ನಕ್ಷತ್ರ ವನಕ್ಕೆ ಬನ್ನಿ.... ಬದಲಾವಣೆ ಕಾಣಿರಿ....!!
ನಿಮ್ಮ ಮನದಿಷ್ಟಾರ್ಥಗಳನ್ನು ಪೂರೈಸಿಕೊಳ್ಳಬೇಕೇ...? ನಿಮ್ಮ ಅದೃಷ್ಟ ಬದಲಾಯಿಸಿಕೊಳ್ಳಬೇಕೆ...? ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕೆ...? ಆರೋಗ್ಯ ಸಂಪತ್ತನ್ನು ಗಳಿಸಬೇಕೆ...? ಹಾಗಾದರೆ ತಡವೇಕೆ..... ಹುಬ್ಬಳ್ಳಿಯ ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿ ಬಳಿಯಿರುವ ನಕ್ಷತ್ರ ವನಕ್ಕೆ ಭೆಟ್ಟಿ ನೀಡಿ. ಅಲ್ಲಿರುವ ಪವಿತ್ರ ವೃಕ್ಷಗಳಿಗೆ ನೀರುಣಿಸಿ. ನಿಮ್ಮಲ್ಲಾದ ಬದಲಾವಣೆ ತಿಂಗಳೊಳಗೆ ಕಾಣಿರಿ...!!
ನಾಗರಾಜ್ ಬಿ.ಎನ್.
ಇದು ಉತ್ಪ್ರೇಕ್ಷೆಯಲ್ಲ. ಜನಸಾಮಾನ್ಯರ ಹಾದಿ ತಪ್ಪಿಸುವ ಕಾರ್ಯವೂ ಅಲ್ಲ. ನಂಬಿಕೆ ಮತ್ತು ವೈಜ್ಞಾನಿಕತೆಯ ನೆಲಗಟ್ಟಿನಡಿ ಹಲವರು ಕಂಡುಕೊಂಡ ಸತ್ಯ.
ಪ್ರತಿನಿತ್ಯ ಶ್ರದ್ಧಾ-ಭಕ್ತಿಯಿಂದ ಕೆಲವರು ಅಲ್ಲಿರುವ ವೃಕ್ಷಗಳಿಗೆ ಪ್ರದಕ್ಷಿಣೆ ಹಾಕಿ, ಹನಿ-ಹನಿ ನೀರುಣಿಸಿ ಕಮರಿಹೋದ ಬದುಕನ್ನು ಮತ್ತೆ ಚಿಗುರೊಡಿಸಿಕೊಂಡಿದ್ದಾರೆ. ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಮೊಗದಲ್ಲಿ ನಗು ಅರಳಿಸಿಕೊಂಡಿದ್ದಾರೆ. ನೆನಗುದಿಗೆ ಬಿದ್ದ ಎಷ್ಟೋ ಜನರ ಕೆಲಸ-ಕಾರ್ಯಗಳು, ವಾರದೊಳಗೆ ಮತ್ತೆ ಕೈಹಿಡಿದಿದೆ. ಇಳಿ ವಯಸ್ಸಿನ ಜೀವಗಳು ಸಹ ಉತ್ತಮ ಆರೋಗ್ಯವನ್ನು ಪಡೆದು, ಪಾದರಸದಂತೆ ಪುಟಿದೇಳುತ್ತಿದ್ದಾರೆ. ಗುಟ್ಕಾ, ಪಾನ್, ಸಾರಾಯಿಗಳಂತ ದುಶ್ಚಟಗಳಿಂದ ದೂರಾದ ಯುವ ಸಮುದಾಯವೇ ಇದೆ. ಚಿಕ್ಕ ಮಕ್ಕಳಲ್ಲಂತೂ ಪರಿಸರ ಜಾಗೃತಿ ಹುಟ್ಟಿಸುತ್ತ, ಅವರಲ್ಲಿ ಗಿಡ-ಮರ ಬೆಳೆಸಿ ಪೋಷಿಸುವ ಶಿಕ್ಷಣ ನೀಡುತ್ತಿದೆ. ಒಟ್ಟಾರೆ ನಗರದಲ್ಲಿರುವ ಈ ಅಪರೂಪದ 'ನಕ್ಷತ್ರ ವನ' ಪವಿತ್ರ ಸ್ಥಳವಾಗಿ ರೂಪುಗೊಳ್ಳುತ್ತ, ಜಾಗೃತ ಸ್ಥಳವಾಗಿ ಮಾರ್ಪಡುತ್ತಿದೆ. ವಿಶೇಷವೆಂದರೆ, ಈ ವನಕ್ಕೆ ಆಗಮಿಸುವವರಿಗೆ ಯಾವ ಪ್ರವೇಶ ಧನವೂ ಇಲ್ಲ. ಆದರೆ, ಸ್ವ ಇಚ್ಛೆಯಿಂದ ಅಲ್ಲಿಯ ಕಸ, ಕಲ್ಲುಗಳನ್ನು ಎತ್ತಿ, ಹುಲ್ಲುಗಳನ್ನು ಕಿತ್ತೆಸೆದು ಕರ ಸೇವೆ ಮಾಡಬಹುದಾಗಿದೆ.ಈ ನಕ್ಷತ್ರ ವನದಲ್ಲಿ ಒಟ್ಟು ಇಪ್ಪತ್ತೇಳು ಪವಿತ್ರ ವೃಕ್ಷಗಳಿವೆ. ಜ್ಯೋತಿಶಾಸ್ತ್ರದಲ್ಲಿರುವ ಇಪ್ಪತ್ತೇಳು ನಕ್ಷತ್ರಗಳಿಗೆ ಹೊಂದಿಕೆಯಾಗುವ, ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ಇಲ್ಲಿ ನೆಡಲಾಗಿದೆ. ಮೃಗಶಿರ ನಕ್ಷತ್ರಕ್ಕೆ ಕಗ್ಗಲಿ ವೃಕ್ಷ, ಶತತಾರ ನಕ್ಷತ್ರಕ್ಕೆ ಕದಂಬ ವೃಕ್ಷ, ಮಘ ನಕ್ಷತ್ರಕ್ಕೆ ಆಲ ವೃಕ್ಷ, ಪುಷ್ಯ ನಕ್ಷತ್ರಕ್ಕೆ ಅರಳಿ ವೃಕ್ಷ, ಧನಿಷ್ಟಾ ನಕ್ಷತ್ರಕ್ಕೆ ಬನ್ನಿ ವೃಕ್ಷ, ಶ್ರವಣ ನಕ್ಷತ್ರಕ್ಕೆ ಎಕ್ಕಿ ವೃಕ್ಷ, ಪುನರ್ವಸು ನಕ್ಷತ್ರಕ್ಕೆ ಬಿದಿರು ವೃಕ್ಷ(ಬೊಂಬು), ಭರಣಿ ನಕ್ಷತ್ರಕ್ಕೆ ನೆಲ್ಲಿ ವೃಕ್ಷ, ಆರಿದ್ರ ನಕ್ಷತ್ರಕ್ಕೆ ಶಿರಣಿ ವೃಕ್ಷ ಹೀಗೆ ಇಪ್ಪತ್ತೇಳು ನಕ್ಷತ್ರಕ್ಕೆ ಹೊಂದಿಕೆಯಾಗುವ, ಇಪ್ಪತ್ತೇಳು ವೃಕ್ಷಗಳಿವೆ. ಈ ಒಂದೊಂದು ವೃಕ್ಷಗಳು ಒಂದೊಂದು ನಕ್ಷತ್ರಗಳ ಜನ್ಮರಾಶಿಯ ಮೇಲೆ ಜನಿಸಿದ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಅವಳಿನಗರದ ಕೆಲವು ಭಾಗದ ಸಾರ್ವಜನಿಕರು ಹಾಗೂ ಆ ವನದ ಸುತ್ತಲಿನ ನಿವಾಸಿಗಳು ಪ್ರತಿನಿತ್ಯ ಕುಟುಂಬ ಸಮೇತರಾಗಿ 'ಪವಿತ್ರ ವನ'ಕ್ಕೆ ಆಗಮಿಸಿ, ವೃಕ್ಷಗಳಿಗೆ ನೀರೆರೆಯುತ್ತಾರೆ. ಶ್ರದ್ಧಾ-ಭಕ್ತಿಯಿಂದ ಇಪ್ಪತ್ತೇಳು ವೃಕ್ಷಗಳಿಗೂ ಪ್ರದಕ್ಷಿಣೆ ಹಾಕಿ, ಮನದಿಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ. ಗಿಡಕ್ಕೆ ನೀರೆರೆಯುತ್ತಲೇ ಕೆಲವರು ವಾಯುವಿಹಾರ ಮಾಡಿ, ಪ್ರಸನ್ನತೆ ಪಡೆಯುತ್ತ ನಿರಾಳರಾಗುತ್ತಾರೆ. ಶಾಲಾ ವಿದ್ಯಾರ್ಥಿಗಳು ಹಾಗೂ ಚಿಕ್ಕ ಮಕ್ಕಳಂತೂ ನಿಷ್ಕಳಂಕ ಮನಸ್ಸಿನಿಂದ, ಗಿಡಗಳಿಗೆ ನೀರುಣಿಸಿ ಸಂತೋಷಿಸುತ್ತಾರೆ. ಇದು ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಯಲು ಸಹಾಯಕವಾಗುವುದರ ಜೊತೆಗೆ, ಗಿಡ-ಮರಗಳ ರಕ್ಷಣೆಗೆ ಬಾಲ್ಯದಲ್ಲಿಯೇ ಪಾಠ ನೀಡಿದಂತಾಗುತ್ತದೆ. ಅಲ್ಲದೆ, ಇಲ್ಲಿರುವ ವಿವಿಧ ವೃಕ್ಷಗಳು ಸುತ್ತ-ಮುತ್ತಲಿನ ಇಂಗಾಲದ ಡೈಆಕ್ಸೈಡ್ ನ್ನು ಸೇವಿಸಿ, ಮಾನವನಿಗೆ ಅವಶ್ಯಕವಿರುವ ಆಮ್ಲಜನಕನವನ್ನು ಹೇರಳ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ. ಇದು ಸಹಜವಾಗಿಯೇ ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಲು ಸಹಕಾರಿಯಾಗಿದೆ. ಈ ನೀರೆರೆಯುವ ಪ್ರಕ್ರಿಯೆಯಿಂದ ಪ್ರತಿನಿತ್ಯ ಒಂದೊಂದು ವೃಕ್ಷಕ್ಕೆ ಕನಿಷ್ಠ ಏಳೆಂಟು ಕೊಡ ನೀರು ಹಾಕಿದಂತಾಗುತ್ತದೆ.
`ಜನರಲ್ಲಿಯ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ ಒಂದಕ್ಕೊಂದು ಮೇಳೈಸಿಕೊಂಡು ಎಷ್ಟೋ ಜನರ ಬದುಕನ್ನು ಈ ಪವಿತ್ರ ನಕ್ಷತ್ರ ವನ ಹಸನಾಗಿಸಿದೆ. ಸ್ನೇಹಿತರ ಸಲಹೆ ಮೇರೆಗೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಸಾಯಂಕಾಲ ನಕ್ಷತ್ರ ವನಕ್ಕೆ ಬಂದು, ಅಲ್ಲಿರುವ ಗಿಡಗಳಿಗೆ ಭಕ್ತಿಯಿಂದ ನೀರುಣಿಸುತ್ತಿದ್ದೇನೆ. ಎರಡು ವರ್ಷದಿಂದ ಆಗದ ಕೆಲಸವೊಂದು ಇಲ್ಲಿಗೆ ಬಂದ ಮೇಲೆ ಯಾವೊಂದು ಸಮಸ್ಯೆಯಿಲ್ಲದೆ ಬಗೆಹರಿದಿದೆ. ಇಲ್ಲಿರುವ ವೃಕ್ಷಗಳು ಪುರಾಣೇತಿಹಾಸ ಹೊಂದಿದ್ದು, ಭಕ್ತಿಯಿಂದ ನೀರೆರೆದು ಪ್ರಾಥರ್ಿಸಿಕೊಂಡರೆ ಎಲ್ಲ ಕಷ್ಟಗಳು ಬಗೆಹರಿಯುತ್ತವೆ' ಎಂದು ಗಿಡಗಳಿಗೆ ನೀರುಣಿಸಿ ಸಮಸ್ಯೆಯಿಂದ ಎದ್ದು ಬಂದ ಶಾಂತಿಕಾಲೋನಿ ನಿವಾಸಿ ನಾಗರಾಜ ಗಾಂವಕಾರ ಅವರ ಅನುಭವದ ನುಡಿಗಳಿವು.
ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿಯ ಆರ್.ಆರ್. ಬಿಜಾಪುರ ಅವರ ದೃಢ ಸಂಕಲ್ಪಿತ ಕೂಸೆ ಈ ಪವಿತ್ರ ನಕ್ಷತ್ರ ವನ. ಸರಿ ಸುಮಾರು ಮೂವತ್ತೈದು ವರ್ಷಗಳ ಹಿಂದೆ ಇವರು ನಕ್ಷತ್ರಗಳಿಗೆ ಒಂದೊಂದು ವೃಕ್ಷವಿರುತ್ತದೆ ಎಂಬ ವಿಷಯದ ಪುಸ್ತಕವೊಂದನ್ನು ಓದಿದ್ದರಂತೆ. ಅಂದಿನಿಂದ ಅವರು, ಆ ಇಪ್ಪತ್ತೇಳು ವೃಕ್ಷಗಳನ್ನು ಒಂದೆಡೆ ನೆಟ್ಟು, 'ನಕ್ಷತ್ರ ವನ' ನಿಮರ್ಿಸಬೇಕು ಎಂದು ಮನಸ್ಸಿನಲ್ಲಿಯೇ ಯೋಜನೆಯೊಂದನ್ನು ಸಿದ್ಧಪಡಿಸಿದ್ದರು. ಮನೆಯ ಮುಂದೆಯೇ ಇದ್ದ ಪಾಲಿಕೆಯ ಜಾಗವನ್ನು `ನಕ್ಷತ್ರ ವನ' ನಿಮರ್ಾಣಕ್ಕೆ ಯಾಕಾಗಿ ಬಳಸಿಕೊಳ್ಳಬಾರದೆಂದು ಚಿಂತಿಸಿ, ಸುತ್ತ-ಮುತ್ತಲಿನ ಕಾಲೋನಿ ನಿವಾಸಿಗಳಲ್ಲಿ ಚಚರ್ಿಸಿದರು. ಪುರಂದರ ಹೆಗಡೆ, ಬಿ.ಎಸ್. ವಿರಕ್ತಿಮಠ, ವಿ.ಕೆ. ಕಲಬುಗರ್ಿ, ಪ್ರಕಾಶ ಕುಲಕಣರ್ಿ, ಆರ್.ಎ. ಪೈ, ಮೈಕಲ್ ಸೇರಿದಂತೆ ಅನೇಕರು ಅವರ ಬೆಂಬಲಕ್ಕೆ ನಿಂತರು. ಪಾಲಿಕೆಗೆ ಮನವಿ ಪತ್ರ ಸಲ್ಲಿಸಿ, ನಕ್ಷತ್ರ ವನ ನಿಮರ್ಾಣಕ್ಕೆ ಒಪ್ಪಿಗೆ ಪಡೆದರು. ಆ ಸಂದರ್ಭದಲ್ಲಿ ಆ ಖುಲ್ಲಾ ಜಾಗ ಗಿಡಗಂಟಿಗಳಿಂದ ತುಂಬಿದ್ದು, ಏನೂ ಬೆಳೆಯದ ಬರಡು ನೆಲದಂತಿತ್ತು. ಕಾಲೋನಿ ನಿವಾಸಿಗಳ ಸಹಾಯದಿಂದ ಆ ಜಾಗವನ್ನು ತಕ್ಕಮಟ್ಟಿಗೆ ಶುಚಿಗೊಳಿಸಿದರು. ಬೆಂಗಳೂರು, ಹಾಸನ, ಕಾರವಾರ, ತುಮಕೂರು, ಶೃಂಗೇರಿ ಹಾಗೂ ಇನ್ನಿತರ ನರ್ಸರಿಗಳಿಂದ ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ತಂದು ನೆಟ್ಟು, ಜೋಪಾನವಾಗಿ ಬೆಳೆಸಿದರು. ಪರಿಣಾಮವಾಗಿ ಇಂದು ಅದು ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.
ಧರ್ಮಗಳ ಎಲ್ಲೆ ಮೀರಿದ್ದು....!
ಸುಮಾರು 16 ಗುಂಟೆಯಷ್ಟಿರುವ ಪಾಲಿಕೆಯ ಈ ಜಾಗಕ್ಕೆ ವರ್ಷದ ಹಿಂದಷ್ಟೇ ತಡೆಗೋಡೆಯನ್ನು ನಿಮರ್ಿಸಲಾಗಿದೆ. ಈ ವನದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಕಾಲೋನಿ ನಿವಾಸಿಗಳು ಪಾಲಿಕೆಗೆ ಸಾಕಷ್ಟು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದು ನಿರ್ಮಾಣವಾಗುವ ನಿರೀಕ್ಷೆಯಿದ್ದು, ಅವಳಿನಗರದ ಏಕೈಕ ಅಪರೂಪದ ನಕ್ಷತ್ರ ವನ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಜಾತಿ, ಮತ, ಧರ್ಮದ ಬೇಧ ಮರೆತು ಎಲ್ಲರೂ ಈ ವನಕ್ಕೆ ಬಂದು ಗಿಡಗಳಿಗೆ ನೀರುಣಿಸುತ್ತಾರೆ. ಗಿಡಗಳಿಗೆ ಗಂಧ ಹಚ್ಚುವುದು, ಹೂವು ಮುಡಿಸುವುದು ಹಾಗೂ ಪೂಜೆ ಕಾರ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿಗೆ ಬರುವವರು ಮನೆಯಿಂದ ಒಂದು ಬಾಟಲಿ ನೀರನ್ನಷ್ಟೇ ತಂದರೆ ಸಾಕು. ಈ ವನ ಪ್ರವೇಶಿಸುತ್ತಿದ್ದಂತೆ ಅರಿವಿಲ್ಲದೆ ಮನಸ್ಸಿನಲ್ಲಿ ಪ್ರಶಾಂತ ಭಾವ ಮೂಡುತ್ತದೆ. ಶುದ್ಧ ಗಾಳಿಯನ್ನು ಸೇವಿಸುತ್ತ ಗಿಡಗಳಿಗೆ ನೀರುಣಿಸುವ ಪರಿ ಮನಸ್ಸಿಗೆ ಅಮಿತಾನಂದ ಉಂಟುಮಾಡುತ್ತದೆ.
-ಆರ್.ಆರ್. ಬಿಜಾಪುರ(ನಕ್ಷತ್ರ ವನದ ರೂವಾರಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ