ಶನಿವಾರ, ಜನವರಿ 17, 2015

ನಾನು ಮಾಡಿದ್ದೇ ಸರಿ, ನನಗ್ಹೇಳಲು ನೀನ್ಯಾರು..?


ನಾಗರಾಜ್ ಬಿ.ಎನ್.
ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೆ ಆಗಬೇಕು... ಎನ್ನುವ ಮನಸ್ಥಿತಿ ಸರ್ವಥಾ ತರವಲ್ಲ. ಅದರಿಂದ ನಾವು ನಮ್ಮ ಸ್ನೇಹಿತರನ್ನು ಹಾಗೂ ಪ್ರೀತಿ-ಪಾತ್ರರನ್ನು ದೂರ ಮಾಡಿಕೊಳ್ಳುತ್ತೇವೆಯೇ ಹೊರತು, ಬದುಕಿನ ಬೆಳವಣಿಗೆಗೆ ಒಂದಿನಿತೂ ಪ್ರಯೋಜನವಿಲ್ಲ.

ಋಷಿ-ಮುನಿಗಳ, ಸಾಧು-ಸಂತರ ಸಂಸ್ಕಾರಗಳು ನಮಗಿಲ್ಲ. ಗಡ್ಡೆ-ಗೆಣೆಸುಗಳಷ್ಟೇ ತಿನ್ನುವ ಸಾತ್ವಿಕ ಆಹಾರಿಗಳೂ ನಾವಲ್ಲ. ನಾವು ಆಧುನಿಕ ಜಗತ್ತಿಗೆ ತೆರದುಕೊಂಡು, ವೈಜ್ಞಾನಿಕ ಉಪಕರಣಗಳ ನಡುವೆ ಬದುಕು ಸಾಗಿಸುವವರು. ಮಾಂಸಾಹಾರವೇ ಪರಮ ಭಕ್ಷ್ಯ ಎಂದು ಸೇವಿಸುವವರು. ಹೀಗಿದ್ದಾಗ ಸಹಜವಾಗಿಯೇ ನಮ್ಮ ಆಲೋಚನೆಗಳು, ಆಚಾರ-ವಿಚಾರಗಳು ಸಂಸ್ಕಾರವನ್ನು ಮರೆಮಾಚುವಂತೆ ಮಾಡುತ್ತವೆ. ಹಾಗಂತ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಅಲ್ಲವೇ...? ನಮ್ಮ ಜೊತೆ ಬದುಕಿ-ಬಾಳುವವರಿಗೂ ಕೂಡಾ, ನಮ್ಮ ಹಾಗೆಯೇ ಒಂದು ಬದುಕು ಇದೆ ಎನ್ನುವುದು ಸತ್ಯ ಅಲ್ಲವೇ...?
ಈ ಆಧುನಿಕ ಬದುಕಿನ ನಾಗಾಲೋಟದಲ್ಲಿ ಯಾವುದು ಸರಿ...? ಯಾವುದು ತಪ್ಪು...? ಎಂದು ನಮಗೆ ಅರಿವಿಗೆ ಬಾರದು. ವಿವೇಚನಾ ರಹಿತ ವ್ಯಾಖ್ಯಾನವೇ ನಮ್ಮ ಜೀವಾಳವಾಗಿ ಬಿಟ್ಟಿದೆ. ಪರಿಣಾಮ, ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೇ ಸರಿ... ನನಗೆಲ್ಲವೂ ಗೊತ್ತು... ನನ್ನದು ಇದೇ ಇದೇ ಸ್ವಭಾವ... ಬೇಕಾದರೆ ಒಪ್ಪಿಕೋ, ಬೇಡವಾದರೆ ಬಿಡು... ನನ್ನಿಷ್ಟದ ಹಾಗೆ ನಾನು ಬದುಕುತ್ತೇನೆ... ನನ್ನ ಬದುಕು ನನ್ನದು... ನನಗೆ ಹೇಳಲು ನೀನ್ಯಾರು...? ನೀನು ನನ್ನ ಸಂಬಂಧಿನಾ...? ಹೀಗೆ ಮನಸ್ಸಿಗೆ ಬಂದ ಹಾಗೆ, ಏನೇನೋ ಬಡಬಡಿಸಿ ನಮ್ಮ ಮನಸ್ಸು ಎಂತಹದ್ದು ಎಂದು ಪ್ರದರ್ಶಿಸಿ ಬಿಡುತ್ತೇವೆ. ಇದು ನಮ್ಮ ಸಂಸ್ಕಾರದ ಫಲನೇ ಅಲ್ಲವೇ...? ಗಡ್ಡೆ-ಗೆಣಸು ತಿನ್ನುತ್ತಿದ್ದ ಸಾಧು-ಸಂತರು ಹೀಗೆ ವರ್ತಿಸುತ್ತಿದ್ದರೇ...? ಹಾಗಂತ ಮಾಂಸಾಹಾರ ತಿನ್ನುವವರೆಲ್ಲರೂ ಹೀಗೆ ವರ್ತಿಸುತ್ತಾರೆ ಅಂತಲ್ಲ. ಈಗಿನ ಬಹುತೇಕರ ಮನಸ್ಥಿತಿ ಹೀಗೆಯೇ ಇದೆ. ಆದರೆ, ಅದು ತಪ್ಪು ಎಂದು ನಮಗೆ ಅರ್ಥವಾಗುವುದಿಲ್ಲ. ಯಾರಾದರೂ, `ಹಾಗೆ ಮಾತನಾಡುವುದು ತಪ್ಪು, ಹಾಗೆಲ್ಲ ಹೇಳ ಬೇಡ' ಎಂದರೆ... ಅದನ್ನು ಕೇಳುವ ವ್ಯವಧಾನವೂ ನಮಗಿರುವುದಿಲ್ಲ. ಸಂದರ್ಭದಲ್ಲಿ `ನಾನು ಮಾಡಿದ್ದೆ ಸರಿ ಎನ್ನುವ ಅಹಂ' ನಮ್ಮಲ್ಲಿ ಪುಟಿದೇಳುತ್ತಿದೆ. ಅದರ ಮೇಲಾಟದಲ್ಲಿ 'ಸರಿ-ತಪ್ಪು'ಗಳ ವಿವೇಚನೆಯೇ ಮಖಾಡೆ ಮಲಗಿರುತ್ತವೆ. ಆದರೆ ಇವೆಲ್ಲ ನಮ್ಮ ಸಂಸ್ಕಾರದ ಫಲನೇ ಅಲ್ಲವೇ...?
ಇರಲಿ, ಕ್ಯಾಲೆಂಡರ್ನಲ್ಲಿ ವರ್ಷ ಬದಲಾಗುವ ದಿನಕ್ಕೆ ಎದುರು ನೋಡುತ್ತಿದ್ದೇವೆ. `ಹಿಂದು ವಷರ್ಾಚರನೆಯಲ್ಲ, ಅದನ್ನು ಆಚರಿಸುವುದು ಬೇಡ' ಎನ್ನುವ ಕೂಗು ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ. ನೂತನ ವರ್ಷವನ್ನು ಆಚರಣೆ ಮಾಡುವುದು ಬೇಡ. ಆದರೆ, ವರ್ಷ ಬದಲಾವಣೆಯಾಗುವ ಸಂದರ್ಭದಲ್ಲಿ ದೃಢ ಸಂಕಲ್ಪ ಮಾಡೋಣ. ವಿಚಾರ, ಆಚಾರ, ನಡೆ, ನುಡಿಗಳನ್ನು ಬದಲಿಸಿಕೊಳ್ಳೋಣ. ನಾನು ಮಾಡಿದ್ದೇ ಸರಿ, ನಾನು ಹೇಳಿದ್ದೇ ಆಗಬೇಕು ಎನ್ನುವ ತುಚ್ಛ ಮನಸ್ಥಿತಿಯನ್ನು ಈ ವರ್ಷದಲ್ಲಿಯೇ ಬಿಟ್ಟು ಹೋಗೋಣ. ಇನ್ನೊಬ್ಬರು ಆಡುವ ಮಾತನ್ನು ತಾಳ್ಮೆಯಿಂದ ಕೇಳೋಣ... `ಅವರು ಯಾಕಾಗಿ ನನಗೆ ಹೇಳುತ್ತಿದ್ದಾರೆ?' ಎಂದು ನಮ್ಮಲ್ಲಿಯೇ ಮಂಥನ ಮಾಡಿಕೊಳ್ಳೊಣ. ಸಂಬಂಧವನ್ನು ಹಾಳು ಮಾಡಿಕೊಳ್ಳುವ, 'ನೀನು ನನಗೆ ಸಂಬಂಧಿನಾ, ನನ್ನ ಸ್ವಭಾವವೇ ಹಾಗೆ, ನನ್ನ ಬದುಕು ನನ್ನಿಷ್ಟ, ನನಗೆ ಹೇಳಲು ನಿನ್ಯಾರು... ಎನ್ನುವ ಮಾತುಗಳನ್ನು ಬಿಟ್ಟು ಬಿಡೋಣ. ಕುಟುಂಬದವರ, ಸ್ನೇಹಿತರ, ಜೊತೆಯಿರುವ, ಪ್ರೀತಿಸುವವರ ಜೊತೆ ಕೂಡಿ-ಬಾಳೋಣ. ಅಹಂನ ಕಪಿಮುಷ್ಟಿಯಲ್ಲಿ ಸಿಲುಕಿ, ಅದರ ಪ್ರತಿಷ್ಠಗಾಗಿ ಜೊತೆಗಾರರನ್ನು ಕಳೆದುಕೊಳ್ಳದಿರೋಣ. ಅವರ ಮಾತುಗಳನ್ನು ಕೇಳಿ ಅವರ ಬದುಕಿಗೂ ಗೌರವ ನೀಡೋಣ. ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... ಒಟ್ಟಾರೆ ಸಮಾಜದ ಆದರ್ಶ ವ್ಯಕ್ತಿಯಾಗಲು ಪಣ ತೊಡೋಣ.ನಮ್ಮ ಬದುಕಿನಾಚೆಗೂ ಒಂದು ಸುಂದರ ಬದುಕಿದೆ ಎನ್ನುವುದು ಮರೆಯದಿರೋಣ.. 

ಕಾಮೆಂಟ್‌ಗಳಿಲ್ಲ: