ಬುಧವಾರ, ಡಿಸೆಂಬರ್ 31, 2014

ಅಘನಾಶಿನಿ ನೀ.... ಸೌಂದರ್ಯವತಿ...!!

ಇಂದಿನ ಧಾವಂತದ ದಿನಗಳಲ್ಲಿ ಪ್ರಕ್ಷುಬ್ಧಗೊಂಡ ಮೈಮನಗಳಿಗೆ ಅಘನಾಶಿನಿ' ತುಸು ನೆಮ್ಮದಿಯನ್ನು ನೀಡುವಲ್ಲಿ ಯಾವುದೇ ಸಂಶಯವಿಲ್ಲ. ವಿರಹ ತಾಳದೆ ನಲ್ಲೆಗಾಗಿ ಪರಿತಪಿಸುವ ನಲ್ಲನಂತೆ ಅರಬ್ಬೀ, ಅಘನಾಶಿನಿಯನ್ನು ಭೋರ್ಗರೆದು ಕರೆಯುತ್ತಾನೆ.
ಅವನ ಮನ ತಣಿಸಲೆಂದು `ಅಘನಾಶಿನಿ' ಅಳುಕುತ್ತ, ಬಳುಕುತ್ತ ವಯ್ಯಾರದಿಂದಲೇ ಅವನಲ್ಲಿ ಮಿಲನವಾಗುತ್ತಾಳೆ. ಆಹಾ.... ನಿಸರ್ಗ ಸೌಂದರ್ಯ ಎಂದರೆ ಇದೇ ಅಲ್ಲವೇ...!?
ಭಾವನಾತ್ಮಕ ಬೆಸುಗೆ.................
ಉದ್ಯೋಗದ ನಿಮಿತ್ತ ದೂರ ದೂರದ ಊರುಗಳಲ್ಲಿರುವವರು ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಊರ 'ಮಣ್ಣ ಘಮ'ಕ್ಕೆ ಮೂಗೊಡ್ಡುತ್ತಾರೆ. ತವರಿಗೆ ತರಾತುರಿಯಿಂದ ಹೊರಟು ರಾತ್ರಿ ಇಡೀ ನಿದ್ದೆ ಮಾಡದೆ ಕಿಟಕಿ ಹೊರಗೆ ದೃಷ್ಟಿ ಹಾಯಿಸುತ್ತ, ಕೈಯ್ಯಲ್ಲಿರೋ ವಾಚಲ್ಲೋ, ಮೊಬೈಲಲ್ಲೋ ಸಮಯ ನೋಡುತ್ತ... ಯಾವಾಗ ಬೆಳಗಾಯಿತೋ ಎಂದು ಕಾತುರತೆಯಿಂದ ಕಾಯುತ್ತಿರುತ್ತಾರೆ. ಅವರ ಆ ಕಾತುರತೆಯನ್ನು ಕೊನೆಗೊಳಿಸುವುದು ಈ ಅಘನಾಶಿನಿ ತಾಯಿಯೆ! ದೊಡ್ಡಮನೆ ಘಟ್ಟದ ಹಾದಿಯಿಂದ ಬಂದರೆ ಶರಾವತಿಯು ಸೆರಗೊಡ್ಡಿ ಸ್ವಾಗತಿಸಿದರೆ, ಶಿರಸಿ-ಕಾರವಾರದ ಮಾರ್ಗದಿಂದ ಬಂದರೆ ಆಡಿದ, ಕುಣಿದ, ಕುಪ್ಪಳಿಸಿದ, ಈಜಿದ, ಗಾಳ ಹಾಕಿದ ಪಾಪನಾಶಿನಿ.... ಬಾ ಕಂದ ಎಂದು ಮಡಿಲು ಹಾಸಿ ಮಮತೆಯಿಂದ ಬರ ಮಾಡಿಕೊಳ್ಳುತ್ತಾಳೆ. ಆಕೆಯನ್ನು ಕಂಡೊಡನೆ ಕರಾವಳಿಯ ಕಂಪು, ನಮ್ಮದು ಅನ್ನೋ ಭಾವ ಸ್ವಜಾಗೃತವಾಗಿ ಬಿಡುತ್ತದೆ. ಆಕೆಯನ್ನೇ ದಿಟ್ಟಿಸಿ ನೋಡುತ್ತ ಸಾಗುವ ಆ ಕ್ಷಣದಲ್ಲಿ ಅಮಿತಾನಂದದ ಕಣ್ಣೀರು ಅರಿವಿಲ್ಲದೇ....!
ತಾಯಿ ಜೊತೆಗಿನ ಭಾವನಾತ್ಮಕ ಬೆಸುಗೆಯೇ ಅಂತಹದ್ದು...!!

ಕಾಮೆಂಟ್‌ಗಳಿಲ್ಲ: