ನಾನು....
ಕತ್ತಲ ಕೂಪದಲ್ಲಿ ಕರಗಿದ ಹೋದ ತುಂಟ ತಿಮ್ಮಣ್ಣ
ನಾನು ತಿಮ್ಮಣ್ಣ. ನಮ್ಮ ಮನೆ, ಊರು, ಶಾಲೆ, ಸ್ನೇಹಿತರ ಪಾಲಿನ ತುಂಟ ಪೋರ. ನಮ್ಮ ಅಪ್ಪ-ಅಮ್ಮರ ಪಾಲಿನ ಮುದ್ದು ಕಂದ. ಅರಿವಿಲ್ಲದೆ ಕರಾಳ ಕಪ್ಪು ಬಾವಿಯಲ್ಲಿ ಕರಗಿ ಹೋದ ನತದೃಷ್ಟ ಬಾಲಕ.ಕೊಳವೆ ಬಾವಿಯಲ್ಲಿ ಬಿದ್ದ ನನಗಾಗಿ ಪ್ರಾರ್ಥಿಸಿದ, ಕಂಬನಿಗೆರದ, ಕಣ್ಮುಚ್ಚಿ ಕಾದು ಕುಳಿತ ತಮ್ಮೆಲ್ಲರ ಮುಂದೆ ನನ್ನ ಕೆಲವು ಭಾವನೆಗಳನ್ನು ತೋಡಿಕೊಳ್ಳಬೇಕು ಎನಿಸುತ್ತಿದೆ. ಕಾಣದ ಲೋಕದಿಂದ ನಾನಾಡುವ ಎರಡು ಮಾತುಗಳಿಗೆ ನೀವು ಕಿವಿಯಾಗುವಿರಾ...?
ಅಂದು ಭಾನುವಾರ. ಮನೆಯಂಗಳದಲಿ ಅಕ್ಕಂದಿರ ಜೊತೆ ಆಟವಾಡುತ್ತ ಕುಳಿತಿದ್ದೆ. ಅಷ್ಟರಲ್ಲಿ ದೊಡ್ಡಪ್ಪನ ಮಗ ಬೈಕ್ ತೆಗೆದುಕೊಂಡು ಬಂದ. ಮೊದಲೇ ಬೈಕ್ ಹುಚ್ಚು ಇದ್ದ ನನಗೆ, ಅವನು ಬೈಕ್ ಮೇಲೆ ಬಂದಿದ್ದು ನೋಡಿ ಖುಷಿಯಾಗಿಬಿಟ್ಟಿತು. ಓಡುತ್ತ ಕುಣಿಯುತ್ತ ಅದನೇರಿ ಕುಳಿತುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ಅಣ್ಣ ತೋಟದ ಕಡೆಗೆ ಹೋಗಲು ಅಣಿಯಾದ. ನಾನು ಕೂಡಾ ಬರುತ್ತೇನೆ ಎಂದು ಹಠ ಹಿಡಿದೆ. ಅಣ್ಣ, 'ಬೇಡ ಬೇಡ' ಎಂದು ಎಂದರೂ ಸುಮ್ಮನಾಗದೆ, ಹತ್ತಿದ ಬೈಕ್ ಮೇಲಿಂದ ಕೆಳಗಿಳಿಯಲೇ ಇಲ್ಲ. ನನ್ನ ಹಠಕ್ಕೆ ಮಣಿದು ಅಣ್ಣ ನನ್ನನ್ನು ಬೈಕ್ ಮೇಲೆ ಗದ್ದೆಗೆ ಕರೆದುಕೊಂಡು ಹೋದ. ಗದ್ದೆ ಬದಿ ಬೈಕ್ ನಿಲ್ಲಿಸಿ ಅಣ್ಣ ನನ್ನ ಕೈ ಹಿಡಿದು ನಡೆಯುತ್ತಿದ್ದ. ಜೀಕುತ್ತ, ಕುಣಿಯುತ್ತ ಹೊಲದ ಕಡೆ ಹೋಗುತ್ತಿದ್ದ ನನಗೆ, ಅದು ನನ್ನ ಅಲ್ಪಾಯುಷ್ಯದ ಕೊನೆಯ ನಡಿಗೆಗಳು ಎಂದು ಗೊತ್ತಿರಲೇ ಇಲ್ಲ..!!
ಅಷ್ಟಕ್ಕೂ ಸಾವೆಂದರೆ ಏನು ಎಂಬುದು ನನ್ನ ಕಲ್ಪನೆಗೆ ನಿಲುಕದ ಸತ್ಯವಾಗಿತ್ತು. ಹಾಗೆಯೇ ನಾವು ಮುಂದುವರಿಯುತ್ತಿದ್ದಂತೆ, ದೂರದಲ್ಲಿ ನನ್ನ ಅಪ್ಪ ಕೊರೆಸಿದ ಕೊಳವೆ ಬಾವಿ ನನಗೆ ಕಂಡಿತು. ನನಗೇಕೋ ಆ ಕೊಳವೆ ಬಾವಿಯೆಂದರೆ ತೀವ್ರ ಕೂತಹಲ. ಅದರಿಂದ ನೀರು ಚಿಮ್ಮುತ್ತದೆ ಎಂದು ಅಪ್ಪ ಹೇಳುತ್ತಿದ್ದರು. ಕೊಳವೆ ಬಾವಿ ತೋಡುವ ದಿನ ನಾನು ಆ ನೀರಿಗಾಗಿ ಕಾದು ಕುಳಿತಿದ್ದೆ. ನೀರು ಬಂದಿರಲಿಲ್ಲ. ಅದನ್ನು ಅಣ್ಣನಿಗೆ ತೋರಿಸುವ ಉತ್ಸಾಹದಲ್ಲಿ ಕೈ ಬಿಟ್ಟು ಓಡಿದ್ದೆ! 'ಅಣ್ಣ ನೋಡು ನೋಡು' ಎಂದು ಕಿರುಚುತ್ತ, ಅಪ್ಪ ಕೊಳವೆ ಬಾವಿಯ ಮೇಲೆ ಹೇರಿದ್ದ ಚೀಲದ ಮೇಲೆ ಕಾಲು ಇಟ್ಟುಬಿಟ್ಟೆ. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಕೊಳವೆ ಬಾವಿಯಲ್ಲಿ ಜಾರತೊಡಗಿದ್ದೆ. ಓಡಿ ಬಂದ ಅಣ್ಣ, ನನ್ನನ್ನು ಹಿಡಿಯಲು ಪ್ರಯತ್ನಿಸಿದ. ಆತನ ಕೈಗಳಿಗೆ ನನ್ನೆರಡು ಕೈ ಬೆರಳುಗಳು ನಿಲುಕಿದಂತಾವು. ಆಕಸ್ಮಿಕವಾಗಿ ಹುಟ್ಟಿದ ಭರವಸೆಯೊಂದು, ಅಷ್ಟೇ ವೇಗದಲ್ಲಿ ಮಿಂಚಿ ಮರೆಯಾಗಿತ್ತು. ನಾನು ನಿಧಾನವಾಗಿ ಆಳಕ್ಕೆ ಜಾರುತ್ತಲೇ ಹೋದೆ. ಅಣ್ಣ ನನ್ನ ಕೈ ಹಿಡಿಯದಾದ. ನಾನು ಜಾರುತ್ತ ಜಾರುತ್ತ ಕಡುಗಪ್ಪಿನ ಕತ್ತಲ ಕೂಪದಲ್ಲಿ ಸರಕ್ಕನೆ ಜಾರಿ ಹೋದೆ. 'ಹಗ್ಗ ಬಿಡು ಅಣ್ಣ.. ಹಗ್ಗ ಬಿಡು' ಎಂದು ಕೂಗುತ್ತಿದ್ದ ನನ್ನ ಧ್ವನಿ ಅಣ್ಣನಿಗೆ ಕೇಳಿಸದಾಯಿತು. ಆದಾಗಲೇ ನಾನು ಆಳವಾದ ಕಂದಕ ತಲುಪಿ ಬಿಟ್ಟಿದ್ದೆ.
ಆಚೆ ಈಚೆ ಅಲ್ಲಾಡಲಾಗದ ಪರಿಸ್ಥಿತಿ. ಎಷ್ಟೊಂದು ಅಸಹನೀಯ... ಎಷ್ಟೊಂದು ಭೀಭತ್ಸ... ಅದನ್ನು ಹೇಳಲಾಗದು. ಆದರೆ, ಅಣ್ಣ ನನ್ನನ್ನು ಮೇಲೆತ್ತುತ್ತಾನೆ ಎನ್ನುವ ನಂಬಿಕೆ ಬಿಟ್ಟು, ನಾನೇನು ಮಾಡುವ ಸ್ಥಿತಿಯಲ್ಲಿರಲಿಲ್ಲ. ರಾತ್ರಿ ಮಲಗಿದ ನನಗೆ ಎಚ್ಚರವಾದಾಗ, ಕತ್ತಲಲ್ಲಿ ಗುಮ್ಮನ ನೆನಪಾಗಿ ಅಮ್ಮನನ್ನು ಬಾಚಿ ತಬ್ಬಿ ಮಲಗುತ್ತಿದ್ದೆ. ನನಗೆ ಈ ಕತ್ತಲ ರಾಕ್ಷಸ ಹೇಗೆಲ್ಲ ಹೆದರಿಸುತ್ತಿದ್ದಾನೆ ಎಂದು ಹೇಗೆ ಹೇಳಲಿ. ನನಗೆ ಸಾವೆಂದರೇನೆಂದು ಅರಿಯದು. ಆದರೂ ಏನೋ ಜೀವ ಭಯ. ಅಣ್ಣ.. ಅಣ್ಣ ಎಂದು ಕಿರುಚಿದೆ. ಅಣ್ಣ ಮೇಲ್ಗಡೆಯಿಂದ ಏನೋ ಹೇಳುತ್ತಿದ್ದ. ಅದೇನೆಂದು ಕೇಳಿಸುತ್ತಿರಲಿಲ್ಲ. ಅಪ್ಪ-ಅಣ್ಣ ಬಂದು ನನ್ನನ್ನು ಮೇಲೆತ್ತುತ್ತಾರೆ ಎಂಬ ನಂಬಿಕೆಯಿದ್ದರೂ, ಈ ಚಿಕ್ಕ ಬಾವಿಯಲ್ಲಿ ಅವರು ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿತ್ತು.
ಭಯದಿಂದ ತತ್ತರಿಸಿ ಹೋದ ನನಗೆ, ಅಮ್ಮ ಈಗಿಂದಿಗೀಲೇ ಬೇಕೆಂದೆನಿಸುತ್ತಿತ್ತು. ಒಂದೇ ಸಮನೆ ಅಮ್ಮನ ನೆನಸಿ ಅಳತೊಡಗಿದೆ. ಕೈ-ಕಾಲುಗಳನ್ನೆಲ್ಲ ಕಟ್ಟಿಟ್ಟ ಸ್ಥಿತಿ. ಮಿಸುಕಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡಲೂ ಆಗುತ್ತಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಕಳೆಯಿತು. ಅಣ್ಣನ ಧ್ವನಿಯಷ್ಟೇ ಕೇಳಿಸುತಿದ್ದ ನನಗೆ, ಬಹಳ ಜನ ಮಾತನಾಡುತ್ತ ಅರಚುತ್ತಿರುವುದು ಕ್ಷೀಣವಾಗಿ ಕೇಳಿಸುತ್ತಿತ್ತು. ಬಹುಶಃ ನನ್ನಮ್ಮ 'ತಿಮ್ಮಣ್ಣಾ.... ಎಲ್ಲೋದ್ಫ್ಯೋ ...' ಎಂದು ಎದೆ ಬಡೆದುಕೊಂಡು ಅಳುತ್ತಿರಬೇಕು.
ಸಮಯ ಉರುಳುತ್ತಿತ್ತು. ಇಷ್ಟು ಹೊತ್ತಾದರೂ ಇವರು ಮೇಲೇನು ಮಾಡುತ್ತಿದ್ದಾರೆ? ಅಮ್ಮ ಕೊಡಕ್ಕೆ ಹಗ್ಗ ಕಟ್ಟಿ ಬಾವಿಯಿಂದ ನೀರನ್ನು ಮೇಲೆತ್ತುವ ಹಾಗೆ, ನನ್ನನ್ನು ಮೇಲೆತ್ತಬಾರದೆ? ಎಂದು ಕಾಯುತ್ತಿದ್ದೆ. ಅಷ್ಟರಲ್ಲಿ ನನ್ನ ಕೈಗೆ ಏನೋ ತಾಕಿದಂತಾಯಿತು. ಯಾವುದೋ ತೆಳ್ಳಗಿನ ದಾರದಂತ ಪೈಪ್. ಮೇಲತ್ತಬಹುದೆಂದು ಸಂತೋಷದಿಂದ ಅದನ್ನು ಹಿಡಿದೆ. ಆದರೆ, ನನ್ನ ಪುಟ್ಟ ಭಾರವನ್ನು ತಡೆಯದ ಅದು ತುಂಡರಿಸುತ್ತಿದ್ದಂತೆ, ನಾನು ಮೇಲೆ ಹತ್ತುತ್ತೇನೆ ಎಂಬ ನಿರೀಕ್ಷೆಯೂ ಹುಸಿಯಾಗಿ ಹೋಗಿತ್ತು.
ಉಸಿರಾಡಲು ಕಷ್ಟವಾಗುತ್ತಿತ್ತು. ನಿಧಾನವಾಗಿ ನಿದ್ದೆಗೆ ಜಾರುತ್ತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಎಷ್ಟೋ ಗಂಟೆಗಳ ನಂತರ ಎಚ್ಚರವಾಯಿತು. ಪಕ್ಕದಲ್ಲಿ ಅಮ್ಮ ಮಲಗಿದ್ದಾರೆ ಎಂದು ತಡಕಾಡಿದೆ. ನಂತರ ಅರಿವಿಗೆ ಬಂತು; ನನ್ನಮ್ಮ ಇಲ್ಲದ ಭೀಕರ ಬಾವಿಗೆ ಸಿಲುಕಿ ಒದ್ದಾಡುತ್ತಿದ್ದೇನೆಂದು. ಹತ್ತು ಕೊಡ ನೀರು ಕೊಟ್ಟರೂ ಕುಡಿಯಬಲ್ಲೆ ಎನ್ನುವಂತ ಬಾಯಾರಿಕೆ. ಬುಟ್ಟಿಗಟ್ಟಲೇ ರೊಟ್ಟಿ ತಂದರೂ ಹಪಹಪನೆ ತಿನ್ನಬಲ್ಲೆನೆಂಬ ಹಸಿವು. ನಾನೆಂದೂ ಕಾಣದ, ಅನುಭವಿಸದ ಭೀಕರ ಹಸಿವು ಅದಾಗಿತ್ತು. ಅಮ್ಮಾ.... ಎಂದು ಬಾಯ್ತೆರೆದು ಹೇಳಲಾಗದಷ್ಟು ನಿತ್ರಾಣಗೊಂಡಿದ್ದೆ. ನನ್ನಲ್ಲಿನ ಶಕ್ತಿ ಉಡುಗುತ್ತಿತ್ತು. ಏನೋ ಒಂಥರ ಮಂಪರು. ಅದಾಗಲೇ ಎರಡು ದಿನ ಉರುಳಿದ್ದವು. ದೇಹದಲ್ಲಿ ಹರಡಿದ್ದ ಜೀವವೆಲ್ಲ ಏಕತ್ರವಾಗ ತೊಡಗಿತು. ಅದೇನೆಂದು ತಿಳಿಯಲು ಸಾಧ್ಯವಾಗಲಿಲ್ಲ. ನಿಧಾನವಾಗಿ ಅಂತಿಮ ನಿದ್ರೆಯತ್ತ ಸಾಗಿದೆ...!!
'ಪ್ರಾಣ' ಅನ್ನೋ ನಾನು, ಒಳಗಿದ್ದ ದೇಹದಿಂದ ಬೇರ್ಪಟ್ಟಿದ್ದೆ. ಕೊನೆಗೂ ಎಲ್ಲ ಭಯ-ನೋವು-ಅಸಹನೀಯತೆಯಿಂದ ಮುಕ್ತಿ ಹೊಂದಿದ ನಾನು, ಯಾರ ಸಹಾಯವಿಲ್ಲದೆ ಕೊಳವೆ ಬಾವಿಯಿಂದ ಮೇಲೆದ್ದು ಬಂದಿದ್ದೆ. ಆ ಸಂತೋಷದಲ್ಲಿ ಅತ್ತು ಅತ್ತು ಕರುಗಿದ ಅಮ್ಮನ ಕೆನ್ನೆಯ ಮುಟ್ಟಿದೆ. ಕಣ್ಣಿರನ್ನು ಒರೆಸಿದೆ. ಅಮ್ಮನ ಕೈ ಹಿಡಿದು ಎಳೆದೆ. ಹಾರಿದೆ, ಕುಣಿದಾಡಿದೆ, ನಾನು ಮೇಲೆದ್ದು ಬಂದೆ ಎಂದು ದೊಡ್ಡದಾಗಿ ಕಿರುಚಾಡಿದೆ. ಆದರೆ, ಯಾರೂ ಕೂಡಾ ನನ್ನ ಗಮನಿಸಲಿಲ್ಲ. ನನ್ನಮ್ಮ, ಅಪ್ಪ ಸಂಬಂಧಿಗಳು ಅಳುವುದನ್ನ ಮುಂದುವರಿಸಿದ್ದರು. ನನಗೇನೂ ಅರ್ಥವಾಗುತ್ತಿರಲಿಲ್ಲ. ಹಸಿವು, ನಿದ್ರೆ ಯಾವುದರ ಅರಿವೂ ಆಗುತ್ತಿರಲಿಲ್ಲ. ನನ್ನನ್ನು ನಾನೇ ನೋಡಿಕೊಂಡೆ. ದೇಹವೆ ಇಲ್ಲದ ನಿರಾಕಾರನಾದ ನಾನು ಯಾರಿಗೂ ಕಾಣುತ್ತಿರಲಿಲ್ಲ. ದೇಹವಿದ್ದರೆ ಮಾತ್ರ ನನ್ನನ್ನು ಗುರುತಿಸಲು ಸಾಧ್ಯ. ನನಗೆ ನೋವಾಯಿತು. ಅಕ್ಷರಶಃ ಮೌನಿಯಾದೆ. ಅತ್ತು ಕರಗಿ ಕುಸಿದು ಬಿದ್ದಿದ್ದ ಅತ್ತೆಯ ಮಡಿಲಿಗೆ ಒರಗಿದೆ. ಅವಳೂ ಕೂಡಾ ಮೈದವಡಲಿಲ್ಲ. ಅಲ್ಲಿದ್ದವರೆಲ್ಲ ನನ್ನ ದೇಹಕ್ಕಾಗಿ ಗೋಳಾಡುತ್ತಿದ್ದರು. ನನ್ನ ಪ್ರಾಣ ಅವರ ಮುಂದೆ ಬಂದು ನಿಂತರೂ, ಅವರ ನಡುವೆ ಬದುಕುವ ಭಾಗ್ಯ ನನಗಿಲ್ಲ ಎಂದು ತಿಳಿದಾಗಿತ್ತು. ಇನ್ನೇನಿದ್ದರೂ ನೀವು ಕಾಣದ ಲೋಕಕ್ಕೆ ನನ್ನ ಯಾನ...!
ಈ ನಡುವೆ, ನನ್ನದೊಂದು ಪುಟ್ಟ ಪ್ರಾರ್ಥನೆ... ನನ್ನ ಸಾವಿಗೆ ಒಂದು ಅರ್ಥ ಕೊಡಿ. ತೋಡಿದ ಕೊಳವೆ ಬಾವಿಯಲ್ಲಿ ನೀರು ಬಾರದೆ ಇದ್ದರೆ, ಅದನ್ನು ಅಲ್ಲಿಯೇ ಮುಚ್ಚಿ ಬಿಡಿ. ಈಗಾಗಲೇ ನನ್ನಂಥ ಎಷ್ಟೋ ಕಂದಮ್ಮಗಳು ಅಂತಹ ಮೃತ್ಯ ಕೂಪದಲ್ಲಿ ಬಿದ್ದು ಸಾವನ್ನಪ್ಪಿವೆ. ಇನ್ನು ಮುಂದೆ ಯಾರ ಜೀವವೂ ಸಹ ಹೀಗಾಗಬಾರದು. ನನ್ನ ಸಾವು ಸಮಸ್ತ ಮಾನವ ಕುಲಕ್ಕೆ ಒಂದು ಪಾಠವಾಗಲಿ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಅಭಿಯಾನ ಕೈಗೊಳ್ಳಿ.
ಕೊನೆಯದಾಗಿ, ಯಾರೂ ಕೂಡಾ ನನ್ನ ನೆನಪಿಸಿಕೊಂಡು ಕೊರಗಬೇಡಿ. ನೀವೆಲ್ಲ ಉಸಿರಾಡುವ ಗಾಳಿಯಲ್ಲಿಯೇ ನನ್ನುಸಿರು ಬೆರತಿದೆ. ನಮ್ಮ ತೋಟದ ಗದ್ದೆಯಲ್ಲಿ ಬೆಳೆಯುವ ಹಸಿರಿನಲ್ಲಿ ನಾನಿದ್ದೇನೆ. ಪ್ರೀತಿಯ ಅಪ್ಪ, ಅಣ್ಣ, ಅಕ್ಕ, ಅತ್ತೆ, ಕಾಕ ಹಾಗೂ ನನ್ನ ಬದುಕಿಗಾಗಿ ನಿರಂತರವಾಗಿ ಶ್ರಮಿಸಿದ, ದೂರದಿಂದಲೇ ಪ್ರಾರ್ಥಿಸಿದ ನನ್ನೆಲ್ಲ ಹಿತೈಷಿಗಳಿಗೆ....
-ಇಂತಿ ನಿಮ್ಮ
ನತದೃಷ್ಟ ತಿಮ್ಮಣ್ಣ
ನಿರೂಪಣೆ: ನಾಗರಾಜ್ ಬಿ.ಎನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ