ಶುಕ್ರವಾರ, ಜೂನ್ 3, 2016


ಬಂದಳು ನನ್ನಾಕೆ ವರ್ಷೆ, ಮಡಿಲು ತುಂಬಲು...

------------------------------------------------------------------------
- ನಾಗರಾಜ್ ಬಿ .ಎನ್.
ಅಂತೂ ನಿರೀಕ್ಷಿಸಿದಂತೆಯೇ ವರ್ಷೆ ನಿಧಾನವಾಗಿ ಉಸಿರು ಬಿಡುತ್ತಿದ್ದಾಳೆ. ಕಾದು ಕೆಂಡವಾಗಿದ್ದ ಇಳೆಯ ಮೈಯ್ಯೆಲ್ಲ ತುಸು ತಂಪು ತಂಪು. ಎಲ್ಲಿಂದಲೋ ಬೀಸಿ ಬರುವ ತಣ್ಣನೆಯ ಗಾಳಿ, ಸೂರ್ಯನ ಶಾಖಕ್ಕೆ ಬಳಲಿ ಬೆಂಡಾಗಿದ್ದ ಮರ-ಗಿಡಗಳ ಮೈ-ಮನವನ್ನು ತಣಿಸುತ್ತಿದೆ. ಸುಳಿವೇ ಇಲ್ಲದ ಪುಟಾಣಿ ಹಕ್ಕಿಗಳು ಅಲ್ಲೊಂದು, ಇಲ್ಲೊಂದು ಹಾರಾಡುತ್ತ ಚಿಲಿಪಿಲಿ ಗುಟ್ಟುತ್ತಿವೆ. ಬೆಳ್ಳಂಬೆಳಿಗೆ ರೋಮದ ನಡುವೆ ಇಳಿಯುತ್ತಿದ್ದ ಝಳಗಳೆಲ್ಲ ಮಾಯ ಮಾಯ. ದೂರದಲ್ಲಿರುವ ಅರಬ್ಬೀಯ ಅಬ್ಬರ ನಿಧಾನವಾಗಿ ಏರುತ್ತಿದೆ. ಇನ್ನೇನೂ ನಾಪತ್ತೆಯಾಗಿಯೇ ಹೋಗುತ್ತೇನೆ ಎಂದು ಅಳುಕುತ್ತಿರುವ ಅಘನಾಶಿನಿ ಬಳುಕಲು ಸಿದ್ಧವಾಗಿದ್ದಾಳೆ......

ಹೌದು, ನೊಂದು-ಬೆಂದ ಮನಕ್ಕೆ ಮುದ ನೀಡಲೆಂದು ನನ್ನವಳು ಬರುತ್ತಿದ್ದಾಳೆ. ಅವಳ ಆಗಮನವೇ ಒಂದು ಮನಮೋಹಕ. ಆಕೆ ಎಂದು ಬರುತ್ತಾಳೋ... ಎಂದು ಮನ ತುಂಬುತ್ತಾಳೋ... ಎಂದು ಬಾಚಿ ತಬ್ಬಿಕೊಳ್ಳುತ್ತಾಳೋ.... ಎಂದೆಲ್ಲ ಹುಚ್ಚು ಹಿಡಿಸಿತ್ತು. ಆದರೆ, ನಿರೀಕ್ಷೆಯಂತೆ ಅವಳು ತನ್ನಿನಿಯನ ತೋಳ ತೆಕ್ಕೆಗೆ ಸೇರಿಕೊಳ್ಳಲು ಅಂಕು-ಡೊಂಕು ಹೆಜ್ಜೆ ಹಾಕುತ್ತ ಬರುತ್ತಿದ್ದಾಳೆ. ಇಷ್ಟು ದಿನ ವಿರಹ ವೇದನೆಯಿಂದ ಬಳಲಿ, ಸೊರಗಿ, ಬೆಂಡಾಗಿದ್ದ ಮನದರಸನ ಮನಕ್ಕೆ, ಹನಿಯ ಸಿಂಚನಗೈಯ್ಯಲಿದ್ದಾಳೆ. ಮನದಣಿಯೇ ಕುಣಿಸಿ, ನಲಿಸಿ ಆಡಿಸಲಿದ್ದಾಳೆ. ಸಾಕು ಎಂದರೂ ಬಿಡದೆ, ಹಠಮಾರಿಯಂತೆ ರಚ್ಚೆ ಹಿಡಿದು ತನ್ನ ಪ್ರತಾಪ ಪ್ರದರ್ಶಿಸಲಿದ್ದಾಳೆ. ಇನ್ನೇನಿದ್ದರೂ ನಾನು ಅವಳ ಮುಂದೆ ಮೂಕ ಪ್ರೇಕ್ಷಕ. ಅವಳಾಡುವ, ಆಡಿಸುವ ಪ್ರತಿಯೊಂದು ಆಟವನ್ನು ಸುಮ್ಮನೇ ನೋಡುತ್ತ, ಒಮ್ಮೊಮ್ಮೆ ಕಣ್ಮುಚ್ಚಿ ಕೇಳುತ್ತಾ ಬಿದ್ದಿರಬೇಕು.
ವರ್ಷೆ ಎಂದರೆ ನನಗೊಂಥರ ಹುಚ್ಚು. ಅವಳಿಗು ಕೂಡಾ ನಾ ಎಂದರೆ ತುಂಬಾ ಅಚ್ಚುಮೆಚ್ಚು. ಒಮ್ಮೊಮ್ಮೆ ಸುಳಿರ್ಗಾಳಿ ಸಮೇತ ಬಂದು, ಮುಂಗುರಳನ್ನು ಸೋಂಕಿ ಮಾಯವಾಗುತ್ತಾಳೆ. ಮತ್ತೊಮ್ಮೆ, ಮೋಡದ ಮರೆಯಲ್ಲಿ ಭಾನು ಇಣುಕಿ ಹಾಕುತಿದ್ದರೂ, ನಾನು ಭಾನು ಮೀರಿದವಳು ಎಂದು ಹೊಳೆಯುವ ಮಿಂಚಿನಂತೆ ಎಳೆ ಎಳೆಯಾಗಿ ಧರೆಗಿಳಿಯುತ್ತಾಳೆ. ಆಗ ಅವಳಂದವನ್ನು ಕಣ್ಣಿಂದ ತುಂಬಿಕೊಳ್ಳಲೋ... ಅಥವಾ, ಎರಡು ಕೈ ಅಗಲಿಸಿ, ಕಣ್ಮುಚ್ಚಿಕೊಂಡು ಅವಳನ್ನು ಬಾಚಿ ತಬ್ಬಿಕೊಳ್ಳಲೋ... ಎಂದು ಒಂದೂ ಅರ್ಥವಾಗುವುದಿಲ್ಲ. ಕೆಲವು ಬಾರಿ, ಬಾನೇ ಕಣ್ಣಾಗಿ ಹೋಯಿತೋ ಎನ್ನುವಂತೆ ರಚ್ಚೆ ಹಿಡಿದು ಒಂದೇ ಸಮನೆ ಸುರಿಯುತ್ತಾಳೆ. 'ಸಾಕು ಮಾರಾಯ್ತಿ ನಿನ್ನ ಉಗ್ರ ರೂಪ, ಹೋಗಿನ್ನು' ಎಂದರೂ ಕೇಳಲೊಲ್ಲಳು. ಮತ್ತೆ ಕೆಲವು ಬಾರಿ, ಅವಳಿಗಾಗಿ ಎಷ್ಟೇ ಪರಿತಪಿಸಿದರೂ ಹತ್ತಿರ ಬರದೆ, ಸುಮ್ಮನೇ ಗೋಳು ಹೊಯ್ದುಕೊಳ್ಳುತ್ತಾಳೆ. 
ಏನೇ ಇರಲಿ..... ಈಗೇನಿದ್ದರೂ ನನ್ನಾಕೆಯ ಪರ್ವ. ಅವಳಾಡುವ ತುಂಟಾಟಕ್ಕೆ ನಾ ಗೋಣು ಅಲುಗಾಡಿಸಲೇಬೇಕು. ಸೋತು ಸುಣ್ಣವಾಗಿ, ನೆಲಕಚ್ಚಲೇಬೇಕು. ಅವಳ ಮುಂದೆ ನಾ ಎಂದೆಂದಿಗೂ ಚಿಕ್ಕ ಮಗುವೇ. ಕಷ್ಟಪಟ್ಟು, ಇಷ್ಟುಪಟ್ಟು ಬಾ... ಬಾ... ಎಂದು ಅತ್ತು, ಗೋಗರೆದು ಕರೆದರೂ ಬರದಾಕೆ; ಈಗ, ಅವಳಿಷ್ಟದಂತೆ ಬಿಂಕದಿಂದ ಬರುತ್ತಿದ್ದಾಳೆ. ಬರಲಿ.. ನನಗೂ ಸಾಕಾಗಿ ಹೋಗಿದೆ, ಎಷ್ಟು ದಿನಾಂತ ಅವಳಿಗಾಗಿ ಕಾದು ಹಂಬಲಿಸುವುದು? ಎಷ್ಟು ದಿನಾಂತ ಅವಳಿಗಾಗಿ ಮುಸ್ಸಂಜೆಯ ಹಾದಿ ಕಾಯುವುದು? ಅವಳ ಬಂದ ಮೇಲೆ, ಅವಳ ಜೊತೆ ಒಂದು ದಿನ ಪೂರ್ತಿ ಸುಮ್ಮನೇ ಕಾನನ ಸುತ್ತಬೇಕು. ಎಲೆಗಳ ಮೇಲೆ ಅವಳಾಡುವ ನಾಟ್ಯದ ಭಂಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು. ತಾಯಿ ಇರುವೆ ಜೊತೆ, ಮರಿ ಇರುವೆ ಹಾಗೂ ಅದರ ಬಳಗ ಸಾಲಾಗಿ ಮೆರವಣಿಗೆ ಹೋಗುವುದನ್ನು ಅಚ್ಚರಿಯಿಂದ ನೋಡಬೇಕು. ಅಲ್ಲಿಯೇ, ಪುಟ್ಟದಾಗಿ ನಾಚುತ್ತ ತಲೆ ಎತ್ತುವ ಗರಿಕೆಯ ಕಿರೀಟ ತದೇಕ ಚಿತ್ತದಿಂದ ನೋಡುತ್ತಾ ನಿಲ್ಲಬೇಕು...! ವರ್ಷೆ ನನ್ನ ಮೈ ಮನವನ್ನೆಲ್ಲ ಆವರಿಸಬೇಕು.... 
ಸದ್ಯ ನನ್ನವಳ ಬಗ್ಗೆ ಇಷ್ಟು ಸಾಕು.... ಮುಂದೆ, ಇನ್ನಷ್ಟು.

ಕಾಮೆಂಟ್‌ಗಳಿಲ್ಲ: