ಯಾಕೆ ಹೀಗೆ.....?
ಬದುಕೇ ಒಂದು ಭ್ರಮೆ. ವಿಚಿತ್ರ. ನಾನಾ ತಿರುವುಗಳು. ಇಲ್ಲಿ ನಿರೀಕ್ಷಿತ ಫಲಕ್ಕಿಂತ ಅನಿರೀಕ್ಷಿತ ಅವಘಡಗಳದ್ದೇ ಹೆಚ್ಚು ಪಾರುಪತ್ಯ. ಸಮಚಿತ್ತದ ತಾದಾತ್ಮತೆಯಿಂದ ಬದುಕು ಮುನ್ನಡೆಸಿದರೆ ಎಲ್ಲವೂ ಸರಾಗ... ಹಾಗೆ ನಿರಾಳ...!!
ಎಲ್ಲ ಮನಸ್ಸುಗಳು ಒಂದೇ ತೆರನಾದ ಭಾವನೆಯನ್ನು ಸ್ಫುರಿಸುವುದಿಲ್ಲ. ಒಬ್ಬನದು ಭಾವುಕ ಮನಸ್ಸಿದ್ದರೆ, ಇನ್ನೊಬ್ಬನದು ಕಟುಕ ಮನಸ್ಸಾಗಿರುತ್ತದೆ. ಅದು ಅವರವರ ಸಂಸ್ಕಾರ ಹಾಗೂ ಬೆಳೆದು ಬಂದ ವಾತಾವರಣದ ಮೇಲೆ ನಿರ್ಧರಿತವಾಗುತ್ತದೆ. ಆದರೆ, ಕೆಲವು ಬಾರಿ ಉದ್ದೇಶಪೂರ್ವಕವಾಗಿ ಮನಸ್ಸಿನ ದಾರಿಯನ್ನೂ ತಪ್ಪಿಸುವವರೂ ಇರುತ್ತಾರೆ... ಅದು ಬೇರೆ ಮಾತು..!!
ಪಾಪ... ಆ ಮನಸ್ಸಿನದ್ದು ಏನೂ ತಪ್ಪಿರುವುದಿಲ್ಲ. ಅದು ಎಲ್ಲರ ಜೊತೆಯೂ ನಗು ನಗುತ್ತಲೇ ಇರುತ್ತದೆ. ಅದಕ್ಕೆ ಗಂಡು-ಹೆಣ್ಣು, ಬಡವ-ಶ್ರೀಮಂತ, ಜಾತಿ-ಧರ್ಮ ಎನ್ನುವ ಯಾವೊಂದು ಭೇದವೂ ಇರುವುದಿಲ್ಲ. ಆದರೂ ಕೆಲವರು ಅದನ್ನು ತಪ್ಪಿತಸ್ಥ ಎನ್ನುವ ಸ್ಥಾನಕ್ಕೆ ನೂಕಿ ಬಿಡುತ್ತಾರೆ. ವಿವೇಚನಾ ರಹಿತ ವ್ಯಾಖ್ಯಾನ ನೀಡುತ್ತ, ಅಂತೆ-ಕಂತೆಗಳ ಗಂಟು-ಮೂಟೆಯನ್ನೇ ನಿಜ ಮಾಡಲು ಹೋಗುತ್ತಾರೆ. ಕಪೋಲಕಲ್ಪಿತ ನುಡಿಗಳು ಆ ಸಂದರ್ಭದಲ್ಲಿ ವಿಜ್ರಂಭಿಸಿ... ಝೇಂಕರಿಸುತ್ತದೆ...!ಹಾಗಾದರೆ, ಆ ಮನಸ್ಸಿಗೆ 'ತಪ್ಪಿತಸ್ಥ' ಎಂದು ಹೆಸರು ಬರಲು ಕಾರಣವೇನು. ಬಹುಶಃ ಎಲ್ಲರೂ ಒಂದೇ ಎಂದು ಪ್ರೀತಿಯಿಂದ ಮಾತನಾಡುತ್ತಿದ್ದುದ್ದು ಕಾರಣವಾಗಿರಬಹುದು...! ಅಥವಾ, ಪ್ರೀತಿಯ ಸಹಬಾಳ್ವೆ ಸಹಿಸದ ಅಸೂಯೆಯೇ ಕಾರಣವಾಗಿರಬಹುದು...! ಅಥವಾ, ಎಲ್ಲರೊಳಗೊಂದಾದ ಮನಸ್ಸಿನ ಭಾವ ಅರ್ಥ ಮಾಡಿಕೊಳ್ಳದ ಸಂಕುಚಿತ ಮನಸ್ಸಿನ ಮೇಲಾಟ ಕಾರಣವಾಗಬಹುದು...! ಅಥವಾ, ತಪ್ಪಾಗಿ ಅರ್ಥೈಸಿಕೊಂಡು ಗಾಳಿ ಮಾತು ಎಬ್ಬಿಸಿದ ಇನ್ನೊಂದು ಮನಸ್ಸಿನ ತೊಳಲಾಟವೂ ಕಾರಣವಾಗಿರಬಹುದು....!
ಮನುಜ ಜಾತಿ ತಾನೊಂದೆ ವಲಂ... ಎಂದು ಅರ್ಥವಾಗುವುದು ಯಾವಾಗ...? ಮನಸ್ಸು-ಮನಸ್ಸುಗಳ ನಡುವೆ ನಿರ್ಮಲ ಪ್ರೀತಿ ಅರಳುವುದು ಯಾವಾಗ...
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ