ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....
ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಎದುರಿನ ಗೋಡೆಗೆ ನೇತು ಹಾಕಿದ್ದ ಗಡಿಯಾರವನ್ನೊಮ್ಮೆ ತಲೆ ಎತ್ತಿ ನೋಡಿದೆ. ಗಂಟೆ ಆಗಲೇ ರಾತ್ರಿ 12.35! ಎದುರಿಗೆ ಕುಳಿತಿದ್ದ ಸ್ನೇಹಿತನ ಕಣ್ಣಿಂದ ನೀರು ಒಂದೇ ಸಮನೆ ಧರಾಕಾರವಾಗಿ ಸುರಿಯುತ್ತಿತ್ತು. ನನ್ನನ್ನು ದೃಷ್ಟಿಯಿಟ್ಟು ನೋಡಲಾರದೆ ಆತ ತಲೆ ತಗ್ಗಿಸಿ ಅಳುತ್ತಿದ್ದ. ಅವನಲ್ಲಿ ಏನೋ ಚಡಪಡಿಕೆ... ಏನೋ ಹೇಳಬೇಕೆಂದು ಬಯಸಿ, ಹೇಳಲಾಗದೆ ನಿಟ್ಟುಸಿರುಡುತ್ತಿದ್ದ. ಅಸಹಾಯಕನಾಗಿ ತನ್ನಲ್ಲಿರುವ ನೋವನ್ನು ಹೊರಹಾಕಲಾಗದೆ ತಾನೇ ಬೇಯುತ್ತಿದ್ದನು. ಅವನ ನರಳಾಟದ ವೇದನೆ ಸಹಿಸದೆ ಮೌನವನ್ನು ಸೀಳುತ್ತ, ಯಾಕೀತರ...? ಏನಾಯ್ತು ಹೇಳು... ಸ್ನೇಹಿತ!' ತಣ್ಣನೆ ಕೇಳಿದೆ. ಒತ್ತರಿಸಿ ಬರುವ ದುಃಖವನ್ನು ತಡೆಯುತ್ತ... ಬಾಚಿ ತಬ್ಬಿಕೊಂಡನು!
ಆದರೆ, ಕಾರ್ಗತ್ತಲಲ್ಲಿ ನನ್ನ ಸ್ನೇಹಿತನ ಉಚ್ಛ್ವಾಸ ಮತ್ತು ನಿಶ್ವಾಸದ ಸದ್ದು ಮಾತ್ರ ಕೇಳಿ ಬರುತ್ತಿತ್ತು. ಆತನ ಈ ಏರಿಳಿತದ ಉಸಿರಿನ ಹೊರತು, ಮತ್ತಿನ್ಯಾವ ಸದ್ದು ಇರಲಿಲ್ಲ. ಕ್ಷಣ ಕಾಲ ಆತನ ಬಿಸಿಯುಸಿರು ತಣ್ಣಗಿನ ಕೋಣೆಯನ್ನೆಲ್ಲ ವ್ಯಾಪಿಸಿಬಿಟ್ಟಿತು.
ಇದೇ ಕತ್ತಲೆಗಾಗಿ ತವಕಿಸುತ್ತಿದ್ದವನಂತೆ.... ಮಡುಗಟ್ಟಿದ ಹೃದಯದಿಂದ `ರಾಜ' ಎಂದು ಮೆಲ್ಲನೆ ಉಸುರಿದ. ಮಾತು ಕೇಳಿತು ಎಂಬಂತೆ, 'ಹೇಳೋ' ಎಂದೆ. ಹುಣ್ಣಿಮೆಗೆ ಸಾಗರ ಭೋರ್ಗರೆವಂತೆ, ಒಮ್ಮೆಲೆ ದುಃಖ ಉಮ್ಮಳಿಸಿ, ಅದನ್ನು ಬಿಗಿಹಿಡಿಯುವ ಪ್ರಯತ್ನ ಮಾಡುತ್ತಲೇ, `ಅವಳು ನನ್ನನ್ನು ಬಿಟ್ಟು ಹೋದಳೋ, ಅವಳಿಗೆ ನಾನು ಬೇಡವಂತೆ. ಮನೆಯಲ್ಲಿ ಒಪ್ಪುತ್ತಿಲ್ಲವಂತೆ. ಅವಳನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲವೋ.. ಎಂದನು. ಹಲವು ವರ್ಷಗಳಿಂದ ಆರಾಧಿಸುತ್ತ ಬಂದಿದ್ದ ಶ್ರದ್ಧೆಯ ಪ್ರೀತಿ ಅಂದು ಅವನಿಂದ ದೂರವಾಗಿತ್ತು. ಪ್ರೀತಿಯ ಗೋಪುರ ಏಕಾಏಕಿ ಕುಸಿದು ಬಿದಿದ್ದು, ಅವನನ್ನು ಹುಚ್ಚನನ್ನಾಗಿಸಿತ್ತು. ಆಗಲೇ ಎದೆಯಲ್ಲಿ ಮಡುಗಟ್ಟಿದ ದುಃಖ ಕಟ್ಟೆ ಒಡೆದಿತ್ತು. ಬಿಕ್ಕಿಬಿಕ್ಕಿ ಒಂದೇ ಸಮನೇ ಅಳುತ್ತಿದ್ದನು. ಅವನನ್ನು ಸಮಾಧಿನಿಸುವ ಪ್ರಯತ್ನ ಮಾಡದೆ, ಅವನನ್ನೆ ನೋಡುತ್ತ ಕುಳಿತೆ. ಸಮಾಧಾನದ ಮಾತು ಕೂಡಾ ತೀರಾ ಕಠೋರ ಎಂದೆನಿಸಿ ಬಿಡಬಹುದಾದ ಸೂಕ್ಷ್ಮ ಕ್ಷಣವದು. ಪೂಜನೀಯ ಪ್ರೀತಿ ಕಳೆದುಕೊಂಡ ಸ್ನೇಹಿತನ ದುಃಖದ ತೀವೃತೆ ಮಲೆನಾಡಿನ ರಭಸವನ್ನು ಮೀರಿಸುವಂತಿತ್ತು.
ಪ್ರೀತಿಯ ಆರಂಭಕ್ಕೆ ಒಂದು ನಿಧರ್ಿಷ್ಟ ದಿನವದ್ದಂತೆ, ಅದರ ಸಾವಿಗೆ ಇಂತಹದ್ದೆ ದಿನ ಎಂದು ಹೇಳಲಾಗದು. ಏಕೆಂದರೆ, ಅದೊಂದು ದೀರ್ಘ ಪ್ರಕ್ರಿಯೆ. ಹಾಗೂ ವ್ಯವಸ್ಥಿತ ಹೊಂಚು. ಪ್ರೀತಿ ಹುಟ್ಟಿದ ದಿನವನ್ನು ಮನದ ಮೂಲೆಯೊಂದರಲ್ಲಿ ಎಲ್ಲೋ ಬರಿದಿಟ್ಟು, ವರ್ಷದ ನಂತರ ಅದನ್ನು ಕೆದಕಿದರೂ ಅದು ಒಮ್ಮೆಲೆ ದೊರೆತು ಬಿಡುತ್ತದೆ. ಆದರೆ ಪ್ರೀತಿ ಕಳೆದು ಹೋದ ಬಗ್ಗೆ ಇದೇ ದಿನ ಹೀಗಾಯಿತು ಎಂದು ಯಾರಿಂದಲೂ ಹೇಳಲು ಬಹುಶಃ ಅಸಾಧ್ಯ. ಅಪ್ಪ, ಅಮ್ಮ, ಜಾತಿ ಎಂಬುದು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು. ಆ ಹೃದಯಕ್ಕೆ ನಿಜ ಪ್ರೀತಿಯ ಅರ್ಥ ಗೊತ್ತಿಲ್ಲ ಎಂದರೂ ತಪ್ಪಾಗಲಾರದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇದ್ಯಾವುದು ಕೂಡಾ ಅವರು ತಮ್ಮ ತಪ್ಪಿಗೆ ಕೊಡುತ್ತಿರುವ ಕಾರಣಗಳಲ್ಲ. ತಾವು ಮಾಡಿದ್ದೇ ಸರಿ ಎಂದು ತಮ್ಮನ್ನು ಸಮಥರ್ಿಸಿಕೊಳ್ಳುವುದಕ್ಕೆ ನೀಡುವ ಸಮಜಾಯಿಷಿಗಳು. ಇತ್ತ ಹುಡುಗ/ಹುಡುಗಿ ಪ್ರೀತಿಸುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಅತ್ತ, ಅಪ್ಪ, ಅಮ್ಮ ತನ್ನ ಮಗ/ಮಗಳ ಬರುವಿಕೆಗಾಗಿ ಕಾದು ಕುಳಿತಿರುತ್ತಾರೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ವಿಷಯ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆತ್ತವರ ನೆನಪು ಬಂದರೆ ನಿಜಕ್ಕೂ ಅದು ಗೌರವಯುತ. ಅಂತಹ ಯುವ ಹೃದಯಗಳನ್ನು ಗೌರವಿಸಿ, ಬೆಂಬಲಿಸೋಣ. ಆದರೆ, ಒಮ್ಮಿಂದೊಮ್ಮೆಲೆ ಇದ್ದಕ್ಕಿದ್ದಂತೆ `ಈ ಸಂಬಂಧ ಇನ್ನು ಮುಂದುವರಿಸಲು ಅಸಾಧ್ಯ, ದಯವಿಟ್ಟು ನನ್ನನ್ನು ಮರೆತು ಬಿಡು' ಎಂದು ಹೇಳುವುದು ನಿಜಕ್ಕೂ ಒಂದು ಹೀನ ಕೃತ್ಯ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದವರು ಬೇಡವಾಗುತ್ತಾರೆ... ಎಲ್ಲ ನೋವಿಗೆ ದನಿಯಾಗಿ ಸ್ಪಂದಿಸಿದವರು ಕ್ಷುಲ್ಲಕ ಕಾರಣಕ್ಕೆ ಹೊರೆಯಾಗಿ ಬಿಡುತ್ತಾರೆ... ಆ ವಿಕೃತ ಹೃದಯದವರಿಗೆ ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ, ಅದರ ಅಗತ್ಯವಿಲ್ಲ ಎಂದೆನಿಸಿ ಬಿಡುತ್ತವೆ.
ನಿಜ ಪ್ರೀತಿಯ ಸಂಬಂಧ ಶ್ರದ್ಧೆ ಬೇಡುತ್ತ, ಪರಸ್ಪರರ ಬಗ್ಗೆ ನಂಬಿಕೆ ವಿಶ್ವಾಸವನ್ನು ಬಯಸುತ್ತವೆ. ಈ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸ ದಿಢೀರ ಎಂದು ಒಮ್ಮೆಲೆ ಬೆಳೆದು ನಿಲ್ಲುವಂತಹದ್ದಲ್ಲ. ಸಾಕಷ್ಟು ಸಮಯ ಕೇಳುತ್ತ, ದಿನ ಕಳೆದಂತೆ ಪಕ್ವಗೊಳ್ಳುತ್ತ ಸಾಗುತ್ತವೆ. ಆದರೆ ಇಂದಿನ ಧಾವಂತದ ಯುವಗದಲ್ಲಿ ಪ್ರೀತಿ ತನ್ನ ಸೊಬಗನ್ನು ಕಳೆದುಕೊಂಡು ಅರ್ಥಹೀನವಾಗುತ್ತ ಯಾಂತ್ರಿಕವಾಗಿ ಸಾಗುತ್ತಿವೆ. ಶ್ರದ್ಧೆಯಿಲ್ಲದ ಪ್ರೀತಿ, ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಮೂಡಿ ಬಿಡುತ್ತವೆ. ಅವನೇ ನನ್ನ ಪ್ರಪಂಚ ಎಂದು ನವ-ನವೀನ ಕನಸು ಕಾಣುತ್ತ ಬದುಕು ನಡೆಸುತ್ತಿದ್ದ ಹುಡುಗಿಗೆ, ಇನ್ನೊಂದು ಪ್ರಪಂಚ ರಂಗು ರಂಗಾಗಿ ಕಾಣುತ್ತವೆ. ಇಷ್ಟು ದಿನ ಜೊತೆಯಿದ್ದು, ಉಸಿರಲ್ಲಿ ಉಸಿರಾದ ಹುಡುಗ ಬಣ್ಣ ಕಳೆದುಕೊಂಡು ಬಿಳಿಚಿ ಕೊಂಡಂತೆ ಭಾಸವಾಗುತ್ತಾನೆ. ಧುತ್ತೆಂದು ಅಪ್ಪ, ಅಮ್ಮ, ಜಾತಿಯ ಸಬೂಬು ಅಲ್ಲಿ ಬೇರು ಬಿಟ್ಟಿರುತ್ತದೆ. ಹೀಗೆ ಸುಳ್ಳೇ ಹುಟ್ಟಿಕೊಳ್ಳುವ ತಳುಕು ಪ್ರೀತಿ ಸುಮ್ಮನೆ ಬಿಡಿಸಿಕೊಂಡು ಓಡುವ ಹುನ್ನಾರ ನಡೆಸುತ್ತಿರುತ್ತವೆ. ಆದರೆ, ನಿಜವಾದ ಪ್ರೀತಿ ಹೇಗಾದರೂ ಸೈ, ಎಲ್ಲರನ್ನು ಎದುರಿಸಿ ಒಪ್ಪಿಸೋಣ ಎನ್ನುತ್ತಿರುತ್ತದೆ. ಪ್ರೀತಿಯಿಂದ ವಿಮುಖವಾದ ಜೀವ ನರಳುತ್ತ, ತನ್ನ ಬದುಕನ್ನು ಹಾಳುಗೆಡುವಿ ತಾನು ಉಳಿದು ಹೋದದಕ್ಕೆ ಕಾರಣ ಹುಡುಕಿ, ಕೆದಕಿ ಸೋಲುತ್ತ, ತನ್ನ ಬಗ್ಗೆ ಒಂದು ವಿಧವಾದ ಕೀಳರಮೆ ಬೆಳಸಿಕೊಂಡು, ಕಾಣದ ಕತ್ತಲೆಗಾಗಿ ಹಂಬಲಿಸುತ್ತಿರುತ್ತವೆ. ವರ್ಷಗಟ್ಟಲೇ ಶ್ರದ್ಧಾ ಭಕ್ತಿಯಿಂದ ಪ್ರೀತಿಯಿಂದ ನಿಮರ್ಿಸಿದ ಪ್ರೀತಿಯ ಕನಸಿನ ಗೋಪುರ ಕೆಲವೇ ದಿನಗಳಲ್ಲಿ ನೆಲಸಮವಾಗಿರುತ್ತವೆ.
ನನ್ನಷ್ಟಕ್ಕೆ ನಾನು ಹೀಗೆಲ್ಲ ಏನೇನೋ ಯೋಚನೆ ಮಾಡುತ್ತ ಕುಳಿತಿದ್ದೆ, ಅತ್ತ ಸ್ನೇಹಿತನ ಬಿಕ್ಕಳಿಕೆ ಒಂದೇ ಸಮನೆ ಕೇಳುತಲಿತ್ತು. ಆತ ಅತ್ತು ಅತ್ತು ಕಣ್ಣಿರಾಗಿದ್ದ. ನಾನಿನ್ನು ಮೇಲೇಳಲಾರೆ ಎಂದು ಬದುಕು ಕಳೆದುಕೊಂಡವರಂತೆ ರೋಧಿಸುತ್ತಿದ್ದ. ಅವನ ಮುಂಗೈಯನ್ನು ಅಂಗೈಯಲ್ಲಿಟ್ಟು ಹೇಳಿದೆ, `ಗೆಳೆಯಾ, ಆದದ್ದೆಲ್ಲ ಒಳ್ಳೆಯದಕ್ಕೆ ಅಂದುಕೋ. ಒಂದು ಸುಂದರವಾದ ಬಾಳ್ವೆ ನಡೆಸು. ಅವಳ ನೆನಪು ಬಾರದಂತೆ ಬದುಕಿ ಬಿಡು. ಇಷ್ಟು ವರ್ಷಗಳ ಕಾಲ ನಿಮ್ಮಿಬ್ಬರಲ್ಲಿದ್ದದ್ದು ಪ್ರೀತಿಯಲ್ಲ. ಅದೊಂದು ಆಕರ್ಷಣೆಯಷ್ಟೆ. ಕೇವಲ ಸೆಳೆತ. ಪ್ರೀತಿ ಹೀಗೆ ಇರೋದಿಲ್ಲ. ಅದು ಯಾವತ್ತೂ ಪರಸ್ಪರ ಒಬ್ಬರಿಗೊಬ್ಬರಿಗೆ ಸ್ಪೂತರ್ಿಯಾಗಿರುತ್ತವೆ. ಅಲ್ಲಿ ಸೋಲು ಎಂಬುದೇ ಇರುವುದಿಲ್ಲ. ಅದು ಸೋಲಲು ಬಿಡದ ಅದಮ್ಯ ಶಕ್ತಿ. ನಿನ್ನ ಬದುಕಿನ ಬಗ್ಗೆ ನಿನಗೆ ಅತೀವ ಶ್ರದ್ಧೆಯಿರಲಿ, ನಿನ್ನ ಸ್ನೇಹಿತನಾಗಿ ಸದಾ ನಿನ್ನ ಜೊತೆಯಿರುತ್ತೇನೆ, ನಿನ್ನ ನೋವಿಗೆ ದನಿಯಾಗಿ. ಕಿವಿಯಾಗಿ'.
ಮಾತು ಬರದವನಾಗಿ ತನ್ನೆಲ್ಲ ಚೈತನ್ಯ ಕಳೆದುಕೊಂಡಿದ್ದ ಆತ. ನನ್ನ ಮಡಿಲಿಗೆ ಕುಸಿದಿದ್ದ. ನೂರ್ಮಡಿಸಿದ್ದ ದುಃಖವನ್ನು ನುಂಗಿಕೊಳ್ಳುತ್ತ, ನನ್ನನ್ನು ನೋಡದೆ ಕೇಳಿದ, `ಅವಳು ನನ್ನನ್ನು ಯಾರಿಗೋಸ್ಕರ, ಯಾಕಾಗಿ ತ್ಯಾಗ ಮಾಡಿದಳು..?'. ಮನಸಲ್ಲೆ ನಕ್ಕು ಉತ್ತರಿಸಿದೆ, `ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ. ಪ್ರೀತಿಯನ್ನು ಧಿಕ್ಕರಿಸಿ ಹೊರ ನಡೆಯುವವರು, ತಮಗೆ ಇನ್ನೂ ಉತ್ತಮ ಎನ್ನುವ ಆಯ್ಕೆಯ ಕಡೆ ಪಯಣ ಬೆಳೆಸಿರುತ್ತಾರೆ. ದೂರಾಗುವ ಮುನ್ನ ತಮ್ಮನ್ನು ತಾವು ಸಮಥರ್ಿಸಿಕೊಳ್ಳಲು, ಅವರು ಉಪಯೋಗಿಸುವ ಸಮರ್ಥ ಅಸ್ತ್ರವೇ ತ್ಯಾಗ. ಕಾಣದ ಬದುಕಿಗೆ ಯಾರು ಕೂಡಾ ಕೈಯಲ್ಲಿರುವ ಸುಂದರ ಬದುಕನ್ನು ತ್ಯಾಗ ಮಾಡುವುದಿಲ್ಲ. ಅದು ಯಾರೊಬ್ಬರ ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ'.
ಅತ್ತು ಅತ್ತು ಸೋತಿದ್ದ ಗೆಳೆಯ ಅರೆ ಕ್ಷಣದಲ್ಲಿ ನಿದ್ರೆಗೆ ಜಾರಿದ್ದ. ಯಾಕೋ ಅರಿವಿಲ್ಲದೆ ನಾನು ಕೂಡಾ ತುಸು ದುಃಖಿತನಾದೆ. ಮನಸ್ಸು ಪ್ರಕ್ಷುಬ್ಧವಾಗಿತ್ತು. ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಕಿಟಕಿಯಾಚೆ ಒಮ್ಮೆ ದಿಟ್ಟಿಸಿದೆ.. ಯಾವುದೋ ಹಿಂದಿನ ನೆನಪು ಮರುಕಳಿಸಿದಂತಾಗಿ ಕಾಡಿದವು...
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ