ಮಂಗಳವಾರ, ಡಿಸೆಂಬರ್ 30, 2014

ಹಸಿರೊಡಲ ಭಾವ.....!

ಚಿತೆಯಿಂದ ಎದ್ದು ಬಂದರೂ
ಚಿತ್ತದಲ್ಲಿಲ್ಲ ಯಾವೊಂದು ಭಾವ
ಸತ್ತು ಕಿತ್ತ ಭಾವನೆಯ ಕಳೇಬರದಿ
ಕತ್ತೆತ್ತಿ ನೋಡುತಿಹೆ ದಿಗಂತದೆಡೆ...!!
ಪಟಪಟನೇ ಹಾರಾಡಿದ ಬಣ್ಣದ ಪಟ
ಕುಳಿರ್ಗಾಳಿಗೆ ಸಿಲುಕಿ ಮಾಯವಾಗಿದೆ
ಸದ್ದಿಲ್ಲದೆ ಸುಡುತಿರುವ ಭಾವ ದೀಪ್ತಿ
ಇತಿಹಾಸ ಬರೆಯಲು ಸಜ್ಜಾಗಿದೆ...!!
ಬಳೆಯ ರಿಂಗಣಗಳಿಲ್ಲ, ಗೆಜ್ಜೆಯ ನಾದಗಳಿಲ್ಲ
ಕಾಡುವ ಸವಿ ಮಧುರ ನೆನಪುಗಳಿಲ್ಲ
ಬಿದಪ್ಪಿ ಸಂತೈಸಿ ನೇವರಿಸಿದ ಕೈಗಳಿಲ್ಲ
ರುದ್ರತಾಂಡವದ ನರ್ತನವೇ ಎಲ್ಲ...!!
ನಟ್ಟ ನಡು ದಾರಿಯಲಿ ಕತ್ತಲೆಯ ಅಧಿಪತ್ಯ
ಭಾರವಾದ ಹೆಜ್ಜೆಯಲಿ ಬದುಕು ನೇಪಥ್ಯ
ಇರಲಿರಲಿ ಇದೊಂದು ಒಬ್ಬಂಟಿ ಜೀವ
ಸ್ಮಶಾನದಲೂ ಇದ್ದಾನೆ ಆ ರುದ್ರ ದೇವ...!
ಬಟ್ಟ ಬಯಲಲ್ಲಿ ನಿಂತ ಒಂಟಿ ಗಿಡ
ಜೀವ ಜಲದ ಹಂಗಿಲ್ಲದೆ ಮರವಾಗಿದೆ ನೋಡ
ಒಡಲಾಳದ ಬೇಗುದಿಯ ಬಚ್ಚಿಟ್ಟುಕೊಂಡು
ಬೆಳೆಯುತ್ತಿದೆ ಎತ್ತರಕೆ ತಲೆಯೆತ್ತಿ ನೋಡ...!
-ನಾಗರಾಜ್ ಬಿ.ಎನ್. 

ಕಾಮೆಂಟ್‌ಗಳಿಲ್ಲ: