ಬುಧವಾರ, ನವೆಂಬರ್ 25, 2015

ಪಾಪ ಪ್ರಜ್ಞೆ ಕಾಡಿದಾಗ....!
ಬದುಕು ಒಂದು ಸುಂದರ ಕಾವ್ಯ. ಅಕ್ಷರ ಲೋಕದಲ್ಲಿ ಪದಗಳು ಮೆರೆದಾಡಿದರೆ ಬದುಕಿನ ಲೋಕದಲ್ಲಿ ಗುಣಗಳು ಮೆರೆದಾಡುತ್ತವೆ. ಸುಂದರ ಕಾವ್ಯದಲ್ಲಿರುವ ಒಂದೊಂದು ಪದಗಳು ಒಂದೊಂದು ಅರ್ಥ ಹೇಳುತ್ತ ಭಾವ ಭಿತ್ತಿಯಲ್ಲಿ ಅಚ್ಚೊತ್ತಿ ಬಿಡುತ್ತವೆ. ಕಣ್ಮುಚ್ಚಿದರೂ ನಿದ್ರೆಯಲ್ಲಿ ಬಂದು ಪರಿ ಪರಿಯಾಗಿ ಕಾಡುತ್ತವೆ. ಹಾಗೆಯೇ ಬದುಕೆಂಬ ಮಹಾಕಾವ್ಯದಲ್ಲೂ ಒಂದೊಂದು ಸಾತ್ವಿಕ ಗುಣ ಪ್ರಬುದ್ಧತೆಗೆ ಕೊಂಡೊಯ್ಯತ್ತದೆ. ಅರ್ಥಪೂರ್ಣ ಜೀವನಕ್ಕೆ ಸಾಕ್ಷೀಕರಿಸಿ, ಅಳಿದ ಮೇಲೂ ಉಳಿದವರ ನಾಲಿಗೆಯ ಮೇಲೆ ಹರಿದಾಡುವಂತೆ ಮಾಡುತ್ತದೆ.
ಹುಟ್ಟು-ಸಾವಿನ ನಡುವಿರುವ ಬದುಕು ಸಾಮಾನ್ಯವಾಗಿರದೆ, ಹೊಸತನದ ಹಾದಿಯಲ್ಲಿ ಸಾಗುತ್ತಿರಬೇಕು. ಇಲ್ಲಿ ಎಲ್ಲರೂ ಜೀವಿಸುತ್ತಾರೆ; ಬಾಳಿ ಬದುಕುತ್ತಾರೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ. ಆದರೆ ಜೀವಿತದ ಒಂದೇ ಒಂದು ಕುರುಹು ಸಹ ಅವರಿಂದ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಂತ ನಾಲ್ಕೈದು ಅಂತಸ್ತಿನ ಮನೆಯನ್ನು ಕಟ್ಟಿಸಿರುತ್ತಾರೆ. ಮೂರ್ನಾಲ್ಕು ತಲೆಮಾರುಗಳು ಕೂತು ಉಂಡರೂ ಕರಗದ ಆಸ್ತಿ ಮಾಡಿರುತ್ತಾರೆ. ಶ್ರೀಮಂತಿಕೆ ವೈಭವವೇ ಅವರಲ್ಲಿ ಠೇಂಕರಿಸಿ ವಿಜೃಂಭಿಸಿರುತ್ತದೆ. ಆದರೆ, ಅದು ಅವರ ಸ್ವಂತಿಕೆಗಷ್ಟೇ ಸೀಮಿತವಾಗಿರುತ್ತವೆಯೇ ಹೊರತು, ಮಾನವೀಯತೆಗೆ ಬಳಕೆಯಾಗುವುದು ತೀರಾ ಕಡಿಮೆಯೇ. ಪರಿಣಾಮ ಅಳಿದ ಮೇಲೆ, ಅಂತಸ್ತಿನ ಮನೆಯ ಪಡಶಾಲೆಯಲ್ಲಿ ಭಾವಚಿತ್ರಕ್ಕೊಂದು ಜಾಗವಷ್ಟೇ....!
ಬದುಕಿನ ಸುಂದರ ಮಹಾಕಾವ್ಯದಲ್ಲಿ ಭಾವಚಿತ್ರವಾಗಷ್ಟೇ ಇರಬಾರದು. ಸರ್ವರ ಹೃದಯಲ್ಲೂ ಜೀವಂತಿಕೆಯ ಮೂತರ್ಿಯಾಗಿ ಸದಾ ನೆನಪಿನಲ್ಲಿರುವಂತಾಗಬೇಕು. ತಾಮಸ ಗುಣಗಳನ್ನು ಸಂಹರಿಸಿ, ಸಾತ್ವಿಕ ಗುಣಗಳ ಅನುಯಾಯಿಗಳಾಗಬೇಕು. ಎಲ್ಲರೂ ನನ್ನವರು ಎನ್ನುವ ಭಾವ ಅಂಕುರಿಸಿ, ಪ್ರೀತಿಯ ಸಾಮ್ರಾಜ್ಯ ಸ್ಥಾಪಿಸಬೇಕು. ಆ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದಾಡಬೇಕು. ಸುತ್ತಮುತ್ತಲಿನವರನ್ನು ವಿಶ್ವಾಸದ ತೆಕ್ಕೆಯಲ್ಲಿ ಬಂಧಿಸಬೇಕು. ಸಾಮರಸ್ಯದ ಹಾದಿ ತುಳಿದು, ಸಹಬಾಳ್ವೆಯ ಮಂತ್ರ ಜಪಿಸಬೇಕು. ಆಗ ಅಲ್ಲಿನ ವಾತಾವರಣ ನಿಜಕ್ಕೂ ನಂದನವನ. ಸ್ವರ್ಗ ಸಮಾನ...!
ಶ್ರೀಮಂತಿಕೆಯ ದರ್ಪವಿಲ್ಲದ ಆ ಪ್ರೀತಿ ಸಾಮ್ರಾಜ್ಯದಲ್ಲಿ ಎಲ್ಲರೂ ಸುಖಿಗಳೇ; ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ ಪಾತ್ರರೆ. ರಾಗ-ದ್ವೇಷಗಳು ಅಲ್ಲಿ ಮಖಾಡೆ ಮಲಗಿ, ಪ್ರೀತಿ-ವಿಶ್ವಾಸಗಳು ಸದಾ ಎಚ್ಚರದಿಂದಿರುತ್ತವೆ. ತಪ್ಪು ಮಾಡಲು ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ತಿದ್ದಿ-ತೀಡುವ ಮನಸ್ಸುಗಳು ಸುತ್ತಲೇ ಇದ್ದು, ನಮ್ಮ ಕಿವಿ ಹಿಂಡುತ್ತಲೇ ಇರುತ್ತವೆ. ಸೋಲು-ಗೆಲುವಿಲ್ಲದ ಈ ಪ್ರೀತಿ ಜಗತ್ತಲ್ಲಿ ಪ್ರೀತಿಯೇ ಉಸಿರಾಗಿ, ಪ್ರೀತಿಯೇ ಬದುಕಾಗಿ, ಪ್ರೀತಿಯೇ ಧ್ಯೇಯವಾಗಿ ಬದಲಾಗಿ ಬಿಡುತ್ತದೆ.
-ನಾಗರಾಜ್ ಬಿ.ಎನ್. 

ಕಾಮೆಂಟ್‌ಗಳಿಲ್ಲ: