ಒಂದು ಅಳಿಲು ಮರಿಯ ಕಥೆ....
ಕಾಲೇಜ್ ಮುಗಿಸಿ ಲಗು ಬಗೆಯಲ್ಲಿ ಮನೆಗೆ ಬಂದಾಕೆ, ಚಪ್ಪಲಿಯನ್ನು ತೆಗೆಯದೆ ಒಳಗೆ ಪ್ರವೇಶಿಸಿದಳು. ಆಲೂ.... ಆಲೂ ಎಂದು ಒಂದೇ ಸಮನೇ ಕೂಗಿದಳು. ಮನೆಯೆಲ್ಲ ಹುಡುಕಾಡಿದಳು. ಸುತ್ತೆಲ್ಲ ತಡಕಾಡಿದಳು. ಊಹೂಂ..... ಎಲ್ಲಿಯೂ ಆಲೂ ಕಂಡು ಬಂದಿಲ್ಲ. ಅಲ್ಲಿಯೇ ಕುಸಿದು ಬಿದ್ದಳು. ಬಿಕ್ಕಿ ಬಿಕ್ಕಿ ಅತ್ತಳು....!
ಅವಳ ಹೆಸರು ಇಂಚರ. ಪ್ರಬುದ್ಧ ಮನಸ್ಸಿನ ಹುಡುಗಿ. ಕೇರಳದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ತನ್ನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಳೆ.
ಪ್ರತಿ ದಿನದಂತೆ ಅಂದು ಕೂಡಾ ಅವಳು ಕಾಲೇಜಿಗೆ ಹೋಗುತ್ತಿದ್ದಳು. ಅಲ್ಲೆ ಪಕ್ಕದ ರಸ್ತೆಯಲ್ಲಿ ಚಿಕ್ಕ ಯಾವುದೋ ಚಿಕ್ಕ ಪ್ರಾಣಿಯೊಂದು ತೆವಳುತ್ತಾ ಹೋಗುತ್ತಿತ್ತು. ಕುತೂಹಲದಿಂದ ಅದರ ಬಳಿಗೆ ಹೋದ ಅವಳು, ಒಮ್ಮೆಲೆ ಆತಂಕಗೊಂಡಳು.
ಅದು ಅಳಿಲಿನ ಮರಿ. ಜನ್ಮ ತಳೆದು ಬಹುಶಃ ಹದಿನೈದು ದಿನವಾಗಿರಬಹುದು. ಈಗಷ್ಟೆ ರೋಮಗಳು ಪುಟ್ಟದಾಗಿ ಹುಟ್ಟಿಕೊಳ್ಳುತ್ತಿದ್ದವು. ತಾಯಿ ಅಳಿಲಿನಿಂದ ಅದು ತಪ್ಪಿಸಿಕೊಂಡು ರಸ್ತೆಗೆ ಬಂದಿತ್ತು. ಮುದ್ದು-ಮುದ್ದಾಗಿ ಕಾಣುತ್ತಿರುವ ಆ ಮರಿಯನ್ನು ಅಲ್ಲಿಯೇ ಬಿಟ್ಟು ಹೋದರೆ, ಅಪಾಯ ಎಂದರಿತ ಇಂಚರ, ಅದನ್ನು ಕಾಲೇಜಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದಳು.
ನಿಧಾನವಾಗಿ ಹು ಎತ್ತುವಂತೆ ಆ ಪುಟ್ಟ ಅಳಿಲಿನ ಮರಿಯನ್ನು ಎತ್ತುಕೊಂಡು, ಪ್ರೀತಿಯಿಂದ ಅದರ ಮೈ ಸವರಿ, ಒಂದು ಮುತ್ತನಿಟ್ಟಳು. ತನ್ನ ಕಾಲೇಜಿನ ಬ್ಯಾಗ್ನಲ್ಲಿಯೇ ಒಂದು ಜಾಗ ಮಾಡಿ, ಜೋಪಾನವಾಗಿ ಇರಿಸಿ ಕಾಲೇಜ್ ಕಡೆ ಮುಖ ಮಾಡಿದಳು.
ಅಅವಳ ಪುಣ್ಯವೋ ಏನೋ ಅಂದು, ಅವಳ ಪಕ್ಕ ಕುಳಿತುಕೊಳ್ಳುವ ಸ್ನೇಹಿತೆಯೊಬ್ಬಳು ಕಾಲೇಜಿಗೆ ಬಂದಿರಲಿಲ್ಲ. ಅಳಿಲಿನ ಮರಿಯಿದ್ದ ಕಾಲೇಜ್ ಬ್ಯಾಗ್'ನ್ನು ಅಲ್ಲಿಯೇ ಇರಿಸಿ, ತನ್ನ ಹಿಂಬದಿ ಕುಳಿತಿರುವ ಸ್ನೇಹಿತೆಗೆ ತಿಳಿಸುತ್ತಾಳೆ. `ಪ್ಲೀಸ್ ಕಣೆ, ಬ್ಯಾಗ್ಲ್ಲಿ ಅಳಿಲಿನ ಮರಿ ಇದೆ. ದಾರಿಯಲ್ಲಿ ತೆವಳುತ್ತಾ ಹೋಗುತ್ತಿತ್ತು. ಚಿಕ್ಕದಾಗಿ ಚಿಂವ್... ಚಿಂವ್ ಎಂದು ಶಬ್ದ ಮಾಡುತ್ತದೆ. ಭಯ ಪಡಬೇಡ' ಎಂದು.
ಉಪನ್ಯಾಸ, ಪ್ರಸೆಟೇಶನ್ ಸಂದರ್ಭ ಎಲ್ಲಿ ಆ ಪುಟ್ಟ ಮರಿ ಬ್ಯಾಗ್ನಿಂದ ಹೊರಗೆ ಬಂದು ರಾದ್ದಾಂತ ಮಾಡುತ್ತದೋ ಎಂದು ಭೀತಳಾಗಿದ್ದಳು. ಉಸಿರುಕಟ್ಟುವ ಆ ಸನ್ನಿವೇಶವನ್ನು ಹಾಗೋ... ಹೀಗೋ ಎಂದು ಕಳೆದು, ನಿಟ್ಟುಸಿರು ಬಿಟ್ಟಳು. ಎಮದು ಕಾಣದ ಸಂತಸ ಅವಳಲ್ಲಿ ಮನೆ ಮಾಡಿತ್ತು. ಮನಸ್ಸು ಬಾನೆತ್ತರಕ್ಕೆ ಜೀಕುತ್ತಿತ್ತು.
ಅದೇ ಸಂತೋಷದಲ್ಲಿ ತೇಲಾಡುತ್ತ, ಪಿಜಿಗೆ ಬಂದಳು. ಬಂದವಳೇ ಆ ಅಳಿಲಿನ ಮರಿಯ ಹೊಟ್ಟೆಗೆ ಸ್ವಲ್ಪ ಹಾಲುಣಿಸಿ, ಅದರ ಹಸಿವನ್ನು ನೀಗಿಸಿದಳು. ಅದರ ವಾಸಕ್ಕಾಗಿ ಒಂದು ರಟ್ಟಿನ ಗೂಡನ್ನು ತಯಾರಿಸಿದಳು. ಒಂದು ಚೆಂದದ ಹೆಸರಿಡಬೇಕಲ್ಲ ಎಂದು ಯೋಚಿಸಿ... ಯೋಚಿಸಿ... 'ಆಲೂ...' ಎಮದು ನಾಮಕರಣ ಮಾಡಿ ಖುಷಿ ಪಟ್ಟಳು.
ಬಿಡುವ ಸಿಕ್ಕಾಗಲೆಲ್ಲ ಅದರ ಜೊತೆ ಆಡುತ್ತ, ಮುದ್ದಾಡುತ್ತ ತನ್ನ ಮನಸ್ಸಿನ ಭಾವನೆಯನ್ನು ಬಿಚ್ಚಿಡುತ್ತಿದ್ದಳು. ಕೇವಲ ನಾಲ್ಕು ಗೋಡೆಗಳ ನಡುವೆಯೇ ಬದುಕುತ್ತಿದ್ದ ಅವಳಿಗೆ `ಆಲೂ' ಏಕಾಂತ ನೀಗಿಸುವ ಸ್ನೇಹಿತನಾಗಿದ್ದ. ಅವಳು ಕರೆದಾಗಲೆಲ್ಲ ಗೂಡಿನಿಂದ ಇಣಕಿ ಹಾಕಿ, ಕಣ್ಣನ್ನು ಪಿಳಿಪಿಳಿ ಮಾಡುತ್ತಿದ್ದ. ಒಮ್ಮೊಮ್ಮೆ ಅವಳಿದ್ದಲ್ಲಿಗೆ ಬಂದು, ಮೈ-ಮೇಲೆಲ್ಲ ಓಡಾಡಿ ಪ್ರೀತಿ ತೋರಿಸುತ್ತಿದ್ದ.ಇಂಚರ ಕಾಲೇಜಿಗೆ ಹೋಗುವಾಗ ಹಾಲು, ಹಣ್ಣುಗಳನ್ನು ಆಲೂವಿನ ಪಕ್ಕ ಇಟ್ಟು ಹೋಗುತ್ತಿದ್ದಳು. ಅವಳು ಬರುವುದರೊಳಗೆ ತನಗೆಷ್ಟು ಬೇಕೋ ಅಷ್ಟನ್ನು ತಿಂದು, ಕುಡಿದು ಅಲ್ಲಿಯೇ ಆಟವಾಡುತ್ತ ಇರುತ್ತಿದ್ದ. ಕಾಲೇಜು ಎಷ್ಟು ಹೊತ್ತಿಗೆ ಬಿಡುತ್ತಾರೋ ಎಂದು ಪ್ರತಿದಿನ ಇಂಚರ ಎದುರು ನೋಡುತ್ತಿದ್ದಳು. ಅವಳ ಮನಸ್ಸೆಲ್ಲ ಆಲೂನೇ ಆವರಿಸಿದ್ದ. ಎಷ್ಟು ಹೊತ್ತಿಗೆ ಪಿಜಿಗೆ ಹೋಗುತ್ತೇನೆ... ಆಲೂನ ನೋಡುತ್ತೇನೆ ಎಂದೆನಿಸುತ್ತಿತ್ತು. ಇತ್ತ ಆಲೂ ಕೂಡಾ, ಸಂಜೆ ನಾಲ್ಕು ಗಮಟೆ ಆಗುತ್ತಿದ್ದಂತೆ, ಇಂಚರಾಳ ದಾರಿ ಕಾಯುತ್ತ, ಒಂದೇ ಸಮನೆ ಕಿರುಚುತ್ತ ಇರುತ್ತಿದ್ದ. ಎಲ್ಲಿಯಾದರೂ ಅವಳು ಬರಲು ತಡವಾಯಿತೆಂದರೆ ಸಾಕು, ಪಿಯಲ್ಲಿದ್ದ ಅವಳ ಸಣ್ಣ-ಪುಟ್ಟ ಸಾಮಾನುಗಳನ್ನೆಲ್ಲ ಕೆಡವಿ ಹಾಕಿ, ಕೋಪ ತೀರಿಸಿಕೊಳ್ಳುತ್ತಿದ್ದ. ಹೀಗೆ ಅವರಿಬ್ಬರ ಬಂಧ ಗಾಢವಾಗಿತ್ತು ಒಂದರ್ಥದಲ್ಲಿ 'ಆಲೂ' ಇಂಚರಾಳ ಬದುಕಿನ ಭಾಗ್ಯ ದೇವತೆಯಂತಾಗಿದ್ದ.
ಹೀಗಿರಲು ಒಂದು ದಿನ ಆಲೂ, ಎಂದಿನ ಸಂತೋಷದಿಂದಲೇ ಹಣ್ಣುಗಳನ್ನು ಖರೀದಿಸಿ ಪಿಜಿಯತ್ತ ಹೆಜ್ಜೆ ಹಾಲಿದ್ದಳು. ಒಳಗೆ ಪ್ರವೇಶಿಸುತ್ತಿದ್ದಂತೆ ಆಲೂ... ಆಲೂ... ಎಂದು ಕೂಗಿದಳು. ಏನೋ ಸಂಶಯ...! ಒಳಗೆಲ್ಲ ಹುಡುಕಾಡಿದಳು... ಆಲೂನ ಗೂಡನ್ನು ನೋಡಿದಳು... ಪುಸ್ತಕದ ಸಂದಿಯನ್ನು ಅರಸಿದಳು.... ಇಲ್ಲ, ಆಲೂ ಕಾಣುತ್ತಿಲ್ಲ. ಪಿಜಿಯ ಹೊರಗೆ ಬಂದು ಸುತ್ತೆಲ್ಲ ಹುಡುಕಾಡಿದಳು. ಊಹೂಂ...... ಎಲ್ಲಿಯೂ ಆಲೂ ಕಾಣುತ್ತಿಲ್ಲ. ಒಳಗೆ ಬಂದು ನೋಡಿದಳು. ಸೇಬು ಹಣ್ಣಿನ ಸ್ವಲ್ಪ ಭಾಗ ಮಾತ್ರ ಆಲೂ ತಿಂದಿದ್ದ. ಹಾಲು ಮಾತ್ರ ಹಾಗೆ ಇತ್ತು. ಅಂದರೆ, ಅವನು ಮನೆ ಬಿಟ್ಟು ಹೋಗಿ ನಾಲ್ಕೈದು ಗಂಟೆಗಳು ಉರುಳಿವೆ ಎಂದು ಯೋಚಿಸಿದಳು. ಹೃದಯ ಉಮ್ಮಳಿಸಿ ಬಂದು, ಅಲ್ಲಿಯೇ ಕುಸಿದು ಬಿದ್ದಳು.
ಬಿಕ್ಕಿ ಬಿಕ್ಕಿ ಅತ್ತಳು. ಮೈ-ಮನವೆಲ್ಲ ನಿತ್ರಾಣಗೊಂಡಿದ್ದವು. ಕಣ್ಣೆಲ್ಲ ಕೆಂಡದ ಉಂಡೆಯಂತಾಗಿದ್ದವು. ಏನು ಮಾಡಬೇಕೆಂದು ತೋಚದೆ.... ಪಿಜಿಯ ಹೊರಗೆ ಬಂದು ಆಗಸ ನೋಡುತ್ತ ಕುಳಿತಳು. ಬಾನು ತನ್ನ ದೈನಂದಿನ ಕಾರ್ಯ ಮುಗಿಸಿ ನಿಧಾನವಾಗಿ ಪಡುವಣದಲ್ಲಿ ಅಸ್ತಂಗತನಾಗುತ್ತಿದ್ದ. ಪೂರ್ಣ ಚಂದಿರ ಹಾಲ್ನೊರೆಯ ಬೆಳಕನ್ನು ಚೆಲ್ಲುತ್ತ, ಮೋಡದ ಮರೆಯಲ್ಲಿ ಇಣುಕುತ್ತಿದ್ದ. ಇವೆಲ್ಲವನ್ನೂ ತದೇಕ ಚಿತ್ತದಿಂದ ಇಂಚರಾ ನೋಡುತ್ತಿದ್ದಳು. ಪೂರ್ಣ ಚಂದಿರನಲ್ಲಿ ಮನೆ ಬಿಟ್ಟು ಹೋದ ಆಲೂ ಕಂಡ ಹಾಗೆ ಅವಳಿಗೆ ಭಾಸವಾಗುತ್ತದೆ. ಆಲೂ... ಎಂದು ಹೃದಯ ತುಂಬಿ ಕರೆಯುತ್ತಾಳೆ. ಅರಿವಿಲ್ಲದೆ ಮತ್ತೆ ಕಣ್ಣಂಚು ಒದ್ದೆಯಾಗುತ್ತವೆ.
ಬೆಳದಿಂಗಳ ರಾತ್ರಿಯಲ್ಲಿ ಮುಂಗುರುಳು ಸೋಕುವ ತಣ್ಣನೆಯ ತಂಗಾಳಿಯಲಿ ಹಾಡೊಂದು ತೇಲಿ ಬರುತ್ತಿತ್ತು.... `ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ....'
ಪ್ರತೀ ಹುಣ್ಣಿಮೆಗೂ ಇಂಚರಾಳಿಗೆ ಆಲೂ ನೆನಪಾಗುತ್ತಾನೆ. ಅವನಿಗಾಗಿ ಅಳುತ್ತಾಳೆ. ಮರುಗುತ್ತಾಳೆ. ಚಂದಿರನಲ್ಲಿ ಆಲೂನ ಕಾಣುತ್ತಾಳೆ. ದಾರಿಯಲ್ಲಿ ಹೋಗುವಾಗ ಅಳಿಲು ಕಂಡು ಬಂದರೆ ಆಲೂ... ಎಮದು ಕರೆಯುತ್ತಾಳೆ. ಎಲ್ಲೆ ಇದ್ದರೂ ಎನ್ನಾಗಿರು ಎಂದು ಭಾವುಕಳಾಗಿ ಮನಸ್ಸಲ್ಲಿಯೇ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ