ನಾನು ಮತ್ತು ಅವಳು
(ಹೀಗೊಂದು ಪ್ರೀತಿ)
ಕಳೆದ ಮೂರು ವರ್ಷಗಳಿಂದ ಅವಳು ನನಗೆ ಪರಿಚಯ. ಪ್ರತಿದಿನ ಆಫೀಸ್ನಿಂದ ರೂಂಗೆ ಬರುವಾಗ ಅವಳು ಎದುರಾಗುತ್ತಾಳೆ. ನನ್ನನ್ನು ನೋಡಿದ ಕೂಡಲೇ ಓಡೋಡಿ ಬರುತ್ತಾಳೆ. ಅವಳ ತಲೆಯನ್ನು ನೇವರಿಸಿ, ಮುದ್ದು ಮಾಡುತ್ತೇನೆ. ಸಂದರ್ಭದಲ್ಲಿ ಆಕೆಯ ಕಣ್ಣಲ್ಲಿ ಸ್ಫುರಿಸುವ ಮುಗ್ಧ ಪ್ರೀತಿ, ನನ್ನನ್ನು ಸಂತೃಪ್ತನನ್ನಾಗಿಸುತ್ತದೆ. ಅಷ್ಟೊಂದು ಗಾಢ ಸ್ನೇಹ ನಮ್ಮಿಬ್ಬರದ್ದು.ಆಕೆ ಅನಾಮಧೇಯೆ, ನಾಯಿ ಸಂಕುಲಕ್ಕೆ ಸೇರಿದವಳು. ಸದ್ಯ ನಾಲ್ಕು ಮಕ್ಕಳ ಮಹಾತಾಯಿ. ನಿರ್ದಿಷ್ಟ ಸ್ಥಳವಿಲ್ಲದ ಆಕೆಗೆ, ಹಾದಿ-ಬೀದಿಯೇ ವಾಸಸ್ಥಾನ. ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಅವಳು ವೀರಾಪುರ ರಸ್ತೆಯ(ರಾಧಾಕೃಷ್ಣ ಗಲ್ಲಿಯಿಂದ-ಅಗಸರ ಓಣಿ)ಲ್ಲಿ ಎದುರಾಗೇ ಆಗುತ್ತಾಳೆ. ಪ್ರಾರಂಭದಲ್ಲಿ ನನ್ನ ಹತ್ತಿರ ಬರಲು ತುಸು ನಾಚುತ್ತಿದ್ದ ಆಕೆ, ಈಗಂತ ನನ್ನ ಕಂಡೊಡನೇ ಓಡೋಡಿ ಬರುತ್ತಾಳೆ. ಅವಳ ತಲೆ ನೇವರಿಸಿ ಮುದ್ದು ಮಾಡಿ, ಏನಾದರೂ ತಿಂಡಿ ತಿನ್ನಿಸಿ ಕಳುಹಿಸುತ್ತೇನೆ. ಸಂದರ್ಭದಲ್ಲಿ ಅವಳ ಕಣ್ಣಲ್ಲಿ ಸ್ಫುರಿಸುವ ಪ್ರೀತಿ, ಮುಗ್ಧ ಭಾವ ನನ್ನನ್ನು ಸಂತೃಪ್ತನಾಗಿಸುತ್ತದೆ.
ಧಾವಂತದ ಬದುಕು. ಇದಕ್ಕೆ ಪೂರಕವಾದ ಬ್ಯಾಚುರಲ್ ಜೀವನ. ಏನು ತಿಂದೆ? ಯಾವಾಗ ಊಟ ಮಾಡಿದೆ? ಎಂದು ಹೇಳೊರು, ಕೇಳೋರು ಇಲ್ಲಿ ಯಾರು ಇಲ್ಲ. ವಾರದಲ್ಲಿ ನಾಲ್ಕೈದು ದಿನ ರೂಮಲ್ಲಿಯೇ ಊಟ-ತಿಂಡಿ ಮಾಡಿ, ಉಳಿದ ದಿನಗಳಿಗೆ ಹೊಟೆಲ್ ಆಶ್ರಯಿಸುತ್ತೇನೆ. ರಾತ್ರಿ ರೂಮಿಗೆ ಬರುವಾಗ ಯಾವುದಾದರೂ ಹೊಟೆಲ್ನಿಂದ ಅನ್ನ-ಸಾಂಬಾರು, ಇಡ್ಲಿ-ವಡಾ, ಪಲಾವ್, ಚಿತ್ರಾನ್ನ ಹೀಗೆ ಏನಾದರೂ ಪಾರ್ಸಲ್ ತೆಗೆದುಕೊಂಡು ಬರುವ ಪರಿಪಾಠ.
ನನ್ನ ಅವಳ ಸ್ನೇಹದ ಪ್ರಾರಂಭದ ದಿನಗಳಲ್ಲಿ, ನಾನು ಊಟ ಪಾರ್ಸಲ್ ತೆಗೆದುಕೊಂಡು ಬರುವ ಸಂದರ್ಭದಲ್ಲೆಲ್ಲ ಧುತ್ತೆಂದು ಅವಳು ಎದುರಾಗುತ್ತಿದ್ದಳು. ಇನ್ನೇನು ಬಾಲ ಕಿತ್ತೇ ಹೋಗುತ್ತದೆ ಎನ್ನಬೇಕು...! ಅಷ್ಟೊಂದು ಜೋರಾಗಿ ಬಾಲ ಅಲ್ಲಾಡಿಸುತ್ತ ಮುಂದೆ ನಿಲ್ಲುತ್ತಿದ್ದಳು. ಹಸಿದ ಹೊಟ್ಟೆಯ ತೊಳಲಾಟ ಅವಳ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಾರ್ಸಲ್ ತಂದ ಊಟವನ್ನೇ ಅವಳಿಗೆ ನೀಡಿ, ತಲೆ ನೇವರಿಸಿ ರೂಂ ಕಡೆ ಹೆಜ್ಜೆ ಹಾಕುತ್ತಿದ್ದೆ. ಹೊಟ್ಟೆ ತುಂಬಿದ ತೃಪ್ತ ಭಾವ ಅವಳದ್ದಾದರೆ, ಹೊಟ್ಟೆ ತುಂಬಿಸಿದ ಸಂತೃಪ್ತಿ ನನ್ನದಾಗುತ್ತಿತ್ತು.ಒಮ್ಮೊಮ್ಮೆ ರೂಮಿನಲ್ಲಿ ಏನೂ ತಿಂಡಿಗಳಿರುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳೋಣ ಎಂದರೆ ರಾತ್ರಿ 10 ಆಗಿರುತ್ತಿತ್ತು. ಮೊದಲೇ ದಣಿದು ಬಂದಿದ್ದಕ್ಕೆ, ಹಾಸಿಗೆ ಸಿಕ್ಕರೆ ಸಾಕು ಎನ್ನುವ ಫೀಲ್. ಆಗೆಲ್ಲ, ತಣ್ಣನೆಯ ನೀರನ್ನು ಹಸಿದ ಹೊಟ್ಟೆಗೆ ಇಳಿಸಿ ತಂಪಾಗಿಸಿಕೊಳ್ಳುತ್ತಿದ್ದೆ. ನಂತರದ ದಿನಗಳಲ್ಲಿ ಅವಳು ಎಲ್ಲಿಯಾದರೂ ಸಿಗಬಹುದು ಎಂದು, ಎರಡೆರಡು ಪಾರ್ಸಲ್ ತೆಗೆದುಕೊಂಡು ಬರುತ್ತಿದ್ದೆ. ಬಹುತೇಕ ಬಾರಿ ಸಿಗುತ್ತಿದ್ದಳು. ಸಿಗದಿದ್ದಾಗ ಅಲ್ಲಿಯೇ ಇರುವ ದನ-ಕರುಗಳಿಗೆ ಒಂದು ಪಾರ್ಸಲ್ ನೀಡಿ ಬರುತ್ತಿದ್ದೆ.
ಆದರೆ, ಆ ಪ್ರೀತಿ, ಮುಗ್ಧತೆ, ಸಂತೃಪ್ತ ಭಾವ... ಇನ್ನು ಕೇಲವೇ ಕೆಲವು ದಿನಗಳು ಮಾತ್ರ. ಬದುಕಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿ ಅವಳ ಸ್ನೇಹದಿಂದ ದೂರಾಗುವ ಸಮಯ ಎದುರಾಗುತ್ತಿದೆ. ಇನ್ನು ಮುಂದೆ, ಆಕೆಯ ಪ್ರೀತಿ....? ಆಕೆಯ ಹಸಿವು...? ಆ ಸಂತೃಪ್ತ ಭಾವ...? ಹಸಿವು ನೀಗಿಸಿದ ತಣ್ಣನೆಯ ತಣ್ಣೀರು...? ಎಲ್ಲಿ, ಹೇಗೆ, ಎಂತು....?
-ನಾಗಾರಾಜ್. ಬಿ.ಎನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ