ಮೌನ ಗರ್ಭದಲಿ........!!!!!!!!!
ಯಾಕೋ..... ಮಳೆ ಎಂದರೆ, ಮನಸ್ಸೇ ಹುಚ್ಚೆದ್ದು ಕುಣಿಯುತ್ತದೆ. ಮೈ-ಮನವೆಲ್ಲ ಪುಲಕಿತವನ್ನಾಗಿಸುತ್ತದೆ. ಸೃಷ್ಠಿ ಕ್ರಿಯೆಯಲ್ಲಿ ಮಳೆಗಿರುವ ಉತ್ಕೃಷ್ಠ ಸ್ಥಾನ ಬಹುಶಃ ಇನ್ಯಾವುದಕ್ಕೂ ಇಲ್ಲವೇನೋ....!ಮುಂಗಾರು ಪ್ರಾರಂಭವಾಗುವುದೇ ತಡ, ಸದ್ದಿಲ್ಲದೆ ಇಳೆ ಹಸಿರಾಗುತ್ತಾಳೆ. ಬಿರು ಬಿಸಲ ಬೇಸಿಗೆಯಿಂದ ಬಾಯ್ತೆರೆದ ಬರಡು ಜಾಗದಲ್ಲೆಲ್ಲ ಹಸಿರು. ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರೋ... ಹಸಿರು...!! ಹಸಿರು ಹೊದ್ದ ಭೂಮ್ತಾಯಿ ಕಾರ್ಮುಗಿಲನ್ನೇ ದಿಟ್ಟಿಸಿ ನೋಡುವ ದೃಶ್ಯ ವರ್ಣನಾತೀತ!
ದಿನಂಪ್ರತಿ ಓಡಾಡುತ್ತಿರುವ ಸುತ್ತಮುತ್ತಲಿನ ಸ್ಥಳದಲ್ಲೆಲ್ಲ, ಈವರೆಗೆ ಇಲ್ಲದ ಹಸಿರುಗಳು ಚಿಕ್ಕದಾಗಿ ತಲೆ ಎತ್ತಿ ನಿಂತಿವೆ. ಅವುಗಳ ಮೇಲೆ ಬಿದ್ದ ಮಳೆ ಹನಿ, ಮೋಡದ ಮರೆಯಲ್ಲಿ ಇಣುಕು ಹಾಕುವ ರವಿಯ ನೋಟಕ್ಕೆ ನಾಚಿ ನೀರಾಗುತ್ತಿದೆ. ತಂಪನೆಯ ಬೀಸುವ ತಂಗಾಳಿಗೆ ಓಲಾಡುತ್ತ, ಫಳಫಳಿಸಿ ಅಲ್ಲೇ ಮರೆಯಾಗುತ್ತಿದೆ. ಪ್ರಕೃತಿಯ ಮಡಿಲಲ್ಲಿ ಸೃಷ್ಟಿಯಾಗುವ ಈ ನಿಸರ್ಗ ಸೌಂದರ್ಯಕ್ಕೆ ಮೈ-ಮನವೆಲ್ಲ ಪುಳಕ.
ಬೆಟ್ಟ-ಗುಡ್ಡಗಳೆಲ್ಲ ಮಂಜಿನಿಂದ ಆವರಿಸಿಕೊಂಡು, ಇಲ್ಲಿ ಕೇವಲ ಹಸಿರಿಗಷ್ಟೇ ಸ್ಥಾನಮಾನ... ಏನಿದ್ದರೂ ಅದರದ್ದೇ ಕಾರು ಬಾರು' ಎಂದು ತಮ್ಮ ಇರುವಿಕೆಯನ್ನೇ ಮರೆ ಮಾಚಿಸುತ್ತಾರೆ. ಭೋರ್ಗರೆದು ಸುರಿವ ವರ್ಷಧಾರೆಗೆ ಹಾದಿ-ಬೀದಿಗಳಲ್ಲೆಲ್ಲ ಹೊಂಡಬಿದ್ದು, ನೀರು ತುಂಬಿಕೊಂಡು... ಕಾರ್ಮುಗಿಲ ಮೋಡವನ್ನು ಅದರಲ್ಲಿ ಪ್ರತಿಫಲಿಸುತ್ತವೆ. ನಿಮಿಷಾರ್ಧದಲ್ಲಿ ಬಿಸಿಲು.... ಕಣ್ಣು ಮಿಟುಕಿಸುವಷ್ಟರಲ್ಲಿ ಮತ್ತೆ ವರ್ಷ...!! ಅವರಿಬ್ಬರ ಕಣ್ಣಾ-ಮುಚ್ಚಾಲೆಯಾಟ ಕಣ್ತುಂಬಿಸಿಕೊಳ್ಳುವುದೇ ಒಂದು ಹಿತಾನುಭವ. ಹಸಿ-ಹಸಿ ಮನಸ್ಸಲ್ಲಿ ಬೆಚ್ಚನೆಯ ನೆನಪುಗಳ ಮೆರವಣಿಗೆ....!! ಬಾನಂಗಳದಿ ಕಾರ್ಮೋಡ ಸರಿಯುವವರೆಗೂ....!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ