್ಟ' ಎಂಬ ಪುಸ್ತಕವನ್ನು ಅಂದೆ ಉಡುಗೊರೆಯಾಗಿ ನೀಡಿದ್ದೆ. ಮನೆಗೆ ಹೋಗಿ ನೋಡಿದ ಆಕೆಗೆ ಅದರಿಂದಾದ ಸಂತೋಷ ಅಷ್ಟಿಷ್ಟಲ್ಲ! `ನನ್ನ ಇಷ್ಟದ ಪುಸ್ತಕ ನೀಡಿದ್ದಕ್ಕೆ ಧನ್ಯವಾದ' ಎಂದಳು. ಆಕೆಯ ಮೊಗ ಹಾಗೂ ಮನಸ್ಸು ಆ ಒಂದು ಪುಸ್ತಕ ಅರಳಿಸಿತ್ತಲ್ಲ ಅಷ್ಟು ಸಾಕು.(ನಾವು ನೋವಲ್ಲಿದ್ದರೂ ಇನ್ನೊಬ್ಬರ ಮೊಗದಲ್ಲಿ ನಗು ತರಬೇಕು) `ಕಳೆದು ಕೊಂಡ`ಪರ್ಸ್ ' ಹಾಗೂ ಹಣ ಅವಳ ಸತೋಷದ ಮುಂದೆ ಏನೂ ಅಲ್ಲ...!'
`ಪರ್ಸ್ ' ಕಳೆದುಕೊಂಡ ಮಾರನೆ ದಿನ ಸಂಕ್ರಾತಿ. ಮನೆಕಡೆ ಮುಖ ಹಾಕದೆ ಐದಾರು ತಿಂಗಳಾಗಿತ್ತು. ಹಬ್ಬದ ಸಡಗರದ ವಾತಾವರಣ ಮನೆಯೆಲ್ಲ ಪಸರಿಸಿತ್ತು. ಹಬ್ಬದ ಖರ್ಚಗೆ ನನ್ನಲ್ಲಿ ಹಣವಿರಲಿಲ್ಲ. ಎಟಿಎಂ ಕಾರ್ಡನಲ್ಲಿದೆ? ಆದರೆ, ಅದನ್ನು ಕಳೆದುಕೊಂಡಿದ್ದೇನೆ. ಬ್ಯಾಂಕಿಗೆ ಹೋಗಿ ತರೋಣ ಎಂದರೆ ಸಂಕ್ರಾತಿಯ ಸೂಟಿ! `ಸಂಕ್ರಾಂತಿ ಕಾಳು' ನೀಡಲು ಬಂದವರಿಗೆ ಹಣ ನೀಡುವ ಪರಿಪಾಠ ಬೆಳಿಸಿಕೊಂಡು ಬಂದ ನಾನು ತೆಪ್ಪಗೆ ಕುಳಿತುಬಿಟ್ಟೆ! `ಕಾಳು ನೀಡಿದವರಿಗೆ... ಬಾಳು ಚೆನ್ನಾಗಿರಲಿ' ಎಂದಷ್ಟೆ ಹಾರೈಸಿ ಕಳುಹಿಸಿದೆ!
ಎಟಿಎಂ ಕಾರ್ಡ್ ಕಳೆದರೇನಂತೆ, ನೆಟ್ ಬ್ಯಾಂಕಿಂಗ್ ಇದೆಯಲ್ಲ. ಬ್ಯಾಂಕ್ ಖಾತೆಯ ಸ್ಥಿತಿಗತಿ ಏನಾಗಿದೆಯೆಂದು ತಿಳಿಯಲು ಮನೆಯ ಕಂಪ್ಯೂಟರ್ ಸ್ಟಾರ್ಟ್ ಮಾಡಿ, ಅಂತರ್ಜಾಲಕ್ಕೆ ಲಗ್ಗೆ ಇಟ್ಟೆ!! ನೆಟ್ ಬ್ಯಾಂಕಿಂಗ್ ಗೆ ಪ್ರವೇಶ ಪಡೆದು, ಸ್ಥಿತಿಗತಿ ಪರಿಶೀಲಿಸಿದೆ. ಆಗ ಮತ್ತೊಂದು ಷಾಕ್!! ದಿ. 13, ರಾತ್ರಿ 7.25.30 ಸೆ.ಗೆ ಯಾರೋ ಅಪರಿಚಿತರು, ಎಟಿಎಂ ಕಾರ್ಡಿನಿಂದ ಶಾಪಿಂಗ್ ಮಾಡಿದ್ದಾರೆ! ಅದು ಬರೋಬ್ಬರಿ 7,300 ರೂಗಳಷ್ಟು!! ಯಾರಂತ ಪತ್ತೆ ಹಚ್ಚುವುದು? ಏನು ಮಾಡುವುದು? ಎನ್ನುತ್ತ ಯೋಚಿಸುತ್ತಿದ್ದೆ. ಅಮ್ಮನಿಗೆ ಎಲ್ಲ ವಿಷಯವನ್ನು ತಿಳಿಸಿದೆ. ನನ್ನ ಮನದ ಭಾವನೆಯನ್ನು ಅರಿತ ಮಾತೃ ಹೃದಯ... `ಅದಕ್ಕೆಲ್ಲ ಯಾಕೋ ಬೇಜಾರು ಪುಟ್ಟು...? ನೀ ಜೋಪಾನ ಇದ್ದೀಯಲ್ವಾ.. ನೀ ಕಳೆದು ಹೋಗಿಲ್ಲ ಅಲ್ವಾ... ಅಷ್ಟು ಸಾಕು' ಎಂದಳು. ಅಮ್ಮನಿಗೆ ಗೊತ್ತು, ಮಗ ಎಂದೂ ಈ ರೀತಿ ನಿರ್ಲಕ್ಷ್ಯ ಮಾಡಿದವನಲ್ಲ. ಯಾವುದೋ `ಮನಸ್ಥಿತಿ'ಯಲ್ಲಿ ಎಡವಿ ಬಿದ್ದಿದ್ದಾನೆ. ಅದಕ್ಕೆ ಹೀಗಾಗಿದೆ ಎಂದು. ಒಟ್ಟಾರೆ, 11,700 ರೂಪಾಯಿಗಳನ್ನು ಕಳೆದುಕೊಂಡ `ಅಪ್ಪ-ಅಮ್ಮ'ರ ಹೆಮ್ಮೆಯ ಪುತ್ರ ಎಂದು ಆ ಕ್ಷಣದಲ್ಲಿ ಹೆಸರು ಪಡೆದೆ!
ನನ್ನ ಇನ್ನೊಂದು ಬ್ಯಾಂಕ್ ಖಾತೆಯಲ್ಲಿ ಅಲ್ಪಸ್ವಲ್ಪ ಹಣವಿತ್ತು. ದಿ. 15ರಂದು ಬ್ಯಾಂಕ್ಗೆ ಹೋಗಿ ಅದನ್ನೆ ತೆಗೆದುಕೊಂಡು ಬಂದೆ. ಮಗನ ದಾರುಣ ಸ್ಥಿತಿಯನ್ನು ಕಂಡು ಅಪ್ಪ ಖರ್ಚಿಗೆಂದು 8ಸಾವಿರ ರೂ. ನೀಡಲು ಬಂದರು. ಆಗ `ಅಪ್ಪಾ, ಹಣದ ಅವಶ್ಯವಿದ್ದಾಗ ಇದಕ್ಕಿಂತಲೂ ಹೆಚ್ಚಿಗೆ ಕೇಳುತ್ತೇನೆ. ಆಗ ಖಂಡಿತ ಕೊಡಬೇಕು' ಎಂದೆ. ಅಪ್ಪನಿಗೆ ಬೇಸರವಾಯಿತು. 11ಸಾವಿರ ರೂ. ಕಳೆದುಕೊಂಡಾಗಲೂ ಕಣ್ಣಲ್ಲಿ ನೀರು ಹಾಕದ ನಾನು, ಅಪ್ಪನ ಆ ಕ್ಷಣದ ಮುಖ ನೋಡಿ, ಅತ್ತುಬಿಟ್ಟೆ!! 2ಸಾವಿರ ರೂ. ತೆಗೆದುಕೊಂಡು, `ಅಪ್ಪ, ಸದ್ಯ ಇಷ್ಟು ಸಾಕು' ಎಂದೆ.
ಪ್ರಬುದ್ಧತೆಯಿಂದ ಜವಾಬ್ದಾರಿ ನಿಭಾಯಿಸುವ ಮಗ`ಪರ್ಸ್ ' ಕಳೆದುಕೊಂಡಿದ್ದು ಹೇಗೆ...? ಸ್ಪಷ್ಟ-ದಿಟ್ಟ ಹೆಜ್ಜೆ ಮೂಲಕ ಗುರಿ ತಲುಪುತ್ತಿರುವ ಸುಪುತ್ರ ಎಡವಿದ್ದು ಹೇಗೆ...? ಎಂದು ನನ್ನಮ್ಮ ದಾರಿಗುಂಟ ಕೇಳುತ್ತ ಬಂದಳು. ನನ್ನ ಆತ್ಮ ಸ್ವರೂಪಿಯಾದ ಆ ಮಾತೆಗೆ ತಿಳಿಯದ್ದು ಏನಿದೆ? `ಏನು ಮಗಾ.... ಯಾವ್ದಾದ್ರೂ ಹುಡುಗಿಯನ್ನ ಪ್ರೀತಿಸ್ತಿದ್ದೀಯಾ? ನಿನ್ನ ಹೃದಯಕ್ಕೆ ಲಗ್ಗೆ ಇಟ್ಟ ಆ ಮುದ್ದು ಮಗು ಯಾರಂತ ಹೇಳೋ ಕಂದಾ...!? ಎಂದು ಒತ್ತಾಯಿಸಿದಳು. ಅವಳ ಮಾತಿಗೆ ಕಟ್ಟುಬಿದ್ದು ಉತ್ತರಿಸುವಷ್ಟರಲ್ಲಿ ಬಸ್ ಹಾರ್ನ್ ಮಾಡುತ್ತ ಹತ್ತಿರದಲ್ಲಿಯೇ ಬಂದು ನಿಂತು ಬಿಟ್ಟಿತು. ಮುಗುಳ್ನಗುತ್ತ `ಅಮ್ಮಾ.... ಬರ್ತೀನಿ' ಎಂದು ಟಾಟಾ ಮಾಡಿ... ಉಸಿರನ್ನೊಮ್ಮೆ ಮೇಲಕ್ಕೆಳೆದುಕೊಂಡೆ!!
(ಇದು ಕೇವಲ ಕಾಲ್ಪನಿಕ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ