ಮರಳಿ ಗೂಡಿಗೆ..........
ನಾಗರಾಜ್. ಬಿ.ಎನ್.-------------
ಸದಾ ಪಾದರಸದಂತೆ ಚಟುವಟಿಕೆಯಿಂದ ಇರುತ್ತಿದ್ದ ಶ್ರೀವತ್ಸ, ಇತ್ತೀಚೆಗೆಕೋ ಮಂಕು ಬಡಿದವರ ಹಾಗೆ ಇರುತ್ತಿದ್ದ. ಮುಂಜಾನೆ ಕಚೇರಿಗೆ ಹೋಗುವುದು, ಸಾಯಂಕಾಲ ಮನೆಗೆ ಬರುವುದು.... ಇಷ್ಟೇ ಅವನ ಉಳಿದ ದಿನಚರಿಯಾಗಿತ್ತು. ಸ್ನೇಹಿತರ ಒಡನಾಟವಿಲ್ಲ... ಹೊಟೆಲ್, ಪಾರ್ಕ್ ಸುತ್ತಾಟವಿಲ್ಲ... ಹಾಗೆ, ಮನೆಯಲ್ಲಿ ಅಪ್ಪ-ಅಮ್ಮರ ಜೊತೆಯೂ ಮಾತುಕತೆ ಇರಲಿಲ್ಲ.
---------------
ಕೆಲ ವರ್ಷಗಳ ಹಿಂದೆ...........ಶ್ರೀವತ್ಸ ಬಡತನವನ್ನೇ ತಿಂದುಂಡು ಬೆಳೆದವನು. ಆತನ ತಂದೆ ದಿನಗೂಲಿ ಕೆಲಸ ಮಾಡಿದರೆ, ತಾಯಿ ಊರಿನ ಕೆಲವು ಮನೆಯ ಪಾತ್ರೆಗಳ ಮುಸುರಿ ತಿಕ್ಕುತ್ತಿದ್ದಳು. ಒಂದೊಂದು ದಿನ, ಒಪ್ಪತ್ತಿನ ತುತ್ತಿಗೂ ಆ ಕುಟುಂಬ ಪರದಾಡುತ್ತಿತ್ತು. ದಟ್ಟ ದಾರಿದ್ರ್ಯದಲ್ಲಿ ಅವರ ಸಂಸಾರದ ಗಾಲಿ ಕಾಲನ ಜೊತೆ ಉರುಳುತ್ತಿತ್ತು.
ಮಣ್ಣಿನ ಗೋಡೆಯ ಕೆಂಪು ಹೆಂಚಿನ ಮೇಲ್ಛಾವಣಿ ಹೊದಿಕೆಯಿರುವ ಎರಡು ಕೋಣೆಯಿರುವ ಪುಟ್ಟದಾದ ಮನೆ ಶ್ರೀವತ್ಸನದಾಗಿತ್ತು. ಅಲ್ಲಿ ಶ್ರೀವತ್ಸನ ತಂದೆಯೇ ಮಹಾರಾಜ, ತಾಯಿಯೇ ಪಟ್ಟದರಸಿ. ಹತ್ತನೇ ತರಗತಿಗೆ ಹೋಗುತ್ತಿದ್ದ ಆತನೇ ಯುವರಾಜ. ಆ ಪುಟ್ಟ ಮನೆಯೇ ಅವರಿಗೆ ಆಸ್ಥಾನ. ಹಾಗೆ, ಕೊಟ್ಟಿಗೆಯಲ್ಲಿದ್ದ ದನ-ಕರುಗಳು, ಮನೆಯ ಬೊಂಬಿಗೆ ಹಾಗೂ ಫೊಟೋದ ಹಿಂದೆ ಗೂಡು ಕಟ್ಟಿಕೊಳ್ಳುತ್ತಿರುವ ಗುಬ್ಬಿಗಳು, ಹಿತ್ತಲನ್ನೆಲ್ಲ ಕೆದರಿ ಹಾಳು ಮಾಡುವ ಕೋಳಿಗಳೇ ಅವರ ಪುಟ್ಟ ಸಾಮ್ರಾಜ್ಯದ ಸೇವಕರಾಗಿದ್ದರು.
ಮನೆಯ ಅನತಿ ದೂರದಲ್ಲಿರುವ ಹರಿವ ತೊರೆ... ಶಾಲೆಗೆ ಹೋಗುವ ನಡು ದಾರಿಯಲ್ಲಿರುವ ಹುಣಸೆ ಮರ... ಮುಸ್ಸಂಜೆ ಸಮಯದಲ್ಲಿ ಅಜ್ಜಿಕಥೆ ಮೂಲಕ ಕಲ್ಪನಾ ಲೋಕಕ್ಕೆ ಕರೆದೊಯ್ಯುವ ಸಣ್ಣಜ್ಜಿ... ಸೋಮಪ್ಪನ ಮಾವಿನ ತೋಟ... ಮುಂಗಾರಿನ ಮೊದಲ ಮಳೆ... ಮೈಮರಿಸುವ ಆ ಮಣ್ಣಿನ ಘಮ... ಹಚ್ಚ ಹಸಿರಿನಿಂದ ಕಂಗೊಳಿಸುವ ಮನೆ ಮುಂದಿನ ಬೆಟ್ಟ... ಸಂಜೆಯಾಗುತ್ತಿದ್ದಂತೆ ಜುಂಯ್ ಗುಡುವ ಜಿರಲೆಗಳು... ಇವುಗಳ ಜೊತೆಯಲ್ಲಿಯೇ ಶ್ರೀವತ್ಸ ತನ್ನ ಬಾಲ್ಯದ ದಿನಗಳನ್ನು ಕಳೆದಿದ್ದ.ಮುಸುರೆ ತಿಕ್ಕಿ, ಕೂಲಿ ಮಾಡಿ ಹಾಗೋ ಹೀಗೋ ಎಂದು ಶ್ರೀವತ್ಸನಿಗೆ ಕಾಲೇಜಿನವರೆಗಿನ ಶಿಕ್ಷಣವನ್ನು ಅವನ ಹೆತ್ತವರು ನೀಡುತ್ತಾರೆ. ಬಡತನದ ಅನುಭವ ಅವನ ಬದುಕನ್ನು ಪರಿ-ಪಕ್ವವಾಗಿಸಿತ್ತು. ಓದಿನಲ್ಲಿ ಬುದ್ಧಿವಂತನಾಗಿದ್ದ ಆತ, ಪ್ರತಿಷ್ಠಿತ ಕಾಲೇಜೊಂದರಲ್ಲಿ ಸೀಟ್ನ್ನು ಪಡೆಯುತ್ತಾನೆ. ಬದುಕಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿರುವ ಅವನು, ಬ್ಯಾಂಕ್ನಲ್ಲಿ ಶೈಕ್ಷಣಿಕ ಸಾಲ ಪಡೆದು, ಕಾಲೇಜ್ ಪ್ರವೇಶಗೆ ಹೋಗುತ್ತಾನೆ.
ನಾಲ್ಕು ವರ್ಷದ ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಶ್ರೀವತ್ಸ, ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದಕ್ಕೆ ಕ್ಯಾಂಪಸ್ ಸಂದರ್ಶನದಲ್ಲಿ ನೇಮಕವಾಗುತ್ತಾನೆ. 'ಪ್ರಾರಂಭದಲ್ಲಿಯೇ ಕೈತುಂಬಾ ಸಂಬಳದ ಉದ್ಯೋಗ. ಬಡತನಕ್ಕೆ ವಿದಾಯ ಹೇಳುವ ದಿನಗಳು ಸಮೀಪಿಸುತ್ತಿವೆಯಲ್ಲ' ಎಂದು ಮನಸ್ಸಲ್ಲಿಯೇ ಯೋಚಿಸುತ್ತ, ಭಗವಂತನಿಗೆ ಥ್ಯಾಂಕ್ಸ್ ಹೇಳುತ್ತಾನೆ.
--------------------------------------
ಕೆಲವು ತಿಂಗಳ ಹಿಂದೆ...........
ಶ್ರೀವತ್ಸ ಉದ್ಯೋಗಿಯಾಗಿ ಎರಡು ವರ್ಷಗಳು ಉರುಳಿವೆ. ಬಡತನದ ದಿನಗಳು ಹಂತ ಹಂತವಾಗಿ ದೂರವಾಗುತ್ತಿವೆ. ಇತ್ತ ಇವನು ಕೂಡಾ, ಹೆತ್ತವರನ್ನು ತನ್ನಲ್ಲಿಯೇ ಕರೆಸಿಕೊಳ್ಳಬೇಕೆಂದು ಯೋಚಿಸುತ್ತಿದ್ದಾನೆ. ಮಹಾನಗರದಲ್ಲೊಂದು ಪ್ಲಾಟ್ ಖರೀದಿಸುತ್ತಾನೆ. ಮನೆಗೆ ಬೇಕಾದ ಎಲ್ಲ ಅಗತ್ಯ ಸಾಮಾನುಗಳನ್ನು, ಅಲಂಕಾರಿಕ ವಸ್ತುಗಳನ್ನು ತರುತ್ತಾನೆ. ತುಂಬು ಸಂಸಾರಕ್ಕೆ ಏನೇನು ಬೇಕೋ ಅವೆಲ್ಲವೂ ರಾಶಿ ರಾಶಿಯಾಗಿ ಮೂಟೆಕಟ್ಟುಕೊಂಡು ಬಿದ್ದಿವೆ. ಅಪ್ಪ-ಅಮ್ಮರನ್ನು ಕರೆಸಿಕೊಳ್ಳುತ್ತಾನೆ. ಅವರ ಕಾಲಿಗೆರಗಿ ಕಣ್ಣೀರಿನಿಂದ ಅವರ ಪಾದವನ್ನು ತೊಳೆಯುತ್ತಾನೆ. ಅಮ್ಮ-ಅಪ್ಪಾ, ಇವೆಲ್ಲ ನೀವು ನೀಡಿದ ಭಿಕ್ಷೆ. ನೀವು ಹಸಿದುಕೊಂಡು, ನನ್ನ ಹೊಟ್ಟೆ ತುಂಬಿಸಿ ಇಷ್ಟು ದೊಡ್ಡವನನ್ನಾಗಿ ಮಾಡಿದ್ದೀರ. ಆ ದಿನಗಳೆಲ್ಲಿ...? ಈ ದಿನಗಳೆಲ್ಲಿ..? ಕಷ್ಟಪಟ್ಟರೆ ಸುಖವಿದೆ. ನಾವು ಕೂಡಾ ಈಗ ಸ್ಥಿತಿವಂತರು. ಅಲ್ಲವೇನಮ್ಮ' ಎನ್ನುತ್ತಾನೆ. ನಗರ ಜೀವನದಲ್ಲಿ ಆ ಪುಟ್ಟ ಕುಟುಂಬ ಯಾವೊಂದು ಅಡೆತಡೆಯಿಲ್ಲದೆ ಎರಡು ವರ್ಷ ನಿರಾತಂಕವಾಗಿ ಕಳೆದಿದೆ.
------------------------------------
ಕೆಲ ದಿನಗಳ ಹಿಂದೆ.....
ಬಡತನದ ಬೇಗೆಯಲ್ಲಿ ಬೆಂದು ಬಂದ ಆ ಪುಟ್ಟ ಕುಟುಂಬದ ಆಧಾರ ಸ್ಥಂಭ ನಲಗುತ್ತಿದೆ. ನಗರ ಜೀವನ ಆ ಶ್ರೀವತ್ಸನಿಗೆ ಸಾಕಾಗಿ ಹೋಗಿದೆ. ಯಾಂತ್ರಿಕತೆಯ ಬದುಕಿನಲ್ಲಿ ಅವನಿಗೆ ಮಾನವತೆಯೇ ಮರೆತು ಹೋದಂತಾಗಿದೆ. ದಿನದ ಬಹುತೇಕ ಸಮಯ ಜಂಜಾಟದಲ್ಲಿಯೇ ವ್ಯರ್ಥವಾಗುತ್ತಿದೆ. ರಕ್ತ ಸಂಬಂಧ, ಒಡನಾಟದ ಸಂಬಂಧಗಳೆಲ್ಲ ಮಾಯವಾಗುತ್ತಿವೆ. ದಿನ ಬೆಳಗಾದರೆ ಸಾಕು ಕಚೇರಿ, ಸಾಫ್ಟವೇರ್ ಎನ್ನುತ್ತ ಅದರಲ್ಲಿಯೇ ಸಮಯ ಹೋಗುತ್ತಿದೆ. ವಾರದಲ್ಲಿ ಒಂದು ದಿನ ಬಿಡುವಿದ್ದರೂ, ಅದು ಕೂಡಾ ವಿಶ್ರಾಂತಿಯಲ್ಲಿಯೇ ಕಳೆದು ಹೋಗುತ್ತಿದೆ. ಕೈ ತುಂಬಾ ಸಂಬಳ, ಐಷಾರಾಮಿ ಜೀವನ ಇದ್ದರೇನಂತೆ. ಮನಸ್ಸಿಗೆ ನೆಮ್ಮದಿಯೇ ಇಲ್ಲವಾಗಿದೆ. ಏನು ಮಾಡಬೇಕೆಂದು ತೋಚದೆ ಹುಚ್ಚನಂತಾಗಿದ್ದಾನೆ. ಮನಸ್ಸಿನ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾನೆ. ತೀರಾ ಭಾವುಕನಾಗಿ ಹೋಗಿದ್ದಾನೆ. ಒಟ್ಟಾರೆ ಮಂಕು ಕವಿದವರಂತೆ ದಿನ ದೂಡುತ್ತಿದ್ದಾನೆ.ಮಗನ ಈ ವರ್ತನೆಯಿಂದ ಕಂಗಾಲಾದ ತಂದೆ, ಅವನ ತಲೆ ನೇವರಿಸಿ ಕೇಳುತ್ತಾನೆ.
`ಏನೋ ವತ್ಸು, ಯಾಕೆ ಹೀಗಾಗಿದ್ದೀಯಾ? ಏನಾಯ್ತು? ನಮಗೆ ನಿನ್ನನ್ನು ಬಿಟ್ಟು ಇನ್ಯಾರಿದ್ದಾರೋ? ನಿನ್ನ ಈ ಸ್ಥಿತಿ ನೋಡಲು ನಮ್ಮಿಂದ ಆಗ್ತಾ ಇಲ್ವೋ?' ಎಂದು ಕಣ್ಣಿರಾಗುತ್ತಾನೆ.
ಬಡತನದ, ಉಪವಾಸ, ಕಷ್ಟಗಳ ಸರಮಾಲೆಯಿದ್ದಾಗಲೂ ಒಂದು ಹನಿ ಕಂಬನಿ ಹಾಕದ ಅಪ್ಪ, ಈಗ......?
'ಅಯ್ಯೋ....' ಎಂದು ಉಮ್ಮಳಸಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ನಿಧಾನವಾಗಿ ಸಾವರಿಸಿಕೊಂಡು, ಅಪ್ಪನ ಕೈ ಹಿಡಿದು ಹೇಳುತ್ತಾನೆ ಶ್ರೀವತ್ಸ...
'ಅಪ್ಪ ನಾವು ಬೆಳೆದದ್ದು, ಆ ಪುಟ್ಟ ಊರಲ್ಲಿ. ಅಲ್ಲಿಯ ಪರಿಸರ, ಮರ, ಗಿಡ, ಬಳ್ಳಿ, ಬೆಟ್ಟ, ಪ್ರಾಣಿ, ಪಕ್ಷಿ, ಮಣ್ಣು, ನೆರೆ-ಹೊರೆಯವರು ಎಲ್ಲವೂ ನೆನಪಾಗುತ್ತಿವೆಯಪ್ಪ. ಸ್ವಚ್ಛಂದವಾಗಿ ವಿಹರಿಸಿದ ಆ ನನ್ನ ಊರು ಎಲ್ಲಿ, ಉಸಿರು ಕಟ್ಟುವ ವಾತಾವರಣದಲ್ಲಿ ಬದುಕು ದೂಡುತ್ತಿರುವ ಈ ಮಹಾನಗರವೆಲ್ಲಿ? ನಾವಿದ್ದ ಆ ಪುಟ್ಟ ಮನೆ, ಗೋಡೆಗೆ ಬಳಿದ ಸಗಣಿ, ಕೆಂಪು ಹೆಂಚುಗಳು, ಮನೆಯೊಳಗೆಲ್ಲ ಚಿಂವ್.. ಚಿಂವ್ ಎಂದು ಓಡಾಡಿ ಕುಣಿದ ಗುಬ್ಬಚ್ಚಿಗಳು, ಆ ತೊರೆ, ಹಳ್ಳ, ಬೆಟ್ಟ, ಗುಡ್ಡ, ಸತ್ತು ಹೋದ ಕತೆ ಹೇಳುವ ಸಣ್ಣಜ್ಜಿ ಇವೆಲ್ಲವೂ ನೆನಪಾಗಿ ಕಾಡುತ್ತಿವೆಯಪ್ಪ. ಈ ಯಾಂತ್ರಿಕ ಜೀವ ಸಾಕಾಗಿದೆ. ಏನು ಮಾಡಬೇಕೆಂದು ತೋಚುತ್ತಿಲ್ಲ. ಪ್ಲೀಸ್ ಅಪ್ಪಾ, ನನ್ನನ್ನೇ ನಾನು ಕಳೆದುಕೊಂಡು ಬಿಟ್ಟಿದ್ದೇನೆ. ನಾನು ಮೊದಲಿನ ಶ್ರೀವತ್ಸನಾಗಬೇಕು. ಪ್ರಾಣಿ, ಪಕ್ಷಿಗಳ ಜೊತೆ ಬದುಕಬೇಕು. ಅಲ್ಲೇ ಬದುಕಿನ ಸಾರ್ಥಕತೆ ಪಡೆಯಬೇಕು' ಎಂದು ಈವರೆಗೆ ಹುಗಿದಿಟ್ಟಿದ್ದ ಮನದಾಳದ ಎಲ್ಲ ಭಾವನೆಗಳನ್ನು ತೆರೆದಿಡುತ್ತಾನೆ.
ಮಗನ ಒಂದೊಂದು ಮಾತುಗಳು ಅಪ್ಪನ ಕರುಳನ್ನು ಹಿಚುಕಿದಂತಾಗುತ್ತದೆ.
ಏನು ಮಾಡುವುದು ಎಂದು ಮನಸ್ಸಲ್ಲಿಯೇ ಲೆಕ್ಕಾಚಾರ ಹಾಕುತ್ತಿದ್ದಾನೆ. ಇರುವುದೊಂದೆ ದಾರಿ, ವಾಪಸ್ಸು ಹಳ್ಳಿಗೆ ಹೋಗುವುದು. ಸಂಸಾರಕ್ಕೆಂದು ಒಂದಿಷ್ಟು ಭೂಮಿ ಖರೀದಿಸಿ ವ್ಯವಸಾಯ ಮಾಡುವುದು ಎಂದು ಆಲೋಚಿಸಿ ಮಗನಲ್ಲಿ ತನ್ನ ನಿಧರ್ಾರ ತಿಳಿಸುತ್ತಾನೆ.
ಅಪ್ಪನ ಆ ಮಾತನ್ನು ಕೇಳುತ್ತಿದ್ದಂತೆ ಶ್ರೀವತ್ಸನ ಮೊಗ, ಆಗ ತಾನೆ ಮುಂಜಾನೆಯ ಬೆಳಕಿಗೆ ಅರಳಿದ ಮೊಗ್ಗಿನ ಹಾಗೆ ಅರುಳುತ್ತದೆ. ಅರೆಕ್ಷಣದಲ್ಲಿ ಕಣ್ಣುಗಳನ್ನು ಮುಚ್ಚಿ, ಧ್ಯಾನಸ್ಥ ಸ್ಥಿತಿಗೆ ಹೋಗುತ್ತಾನೆ.
-------------------------------------
ಈಗ........
ಶ್ರೀವತ್ಸ ಹೆತ್ತವರ ಸಮೇತ ಹಳ್ಳಿಗೆ ಬಂದಿದ್ದಾನೆ. ಹೊಲ-ಗದ್ದೆಗಳನ್ನು ಖರೀದಿಸಿ ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾನೆ. ಕಳೆದು ಹೋದ ತನ್ನ ಬದುಕನ್ನು, ಬಾಲ್ಯದಲ್ಲಿ ಆಡಿ-ಬೆಳೆದ ಮಣ್ಣಿನಲ್ಲಿ ಹುಡುಕಿಕೊಂಡಿದ್ದಾನೆ. ಕಥೆ ಹೇಳುವ ಸಣ್ಣಜ್ಜಿಯ ಜಾಗದಲ್ಲಿ ಈಗ ರಾಜಮ್ಮ ಬಂದಿದ್ದಾಳೆ. ಮನೆಯನ್ನು ಸ್ವಲ್ಪ ಒಪ್ಪ-ಓರಣ ಮಾಡಿಕೊಂಡು, ಗುಬ್ಬಚ್ಚಿ ಗೂಡನ್ನು ಫೊಟೋದ ಹಿಂದೆ ಇಟ್ಟಿದ್ದಾನೆ. ಕೋಳಿಗಳನ್ನು ಸಾಕಿ, ಅವುಗಳ ಪಾಲನೆ ಮಾಡುತ್ತಿದ್ದಾನೆ. ದನದ ಕೊಟ್ಟೆಗೆಯ ಎಲ್ಲ ಕೆಲಸವನ್ನು ತಾನೇ ಮಾಡುತ್ತಾನೆ. ಬಿಡುವಾದಾಗೆಲ್ಲ ಕೆರೆದಂಡೆ ಮೇಲೆ ಹೋಗಿ ಒಂದಿಷ್ಟು ಹೊತ್ತು ಕಳೆದು ಬರುತ್ತಾನೆ. ಸ್ನೇಹಿತರ ಜೊತೆ ಬೆಟ್ಟ, ಗುಡ್ಡಗಳನ್ನೆಲ್ಲ ಅಲೆದು, ಅಲ್ಲಿರುವ ಮರ-ಗಿಡಗಳನ್ನು ಪ್ರೀತಿಸಿ, ಹಕ್ಕಿಗಳ ಇಂಪಾದ ಧ್ವನಿಯನ್ನು ಕೇಳುತ್ತ ತನ್ನನ್ನೇ ಮೈಮರೆಯುತ್ತಾನೆ.
ಮಗನ ಆದರ್ಶ ಬದುಕನ್ನು ಕಣ್ತುಂಬಿಸಿಕೊಂಡ ಶ್ರೀವತ್ಸನ ಹೆತ್ತವರು, ಇಂಥ ಮಗನನ್ನು ಹೆತ್ತ ನಾವೇ ಧನ್ಯರು` ಎಂದು ಆನಂದಭಾಷ್ಪ ಹರಿಸುತ್ತಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ