ಸೋಮವಾರ, ಮೇ 13, 2013


ಪ್ರೀತಿ ಹುಟ್ಟೋದು......?

ಜಿದ್ದಿಗೆ ಬಿದ್ದು ಪ್ರೀತಿಸಲೇ ಬೇಕು ಅಂತ, ಅದರ ಹಿಂದೆಯೇ ಹೊರಟರೆ, ಖಂಡಿತ ಅದು ದೊರಕದು. ಹಾಗೆ ಇಷ್ಟ ಪಟ್ಟಾಗ ಪ್ರೀತಿ ಬೇಕು ಅಂದಾಗ ಅದು ಹುಟ್ಟುವುದೂ ಇಲ್ಲ. ಅದು ಅನಿರೀಕ್ಷಿತ ಕ್ಷಣದಲ್ಲಿ ಅರಿವಿಲ್ಲದೆ ಪರಸ್ಪರ ಎರಡು ಹೃದಯಗಳಲ್ಲಿ ಹುಟ್ಟಿಕೊಳ್ಳುವಂತಹದ್ದು.
ಯಾವುದೋ ಚೆಂದದ ಹುಡುಗ/ಹುಡುಗಿ ಕಂಡಾಗ ಇವನೇ/ಇವಳೇ ಇಷ್ಟ ಎಂದು ಅವರ ಮುಂದೆ ಪ್ರೇಮ ನಿವೇದನೆ ಮಾಡಿ, `ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ, ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ' ಎಂದು ಕೇಳಿಕೊಳ್ಳುವುದು ಆಕರ್ಷಣೆ ಪ್ರೀತಿಯಷ್ಟೇ! ಅದು ನಿಜವಾದ ಪ್ರೀತಿಯಾಗಲಾರದು. ಪ್ರೀತಿ ಹುಟ್ಟೋದೆ ಒಂದು ಆಕಸ್ಮಿಕ... ಅದು ಒಂದು ವಿಸ್ಮಯ. ಅದು ನಿಜವಾಗಿಯೂ ಮೊಳಕೆ ಒಡೆಯೋದು ಕಣ್ಣಿನಿಂದ. ಪರಸ್ಪರ ಎರಡು ಕಣ್ಣುಗಳು ಒಂದನ್ನೊಂದು ಕ್ಷಣಕಾಲ ಬೆರೆತಾಗ, ಹೃದಯಕ್ಕೆ ತಾಗಿ, ಅದರ ಅಂತರಾಳದಲ್ಲಿ ನಡುಕವಾಗಿ, ಮನಸ್ಸು ಮರ್ಕಟನಂತಾಗಿ ಯಾವುದೋ ಒಂದು ಅರಿವಿಲ್ಲದ ಲೋಕದಲ್ಲಿ ಪಯಣಿಸಿದಂತಾಗುತ್ತದೆ. ನೋಟದ ಸಮ್ಮಿಲನದ ಸಂದರ್ಭದಲ್ಲಿ ಇಬ್ಬರ ಮೊಗದಲ್ಲಿಯೂ ಸೂಕ್ಷ್ಮ ಬದಲಾವಣೆ, ಕಣ್ಣಂಚಿನಲ್ಲಿ ಚಂಚಲತೆ, ನೋಟಕ್ಕೆ ಸಿಕ್ಕಿಹಾಕಿಕೊಂಡನೆಂಬ ಭಾವನೆಯಿಂದ ತಪ್ಪಿಸಿಕೊಳ್ಳುವ ಆತುರ ಮನದಲ್ಲಿ ಮೇಳೈಸುತ್ತವೆ. ಈ ವರ್ಣನಾತೀತ ಮಧುರ ಅನುಭವ ಮತ್ತು ಆತುರದ ಕ್ಷಣಗಳೇ ಪ್ರೀತಿಯ ವಸಂತ ಕಾಲ....!


ಕಣ್ಣಂಚಿನಿಂದ ಹುಟ್ಟಿದ ಪ್ರೀತಿ ಅನಿರೀಕ್ಷಿತವಾಗಿ ಎದುರಾಗುತ್ತಲೇ ಹೋಗುತ್ತವೆ. ಅರಿವಿಲ್ಲದೆ ಆ ಪ್ರೀತಿಯ ಸುತ್ತ ಮನಸ್ಸು ಓಡಾಡುತ್ತ, ಅದರ ಸನಿಹದಲ್ಲಿರಲು ಚಡಪಡಿಸುತ್ತವೆ. ಎದುರಿಗೆ ಬರಲು ಭಯ... ಬಿಟ್ಟಿರಲು ಬೇಸರ... ಮಾತನಾಡ ಬೇಕೆಂದರೆ ಸಂಕೋಚ... ತೊದಲುವ ನಾಲಗೆ... ಇವುಗಳ ನಡುವೆಯೇ, `ಪ್ರೀತಿಯನ್ನು ನೋಡಬೇಕು, ಅದರ ಜೊತೆ ಮಾತನಾಡಬೇಕು' ಎಂದು ಮನಸ್ಸು ಒಂದೇ ಸಮನೆ ಹಪಹಪಿಸುತ್ತಿರುತ್ತವೆ. ಪರಸ್ಪರ ಮನಸ್ಸುಗಳು ಒಂದನ್ನೊಂದು ಕಲೆತು, ಕಲ್ಪನೆಯಲ್ಲೇ ಒಂದಾಗಿ ಬಿಟ್ಟಿರುತ್ತವೆ. `ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ' ಎಂಬ ಒಲವಿನ ನುಡಿ ಝರಿಯಾಗಿ ಹರಿದು, ಇನ್ನೊಂದು ಹೃದಯದಿಂದ ಹೊರಬರುವ ಬಿಸಿಯುಸಿರಿಗೆ ತಾಗಿ ಪ್ರೀತಿಯ ಅಧಿಕೃತ ಮುದ್ರೆ ಒತ್ತಿ ಬಿಡುತ್ತವೆ. ಚಂಚಲ ನಯನಗಳಿಂದ ಹುಟ್ಟಿದ ಪ್ರೀತಿ ಎರಡು ಹೃದಯಗಳನ್ನು ಬೆಸೆದು ತನ್ನ ಅಧಿಪತ್ಯ ಸಾಧಿಸುತ್ತವೆ. ನಂತರ ಏನಿದ್ದರೂ ಪ್ರೇಮದ್ದೆ ಸಾಮ್ರಾಜ್ಯ.....!
ಸಾಮಾನ್ಯವಾಗಿ ಎಲ್ಲರೂ ಪ್ರೀತಿಯ ಹಿಂದೆ ಬೀಳಲು ತವಕಿಸುತ್ತಾರೆ. ಅದು ತಪ್ಪಲ್ಲ. ಬದುಕಿನ ಅನಿರೀಕ್ಷಿತ ಸಂದರ್ಭದಲ್ಲಿ ಎದುರಾಗೋ ಆ ಪ್ರೀತಿ, ವರ್ಣನಾತೀತ. ಸುಂದರ ಭಾವನೆಗಳ ಪಲ್ಲಕ್ಕಿಯ  ಮೆರವಣಿಗೆ. ಹೇಳಲಾಗದ ಅನುಭವಿಸಲಾರದ ಮಧುರ ಯಾತನೆ. ಪ್ರೀತಿ ಕಣ್ಣಿನಿಂದ ಚಿಗುರೊಡೆಯುತ್ತವೆ ಎಂದು ಕಂಡಕಂಡವರ, ಇಷ್ಟಪಟ್ಟವರ ಕಣ್ಣನ್ನೆ ನೋಡುತ್ತ ಅದನ್ನು ಹುಡುಕುವುದು ತರವಲ್ಲ. ಆ ಪ್ರೀತಿಯ ನೋಟಕ್ಕೆ ಇನ್ನೊಂದು ನೋಟ ಸೇರುವುದು ಕೇವಲ ಆಕಸ್ಮಿಕ. ಹಾಗೆ ಅರಿವಿಲ್ಲದೆ ಸಂಭವಿಸುವ ಒಂದು ವಿಸ್ಮಯ.
ಪ್ರೀತಿಸಬೇಕೆಂಬ ಗುಂಗಿನಲ್ಲಿ ಸೌಂದರ್ಯದ ಹಿಂದೆ ಬಿದ್ದು, ಇನ್ನಿಲ್ಲದ ಮೋಹ, ಆಸೆಗೆ ಬಲಿಯಾಗಿ ಪ್ರೀತಿಯಿಲ್ಲದೆ ಇದ್ದರೂ ಯಾರ್ಯಾರನ್ನೋ ಇಷ್ಟಪಟ್ಟು, ಬದುಕನ್ನು ಕುರುಡು ಪ್ರೀತಿಗೆ ಬಲಿ ಕೊಡಬಾರದು. ಪ್ರೀತಿಸುವ ಪ್ರೀತಿ ಜೀವನಕ್ಕೆ ಚೈತನ್ಯದ ಚಿಲುಮೆಯಾಗಬೇಕು. ಮುಗ್ಗರಿಸಿ ಬೀಳುವ ಬದುಕನ್ನು ಕೈ ಹಿಡಿದು ಆಲಂಗಿಸಬೇಕು. ಉಸಿರು ಇರುವವರೆಗೂ ಉಸಿರಲ್ಲಿ ಉಸಿರಾಗಿ ಅದು ಬೆರೆತಿರಬೇಕು. ಸುಳ್ಳೆ, ಆ ಪ್ರೀತಿಯ ಹೆಸರಲ್ಲಿ ಬದುಕನ್ನು ದುರ್ಗತಿಗೆ ಕೊಂಡೊಯ್ಯುವುದು ಸರಿಯಲ್ಲ.... ಏನಂತಿರಾ ಸ್ನೇಹಿತರೇ.....?

(ಪ್ರೀತಿ ಕೇವಲ ಕಣ್ಣಿನಿಂದ ಮಾತ್ರ ಹುಟ್ಟುವುದಿಲ್ಲ... ಅದು ಕೂಡಾ ಒಂದು ಕಾರಣವಷ್ಟೇ! ಪ್ರೀತಿ ಹುಟ್ಟಲು ನಾನಾ ಕಾರಣಗಳಿವೆ....... 

ಕಾಮೆಂಟ್‌ಗಳಿಲ್ಲ: