ಶನಿವಾರ, ಜೂನ್ 25, 2016


ಮನ ತೋಯ್ದ ಘಳಿಗೆ....
ವರ್ಷೆಯ ಗುಣಗಾನ ಸಾಕು ಎಂದುಕೊಳ್ಳುತ್ತೇನೆ. ಆದರೆ, ಅವಳ ವಯ್ಯಾರ, ಮಂದ, ಬಿರುಸು, ತಂಪು; ಜೊತೆ ಜೊತೆಗೆ ಕಿವಿ ಇಂಪಾಗಿಸುವ ಆ ಜಿಟಿ ಜಿಟಿ ಸದ್ದು..... ಮತ್ತೆ ಅವಳೆಡೆಗೆ ಅರಿವಿಲ್ಲದೆ ಸೆಳೆದು ಬಿಡುತ್ತದೆ. ಇದೊಂಥರ 'ಇಷ್ಟಕಾಮ್ಯ' ಇದ್ದಂತೆ!
ಪ್ರತಿ ವರ್ಷ ಮುಂಗಾರಿನ ಮೊದಲ ಹನಿಗೆ ಹೊಳೆ ಅಂಚಿನ ಗದ್ದೆಯ ಬಯಲಲ್ಲಿ ಮೈಯೊಡ್ಡಬೇಕು ಅಂದುಕೊಳ್ಳುತ್ತೇನೆ. ಭೂಮಿ ಬಿರಿಯುವ ಸುಡು ಬಿಸಿಲಲ್ಲೇ ಲೆಕ್ಕಾಚಾರ ಹಾಕಿ, ಪುಳಕಿತನಾಗುತ್ತೇನೆ. ಆದರೆ ನನ್ನಿಷ್ಟದ ಪ್ರೀತಿಯ ಕಾಯಕ, ಆ ಮೊದಲ ಹನಿಯ ಸ್ಪರ್ಷದಿಂದ ವಂಚಿತನಾಗಿಸುತ್ತದೆ. ಆದರೂ, ಮುಂಗಾರು ತನ್ನ ಮೊದಲ ಪಾದ ತೆಗೆಯುವುದರೊಳಗೊಮ್ಮೆ ನಾ ಹೊಳೆಯಂಚಿನ ಗದ್ದೆಗೆ ಹೋಗುತ್ತೇನೆ. ಅಲ್ಲಿ ವರ್ಷೆಯ ಜೊತೆ ಆಟವಾಡಿ, ಮನಸೋ ಇಚ್ಛೆಯಾಗಿ ತೋಯ್ದು ತೊಪ್ಪೆಯಾಗುತ್ತೇನೆ. ಎರಡು ಕೈಗಳನ್ನು ಅಗಲಿಸಿ, ನೀಳುಸಿರು ಮೇಲಕ್ಕೆಳೆದುಕೊಂಡು, ಎರಡು ಕಣ್ಣುಗಳನ್ನು ಮುಚ್ಚಿ ಧ್ಯಾನಸ್ಥನಾಗುತ್ತೇನೆ. ಅನುಭವಾತೀತ ಕ್ಷಣವದು. ಪದಗಳಲ್ಲಿ ಕಟ್ಟಿಹಾಕಲಾಗದ ಎಲ್ಲೆಯಿರದ ಓಟವದು. ಎರಡು ದಿನದ ಹಿಂದಷ್ಟೆ ಆ ಪುನೀತ ಘಳಿಗೆಗೆ ಸಾಕ್ಷಿಯಾಗಿದ್ದೆ.

 
ಹೌದು, ಭೂಮಿ ಬಾನು ಒಂದಾದ ಘಳಿಗೆಯದು. ಧೋ ಎಂದು ಹುಚ್ಚೆದ್ದು ಸುರಿವ ವರ್ಷೆಗೆ, ತಂಗಾಳಿ ಅಲೆ ಅಲೆಯಾಗಿ ಬಂದು ಮೈ ಸವರುತ್ತದೆ. ಅವಳಲ್ಲಿ ಒಂದಾಗಿ ಬೆರೆತು, ಭುವಿಯೆಲ್ಲ ಬಾನೇ ಎಂದಿನಿಸುವಂತೆ ಕಣ್ಕಟ್ಟುತ್ತದೆ. ಹನಿಕಟ್ಟೋ ಕಾರ್ಮೋಡಕ್ಕೆ ಸವಾಲು ಎಸೆಯುವಂತೆ, ಇಬ್ಬನಿಯ ಮಂಜು ಸುತ್ತೆಲ್ಲ ಆವರಿಸಿ ಭುವಿಯೇ ನನ್ನದು ಎನ್ನುವ ಆ ಪರಿ ವರ್ಣನಾತೀತ. ಹಿಡಿದು ಬಚ್ಚಿಟ್ಟುಕೊಳ್ಳಬೇಕೆಂದು ಕೈ ಮುಷ್ಟಿ ಕಟ್ಟಿದರೆ, ಮೈ-ಮನವೆಲ್ಲ ತಂಪಾದ ಭಾವ. ದೂರದಲ್ಲಿ ಅರೆಬರೆಯಾಗಿ ಕಾಣುವ ಸಹ್ಯಾದ್ರಿ ಹಿಮಚ್ಛಾದ್ರಿತವಾಗಿ ಕಂಗೊಳಿಸುತ್ತದೆ. ಕಾಲಡಿಯೇ ಹಸಿರೊದ್ದು ಮೇಲೆದ್ದ ಸಾಲು ಸಾಲು ಭತ್ತದ ಸಸಿ, ಭೂರಮೆಗೆ ಹಸಿರು ಸೀರೆ ಉಡಿಸಿದಂತೆ. ಅಲ್ಲಿಯೇ ಪಕ್ಕದ ಗದ್ದೆಯಲ್ಲಿ ನಿಂತ ನೀರು, ಬಾನಂಗಳದಲ್ಲಿ ಓಡೋ ಮೇಘಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಆ ದೃಶ್ಯ ನಯನ ಮನೋಹರ. ತನ್ನಷ್ಟಕ್ಕೆ ತಾನು ಓರೆಯಾಗಿ ತಲೆ ಎತ್ತಿ ನಿಂತಿರುವ ಒಂಟಿ ಕಲ್ಪವೃಕ್ಷದ ಪ್ರತಿಬಿಂಬ ಇಳೆಯ ಎದೆ ಮೇಲೆ ಅಚ್ಚೊತ್ತಿ ಪ್ರತಿಫಲಿಸುತ್ತದೆ. ವರ್ಷೆಯ ಜಿಟಿ ಜಿಟಿ ಶಬ್ಧದ ನಡುವೆಯೂ, ದೂರದಲ್ಲಿ ಅಘನಾಶಿನಿಗಾಗಿ ಅಬ್ಬರಿಸುವ ಅರಬ್ಬೀಯ ಭೋರ್ಗರೆತ ಕಿವಿಗಪ್ಪಳಿಸುತ್ತವೆ.
ಮೈಗೆ ಬಿಗಿದಪ್ಪಿದ ತೋಯ್ದ ಬಟ್ಟೆ, ದುಕೂಲದಿಂದ ಹರಿದು ಕೆನ್ನೆಯಂಚಿಂದ ಜಾರುವ ಮುತ್ತಿನ ಹನಿ, ಒದ್ದೆಯಾದ ಕಣ್ರೆಪ್ಪೆಯ ಮೊನಚು, ಆಗೊಂದು, ಈಗೊಂದು ಎಂದು ಗಂಟಲಲ್ಲಿ ಇಳಿದ ಮಳೆಹನಿ, ತಂಗಾಳಿ ಜೊತೆ ಸೇರಿದ ಎದೆಯಾಳದ ಬಿಸಿಯುಸಿರು, ಒಲ್ಲೇ ಎನ್ನುತ್ತಲೇ ಕತ್ತು ತಿರುಗಿಸುತ್ತ ಮನೆಕಡೆ ಇಟ್ಟ ಹಸಿ ಹಸಿ ಹೆಜ್ಜೆ, ಮೈ ಮೇಲೆ ಬಿದ್ದ ಅಮ್ಮ ಕಾಸಿಟ್ಟ ಹಂಡೆ ನೀರು, ಆದೃ ಮನಸ್ಸಿಗೆ ಸಾಂತ್ವನ ನೀಡಿದ ವರ್ಷೆಯ ಆ ಒಡಲು.... ಸುಮ್ಮನೆ ಹೊತ್ತಲ್ಲದ ಹೊತ್ತಲ್ಲಿ ಬಂದು ಕಾಡುತ್ತಿರುತ್ತವೆ. ಅರೆಕ್ಷಣ ಕಣ್ಮುಚ್ಚಿ ಆನಂದಿಸುತ್ತೇನೆ. ನನ್ನ ಪ್ರೀತಿಯ ಬಿಡುವಿಲ್ಲದ ಕೆಲಸದ ನಡು ನಡುವೆಯೂ.....
-ನಾಗರಾಜ್ ಬಿ.ಎನ್.

ಮಂಗಳವಾರ, ಜೂನ್ 21, 2016

ಬಚ್ಚಿಟ್ಟ ಪ್ರೀತಿ...
ಎನ್ನೆದೆಯ ನೆಲದಲ್ಲಿ ನಿನ್ನ ನೆನಪು
ಹೂತು ಸಮಾಧಿಯಾಗಿದೆ
ಎಂದುಕೊಂಡಿದ್ದೆ
ಆದರೆ,
ಈ ಹಾಳು ಮಳೆ
ಹೃದಯವನ್ನೆ ಒದ್ದೆ ಮಾಡಿ
ನೆನಪನ್ನು ಮೆಲ್ಲನೆ ಚಿಗುರೊಡೆಸುತ್ತಿದೆ
ಹಸಿಮಣ್ಣ ಸೀಳಿ ಗರಿಕೆ ಮೇಲೆದ್ದಂತೆ
ಹಸಿರೆಲೆಯ ಮೇಲೆ ಇಬ್ಬನಿ ಬಿದ್ದಂತೆ
ಮೂಟೆಕಟ್ಟಿ ಮಣ್ಣಾಗಿಸಿದ ಭಾವ
ಸದ್ದಿಲ್ಲದೆ ತಲೆ ಎತ್ತಿದೆ ಸುರಿವ ಜಡಿಮಳೆಗೆ
ಮತ್ತೆ ಹೃದಯಂಗಳದಲ್ಲಿ,
ಹಸಿರು ಚಪ್ಪರದ ಸಾಲು ಮೆರವಣಿಗೆ
ಮುಂಜಾನೆ ಇಬ್ಬನಿಯ ಮುತ್ತಿನ ಮಾಲೆ
ಹುಣ್ಣಿಮೆ ಶರಧಿಯ ಭೋರ್ಗರೆವ ನರ್ತನ
ಏಳು ಸ್ವರಗಳ ಇಂಪಾದ ನಾದ ನಿನಾದ
ಬೆಚ್ಚನೆಯ ಉಸಿರಲ್ಲಿ ಕಾಲ್ಗೆಜ್ಜೆಯ ಸದ್ದು...
                                                         ಗೆಳತಿ,
ಮೋಡದ ಬಾನಿಗೆ ಎದೆ ಬಾಯಾನಿಸಿದೆ
ವರ್ಷೆಯ ಸ್ಪರ್ಶಕ್ಕೆ ಮನ ಹಸಿಯಾಗಿದೆ
ಹೂತಿಟ್ಟಿದ್ದೇನೆಂದು ಭ್ರಮಿಸಿದ ಪ್ರೀತಿ
ಬಚ್ಚಿಟ್ಟದ್ದೆಂದು ತೋಯ್ದು ಬೆತ್ತಲಾಗಿದೆ!
                                                - ನಾಗರಾಜ್ ಬಿ.ಎನ್.

ಭಾನುವಾರ, ಜೂನ್ 19, 2016

ಕನಸಿನ ಮೆಲುಕು...
ಬೆಚ್ಚನೆಯ ರಾತ್ರಿಯಲಿ ಬಿದ್ದ
ಸವಿಗನಸಿನಂತೆ,
ಸುಡು ಬಿಸಿಲಲ್ಲಿ ಮಳೆ ಧೋ ಎಂದು
ಸುರಿದಂತೆ,
ಮೋಡದ ಮರೆಯಲ್ಲಿ ಚುಕ್ಕಿ ಚಂದಮ
ನಸುನಕ್ಕಂತೆ,
ದಟ್ಟ ಕಾರಿರುಳ ಕತ್ತಲೆಗೆ ಭಾವನೆಯ
ಬಣ್ಣ ಬಳಿದಂತೆ,
ಕಿರು ಬೆರಳ ತುದಿಗೆ ತಂಗಾಳಿ
ಸೋಂಕಿ ಮರೆಯಾದಂತೆ....
ಇವೆಲ್ಲ ಕನಸಲ್ಲ,
ಕಲ್ಪನೆಯೂ ಅಲ್ಲ ಎನ್ನುವಷ್ಟರಲ್ಲಿ....
ಮಿಂಚಿ ಮರೆಯಾದ ಬದುಕು!
ಉತ್ಖನನ ಮಾಡಲಾಗದಷ್ಟು
ಆಳಕ್ಕಿಳಿದ ಪಳಯುಳಿಕೆ
ಈಗಿರುವುದು ಕನಸಿನ ನೆನಪೊಂದೆ
ನೆನಪಿನ ಮೆಲುಕೊಂದೆ!
                                      -ನಾಗರಾಜ್ ಬಿ.ಎನ್

ಸೋಮವಾರ, ಜೂನ್ 13, 2016

ಮುಂಗಾರು ಸೃಷ್ಟಿ...
ಈ ಮುಂಗಾರು, ಮೋಡ, ತಣ್ಣನೆಯ ಗಾಳಿ
ಅರೆಬರೆ ಬಿಸಿಲಿನ ಚೆಲ್ಲಾಟ...
ಆಹಾ! ಇವೆಲ್ಲ ನಿನ್ನ ಸನಿಹದ ಬಯಕೆಗೆ
ಕಿಚ್ಚು ಹತ್ತಿಸುತ್ತಿವೆ ಗೆಳತಿ.
ಹೂತು ಸಮಾಧಿ ಮಾಡಿದ್ದ ಭಾವನೆ,
ಹಸಿ ಮಣ್ಣಿನ ವಾಸನೆಗೆ ಮೇಲೆದ್ದಿವೆ
ಮತ್ತದೆ ತಾಳದ ವೇದನೆ
ಗರ್ಭಕ್ಕಿಳಿದು ಮಡುಗಟ್ಟಿದೆ
ಒಂದೇ ಸಮನೆ ಹಿಂಸಿಸುತ್ತಿದೆ
ಸಾಕು ಮಾಡಿನ್ನು ಗೆಳತಿ,
ನಿನ್ನ ಸಿಡುಕಿನ ಮುಸುಕಾಟ
ಮೊದಲ ಮಳೆಯ ಘಮಕ್ಕೆ ಮೈಯೊಡ್ಡಿ
ತೋಳಗಲಿಸಿ ಆಲಂಗಿಸಿಬಿಡು
ಹಸಿ ಮೈಯ್ಯ ಬಿಸಿ ಅಪ್ಪುಗೆಯಲಿ
ಬೆರೆತು ಒಂದಾಗೋಣ,
ಮುಂಗಾರು ಸೃಷ್ಟಿಗೆ ನಾಂದಿ ಹಾಡೋಣ!
                                                                                                 -ನಾಗರಾಜ್ ಬಿ. ಏನ್. 

ಭಾನುವಾರ, ಜೂನ್ 12, 2016

'ಇಬ್ಬನಿಯ ಮೂಗುತಿ' ನಾವಾಗಬೇಕು, ಆದರೆ...
ಒಳಗೊಳಗೆ ಬುಸುಗುಟ್ಟಿ ಕುದಿದು, ದಾವಾಗ್ನಿಯ ಹೊಗೆಯನ್ನು ಹೊರಹಾಕುತ್ತಿದ್ದ ಇಳೆ ನಿಧಾನವಾಗಿ ಶಾಂತವಾಗುತ್ತಿದ್ದಾಳೆ. ಕ್ಷಣ ಕ್ಷಣಕ್ಕೂ ದೂಳನ್ನೆಬ್ಬಿಸುತ್ತ, 'ಈ ಬಿಸಿಲಿನ ಉರಿ ನಾ ತಾಳೆನು' ಎನ್ನುತ್ತಿದ್ದ ಅವಳು ಈಗ ಹಸಿ ಮುದ್ದೆಯಾಗಿ ಸುಮ್ಮನೆ ಬಿದ್ದಿದ್ದಾಳೆ. ಸದ್ದಿಲ್ಲದೆ ತನ್ನ ಗರ್ಭದಲ್ಲಿ ಸಮರೋಪಾದಿಯಲ್ಲಿ ಸೃಷ್ಟಿ ಕ್ರಿಯೆಗೆ ಸನ್ನದ್ಧವಾಗುತ್ತಿದ್ದಾಳೆ.
ಮುಂಗಾರು ಪೂರ್ವವೇ ವರ್ಷೆ ಇಳೆಗೆ ಮುತ್ತಿಕ್ಕಿ ಬಿಟ್ಟಿದೆ. ಸೊರಗಿ, ಬರಡಾಗಿ ಹೋಗಿದ್ದ ನೆಲವೆಲ್ಲ ಹಸಿಯಾಗಿ, ಮೆದುವಾಗಿ ಅಸಂಖ್ಯಾತ ಕೋಟಿ, ಕೋಟಿ ಸೃಷ್ಟಿಗೆ ಅಣಿಯಾಗುತ್ತಿದೆ. ಕರಾವಳಿ, ಮಲೆನಾಡು, ಬಯಲುಸೀಮೆ ಎಂಬ ಯಾವೊಂದು ಬೇಧವಿಲ್ಲದೆ, ಬಾನಂಗಳದಲ್ಲಿ ಮೋಡಕಟ್ಟಿ ತೊಪ ತೊಪನೆ ವರ್ಷೆ ಧರೆಗಿಳಿದಿವೆ. ಅಧಿಕೃತ ವರ್ಷಾಗಮನದ ಪೂರ್ವ ಸುರಿದ ಈ ರಭಸದ ವರ್ಷೆಗೆ, ಇಳೆ ಫುಲ್ ಖುಷ್ ಆಗಿಬಿಟ್ಟಿದ್ದಾಳೆ. ನಿದ್ದೆಗಣ್ಣಿನಿಂದ ಎಚ್ಚೆತ್ತವಳಂತೆ, ಲಗುಬಗೆಯಲ್ಲಿ ಮೈ-ಮನವನ್ನೆಲ್ಲ ಸಿಂಗರಿಸಿಕೊಂಡು, ಗೋಣನ್ನು ಮೇಲಕ್ಕೆತ್ತಿ ಮೋಡಕ್ಕೆ ಮತ್ತೆ ಬಾಯಾನಿಸಿದ್ದಾಳೆ.
ವರ್ಷೆ ಬಲಗಾಲಿಟ್ಟು ಅಧಿಕೃತವಾಗಿ ಇಳೆಯ ಹೊಸಿಲು ತುಳಿಯುವುದೊಂದೆ ಬಾಕಿ. ಎಲ್ಲಿಯೋ ಅವಿತಿದ್ದ, ಇಷ್ಟು ದಿನ ಕಂಡೂ ಕಾಣದ ಹಾಗೆ ಮರೆಯಾಗಿದ್ದ ಹಸಿರು ಕಿರೀಟಧಾರಿಗಳು ನಿಧಾನವಾಗಿ ತಲೆ ಎತ್ತಲಿದ್ದಾರೆ. ಮುಂಜಾನೆದ್ದು ನೋಡಿದಾಗ, 'ಅರೇ, ಇವರೆಲ್ಲಿಂದ ಬಂದರಪ್ಪಾ?' ಎಂದು ಆಶ್ಚರ್ಯದಿಂದ ಹುಬ್ಬೇರಿಸಬೇಕು. ಹಾದಿ-ಬೀದಿ ನೋಡದೆ ಎಲ್ಲೆಂದರಲ್ಲಿ ಅವತರಿಸಿ, ದಿನಕಳೆದಂತೆ ಹಸಿರಿನ ಹಾಸಿಗೆಯನ್ನೇ ನೇಯುವ ಇವರು ಅಪ್ರತಿಮ ಕಲಾಕಾರರು. ಮೂಡಣದಿ ಬಾನು ರಂಗೇರುವಾಗ ಅವರು ಧಿರಿಸುವ ಇಬ್ಬನಿಯ ಮೂಗುತಿ ಫಳಫಳನೆ ಪ್ರತಿಫಲಿಸುತ್ತವೆ. ಅರೇ ಕ್ಷಣದಲ್ಲಿ ಆ ಮೂಗುತಿ ಅಲ್ಲಿಯೇ ಕರಗಿ ಮಾಯವಾಗಿ ಬಿಡುತ್ತದೆ. ಆಹಾ! ಎಂಥಹ ಸೌಂದರ್ಯ.
ತಂಗಾಳಿಗೆ ಮೈಯೊಡ್ಡಿ ಅವರು ತಲೆದೂಗುವ ಪರಿ ಪ್ರಕೃತಿ ಸೊಬಗಿನ ಅಚ್ಚರಿಯಲ್ಲೊಂದು. ರಭಸದ ವರ್ಷೆಗೂ ಒಂದಿನಿತು ಅಳಕದೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನೀತಿ ಪಾಠ ಹೇಳುವ ಅವರು ಯಾವ ತತ್ವಜ್ಞಾನಿಗೂ ಕಡಿಮೆಯೇನಿಲ್ಲ. ನೆತ್ತಿಯ ಮೇಲೆ ಭಾನು ಬಂದಾಗ, ನಸುನಕ್ಕು... ಬಾಯಗಲಿಸಿ ಅವನ ಜೊತೆ ಮಾತಿಗಿಳಿಯುವ ಪರಿ ವರ್ಣಿಸಲಸಾಧ್ಯ. ಅಲ್ಲಿಯೇ ಪಕ್ಕ ರಭಸದಿಂದ ಹರಿವ ತೊರೆ, ಅವರನ್ನು ಆಪೋಶನ ತೆಗೆದುಕೊಂಡು ಬಿಡುತ್ತವೆಯೇನೋ ಎಂದೆನಿಸುತ್ತದೆ. ಅಷ್ಟೇ ಹೊತ್ತು, ತೊರೆಯ ರಭಸ ನಿಧಾನವಾದಾಗ, ಫಳ್ಳ್ ಎಂದು ಮತ್ತೆ ನಗೆ ಬೀರಿ ತಲೆ ಎತ್ತುತ್ತವೆ.
ಮುಂಗಾರಿನ ಪ್ರಾರಂಭದ ದಿನಗಳಲ್ಲಿ ಮನೆಯ ಅಕ್ಕ-ಪಕ್ಕ ಸಾಮಾನ್ಯವಾಗಿ ಕಂಡು ಬರುವ ಪ್ರಕೃತಿಯ ಸೊಬಗಿನ ದೃಶ್ಯವಿದು. ಪ್ರಕೃತಿ ಸೊಬಗೆಲ್ಲವನ್ನು ಅನುಭವಿಸಬೇಕೆಂದರೆ ಮುಂಗಾರಿನ ವರ್ಷೆಯೇ ನಾವಾಗಬೇಕು... ಆ ವರ್ಷೆ ಚುಂಬಿಸುವ ಇಳೆ ನಾವಾಗಬೇಕು... ಆ ಚುಂಬನಕ್ಕೆ ತಲೆ ಎತ್ತುವ ಗರಿಕೆ ನಾವಾಗಬೇಕು... ಮುಂಜಾನೆಯ ಇಬ್ಬನಿಯ ಮೂಗುತಿ ನಾವಾಗಬೇಕು... ಹೊಳೆಯಾಗಿ ಹರಿಯುವ ತೊರೆ ನಾವಾಗಬೇಕು... ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ಪ್ರಕೃತಿ'ಯೇ ನಾವಾಗಬೇಕು! ಅದು ಸಾಧ್ಯವೇ?
-ನಾಗರಾಜ್ ಬಿ.ಎನ್. 

ಶುಕ್ರವಾರ, ಜೂನ್ 3, 2016


ಬಂದಳು ನನ್ನಾಕೆ ವರ್ಷೆ, ಮಡಿಲು ತುಂಬಲು...

------------------------------------------------------------------------
- ನಾಗರಾಜ್ ಬಿ .ಎನ್.
ಅಂತೂ ನಿರೀಕ್ಷಿಸಿದಂತೆಯೇ ವರ್ಷೆ ನಿಧಾನವಾಗಿ ಉಸಿರು ಬಿಡುತ್ತಿದ್ದಾಳೆ. ಕಾದು ಕೆಂಡವಾಗಿದ್ದ ಇಳೆಯ ಮೈಯ್ಯೆಲ್ಲ ತುಸು ತಂಪು ತಂಪು. ಎಲ್ಲಿಂದಲೋ ಬೀಸಿ ಬರುವ ತಣ್ಣನೆಯ ಗಾಳಿ, ಸೂರ್ಯನ ಶಾಖಕ್ಕೆ ಬಳಲಿ ಬೆಂಡಾಗಿದ್ದ ಮರ-ಗಿಡಗಳ ಮೈ-ಮನವನ್ನು ತಣಿಸುತ್ತಿದೆ. ಸುಳಿವೇ ಇಲ್ಲದ ಪುಟಾಣಿ ಹಕ್ಕಿಗಳು ಅಲ್ಲೊಂದು, ಇಲ್ಲೊಂದು ಹಾರಾಡುತ್ತ ಚಿಲಿಪಿಲಿ ಗುಟ್ಟುತ್ತಿವೆ. ಬೆಳ್ಳಂಬೆಳಿಗೆ ರೋಮದ ನಡುವೆ ಇಳಿಯುತ್ತಿದ್ದ ಝಳಗಳೆಲ್ಲ ಮಾಯ ಮಾಯ. ದೂರದಲ್ಲಿರುವ ಅರಬ್ಬೀಯ ಅಬ್ಬರ ನಿಧಾನವಾಗಿ ಏರುತ್ತಿದೆ. ಇನ್ನೇನೂ ನಾಪತ್ತೆಯಾಗಿಯೇ ಹೋಗುತ್ತೇನೆ ಎಂದು ಅಳುಕುತ್ತಿರುವ ಅಘನಾಶಿನಿ ಬಳುಕಲು ಸಿದ್ಧವಾಗಿದ್ದಾಳೆ......

ಹೌದು, ನೊಂದು-ಬೆಂದ ಮನಕ್ಕೆ ಮುದ ನೀಡಲೆಂದು ನನ್ನವಳು ಬರುತ್ತಿದ್ದಾಳೆ. ಅವಳ ಆಗಮನವೇ ಒಂದು ಮನಮೋಹಕ. ಆಕೆ ಎಂದು ಬರುತ್ತಾಳೋ... ಎಂದು ಮನ ತುಂಬುತ್ತಾಳೋ... ಎಂದು ಬಾಚಿ ತಬ್ಬಿಕೊಳ್ಳುತ್ತಾಳೋ.... ಎಂದೆಲ್ಲ ಹುಚ್ಚು ಹಿಡಿಸಿತ್ತು. ಆದರೆ, ನಿರೀಕ್ಷೆಯಂತೆ ಅವಳು ತನ್ನಿನಿಯನ ತೋಳ ತೆಕ್ಕೆಗೆ ಸೇರಿಕೊಳ್ಳಲು ಅಂಕು-ಡೊಂಕು ಹೆಜ್ಜೆ ಹಾಕುತ್ತ ಬರುತ್ತಿದ್ದಾಳೆ. ಇಷ್ಟು ದಿನ ವಿರಹ ವೇದನೆಯಿಂದ ಬಳಲಿ, ಸೊರಗಿ, ಬೆಂಡಾಗಿದ್ದ ಮನದರಸನ ಮನಕ್ಕೆ, ಹನಿಯ ಸಿಂಚನಗೈಯ್ಯಲಿದ್ದಾಳೆ. ಮನದಣಿಯೇ ಕುಣಿಸಿ, ನಲಿಸಿ ಆಡಿಸಲಿದ್ದಾಳೆ. ಸಾಕು ಎಂದರೂ ಬಿಡದೆ, ಹಠಮಾರಿಯಂತೆ ರಚ್ಚೆ ಹಿಡಿದು ತನ್ನ ಪ್ರತಾಪ ಪ್ರದರ್ಶಿಸಲಿದ್ದಾಳೆ. ಇನ್ನೇನಿದ್ದರೂ ನಾನು ಅವಳ ಮುಂದೆ ಮೂಕ ಪ್ರೇಕ್ಷಕ. ಅವಳಾಡುವ, ಆಡಿಸುವ ಪ್ರತಿಯೊಂದು ಆಟವನ್ನು ಸುಮ್ಮನೇ ನೋಡುತ್ತ, ಒಮ್ಮೊಮ್ಮೆ ಕಣ್ಮುಚ್ಚಿ ಕೇಳುತ್ತಾ ಬಿದ್ದಿರಬೇಕು.
ವರ್ಷೆ ಎಂದರೆ ನನಗೊಂಥರ ಹುಚ್ಚು. ಅವಳಿಗು ಕೂಡಾ ನಾ ಎಂದರೆ ತುಂಬಾ ಅಚ್ಚುಮೆಚ್ಚು. ಒಮ್ಮೊಮ್ಮೆ ಸುಳಿರ್ಗಾಳಿ ಸಮೇತ ಬಂದು, ಮುಂಗುರಳನ್ನು ಸೋಂಕಿ ಮಾಯವಾಗುತ್ತಾಳೆ. ಮತ್ತೊಮ್ಮೆ, ಮೋಡದ ಮರೆಯಲ್ಲಿ ಭಾನು ಇಣುಕಿ ಹಾಕುತಿದ್ದರೂ, ನಾನು ಭಾನು ಮೀರಿದವಳು ಎಂದು ಹೊಳೆಯುವ ಮಿಂಚಿನಂತೆ ಎಳೆ ಎಳೆಯಾಗಿ ಧರೆಗಿಳಿಯುತ್ತಾಳೆ. ಆಗ ಅವಳಂದವನ್ನು ಕಣ್ಣಿಂದ ತುಂಬಿಕೊಳ್ಳಲೋ... ಅಥವಾ, ಎರಡು ಕೈ ಅಗಲಿಸಿ, ಕಣ್ಮುಚ್ಚಿಕೊಂಡು ಅವಳನ್ನು ಬಾಚಿ ತಬ್ಬಿಕೊಳ್ಳಲೋ... ಎಂದು ಒಂದೂ ಅರ್ಥವಾಗುವುದಿಲ್ಲ. ಕೆಲವು ಬಾರಿ, ಬಾನೇ ಕಣ್ಣಾಗಿ ಹೋಯಿತೋ ಎನ್ನುವಂತೆ ರಚ್ಚೆ ಹಿಡಿದು ಒಂದೇ ಸಮನೆ ಸುರಿಯುತ್ತಾಳೆ. 'ಸಾಕು ಮಾರಾಯ್ತಿ ನಿನ್ನ ಉಗ್ರ ರೂಪ, ಹೋಗಿನ್ನು' ಎಂದರೂ ಕೇಳಲೊಲ್ಲಳು. ಮತ್ತೆ ಕೆಲವು ಬಾರಿ, ಅವಳಿಗಾಗಿ ಎಷ್ಟೇ ಪರಿತಪಿಸಿದರೂ ಹತ್ತಿರ ಬರದೆ, ಸುಮ್ಮನೇ ಗೋಳು ಹೊಯ್ದುಕೊಳ್ಳುತ್ತಾಳೆ. 
ಏನೇ ಇರಲಿ..... ಈಗೇನಿದ್ದರೂ ನನ್ನಾಕೆಯ ಪರ್ವ. ಅವಳಾಡುವ ತುಂಟಾಟಕ್ಕೆ ನಾ ಗೋಣು ಅಲುಗಾಡಿಸಲೇಬೇಕು. ಸೋತು ಸುಣ್ಣವಾಗಿ, ನೆಲಕಚ್ಚಲೇಬೇಕು. ಅವಳ ಮುಂದೆ ನಾ ಎಂದೆಂದಿಗೂ ಚಿಕ್ಕ ಮಗುವೇ. ಕಷ್ಟಪಟ್ಟು, ಇಷ್ಟುಪಟ್ಟು ಬಾ... ಬಾ... ಎಂದು ಅತ್ತು, ಗೋಗರೆದು ಕರೆದರೂ ಬರದಾಕೆ; ಈಗ, ಅವಳಿಷ್ಟದಂತೆ ಬಿಂಕದಿಂದ ಬರುತ್ತಿದ್ದಾಳೆ. ಬರಲಿ.. ನನಗೂ ಸಾಕಾಗಿ ಹೋಗಿದೆ, ಎಷ್ಟು ದಿನಾಂತ ಅವಳಿಗಾಗಿ ಕಾದು ಹಂಬಲಿಸುವುದು? ಎಷ್ಟು ದಿನಾಂತ ಅವಳಿಗಾಗಿ ಮುಸ್ಸಂಜೆಯ ಹಾದಿ ಕಾಯುವುದು? ಅವಳ ಬಂದ ಮೇಲೆ, ಅವಳ ಜೊತೆ ಒಂದು ದಿನ ಪೂರ್ತಿ ಸುಮ್ಮನೇ ಕಾನನ ಸುತ್ತಬೇಕು. ಎಲೆಗಳ ಮೇಲೆ ಅವಳಾಡುವ ನಾಟ್ಯದ ಭಂಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು. ತಾಯಿ ಇರುವೆ ಜೊತೆ, ಮರಿ ಇರುವೆ ಹಾಗೂ ಅದರ ಬಳಗ ಸಾಲಾಗಿ ಮೆರವಣಿಗೆ ಹೋಗುವುದನ್ನು ಅಚ್ಚರಿಯಿಂದ ನೋಡಬೇಕು. ಅಲ್ಲಿಯೇ, ಪುಟ್ಟದಾಗಿ ನಾಚುತ್ತ ತಲೆ ಎತ್ತುವ ಗರಿಕೆಯ ಕಿರೀಟ ತದೇಕ ಚಿತ್ತದಿಂದ ನೋಡುತ್ತಾ ನಿಲ್ಲಬೇಕು...! ವರ್ಷೆ ನನ್ನ ಮೈ ಮನವನ್ನೆಲ್ಲ ಆವರಿಸಬೇಕು.... 
ಸದ್ಯ ನನ್ನವಳ ಬಗ್ಗೆ ಇಷ್ಟು ಸಾಕು.... ಮುಂದೆ, ಇನ್ನಷ್ಟು.