ಶನಿವಾರ, ಜನವರಿ 17, 2015

'ನಲಿಯಲಿ ನಲಿಯಲಿ, ಯಾರ ಪ್ರೀತಿಯೂ ಛೇದವಾಗದಿರಲಿ.......!!'

ಮಾನವ ಸಂಬಂಧಗಳು ಎಷ್ಟೊಂದು ವಿಚಿತ್ರ ಅಲ್ವಾ...? ನಿನ್ನೆ ಇದ್ದ ಸಂಬಂಧ ಇಂದು ಇರುವುದಿಲ್ಲ. ಇಂದು ಆದ ಪರಿಚಯ ನಾಳೆಯಾಗುವಷ್ಟರಲ್ಲಿ ಮರೆತು ಹೋಗಿರುತ್ತವೆ. ನಾಳೆ ಎನ್ನುವಷ್ಟರಲ್ಲಿ ಇನ್ಯಾರೋ ಎದುರಿಗೆ ಬಂದು ನಿಂತಿರುತ್ತಾರೆ. 'ನಿನ್ನೆ-ಇಂದು-ನಾಳೆ'ಗಳ ನಡುವೆ ಬಂದು ಹೋಗುವ ಅತಿಥಿಗಳೇ ನಮ್ಮ ಸಂಬಂಧಿಗಳಾಗುತ್ತಾರೆ... ಸ್ನೇಹಿತರಾಗುತ್ತಾರೆ... ಹಿತೈಷಿಗಳಾಗುತ್ತಾರೆ... ಗುರುವಾಗುತ್ತಾರೆ... ಅವರಲ್ಲಿ ಕೆಲವರು ಬದುಕಿನುದ್ದಕ್ಕೂ ಜೊತೆ-ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಇನ್ನು ಕೆಲವರು, ನೆನಪಾಗಿ ಸದಾ ಕಾಡುತ್ತ ಇರುತ್ತಾರೆ.
ಈ ಬದುಕೆ ಹೀಗೆ... ಇದೊಂದು ಅನಿರೀಕ್ಷಿತಗಳ ಸಂತೆ. ಯಾವ ಕ್ಷಣದಲ್ಲೂ ಎನೂ ಬೇಕಾದರೂ ಆಗಬಹುದು. ಅದನ್ನು ಯಾರೂ ಅರಿಯರು. ನಾಲ್ಕು ದಿನದ ಈ ಬದುಕಿನಲ್ಲಿ 'ನಿನ್ನೆ-ಇಂದು-ನಾಳೆ'ಗಳ ನಡುವೆ ಬಂದು ಹೋಗುವ ಜನರೊಡನೆ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಪ್ರಾಮಾಣಿಕತೆಯ ಪ್ರತಿಬಿಂಬವಾಗಿ ದೇದೀಪ್ಯಮಾನವಾಗಿ ಬೆಳಗಬೇಕು.
ಆದರೆ, ಸ್ವಾರ್ಥ ತುಂಬಿದ ಜಗತ್ತಿನಲ್ಲಿ 'ನಂಬಿಕೆ-ವಿಶ್ವಾಸ' ಎನ್ನುವುದು ಮರೆಮಾಚಿ ಹೋಗಿದೆ. ಪ್ರಾಮಾಣಿಕತೆ ಎನ್ನುವುದು ಕಾಲ ಗರ್ಭದಲ್ಲಿ ಹೂತು ಹೋಗಿದೆ. ನಂಬಿಕೆಯ ಮುಖವಾಡ ಧರಿಸಿ, ಪ್ರೀತಿ-ವಿಶ್ವಾಸದ ತಾಯಿ ಬೇರನ್ನೇ ಕತ್ತರಿಸುತ್ತಿದ್ದಾರೆ. ಪ್ರಾಮಾಣಿಕತೆಯ ಸೋಗಿನಲ್ಲಿ, ಬೆನ್ನಿಗೆ ಚೂರಿ ಇರಿಯುತ್ತಾರೆ. ಸ್ವಾರ್ಥ ಲಾಲಸೆಯಲ್ಲಿ ಬಂದದ್ದೆಲ್ಲ ಬರಲಿ ಎನ್ನುತ್ತ.... ನಯವಾಗಿ ವಂಚಿಸುತ್ತಲೇ ಹೋಗುತ್ತಾರೆ.
ಆದರೂ ಇಲ್ಲಿ, ಯಾರನ್ನೇ ನಂಬುವುದಾದರೆ ಸಂಪೂರ್ಣವಾಗಿ ನಂಬಬೇಕು. ನಂಬಿದ ವ್ಯಕ್ತಿ ಕೊನೆವರೆಗೂ ಉತ್ತಮ ಸ್ನೇಹಿತನಾಗಿರುತ್ತಾನೆ. ಇಲ್ಲವೇ, ಬದುಕಲ್ಲಿ ಯಾರೂ ನೀಡದ ಅನುಭವವೊಂದನ್ನು ಅವನು ನಮಗೆ ನೀಡಿ ಹೋಗುತ್ತಾನೆ. ಅದರಿಂದ ನಂಬಿದ ವ್ಯಕ್ತಿಯ ಬದುಕು ಇನ್ನೂ ಉನ್ನತಕ್ಕೇರುತ್ತದೆ. ಮುಂದೊಂದು ದಿನ, ವಂಚಿಸಿದ ವ್ಯಕ್ತಿ 'ನಾನು ತಪ್ಪು ಮಾಡಿದೆ' ಎಂದು ಖಂಡಿತ ಕೊರಗಿ ಪಶ್ಚಾತಾಪ ಪಡುತ್ತಾನೆ. ಆದರೆ, ಈ ಸತ್ಯ ಅರಿವಾಗುವಷ್ಟರಲ್ಲಿ ಅವನ ಬದುಕಿನ ಅತ್ಯಮೂಲ್ಯ ಸಮಯ ಗತಿಸಿ ಹೋಗಿರುತ್ತವೆ.
ಯಾವುದೇ ಸಂಬಂಧವಿರಲಿ... ಆ ಸಂಬಂಧ ಎಂದೂ ಬಾಡದಿರಲಿ. ಅದರಲ್ಲಿ 'ಪ್ರೀತಿ-ವಿಶ್ವಾಸ-ಪ್ರಾಮಾಣಿಕತೆ' ಸದಾ ನಳನಳಿಸುತ್ತಿರಲಿ. 'ನಲಿಯಲಿ ನಲಿಯಲಿ, ಯಾರ ಪ್ರೀತಿಯೂ ಛೇದವಾಗದಿರಲಿ.......!! 

ಕಾಮೆಂಟ್‌ಗಳಿಲ್ಲ: