ಹೆಣ್ಣು ಜಗದ ಕಣ್ಣು...
ಹೆಣ್ಣು ಅಬಲೆಯೇ...? ಮಂದಗಾಮಿಯೇ...? ಖಂಡಿತ ಅಲ್ಲ. ಅವಳು ಸಹನಾ ಮೂರ್ತಿ ... ಕ್ಷಮಯಾ ಧರಿತ್ರಿ... ಕಾದಾಟಕ್ಕೆ ನಿಂತರೆ ಎದುರಾಳಿಯನ್ನೇ ಸದೆ ಬಡೆಯುವಷ್ಟು ಪ್ರಚಂಡ ಶಕ್ತಿಯನ್ನು ಹುದುಗಿಟ್ಟುಕೊಂಡ ಅಪ್ರತಿಮ ಶೂರಳು... ಹಾಗೆ ಧೀರಳು ಹೌದು.
'ಹಾಗಾದರೆ ಸಮಾಜ ಯಾಕಾಗಿ ಅವಳನ್ನು ಹೀನಾಯವಾಗಿ ಕಾಣುತ್ತದೆ?' ಎನ್ನುವ ಸಾಮಾನ್ಯ ಪ್ರಶ್ನೆಗೆ ಉತ್ತರ, ಎಲ್ಲರಿಗೂ ತಿಳಿದಿರುವ ಹಾಗೆ 'ಪುರುಷ ಸಮಾಜ' ಮನಸ್ಥಿತಿ. ಹೆಣ್ಣಿಗೆ ಗೌರವ ಕೊಡದಿದ್ದಷ್ಟು `ಹೀನ ಮನಸ್ಥಿತಿ' ಪುರುಷ ಸಮಾಜದ್ದೇ...? ಈ ಪ್ರಶ್ನೆಗೆ ಹೆಣ್ಣಿಗೆ ಗೌರವ ನೀಡದ ಸಮಾಜ ಹಾಗೂ ಪುರುಷನೇ ಉತ್ತರ ನೀಡಬೇಕು.
ಸರಿ, ಇದು ಒತ್ತಟ್ಟಿಗಿರಲಿ.. ಮನುಷ್ಯ ಜೀವನದಲ್ಲಿ ಮಹಿಳೆಯ ಪಾತ್ರವೇನು? ಅವಳ ಸಮಸ್ಯೆಗಳೇನು? ಅವಳ ಆಕಾಂಕ್ಷೆಗಳೇನು? ಎನ್ನುವ ಕುರಿತಾದರೂ 'ಪುರುಷ ಸಮಾಜ' ಚಿಂತಿಸಿದೆಯೇ...? ಚಿಂತಿಸಿದ್ದೇ ಆಗಿದ್ದರೆ, ನಮ್ಮ ಸಮಾಜದಲ್ಲಿರುವ ಸಹೋದರಿಯರು, ಸ್ನೇಹಿತೆಯರು, ತಾಯಂದಿರು ಅತ್ಯಾಚಾರ, ದೌರ್ಜನ್ಯ, ಮಾನಸಿಕ ಕಿರುಕುಳದಂತ ಪ್ರಕರಣಕ್ಕೆ ಒಳಗಾಗುತ್ತಿರಲಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕಾಗಿ ಪುರುಷನಿಂದ ಚಿತ್ರಹಿಂಸೆ ಪಡೆಯಬೇಕಾಗಿರಲಿಲ್ಲ.(ಕೆಲವು ಮಹಿಳೆಯರು ಹಾಗೂ ಪುರುಷರು ಇದಕ್ಕೆ ಅಪವಾದದಂತಿದ್ದಾರೆ...!)
ಹೆಣ್ಣು ದೈವೀ ಸ್ವರೂಪಳು. ಅಖಿಲಾಂಡಕೋಟಿ ಬ್ರಹ್ಮಾಂಡ ಶಕ್ತಿಯನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡ ಪ್ರಚಂಡ ಶಕ್ತಿದಾತೆ. ಅವಳಿಂದಲೇ ಇಹವು.. ಅವಳಿಂದಲೇ ಪರವು. ಮಾತೃ ಹೃದಯ ಹೊಂದಿರುವ ಅವಳು ಪೂಜನೀಯ ವ್ಯಕ್ತಿ. ಪ್ರೇಮಿಯ ಆರಾಧನೆಗೆ ಒಳಪಡುವ ಆರಾಧನೀಯ ಮೂರ್ತಿ. ಬದುಕನ್ನು ತಿದ್ದಿ-ತೀಡಿ ಅದಕ್ಕೊಂದು ರೂಪ ನೀಡುವ ಅಪ್ರತಿಮ ಕಲಾವಿದೆ. ಸರ್ವರ ಪ್ರೀತಿಗೂ ಪಾತ್ರಳಾಗುವ ಸರ್ವೋತ್ತಮೆ. ಮಿಗಿಲಾಗಿ ತಾಳ್ಮೆ, ಸಹನೆಯನ್ನು ಮೈಗೂಡಿಸಿಕೊಂಡ ಸಹನಾಶೀಲೆ..!ಸುಮ್ಮನೆ ಕಲ್ಪಿಸಿಕೊಳ್ಳಿ. ಪ್ರಪಂಚದಲ್ಲಿ ಹೆಣ್ಣೇ ಇಲ್ಲದಿದ್ದರೆ ಏನಾಗುತ್ತಿತ್ತು..? ಎಂದು. ಇಲ್ಲ.... ಕಲ್ಪನೆಗೂ ನಿಲುಕದ ಕಲ್ಪನೆಯದು...! ಹೆಣ್ಣಿಲ್ಲದೆ ಈ ಪ್ರಪಂಚವೇ ಇಲ್ಲ. ಪ್ರತಿಯೊಂದು ಜೀವ ಜಂತುಗಳ ಹುಟ್ಟಿಗೂ ಹೆಣ್ಣೆ ಕಾರಣಳು. ಹಾಗಂತ 'ಇದರಲ್ಲಿ ಗಂಡಿನ ಪಾತ್ರವೇನೂ ಇಲ್ಲವೇ?' ಎಂದು ಕೇಳಬಹುದು. ಆದರೆ, ಸೃಷ್ಟಿ ಕ್ರಿಯೆಯಲ್ಲಿ ಗಂಡಿನದು ಕೇವಲ `ನಿಮಿತ್ತ' ಮಾತ್ರ. ಹಾಗಂತ ಬದುಕಿನ ವಿವಿಧ ಮಜಲಿನಲ್ಲಿ ಗಂಡಿನ ಪಾತ್ರವೂ ಹೆಣ್ಣಿನಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವುದು ಬೇರೆ ಮಾತು.
ಬದುಕಿನ ಸರ್ವತೋಮುಖ ಏಳ್ಗೆಗೆ ಹೆಣ್ಣಿನ ಪಾತ್ರ ಅತೀ ಅವಶ್ಯ. ಅವಳು ಸಹನಾಶೀಲಳಾಗಿದ್ದು, ಬದುಕಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು, ನೋವುಗಳನ್ನು ಹೊರ ಪ್ರಪಂಚಕ್ಕೆ ತೋರ್ಪಡಿಸದೆ ತಾನೊಬ್ಬಳೇ ಅನುಭವಿಸುತ್ತಿರುತ್ತಾಳೆ. ನೋವನ್ನು ನಲಿವಾಗಿ ಪರಿವತರ್ತಿಸಿಕೊಳ್ಳಲು ಹೆಣಗಾಡುತ್ತಾಳೆ. ತನ್ನ ಕುಟುಂಬ ವರ್ಗದವರ ಹಿತ ಕಾಯಲು ಬದುಕನ್ನೇ ಪಣಕ್ಕಿಟ್ಟು ಹಗಲು ರಾತ್ರಿ ಹೋರಾಡುತ್ತಿರುತ್ತಾಳೆ. ನಂಬಿದವರ ನಂಬಿಕೆಯನ್ನು ಕಾಯ್ದು, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಅರ್ಥಪೂರ್ಣವಾಗಿ ಬಾಳ್ವೆ ನಡೆಸುತ್ತಾಳೆ. ಆ ಕಾರಣಕ್ಕೆ ಹಿರಿಯರು ಹೇಳಿದ್ದು, ಒಂದು ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇದ್ದೇ ಇರುತ್ತಾಳೆ ಎಂದು.
ಹೀಗೊಂದು ವಾಸ್ತವ....!
ನವಮಾಸ ಕಾಲ ಮಗುವನ್ನು ತನ್ನ ಉದರದಲ್ಲಿಟ್ಟುಕೊಂಡು ಕಾಣದ ನೋವನ್ನು ಅನುಭವಿಸುವ ಆ ತಾಯಿಯ ಯಾತನೆ ನಿಜಕ್ಕೂ ಕಲ್ಪನಾತೀತ. ಮಗುವಿನ ಅಳುವಿನ ಕೂಗು ಕಿವಿಗೆ ಬೀಳುತ್ತಿದ್ದಂತೆ ತನ್ನೆಲ್ಲ ನೋವನ್ನು ಆಕೆ ಮರೆತು ಬಿಡುತ್ತಾಳೆ. ನೋವಿನ ಕಣ್ಣೀರು ಕ್ಷಣಮಾತ್ರದಲ್ಲಿ ಆನಂದ ಭಾಷ್ಪವಾಗಿ ಬದಲಾಗಿಬಿಡುತ್ತದೆ. ಯಮ ಯಾತನೆಯಲ್ಲೂ ಬದುಕಿ ಸಾರ್ಥಕ್ಯತೆ ಅನುಭವಿಸುವ ಅಪರೂಪದ ಘಳಿಗೆಯದು.
ನೋವಲ್ಲೂ ನಗು ಕಂಡವಳು...
ಈ ಕುರಿತು ತಾಯಿಯೊಬ್ಬಳು ಹೇಳಿದ ಮಾತು ನೆನಪಿಗೆ ಬರುತ್ತದೆ.... 'ಗರ್ಭಧರಿಸಿದ ಪ್ರಾರಂಭದಿಂದ ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಲೇ ಒಂಭತ್ತು ತಿಂಗಳು ಕಳೆಯುತ್ತೇವೆ. ತಿನ್ನುವ ಬಯಕೆ ದಿನದಿಂದ ದಿನಕ್ಕೆ ಮಿತಿ ಮೀರುತ್ತವೆ. ಹಾಗಂತ ಸಿಕ್ಕಿದ್ದನ್ನೆಲ್ಲ ತಿನ್ನಲು ಆಗದು. ಹೊಟ್ಟೆಯಲ್ಲಿರುವ ಪುಟ್ಟ ಪಾಪುವಿಗೆ ಏನಾಗುತ್ತದೋ ಎನ್ನುವ ಭಯ. ಕಾಲ ಕಾಲಕ್ಕೆ ವೈದ್ಯರಲ್ಲಿಗೆ ಭೇಟಿ ನೀಡಬೇಕು. ಅವರು ಹೇಳಿದ ಹಾಗೆ ಅನುಸರಿಸಬೇಕು. ಕಡೆಗೊಂದು ದಿನ ಪಾಪು ಬರುವ ಮುನ್ಸೂಚನೆ ತೀರಾ ನೋವಿನ ಮೂಲಕ ತಿಳಿದು ಬರುತ್ತದೆ. ಪ್ರಾಣವನ್ನೇ ಕಿತ್ತು ತಿನ್ನುವ ನೋವದು. ಏಕಕಾಲದಲ್ಲಿ ನೂರಾರು ಎಲುಬುಗಳು ಮುರಿದಾಗ ಉಂಟಾಗುವಂತ ನೋವು, ಪಾಪು ಜನಿಸುವ ಸಂದರ್ಭದಲ್ಲಿ ಉದ್ಭವಿಸುತ್ತದೆ. ಆ ನೋವಿನಲ್ಲೂ ಸಂತೃಪ್ತ ಭಾವ ಮೇಳೈಸುತ್ತದೆ. ಬದುಕು ಸಾರ್ಥಕತೆ ಪಡೆಯುತ್ತದೆ'
ಪ್ರಕೃತಿ ಸಮಾನಳಾದ ಹೆಣ್ಣನ್ನು ಪೂಜಿಸೋಣ.... ಆರಾಧಿಸೋಣ.... ಗೌರಸವಿಸೋಣ... ಹಾಗೆ ಅವಳಿಂದ ಬದುಕನ್ನು ಉನ್ನತೀಕರಿಸಿಕೊಳ್ಳೊಣ.
-ನಾಗರಾಜ್ ಬಿ.ಎನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ