ಭಾನುವಾರ, ಮೇ 5, 2013


ಹೀಗೊಂದು ಭಾವ...

ನಿನಗಾಗಿ ಕಾಯುತ್ತಾ... 

ಅದು ನನ್ನದೇ ಆದ ಒಂದು ಭಾವ ಲೋಕ. ಅಲ್ಲಿ ನಾನೊಬ್ಬನೇ ಹೊರತು, ಮತ್ತ್ಯಾರು ಇಲ್ಲ. ಆದರೆ ನನ್ನೊಂದಿಗೆ ಕಾಡಿದ ಆಕೆಯ
ಒಂದಿಷ್ಟು ನೆನಪುಗಳಿವೆ. ಆ ನೆನಪುಗಳೇ ನನ್ನ ಸಂಗಾತಿ..... ಒಂಟಿತನದ ಭಾವ ಸಂಗಾತಿ!
ಸಂಬಂಧಗಳನ್ನು ಭಗವಂತ ಬೆಸೆದಿರುತ್ತಾನಂತೆ. ನಾನೇನು ಆಕೆಯ ಬಂಧುವಲ್ಲ, ಬಳಗವಲ್ಲ, ಪ್ರೇಮಿಯಲ್ಲ. ನನಗೂ ಆಕೆಗೂ ಯಾವುದೇ ಸಂಬಂಧವೂ ಇಲ್ಲ. ಸ್ನೇಹ ಎಂಬ ಪ್ರಶ್ನೆ ಮೂಡಿದರೂ ಆಕೆಯಿಂದ ಸರಿಯಾದ ಉತ್ತರ ದೊರೆತಿಲ್ಲ. ಆದರೂ ಹೊತ್ತಲ್ಲದ ಹೊತ್ತಲ್ಲಿ ನನ್ನನ್ನು ಕಾಡುತ್ತಿರುತ್ತಾಳೆ!
ಆಕೆಯ ಕಿರುನಗೆ, ಸ್ವಾಭಿಮಾನದ ನಡಿಗೆ, ಸೌಮ್ಯಗುಣ, ಮುದ್ದು ಮಾತು, ತುಸು ನೋಟ, ನೀಡಿದ ಭರವಸೆ, ರಾತ್ರಿಯೆಲ್ಲ ಹರಿದಾಡಿದ ಸಂದೇಶಗಳು, ಲೆಕ್ಕವಿಲ್ಲದಷ್ಟು ಮಾತುಗಳು ಹೀಗೆ ಪ್ರತಿಯೊಂದು ಕೂಡಾ ಸ್ಮೃತಿ ಪಟಲದೊಳಗೆ ಸುಳಿಯುತ್ತ ಕಾಡುತ್ತಿರುತ್ತವೆ. ಅದು ನನ್ನನ್ನು ಕಾಡುವ ಸವಿ ನೆನಪಾಗಿ ಬಿಟ್ಟಿವೆ. ಪ್ರತಿ ಉಸಿರು ಅವಳೇನೆ... ದೇಹದಲ್ಲಿನ ಪ್ರತಿ ಹನಿ ಹನಿಯ ರಕ್ತದಲ್ಲೂ ಅವಳೇ.. ಅವಳ ಕಣ್ಣಿನ ಸೌಂದರ್ಯ ನನ್ನ ಕಣ್ಣಲ್ಲಿ ತುಂಬಿಕೊಳ್ಳುವ ತವಕ. ಆಕೆಯ ಗೆಜ್ಜೆಯ ಶಬ್ದದೊಂದಿಗೆ ಹೆಜ್ಜೆಯಿಡುವ ಬಯಕೆ. ಅವಳ ಕೈ ಬೆರಳ ಸಂದಿಯಲ್ಲಿ ನನ್ನ ಕೈಬೆರಳ ಬೆಸೆದು, ಮೌನವಾಗಿ ನಡೆಯುವ ಆಸೆ. ಅವಳ ಪರಿಚಯವಾದಾಗಿನಿಂದ ಏನೇನೋ ಕನಸುಗಳು... ನೂರಾರು ವಿಚಾರಗಳು!
ನಿದ್ರೆಯಿಲ್ಲದ ರಾತ್ರಿಗಳು ತೀರಾ ಮಾಮೂಲು. ಕಾರಣವೇ ಇರಲಿಲ್ಲ ನಾ ಅವಳನ್ನು ಇಷ್ಟಪಡಲು. ಅವಳಿಗೆಂದು ಬರೆದಿಟ್ಟ ಅಪೂರ್ಣ ಪತ್ರದ ಸಾಲುಗಳು ಲೆಕ್ಕವಿಲ್ಲ! ಅರ್ಧಕ್ಕೆ ನಿಂತ ಪತ್ರಗಳನ್ನೆಲ್ಲ ಮುಂದುವರೆಸಲು ಪ್ರಯತ್ನಿಸಿದಾಗ ಮನಸ್ಸು ವಿಪರೀತ ಹೋರಾಟಕ್ಕಿಳಿಯುತ್ತವೆ. ಪತ್ರದ ಅಂತ್ಯ ದೂರವಿದ್ದರೂ, ಬರೆಯಲು ಪದಗಳೇ ಸಿಗದೇ ಪೇಚಾಡುತ್ತೇನೆ.
ಸುಮ್ಮನೆ ಎದುರಾಗುತ್ತಾಳೆ, ತುಸು ನೋಟದಲ್ಲೆ ಎಲ್ಲವನ್ನು ಹೇಳಿ ಕ್ಷಣಾರ್ಧದಲ್ಲಿಯೇ ಮರೆಯಾಗುತ್ತಾಳೆ. ಇಬ್ಬರೂ ಮುನಿಸಿಕೊಳ್ಳದ ದಿನಗಳಿಲ್ಲ... ಆದರೂ ಪ್ರೀತಿಯ ಪದಗಳಿಗೆ ಬರವಿಲ್ಲ. ಪ್ರತಿ ದಿನದ ಮುಂಜಾನೆ ದೇವರ ಪ್ರಾರ್ಥನೆಯ ಬದಲು, ಪರಸ್ಪರ ಸಂಭಾಷಣೆಯ ಮೂಲಕ ಪ್ರಾರಂಭವಾಗುತ್ತವೆ. ಅವಳು ಹೇಳಬಾರದ, ಹೇಳಲಾಗದ ಎಲ್ಲ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ. ಆಗಷ್ಟೆ ಅವಳ ಮನಸ್ಸಿಗೆ ತುಸು ಸಮಾಧಾನ. ಅದಕ್ಕೆ ಪ್ರತಿಯಾಗಿ ನಾಲ್ಕು ಸಾಂತ್ವನದ ಮಾತುಗಳು ನನ್ನಿಂದ.
ಹಮ್ಮು ಬಿಮ್ಮಿಲ್ಲದ ಆಕೆಯ ಮನಸ್ಸು ಒಂದು ಮಗುವಿನಂತೆ. ಆದರೆ, ಕೆಲವು ಬಾರಿ ಜಿದ್ದಿಗೆ ಬಿದ್ದಳೆಂದರೆ ಎದುರಿಗಿದ್ದವರು ಸೋಲಲೇಬೇಕು. ಒಮ್ಮೊಮ್ಮೆ ಅವಳು, `ನಿನ್ನ ನೋಡಬೇಕು, ಒಂದೆರಡು ನಿಮಿಷ ಮಾತನಾಡಬೇಕು' ಸಿಗ್ತಿಯಾ ತಾನೆ?' ಎಂದು ಕೇಳುತ್ತಾಳೆ. ಇಲ್ಲ ಎಂದರೆ ಗೋಗರೆಯುತ್ತಾಳೆ. `ಕ್ಷಮಿಸು ಆಗಲ್ಲ' ಎಂದು ಹೇಳಿದರೆ ದಿನವಿಡೀ ರಾದ್ದಾಂತ, ಕೋಪ ಅವಳನ್ನು ಬಿಗಿದಪ್ಪಿರುತ್ತವೆ. ಪರಿಚಯದವರು ಎದುರಿದ್ದಾಗ ಅವಳು ಎಂದಿಗೂ, ನಾವಿಬ್ಬರು ಪರಸ್ಪರ ಹಚ್ಚಿಕೊಂಡಿದ್ದೇವೆ ಎಂಬ ಸಣ್ಣ ಕುರುಹನ್ನು ನೀಡುವುದಿಲ್ಲ. ನಾನೆ ಎಲ್ಲಿಯಾದರೂ ಆ ವಿಷಯದಲ್ಲಿ ಎಡುವುತ್ತೇನೇನೋ ಎಂಬ ಭಯ. ಆದರೆ ಬೆರಳೆಣಿಕೆಯಷ್ಟು ಸ್ನೇಹಿತರಿಗಷ್ಟೇ ಗೊತ್ತು, ನಾವು ಪರಸ್ಪರ ಇಷ್ಟಪಟ್ಟಿದ್ದೀವಿ ಅಂತ? ಅದರಲ್ಲಿ ಒಬ್ಬ ಸ್ನೇಹಿತನಿಗಂತೂ ಸಂಪೂರ್ಣ ಗೊತ್ತು `ನಾವಿಬ್ಬರೂ ತುಂಬಾ ಹಚ್ಚಿಕೊಂಡಿದ್ದೇವೆ' ಎಂದು! ಆತ ಆಗೊಮ್ಮೆ ಈಗೊಮ್ಮೆ ನನ್ನನ್ನು ಕಾಡಿಸುತ್ತ ಪೀಡಿಸುತ್ತಲೇ ಇರುತ್ತಾನೆ. ಸ್ವಾಭಿಮಾನದ ಗೋಡೆ ನಾನು ಕೆಡವುತ್ತೇನೆ ಎಂದು....!
ಅವಳು ನನ್ನ ಬದುಕಿನ ಸ್ಪೂರ್ತಿ. ಕಾಡುತ್ತ ನೆನಪಾಗುತ್ತ ಹೊಸ ಉತ್ಸಾಹವನ್ನು ತುಂಬುವ ಚಿಲುಮೆ. ಪದೇ ಪದೇ ಮೌನವಾದರೂ, ಮರಳಿ ಮುನಿಸಿಕೊಂಡರೂ, ಕೊನೆಗೆ ಅವಳು ನನ್ನ ದ್ವೇಷಿಸಿದರೂ ನನಗೆ ಇಷ್ಟಾನೆ!
ಆದರೆ, ಹೇಳಲಾಗದ ಮಾತೊಂದು ಇಬ್ಬರನ್ನು ಕಟ್ಟಿಹಾಕಿದೆ. ಅವಳು ನಾ ಹೇಳಲಿ ಎಂದು.... ನಾ ಅವಳು ಹೇಳಲಿ ಎಂದು....  ಇಬ್ಬರೂ ಮೌನವಾಗೆ ದಿನ ದೂಡುತ್ತಿದ್ದೇವೆ!!! ಕಾದು ನೋಡೋಣ... ಏನು ಎತ್ತ ನಮ್ಮಗಳ ಚಿತ್ತ ಎಂದು?

ಕಾಮೆಂಟ್‌ಗಳಿಲ್ಲ: