ಹೀಗೊಂದು ವಿಷಾದದ ಓಲೆ.....
ನೊಂದ ಹೃದಯದ ಕಥೆ
ಎಲ್ಲ ಮರೆತು ನಾನು ಇರುವಾಗ
ಇಲ್ಲ ಸಲ್ಲದ ನೆಪವ ಹೂಡಿ
ಮತ್ತೆ ಮೂಡಿಬರದಿರು ಹಳೆಯ ನೆನಪೇ...!
ಕವಿ ಕೆ.ಎಸ್. ನಿಸಾರ್ ಅಹ್ಮದರ ಈ ಸಾಲುಗಳು ಅದೆಷ್ಟು ಸತ್ಯ ಅಲ್ವಾ? ನನ್ನನ್ನು ನನಗಿಂತ ನೀನು ಹೆಚ್ಚಾಗಿ ಅರ್ಥ ಮಾಡಿಕೊಂಡಿದ್ದೀಯಾ ವಿಶು! ಹೇಳು, ನಾನು ಮಾನಸಾಳನ್ನು ಹೇಗೆ ಮರೆಯಲಿ ಎಂದು? ಇಂದು ನಾನು ಅವಳಿಂದ ದೂರವಾಗಿ ಹಲವರ್ಷಗಳೇ ಕಳೆದಿರಬಹುದು. ಆದರೆ, ಅವಳು ಈಗಲೂ ನನ್ನಲ್ಲೆ ಇದ್ದಾಳೆ. ನನ್ನ ಪ್ರತಿಯೊಂದು ಮಾತಿನಲ್ಲೂ ಇದ್ದಾಳೆ. ವಿಶು, ನಾನು ಮಾನಸಾಳಿಗೆ ಸ್ನೇಹದ ಸವಿಯನ್ನು ನೀಡಿದೆ. ಅದಕ್ಕೆ ಪ್ರತಿಯಾಗಿ ಅವಳು ಪ್ರೇಮಾಮೃತವನ್ನು ಉಣಿಸಿದಳು. ಅವಳ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ನನ್ನ ಜೀವನದಲ್ಲಿ ಮರೆಯಲಾರದಂಥವು.
ಕೆಲವರಿಗೆ ಪ್ರೀತಿ ಭೋಗದ ವಸ್ತು. ಆದರೆ, ನನಗೆ ಅದು ಆರಾಧನೆಯಾಗಿತ್ತು. ವಿಶು, ನಾ ಅವಳ ಕನಸುಗಳಿಗೆ ಬಣ್ಣ ತುಂಬಿದೆ. ಅವಳ ಭಾವನೆಗೆ ಪ್ರೀತಿಯಿಂದ ಸ್ಪಂದಿಸಿದೆ. ಅದಕ್ಕೆ ಬೆಲೆ ಕೊಟ್ಟೆ. ಅವಳು ಸೋತಾಗ ಕೈ ಹಿಡಿದೆತ್ತಿದೆ. ಗೆದ್ದಾಗ ಹುರಿದುಂಬಿಸಿದೆ. ಅವಳ ನೋವು ನನ್ನದೆಂದು ತಿಳಿದೆ. ಅವಳ ತುಂಟ ತನಕೆ ಗೆಳೆಯನಾದೆ.... ಮುಗ್ದತೆಗೆ ಮಗುವಾದೆ... ಮೌನಕ್ಕೆ ಮಾತಾದೆ... ಮಾತಿಗೆ ಕೃತಿಯಾದೆ.... ಆದರೆ, ವಿಶು, ನಾನು ಎಂದಿಗೂ ಅವಳ ಬಳಿ ಕೆಟ್ಟದಾಗಿ ವತರ್ಿಸಲಿಲ್ಲ. ಅವಳನ್ನು ಒಂದು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿದ್ದೆ.
ಅವಳು ತುಂಬಾ ಚೆಂದಾಗಿ ಕಾಣುತ್ತಿದ್ದಾಗ ಎಷ್ಟೋ ಹುಡುಗರು ಅವಳನ್ನು ಹೊಗಳುತ್ತಿದ್ದರು. ಕಾಡಿಸಿ ರೇಗಿಸುತ್ತಿದ್ದರು. ಆದರೆ, ನಾನು ಮೌನವಾಗಿ ಅವಳನ್ನೇ ನೋಡುತ್ತಿದ್ದೆ. ಆಗ ಅವಳು `ಏನೋ... ಹಾಗೆ? ಎಂದರೆ, `ನನ್ನ ಹುಡುಗಿಯ ಅಂದವನ್ನು ವಣರ್ಿಸಲು ಯಾವುದಾದರೂ ಪದಗಳಿವೆಯೇ? ಎಂದು ಯೋಚಿಸುತ್ತಿದ್ದೆ' ಎನ್ನುತ್ತಿದ್ದೆ. ನಮ್ಮ ಪ್ರೀತಿಯ ಪರಿಯನ್ನು ಕಂಡಾಗ, ಕೆಲವು ಬಾರಿ ನಮಗೆ ತುಂಬಾ ಭಯವಾಗುತ್ತಿತ್ತು ವಿಶು. ನಾವು ಹರಟದ ಮಾತುಗಳಿಲ್ಲ. ನಾವಿಬ್ಬರು ನಮ್ಮ ಕನಸಿನ ಗೂಡನ್ನು ಸಹ ಕಟ್ಟುತ್ತಿದ್ದೆವು. ಅದರಲ್ಲಿ ಪ್ರೀತಿನೇ ಎಲ್ಲ ಆಗಿರಬೇಕು ಎಂದುಕೊಳ್ಳುತ್ತಿದ್ದೆವು. ಜೊತೆಗೆ ವಯಸ್ಸಿಗೆ ಮೀರಿದ ಪ್ರೀತಿ ನಮ್ಮದಾಗಿತ್ತು. ಒಮ್ಮೊಮ್ಮೆ ನಾವಿಬ್ಬರು ತುಂಬಾ ಮಾತನಾಡುತ್ತಿದ್ದೆವು. ಒಮ್ಮೊಮ್ಮೆ ತುಂಬಾ ಮೌನವಾಗಿರುತ್ತಿದ್ದೆವು. ಆಗ ಮೌನವೇ ಹಿತವೆನಿಸುತ್ತಿತ್ತು. ಅದೇ ಮಾತಾಗುತ್ತಿತ್ತು. ಬಹುಶಃ ಪ್ರೀತಿಯ ಆಳ ಮೌನವೆಂದೋ... ಏನೋ? ವಿಶು, ಮಾನಸಾ, ನನ್ನ ಮನಸ್ಸಿನ ಕನ್ನಡಿಯಾಗಿದ್ದಳು. ಪ್ರತಿಬಿಂಬವಾಗಿದ್ದಳು. ಅವಳು ನನ್ನ ಕಣಕಣದಲ್ಲಿಯೂ ಬೆರೆತು ಹೋಗಿದ್ದಳು.
ವಿಶು, ಅಂದು ನನ್ನ ಹುಟ್ಟಿದ ಹಬ್ಬ. ಆಗ, ಮಾನಸ ಕೊಟ್ಟ ಉಡುಗೊರೆ ಏನು ಗೊತ್ತೆ...? `ನವಿಲು ಗರಿ..!' ಅದರ ಕೆಳಗೆ ಬರೆದಿದ್ದಳು `ಮನಸ್ಸಿನ ಪುಟಗಳ ನಡುವೆ ನೆನೆಪಿನಾ ನವಿಲುಗರಿ' ಎಂದು. ವಿಶು, ಇದಕ್ಕಿಂತ ದೊಡ್ಡ ಉಡುಗೊರೆ ಬೇರೆ ಯಾವುದಿದೆ? ಅದೇನೋ.. ಅವಳಿಗೆ `ರಾಧೆ-ಮಾಧವ' ಎಂದರೆ ಬಹಳ ಇಷ್ಟ. ಅವರಿಬ್ಬರ ಪ್ರೀತಿಯ ಸಂಕೇತವನ್ನೇ ಮಾನಸಾ ನನಗೆ ಕೊಟ್ಟಿದ್ದು. `ರಾಧೆ, ಮಾಧವನನ್ನು ಆರಾಧಿಸುತ್ತಿದ್ದಳು. ಪ್ರೀತಿಯ ಉನ್ನತ ಮಟ್ಟ ಆರಾಧನೆಯೇ ಅಲ್ವಾ ವಿಶು? ರಾಧೆಯ ಕಣ್ಣಂಚಿನಿಂದ ಮಾತ್ರ ಮಾಧವ ದೂರವಾದ, ಆದರೆ ಅವಳ ಮನಸ್ಸಿನಲ್ಲಿ ಮಾಧವ ಶಾಶ್ವತ. ಹಾಗೆಯೇ ವಿಶು, ನನ್ನ ರಾಧೆಯು ನನ್ನಿಂದ ದೂರವಾದರೂ, ಅವಳು ಸದಾ ನನ್ನಲ್ಲಿಯೇ ಇರುತ್ತಾಳೆ. ಅವಳ ನೆನಪು ಸದಾ ಹಸಿರು.
ಅವಳು ಕೂಡಾ ತನ್ನೆಲ್ಲಾ ಪ್ರೀತಿಯನ್ನು ನನಗೆ ಧಾರೆ ಎರೆದಿದ್ದಳು. ಒಂದು ದಿನ ವಿಶು, ಅವಳು ಊರಿಗೆ ಹೋಗಿದ್ದಳು.(ನನಗದು ತಿಳಿದಿರಲಿಲ್ಲ). ಆ ದಿನ ನನಗವಳು ಸಿಗಲಿಲ್ಲ. ಅಂದು ನೀ ನನ್ನ ಪರಿಸ್ಥಿತಿ ನೋಡಬೇಕಿತ್ತು. ನನ್ನ ಮನಸ್ಸು ನೀರಿನಿಂದ ಮೇಲೆ ಬಿದ್ದ ಮೀನಿನ ಪರಿಸ್ಥಿತಿಯಂತಿತ್ತು. ಆದರೆ, ಮರುದಿನ ಊರಿಂದ ವಾಪಾಸ್ಸು ಬಂದ ಮಾನಸಾಳ `ಮಾನಸಾ, ನಾ ಜ್ಞಾಪಕ ಇದ್ದೀನಾ? ಅಂತ ಸುಮ್ಮನೆ ರೇಗಿಸಿದೆ. ಅದಕ್ಕೆ ಅವಳ ಉತ್ತರವೇನು ಗೊತ್ತಾ ವಿಶು? `ಅಲ್ವೋ.. ನಾ ನಿನ್ನ ಮರೆತರೆ ತಾನೆ, ಜ್ಞಾಪಿಸಿಕೊಳ್ಳೊದಿಕ್ಕೆ..? ಎಂದಳು. ಎಂಥಹ ಅರ್ಥಗರ್ಭಿತ ಮಾತು ಅಲ್ವಾ? ಅವಳ ಮಾತಿನ ಶೈಲಿಯೇ ಹಾಗಿತ್ತು. ಪ್ರೀತಿ ಇದ್ದೆಡೆ ನಂಬಿಕೆ, ಅನುಮಾನಗಳು ಇದ್ದೇ ಇರುತ್ತದೆಯೆಂದು, ಪ್ರೀತಿಯನ್ನು ಪ್ರೀತಿಯಿಂದಲೇ ಹೇಳುತ್ತಿದ್ದಳು. ಇಂಥಹ ಮಾತುಗಳಿಂದ ಒಂದೊಂದು ಸಲ ನನಗೆ ಅವಳದು ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯ ಮಾತುಗಳೇನೋ..? ಎಂದು ಭಾಸವಾಗುತ್ತಿತ್ತು.
ವಿಶು, ಕಣ್ಣಿಗೆ ಕಾಣದಿರೋ.... ಕಿವಿಗೆ ಕೇಳಿಸದಿರೋ..... ಈ ಭಾವನಾತ್ಮ ಪ್ರೀತಿ ನಮ್ಮಿಬ್ಬರನ್ನು ಪರಸ್ಪರ ಪ್ರೀತಿಯಿಂದಲೇ ಬಂಧಿಸಿತು. ಬಂಧಿಸಿ ನಮ್ಮಿಬ್ಬರಲ್ಲಿ ನಂಬಿಕೆಯನ್ನು ಸೃಷ್ಠಿಸಿತು. ಅದು ಮುಂದಿನ ಕನಸಿನ ಗೂಡನ್ನು ಕಟ್ಟಲು ಪ್ರೇರೇಪಿಸಿತು. ಇಷ್ಟೆಲ್ಲ ಮಾಡಿದ ಈ ಪ್ರೀತಿ ಕೊನೆಗೆ.....? ಇದಕ್ಕೆ `ಅತಿ' ಅನ್ನೋ ಅರ್ಥ ಕೊಟ್ಟು `ಅವನತಿ'ಯೆಡೆಗೆ ಮುಖ ಮಾಡಿಸಿತು.
ಹೀಗೆ.... ಹಲವು ವರ್ಷಗಳು ಕಾಲಗರ್ಬದಡಿ ಹೂತು ಹೋದವು ವಿಶು. ಜಗದ ನಿಯಮದಂತೆ ಅನೇಕ ಬದಲಾವಣೆಗಳು, ಪರಿವರ್ತನೆಗಳು ನಮಗರಿವಿಲ್ಲದೆ ನಡೆದವು. ಅಂದು ಅನಿವಾರ್ಯ ಕಾರಣದಿಂದ ಪರಸ್ಪರ ದೂರಾದ ನಾವು, ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಭೆಟ್ಟಿಯಾದೆವು. ತುಂಬಾ ಚೆನ್ನಾಗಿಯೇ ಮಾತನಾಡಿದಳು. ಅವಳ ದೃಷ್ಠಿಯಲ್ಲಿ ಅಪರಾಧಿ ಸ್ಥಾನದಲ್ಲಿದ್ದ ನಾನು, ಅವಳ ಜೊತೆ ಸರಿಯಾಗಿ ಮಾತನಾಡದೆ ಅಲ್ಲಿಂದ ಕಾಲ್ಕಿತ್ತೆ. ನಂತದ ಅವಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ಕ್ಷಮೆ ಕೇಳಿದೆ.(ಸಿಕ್ಕಾಗ ಮಾತನಾಡದೇ ಇದ್ದುದ್ದಕ್ಕೆ ತುಂಬಾ ಹೊತ್ತು ಮನಸ್ಸು ಬಿಚ್ಚಿ ಮಾತನಾಡಿದೆ) ಅವಳು ನನ್ನ ಪ್ರೀತಿ ಮರೆತಿಲ್ಲವೇನೋ..... ಅಂದುಕೊಂಡೆ. ಹೀಗೆ ದಿನಗಳು ಉರುಳುತ್ತಿದ್ದವು.
ನನಗೆ ಅವಳ ನೆನಪು ಮತ್ತೆ ಮತ್ತೆ, ದಿನದಿಂದ ದಿನಕ್ಕೆ `ಅತಿ'ಯಾಗುತ್ತ ಹೋಯಿತು. ಆ `ಅತಿ' ಅನ್ನುವುದು ಪರಾಕಾಷ್ಠೆಯ ಹಂತ ತಲುಪಿತು. ಅವಳ ಜೊತೆ ಮಾತನಾಡಲೇ ಬೇಕು ಎಂದು ಮನಸ್ಸು ಚಡಪಡಿಸುತ್ತಿತ್ತು.ಪ್ರಾರಂಭದಲ್ಲಿ ಚೆನ್ನಾಗಿಯೇ ಮಾತನಾಡಿದ ಅವಳು, ಒಮ್ಮೆಲೆ ಸಿಟ್ಟಿಗೆದ್ದಳು. ಏಕೆ.. ಏನಾಯ್ತು? ಅಂತ ಗೊತ್ತಾಗಲಿಲ್ಲ. ಹಾಗಂತ ನಾನವಳಲ್ಲಿ ನನ್ನ ಯಾವ ವಿಷಯವನ್ನು ಹೇಳಲಿಲ್ಲ. ಯಾಕಾಗಿ ಅವಳು ಹಾಗೆ ಮಾಡಿದಳು? ಅಂತ ತುಂಬಾ ಯೋಚಿಸಿದೆ. ಉತ್ತರ ದೊರೆಯಲಿಲ್ಲ... ಮನಸ್ಸಲ್ಲೆ ಅತ್ತು, ನೊಂದುಕೊಂಡೆ.
ವಿಶು, ಆ ದಿನಗಳಲ್ಲಿ ಅವಳು ನನಗೆ, ನಾನು ಅವಳಿಗೆ ಹೀಗೆ ಪರಸ್ಪರ ಒಬ್ಬರಿಗೊಬ್ಬರು ಪ್ರತಿಯೊಂದು ಆಗಿರುತ್ತಿದ್ದೆವು. ಅವಳು ಸದಾ ನನ್ನ ಜೊತೆ ಮಾತನಾಡುತ್ತಿದ್ದಳು. ಸುಳ್ಳೇ ನನ್ನ ರೇಗಿಸುತ್ತಿದ್ದಳು. ಇಡೀ ಜಗತ್ತಿನಲ್ಲಿ ಎಂದೂ.... ಯಾರೂ.... ಪ್ರೀತಿಸದಷ್ಟು ನಾನು ಅವಳನ್ನು, ಅವಳ ನನ್ನನ್ನು ಪ್ರೀತಿಸುತ್ತಿದ್ದಳು. ಪರಸ್ಪರ ಪೂಜಿಸುತ್ತಿದ್ದೆವು... ಆರಾಧಿಸುತ್ತಿದ್ದೆವು... ಆದರೆ, ಅಂತಹ ಪ್ರೀತಿ ಇಂದು...? ಈ ದಿನಗಳಲ್ಲಿ....?
ನನಗೊಂದು ಅರ್ಥವಾಗುತ್ತಿಲ್ಲ ವಿಶು. ಆದರೆ ನನಗವಳು ಬೇಕು. ಅವಳ ಪ್ರೀತಿ ನನಗೆ ಬೇಕು. ಈಗಷ್ಟೇ ಅಲ್ಲ... ಜೀವನ ಪರ್ಯಂತ ಅವಳ ಜೊತೆಯಲ್ಲಿಯೇ ಇರಬೇಕು. ದಿನದಿಂದ ದಿನಕ್ಕೆ ಅವಳ ನೆನಪು ಹೆಚ್ಚಾಗ್ತಾ ಇದೆ. ಅವಳ ಜೊತೆ ಯಾವಾಗ ಪ್ರೀತಿಯಿಂದ ಮಾತನಾಡುವೆನೋ... ಅವಳ ಮುಖ ಯಾವಾಗ ನೋಡುವೆನೋ.... ಎಂದೆನಿಸುತ್ತಿದೆ. ಇಷ್ಟು ವರ್ಷಗಳ ಕಾಲ ತಟಸ್ಥವಾಗಿದ್ದ ನನ್ನ ಮನಸ್ಸು ಈಗ ಯಾಕೆ ಹೀಗಾಡುತ್ತಿದೆ? ಹೇಳು ವಿಶು, ಹೇಳು. ನನ್ನ ಹೃದಯದಲ್ಲಿ ಮೂಡಿದ ಪ್ರಥಮ ಪ್ರೇಮ ಅದು ಅಂತಲಾ...? ಅಥವಾ, ಆ ಪ್ರೀತಿನೆ ಹಾಗೆನಾ...? ಗೊತ್ತಿಲ್ಲ, ಒಟ್ಟಾರೆ, ನನ್ನ ಹೃದಯ, ನನ್ನ ಪ್ರಾಣ, ನನ್ನ ಜೀವ, ನನ್ನ ಉಸಿರು ಆದಂಥ ನನ್ನ ಪ್ರೀತಿ ನನಗೆ ಬೇಕು ಅಷ್ಟೆ!
ಪ್ರೀತಿ ಬದುಕಲೇ ಬೇಕು... ಬದುಕಿ ಪ್ರೀತಿಸಬೇಕು
ನೋವ ನುಂಗಲೇ ಬೇಕು... ಅಲ್ಲೂ ಅವಳಿರಬೇಕು..
ಎದೆಯ ಪುಸ್ತಕದ ಪುಟಗಳಲ್ಲಿ, ಅವಳು ಬರೆದ ನೂರು ಸಾಲು
ಪ್ರತಿ ಸಾಲಿನಲ್ಲೂ ನಾನಭವಿಸೋ ಅವಳ ನೆನಪೆ ನನ್ನ ಸೋಲು
ಆಸೆಗೆ ನೆಲೆಯಿಲ್ಲ.. ಈ ಪ್ರೀತಿಗೆ ಬೆಲೆಯಿಲ್ಲ...!
ವಿಶು, ಅವಳ ನೆನಪು ನನಗೆ `ಅತಿ'ಯಾದಾಗ, ಹಿಂದಿನ ದಿನಗಳೆಲ್ಲ ಮರುಕಳಿಸಿ ಹೀಗೆಲ್ಲ ಭಾವನೆಗಳ ಕಟ್ಟೆಯೇ ಒಡೆದು ಬಿಡುತ್ತವೆ. ಹಾಗೆಯೆ, ವಾಸ್ತವದ ಬಗ್ಗೆ ಯೋಚನೆ ಮಾಡಿದಾಗ- ಆದದ್ದೆಲ್ಲ ಒಳ್ಳೆಯದಕ್ಕಾಗಿಯೇ ಆಗಿದೆಯೇನೋ... ಅಂತ ಅನಿಸುತ್ತದೆ. ಆಗ ಅವಳೆಲ್ಲೆ ಇರಲಿ, ಹೇಗೆ ಇರಲಿ ಸಂತೋಷವಾಗಿ ನಗ್ತಾ ಇದ್ರೆ ಸಾಕು. ಅವಳಿಗಾಗಿ, ಅವಳ ಒಳಿತಿಗಾಗಿ, ದೂರದಿಂದಲೇ ಹಾರೈಸುತ್ತ, ಭಗವಂತನಲ್ಲಿ ಪ್ರಾಥರ್ಿಸಿಕೊಳ್ಳೋಣ ಅನಿಸುತ್ತದೆ.
ಇವುಗಳ ಜಂಜಾಟದಲ್ಲಿ ವಿಶು, ಏನು ಮಾಡಬೇಕೆಂದೆ ತೋಚುತ್ತಿಲ್ಲ. ಆದರೂ ನಗು ನಗುತ್ತಾ ಇರುತ್ತೇನೆ. ಯಾಕೆ ಗೊತ್ತಾ? ನನ್ನ ಮುಖದಲ್ಲಿ ಆ ನೋವಿನ ಗೆರೆ ಕಾಣಬಾರದು, ನನ್ನ ನೋವಿನಲ್ಲಿ ಇನ್ನೊಬ್ಬರು ಬಾಗಿಯಾಗಬಾರದು ಅಂತ! ಮುಖದಲ್ಲಿ ನೋವಿನ ಗೆರೆ ಕಾಣದೆ ಇರಬಹುದು, ನನ್ನ ನೋವಿನಲ್ಲಿ ಇನ್ನೊಬ್ಬರು ಭಾಗಿಯಾಗದೆ ಇರಬಹುದು. ಆದರೆ, ಆ ನೋವು, ಯಾತನೆ, ಅಳು ನನ್ನಲ್ಲೆ ಇದ್ದೇ ಇರುತ್ತದೆ ಅಲ್ವಾ? ಅದಕ್ಕಾಗಿ ಬೇಡುವೆ ಆ ದೇವರ,
ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು..... ಎಂದು!
ನನಗೊತ್ತು ವಿಶು, `ನಿನಗೆ ನನ್ನ ನೋವಿನ ಕಲ್ಪನೆ ಇರಬಹುದು, ಆದರೆ ಅದರ ಆಳ ತಿಳಿಯದು ಎಂದು! ಆದರೂ, ಇಲ್ಲಿ ಬರೆದಂತಹ ಪ್ರತಿಯೊಂದು ಸಾಲುಗಳು ಕೂಡಾ ನಿನ್ನ ಪಾದದ ಮೇಲಿಟ್ಟ ಪುಟ್ಟ ಪಾರಿಜಾತ. ಆ ಕಾರಣ ಹಗುರವಾಗಿ ಮಾತ್ರ ತಿಳಿಯಬೇಡ. ದಯವಿಟ್ಟು.... ದಯವಿಟ್ಟು..... ದಯವಿಟ್ಟು...
1 ಕಾಮೆಂಟ್:
e preetine heege kanree nagaraj.... adaralli naralata, vedane, yatane ellanu iratte.. konege ishtella anubhavisidaru adu namage dakkodilla....
chee vidhi barahane haage ansatte..
-kiranakumara
ಕಾಮೆಂಟ್ ಪೋಸ್ಟ್ ಮಾಡಿ