ತೋಳ ತೆಕ್ಕೆಯಲಿ ಬಂಧಿಯಾಗಲಿ....!
(ಮಳೆ ಹುಡುಗಿ ನೆನಪಿಂದ)
ಬರೋಬ್ಬರಿ ಅರವತ್ಮೂರು ದಿನಗಳ ನಂತರ ನನ್ನೂರಿಗೆ(ಕುಮಟಾ) ತೆರಳುತ್ತಿದ್ದೇನೆ. ಏನೋ ಅವ್ಯಕ್ತ ಆನಂದ ಮೈ-ಮನವೆಲ್ಲ ಆವರಿಸಿ ಬಿಟ್ಟಿದೆ. ಕುಟುಂಬದವರನ್ನು ಸೇರಿಕೊಳ್ಳುತ್ತೇನೆಂಬ ಸಂತೋಷ ಒಂದೆಡೆ ಇದ್ದರೆ, ನನ್ನವಳು ಮುನಿಸಿಕೊಂಡು ಕಣ್ಣ ಮುಚ್ಚಾಲೆಯಾಟ ಆಡುತ್ತಿದ್ದಾಳೆ ಅನ್ನುವ ಬೇಸರ ಕೂಡಾ ಇನ್ನೊಂದೆಡೆ. ಹಾಗೆಯೇ, ನನ್ನಾತ್ಮ ಬಂಧು ಜೊತೆಯಿಲ್ಲ ಅನ್ನೋ ಕೊರಗು ಮತ್ತೊಂದೆಡೆ.
ನೋವು-ನಲಿವಿನ ದ್ವಂದ್ವದ ನಡುವೆಯೇ ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದೇನೆ. ಅತ್ತ ಮಲೆನಾಡೂ ಅಲ್ಲದ, ಇತ್ತ ಬಯಲು ಸೀಮೆಯೂ ಅಲ್ಲದ ನನ್ನೂರಿನ ಹಾದಿಯಲ್ಲಿ ಪಯಣಿಸುವುದೇ ಒಂದು ವಿಶಿಷ್ಟ ಅನುಭೂತಿ. ಹುಬ್ಬಳ್ಳಿ-ಕುಮಟಾ ಮಾರ್ಗದ ಹೆದ್ದಾರಿಯ ಅಕ್ಕಪಕ್ಕದ ಸಾಲು ಸಾಲು ಮರಗಳು ಕಣ್ಮನಗಳನ್ನು ತಣಿಸುತ್ತವೆ. ಒಂದೊಂದು ಮರಗಳು ಮುಗಿಲನ್ನೆ ಮುತ್ತಿಕ್ಕಿದಂತೆ ಭಾಸವಾಗುತ್ತವೆ. ಹಚ್ಚ-ಹಸಿರಿನ ಕಾನನದ ನಡುವೆ, ಏರು-ತಗ್ಗುಗಳನ್ನು ದಾಟುತ್ತ ಏದುಸಿರು ಬಿಟ್ಟು ಸಾಗುವ ಬಸ್ನ ಮೇಲಿನ ಪಯಣ ವರ್ಣನಾತೀತ. ಅದು ಕೇವಲ ಅನುಭವಕ್ಕೆ ಮಾತ್ರ ಸೀಮಿತಿವೇನೋ...!
ನನ್ನೂರು ಕುಮಟಾ ಸಮೀಪಿಸುತ್ತಿದ್ದಂತೆ ಆ ನೆಲದ ಮಣ್ಣಿನ ಘಮ ತಂಗಾಳಿಯಲ್ಲಿ ಬೆರೆತು ಮೈ-ಮನವೆಲ್ಲ ಆವರಿಸಿಬಿಡುತ್ತದೆ. ಅರೆ ಕ್ಷಣದಲ್ಲಿ ನನ್ನ ಜೀವನದಿ ಅಘನಾಶಿನಿ ತನ್ನೆರಡು ತೋಳುಗಳನ್ನು ಚಾಚಿ ತಬ್ಬಿಕೊಳ್ಳುವಂತೆ ದೂರದಿಂದಲೇ ಸ್ವಾಗತಿಸುತ್ತಾಳೆ. ಇವೆಲ್ಲವನ್ನು ಸುಮ್ಮನೇ ನೋಡುತ್ತ, ಅನುಭವಿಸುತ್ತ ಕಣ್ಮುಚ್ಚಿಕೊಂಡು ಬಿಡುತ್ತೇನೆ. ಅಮ್ಮನ ಮಡಿಲಲ್ಲಿ ಹಾಲುಗಲ್ಲದ ಹಸುಗೂಸು ಪವಡಿಸಿದಂತೆ...! ತಾದಾತ್ಮತೆಯಿಂದ ಗಟ್ಟಿಯಾಗಿ ಉಸಿರೆಳೆದುಕೊಂಡು ಭಾವ ಪರಾಕಾಷ್ಠೆಗೆ ಜಾರಿ ಬಿಡುತ್ತೇನೆ.ಇದು ಪ್ರತಿ ಬಾರಿ ಊರಿಗೆ ಹೋಗುವಾಗ ಆಗುವ ಸಾಮಾನ್ಯ ಭಾವಾನುಭವ. ಆದರೆ, ಈ ಬಾರಿ ಆ ಭಾವಕ್ಕೆ ನನ್ನವಳು ಜೊತೆಯಾಗಿ ಇನ್ನಷ್ಟು ಕಿಚ್ಚು ಹಚ್ಚಿಸುತ್ತಾಳೆ ಎಂದು ಕೊಂಡಿದ್ದೆ. ಆದರೆ, ಅವಳು ಕಳೆದ ಹದಿನೈದು ದಿನಗಳಿಂದ ಯಾಕೋ ಮುನಿಸಿಕೊಂಡಿದ್ದು, ಬರಲೊಲ್ಲೆ ಎನ್ನುತ್ತಿದ್ದಾಳಂತೆ. ಆದರೂ.... ಆಗೊಮ್ಮೆ, ಈಗೊಮ್ಮೆ ಎಂದು ಬಂದು ಹೋಗುತ್ತಿದ್ದಾಳೆನ್ನುವ ಅಮ್ಮನ ನುಡಿ ತುಸು ಸಾಂತ್ವನ ತಂದಿದೆ.
ಪ್ರತಿ ಬಾರಿ ಜೂನ್ ಅಂತ್ಯದ ಸಮಯಕ್ಕೆ ನಾ ನನ್ನೂರಿಗೆ ಕಾಲಿಡುತ್ತಿದ್ದೆ. ಈ ಬಾರಿ ಹೋಗಲಿಲ್ಲ ಎನ್ನುವ ಕಾರಣಕ್ಕೆ `ನನ್ನವಳು' ಮುನಿಸಿಕೊಂಡಿರಬಹುದು ಎಂದು ಭಾವಿಸಿದ್ದೇನೆ. ಇನಿಯನ ವಿರಹದ ತಾಪದಲ್ಲಿ ನೊಂದು ಬೆಂದ ಅವಳು, ಇನ್ನಿಲ್ಲದಂತೆ ಬಗೆ ಬಗೆಯಾಗಿ ಪರಿತಪಿಸುತ್ತಿರಬಹುದು. ವಿರಹದ ತಾಪದಿಂದಾಗಿಯೇ ಅವಳಲ್ಲಿರುವ 'ಜೀವ ಜಲ'ವೆಲ್ಲ ಬತ್ತಿ ಹೋಗಿದೆ ಎಂದೆನಿಸುತ್ತಿದೆ. ಹುಚ್ಚು ಹುಡುಗನ ತೋಳ ತೆಕ್ಕೆಯಲ್ಲಿ ಬಂಧಿಯಾದಾಗಲಾದರೂ ಅವಳು ತನ್ನ 'ನಿಜ ಸ್ವರೂಪ' ಪ್ರದಶರ್ಿಸಲಿ. ಭೋರ್ಗರೆದು ಅತ್ತು ಕರೆಯಲಿ. ಅವಳ ಕ(ಪ)ಣ್ಣೀರ ಧಾರೆಯಲಿ ನಾನು ತೋಯ್ದು ತೊಪ್ಪೆಯಾಗಲಿ.
ಹಾಗೆಯೇ, ಸಣ್ಣಗೆ ನೆಗಡಿಯಾಗಲಿ... ಅರೆ ಬರೆಯಾಗಿ ಮೈ ಬೆಚ್ಚಗಾಗಲಿ.... ಹಂಡೆಯಲ್ಲಿ ಅಮ್ಮ ಕಾಯಿಸಿಟ್ಟ ಬಿಸಿ ನೀರು ನನ್ನ ಮೈ ಮೇಲೆ ಬೀಳಲಿ... ಅರವತ್ಮೂರು ದಿನಗಳ ನಂತರ ನನ್ನೂರಿಗೆ ಇಟ್ಟ ಪುಟ್ಟ ಹೆಜ್ಜೆ ಬದುಕಿನ ಸಾರ್ಥಕ್ಯತೆಗೆ ಒಂದು ಮುನ್ನುಡಿ ಬರೆಯಲಿ....
ಆತ್ಮ ಬಂಧುವಿನ ವಿರಹದಲಿ, ಮಳೆ ಹುಡುಗಿಯಲಿ ನೆನಪಲ್ಲಿ... ನನ್ನೂರ ಕಡೆ ಪಯಣ....!
-ನಾಗರಾಜ್ .ಬಿ.ಎನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ