ಭಾನುವಾರ, ಜೂನ್ 12, 2016

'ಇಬ್ಬನಿಯ ಮೂಗುತಿ' ನಾವಾಗಬೇಕು, ಆದರೆ...
ಒಳಗೊಳಗೆ ಬುಸುಗುಟ್ಟಿ ಕುದಿದು, ದಾವಾಗ್ನಿಯ ಹೊಗೆಯನ್ನು ಹೊರಹಾಕುತ್ತಿದ್ದ ಇಳೆ ನಿಧಾನವಾಗಿ ಶಾಂತವಾಗುತ್ತಿದ್ದಾಳೆ. ಕ್ಷಣ ಕ್ಷಣಕ್ಕೂ ದೂಳನ್ನೆಬ್ಬಿಸುತ್ತ, 'ಈ ಬಿಸಿಲಿನ ಉರಿ ನಾ ತಾಳೆನು' ಎನ್ನುತ್ತಿದ್ದ ಅವಳು ಈಗ ಹಸಿ ಮುದ್ದೆಯಾಗಿ ಸುಮ್ಮನೆ ಬಿದ್ದಿದ್ದಾಳೆ. ಸದ್ದಿಲ್ಲದೆ ತನ್ನ ಗರ್ಭದಲ್ಲಿ ಸಮರೋಪಾದಿಯಲ್ಲಿ ಸೃಷ್ಟಿ ಕ್ರಿಯೆಗೆ ಸನ್ನದ್ಧವಾಗುತ್ತಿದ್ದಾಳೆ.
ಮುಂಗಾರು ಪೂರ್ವವೇ ವರ್ಷೆ ಇಳೆಗೆ ಮುತ್ತಿಕ್ಕಿ ಬಿಟ್ಟಿದೆ. ಸೊರಗಿ, ಬರಡಾಗಿ ಹೋಗಿದ್ದ ನೆಲವೆಲ್ಲ ಹಸಿಯಾಗಿ, ಮೆದುವಾಗಿ ಅಸಂಖ್ಯಾತ ಕೋಟಿ, ಕೋಟಿ ಸೃಷ್ಟಿಗೆ ಅಣಿಯಾಗುತ್ತಿದೆ. ಕರಾವಳಿ, ಮಲೆನಾಡು, ಬಯಲುಸೀಮೆ ಎಂಬ ಯಾವೊಂದು ಬೇಧವಿಲ್ಲದೆ, ಬಾನಂಗಳದಲ್ಲಿ ಮೋಡಕಟ್ಟಿ ತೊಪ ತೊಪನೆ ವರ್ಷೆ ಧರೆಗಿಳಿದಿವೆ. ಅಧಿಕೃತ ವರ್ಷಾಗಮನದ ಪೂರ್ವ ಸುರಿದ ಈ ರಭಸದ ವರ್ಷೆಗೆ, ಇಳೆ ಫುಲ್ ಖುಷ್ ಆಗಿಬಿಟ್ಟಿದ್ದಾಳೆ. ನಿದ್ದೆಗಣ್ಣಿನಿಂದ ಎಚ್ಚೆತ್ತವಳಂತೆ, ಲಗುಬಗೆಯಲ್ಲಿ ಮೈ-ಮನವನ್ನೆಲ್ಲ ಸಿಂಗರಿಸಿಕೊಂಡು, ಗೋಣನ್ನು ಮೇಲಕ್ಕೆತ್ತಿ ಮೋಡಕ್ಕೆ ಮತ್ತೆ ಬಾಯಾನಿಸಿದ್ದಾಳೆ.
ವರ್ಷೆ ಬಲಗಾಲಿಟ್ಟು ಅಧಿಕೃತವಾಗಿ ಇಳೆಯ ಹೊಸಿಲು ತುಳಿಯುವುದೊಂದೆ ಬಾಕಿ. ಎಲ್ಲಿಯೋ ಅವಿತಿದ್ದ, ಇಷ್ಟು ದಿನ ಕಂಡೂ ಕಾಣದ ಹಾಗೆ ಮರೆಯಾಗಿದ್ದ ಹಸಿರು ಕಿರೀಟಧಾರಿಗಳು ನಿಧಾನವಾಗಿ ತಲೆ ಎತ್ತಲಿದ್ದಾರೆ. ಮುಂಜಾನೆದ್ದು ನೋಡಿದಾಗ, 'ಅರೇ, ಇವರೆಲ್ಲಿಂದ ಬಂದರಪ್ಪಾ?' ಎಂದು ಆಶ್ಚರ್ಯದಿಂದ ಹುಬ್ಬೇರಿಸಬೇಕು. ಹಾದಿ-ಬೀದಿ ನೋಡದೆ ಎಲ್ಲೆಂದರಲ್ಲಿ ಅವತರಿಸಿ, ದಿನಕಳೆದಂತೆ ಹಸಿರಿನ ಹಾಸಿಗೆಯನ್ನೇ ನೇಯುವ ಇವರು ಅಪ್ರತಿಮ ಕಲಾಕಾರರು. ಮೂಡಣದಿ ಬಾನು ರಂಗೇರುವಾಗ ಅವರು ಧಿರಿಸುವ ಇಬ್ಬನಿಯ ಮೂಗುತಿ ಫಳಫಳನೆ ಪ್ರತಿಫಲಿಸುತ್ತವೆ. ಅರೇ ಕ್ಷಣದಲ್ಲಿ ಆ ಮೂಗುತಿ ಅಲ್ಲಿಯೇ ಕರಗಿ ಮಾಯವಾಗಿ ಬಿಡುತ್ತದೆ. ಆಹಾ! ಎಂಥಹ ಸೌಂದರ್ಯ.
ತಂಗಾಳಿಗೆ ಮೈಯೊಡ್ಡಿ ಅವರು ತಲೆದೂಗುವ ಪರಿ ಪ್ರಕೃತಿ ಸೊಬಗಿನ ಅಚ್ಚರಿಯಲ್ಲೊಂದು. ರಭಸದ ವರ್ಷೆಗೂ ಒಂದಿನಿತು ಅಳಕದೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನೀತಿ ಪಾಠ ಹೇಳುವ ಅವರು ಯಾವ ತತ್ವಜ್ಞಾನಿಗೂ ಕಡಿಮೆಯೇನಿಲ್ಲ. ನೆತ್ತಿಯ ಮೇಲೆ ಭಾನು ಬಂದಾಗ, ನಸುನಕ್ಕು... ಬಾಯಗಲಿಸಿ ಅವನ ಜೊತೆ ಮಾತಿಗಿಳಿಯುವ ಪರಿ ವರ್ಣಿಸಲಸಾಧ್ಯ. ಅಲ್ಲಿಯೇ ಪಕ್ಕ ರಭಸದಿಂದ ಹರಿವ ತೊರೆ, ಅವರನ್ನು ಆಪೋಶನ ತೆಗೆದುಕೊಂಡು ಬಿಡುತ್ತವೆಯೇನೋ ಎಂದೆನಿಸುತ್ತದೆ. ಅಷ್ಟೇ ಹೊತ್ತು, ತೊರೆಯ ರಭಸ ನಿಧಾನವಾದಾಗ, ಫಳ್ಳ್ ಎಂದು ಮತ್ತೆ ನಗೆ ಬೀರಿ ತಲೆ ಎತ್ತುತ್ತವೆ.
ಮುಂಗಾರಿನ ಪ್ರಾರಂಭದ ದಿನಗಳಲ್ಲಿ ಮನೆಯ ಅಕ್ಕ-ಪಕ್ಕ ಸಾಮಾನ್ಯವಾಗಿ ಕಂಡು ಬರುವ ಪ್ರಕೃತಿಯ ಸೊಬಗಿನ ದೃಶ್ಯವಿದು. ಪ್ರಕೃತಿ ಸೊಬಗೆಲ್ಲವನ್ನು ಅನುಭವಿಸಬೇಕೆಂದರೆ ಮುಂಗಾರಿನ ವರ್ಷೆಯೇ ನಾವಾಗಬೇಕು... ಆ ವರ್ಷೆ ಚುಂಬಿಸುವ ಇಳೆ ನಾವಾಗಬೇಕು... ಆ ಚುಂಬನಕ್ಕೆ ತಲೆ ಎತ್ತುವ ಗರಿಕೆ ನಾವಾಗಬೇಕು... ಮುಂಜಾನೆಯ ಇಬ್ಬನಿಯ ಮೂಗುತಿ ನಾವಾಗಬೇಕು... ಹೊಳೆಯಾಗಿ ಹರಿಯುವ ತೊರೆ ನಾವಾಗಬೇಕು... ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ಪ್ರಕೃತಿ'ಯೇ ನಾವಾಗಬೇಕು! ಅದು ಸಾಧ್ಯವೇ?
-ನಾಗರಾಜ್ ಬಿ.ಎನ್. 

ಕಾಮೆಂಟ್‌ಗಳಿಲ್ಲ: