ಶನಿವಾರ, ಜನವರಿ 17, 2015

'ನಿರ್ಗತಿಕನ ಹಾಗೆ ಆ ರಾತ್ರಿ ಕಳೆದಿದ್ದ....!!'

ನಾಗರಾಜ್ ಬಿ.ಎನ್. 
ಅದು ದಟ್ಟ ಕಾರಿರುಳು. ಮೈಕೊರೆವ ಚಳಿ. ಹೊಟ್ಟೆಯಲ್ಲಿದ್ದ ಕರುಳುಗಳೆಲ್ಲ ಮರಗಟ್ಟುತ್ತಿವೆ. ಒಂದೆಡೆ ಹಸಿವು. ಮಲಗಲು ಸೂರಿಲ್ಲ. ಏನು ಮಾಡುವುದು ಎಂದು ಒಂದು ಕ್ಷಣ ಯೋಚಿಸಿ, ಅಲ್ಲಿಯೇ ಅನತಿ ದೂರದಲ್ಲಿದ್ದ ಮನೆಗೆ ಹೋಗಿ, 'ಅಮ್ಮಾ, ಹಸಿವು.. ಏನಾದರೂ ಇದೆಯಾ?' ಎಂದು ಕೇಳುತ್ತಾನೆ. ತೆರೆದ ಬಾಗಿಲನ್ನು ದಡಕ್ಕನೆ ಮನೆಯಾಕೆ ಮುಚ್ಚಿದಳು. ಮತ್ತೊಂದು ಮನೆಗೆ ಹೋಗಿ, 'ಮಲಗಲು ಒಂದು ಚಿಕ್ಕ ಸೂರು ಸಿಗಬಹುದೇ, ಹೊರಗಡೆ ಭಾರಿ ಚಳಿ' ಎನ್ನುತ್ತಾನೆ. ಆ ಮನೆಯ ಯಜಮಾನ 'ಹೋಗಯ್ಯ ಹೋಗು, ದಾರಿಹೋಕ ನೀನು' ಎಂದು ಅಸಡ್ಡೆ ಮಾಡಿ ಅಲ್ಲಿಂದ ಅವನನ್ನು ಅಟ್ಟುತ್ತಾನೆ.
ಹಸಿವು ತಾಳಲಾಗುತ್ತಿಲ್ಲ, ಚಳಿ ತಡೆಯಲಾಗುತ್ತಿಲ್ಲ. ಗೊತ್ತು-ಗುರಿಯಿಲ್ಲದ ಆ ಜಾಗದಲ್ಲಿ ಆತನಿಗೆ ತನ್ನವರು ಎನ್ನುವವರು ಯಾರೂ ಇರಲಿಲ್ಲ. ಅಕ್ಷರಶಃ ಆತ ಪರದೇಶಿಯಂತೆ ನಿರ್ಗತಿಕನಂತಾಗಿದ್ದ. ಆದರೆ, ಅಚಲ ಆತ್ಮವಿಶ್ವಾಸ, ಮನಸ್ಥೈರ್ಯ, ಹಿಡಿದ ಹಟ ಸಾಧಿಸುವ ಛಲ ಮಾತ್ರ ಸದಾ ಪುಟಿದೇಳುತ್ತಿತ್ತು. ರಸ್ತೆಯ ಒಂದು ಬದಿಯಲ್ಲಿ ಹಾಗೋ ಹೀಗೋ ಎಂದು ಮಲಗಿ, ರಾತ್ರಿ ಕಳೆಯುತ್ತಾನೆ.
ಮುಂಜಾನೆ 11ರ ಸಮಯ. 'ಅಮೆರಿಕೆಯ ಸಹೋದರ ಸಹೋದರಿಯರೇ...' ಎಂಬ ಮಾತು ಆತನ ಬಾಯಿಂದ ಹೊರಬರುತ್ತಿದ್ದಂತೆ ಕರತಾಡನದ ಸುರಿಮಳೆ. ಬರೋಬ್ಬರಿ 8 ನಿಮಿಷಗಳ ಕಾಲ ಚಪ್ಪಾಳೆ... ಚಪ್ಪಾಳೆ...!! ಅಲ್ಲಿದ್ದ ಯಾರೂ ಕೂಡಾ, ಆ ವಿನೂತನ ಸಂಭೋದನೆಯ ಕಲ್ಪನೆಯನ್ನು ಆವರೆಗೆ ಊಹಿಸಿರಲಿಲ್ಲ. 'ಸಹೋದರ-ಸಹೋದರಿ' ಎನ್ನುವ ವಿಶ್ವ ಬಾತೃತ್ವದ ಮಾಯೆಗೆ ಒಳಗಾದ ಅವರ ಕೈಗಳು ಅರಿವಿಲ್ಲದೆ ನಿರಂತರವಾಗಿ ಚಪ್ಪಾಳೆ ತಟ್ಟುತ್ತಿದ್ದವು.
ಹೌದು, ಆತನೇ ನಮ್ಮ ವಿವೇಕಾನಂದ...! ಸ್ವಾಮಿ ವಿವೇಕಾನಂದ. ವೀರ ಸನ್ಯಾಸಿ ವಿವೇಕಾನಂದ. ಯುವ ಜನತೆಯ ಸ್ಫೂರ್ತಿ ವಿವೇಕಾನಂದ....!!
1893ರ ಸೆ. 11ರಂದು ಅಮೆರಿಕೆಯ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಭಾರತದ ರಾಯಭಾರಿಯಾಗಿ ತೆರಳಿದ್ದರು. ಅವರ ದೇಶ ಪ್ರೇಮ, ಧರ್ಮ ಸಂಸ್ಕೃತಿ, ಮಾತುಗಾರಿಕೆ, ಸರಳವಾದ ಉಡುಪು, ಜೀವನ ಶೈಲಿಯನ್ನೆಲ್ಲ ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ರಾತ್ರಿ-ಬೆಳಗಾಗುವುದರೊಳಗೆ ರಾಷ್ಟ್ರದ ಗರಿಮೆಯನ್ನು ಮುಗಿಲೆತ್ತಕ್ಕೆ ಹಾರಿಸಿದ್ದರು. ಅಲ್ಲಿದ್ದ ಎಲ್ಲರ ಆರಾಧ್ಯ ಮೂತರ್ಿಯಾಗಿ ಬಿಟ್ಟಿದ್ದರು.
ಸರಿ... ಅಂದಿನ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಅಮೆರಿಕಾದ ಬುದ್ದಿ ಜೀವಿಗಳು, ಜನಪ್ರತಿನಿಧಿಗಳು, ಧನಿಕರು ಅವರನ್ನು ಅತಿಥಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡುತ್ತಾರೆ. ಸತ್ಕಾರ ಸ್ವೀಕರಿಸಬೇಕು ಎಂದು ದುಂಬಾಲು ಬೀಳುತ್ತಾರೆ. ಕೊನೆಗೆ ಚಿಕಾಗೋದ ಒಬ್ಬ ಆಗರ್ಭ ಶ್ರೀಮಂತನ ಮನೆಗೆ ಹೋಗುತ್ತಾರೆ. ಅವರ ಆದರಾತಿಥ್ಯದಲ್ಲಿ ಮೃಷ್ಟಾನ್ನ ಭೋಜನ, ಹಣ್ಣು-ಹಂಪಲ.... ಏನು ಬೇಕು? ಏನೂ ಬೇಡ? ಎನ್ನುವಂತ ವಾತಾವರಣ. ಐಷಾರಾಮಿ ಬಂಗಲೆ, ಬಂಗಾರ ಲೇಪಿತ ಕಂಬಗಳು. 'ನಿನ್ನೆ ರಾತ್ರಿಯ ಕ್ಷಣಗಳು ಹೇಗಿದ್ದವು... ಇಂದಿನ ರಾತ್ರಿ ಹೇಗಿವೆ. ಎಷ್ಟೊಂದು ಬದಲಾವಣೆ ಅಲ್ಲವೇ' ಎಂದುಕೊಳ್ಳುತ್ತ ತುಸು ಆಹಾರ ಸೇವಿಸಿ, ತನಗಾಗಿ ವ್ಯವಸ್ಥೆ ಮಾಡಿದ್ದ ಕೋಣೆಗೆ ಮಲಗಲು ಹೋಗುತ್ತಾರೆ.
ಸುಮ್ಮನೆ ಕಿಟಕಿಯಾಚೆ ದೃಷ್ಟಿ ಬೀರುತ್ತಾರೆ. ಭಾರತದ ಕಡೆ ಮುಖ ಮಾಡಿ ಅರೆಕ್ಷಣ ಕಣ್ಮುಚ್ಚುತ್ತಾರೆ. ಮುಚ್ಚಿದ ಕಣ್ಣರೆಪ್ಪೆಯನ್ನು ಸೀಳಿ ಕಂಬನಿ ಧಾರಾಕಾರವಾಗಿ ಹರಿಯುತ್ತವೆ. ಭಾರತ ವಾಸಿಗಳ ದೀನ-ದಲಿತರ ಜೀವನ ನೆನಪಾಗುತ್ತದೆ. ಒಪ್ಪತ್ತಿನ ತುತ್ತಿಗಾಗಿ ನನ್ನವರು ಪರದಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲಿ ಬೆಂಡಾಗುತ್ತಿದ್ದಾರೆ. ನೆಮ್ಮದಿಯ ನಿದ್ರೆಗೆ ಚಿಕ್ಕ ಸೂರು ಇಲ್ಲದೆ ಹಾದಿ-ಬೀದಿಯಲ್ಲಿ ದಿನ-ಬೆಳಗು ಮಾಡುತ್ತಿದ್ದಾರೆ. `ಓ ನನ್ನ ಭಾರತ ವಾಸಿಗಳೇ.... ರಟ್ಟೆಯಲ್ಲಿ ಶಕ್ತಿಯಿರುವವರೆಗೂ ನಾವು ಶ್ರದ್ಧೆಯಿಂದ ದುಡಿಯಬೇಕು. ನಮ್ಮ ಬದುಕನ್ನು ನಾವೇ ಬದಲಾಯಿಸಿಕೊಳ್ಳಬೇಕು. ಸ್ವಾಭಿಮಾನಿಗಳಾಗಿ ಮುನ್ನುಗ್ಗಬೇಕು. ಏಳೀ ಎದ್ದೇಳಿ' ಎಂದು ಮನಸ್ಸಲ್ಲೆ ಹೇಳುತ್ತ.. ರಾತ್ರಿಯಿಡೀ ಕಣ್ಣೀರಾಗುತ್ತಾರೆ. ಮಮ್ಮಲ ಮರುಗುತ್ತಾರೆ.
ಭಾರತಕ್ಕಾಗಿ ಮರುಗಿದ, ಕಣ್ಣೀರು ಸುರಿಸಿದ, ಹಗಲು ರಾತ್ರಿಯೆನ್ನದೆ ಧರ್ಮ, ದೇಶ ಎನ್ನುತ್ತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸುತ್ತಿದ ಏಕೈಕ ವ್ಯಕ್ತಿ ವೀರ-ಧೀರ-ಸನ್ಯಾಸಿ ನಮ್ಮ ಸ್ವಾಮಿ ವಿವೇಕಾನಂದ. ಅವರು ಸಾರಿದ, ಹರಿಯ ಬಿಟ್ಟ ಚಿಂತನೆಗಳು, ಸಿಡಿಲಿನಂತ ಮಾತುಗಳು ನಮಗೆಲ್ಲ ಸದಾ ದಾರಿ ದೀಪವಾಗಲಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಭವ್ಯ-ಭಾರತ ನಿಮರ್ಾಣ ಮಾಡುವಲ್ಲಿ ದೃಢ ಸಂಕಲ್ಪಿಗಳಾಗೋಣ. ಈ ಮೂಲಕ ಅವರ 152ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿಸೋಣ.
ಸ್ವಾಮಿ ವಿವೇಕಾನಂದರಿಗೆ ಜನ್ಮದಿನದ ಶುಭಾಶಗಳು....!

ಕಾಮೆಂಟ್‌ಗಳಿಲ್ಲ: