ಸೋಮವಾರ, ಡಿಸೆಂಬರ್ 29, 2014

'ಛೇ.., ಗಂಟೆ ಐದಾಗ್ತಾ ಬಂತು, ಮನೆಗ್ಹೋಗ್ಬೇಕು'

ಇದು ಧಾರಾವಾಹಿ ಮಾಡಿದ ಮೋಡಿ...!!

ಹೆಣ್ಣುಮಕ್ಕಳ  ಮೃದು ಮನಸ್ಸನ್ನೆ ಲಾಭಕ್ಕಾಗಿ ಉಪಯೋಗಿಸಿ,ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಿಸಿ ಧಾರಾವಾಹಿ ನಿಮಾತೃರು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಒಟ್ಟಾರೆ ಎಲ್ಲ ಟಿವಿ ಧಾರಾವಾಹಿಗಳನ್ನು ಸಾರಾಸಗಟಾಗಿ ತೆಗಳಲು ಆಗುವುದಿಲ್ಲ. ಆದರೆ, ಬಹುಪಾಲು ಸಿರಿಯಲ್ಗಳು ಆರೋಗ್ಯಪೂರ್ಣ ಕೌಟುಂಬಿಕ ವ್ಯವಸ್ಥೆಗೆ ಕೊಂಚ ಧಕ್ಕೆ ತರುತ್ತವೆ ಎಂಬ ಮಾತನ್ನು ಸಹ ಅಲ್ಲಗಳೆಯಲಾಗುವುದಿಲ್ಲ. ಇಲ್ಲೊಂದಿಷ್ಟು ಚಿಂತನೆ...
ನಾಗರಾಜ್ ಬಿ.ಎನ್
ಮಾರುಕಟ್ಟೆಗೋ.. ನೆಂಟರ ಮನೆಗೋ... ಅಥವಾ ಇನ್ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದ ಕೆಲವು ಮಹಿಳೆಯರಿಗೆ ಸಂಜೆ ಐದಾದರೆ ಸಾಕು, ಏನೋ ಗಡಿಬಿಡಿ, ಧಾವಂತ, ತವಕ, ಕುತೂಹಲ....!! 'ಛೇ.. ಮೊದಲೇ ಬರಬಾರದಿತ್ತಾ ಮಾರುಕಟ್ಟೆಗೆ.. ಲೇಟಾಗಿ ಹೋಯ್ತು' ಎನ್ನುತ್ತ ಸರಸರನೇ ಎದ್ದನೋ ಬಿದ್ದನೋ ಎಂದು ಮನೆಯ ಹಾದಿ ಹಿಡಿಯುತ್ತಾರೆ.
ಏದುಸಿರುವ ಬಿಡುತ್ತ, ಕಾಲಿಗೆ ಹಾಕಿದ ಚಪ್ಪಲಿಯನ್ನು ತೆಗೆಯದೆ, ಟಿವಿ ಸ್ವಿಚ್ ಆನ್ ಮಾಡುತ್ತಾರೆ.
ಅದು ಧಾರಾವಾಹಿಯ ವ್ಯಾಮೋಹ, ಮೋಡಿ... ಅದರ ಕಬಂಧ ಬಾಹುವಿನ ತೆಕ್ಕೆಯಲ್ಲಿ ಸಿಲುಕಿ ನಲಗುವ ಸನ್ನಿವೇಶ...
ಸಂಜೆ 5ರಿಂದ ರಾತ್ರಿ 11ರ ವರೆಗೂ ನಿರಂತರವಾಗಿ ಒಂದಿಲ್ಲೊಂದು ಧಾರಾವಾಹಿ ಒಂದೊಂದು ವಾಹಿನಿಯಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ. ಈ ಅವಧಿಯಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಪ್ರಸಾರವಾಗುವ ಕನಿಷ್ಠ 10 ಧಾರಾವಾಹಿಗಳಲ್ಲಿ, ಎಲ್ಲವೂ ಸಮಾಜವನ್ನು ಹಾಳು ಹಾಳುಗೆಡುವಂತ ಧಾರಾವಾಹಿಗಳೇ..! ಕೌಟುಂಬಿಕ ಸಂಬಂಧಗಳ ನಡುವೆ ಬಿರುಕು ಹುಟ್ಟುವುದೇ ಆ ಧಾರಾವಾಹಿಗಳ ಕಥಾ ವಸ್ತುಗಳು. ಮೊದ ಮೊದಲು ಜೊತೆ ಜೊತೆಗೆ ಕೂಡಿ ಬಾಳುತ್ತಿದ್ದ ಸಂಸಾರ, ಕೊನೆ ಕೊನೆಗೆ ಒಡೆದು ಚೂರಾಗಿ ಮನೆಯೊಂದು ಮೂರು ಬಾಗಿಲಾಗುತ್ತದೆ.

ಇಳಿ ವಯಸ್ಸಲ್ಲಿ ನೆಮ್ಮದಿಯ ಬದುಕು ಕಾಣುವ ಹಂಬಲದಲ್ಲಿರುವ ಅಪ್ಪ-ಅಮ್ಮರು ತನ್ನದೇ ಮಕ್ಕಳ ಒಡೆದ ಸಂಸಾರ ನೋಡಿ ಕಣ್ಣೀರಾಗುತ್ತಾರೆ. ಅಣ್ಣ-ತಮ್ಮರ ಹೆಂಡತಿ ಆಸ್ತಿಗಾಗಿ ಕಚ್ಚಾಡುತ್ತಾರೆ. ಮನೆಗೆಲಸದಲ್ಲಿ ಒಬ್ಬರನ್ನೊಬ್ಬರು ಕಿತ್ತಾಡುತ್ತಾರೆ. ಪರಸ್ಪರ ಕಿವಿ ಊದುತ್ತ(ಚಾಡಿ ಮಾತು) ಸಂಸಾರದಲ್ಲಿ ಹುಳಿ ಹಿಂಡುತ್ತಾರೆ. ಎರಡು-ಮೂರು ಮದುವೆಯಾಗುತ್ತಾರೆ. ಗಂಡ-ಹೆಂಡತಿ ಕಚ್ಚಾಡುತ್ತಾರೆ. ಮಕ್ಕಳು ಅಪ್ಪ-ಅಮ್ಮರಿಗೆ ಹೊಡೆಯುತ್ತಾರೆ. ಅಲ್ಲದೆ, ಸ್ವಾರ್ಥಕ್ಕಾಗಿ ಅಪ್ಪ-ಅಮ್ಮರನ್ನು ವೃದ್ಧಾಶ್ರಮದಲ್ಲಿಡುತ್ತಾರೆ. ಹೀಗೆ ಈ ಧಾರಾವಾಹಿಯ ಪ್ರತಿಯೊಂದು ಸನ್ನಿವೇಶವು ಕೂಡಾ ಕೌಟುಂಬಿಕ ಸಂಬಂಧ ಹಾಳು ಮಾಡುವಂತಹುದ್ದೇ ಆಗಿದೆ.
ಪ್ರೀತಿ-ವಿಶ್ವಾಸದ ನೆಲಗಟ್ಟಿನಡಿ ಯಾವುದೋ ಕಾರಣದಿಂದ ಒಡೆದು ಹೋದ ಕುಟುಂಬವನ್ನು ಒಂದು ಮಾಡುವ ಸಂದೇಶ ಸಾರುವಂತ ಧಾರಾವಾಹಿಗಳು ಬೇಕೆನಿಸಿದರೂ ಭಿತ್ತರವಾಗುವುದಿಲ್ಲ. ಹಾಳು ಹರಟೆ, ಕಲಹ, ಸಂಬಂಧ ಹದಗೆಡೆಸುವ ಸಂಭಾಷಣೆಗಳ ತುಣುಕುಗಳ ಧಾರಾವಾಹಿಗಳೇ ಭರ್ಜರಿಯಾಗಿ ಭಿತ್ತರವಾಗುತ್ತವೆ. ಹೃದಯಕ್ಕೆ ನಾಟುವ ಮೃದು ಸಂಭಾಷಣೆಗೆ, ಹಿನ್ನೆಲೆ ಸಂಗೀತ ನೀಡಿ ಹೆಂಗಳೆಯರ ಮನಸ್ಸನ್ನು ನಾಟುವಂತೆ ಮಾಡುತ್ತಾರೆ. ಅದರಿಂದಾಗಿ ಅವರಲ್ಲಿರುವ ಮೃದು ಮನಸ್ಸು ಒಮ್ಮಿಂದೊಮ್ಮೆಲೆ ಜಾಗೃತವಾಗಿ, ಭಾವನೆಯ ಕೂಪದಲ್ಲಿ ಬಿದ್ದು ಬಿಡುತ್ತವೆ.
ಧಾರಾವಾಹಿಯಲ್ಲಿ ಪ್ರಸಾರವಾಗುವ ಒಂದೊಂದು ದೃಶ್ಯದ ಸನ್ನಿವೇಶಗಳು ಸಹ ಮಹಿಳೆಯರನ್ನು ಗಟ್ಟಿಯಾಗಿ ಬಿಗಿ ಹಿಡಿದಿಡುತ್ತದೆ. ಸಂದರ್ಭದಲ್ಲಿ ಆ ಧಾರಾವಾಹಿಯ ಕೆಲವು ಪಾತ್ರಗಳು ಅವರೇ ಆಗಿ ಪ್ರತಿಬಿಂಬವಾಗುತ್ತಾರೆ. ಪರಿಣಾಮ, ಅರಿವಿಲ್ಲದೆ ಅವರ ಮನಸ್ಸು ಆದೃಗೊಂಡಿರುತ್ತದೆ... ಕಣ್ಣಾಲಿಗಳಿಂದ ನೀರು ಜಿನುಗುತ್ತಿರುತ್ತದೆ... ಮುಂದೇನಾಗುತ್ತದೆ ಎನ್ನುವಷ್ಟರಲ್ಲಿ, ನಾಳೆಯ ಕುತೂಹಲ ಸನ್ನಿವೇಶದ ದೃಶ್ಯದೊಂದಿಗೆ `ಮುಂದುವರಿಯುವುದು.....' ಎಂಬ ಸ್ಲೋಗನ್ ಅಲ್ಲಿ ಪ್ರತ್ಯಕ್ಷವಾಗುತ್ತದೆ....!! ಮತ್ತೆ ನಾಳೆ ದಿನಕ್ಕೆ ಕಾತುರ..!
ಆ ಭಾವುಕ ಲೋಕದಲ್ಲಿಯೇ ತೇಲಾಡುತ್ತಿರುವ ಅವರಿಗೆ, ನಾಳೆ ಎಷ್ಟೊತ್ತಿಗೆ ಆಗುವುದು ಎನ್ನುವ ತವಕ. ನಾಳೆಯಾದರೆ, ಸಾಯಂಕಾಲಕ್ಕಾಗಿ ತಡಬಡಿಕೆ. ಮತ್ತೆ ಆ ಧಾರಾವಾಹಿ ಎಷ್ಟೊತ್ತಿಗೆ ಆರಂಭವಾಗುತ್ತದೆ ಎನ್ನುವ ನಿರೀಕ್ಷೆ. ಒಂದೊಂದು ಕ್ಷಣ, ನಿಮಿಷಗಳು ಆ ಸಂದರ್ಭದಲ್ಲಿ ಅವರಿಗೆ ಒಂದೊಂದು ಯುಗ ಕಳೆದಂತೆ. ಮನೆಗೆಲಸ, ಮಕ್ಕಳ ಪಾಠ, ತುರ್ತು ಕೆಲಸಗಳೆಲ್ಲವೂ ನೇಪಥ್ಯಕ್ಕೆ ಸರಿದಿರುತ್ತವೆ. ಅಷ್ಟು ಹೊತ್ತಿನಿಂದ ಕಾಯುತ್ತಿದ್ದ ಸಮಯ ಎದುರಾಗುತ್ತದೆ. ಧಾರಾವಾಹಿ `ಟೈಟಲ್ ಸಾಂಗ್'ನೊಂದಿಗೆ ಆರಂಭವಾಗುತ್ತಿದ್ದಂತೆ, ಸುತ್ತೆಲ್ಲ ನಿಶ್ಯಬ್ದ ಆವರಿಸುತ್ತದೆ. ಧಾರವಾಹಿ ನೋಡುವ ಕಣ್ಣುಗಳ ಜೊತೆಗೆ ಮನಸ್ಸುಗಳು ಸಹ ಕೇಂದ್ರಿಕೃತವಾಗಿ, ಟಿವಿಯಲ್ಲಿಯೇ ತಲ್ಲೀನವಾಗುತ್ತವೆ. ಆ ಸಂದರ್ಭದಲ್ಲೇನಾದರೂ ಅಪರೂಪದ ಸ್ನೇಹಿತರು, ನೆಂಟರು, ಬಂಧುಗಳು, ಆಪ್ತೇಷ್ಟರೇನಾದರೂ ಮನೆಗೆ ಬಂದರೆ... ಅವರು ಧಾರಾವಾಹಿ ಮುಗಿಯುವವರೆಗೂ ಮೂಕರಾಗಿಯೇ ಕುಳಿತುಕೊಳ್ಳಬೇಕು. ಯಾಕೆಂದರೆ ಧಾರಾವಾಹಿ ಮುಗಿಯಿತು ಎಂದರೆ... ಅದು ಮತ್ತೆ ಸಿಗದು, ನೆಂಟರು ಹೇಗಿದ್ದರೂ ಇಲ್ಲೆ ಇರುತ್ತಾರಲ್ಲ...!!
ಹೀಗೆ, ಸ್ನೇಹ-ಸಂಬಂಧದ ಸಾಮರಸ್ಯಕ್ಕೆ ದೈನಂದಿನ ಧಾರಾವಾಹಿ ಮಾರಕವಾಗಿ ಪರಿಣಮಿಸಿದೆ. ಅಂದು ಕುಟುಂಬ ಸದಸ್ಯರೆಲ್ಲ ಜೊತೆ ಜೊತೆಯಾಗಿ ಕೂತು ಊಟ, ತಿಂಡಿ ಮಾಡುತ್ತ ಸಂಭ್ರಮಿಸುತ್ತಿದ್ದರು. ಈಗ ಧಾರಾವಾಹಿ ನೋಡುತ್ತ ಊಟ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳಿಗೆ, 'ಶಾಲೆಯಲ್ಲಿ ಏನು ಕಲಿಸಿದ್ದಾರೆ' ಎಂದು ಕೇಳುವ ತಂದೆ-ತಾಯಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಯಾಕೆಂದರೆ ಮಕ್ಕಳು ಶಾಲೆ ಬಿಟ್ಟು ಮನೆಗೆ ಪ್ರವೇಶಿಸುತ್ತಿದ್ದಂತೆ, ಪಾಲಕರು ಧಾರಾವಾಹಿಯಲ್ಲಿ ಮುಳುಗಿರುತ್ತಾರೆ. ಮನೆಯ ಈ ವಾತಾವರಣ ಮಕ್ಕಳ ಕಲಿಕೆಯ ಮೇಲೆ ಗಣನೀಯ ಪರಿಣಾಮ ಬೀರುತ್ತ, ಅವರನ್ನು ಸಹ ಧಾರಾವಾಹಿಗಳು ಆಕರ್ಷಿಸಲು ಪ್ರಾರಂಭಿಸುತ್ತಿವೆ. ಕೂಡಿ ಬಾಳುವ ಕುಟುಂಬವು ಧಾರಾವಾಹಿಯ ಪ್ರಭಾವಕ್ಕೆ ಒಳಗಾಗಿ ದ್ವೇಷ-ಅಸೂಯೆಯನ್ನು ಸೃಷ್ಟಿಸುತ್ತಿದೆ. ಪರಸ್ಪರ ಕಂದಕವನ್ನು ನಿರ್ಮಿಸಿಕೊಂಡು ಒಂದೇ ಮನೆಯಲ್ಲಿ ದಾಯಾದಿಗಳಂತೆ ಬದುಕುವಂತೆ ಮಾಡುತ್ತದೆ. ನೆಮ್ಮದಿಯನ್ನು ಹಾಳುಗೈದು ಮನೆ-ಮನಗಳಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತವೆ.
ಸುಂದರ, ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಬೇಕಾದ ದೃಶ್ಯ ಮಾಧ್ಯಮಗಳು... ಸಮಾಜದ ಸ್ವಾಸ್ಥ್ಯ ಹಾಳುಗೆಡುವದೆ ಪ್ರೀತಿ, ವಿಶ್ವಾಸದ ನೆಲಗಟ್ಟಿನಡಿ ಉತ್ತಮ ಸಂದೇಶ ರವಾನಿಸಬೇಕಾದ ಧಾರಾವಾಹಿಗಳು... ಹೆಂಗಳೆಯರ ಮೃದು ಮನಸ್ಸನ್ನೆ ತಮ್ಮ ಲಾಭಕ್ಕಾಗಿ ಉಪಯೋಗಿಸಿ, ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಸಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಸಮಾಜ ಏನು...? ಎಂತು....?

ಕಾಮೆಂಟ್‌ಗಳಿಲ್ಲ: