ಸಂಬಂಧಗಳು ಕೂಡಿ ಕಳೆಯುವ ಲೆಕ್ಕಾಚಾರವೇ...?
ಕಾಲಾಯ ತಸ್ಮೈ ನಮಃ.................!
'ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಗಳಿರಾ....' ಎಂಬಂತೆ ಭಗವಂತ ನೀಡಿದ ಸುಂದರ ಮಾನವ ಜನ್ಮವನ್ನು ಪ್ರೀತಿ, ಸ್ನೇಹ, ವಿಶ್ವಾಸದಿಂದ ಕಾಪಾಡಿಕೊಂಡು ಹೋಗಬೇಕು. ನಂಬಿ ಬಂದ ಬಾಳ ಸಂಗಾತಿಯ ಜೊತೆ ನಂಬಿಕಸ್ಥರಾಗಿ ಬದುಕಿನ ಬಂಡಿಯನ್ನು ಮುನ್ನಡೆಸಬೇಕು. ಮನಸ್ಸು ಮತ್ತು ದೇಹ ಒಬ್ಬರಿಗೇ ಮೀಸಲಾಗಿ ಸಮರ್ಪಣಾ ಭಾವದಿಂದ ದಾಂಪತ್ಯ ಗೀತೆಯನ್ನು ಬರೆಯಬೇಕು.....
ನಾಗರಾಜ್ ಬಿ.ಎನ್.
ಕಾಲಚಕ್ರದ ಉರುಳಾಟದಲ್ಲಿ ಬದುಕಿನ ಶೈಲಿಯೂ ಹಂತ ಹಂತವಾಗಿ ಬದಲಾಗಿಬಿಟ್ಟಿದೆ. ಪ್ರತಿಕ್ಷಣವೂ ಕೂಡಾ ಆಧುನಿಕತೆಯ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿ ಒದ್ದಾಡುತ್ತಿದ್ದೇವೆ. ಮಾನವ ಸಂಬಂಧಗಳೆಲ್ಲ ಕೂಡಿ-ಕಳೆಯುವ ಲೆಕ್ಕಾಚಾರವಾಗಿ, ವ್ಯವಹಾರದ ದ್ಯೋತಕವಾಗಿಬಿಟ್ಟಿದೆ. ಸಂಸ್ಕಾರ, ಸಂಸ್ಕೃತಿ ಎನ್ನುವುದು ಮಖಾಡೆ ಮಲಗಿ ಇನ್ನಿಲ್ಲವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂದರೆ ಇದೇನಾ....!!? ಹಿರಿಯರು ನಡೆದ ಸನ್ಮಾರ್ಗಗಳು ಈಗ ಮುಸುಕು ಮುಸುಕಾಗಿ, ಕಂಡೂ ಕಾಣದಂತಾಗಿವೆ. ಅವರ ಭವ್ಯ ಪರಂಪರೆ ಅವರ ಜೊತೆ ಜೊತೆಯಲ್ಲಿಯೇ ಮಣ್ಣಾಗಿ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಆ ಬದುಕು ಬೇಕೆನಿಸಿದರೂ ಈಗ ನಮಗೆ ಸಿಗಲಾರದು. ಈಗೇನಿದ್ದರೂ ವ್ಯಾವಹಾರಿಕ ಜಗತ್ತಿನ ಬೇಕು-ಬೇಡಗಳ ಜೀವನ ಮಾತ್ರ. ಲೌಕಿಕ ಪ್ರಪಂಚದಲ್ಲಿ ಸ್ವಾರ್ಥಕ್ಕೆ ಪ್ರಾಮುಖ್ಯತೆ ನೀಡಿ ನಮ್ಮದಾದಂತ ಸಂಸ್ಕಾರವನ್ನೇ ಅಧೋಗತಿಗೆ ಕೊಂಡೊಯ್ಯುತ್ತಿದ್ದೇವೆ.
ಸ್ವೇಚ್ಛಾಚಾರದ ಬದುಕು ಬೇಕೇ...?
ಈ ಹಿಂದೆ ನಮ್ಮ ಶರಣರು ದೇಹವನ್ನು ದೇವಾಲಯಕ್ಕೆ ಹೋಲಿಸಿ 'ದೇಹವೆ ದೇವಾಲಯ' ಎಂದು ಹಾಡಿ ಹೊಗಳಿದ್ದರು. ದೇಹದಲ್ಲಿರುವ ಜೀವಾತ್ಮನಿಗೆ ಪರಮಾತ್ಮನ ಸ್ಥಾನ ನೀಡಿ, ಪೂಜಿಸಿ, ಆರಾಧಿಸಿ ಎಂದು ಸೂಕ್ಷ್ಮವಾಗಿ ತಿಳಿ ಹೇಳಿದ್ದರು. ಅಷ್ಟೊಂದು ಉತ್ಕೃಷ್ಠ ಸ್ಥಾನಕ್ಕೆ ಏರಿಸಿದ ದೇಹ, ಪ್ರಸ್ತುತ ದಿನಗಳಲ್ಲಿ ವ್ಯಾವಹಾರಿಕ ಸರಕಾಗುತ್ತಿರುವುದು ವಿಪಯರ್ಾಸದ ಸಂಗತಿ....! ಈ ಜಗತ್ತಿನಲ್ಲಿ ಹಣಕ್ಕಾಗಿ ಏನೆಲ್ಲ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಕಾಯಾ, ವಾಚಾ, ಮನಸಾ ಜೀವನ ಪರ್ಯಂತ ಜೊತೆಯಾಗಿಯೇ ಬಾಳಿ ಬದುಕುತ್ತೇನೆ ಎಂದು ಹೇಳಿದವರು, ಎಲ್ಲ ರೀತಿ-ನೀತಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವತರ್ಿಸುತ್ತಾರೆ. ನಾಲ್ಕು ಗೋಡೆಗಳ ನಡುವೆ ಮಾತ್ರ ಸೀಮಿತವಾಗಿರಬೇಕಾದ ಕೆಲವು ವೈಯಕ್ತಿಕ ಬದುಕು, ಹಾದಿ-ಬೀದಿಯಲ್ಲಿ ಹರಾಜಾಗುತ್ತಿವೆ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ಆಡುವವರ ನಾಲಿಗೆಯ ಮೇಲೆ ಅಂಕೆಯಿಲ್ಲದೆ ಅದು ಹರಿದಾಡುತ್ತಿದೆ. ಆದರೂ ಕೂಡಾ ಇದ್ಯಾವುದರ ಪರಿವೇ ಇಲ್ಲದಂತೆ ಸ್ವೇಚ್ಛೆಯಿಂದ ಬದುಕು ಮುನ್ನಡೆಸುತ್ತಾರೆ.ದೈವ ಸಂಕಲ್ಪಿತ ಜೋಡಿಗಳು....!!ದಾಂಪತ್ಯದ ಗೀತೆ ಹಾಡಿದವರೇ ಇರಲಿ... ಪ್ರೇಮ ರಾಗದಲ್ಲಿ ಓಲಾಡುತ್ತಿರುವ ಜೋಡಿಗಳೇ ಇರಲಿ... ಇಬ್ಬರು ಸಹ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳಬೇಕು.
'ಒಂದು ಗಂಡಿಗೊಂದು ಹೆಣ್ಣು' ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಮಾತಿನಂತೆ, ನಂಬಿ ಬಂದ ಹುಡಗಿ/ಹುಡುಗನಿಗೆ ಜೀವನ ಪರ್ಯಂತ ನಂಬಿಕಸ್ಥರಾಗಿಯೇ ಬದುಕಬೇಕು. ಹೆಣ್ಣು ಹೇಗೆ ತನ್ನ ಗಂಡ ಶ್ರೀರಾಮನಂತೆ ಇರಬೇಕೆಂದು ಬಯಸುತ್ತಾಳೆಯೋ ಹಾಗೆಯೇ, ಗಂಡು ಕೂಡಾ ತನ್ನ ಹೆಂಡತಿ ಸೀತೆಯಂತೆಯೇ ಇರಬೇಕೆಂದು ಬಯಸುವುದರಲ್ಲಿ ಯಾವ ತಪ್ಪಿಲ್ಲ ಅಲ್ಲವೇ?
ಅಮ್ಮನ ಮಡಿಲಲ್ಲಿ ಬೆಳೆದ ಹುಡುಗ ಮದುವೆಯಾದ ನಂತರ ಜೊತೆಯಾಗಿ ಬಂದ ಹುಡುಗಿಯ ಜೊತೆ ಬಾಳಿ ಬದುಕ ಬೇಕಾಗುತ್ತದೆ. ಅವನಿಗೆ ಅವಳೇ ಸರ್ವಸ್ವವಾಗಿ, ತನ್ನೆಲ್ಲ ಬೇಕು ಬೇಡಗಳನ್ನು ಪೂರೈಸುವ ದೇವತೆಯಾಗುತ್ತಾಳೆ. ಹಾಗೆಯೇ, ಹೆಣ್ಣು ಕೂಡಾ ತನ್ನೆಲ್ಲ ರಕ್ತ ಸಂಬಂಧಿಗಳನ್ನು ಬಿಟ್ಟು ಸುಂದರ ಬದುಕಿನ ಕನಸು ಕಟ್ಟಿಕೊಂಡು ಹುಡುಗನನ್ನು ಹಿಂಬಾಲಿಸುತ್ತಾಳೆ. ಅವಳ ಪಾಲಿಗೆ ಆಕೆಯ ಗಂಡ ಸಾಕ್ಷಾತ್ ಭಗವಂತನೇ...!! ಹೀಗೆ ಇಬ್ಬರೂ ಕೂಡಾ ಪರಸ್ಪರ ಒಬ್ಬರಿಗೊಬ್ಬರು ದೈವ ಸಮಾನರಾಗಿ ಕಂಡು ಬರುತ್ತಾರೆ. ಇಂತಹ ಅದ್ಭುತ ದೈವ ಸಂಕಲ್ಪಿತ ಕೆಲವು ಜೋಡಿಗಳು ಬರ ಬರುತ್ತ ಹಾದಿ ತಪ್ಪಿ ಎಲ್ಲೆ ಮೀರುತ್ತಿರುವುದು ವಿಷಾದನೀಯ.
ಪಿಸುಮಾತಿನ ಪ್ರೀತಿ.....!!
ಪ್ರೀತಿ ಯಾವಾಗಲೂ ಒತ್ತಾಯ ಪೂರ್ವಕವಾಗಿ ಹುಟ್ಟಿಕೊಳ್ಳುವುದಿಲ್ಲ. ಅದೊಂದು ಆಕಸ್ಮಿಕ ಅವಘಡ. ಆ ಸನ್ನಿವೇಶದಲ್ಲಿ ಮೇಳೈಸಿದ ಹೃದಯಾಂತರಾಳದ ಪ್ರೀತಿ ಪರಸ್ಪರ ವಿನಿಮಯ ಮಾಡಿಕೊಂಡಾಗ ಅದು ಅರ್ಥ ಪಡೆದುಕೊಳ್ಳುತ್ತದೆ. ಆಗ ಸುಂದರ ಪ್ರೀತಿಯ ಮಹಾಕಾವ್ಯ ರಚನೆಯಾಗಿ, ಪರಸ್ಪರ ಬದುಕಿಗೆ ಸ್ಪೂರ್ತಿಯಾಗುತ್ತದೆ. ಅಲ್ಲಿ ಮನಸ್ಸುಗಳು ಪಿಸುಮಾತಿನೊಂದಿಗೆ ಬೆರೆತಿರುತ್ತವೆ. ಕನಸಿನ ಗೂಡನ್ನು ಹೆಣೆದುಕೊಂಡು ನೀಲಾಕಾಸದಲ್ಲಿ ತೇಲಾಡುತ್ತಿರುತ್ತವೆ. ಅಂದರೆ ಮಾನಸಿಕವಾಗಿ ಅವರ ಮನಸ್ಸುಗಳು ಒಂದಾಗಿರುತ್ತವೆ
ಹೀಗೆ ಒಂದಾದ ಮನಸ್ಸುಗಳು ಉದ್ದೇಶ ಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ದೂರಾಗುತ್ತವೆ. ಆಗ ಆ ಮನಸ್ಸುಗಳು ಇನ್ನೊಂದು ಮನಸ್ಸಿನೊಂದಿಗೆ ಸಮ್ಮಿಲನಗೊಳ್ಳುತ್ತವೆ. ಈಗಾಗಲೇ ಒಬ್ಬರಿಗೆ ಮನಸ್ಸು ನೀಡಿ ಬದುಕಿನ ಎಲ್ಲ ಪುಟಗಳಲ್ಲಿ ಸುಂದರ ಕಾವ್ಯ ಬರೆದಿರುತ್ತಾರೆ. ಆದರೆ, ಬದಲಾದ ಸನ್ನಿವೇಶದಿಂದ ದೇಹ ಇನ್ನೊಬ್ಬರಿಗೆ ನೀಡಲು ಅಣಿಯಾಗಬೇಕಾಗುತ್ತದೆ. ಮನಸ್ಸು ಒಬ್ಬರಿಗೆ ನೀಡಿ ದೇಹ ಇನ್ನೊಬ್ಬರಿಗೆ ನೀಡಿದರೆ ಅದಕ್ಕೇನರ್ಥ...!? ಆ ವೈವಾಹಿಕ ಜೀವನ ನಿಜವಾಗಿಯೂ ಸಾರ್ಥಕತೆ ಪಡೆದುಕೊಳ್ಳುತ್ತವೆಯೇ...?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ