ಶನಿವಾರ, ಜನವರಿ 17, 2015

ಮಾನವ ಜನ್ಮ ದೊಡ್ಡದು... ಹಾಳು ಮಾಡಿಕೊಳ್ಳಬೇಡಿರಾ..?

'ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಗಳಿರಾ....' ಎಂಬಂತೆ ಭಗವಂತ ನೀಡಿದ ಸುಂದರ ಮಾನವ ಜನ್ಮವನ್ನು ಪ್ರೀತಿ, ಸ್ನೇಹ, ವಿಶ್ವಾಸದಿಂದ ಕಾಪಾಡಿಕೊಂಡು ಹೋಗಬೇಕು. ನಂಬಿ ಬಂದ ಬಾಳ ಸಂಗಾತಿಯ ಜೊತೆ ನಂಬಿಕಸ್ಥರಾಗಿ ಬದುಕಿನ ಬಂಡಿಯನ್ನು ಮುನ್ನಡೆಸಬೇಕು. ಮನಸ್ಸು ಮತ್ತು ದೇಹ ಒಬ್ಬರಿಗೇ ಮೀಸಲಾಗಿ ಸಮರ್ಪಣಾ ಭಾವದಿಂದ ದಾಂಪತ್ಯ ಗೀತೆಯನ್ನು ಗೀಚಬೇಕು....... 

ನಾಗರಾಜ್ ಬಿ.ಎನ್.
ಕಾಲಾಯ ತಸ್ಮೈ ನಮಃ.................!
ಕಾಲಚಕ್ರದ ಉರುಳಾಟದಲ್ಲಿ ಬದುಕಿನ ಶೈಲಿಯೂ ಹಂತ ಹಂತವಾಗಿ ಬದಲಾಗಿಬಿಟ್ಟಿದೆ. ಪ್ರತಿಕ್ಷಣವೂ ಕೂಡಾ ಆಧುನಿಕತೆಯ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿ ಒದ್ದಾಡುತ್ತಿದ್ದೇವೆ. ಮಾನವ ಸಂಬಂಧಗಳೆಲ್ಲ ಕೂಡಿ-ಕಳೆಯುವ ಲೆಕ್ಕಾಚಾರವಾಗಿ, ವ್ಯವಹಾರದ ದ್ಯೋತಕವಾಗಿಬಿಟ್ಟಿದೆ. ಸಂಸ್ಕಾರ, ಸಂಸ್ಕೃತಿ ಎನ್ನುವುದು ಮಖಾಡೆ ಮಲಗಿ ಇನ್ನಿಲ್ಲವಾಗಿದೆ. `ಪರಿವರ್ತನೆ ಜಗದ ನಿಯಮ' ಎಂದರೆ ಇದೇನಾ....!!?
ಹಿರಿಯರು ನಡೆದ ಸನ್ಮಾರ್ಗಗಳು ಈಗ ಮುಸುಕು ಮುಸುಕಾಗಿ, ಕಂಡೂ ಕಾಣದಂತಾಗಿವೆ. ಅವರ ಭವ್ಯ ಪರಂಪರೆ ಅವರ ಜೊತೆ ಜೊತೆಯಲ್ಲಿಯೇ ಮಣ್ಣಾಗಿ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಆ ಬದುಕು ಬೇಕೆನಿಸಿದರೂ ಈಗ ನಮಗೆ ಸಿಗಲಾರದು. ಈಗೇನಿದ್ದರೂ ವ್ಯಾವಹಾರಿಕ ಜಗತ್ತಿನ ಬೇಕು-ಬೇಡಗಳ ಜೀವನ ಮಾತ್ರ. ಲೌಕಿಕ ಪ್ರಪಂಚದಲ್ಲಿ ಸ್ವಾರ್ಥಕ್ಕೆ ಪ್ರಾಮುಖ್ಯತೆ ನೀಡಿ ನಮ್ಮದಾದಂತ ಸಂಸ್ಕಾರವನ್ನೇ ಅಧೋಗತಿಗೆ ಕೊಂಡೊಯ್ಯುತ್ತಿದ್ದೇವೆ.
ಸ್ವೇಚ್ಛಾಚಾರದ ಬದುಕು ಬೇಕೇ...?
ಈ ಹಿಂದೆ ನಮ್ಮ ಶರಣರು ದೇಹವನ್ನು ದೇವಾಲಯಕ್ಕೆ ಹೋಲಿಸಿ `ದೇಹವೆ ದೇವಾಲಯ' ಎಂದು ಹಾಡಿ ಹೊಗಳಿದ್ದರು. ದೇಹದಲ್ಲಿರುವ ಜೀವಾತ್ಮನಿಗೆ ಪರಮಾತ್ಮನ ಸ್ಥಾನ ನೀಡಿ, ಪೂಜಿಸಿ, ಆರಾಧಿಸಿ ಎಂದು ಸೂಕ್ಷ್ಮವಾಗಿ ತಿಳಿ ಹೇಳಿದ್ದರು. ಅಷ್ಟೊಂದು ಉತ್ಕೃಷ್ಠ ಸ್ಥಾನಕ್ಕೆ ಏರಿಸಿದ ದೇಹ, ಪ್ರಸ್ತುತ ದಿನಗಳಲ್ಲಿ ವ್ಯಾವಹಾರಿಕ ಸರಕಾಗುತ್ತಿರುವುದು ವಿಪಯರ್ಾಸದ ಸಂಗತಿ....! ಈ ಜಗತ್ತಿನಲ್ಲಿ ಹಣಕ್ಕಾಗಿ ಏನೆಲ್ಲ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ.
ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಕಾಯಾ, ವಾಚಾ, ಮನಸಾ ಜೀವನ ಪರ್ಯಂತ ಜೊತೆಯಾಗಿಯೇ ಬಾಳಿ ಬದುಕುತ್ತೇನೆ ಎಂದು ಹೇಳಿದವರು, ಎಲ್ಲ ರೀತಿ-ನೀತಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವತರ್ಿಸುತ್ತಾರೆ. ನಾಲ್ಕು ಗೋಡೆಗಳ ನಡುವೆ ಮಾತ್ರ ಸೀಮಿತವಾಗಿರಬೇಕಾದ ಕೆಲವು ವೈಯಕ್ತಿಕ ಬದುಕು, ಹಾದಿ-ಬೀದಿಯಲ್ಲಿ ಹರಾಜಾಗುತ್ತಿವೆ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ಆಡುವವರ ನಾಲಿಗೆಯ ಮೇಲೆ ಅಂಕೆಯಿಲ್ಲದೆ ಅದು ಹರಿದಾಡುತ್ತಿದೆ. ಆದರೂ ಕೂಡಾ ಇದ್ಯಾವುದರ ಪರಿವೇ ಇಲ್ಲದಂತೆ ಸ್ವೇಚ್ಛೆಯಿಂದ ಬದುಕು ಮುನ್ನಡೆಸುತ್ತಾರೆ.
ದೈವ ಸಂಕಲ್ಪಿತ ಜೋಡಿಗಳು....
ದಾಂಪತ್ಯದ ಗೀತೆ ಹಾಡಿದವರೇ ಇರಲಿ... ಪ್ರೇಮ ರಾಗದಲ್ಲಿ ಓಲಾಡುತ್ತಿರುವ ಜೋಡಿಗಳೇ ಇರಲಿ... ಇಬ್ಬರು ಸಹ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳಬೇಕು. `ಒಂದು ಗಂಡಿಗೊಂದು ಹೆಣ್ಣು' ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಮಾತಿನಂತೆ, ನಂಬಿ ಬಂದ ಹುಡಗಿ/ಹುಡುಗನಿಗೆ ಜೀವನ ಪರ್ಯಂತ ನಂಬಿಕಸ್ಥರಾಗಿಯೇ ಬದುಕಬೇಕು. ಹೆಣ್ಣು ಹೇಗೆ ತನ್ನ ಗಂಡ ಶ್ರೀರಾಮನಂತೆ ಇರಬೇಕೆಂದು ಬಯಸುತ್ತಾಳೆಯೋ ಹಾಗೆಯೇ, ಗಂಡು ಕೂಡಾ ತನ್ನ ಹೆಂಡತಿ ಸೀತೆಯಂತೆಯೇ ಇರಬೇಕೆಂದು ಬಯಸುವುದರಲ್ಲಿ ಯಾವ ತಪ್ಪಿಲ್ಲ ಅಲ್ಲವೇ?
ಅಮ್ಮನ ಮಡಿಲಲ್ಲಿ ಬೆಳೆದ ಹುಡುಗ ಮದುವೆಯಾದ ನಂತರ ಜೊತೆಯಾಗಿ ಬಂದ ಹುಡುಗಿಯ ಜೊತೆ ಬಾಳಿ ಬದುಕ ಬೇಕಾಗುತ್ತದೆ. ಅವನಿಗೆ ಅವಳೇ ಸರ್ವಸ್ವವಾಗಿ, ತನ್ನೆಲ್ಲ ಬೇಕು ಬೇಡಗಳನ್ನು ಪೂರೈಸುವ ದೇವತೆಯಾಗುತ್ತಾಳೆ. ಹಾಗೆಯೇ, ಹೆಣ್ಣು ಕೂಡಾ ತನ್ನೆಲ್ಲ ರಕ್ತ ಸಂಬಂಧಿಗಳನ್ನು ಬಿಟ್ಟು ಸುಂದರ ಬದುಕಿನ ಕನಸು ಕಟ್ಟಿಕೊಂಡು ಹುಡುಗನನ್ನು ಹಿಂಬಾಲಿಸುತ್ತಾಳೆ. ಅವಳ ಪಾಲಿಗೆ ಆಕೆಯ ಗಂಡ ಸಾಕ್ಷಾತ್ ಭಗವಂತನೇ...!! ಹೀಗೆ ಇಬ್ಬರೂ ಕೂಡಾ ಪರಸ್ಪರ ಒಬ್ಬರಿಗೊಬ್ಬರು ದೈವ ಸಮಾನರಾಗಿ ಕಂಡು ಬರುತ್ತಾರೆ. ಇಂತಹ ಅದ್ಭುತ ದೈವ ಸಂಕಲ್ಪಿತ ಕೆಲವು ಜೋಡಿಗಳು ಬರ ಬರುತ್ತ ಹಾದಿ ತಪ್ಪಿ ಎಲ್ಲೆ ಮೀರುತ್ತಿರುವುದು ವಿಷಾದನೀಯ.
ಪಿಸುಮಾತಿನ ಪ್ರೀತಿ.....
ಪ್ರೀತಿ ಯಾವಾಗಲೂ ಒತ್ತಾಯ ಪೂರ್ವಕವಾಗಿ ಹುಟ್ಟಿಕೊಳ್ಳುವುದಿಲ್ಲ. ಅದೊಂದು ಆಕಸ್ಮಿಕ ಅವಘಡ. ಆ ಸನ್ನಿವೇಶದಲ್ಲಿ ಮೇಳೈಸಿದ ಹೃದಯಾಂತರಾಳದ ಪ್ರೀತಿ ಪರಸ್ಪರ ವಿನಿಮಯ ಮಾಡಿಕೊಂಡಾಗ ಅದು ಅರ್ಥ ಪಡೆದುಕೊಳ್ಳುತ್ತದೆ. ಆಗ ಸುಂದರ ಪ್ರೀತಿಯ ಮಹಾಕಾವ್ಯ ರಚನೆಯಾಗಿ, ಪರಸ್ಪರ ಬದುಕಿಗೆ ಸ್ಪೂತರ್ಿಯಾಗುತ್ತದೆ. ಅಲ್ಲಿ ಮನಸ್ಸುಗಳು ಪಿಸುಮಾತಿನೊಂದಿಗೆ ಬೆರೆತಿರುತ್ತವೆ. ಕನಸಿನ ಗೂಡನ್ನು ಹೆಣೆದುಕೊಂಡು ನೀಲಾಕಾಸದಲ್ಲಿ ತೇಲಾಡುತ್ತಿರುತ್ತವೆ. ಅಂದರೆ ಮಾನಸಿಕವಾಗಿ ಅವರ ಮನಸ್ಸುಗಳು ಒಂದಾಗಿರುತ್ತವೆ. ಹೀಗೆ ಒಂದಾದ ಮನಸ್ಸುಗಳು ಉದ್ದೇಶ ಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ದೂರಾಗುತ್ತವೆ. ಆಗ ಆ ಮನಸ್ಸುಗಳು ಇನ್ನೊಂದು ಮನಸ್ಸಿನೊಂದಿಗೆ ಸಮ್ಮಿಲನಗೊಳ್ಳುತ್ತವೆ. ಈಗಾಗಲೇ ಒಬ್ಬರಿಗೆ ಮನಸ್ಸು ನೀಡಿ ಬದುಕಿನ ಎಲ್ಲ ಪುಟಗಳಲ್ಲಿ ಸುಂದರ ಕಾವ್ಯ ಗೀಚಿರುತ್ತಾರೆ. ಆದರೆ, ಬದಲಾದ ಸನ್ನಿವೇಶದಿಂದ ದೇಹ ಇನ್ನೊಬ್ಬರಿಗೆ ನೀಡಲು ಅಣಿಯಾಗಬೇಕಿದೆ. ಮನಸ್ಸು ಒಬ್ಬರಿಗೆ ನೀಡಿ ದೇಹ ಇನ್ನೊಬ್ಬರಿಗೆ ನೀಡಿದರೆ ಅದಕ್ಕೇನರ್ಥ...!? ಆ ವೈವಾಹಿಕ ಜೀವನ ನಿಜವಾಗಿಯೂ ಸಾರ್ಥಕತೆ ಪಡೆದುಕೊಳ್ಳುತ್ತವೆಯೇ...?

'ನಲಿಯಲಿ ನಲಿಯಲಿ, ಯಾರ ಪ್ರೀತಿಯೂ ಛೇದವಾಗದಿರಲಿ.......!!'

ಮಾನವ ಸಂಬಂಧಗಳು ಎಷ್ಟೊಂದು ವಿಚಿತ್ರ ಅಲ್ವಾ...? ನಿನ್ನೆ ಇದ್ದ ಸಂಬಂಧ ಇಂದು ಇರುವುದಿಲ್ಲ. ಇಂದು ಆದ ಪರಿಚಯ ನಾಳೆಯಾಗುವಷ್ಟರಲ್ಲಿ ಮರೆತು ಹೋಗಿರುತ್ತವೆ. ನಾಳೆ ಎನ್ನುವಷ್ಟರಲ್ಲಿ ಇನ್ಯಾರೋ ಎದುರಿಗೆ ಬಂದು ನಿಂತಿರುತ್ತಾರೆ. 'ನಿನ್ನೆ-ಇಂದು-ನಾಳೆ'ಗಳ ನಡುವೆ ಬಂದು ಹೋಗುವ ಅತಿಥಿಗಳೇ ನಮ್ಮ ಸಂಬಂಧಿಗಳಾಗುತ್ತಾರೆ... ಸ್ನೇಹಿತರಾಗುತ್ತಾರೆ... ಹಿತೈಷಿಗಳಾಗುತ್ತಾರೆ... ಗುರುವಾಗುತ್ತಾರೆ... ಅವರಲ್ಲಿ ಕೆಲವರು ಬದುಕಿನುದ್ದಕ್ಕೂ ಜೊತೆ-ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಇನ್ನು ಕೆಲವರು, ನೆನಪಾಗಿ ಸದಾ ಕಾಡುತ್ತ ಇರುತ್ತಾರೆ.
ಈ ಬದುಕೆ ಹೀಗೆ... ಇದೊಂದು ಅನಿರೀಕ್ಷಿತಗಳ ಸಂತೆ. ಯಾವ ಕ್ಷಣದಲ್ಲೂ ಎನೂ ಬೇಕಾದರೂ ಆಗಬಹುದು. ಅದನ್ನು ಯಾರೂ ಅರಿಯರು. ನಾಲ್ಕು ದಿನದ ಈ ಬದುಕಿನಲ್ಲಿ 'ನಿನ್ನೆ-ಇಂದು-ನಾಳೆ'ಗಳ ನಡುವೆ ಬಂದು ಹೋಗುವ ಜನರೊಡನೆ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಪ್ರಾಮಾಣಿಕತೆಯ ಪ್ರತಿಬಿಂಬವಾಗಿ ದೇದೀಪ್ಯಮಾನವಾಗಿ ಬೆಳಗಬೇಕು.
ಆದರೆ, ಸ್ವಾರ್ಥ ತುಂಬಿದ ಜಗತ್ತಿನಲ್ಲಿ 'ನಂಬಿಕೆ-ವಿಶ್ವಾಸ' ಎನ್ನುವುದು ಮರೆಮಾಚಿ ಹೋಗಿದೆ. ಪ್ರಾಮಾಣಿಕತೆ ಎನ್ನುವುದು ಕಾಲ ಗರ್ಭದಲ್ಲಿ ಹೂತು ಹೋಗಿದೆ. ನಂಬಿಕೆಯ ಮುಖವಾಡ ಧರಿಸಿ, ಪ್ರೀತಿ-ವಿಶ್ವಾಸದ ತಾಯಿ ಬೇರನ್ನೇ ಕತ್ತರಿಸುತ್ತಿದ್ದಾರೆ. ಪ್ರಾಮಾಣಿಕತೆಯ ಸೋಗಿನಲ್ಲಿ, ಬೆನ್ನಿಗೆ ಚೂರಿ ಇರಿಯುತ್ತಾರೆ. ಸ್ವಾರ್ಥ ಲಾಲಸೆಯಲ್ಲಿ ಬಂದದ್ದೆಲ್ಲ ಬರಲಿ ಎನ್ನುತ್ತ.... ನಯವಾಗಿ ವಂಚಿಸುತ್ತಲೇ ಹೋಗುತ್ತಾರೆ.
ಆದರೂ ಇಲ್ಲಿ, ಯಾರನ್ನೇ ನಂಬುವುದಾದರೆ ಸಂಪೂರ್ಣವಾಗಿ ನಂಬಬೇಕು. ನಂಬಿದ ವ್ಯಕ್ತಿ ಕೊನೆವರೆಗೂ ಉತ್ತಮ ಸ್ನೇಹಿತನಾಗಿರುತ್ತಾನೆ. ಇಲ್ಲವೇ, ಬದುಕಲ್ಲಿ ಯಾರೂ ನೀಡದ ಅನುಭವವೊಂದನ್ನು ಅವನು ನಮಗೆ ನೀಡಿ ಹೋಗುತ್ತಾನೆ. ಅದರಿಂದ ನಂಬಿದ ವ್ಯಕ್ತಿಯ ಬದುಕು ಇನ್ನೂ ಉನ್ನತಕ್ಕೇರುತ್ತದೆ. ಮುಂದೊಂದು ದಿನ, ವಂಚಿಸಿದ ವ್ಯಕ್ತಿ 'ನಾನು ತಪ್ಪು ಮಾಡಿದೆ' ಎಂದು ಖಂಡಿತ ಕೊರಗಿ ಪಶ್ಚಾತಾಪ ಪಡುತ್ತಾನೆ. ಆದರೆ, ಈ ಸತ್ಯ ಅರಿವಾಗುವಷ್ಟರಲ್ಲಿ ಅವನ ಬದುಕಿನ ಅತ್ಯಮೂಲ್ಯ ಸಮಯ ಗತಿಸಿ ಹೋಗಿರುತ್ತವೆ.
ಯಾವುದೇ ಸಂಬಂಧವಿರಲಿ... ಆ ಸಂಬಂಧ ಎಂದೂ ಬಾಡದಿರಲಿ. ಅದರಲ್ಲಿ 'ಪ್ರೀತಿ-ವಿಶ್ವಾಸ-ಪ್ರಾಮಾಣಿಕತೆ' ಸದಾ ನಳನಳಿಸುತ್ತಿರಲಿ. 'ನಲಿಯಲಿ ನಲಿಯಲಿ, ಯಾರ ಪ್ರೀತಿಯೂ ಛೇದವಾಗದಿರಲಿ.......!! 

ಒಂದು ಅಳಿಲು ಮರಿಯ ಕಥೆ....

ಕಾಲೇಜ್ ಮುಗಿಸಿ ಲಗು ಬಗೆಯಲ್ಲಿ ಮನೆಗೆ ಬಂದಾಕೆ, ಚಪ್ಪಲಿಯನ್ನು ತೆಗೆಯದೆ ಒಳಗೆ ಪ್ರವೇಶಿಸಿದಳು. ಆಲೂ.... ಆಲೂ ಎಂದು ಒಂದೇ ಸಮನೇ ಕೂಗಿದಳು. ಮನೆಯೆಲ್ಲ ಹುಡುಕಾಡಿದಳು. ಸುತ್ತೆಲ್ಲ ತಡಕಾಡಿದಳು. ಊಹೂಂ..... ಎಲ್ಲಿಯೂ ಆಲೂ ಕಂಡು ಬಂದಿಲ್ಲ. ಅಲ್ಲಿಯೇ ಕುಸಿದು ಬಿದ್ದಳು. ಬಿಕ್ಕಿ ಬಿಕ್ಕಿ ಅತ್ತಳು....!

ನಾಗರಾಜ್ ಬಿ.ಎನ್.
ಅವಳ ಹೆಸರು ಇಂಚರ. ಪ್ರಬುದ್ಧ ಮನಸ್ಸಿನ ಹುಡುಗಿ. ಕೇರಳದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ತನ್ನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಳೆ.
ಪ್ರತಿ ದಿನದಂತೆ ಅಂದು ಕೂಡಾ ಅವಳು ಕಾಲೇಜಿಗೆ ಹೋಗುತ್ತಿದ್ದಳು. ಅಲ್ಲೆ ಪಕ್ಕದ ರಸ್ತೆಯಲ್ಲಿ ಚಿಕ್ಕ ಯಾವುದೋ ಚಿಕ್ಕ ಪ್ರಾಣಿಯೊಂದು ತೆವಳುತ್ತಾ ಹೋಗುತ್ತಿತ್ತು. ಕುತೂಹಲದಿಂದ ಅದರ ಬಳಿಗೆ ಹೋದ ಅವಳು, ಒಮ್ಮೆಲೆ ಆತಂಕಗೊಂಡಳು.
ಅದು ಅಳಿಲಿನ ಮರಿ. ಜನ್ಮ ತಳೆದು ಬಹುಶಃ ಹದಿನೈದು ದಿನವಾಗಿರಬಹುದು. ಈಗಷ್ಟೆ ರೋಮಗಳು ಪುಟ್ಟದಾಗಿ ಹುಟ್ಟಿಕೊಳ್ಳುತ್ತಿದ್ದವು. ತಾಯಿ ಅಳಿಲಿನಿಂದ ಅದು ತಪ್ಪಿಸಿಕೊಂಡು ರಸ್ತೆಗೆ ಬಂದಿತ್ತು. ಮುದ್ದು-ಮುದ್ದಾಗಿ ಕಾಣುತ್ತಿರುವ ಆ ಮರಿಯನ್ನು ಅಲ್ಲಿಯೇ ಬಿಟ್ಟು ಹೋದರೆ, ಅಪಾಯ ಎಂದರಿತ ಇಂಚರ, ಅದನ್ನು ಕಾಲೇಜಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದಳು.
 ನಿಧಾನವಾಗಿ ಹು ಎತ್ತುವಂತೆ ಆ ಪುಟ್ಟ ಅಳಿಲಿನ ಮರಿಯನ್ನು ಎತ್ತುಕೊಂಡು, ಪ್ರೀತಿಯಿಂದ ಅದರ ಮೈ ಸವರಿ, ಒಂದು ಮುತ್ತನಿಟ್ಟಳು. ತನ್ನ ಕಾಲೇಜಿನ ಬ್ಯಾಗ್ನಲ್ಲಿಯೇ ಒಂದು ಜಾಗ ಮಾಡಿ, ಜೋಪಾನವಾಗಿ ಇರಿಸಿ ಕಾಲೇಜ್ ಕಡೆ ಮುಖ ಮಾಡಿದಳು.
ಅಅವಳ ಪುಣ್ಯವೋ ಏನೋ ಅಂದು, ಅವಳ ಪಕ್ಕ ಕುಳಿತುಕೊಳ್ಳುವ ಸ್ನೇಹಿತೆಯೊಬ್ಬಳು ಕಾಲೇಜಿಗೆ ಬಂದಿರಲಿಲ್ಲ. ಅಳಿಲಿನ ಮರಿಯಿದ್ದ ಕಾಲೇಜ್ ಬ್ಯಾಗ್'ನ್ನು ಅಲ್ಲಿಯೇ ಇರಿಸಿ, ತನ್ನ ಹಿಂಬದಿ ಕುಳಿತಿರುವ ಸ್ನೇಹಿತೆಗೆ ತಿಳಿಸುತ್ತಾಳೆ. `ಪ್ಲೀಸ್ ಕಣೆ, ಬ್ಯಾಗ್ಲ್ಲಿ ಅಳಿಲಿನ ಮರಿ ಇದೆ. ದಾರಿಯಲ್ಲಿ ತೆವಳುತ್ತಾ ಹೋಗುತ್ತಿತ್ತು. ಚಿಕ್ಕದಾಗಿ ಚಿಂವ್... ಚಿಂವ್ ಎಂದು ಶಬ್ದ ಮಾಡುತ್ತದೆ. ಭಯ ಪಡಬೇಡ' ಎಂದು.
ಉಪನ್ಯಾಸ, ಪ್ರಸೆಟೇಶನ್ ಸಂದರ್ಭ ಎಲ್ಲಿ ಆ ಪುಟ್ಟ ಮರಿ ಬ್ಯಾಗ್ನಿಂದ ಹೊರಗೆ ಬಂದು ರಾದ್ದಾಂತ ಮಾಡುತ್ತದೋ ಎಂದು ಭೀತಳಾಗಿದ್ದಳು. ಉಸಿರುಕಟ್ಟುವ ಆ ಸನ್ನಿವೇಶವನ್ನು ಹಾಗೋ... ಹೀಗೋ ಎಂದು ಕಳೆದು, ನಿಟ್ಟುಸಿರು ಬಿಟ್ಟಳು. ಎಮದು ಕಾಣದ ಸಂತಸ ಅವಳಲ್ಲಿ ಮನೆ ಮಾಡಿತ್ತು. ಮನಸ್ಸು ಬಾನೆತ್ತರಕ್ಕೆ ಜೀಕುತ್ತಿತ್ತು.
ಅದೇ ಸಂತೋಷದಲ್ಲಿ ತೇಲಾಡುತ್ತ, ಪಿಜಿಗೆ ಬಂದಳು. ಬಂದವಳೇ ಆ ಅಳಿಲಿನ ಮರಿಯ ಹೊಟ್ಟೆಗೆ ಸ್ವಲ್ಪ ಹಾಲುಣಿಸಿ, ಅದರ ಹಸಿವನ್ನು ನೀಗಿಸಿದಳು. ಅದರ ವಾಸಕ್ಕಾಗಿ ಒಂದು ರಟ್ಟಿನ ಗೂಡನ್ನು ತಯಾರಿಸಿದಳು. ಒಂದು ಚೆಂದದ ಹೆಸರಿಡಬೇಕಲ್ಲ ಎಂದು ಯೋಚಿಸಿ... ಯೋಚಿಸಿ... 'ಆಲೂ...' ಎಮದು ನಾಮಕರಣ ಮಾಡಿ ಖುಷಿ ಪಟ್ಟಳು.
ಬಿಡುವ ಸಿಕ್ಕಾಗಲೆಲ್ಲ ಅದರ ಜೊತೆ ಆಡುತ್ತ, ಮುದ್ದಾಡುತ್ತ ತನ್ನ ಮನಸ್ಸಿನ ಭಾವನೆಯನ್ನು ಬಿಚ್ಚಿಡುತ್ತಿದ್ದಳು. ಕೇವಲ ನಾಲ್ಕು ಗೋಡೆಗಳ ನಡುವೆಯೇ ಬದುಕುತ್ತಿದ್ದ ಅವಳಿಗೆ `ಆಲೂ' ಏಕಾಂತ ನೀಗಿಸುವ ಸ್ನೇಹಿತನಾಗಿದ್ದ. ಅವಳು ಕರೆದಾಗಲೆಲ್ಲ ಗೂಡಿನಿಂದ ಇಣಕಿ ಹಾಕಿ, ಕಣ್ಣನ್ನು ಪಿಳಿಪಿಳಿ ಮಾಡುತ್ತಿದ್ದ. ಒಮ್ಮೊಮ್ಮೆ ಅವಳಿದ್ದಲ್ಲಿಗೆ ಬಂದು, ಮೈ-ಮೇಲೆಲ್ಲ ಓಡಾಡಿ ಪ್ರೀತಿ ತೋರಿಸುತ್ತಿದ್ದ.
ಇಂಚರ ಕಾಲೇಜಿಗೆ ಹೋಗುವಾಗ ಹಾಲು, ಹಣ್ಣುಗಳನ್ನು ಆಲೂವಿನ ಪಕ್ಕ ಇಟ್ಟು ಹೋಗುತ್ತಿದ್ದಳು. ಅವಳು ಬರುವುದರೊಳಗೆ ತನಗೆಷ್ಟು ಬೇಕೋ ಅಷ್ಟನ್ನು ತಿಂದು, ಕುಡಿದು ಅಲ್ಲಿಯೇ ಆಟವಾಡುತ್ತ ಇರುತ್ತಿದ್ದ. ಕಾಲೇಜು ಎಷ್ಟು ಹೊತ್ತಿಗೆ ಬಿಡುತ್ತಾರೋ ಎಂದು ಪ್ರತಿದಿನ ಇಂಚರ ಎದುರು ನೋಡುತ್ತಿದ್ದಳು. ಅವಳ ಮನಸ್ಸೆಲ್ಲ ಆಲೂನೇ ಆವರಿಸಿದ್ದ. ಎಷ್ಟು ಹೊತ್ತಿಗೆ ಪಿಜಿಗೆ ಹೋಗುತ್ತೇನೆ... ಆಲೂನ ನೋಡುತ್ತೇನೆ ಎಂದೆನಿಸುತ್ತಿತ್ತು. ಇತ್ತ ಆಲೂ ಕೂಡಾ, ಸಂಜೆ ನಾಲ್ಕು ಗಮಟೆ ಆಗುತ್ತಿದ್ದಂತೆ, ಇಂಚರಾಳ ದಾರಿ ಕಾಯುತ್ತ, ಒಂದೇ ಸಮನೆ ಕಿರುಚುತ್ತ ಇರುತ್ತಿದ್ದ. ಎಲ್ಲಿಯಾದರೂ ಅವಳು ಬರಲು ತಡವಾಯಿತೆಂದರೆ ಸಾಕು, ಪಿಯಲ್ಲಿದ್ದ ಅವಳ ಸಣ್ಣ-ಪುಟ್ಟ ಸಾಮಾನುಗಳನ್ನೆಲ್ಲ ಕೆಡವಿ ಹಾಕಿ, ಕೋಪ ತೀರಿಸಿಕೊಳ್ಳುತ್ತಿದ್ದ. ಹೀಗೆ ಅವರಿಬ್ಬರ ಬಂಧ ಗಾಢವಾಗಿತ್ತು ಒಂದರ್ಥದಲ್ಲಿ 'ಆಲೂ' ಇಂಚರಾಳ ಬದುಕಿನ ಭಾಗ್ಯ ದೇವತೆಯಂತಾಗಿದ್ದ.
ಹೀಗಿರಲು ಒಂದು ದಿನ ಆಲೂ, ಎಂದಿನ ಸಂತೋಷದಿಂದಲೇ ಹಣ್ಣುಗಳನ್ನು ಖರೀದಿಸಿ ಪಿಜಿಯತ್ತ ಹೆಜ್ಜೆ ಹಾಲಿದ್ದಳು. ಒಳಗೆ ಪ್ರವೇಶಿಸುತ್ತಿದ್ದಂತೆ ಆಲೂ... ಆಲೂ... ಎಂದು ಕೂಗಿದಳು. ಏನೋ ಸಂಶಯ...! ಒಳಗೆಲ್ಲ ಹುಡುಕಾಡಿದಳು... ಆಲೂನ ಗೂಡನ್ನು ನೋಡಿದಳು... ಪುಸ್ತಕದ ಸಂದಿಯನ್ನು ಅರಸಿದಳು.... ಇಲ್ಲ, ಆಲೂ ಕಾಣುತ್ತಿಲ್ಲ. ಪಿಜಿಯ ಹೊರಗೆ ಬಂದು ಸುತ್ತೆಲ್ಲ ಹುಡುಕಾಡಿದಳು. ಊಹೂಂ...... ಎಲ್ಲಿಯೂ ಆಲೂ ಕಾಣುತ್ತಿಲ್ಲ. ಒಳಗೆ ಬಂದು ನೋಡಿದಳು. ಸೇಬು ಹಣ್ಣಿನ ಸ್ವಲ್ಪ ಭಾಗ ಮಾತ್ರ ಆಲೂ ತಿಂದಿದ್ದ. ಹಾಲು ಮಾತ್ರ ಹಾಗೆ ಇತ್ತು. ಅಂದರೆ, ಅವನು ಮನೆ ಬಿಟ್ಟು ಹೋಗಿ ನಾಲ್ಕೈದು ಗಂಟೆಗಳು ಉರುಳಿವೆ ಎಂದು ಯೋಚಿಸಿದಳು. ಹೃದಯ ಉಮ್ಮಳಿಸಿ ಬಂದು, ಅಲ್ಲಿಯೇ ಕುಸಿದು ಬಿದ್ದಳು.
ಬಿಕ್ಕಿ ಬಿಕ್ಕಿ ಅತ್ತಳು. ಮೈ-ಮನವೆಲ್ಲ ನಿತ್ರಾಣಗೊಂಡಿದ್ದವು. ಕಣ್ಣೆಲ್ಲ ಕೆಂಡದ ಉಂಡೆಯಂತಾಗಿದ್ದವು. ಏನು ಮಾಡಬೇಕೆಂದು ತೋಚದೆ.... ಪಿಜಿಯ ಹೊರಗೆ ಬಂದು ಆಗಸ ನೋಡುತ್ತ ಕುಳಿತಳು. ಬಾನು ತನ್ನ ದೈನಂದಿನ ಕಾರ್ಯ ಮುಗಿಸಿ ನಿಧಾನವಾಗಿ ಪಡುವಣದಲ್ಲಿ ಅಸ್ತಂಗತನಾಗುತ್ತಿದ್ದ. ಪೂರ್ಣ ಚಂದಿರ ಹಾಲ್ನೊರೆಯ ಬೆಳಕನ್ನು ಚೆಲ್ಲುತ್ತ, ಮೋಡದ ಮರೆಯಲ್ಲಿ ಇಣುಕುತ್ತಿದ್ದ. ಇವೆಲ್ಲವನ್ನೂ ತದೇಕ ಚಿತ್ತದಿಂದ ಇಂಚರಾ ನೋಡುತ್ತಿದ್ದಳು. ಪೂರ್ಣ ಚಂದಿರನಲ್ಲಿ ಮನೆ ಬಿಟ್ಟು ಹೋದ ಆಲೂ ಕಂಡ ಹಾಗೆ ಅವಳಿಗೆ ಭಾಸವಾಗುತ್ತದೆ. ಆಲೂ... ಎಂದು ಹೃದಯ ತುಂಬಿ ಕರೆಯುತ್ತಾಳೆ. ಅರಿವಿಲ್ಲದೆ ಮತ್ತೆ ಕಣ್ಣಂಚು ಒದ್ದೆಯಾಗುತ್ತವೆ.
ಬೆಳದಿಂಗಳ ರಾತ್ರಿಯಲ್ಲಿ ಮುಂಗುರುಳು ಸೋಕುವ ತಣ್ಣನೆಯ ತಂಗಾಳಿಯಲಿ ಹಾಡೊಂದು ತೇಲಿ ಬರುತ್ತಿತ್ತು.... `ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ....'
ಪ್ರತೀ ಹುಣ್ಣಿಮೆಗೂ ಇಂಚರಾಳಿಗೆ ಆಲೂ ನೆನಪಾಗುತ್ತಾನೆ. ಅವನಿಗಾಗಿ ಅಳುತ್ತಾಳೆ. ಮರುಗುತ್ತಾಳೆ. ಚಂದಿರನಲ್ಲಿ ಆಲೂನ ಕಾಣುತ್ತಾಳೆ. ದಾರಿಯಲ್ಲಿ ಹೋಗುವಾಗ ಅಳಿಲು ಕಂಡು ಬಂದರೆ ಆಲೂ... ಎಮದು ಕರೆಯುತ್ತಾಳೆ. ಎಲ್ಲೆ ಇದ್ದರೂ ಎನ್ನಾಗಿರು ಎಂದು ಭಾವುಕಳಾಗಿ ಮನಸ್ಸಲ್ಲಿಯೇ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ 

ಮರಳಿ ಗೂಡಿಗೆ.......... 

ನಾಗರಾಜ್. ಬಿ.ಎನ್.
-------------
ಸದಾ ಪಾದರಸದಂತೆ ಚಟುವಟಿಕೆಯಿಂದ ಇರುತ್ತಿದ್ದ ಶ್ರೀವತ್ಸ, ಇತ್ತೀಚೆಗೆಕೋ ಮಂಕು ಬಡಿದವರ ಹಾಗೆ ಇರುತ್ತಿದ್ದ. ಮುಂಜಾನೆ ಕಚೇರಿಗೆ ಹೋಗುವುದು, ಸಾಯಂಕಾಲ ಮನೆಗೆ ಬರುವುದು.... ಇಷ್ಟೇ ಅವನ ಉಳಿದ ದಿನಚರಿಯಾಗಿತ್ತು. ಸ್ನೇಹಿತರ ಒಡನಾಟವಿಲ್ಲ... ಹೊಟೆಲ್, ಪಾರ್ಕ್ ಸುತ್ತಾಟವಿಲ್ಲ... ಹಾಗೆ, ಮನೆಯಲ್ಲಿ ಅಪ್ಪ-ಅಮ್ಮರ ಜೊತೆಯೂ ಮಾತುಕತೆ ಇರಲಿಲ್ಲ.
---------------
ಕೆಲ ವರ್ಷಗಳ ಹಿಂದೆ...........
ಶ್ರೀವತ್ಸ ಬಡತನವನ್ನೇ ತಿಂದುಂಡು ಬೆಳೆದವನು. ಆತನ ತಂದೆ ದಿನಗೂಲಿ ಕೆಲಸ ಮಾಡಿದರೆ, ತಾಯಿ ಊರಿನ ಕೆಲವು ಮನೆಯ ಪಾತ್ರೆಗಳ ಮುಸುರಿ ತಿಕ್ಕುತ್ತಿದ್ದಳು. ಒಂದೊಂದು ದಿನ, ಒಪ್ಪತ್ತಿನ ತುತ್ತಿಗೂ ಆ ಕುಟುಂಬ ಪರದಾಡುತ್ತಿತ್ತು. ದಟ್ಟ ದಾರಿದ್ರ್ಯದಲ್ಲಿ ಅವರ ಸಂಸಾರದ ಗಾಲಿ ಕಾಲನ ಜೊತೆ ಉರುಳುತ್ತಿತ್ತು.
ಮಣ್ಣಿನ ಗೋಡೆಯ ಕೆಂಪು ಹೆಂಚಿನ ಮೇಲ್ಛಾವಣಿ ಹೊದಿಕೆಯಿರುವ ಎರಡು ಕೋಣೆಯಿರುವ ಪುಟ್ಟದಾದ ಮನೆ ಶ್ರೀವತ್ಸನದಾಗಿತ್ತು. ಅಲ್ಲಿ ಶ್ರೀವತ್ಸನ ತಂದೆಯೇ ಮಹಾರಾಜ, ತಾಯಿಯೇ ಪಟ್ಟದರಸಿ. ಹತ್ತನೇ ತರಗತಿಗೆ ಹೋಗುತ್ತಿದ್ದ ಆತನೇ ಯುವರಾಜ. ಆ ಪುಟ್ಟ ಮನೆಯೇ ಅವರಿಗೆ ಆಸ್ಥಾನ. ಹಾಗೆ, ಕೊಟ್ಟಿಗೆಯಲ್ಲಿದ್ದ ದನ-ಕರುಗಳು, ಮನೆಯ ಬೊಂಬಿಗೆ ಹಾಗೂ ಫೊಟೋದ ಹಿಂದೆ ಗೂಡು ಕಟ್ಟಿಕೊಳ್ಳುತ್ತಿರುವ ಗುಬ್ಬಿಗಳು, ಹಿತ್ತಲನ್ನೆಲ್ಲ ಕೆದರಿ ಹಾಳು ಮಾಡುವ ಕೋಳಿಗಳೇ ಅವರ ಪುಟ್ಟ ಸಾಮ್ರಾಜ್ಯದ ಸೇವಕರಾಗಿದ್ದರು.
ಮನೆಯ ಅನತಿ ದೂರದಲ್ಲಿರುವ ಹರಿವ ತೊರೆ... ಶಾಲೆಗೆ ಹೋಗುವ ನಡು ದಾರಿಯಲ್ಲಿರುವ ಹುಣಸೆ ಮರ... ಮುಸ್ಸಂಜೆ ಸಮಯದಲ್ಲಿ ಅಜ್ಜಿಕಥೆ ಮೂಲಕ ಕಲ್ಪನಾ ಲೋಕಕ್ಕೆ ಕರೆದೊಯ್ಯುವ ಸಣ್ಣಜ್ಜಿ... ಸೋಮಪ್ಪನ ಮಾವಿನ ತೋಟ... ಮುಂಗಾರಿನ ಮೊದಲ ಮಳೆ... ಮೈಮರಿಸುವ ಆ ಮಣ್ಣಿನ ಘಮ... ಹಚ್ಚ ಹಸಿರಿನಿಂದ ಕಂಗೊಳಿಸುವ ಮನೆ ಮುಂದಿನ ಬೆಟ್ಟ... ಸಂಜೆಯಾಗುತ್ತಿದ್ದಂತೆ ಜುಂಯ್ ಗುಡುವ ಜಿರಲೆಗಳು... ಇವುಗಳ ಜೊತೆಯಲ್ಲಿಯೇ ಶ್ರೀವತ್ಸ ತನ್ನ ಬಾಲ್ಯದ ದಿನಗಳನ್ನು ಕಳೆದಿದ್ದ.
ಮುಸುರೆ ತಿಕ್ಕಿ, ಕೂಲಿ ಮಾಡಿ ಹಾಗೋ ಹೀಗೋ ಎಂದು ಶ್ರೀವತ್ಸನಿಗೆ ಕಾಲೇಜಿನವರೆಗಿನ ಶಿಕ್ಷಣವನ್ನು ಅವನ ಹೆತ್ತವರು ನೀಡುತ್ತಾರೆ. ಬಡತನದ ಅನುಭವ ಅವನ ಬದುಕನ್ನು ಪರಿ-ಪಕ್ವವಾಗಿಸಿತ್ತು. ಓದಿನಲ್ಲಿ ಬುದ್ಧಿವಂತನಾಗಿದ್ದ ಆತ, ಪ್ರತಿಷ್ಠಿತ ಕಾಲೇಜೊಂದರಲ್ಲಿ ಸೀಟ್ನ್ನು ಪಡೆಯುತ್ತಾನೆ. ಬದುಕಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿರುವ ಅವನು, ಬ್ಯಾಂಕ್ನಲ್ಲಿ ಶೈಕ್ಷಣಿಕ ಸಾಲ ಪಡೆದು, ಕಾಲೇಜ್ ಪ್ರವೇಶಗೆ ಹೋಗುತ್ತಾನೆ.
ನಾಲ್ಕು ವರ್ಷದ ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಶ್ರೀವತ್ಸ, ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದಕ್ಕೆ ಕ್ಯಾಂಪಸ್ ಸಂದರ್ಶನದಲ್ಲಿ ನೇಮಕವಾಗುತ್ತಾನೆ. 'ಪ್ರಾರಂಭದಲ್ಲಿಯೇ ಕೈತುಂಬಾ ಸಂಬಳದ ಉದ್ಯೋಗ. ಬಡತನಕ್ಕೆ ವಿದಾಯ ಹೇಳುವ ದಿನಗಳು ಸಮೀಪಿಸುತ್ತಿವೆಯಲ್ಲ' ಎಂದು ಮನಸ್ಸಲ್ಲಿಯೇ ಯೋಚಿಸುತ್ತ, ಭಗವಂತನಿಗೆ ಥ್ಯಾಂಕ್ಸ್ ಹೇಳುತ್ತಾನೆ.
--------------------------------------
ಕೆಲವು ತಿಂಗಳ ಹಿಂದೆ...........
ಶ್ರೀವತ್ಸ ಉದ್ಯೋಗಿಯಾಗಿ ಎರಡು ವರ್ಷಗಳು ಉರುಳಿವೆ. ಬಡತನದ ದಿನಗಳು ಹಂತ ಹಂತವಾಗಿ ದೂರವಾಗುತ್ತಿವೆ. ಇತ್ತ ಇವನು ಕೂಡಾ, ಹೆತ್ತವರನ್ನು ತನ್ನಲ್ಲಿಯೇ ಕರೆಸಿಕೊಳ್ಳಬೇಕೆಂದು ಯೋಚಿಸುತ್ತಿದ್ದಾನೆ. ಮಹಾನಗರದಲ್ಲೊಂದು ಪ್ಲಾಟ್ ಖರೀದಿಸುತ್ತಾನೆ. ಮನೆಗೆ ಬೇಕಾದ ಎಲ್ಲ ಅಗತ್ಯ ಸಾಮಾನುಗಳನ್ನು, ಅಲಂಕಾರಿಕ ವಸ್ತುಗಳನ್ನು ತರುತ್ತಾನೆ. ತುಂಬು ಸಂಸಾರಕ್ಕೆ ಏನೇನು ಬೇಕೋ ಅವೆಲ್ಲವೂ ರಾಶಿ ರಾಶಿಯಾಗಿ ಮೂಟೆಕಟ್ಟುಕೊಂಡು ಬಿದ್ದಿವೆ. ಅಪ್ಪ-ಅಮ್ಮರನ್ನು ಕರೆಸಿಕೊಳ್ಳುತ್ತಾನೆ. ಅವರ ಕಾಲಿಗೆರಗಿ ಕಣ್ಣೀರಿನಿಂದ ಅವರ ಪಾದವನ್ನು ತೊಳೆಯುತ್ತಾನೆ. ಅಮ್ಮ-ಅಪ್ಪಾ, ಇವೆಲ್ಲ ನೀವು ನೀಡಿದ ಭಿಕ್ಷೆ. ನೀವು ಹಸಿದುಕೊಂಡು, ನನ್ನ ಹೊಟ್ಟೆ ತುಂಬಿಸಿ ಇಷ್ಟು ದೊಡ್ಡವನನ್ನಾಗಿ ಮಾಡಿದ್ದೀರ. ಆ ದಿನಗಳೆಲ್ಲಿ...? ಈ ದಿನಗಳೆಲ್ಲಿ..? ಕಷ್ಟಪಟ್ಟರೆ ಸುಖವಿದೆ. ನಾವು ಕೂಡಾ ಈಗ ಸ್ಥಿತಿವಂತರು. ಅಲ್ಲವೇನಮ್ಮ' ಎನ್ನುತ್ತಾನೆ. ನಗರ ಜೀವನದಲ್ಲಿ ಆ ಪುಟ್ಟ ಕುಟುಂಬ ಯಾವೊಂದು ಅಡೆತಡೆಯಿಲ್ಲದೆ ಎರಡು ವರ್ಷ ನಿರಾತಂಕವಾಗಿ ಕಳೆದಿದೆ.
------------------------------------
ಕೆಲ ದಿನಗಳ ಹಿಂದೆ.....
ಬಡತನದ ಬೇಗೆಯಲ್ಲಿ ಬೆಂದು ಬಂದ ಆ ಪುಟ್ಟ ಕುಟುಂಬದ ಆಧಾರ ಸ್ಥಂಭ ನಲಗುತ್ತಿದೆ. ನಗರ ಜೀವನ ಆ ಶ್ರೀವತ್ಸನಿಗೆ ಸಾಕಾಗಿ ಹೋಗಿದೆ. ಯಾಂತ್ರಿಕತೆಯ ಬದುಕಿನಲ್ಲಿ ಅವನಿಗೆ ಮಾನವತೆಯೇ ಮರೆತು ಹೋದಂತಾಗಿದೆ. ದಿನದ ಬಹುತೇಕ ಸಮಯ ಜಂಜಾಟದಲ್ಲಿಯೇ ವ್ಯರ್ಥವಾಗುತ್ತಿದೆ. ರಕ್ತ ಸಂಬಂಧ, ಒಡನಾಟದ ಸಂಬಂಧಗಳೆಲ್ಲ ಮಾಯವಾಗುತ್ತಿವೆ. ದಿನ ಬೆಳಗಾದರೆ ಸಾಕು ಕಚೇರಿ, ಸಾಫ್ಟವೇರ್ ಎನ್ನುತ್ತ ಅದರಲ್ಲಿಯೇ ಸಮಯ ಹೋಗುತ್ತಿದೆ. ವಾರದಲ್ಲಿ ಒಂದು ದಿನ ಬಿಡುವಿದ್ದರೂ, ಅದು ಕೂಡಾ ವಿಶ್ರಾಂತಿಯಲ್ಲಿಯೇ ಕಳೆದು ಹೋಗುತ್ತಿದೆ. ಕೈ ತುಂಬಾ ಸಂಬಳ, ಐಷಾರಾಮಿ ಜೀವನ ಇದ್ದರೇನಂತೆ. ಮನಸ್ಸಿಗೆ ನೆಮ್ಮದಿಯೇ ಇಲ್ಲವಾಗಿದೆ. ಏನು ಮಾಡಬೇಕೆಂದು ತೋಚದೆ ಹುಚ್ಚನಂತಾಗಿದ್ದಾನೆ. ಮನಸ್ಸಿನ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾನೆ. ತೀರಾ ಭಾವುಕನಾಗಿ ಹೋಗಿದ್ದಾನೆ. ಒಟ್ಟಾರೆ ಮಂಕು ಕವಿದವರಂತೆ ದಿನ ದೂಡುತ್ತಿದ್ದಾನೆ.
ಮಗನ ಈ ವರ್ತನೆಯಿಂದ ಕಂಗಾಲಾದ ತಂದೆ, ಅವನ ತಲೆ ನೇವರಿಸಿ ಕೇಳುತ್ತಾನೆ.
`ಏನೋ ವತ್ಸು, ಯಾಕೆ ಹೀಗಾಗಿದ್ದೀಯಾ? ಏನಾಯ್ತು? ನಮಗೆ ನಿನ್ನನ್ನು ಬಿಟ್ಟು ಇನ್ಯಾರಿದ್ದಾರೋ? ನಿನ್ನ ಈ ಸ್ಥಿತಿ ನೋಡಲು ನಮ್ಮಿಂದ ಆಗ್ತಾ ಇಲ್ವೋ?' ಎಂದು ಕಣ್ಣಿರಾಗುತ್ತಾನೆ.
ಬಡತನದ, ಉಪವಾಸ, ಕಷ್ಟಗಳ ಸರಮಾಲೆಯಿದ್ದಾಗಲೂ ಒಂದು ಹನಿ ಕಂಬನಿ ಹಾಕದ ಅಪ್ಪ, ಈಗ......?
'ಅಯ್ಯೋ....' ಎಂದು ಉಮ್ಮಳಸಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ನಿಧಾನವಾಗಿ ಸಾವರಿಸಿಕೊಂಡು, ಅಪ್ಪನ ಕೈ ಹಿಡಿದು ಹೇಳುತ್ತಾನೆ ಶ್ರೀವತ್ಸ...
'ಅಪ್ಪ ನಾವು ಬೆಳೆದದ್ದು, ಆ ಪುಟ್ಟ ಊರಲ್ಲಿ. ಅಲ್ಲಿಯ ಪರಿಸರ, ಮರ, ಗಿಡ, ಬಳ್ಳಿ, ಬೆಟ್ಟ, ಪ್ರಾಣಿ, ಪಕ್ಷಿ, ಮಣ್ಣು, ನೆರೆ-ಹೊರೆಯವರು ಎಲ್ಲವೂ ನೆನಪಾಗುತ್ತಿವೆಯಪ್ಪ. ಸ್ವಚ್ಛಂದವಾಗಿ ವಿಹರಿಸಿದ ಆ ನನ್ನ ಊರು ಎಲ್ಲಿ, ಉಸಿರು ಕಟ್ಟುವ ವಾತಾವರಣದಲ್ಲಿ ಬದುಕು ದೂಡುತ್ತಿರುವ ಈ ಮಹಾನಗರವೆಲ್ಲಿ? ನಾವಿದ್ದ ಆ ಪುಟ್ಟ ಮನೆ, ಗೋಡೆಗೆ ಬಳಿದ ಸಗಣಿ, ಕೆಂಪು ಹೆಂಚುಗಳು, ಮನೆಯೊಳಗೆಲ್ಲ ಚಿಂವ್.. ಚಿಂವ್ ಎಂದು ಓಡಾಡಿ ಕುಣಿದ ಗುಬ್ಬಚ್ಚಿಗಳು, ಆ ತೊರೆ, ಹಳ್ಳ, ಬೆಟ್ಟ, ಗುಡ್ಡ, ಸತ್ತು ಹೋದ ಕತೆ ಹೇಳುವ ಸಣ್ಣಜ್ಜಿ ಇವೆಲ್ಲವೂ ನೆನಪಾಗಿ ಕಾಡುತ್ತಿವೆಯಪ್ಪ. ಈ ಯಾಂತ್ರಿಕ ಜೀವ ಸಾಕಾಗಿದೆ. ಏನು ಮಾಡಬೇಕೆಂದು ತೋಚುತ್ತಿಲ್ಲ. ಪ್ಲೀಸ್ ಅಪ್ಪಾ, ನನ್ನನ್ನೇ ನಾನು ಕಳೆದುಕೊಂಡು ಬಿಟ್ಟಿದ್ದೇನೆ. ನಾನು ಮೊದಲಿನ ಶ್ರೀವತ್ಸನಾಗಬೇಕು. ಪ್ರಾಣಿ, ಪಕ್ಷಿಗಳ ಜೊತೆ ಬದುಕಬೇಕು. ಅಲ್ಲೇ ಬದುಕಿನ ಸಾರ್ಥಕತೆ ಪಡೆಯಬೇಕು' ಎಂದು ಈವರೆಗೆ ಹುಗಿದಿಟ್ಟಿದ್ದ ಮನದಾಳದ ಎಲ್ಲ ಭಾವನೆಗಳನ್ನು ತೆರೆದಿಡುತ್ತಾನೆ.
ಮಗನ ಒಂದೊಂದು ಮಾತುಗಳು ಅಪ್ಪನ ಕರುಳನ್ನು ಹಿಚುಕಿದಂತಾಗುತ್ತದೆ.
ಏನು ಮಾಡುವುದು ಎಂದು ಮನಸ್ಸಲ್ಲಿಯೇ ಲೆಕ್ಕಾಚಾರ ಹಾಕುತ್ತಿದ್ದಾನೆ. ಇರುವುದೊಂದೆ ದಾರಿ, ವಾಪಸ್ಸು ಹಳ್ಳಿಗೆ ಹೋಗುವುದು. ಸಂಸಾರಕ್ಕೆಂದು ಒಂದಿಷ್ಟು ಭೂಮಿ ಖರೀದಿಸಿ ವ್ಯವಸಾಯ ಮಾಡುವುದು ಎಂದು ಆಲೋಚಿಸಿ ಮಗನಲ್ಲಿ ತನ್ನ ನಿಧರ್ಾರ ತಿಳಿಸುತ್ತಾನೆ.
ಅಪ್ಪನ ಆ ಮಾತನ್ನು ಕೇಳುತ್ತಿದ್ದಂತೆ ಶ್ರೀವತ್ಸನ ಮೊಗ, ಆಗ ತಾನೆ ಮುಂಜಾನೆಯ ಬೆಳಕಿಗೆ ಅರಳಿದ ಮೊಗ್ಗಿನ ಹಾಗೆ ಅರುಳುತ್ತದೆ. ಅರೆಕ್ಷಣದಲ್ಲಿ ಕಣ್ಣುಗಳನ್ನು ಮುಚ್ಚಿ, ಧ್ಯಾನಸ್ಥ ಸ್ಥಿತಿಗೆ ಹೋಗುತ್ತಾನೆ.
-------------------------------------
ಈಗ........
ಶ್ರೀವತ್ಸ ಹೆತ್ತವರ ಸಮೇತ ಹಳ್ಳಿಗೆ ಬಂದಿದ್ದಾನೆ. ಹೊಲ-ಗದ್ದೆಗಳನ್ನು ಖರೀದಿಸಿ ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾನೆ. ಕಳೆದು ಹೋದ ತನ್ನ ಬದುಕನ್ನು, ಬಾಲ್ಯದಲ್ಲಿ ಆಡಿ-ಬೆಳೆದ ಮಣ್ಣಿನಲ್ಲಿ ಹುಡುಕಿಕೊಂಡಿದ್ದಾನೆ. ಕಥೆ ಹೇಳುವ ಸಣ್ಣಜ್ಜಿಯ ಜಾಗದಲ್ಲಿ ಈಗ ರಾಜಮ್ಮ ಬಂದಿದ್ದಾಳೆ. ಮನೆಯನ್ನು ಸ್ವಲ್ಪ ಒಪ್ಪ-ಓರಣ ಮಾಡಿಕೊಂಡು, ಗುಬ್ಬಚ್ಚಿ ಗೂಡನ್ನು ಫೊಟೋದ ಹಿಂದೆ ಇಟ್ಟಿದ್ದಾನೆ. ಕೋಳಿಗಳನ್ನು ಸಾಕಿ, ಅವುಗಳ ಪಾಲನೆ ಮಾಡುತ್ತಿದ್ದಾನೆ. ದನದ ಕೊಟ್ಟೆಗೆಯ ಎಲ್ಲ ಕೆಲಸವನ್ನು ತಾನೇ ಮಾಡುತ್ತಾನೆ. ಬಿಡುವಾದಾಗೆಲ್ಲ ಕೆರೆದಂಡೆ ಮೇಲೆ ಹೋಗಿ ಒಂದಿಷ್ಟು ಹೊತ್ತು ಕಳೆದು ಬರುತ್ತಾನೆ. ಸ್ನೇಹಿತರ ಜೊತೆ ಬೆಟ್ಟ, ಗುಡ್ಡಗಳನ್ನೆಲ್ಲ ಅಲೆದು, ಅಲ್ಲಿರುವ ಮರ-ಗಿಡಗಳನ್ನು ಪ್ರೀತಿಸಿ, ಹಕ್ಕಿಗಳ ಇಂಪಾದ ಧ್ವನಿಯನ್ನು ಕೇಳುತ್ತ ತನ್ನನ್ನೇ ಮೈಮರೆಯುತ್ತಾನೆ.
ಮಗನ ಆದರ್ಶ ಬದುಕನ್ನು ಕಣ್ತುಂಬಿಸಿಕೊಂಡ ಶ್ರೀವತ್ಸನ ಹೆತ್ತವರು, ಇಂಥ ಮಗನನ್ನು ಹೆತ್ತ ನಾವೇ ಧನ್ಯರು` ಎಂದು ಆನಂದಭಾಷ್ಪ ಹರಿಸುತ್ತಾರೆ 

ನಾನು....
ಕತ್ತಲ ಕೂಪದಲ್ಲಿ ಕರಗಿದ ಹೋದ ತುಂಟ ತಿಮ್ಮಣ್ಣ

ನಾನು ತಿಮ್ಮಣ್ಣ. ನಮ್ಮ ಮನೆ, ಊರು, ಶಾಲೆ, ಸ್ನೇಹಿತರ ಪಾಲಿನ ತುಂಟ ಪೋರ. ನಮ್ಮ ಅಪ್ಪ-ಅಮ್ಮರ ಪಾಲಿನ ಮುದ್ದು ಕಂದ. ಅರಿವಿಲ್ಲದೆ ಕರಾಳ ಕಪ್ಪು ಬಾವಿಯಲ್ಲಿ ಕರಗಿ ಹೋದ ನತದೃಷ್ಟ ಬಾಲಕ.
ಕೊಳವೆ ಬಾವಿಯಲ್ಲಿ ಬಿದ್ದ ನನಗಾಗಿ ಪ್ರಾರ್ಥಿಸಿದ, ಕಂಬನಿಗೆರದ, ಕಣ್ಮುಚ್ಚಿ ಕಾದು ಕುಳಿತ ತಮ್ಮೆಲ್ಲರ ಮುಂದೆ ನನ್ನ ಕೆಲವು ಭಾವನೆಗಳನ್ನು ತೋಡಿಕೊಳ್ಳಬೇಕು ಎನಿಸುತ್ತಿದೆ. ಕಾಣದ ಲೋಕದಿಂದ ನಾನಾಡುವ ಎರಡು ಮಾತುಗಳಿಗೆ ನೀವು ಕಿವಿಯಾಗುವಿರಾ...?
ಅಂದು ಭಾನುವಾರ. ಮನೆಯಂಗಳದಲಿ ಅಕ್ಕಂದಿರ ಜೊತೆ ಆಟವಾಡುತ್ತ ಕುಳಿತಿದ್ದೆ. ಅಷ್ಟರಲ್ಲಿ ದೊಡ್ಡಪ್ಪನ ಮಗ ಬೈಕ್ ತೆಗೆದುಕೊಂಡು ಬಂದ. ಮೊದಲೇ ಬೈಕ್ ಹುಚ್ಚು ಇದ್ದ ನನಗೆ, ಅವನು ಬೈಕ್ ಮೇಲೆ ಬಂದಿದ್ದು ನೋಡಿ ಖುಷಿಯಾಗಿಬಿಟ್ಟಿತು. ಓಡುತ್ತ ಕುಣಿಯುತ್ತ ಅದನೇರಿ ಕುಳಿತುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ಅಣ್ಣ ತೋಟದ ಕಡೆಗೆ ಹೋಗಲು ಅಣಿಯಾದ. ನಾನು ಕೂಡಾ ಬರುತ್ತೇನೆ ಎಂದು ಹಠ ಹಿಡಿದೆ. ಅಣ್ಣ, 'ಬೇಡ ಬೇಡ' ಎಂದು ಎಂದರೂ ಸುಮ್ಮನಾಗದೆ, ಹತ್ತಿದ ಬೈಕ್ ಮೇಲಿಂದ ಕೆಳಗಿಳಿಯಲೇ ಇಲ್ಲ. ನನ್ನ ಹಠಕ್ಕೆ ಮಣಿದು ಅಣ್ಣ ನನ್ನನ್ನು ಬೈಕ್ ಮೇಲೆ ಗದ್ದೆಗೆ ಕರೆದುಕೊಂಡು ಹೋದ. ಗದ್ದೆ ಬದಿ ಬೈಕ್ ನಿಲ್ಲಿಸಿ ಅಣ್ಣ ನನ್ನ ಕೈ ಹಿಡಿದು ನಡೆಯುತ್ತಿದ್ದ. ಜೀಕುತ್ತ, ಕುಣಿಯುತ್ತ ಹೊಲದ ಕಡೆ ಹೋಗುತ್ತಿದ್ದ ನನಗೆ, ಅದು ನನ್ನ ಅಲ್ಪಾಯುಷ್ಯದ ಕೊನೆಯ ನಡಿಗೆಗಳು ಎಂದು ಗೊತ್ತಿರಲೇ ಇಲ್ಲ..!!
ಅಷ್ಟಕ್ಕೂ ಸಾವೆಂದರೆ ಏನು ಎಂಬುದು ನನ್ನ ಕಲ್ಪನೆಗೆ ನಿಲುಕದ ಸತ್ಯವಾಗಿತ್ತು. ಹಾಗೆಯೇ ನಾವು ಮುಂದುವರಿಯುತ್ತಿದ್ದಂತೆ, ದೂರದಲ್ಲಿ ನನ್ನ ಅಪ್ಪ ಕೊರೆಸಿದ ಕೊಳವೆ ಬಾವಿ ನನಗೆ ಕಂಡಿತು. ನನಗೇಕೋ ಆ ಕೊಳವೆ ಬಾವಿಯೆಂದರೆ ತೀವ್ರ ಕೂತಹಲ. ಅದರಿಂದ ನೀರು ಚಿಮ್ಮುತ್ತದೆ ಎಂದು ಅಪ್ಪ ಹೇಳುತ್ತಿದ್ದರು. ಕೊಳವೆ ಬಾವಿ ತೋಡುವ ದಿನ ನಾನು ಆ ನೀರಿಗಾಗಿ ಕಾದು ಕುಳಿತಿದ್ದೆ. ನೀರು ಬಂದಿರಲಿಲ್ಲ. ಅದನ್ನು ಅಣ್ಣನಿಗೆ ತೋರಿಸುವ ಉತ್ಸಾಹದಲ್ಲಿ ಕೈ ಬಿಟ್ಟು ಓಡಿದ್ದೆ! 'ಅಣ್ಣ ನೋಡು ನೋಡು' ಎಂದು ಕಿರುಚುತ್ತ, ಅಪ್ಪ ಕೊಳವೆ ಬಾವಿಯ ಮೇಲೆ ಹೇರಿದ್ದ ಚೀಲದ ಮೇಲೆ ಕಾಲು ಇಟ್ಟುಬಿಟ್ಟೆ. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಕೊಳವೆ ಬಾವಿಯಲ್ಲಿ ಜಾರತೊಡಗಿದ್ದೆ. ಓಡಿ ಬಂದ ಅಣ್ಣ, ನನ್ನನ್ನು ಹಿಡಿಯಲು ಪ್ರಯತ್ನಿಸಿದ. ಆತನ ಕೈಗಳಿಗೆ ನನ್ನೆರಡು ಕೈ ಬೆರಳುಗಳು ನಿಲುಕಿದಂತಾವು. ಆಕಸ್ಮಿಕವಾಗಿ ಹುಟ್ಟಿದ ಭರವಸೆಯೊಂದು, ಅಷ್ಟೇ ವೇಗದಲ್ಲಿ ಮಿಂಚಿ ಮರೆಯಾಗಿತ್ತು. ನಾನು ನಿಧಾನವಾಗಿ ಆಳಕ್ಕೆ ಜಾರುತ್ತಲೇ ಹೋದೆ. ಅಣ್ಣ ನನ್ನ ಕೈ ಹಿಡಿಯದಾದ. ನಾನು ಜಾರುತ್ತ ಜಾರುತ್ತ ಕಡುಗಪ್ಪಿನ ಕತ್ತಲ ಕೂಪದಲ್ಲಿ ಸರಕ್ಕನೆ ಜಾರಿ ಹೋದೆ. 'ಹಗ್ಗ ಬಿಡು ಅಣ್ಣ.. ಹಗ್ಗ ಬಿಡು' ಎಂದು ಕೂಗುತ್ತಿದ್ದ ನನ್ನ ಧ್ವನಿ ಅಣ್ಣನಿಗೆ ಕೇಳಿಸದಾಯಿತು. ಆದಾಗಲೇ ನಾನು ಆಳವಾದ ಕಂದಕ ತಲುಪಿ ಬಿಟ್ಟಿದ್ದೆ.
ಆಚೆ ಈಚೆ ಅಲ್ಲಾಡಲಾಗದ ಪರಿಸ್ಥಿತಿ. ಎಷ್ಟೊಂದು ಅಸಹನೀಯ... ಎಷ್ಟೊಂದು ಭೀಭತ್ಸ... ಅದನ್ನು ಹೇಳಲಾಗದು. ಆದರೆ, ಅಣ್ಣ ನನ್ನನ್ನು ಮೇಲೆತ್ತುತ್ತಾನೆ ಎನ್ನುವ ನಂಬಿಕೆ ಬಿಟ್ಟು, ನಾನೇನು ಮಾಡುವ ಸ್ಥಿತಿಯಲ್ಲಿರಲಿಲ್ಲ. ರಾತ್ರಿ ಮಲಗಿದ ನನಗೆ ಎಚ್ಚರವಾದಾಗ, ಕತ್ತಲಲ್ಲಿ ಗುಮ್ಮನ ನೆನಪಾಗಿ ಅಮ್ಮನನ್ನು ಬಾಚಿ ತಬ್ಬಿ ಮಲಗುತ್ತಿದ್ದೆ. ನನಗೆ ಈ ಕತ್ತಲ ರಾಕ್ಷಸ ಹೇಗೆಲ್ಲ ಹೆದರಿಸುತ್ತಿದ್ದಾನೆ ಎಂದು ಹೇಗೆ ಹೇಳಲಿ. ನನಗೆ ಸಾವೆಂದರೇನೆಂದು ಅರಿಯದು. ಆದರೂ ಏನೋ ಜೀವ ಭಯ. ಅಣ್ಣ.. ಅಣ್ಣ ಎಂದು ಕಿರುಚಿದೆ. ಅಣ್ಣ ಮೇಲ್ಗಡೆಯಿಂದ ಏನೋ ಹೇಳುತ್ತಿದ್ದ. ಅದೇನೆಂದು ಕೇಳಿಸುತ್ತಿರಲಿಲ್ಲ. ಅಪ್ಪ-ಅಣ್ಣ ಬಂದು ನನ್ನನ್ನು ಮೇಲೆತ್ತುತ್ತಾರೆ ಎಂಬ ನಂಬಿಕೆಯಿದ್ದರೂ, ಈ ಚಿಕ್ಕ ಬಾವಿಯಲ್ಲಿ ಅವರು ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿತ್ತು.
ಭಯದಿಂದ ತತ್ತರಿಸಿ ಹೋದ ನನಗೆ, ಅಮ್ಮ ಈಗಿಂದಿಗೀಲೇ ಬೇಕೆಂದೆನಿಸುತ್ತಿತ್ತು. ಒಂದೇ ಸಮನೆ ಅಮ್ಮನ ನೆನಸಿ ಅಳತೊಡಗಿದೆ. ಕೈ-ಕಾಲುಗಳನ್ನೆಲ್ಲ ಕಟ್ಟಿಟ್ಟ ಸ್ಥಿತಿ. ಮಿಸುಕಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡಲೂ ಆಗುತ್ತಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಕಳೆಯಿತು. ಅಣ್ಣನ ಧ್ವನಿಯಷ್ಟೇ ಕೇಳಿಸುತಿದ್ದ ನನಗೆ, ಬಹಳ ಜನ ಮಾತನಾಡುತ್ತ ಅರಚುತ್ತಿರುವುದು ಕ್ಷೀಣವಾಗಿ ಕೇಳಿಸುತ್ತಿತ್ತು. ಬಹುಶಃ ನನ್ನಮ್ಮ 'ತಿಮ್ಮಣ್ಣಾ.... ಎಲ್ಲೋದ್ಫ್ಯೋ ...' ಎಂದು ಎದೆ ಬಡೆದುಕೊಂಡು ಅಳುತ್ತಿರಬೇಕು.
ಸಮಯ ಉರುಳುತ್ತಿತ್ತು. ಇಷ್ಟು ಹೊತ್ತಾದರೂ ಇವರು ಮೇಲೇನು ಮಾಡುತ್ತಿದ್ದಾರೆ? ಅಮ್ಮ ಕೊಡಕ್ಕೆ ಹಗ್ಗ ಕಟ್ಟಿ ಬಾವಿಯಿಂದ ನೀರನ್ನು ಮೇಲೆತ್ತುವ ಹಾಗೆ, ನನ್ನನ್ನು ಮೇಲೆತ್ತಬಾರದೆ? ಎಂದು ಕಾಯುತ್ತಿದ್ದೆ. ಅಷ್ಟರಲ್ಲಿ ನನ್ನ ಕೈಗೆ ಏನೋ ತಾಕಿದಂತಾಯಿತು. ಯಾವುದೋ ತೆಳ್ಳಗಿನ ದಾರದಂತ ಪೈಪ್. ಮೇಲತ್ತಬಹುದೆಂದು ಸಂತೋಷದಿಂದ ಅದನ್ನು ಹಿಡಿದೆ. ಆದರೆ, ನನ್ನ ಪುಟ್ಟ ಭಾರವನ್ನು ತಡೆಯದ ಅದು ತುಂಡರಿಸುತ್ತಿದ್ದಂತೆ, ನಾನು ಮೇಲೆ ಹತ್ತುತ್ತೇನೆ ಎಂಬ ನಿರೀಕ್ಷೆಯೂ ಹುಸಿಯಾಗಿ ಹೋಗಿತ್ತು.
ಉಸಿರಾಡಲು ಕಷ್ಟವಾಗುತ್ತಿತ್ತು. ನಿಧಾನವಾಗಿ ನಿದ್ದೆಗೆ ಜಾರುತ್ತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಎಷ್ಟೋ ಗಂಟೆಗಳ ನಂತರ ಎಚ್ಚರವಾಯಿತು. ಪಕ್ಕದಲ್ಲಿ ಅಮ್ಮ ಮಲಗಿದ್ದಾರೆ ಎಂದು ತಡಕಾಡಿದೆ. ನಂತರ ಅರಿವಿಗೆ ಬಂತು; ನನ್ನಮ್ಮ ಇಲ್ಲದ ಭೀಕರ ಬಾವಿಗೆ ಸಿಲುಕಿ ಒದ್ದಾಡುತ್ತಿದ್ದೇನೆಂದು. ಹತ್ತು ಕೊಡ ನೀರು ಕೊಟ್ಟರೂ ಕುಡಿಯಬಲ್ಲೆ ಎನ್ನುವಂತ ಬಾಯಾರಿಕೆ. ಬುಟ್ಟಿಗಟ್ಟಲೇ ರೊಟ್ಟಿ ತಂದರೂ ಹಪಹಪನೆ ತಿನ್ನಬಲ್ಲೆನೆಂಬ ಹಸಿವು. ನಾನೆಂದೂ ಕಾಣದ, ಅನುಭವಿಸದ ಭೀಕರ ಹಸಿವು ಅದಾಗಿತ್ತು. ಅಮ್ಮಾ.... ಎಂದು ಬಾಯ್ತೆರೆದು ಹೇಳಲಾಗದಷ್ಟು ನಿತ್ರಾಣಗೊಂಡಿದ್ದೆ. ನನ್ನಲ್ಲಿನ ಶಕ್ತಿ ಉಡುಗುತ್ತಿತ್ತು. ಏನೋ ಒಂಥರ ಮಂಪರು. ಅದಾಗಲೇ ಎರಡು ದಿನ ಉರುಳಿದ್ದವು. ದೇಹದಲ್ಲಿ ಹರಡಿದ್ದ ಜೀವವೆಲ್ಲ ಏಕತ್ರವಾಗ ತೊಡಗಿತು. ಅದೇನೆಂದು ತಿಳಿಯಲು ಸಾಧ್ಯವಾಗಲಿಲ್ಲ. ನಿಧಾನವಾಗಿ ಅಂತಿಮ ನಿದ್ರೆಯತ್ತ ಸಾಗಿದೆ...!!
'ಪ್ರಾಣ' ಅನ್ನೋ ನಾನು, ಒಳಗಿದ್ದ ದೇಹದಿಂದ ಬೇರ್ಪಟ್ಟಿದ್ದೆ. ಕೊನೆಗೂ ಎಲ್ಲ ಭಯ-ನೋವು-ಅಸಹನೀಯತೆಯಿಂದ ಮುಕ್ತಿ ಹೊಂದಿದ ನಾನು, ಯಾರ ಸಹಾಯವಿಲ್ಲದೆ ಕೊಳವೆ ಬಾವಿಯಿಂದ ಮೇಲೆದ್ದು ಬಂದಿದ್ದೆ. ಆ ಸಂತೋಷದಲ್ಲಿ ಅತ್ತು ಅತ್ತು ಕರುಗಿದ ಅಮ್ಮನ ಕೆನ್ನೆಯ ಮುಟ್ಟಿದೆ. ಕಣ್ಣಿರನ್ನು ಒರೆಸಿದೆ. ಅಮ್ಮನ ಕೈ ಹಿಡಿದು ಎಳೆದೆ. ಹಾರಿದೆ, ಕುಣಿದಾಡಿದೆ, ನಾನು ಮೇಲೆದ್ದು ಬಂದೆ ಎಂದು ದೊಡ್ಡದಾಗಿ ಕಿರುಚಾಡಿದೆ. ಆದರೆ, ಯಾರೂ ಕೂಡಾ ನನ್ನ ಗಮನಿಸಲಿಲ್ಲ. ನನ್ನಮ್ಮ, ಅಪ್ಪ ಸಂಬಂಧಿಗಳು ಅಳುವುದನ್ನ ಮುಂದುವರಿಸಿದ್ದರು. ನನಗೇನೂ ಅರ್ಥವಾಗುತ್ತಿರಲಿಲ್ಲ. ಹಸಿವು, ನಿದ್ರೆ ಯಾವುದರ ಅರಿವೂ ಆಗುತ್ತಿರಲಿಲ್ಲ. ನನ್ನನ್ನು ನಾನೇ ನೋಡಿಕೊಂಡೆ. ದೇಹವೆ ಇಲ್ಲದ ನಿರಾಕಾರನಾದ ನಾನು ಯಾರಿಗೂ ಕಾಣುತ್ತಿರಲಿಲ್ಲ. ದೇಹವಿದ್ದರೆ ಮಾತ್ರ ನನ್ನನ್ನು ಗುರುತಿಸಲು ಸಾಧ್ಯ. ನನಗೆ ನೋವಾಯಿತು. ಅಕ್ಷರಶಃ ಮೌನಿಯಾದೆ. ಅತ್ತು ಕರಗಿ ಕುಸಿದು ಬಿದ್ದಿದ್ದ ಅತ್ತೆಯ ಮಡಿಲಿಗೆ ಒರಗಿದೆ. ಅವಳೂ ಕೂಡಾ ಮೈದವಡಲಿಲ್ಲ. ಅಲ್ಲಿದ್ದವರೆಲ್ಲ ನನ್ನ ದೇಹಕ್ಕಾಗಿ ಗೋಳಾಡುತ್ತಿದ್ದರು. ನನ್ನ ಪ್ರಾಣ ಅವರ ಮುಂದೆ ಬಂದು ನಿಂತರೂ, ಅವರ ನಡುವೆ ಬದುಕುವ ಭಾಗ್ಯ ನನಗಿಲ್ಲ ಎಂದು ತಿಳಿದಾಗಿತ್ತು. ಇನ್ನೇನಿದ್ದರೂ ನೀವು ಕಾಣದ ಲೋಕಕ್ಕೆ ನನ್ನ ಯಾನ...!
ಈ ನಡುವೆ, ನನ್ನದೊಂದು ಪುಟ್ಟ ಪ್ರಾರ್ಥನೆ... ನನ್ನ ಸಾವಿಗೆ ಒಂದು ಅರ್ಥ ಕೊಡಿ. ತೋಡಿದ ಕೊಳವೆ ಬಾವಿಯಲ್ಲಿ ನೀರು ಬಾರದೆ ಇದ್ದರೆ, ಅದನ್ನು ಅಲ್ಲಿಯೇ ಮುಚ್ಚಿ ಬಿಡಿ. ಈಗಾಗಲೇ ನನ್ನಂಥ ಎಷ್ಟೋ ಕಂದಮ್ಮಗಳು ಅಂತಹ ಮೃತ್ಯ ಕೂಪದಲ್ಲಿ ಬಿದ್ದು ಸಾವನ್ನಪ್ಪಿವೆ. ಇನ್ನು ಮುಂದೆ ಯಾರ ಜೀವವೂ ಸಹ ಹೀಗಾಗಬಾರದು. ನನ್ನ ಸಾವು ಸಮಸ್ತ ಮಾನವ ಕುಲಕ್ಕೆ ಒಂದು ಪಾಠವಾಗಲಿ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಅಭಿಯಾನ ಕೈಗೊಳ್ಳಿ.
ಕೊನೆಯದಾಗಿ, ಯಾರೂ ಕೂಡಾ ನನ್ನ ನೆನಪಿಸಿಕೊಂಡು ಕೊರಗಬೇಡಿ. ನೀವೆಲ್ಲ ಉಸಿರಾಡುವ ಗಾಳಿಯಲ್ಲಿಯೇ ನನ್ನುಸಿರು ಬೆರತಿದೆ. ನಮ್ಮ ತೋಟದ ಗದ್ದೆಯಲ್ಲಿ ಬೆಳೆಯುವ ಹಸಿರಿನಲ್ಲಿ ನಾನಿದ್ದೇನೆ. ಪ್ರೀತಿಯ ಅಪ್ಪ, ಅಣ್ಣ, ಅಕ್ಕ, ಅತ್ತೆ, ಕಾಕ ಹಾಗೂ ನನ್ನ ಬದುಕಿಗಾಗಿ ನಿರಂತರವಾಗಿ ಶ್ರಮಿಸಿದ, ದೂರದಿಂದಲೇ ಪ್ರಾರ್ಥಿಸಿದ ನನ್ನೆಲ್ಲ ಹಿತೈಷಿಗಳಿಗೆ....
-ಇಂತಿ ನಿಮ್ಮ
ನತದೃಷ್ಟ ತಿಮ್ಮಣ್ಣ
ನಿರೂಪಣೆ: ನಾಗರಾಜ್ ಬಿ.ಎನ್ 

'ನಿರ್ಗತಿಕನ ಹಾಗೆ ಆ ರಾತ್ರಿ ಕಳೆದಿದ್ದ....!!'

ನಾಗರಾಜ್ ಬಿ.ಎನ್. 
ಅದು ದಟ್ಟ ಕಾರಿರುಳು. ಮೈಕೊರೆವ ಚಳಿ. ಹೊಟ್ಟೆಯಲ್ಲಿದ್ದ ಕರುಳುಗಳೆಲ್ಲ ಮರಗಟ್ಟುತ್ತಿವೆ. ಒಂದೆಡೆ ಹಸಿವು. ಮಲಗಲು ಸೂರಿಲ್ಲ. ಏನು ಮಾಡುವುದು ಎಂದು ಒಂದು ಕ್ಷಣ ಯೋಚಿಸಿ, ಅಲ್ಲಿಯೇ ಅನತಿ ದೂರದಲ್ಲಿದ್ದ ಮನೆಗೆ ಹೋಗಿ, 'ಅಮ್ಮಾ, ಹಸಿವು.. ಏನಾದರೂ ಇದೆಯಾ?' ಎಂದು ಕೇಳುತ್ತಾನೆ. ತೆರೆದ ಬಾಗಿಲನ್ನು ದಡಕ್ಕನೆ ಮನೆಯಾಕೆ ಮುಚ್ಚಿದಳು. ಮತ್ತೊಂದು ಮನೆಗೆ ಹೋಗಿ, 'ಮಲಗಲು ಒಂದು ಚಿಕ್ಕ ಸೂರು ಸಿಗಬಹುದೇ, ಹೊರಗಡೆ ಭಾರಿ ಚಳಿ' ಎನ್ನುತ್ತಾನೆ. ಆ ಮನೆಯ ಯಜಮಾನ 'ಹೋಗಯ್ಯ ಹೋಗು, ದಾರಿಹೋಕ ನೀನು' ಎಂದು ಅಸಡ್ಡೆ ಮಾಡಿ ಅಲ್ಲಿಂದ ಅವನನ್ನು ಅಟ್ಟುತ್ತಾನೆ.
ಹಸಿವು ತಾಳಲಾಗುತ್ತಿಲ್ಲ, ಚಳಿ ತಡೆಯಲಾಗುತ್ತಿಲ್ಲ. ಗೊತ್ತು-ಗುರಿಯಿಲ್ಲದ ಆ ಜಾಗದಲ್ಲಿ ಆತನಿಗೆ ತನ್ನವರು ಎನ್ನುವವರು ಯಾರೂ ಇರಲಿಲ್ಲ. ಅಕ್ಷರಶಃ ಆತ ಪರದೇಶಿಯಂತೆ ನಿರ್ಗತಿಕನಂತಾಗಿದ್ದ. ಆದರೆ, ಅಚಲ ಆತ್ಮವಿಶ್ವಾಸ, ಮನಸ್ಥೈರ್ಯ, ಹಿಡಿದ ಹಟ ಸಾಧಿಸುವ ಛಲ ಮಾತ್ರ ಸದಾ ಪುಟಿದೇಳುತ್ತಿತ್ತು. ರಸ್ತೆಯ ಒಂದು ಬದಿಯಲ್ಲಿ ಹಾಗೋ ಹೀಗೋ ಎಂದು ಮಲಗಿ, ರಾತ್ರಿ ಕಳೆಯುತ್ತಾನೆ.
ಮುಂಜಾನೆ 11ರ ಸಮಯ. 'ಅಮೆರಿಕೆಯ ಸಹೋದರ ಸಹೋದರಿಯರೇ...' ಎಂಬ ಮಾತು ಆತನ ಬಾಯಿಂದ ಹೊರಬರುತ್ತಿದ್ದಂತೆ ಕರತಾಡನದ ಸುರಿಮಳೆ. ಬರೋಬ್ಬರಿ 8 ನಿಮಿಷಗಳ ಕಾಲ ಚಪ್ಪಾಳೆ... ಚಪ್ಪಾಳೆ...!! ಅಲ್ಲಿದ್ದ ಯಾರೂ ಕೂಡಾ, ಆ ವಿನೂತನ ಸಂಭೋದನೆಯ ಕಲ್ಪನೆಯನ್ನು ಆವರೆಗೆ ಊಹಿಸಿರಲಿಲ್ಲ. 'ಸಹೋದರ-ಸಹೋದರಿ' ಎನ್ನುವ ವಿಶ್ವ ಬಾತೃತ್ವದ ಮಾಯೆಗೆ ಒಳಗಾದ ಅವರ ಕೈಗಳು ಅರಿವಿಲ್ಲದೆ ನಿರಂತರವಾಗಿ ಚಪ್ಪಾಳೆ ತಟ್ಟುತ್ತಿದ್ದವು.
ಹೌದು, ಆತನೇ ನಮ್ಮ ವಿವೇಕಾನಂದ...! ಸ್ವಾಮಿ ವಿವೇಕಾನಂದ. ವೀರ ಸನ್ಯಾಸಿ ವಿವೇಕಾನಂದ. ಯುವ ಜನತೆಯ ಸ್ಫೂರ್ತಿ ವಿವೇಕಾನಂದ....!!
1893ರ ಸೆ. 11ರಂದು ಅಮೆರಿಕೆಯ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಭಾರತದ ರಾಯಭಾರಿಯಾಗಿ ತೆರಳಿದ್ದರು. ಅವರ ದೇಶ ಪ್ರೇಮ, ಧರ್ಮ ಸಂಸ್ಕೃತಿ, ಮಾತುಗಾರಿಕೆ, ಸರಳವಾದ ಉಡುಪು, ಜೀವನ ಶೈಲಿಯನ್ನೆಲ್ಲ ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ರಾತ್ರಿ-ಬೆಳಗಾಗುವುದರೊಳಗೆ ರಾಷ್ಟ್ರದ ಗರಿಮೆಯನ್ನು ಮುಗಿಲೆತ್ತಕ್ಕೆ ಹಾರಿಸಿದ್ದರು. ಅಲ್ಲಿದ್ದ ಎಲ್ಲರ ಆರಾಧ್ಯ ಮೂತರ್ಿಯಾಗಿ ಬಿಟ್ಟಿದ್ದರು.
ಸರಿ... ಅಂದಿನ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಅಮೆರಿಕಾದ ಬುದ್ದಿ ಜೀವಿಗಳು, ಜನಪ್ರತಿನಿಧಿಗಳು, ಧನಿಕರು ಅವರನ್ನು ಅತಿಥಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡುತ್ತಾರೆ. ಸತ್ಕಾರ ಸ್ವೀಕರಿಸಬೇಕು ಎಂದು ದುಂಬಾಲು ಬೀಳುತ್ತಾರೆ. ಕೊನೆಗೆ ಚಿಕಾಗೋದ ಒಬ್ಬ ಆಗರ್ಭ ಶ್ರೀಮಂತನ ಮನೆಗೆ ಹೋಗುತ್ತಾರೆ. ಅವರ ಆದರಾತಿಥ್ಯದಲ್ಲಿ ಮೃಷ್ಟಾನ್ನ ಭೋಜನ, ಹಣ್ಣು-ಹಂಪಲ.... ಏನು ಬೇಕು? ಏನೂ ಬೇಡ? ಎನ್ನುವಂತ ವಾತಾವರಣ. ಐಷಾರಾಮಿ ಬಂಗಲೆ, ಬಂಗಾರ ಲೇಪಿತ ಕಂಬಗಳು. 'ನಿನ್ನೆ ರಾತ್ರಿಯ ಕ್ಷಣಗಳು ಹೇಗಿದ್ದವು... ಇಂದಿನ ರಾತ್ರಿ ಹೇಗಿವೆ. ಎಷ್ಟೊಂದು ಬದಲಾವಣೆ ಅಲ್ಲವೇ' ಎಂದುಕೊಳ್ಳುತ್ತ ತುಸು ಆಹಾರ ಸೇವಿಸಿ, ತನಗಾಗಿ ವ್ಯವಸ್ಥೆ ಮಾಡಿದ್ದ ಕೋಣೆಗೆ ಮಲಗಲು ಹೋಗುತ್ತಾರೆ.
ಸುಮ್ಮನೆ ಕಿಟಕಿಯಾಚೆ ದೃಷ್ಟಿ ಬೀರುತ್ತಾರೆ. ಭಾರತದ ಕಡೆ ಮುಖ ಮಾಡಿ ಅರೆಕ್ಷಣ ಕಣ್ಮುಚ್ಚುತ್ತಾರೆ. ಮುಚ್ಚಿದ ಕಣ್ಣರೆಪ್ಪೆಯನ್ನು ಸೀಳಿ ಕಂಬನಿ ಧಾರಾಕಾರವಾಗಿ ಹರಿಯುತ್ತವೆ. ಭಾರತ ವಾಸಿಗಳ ದೀನ-ದಲಿತರ ಜೀವನ ನೆನಪಾಗುತ್ತದೆ. ಒಪ್ಪತ್ತಿನ ತುತ್ತಿಗಾಗಿ ನನ್ನವರು ಪರದಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲಿ ಬೆಂಡಾಗುತ್ತಿದ್ದಾರೆ. ನೆಮ್ಮದಿಯ ನಿದ್ರೆಗೆ ಚಿಕ್ಕ ಸೂರು ಇಲ್ಲದೆ ಹಾದಿ-ಬೀದಿಯಲ್ಲಿ ದಿನ-ಬೆಳಗು ಮಾಡುತ್ತಿದ್ದಾರೆ. `ಓ ನನ್ನ ಭಾರತ ವಾಸಿಗಳೇ.... ರಟ್ಟೆಯಲ್ಲಿ ಶಕ್ತಿಯಿರುವವರೆಗೂ ನಾವು ಶ್ರದ್ಧೆಯಿಂದ ದುಡಿಯಬೇಕು. ನಮ್ಮ ಬದುಕನ್ನು ನಾವೇ ಬದಲಾಯಿಸಿಕೊಳ್ಳಬೇಕು. ಸ್ವಾಭಿಮಾನಿಗಳಾಗಿ ಮುನ್ನುಗ್ಗಬೇಕು. ಏಳೀ ಎದ್ದೇಳಿ' ಎಂದು ಮನಸ್ಸಲ್ಲೆ ಹೇಳುತ್ತ.. ರಾತ್ರಿಯಿಡೀ ಕಣ್ಣೀರಾಗುತ್ತಾರೆ. ಮಮ್ಮಲ ಮರುಗುತ್ತಾರೆ.
ಭಾರತಕ್ಕಾಗಿ ಮರುಗಿದ, ಕಣ್ಣೀರು ಸುರಿಸಿದ, ಹಗಲು ರಾತ್ರಿಯೆನ್ನದೆ ಧರ್ಮ, ದೇಶ ಎನ್ನುತ್ತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸುತ್ತಿದ ಏಕೈಕ ವ್ಯಕ್ತಿ ವೀರ-ಧೀರ-ಸನ್ಯಾಸಿ ನಮ್ಮ ಸ್ವಾಮಿ ವಿವೇಕಾನಂದ. ಅವರು ಸಾರಿದ, ಹರಿಯ ಬಿಟ್ಟ ಚಿಂತನೆಗಳು, ಸಿಡಿಲಿನಂತ ಮಾತುಗಳು ನಮಗೆಲ್ಲ ಸದಾ ದಾರಿ ದೀಪವಾಗಲಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಭವ್ಯ-ಭಾರತ ನಿಮರ್ಾಣ ಮಾಡುವಲ್ಲಿ ದೃಢ ಸಂಕಲ್ಪಿಗಳಾಗೋಣ. ಈ ಮೂಲಕ ಅವರ 152ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿಸೋಣ.
ಸ್ವಾಮಿ ವಿವೇಕಾನಂದರಿಗೆ ಜನ್ಮದಿನದ ಶುಭಾಶಗಳು....!

ನಾನು ಮಾಡಿದ್ದೇ ಸರಿ, ನನಗ್ಹೇಳಲು ನೀನ್ಯಾರು..?


ನಾಗರಾಜ್ ಬಿ.ಎನ್.
ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೆ ಆಗಬೇಕು... ಎನ್ನುವ ಮನಸ್ಥಿತಿ ಸರ್ವಥಾ ತರವಲ್ಲ. ಅದರಿಂದ ನಾವು ನಮ್ಮ ಸ್ನೇಹಿತರನ್ನು ಹಾಗೂ ಪ್ರೀತಿ-ಪಾತ್ರರನ್ನು ದೂರ ಮಾಡಿಕೊಳ್ಳುತ್ತೇವೆಯೇ ಹೊರತು, ಬದುಕಿನ ಬೆಳವಣಿಗೆಗೆ ಒಂದಿನಿತೂ ಪ್ರಯೋಜನವಿಲ್ಲ.

ಋಷಿ-ಮುನಿಗಳ, ಸಾಧು-ಸಂತರ ಸಂಸ್ಕಾರಗಳು ನಮಗಿಲ್ಲ. ಗಡ್ಡೆ-ಗೆಣೆಸುಗಳಷ್ಟೇ ತಿನ್ನುವ ಸಾತ್ವಿಕ ಆಹಾರಿಗಳೂ ನಾವಲ್ಲ. ನಾವು ಆಧುನಿಕ ಜಗತ್ತಿಗೆ ತೆರದುಕೊಂಡು, ವೈಜ್ಞಾನಿಕ ಉಪಕರಣಗಳ ನಡುವೆ ಬದುಕು ಸಾಗಿಸುವವರು. ಮಾಂಸಾಹಾರವೇ ಪರಮ ಭಕ್ಷ್ಯ ಎಂದು ಸೇವಿಸುವವರು. ಹೀಗಿದ್ದಾಗ ಸಹಜವಾಗಿಯೇ ನಮ್ಮ ಆಲೋಚನೆಗಳು, ಆಚಾರ-ವಿಚಾರಗಳು ಸಂಸ್ಕಾರವನ್ನು ಮರೆಮಾಚುವಂತೆ ಮಾಡುತ್ತವೆ. ಹಾಗಂತ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಅಲ್ಲವೇ...? ನಮ್ಮ ಜೊತೆ ಬದುಕಿ-ಬಾಳುವವರಿಗೂ ಕೂಡಾ, ನಮ್ಮ ಹಾಗೆಯೇ ಒಂದು ಬದುಕು ಇದೆ ಎನ್ನುವುದು ಸತ್ಯ ಅಲ್ಲವೇ...?
ಈ ಆಧುನಿಕ ಬದುಕಿನ ನಾಗಾಲೋಟದಲ್ಲಿ ಯಾವುದು ಸರಿ...? ಯಾವುದು ತಪ್ಪು...? ಎಂದು ನಮಗೆ ಅರಿವಿಗೆ ಬಾರದು. ವಿವೇಚನಾ ರಹಿತ ವ್ಯಾಖ್ಯಾನವೇ ನಮ್ಮ ಜೀವಾಳವಾಗಿ ಬಿಟ್ಟಿದೆ. ಪರಿಣಾಮ, ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೇ ಸರಿ... ನನಗೆಲ್ಲವೂ ಗೊತ್ತು... ನನ್ನದು ಇದೇ ಇದೇ ಸ್ವಭಾವ... ಬೇಕಾದರೆ ಒಪ್ಪಿಕೋ, ಬೇಡವಾದರೆ ಬಿಡು... ನನ್ನಿಷ್ಟದ ಹಾಗೆ ನಾನು ಬದುಕುತ್ತೇನೆ... ನನ್ನ ಬದುಕು ನನ್ನದು... ನನಗೆ ಹೇಳಲು ನೀನ್ಯಾರು...? ನೀನು ನನ್ನ ಸಂಬಂಧಿನಾ...? ಹೀಗೆ ಮನಸ್ಸಿಗೆ ಬಂದ ಹಾಗೆ, ಏನೇನೋ ಬಡಬಡಿಸಿ ನಮ್ಮ ಮನಸ್ಸು ಎಂತಹದ್ದು ಎಂದು ಪ್ರದರ್ಶಿಸಿ ಬಿಡುತ್ತೇವೆ. ಇದು ನಮ್ಮ ಸಂಸ್ಕಾರದ ಫಲನೇ ಅಲ್ಲವೇ...? ಗಡ್ಡೆ-ಗೆಣಸು ತಿನ್ನುತ್ತಿದ್ದ ಸಾಧು-ಸಂತರು ಹೀಗೆ ವರ್ತಿಸುತ್ತಿದ್ದರೇ...? ಹಾಗಂತ ಮಾಂಸಾಹಾರ ತಿನ್ನುವವರೆಲ್ಲರೂ ಹೀಗೆ ವರ್ತಿಸುತ್ತಾರೆ ಅಂತಲ್ಲ. ಈಗಿನ ಬಹುತೇಕರ ಮನಸ್ಥಿತಿ ಹೀಗೆಯೇ ಇದೆ. ಆದರೆ, ಅದು ತಪ್ಪು ಎಂದು ನಮಗೆ ಅರ್ಥವಾಗುವುದಿಲ್ಲ. ಯಾರಾದರೂ, `ಹಾಗೆ ಮಾತನಾಡುವುದು ತಪ್ಪು, ಹಾಗೆಲ್ಲ ಹೇಳ ಬೇಡ' ಎಂದರೆ... ಅದನ್ನು ಕೇಳುವ ವ್ಯವಧಾನವೂ ನಮಗಿರುವುದಿಲ್ಲ. ಸಂದರ್ಭದಲ್ಲಿ `ನಾನು ಮಾಡಿದ್ದೆ ಸರಿ ಎನ್ನುವ ಅಹಂ' ನಮ್ಮಲ್ಲಿ ಪುಟಿದೇಳುತ್ತಿದೆ. ಅದರ ಮೇಲಾಟದಲ್ಲಿ 'ಸರಿ-ತಪ್ಪು'ಗಳ ವಿವೇಚನೆಯೇ ಮಖಾಡೆ ಮಲಗಿರುತ್ತವೆ. ಆದರೆ ಇವೆಲ್ಲ ನಮ್ಮ ಸಂಸ್ಕಾರದ ಫಲನೇ ಅಲ್ಲವೇ...?
ಇರಲಿ, ಕ್ಯಾಲೆಂಡರ್ನಲ್ಲಿ ವರ್ಷ ಬದಲಾಗುವ ದಿನಕ್ಕೆ ಎದುರು ನೋಡುತ್ತಿದ್ದೇವೆ. `ಹಿಂದು ವಷರ್ಾಚರನೆಯಲ್ಲ, ಅದನ್ನು ಆಚರಿಸುವುದು ಬೇಡ' ಎನ್ನುವ ಕೂಗು ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ. ನೂತನ ವರ್ಷವನ್ನು ಆಚರಣೆ ಮಾಡುವುದು ಬೇಡ. ಆದರೆ, ವರ್ಷ ಬದಲಾವಣೆಯಾಗುವ ಸಂದರ್ಭದಲ್ಲಿ ದೃಢ ಸಂಕಲ್ಪ ಮಾಡೋಣ. ವಿಚಾರ, ಆಚಾರ, ನಡೆ, ನುಡಿಗಳನ್ನು ಬದಲಿಸಿಕೊಳ್ಳೋಣ. ನಾನು ಮಾಡಿದ್ದೇ ಸರಿ, ನಾನು ಹೇಳಿದ್ದೇ ಆಗಬೇಕು ಎನ್ನುವ ತುಚ್ಛ ಮನಸ್ಥಿತಿಯನ್ನು ಈ ವರ್ಷದಲ್ಲಿಯೇ ಬಿಟ್ಟು ಹೋಗೋಣ. ಇನ್ನೊಬ್ಬರು ಆಡುವ ಮಾತನ್ನು ತಾಳ್ಮೆಯಿಂದ ಕೇಳೋಣ... `ಅವರು ಯಾಕಾಗಿ ನನಗೆ ಹೇಳುತ್ತಿದ್ದಾರೆ?' ಎಂದು ನಮ್ಮಲ್ಲಿಯೇ ಮಂಥನ ಮಾಡಿಕೊಳ್ಳೊಣ. ಸಂಬಂಧವನ್ನು ಹಾಳು ಮಾಡಿಕೊಳ್ಳುವ, 'ನೀನು ನನಗೆ ಸಂಬಂಧಿನಾ, ನನ್ನ ಸ್ವಭಾವವೇ ಹಾಗೆ, ನನ್ನ ಬದುಕು ನನ್ನಿಷ್ಟ, ನನಗೆ ಹೇಳಲು ನಿನ್ಯಾರು... ಎನ್ನುವ ಮಾತುಗಳನ್ನು ಬಿಟ್ಟು ಬಿಡೋಣ. ಕುಟುಂಬದವರ, ಸ್ನೇಹಿತರ, ಜೊತೆಯಿರುವ, ಪ್ರೀತಿಸುವವರ ಜೊತೆ ಕೂಡಿ-ಬಾಳೋಣ. ಅಹಂನ ಕಪಿಮುಷ್ಟಿಯಲ್ಲಿ ಸಿಲುಕಿ, ಅದರ ಪ್ರತಿಷ್ಠಗಾಗಿ ಜೊತೆಗಾರರನ್ನು ಕಳೆದುಕೊಳ್ಳದಿರೋಣ. ಅವರ ಮಾತುಗಳನ್ನು ಕೇಳಿ ಅವರ ಬದುಕಿಗೂ ಗೌರವ ನೀಡೋಣ. ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... ಒಟ್ಟಾರೆ ಸಮಾಜದ ಆದರ್ಶ ವ್ಯಕ್ತಿಯಾಗಲು ಪಣ ತೊಡೋಣ.ನಮ್ಮ ಬದುಕಿನಾಚೆಗೂ ಒಂದು ಸುಂದರ ಬದುಕಿದೆ ಎನ್ನುವುದು ಮರೆಯದಿರೋಣ..