ಕ್ಷಮಿಸಿ....
'ಇನ್ಲ್ಯಾಂಡ್ ಲೆಟರ್ ಸಮಾಧಿಯಾಗಿದೆ.....!!'ಮೊಬೈಲ್ ಸಂಭಾಷಣೆಯಲ್ಲಿ ಹೇಳಲಾಗದ ಎಷ್ಟೋ ಭಾವನೆಗಳು ನಮ್ಮಲ್ಲಿ ಹುದುಗಿರುತ್ತವೆ. ಹೀಗೆ ಮಾತು ಮೌನವಾದಾಗ ನೆರವಿಗೆ ಬರುವುದು ಸುಂದರ ಅಕ್ಷರ ಸರಸ್ವತಿಯೇ...! ಮುಖಕ್ಕೆ ಮುಖ ಕೊಟ್ಟು ಹೇಳಲಾಗದ ವಿಷಯಗಳನ್ನು ತಿಳಿಸುವ ತಾಕತ್ತು ಇರುವುದು ಈ ಅಕ್ಷರಕ್ಕೆ ಮಾತ್ರ. ಅಣ್ಣ ತಂಗಿಗೆ ಕಿವಿಹಿಂಡಿ ಬರೆಯುವ ಪತ್ರ, ಅಪ್ಪ-ಅಮ್ಮರಿಗೆ ಬರೆಯುವ ಭಯಮಿಶ್ರಿತ ಪತ್ರ, ಸ್ನೇಹಿತರಿಗೆ ಬರೆಯುವ ತುಂಟ ಪತ್ರ, ಹಿರಿಯರಿಗೆ ಬರೆಯುವ ಗೌರವ ಪತ್ರ, ಅಜ್ಜ-ಅಜ್ಜಿಯರಿಗೆ ಬರೆಯುವ ಮುಗ್ದ ಪತ್ರ, ಪ್ರೇಮಿಸುವ ಹುಡುಗ/ಹುಡುಗಿ ಬರೆಯುವ ಪ್ರೇಮ ಪತ್ರ... ಹೀಗೆ ಎಲ್ಲ ಪತ್ರಗಳು ಒಂದಕ್ಕೊಂದು ಭಿನ್ನ-ವಿಭಿನ್ನವಾಗಿರುತ್ತವೆ. ಇಂತಹ ಅದ್ಭುತ ಪತ್ರ ಬರೆಯುವ ಕಲೆ, ಹವ್ಯಾಸ ಕಾಲಚಕ್ರದ ಉರುಳಾದಲ್ಲಿ ನಮ್ಮಿಂದ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.....!!
ಪ್ರತಿಯೊಂದು ಬದಲಾವಣೆಗೆ 'ಕಾಲ'ನ ಕಡೆಗೆ ಬೆರಳು ತೋರಿಸುವ ನಾವು ಎಷ್ಟೋ ಮಾನವ ಸಂಬಂಧಗಳನ್ನು ಅದರಿಂದ ದೂರ ಮಾಡಿಕೊಳ್ಳುತ್ತಿದ್ದೇವೆ. ಆಧುನಿಕತೆಯ ತೆಕ್ಕೆಗೆ ಸಿಲುಕಿ `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಾ' ಇದ್ದೇವೆ. ಸುಂದರ, ಸವಿ ಮಧುರ ಆತ್ಮಗಳ ನಡುವಿನ ಸಂಪರ್ಕ ಸೇತುವೆಯನ್ನೆ ತುಂಡರಿಸಿಕೊಂಡು ಬಿಟ್ಟಿದ್ದೇವೆ....!!
ಹೌದು, 'ಅಭಿವೃದ್ಧಿಯೆಂಬ ಅವನತಿ'ಯೆಡೆಗೆ ಮುಖ ಮಾಡಿ, ಸಂಪೂರ್ಣ ಬದುಕನ್ನೇ ಯಾಂತ್ರಿಕರಣ ಮಾಡಿಕೊಂಡಿದ್ದೇವೆ. ಪ್ರತಿ ದಿನದ ಬೆಳಗನ್ನು ನಮ್ಮ ಎರಡೂ ಅಂಗೈನ್ನು ನೋಡಿಕೊಂಡು 'ಕರಾಗ್ರೆ ವಸತೆ ಲಕ್ಷ್ಮೀ ಕರಮಧ್ಯೆ ಸರಸ್ವತಿ.......' ಎಂಬ ಶ್ಲೋಕ ಹೇಳಿ ದೈನಂದಿನ ಕಾರ್ಯ ಪ್ರಾರಂಭಿಸುತ್ತಿದ್ದೇವು. ಆದರೆ ಈಗ, ರಾತ್ರಿ ಮಲಗುವಾಗ ತಲೆ ಪಕ್ಕದಲ್ಲಿಟ್ಟ ಮೊಬೈಲ್ನಲ್ಲಿ `ಯಾವ ಹೊಸ ಸಂದೇಶ ಬಂದಿದೆ...?', 'ಯಾರು ಶುಭೋದಯದ ಸಂದೇಶ ಕಳುಹಿಸಿದ್ದಾರೆ....?', 'ಯಾರಿಗೆ ಫೋನ್ ಮಾಡಬೇಕು?' ಎಂದು ಯೋಚಿಸುತ್ತ ಮೊಬೈಲ್ ನೋಡುತ್ತಲೇ ಕಣ್ಣರಳಿಸುತ್ತೇವೆ. ಎಲ್ಲಿ ಹೋದವು ನಮ್ಮ ಸಂಸ್ಕಾರ... ಸಂಸ್ಕೃತಿ....?ಇಂದು ಅಂಗೈಯಲ್ಲಿಯೇ ಪ್ರಪಂಚವಿದೆ. ಪ್ರಪಂಚದ ಯಾವುದೇ ಭಾಗದ ಮಾಹಿತಿ ಅಥವಾ ಸುದ್ದಿಗಳು ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣೆದುರು ಗೋಚರಿಸುತ್ತವೆ. ದಿನದಿಂದ ದಿನಕ್ಕೆ ಪ್ರಪಂಚ ಕಿರುದಾಗುತ್ತ ಸಾಗುತ್ತಿವೆ. ಸಾವಿರಾರು ಕಿ.ಮೀ. ದೂರದಲ್ಲಿರುವ, ಸಪ್ತಸಾಗರದ ಆಚೆ ಎಲ್ಲೋ ಇರುವ ಸ್ನೇಹಿತರನ್ನು, ಬಂಧುಗಳನ್ನು ಇಂದು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾಗಿದೆ. ಆದರೆ ಈ ಸಂಪರ್ಕ ಸೀಮಿತ ಅವಧಿಯಲ್ಲಿ ಕೆಲವು ಯೋಗ ಕ್ಷೇಮಕ್ಕಷ್ಟೇ ಮೀಸಲಾಗಿರುತ್ತವೆಯೇ ಹೊರತು, ಭಾವನಾತ್ಮಕ ಸಣ್ಣಪುಟ್ಟ ಸೂಕ್ಷ್ಮ ಸಂವೇದನೆಗೆ ಅವಕಾಶ ನೀಡದು. ಅಲ್ಲೇನಿದ್ದರೂ, ಕರೆನ್ಸಿ ಅವಲಂಬಿತ ವ್ಯಾವಹಾರಿಕ ಮಾತುಕತೆ, ಇಲ್ಲವೇ ಕೆಲವು ವೇಳೆ ಯೋಗ ಕ್ಷೇಮ ವಿನಮಯವಷ್ಟೇ...!!
ಈ ಹಿಂದೆ ಸಂಬಂಧಗಳನ್ನು ಬೆಸೆಯಲು ಮುಖ್ಯ ವೇದಿಕೆಯಾಗಿ ಪತ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ದೂರದಲ್ಲೆಲ್ಲೋ ವಿದ್ಯಾಭ್ಯಾಸ, ಉದ್ಯೋಗ ಮಾಡುತ್ತಿದ್ದವರು ಈ ಪತ್ರದ ಮೂಲಕವೇ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು. ಮಗನ ಪತ್ರದ ದಾರಿ ಕಾಯುವ ಅಪ್ಪ-ಅಮ್ಮ... ಅಪ್ಪ-ಅಮ್ಮರ ಪತ್ರದ ದಾರಿ ಕಾಯುವ ಮಗ... ಪ್ರೇಯಸಿಯ ಪತ್ರದ ಸಾಲುಗಳನ್ನು ಓದುವ ಕಾತುದರಲ್ಲಿರುವ ಪ್ರಿಯಕರ.... ಹೀಗೆ ತವಕ, ತಲ್ಲಣಗಳು ಆ ಪತ್ರದ ಕಾಯುವಿಕೆಯಲ್ಲಿ ಸಿಗುತ್ತಿತ್ತು. ಪತ್ರದ ಒಂದೊಂದು ಸಾಲುಗಳು ಕೂಡಾ ನೆನಪು, ಕನಸು, ಕನವರಿಕೆ, ಆಶಯ, ಅಭಿಪ್ರಾಯ, ಕೀಟಲೆ, ತುಂಟತನ, ಪ್ರೀತಿ, ಮಮತೆ, ವಿಶ್ವಾಸ, ಕಕ್ಕುಲಾತಿ, ಕಾಳಜಿಗಳನ್ನು ಸಾಕ್ಷಾತ್ಕರಿಸುತ್ತಿತ್ತು. ಈ ಮೂಲಕ ಪರಸ್ಪರ ಸಂಬಂಧ ಹಾಗೂ ಭಾವನೆಗಳು ಇನ್ನಷ್ಟು ಆಳವಾಗುತ್ತ ಹೋಗುತ್ತಿತ್ತು. ಆದರೆ, ಮೊಬೈಲ್ ಮಾಯೆಯಿಂದಾಗಿ ಪತ್ರ ಬರೆಯುವ ಹವ್ಯಾಸ ಮಾಯವಾಗಿ, ಸಂಬಂಧ-ಭಾವನೆಗಳೆಲ್ಲ ಕೇವಲ ವ್ಯಾಪಾರ ವಹಿವಾಟು ಆಗಿಬಿಟ್ಟಿವೆ.
ಮೊಬೈಲ್ನಲ್ಲಿ ಸಂಭಾಷಣೆ ಮಾಡುವಾಗ ನಮ್ಮ ಗಮನವೆಲ್ಲ ಕೇವಲ ಕರೆನ್ಸಿ ಕಡೆಗೇ ಕೇಂದ್ರಿಕೃತವಾಗಿರುತ್ತವೆ. ವ್ಯವಹಾರದ ದ್ಯೋತಕ ಮನಃಸ್ಥಿತಿಯಾದ ಇದು ಸಂಬಂಧ ಹಾಗೂ ಭಾವನೆಗಳಿಗೆ ಅವಕಾಶವಿಲ್ಲದಂತೆ ಮಾಡುತ್ತದೆ. ಮೊಬೈಲ್ ಮಾತುಕತೆಗಳು ಪತ್ರದಷ್ಟು ಆಪ್ತ ಹಾಗೂ ಮಧುರ ಎಂದೆನಿಸದು. ಪತ್ರದಲ್ಲಿ ಬರೆದಿರುವ ಅಷ್ಟೂ ಸಾಲುಗಳ ಒಂದೊಂದು ಶಬ್ದಗಳು ಭಾವನೆಯ ಕೊಳದಲ್ಲಿ ಮಿಂದೆದ್ದು ಬಂದಿರುತ್ತವೆ. ಆ ಒಂದೊಂದು ಪದಗಳು ಹೃದಯದ ಗೂಡಲ್ಲಿ ನುಗ್ಗಿ, ಬೆಚ್ಚಗೆ ಅವಿತು ಬಿಡುತ್ತವೆ.
ಮನೆಯಲ್ಲಿರುವ ನಾಯಿ-ಬೆಕ್ಕಿನ ಸ್ನೇಹ ಹೇಗಿದೆ...? ಕೊಟ್ಟಿಗೆಯಲ್ಲಿ ಹೊಸ ಅತಿಥಿಯಾರಾದರೂ ಬಂದಿದ್ದಾರೋ ಇಲ್ಲವೋ...? ಪಕ್ಕದ್ಮನೆ ಸೋಮಣ್ಣ ಮದುವೆ ಆದನಾ...? ಹಾಲು ಮಾರುವ ಹುಡುಗ ಗೋಪಿ ಈಗಲೂ ಬರುತ್ತಿದ್ದಾನಾ...? ಅಜ್ಜಿಯ ಆರೋಗ್ಯ ಈಗ ಹೇಗಿದೆ...? ನಾನು ಪ್ರೀತಿಸುವ ಮರ, ಗಿಡಗಳೆಲ್ಲ ಹೇಗಿವೆ...? ಇಂತಹ ಸಣ್ಣ ಪುಟ್ಟ ಭಾವ ಸಂವೇದನಾತ್ಮಕ ವಿಷಯಗಳನ್ನು ಪತ್ರದಲ್ಲಿ ಮಾತ್ರ ಬರೆಯಲು ಸಾಧ್ಯವೇ ಹೊರತು ಮೊಬೈಲ್ನಲ್ಲಿ ಸಾಧ್ಯವಿಲ್ಲ.
ಒಮ್ಮೆ ಬರೆದ ಅಥವಾ ಬಂದ ಪತ್ರಗಳನ್ನು ಹಾಗೆಯೇ ಜೋಪಾನ ಮಾಡಿಟ್ಟುಕೊಂಡು, ವರ್ಷಗಳ ನಂತರವೂ ಓದಬಹುದು. ಅಂದಿನ ಭಾವನೆ ಹಾಗೂ ಬದುಕನ್ನು ನೆನಪಿಸಿಕೊಂಡು ನಮ್ಮನ್ನು ನಾವು ಅರ್ಥೈಸಿಕೊಳ್ಳಬಹುದು. ಅದು ಬದುಕಿಗೆ ಹೊಸ ತಿರುವು ನೀಡಿ, ನಾವೆಲ್ಲ ಮರೆಯುತ್ತಿರುವ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಜಾಗೃತಗೊಳಿಸಲು ಸಹಕಾರಿಯಾಗಬಹುದು. ಅದು ಒಂದು ನುಡಿಚಿತ್ರವಿದ್ದಂತೆ. ಸದಾ ಹಸಿರಿನಿಂದ ಕಂಗೊಳಿಸುತ್ತ, ನಳನಳಿಸುತ್ತಲೇ ಇರುತ್ತದೆ. ಓದಿದಷ್ಟು ಸಾಲದು. ಒಂದೊಂದು ಬಾರಿ ಓದಿದಾಗಲೂ ಒಂದೊಂದು ಭಾವ. ಮೈ-ಮನ ಪುಳಕಗೊಳ್ಳುವ ಸಂತೋಷವನ್ನು ಮೊಗೆ ಮೊಗೆದು ನೀಡುತ್ತವೆ.
ಎಂದೋ... ಯಾರೋ... ಮಾಡಿದ ನಾಲ್ಕೈದು ಶಬ್ದಗಳ ಸಂದೇಶವನ್ನು ಮೊಬೈಲ್ ಇನ್ ಬಾಕ್ಸ್ನಲ್ಲಿ ಬಚ್ಚಿಟ್ಟುಕೊಂಡು, ದಿನಕ್ಕೆ ಎರಡು-ಮೂರು ಬಾರಿ ನೋಡಿ ಸಂತೋಷ ಪಡುವ ನಾವು, ಸ್ನೇಹಿತರದ್ದೋ... ಅಪ್ಪ-ಅಮ್ಮರದ್ದೋ ಪತ್ರ ಬಂದರೆ ಇನ್ನೆಷ್ಟು ಆನಂದ ಪಡಬಹುದು ಅಲ್ಲವೇ?
ಹಾಗೆಯೇ, ನಮ್ಮ ಆಪ್ತೇಷ್ಟರಲ್ಲಿ ಯಾರಿಗಾದರೂ ಒಂದು ಪತ್ರ ಬರೆಯೋಣ. ಪರಸ್ಪರ ಭಾವನೆಗಳನ್ನು ಅಕ್ಷರ ಸರಸ್ವತಿಯ ಮೂಲಕ ವಿನಿಮಯ ಮಾಡಿಕೊಳ್ಳೋಣ. ಆಗ ನೋಡಿ, ಮನಸ್ಸು ಹಕ್ಕಿಯಂತೆ ಹೇಗೆ ಗರಿ ಬಿಚ್ಚಿ ಬಾನಂಗಳದಲ್ಲಿ ತೇಲಾಡುತ್ತದೆಯೆಂದು. ಈ ಪತ್ರ ಆತ್ಮಾನುಬಂಧದ ಅನೂಹ್ಯ ಸೆಳೆತಕ್ಕೆ ಒಳಗಾಗಿಸಿ ಪ್ರೀತಿ, ಸ್ನೇಹ, ವಿಶ್ವಾಸದ ನೆಲಗಟ್ಟನ್ನು ಇನ್ನಷ್ಟು ಭದ್ರವಾಗುತ್ತದೆ.
ಸೂಕ್ಷ್ಮ ಸಂವೇದನಾಶೀಲ ಗುಣಗಳನ್ನು ನಮ್ಮಲ್ಲಿ ಜಾಗೃತವಾಗಿಸಿ, ಇಡೀ ಜಗತ್ತನ್ನೇ ಪ್ರೀತಿಸು ಮಹೋನ್ನತ ಗುಣವನ್ನು ನೀಡಿ, ಬದುಕನ್ನು ಸಂತೃಪ್ತಿಗೊಳಿಸುವ ಒಂದು ಪುಟ್ಟ ಪತ್ರ, ಪ್ರಪಂಚವನ್ನೇ ಕಿರಿದು ಮಾಡಿದ ಆಧುನಿಕ ಜಗತ್ತಿನ ಮೊಬೈಲ್ ನೀಡಲು ಸಾಧ್ಯವೇ.......!
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ