ಇದು ಕಥೆಯಲ್ಲ.....!
ಇಬ್ಬರು ಆತ್ಮೀಯ ಸ್ನೇಹಿತರು. ಬಾಲ್ಯದಿಂದ ಪದವಿಯವರೆಗೂ ಒಂದೇ ಶಾಲೆ, ಕಾಲೇಜ್ ನಲ್ಲಿ ಜೊತೆಯಾಗಿಯೇ ಅಭ್ಯಸಿದವರು. ನಂತರ ಇಬ್ಬರೂ ಬೇರೆ ಬೇರೆ ವಿವಿಯಲ್ಲಿ ಸ್ನಾತಕ ಅಭ್ಯಾಸ, ಅವರಿಗೆ ಇಷ್ಟದ ವಿಷಯದ ಮೇಲೆ. ಇಬ್ಬರೂ ಉನ್ನತ ಉದ್ಯೋಗದಲ್ಲಿದ್ದಾರೆ. ವಾರಕ್ಕೆರಡು ಬಾರಿಯಾದರೂ ಮೂರ್ನಾಲ್ಕು ಬಾರಿ ದೂರವಾಣಿಯಲ್ಲಿ ಸಂಕರ್ಪವಾದರೆ, ತಿಂಗಳಿಗೊಮ್ಮೆಯಾದರೂ ಭೆಟ್ಟಿಯಾಗಲೇ ಬೇಕು... ಹೀಗಿದೆ ಅವರಿಬ್ಬರ ಸ್ನೇಹ.
ಆದರೆ,ದೀಪಾವಳಿ ಕಳೆದ ಎರಡು ದಿನಕ್ಕೆ ರಾಕೇಶನ ಜನ್ಮದಿನ. ಹಬ್ಬಕ್ಕೆಂದು ಊರಿಗೆ ಬಂದಿದ್ದ ರಾಕೇಶನಿಗೆ, ಸ್ನೇಹಿತ ಮಿಥುನ ಬಂದಿಲ್ಲ ಎನ್ನುವ ಕೊರಗು. ಒಂದು ವಿಷಯ ಅವನಲ್ಲಿ ಎದುರಾಗೇ ಹೇಳಬೆಕು ಎಂದು ಆತ ಹಾತೊರೆಯುತ್ತಿದ್ದ. ಹುಟ್ಟಿದ ದಿನಕ್ಕಾದರೂ ಬಂದೇ ಬರುತ್ತಾನೆ ಎನ್ನುವ ನಂಬಿಕೆ ಇತ್ತು. ಅದು ಕೂಡಾ ಹುಸಿಯಾಗಿತ್ತು.
ಮುಂಜಾನೆಯಿಂದ ರಾತ್ರಿವರೆಗೂ ರಾಕೇಶನಿಗೆ ಜನ್ಮದಿನದ ಸಂದೇಶ, ಕರೆಗಳ ಸುರಿಮಳೆ. ಊಹೂಂ... ಅದರಲ್ಲಿ ಮಿಥುನನ ಕರೆ ಇರಲೇ ಇಲ್ಲ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸುತ್ತದೆ. ಮಿಥುನ ಆಗ ಕರೆ ಮಾಡಿದ್ದ.... ವಿಶ್ ಮಾಡಿ, ಯೋಗಕ್ಷೇಮ ವಿಚಾರಿಸುತ್ತಾನೆ. ನೂರಾರು ಹಾರೈಕೆಯ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳುತ್ತಾನೆ. ಆ ಸಂತಸದಲ್ಲಿಯೇ ಇತ್ತ ರಾಕೇಶ, ಮಿಥುನನಿಗೆ ತನ್ನಿಂದ ಒಂದು ಸಂತಸದ ವಿಷಯ ಹೇಳಲು ಮುಂದಾಗುತ್ತಾನೆ....
'ಸ್ವಲ್ಪ ತಡಿಯೋ ಮಾರಾಯ... ಏನೋ ಹೇಳ್ಬೇಕು ಅಂತ ಎರಡು ದಿನದಿಂದ ನಿನ್ನ ಕಾಲ್ ಮಾಡ್ತಾ ಇದ್ದೀನಿ...''ಸಾರಿ ಕಣೋ.. ಕೆಲಸದ ಒತ್ತಡ. ತುಂಬಾ ಬ್ಯುಸಿಯಾಗಿದ್ದೆ. ಕಿವಿ ಹಿಡ್ಕೊಂಡೆ. ಸರಿನಾ, ಈಗ ಹೇಳು'
'ಇದ್ಕೇನು ಕಡಿಮೆಯಿಲ್ಲ, ನಮ್ಮ ಮನೆಯಲ್ಲಿ ನನ್ನ ಮದುವೆಗೆ ಹುಡುಗಿ ನೋಡಿದ್ದಾರೆ ಕಣೋ'
'ರಿಯಲಿ... ಅಬ್ಬಾ...! ನಿನ್ನ ಜನ್ಮದಿನಕ್ಕೆ ಇದಕ್ಕಿಂತ ದೊಡ್ಡ ಸಂತೋಷ ಬೇರೇನೂ ಇಲ್ವೋ... ಅಂತೂ, ನನ್ನ ಚಡ್ಡಿ ದೋಸ್ತ ದೊಡ್ಡವನಾದ ಅಂತಾಯ್ತು'
'ಹಾಗೇನಿಲ್ಲ ಕಣೋ.. ಜನವರಿ ಸಂಕ್ರಮಣದ ದಿನ ನಿಶ್ಚಿತಾರ್ಥ ಮಾಡಿ, ಬೇಸಿಗೆಯಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ನಿನಗೇ ಪ್ರಾಥಮವಾಗಿ ಈ ವಿಷಯ ಹೇಳ್ತಾ ಇದ್ದೀನಿ'
'ಥ್ಯಾಂಕ್ಸ್ ಕಣೋ... ಅಂದ ಹಾಗೆ, ನಮ್ಮ ಅತ್ಗ್ಯಮ್ಮ ಏನ್ಮಾಡ್ತಾ ಇದ್ದಾಳೆ? ಎಲ್ಲಿರೋದು? ಯಾವ ಊರು?' ಎಂದು ಮಿಥುನ ಮರು ಪ್ರಶ್ನಿಸುತ್ತಾನೆ.
ಎಲ್ಲವನ್ನು ಎಳೆ ಎಳೆಯಾಗಿ ರಾಕೇಶ ಮೊಬೈಲ್ ನಲ್ಲಿಯೇ ಮಿಥುನನಿಗೆ ಹೇಳುತ್ತಾನೆ. ಅವೆಲ್ಲವನ್ನು ಮಿಥುನ ಸುಮ್ನೆ ಕೇಳ್ತಾ ಕೇಳ್ತಾ, ಮೌನಕ್ಕೆ ಜಾರಿ ಬಿಡುತ್ತಾನೆ.
ಅತ್ತ ರಾಕೇಶ, ಹಲೋ... ಹಲೋ... ಎಂದು ಏಳೆಂಟು ಬಾರಿ ಕೂಗಿ, ನೆಟ್-ವರ್ಕ್ ಪ್ರಾಬ್ಲಮ್ ಎಂದು ಕರೆ ಕಟ್ ಮಾಡುತ್ತಾನೆ.
ಪ್ರಾಣ ಸ್ನೇಹಿತ ರಾಕೇಶನ ಕೈ ಹಿಡಿಯಲಿರುವ ಹುಡುಗಿ, ಮಿಥುನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗಿಯಾಗಿದ್ದಳು. ಅವಳಿಗಾಗಿ ನೂರಾರು ಕನಸನ್ನು ಹೆಣೆದು, ಪ್ರೀತಿಯ ಮಹಲನ್ನು ಕಟ್ಟಿ, ಅಲ್ಲಿ ಎಲ್ಲವೂ ಪ್ರೀತಿನೇ ಆಗಿರಬೇಕು ಎಂದುಕೊಂಡಿದ್ದ. ತಾನು ಪ್ರೀತಿಸುತ್ತಿರುವ ವಿಷಯ ಅವಳಲ್ಲಿ ಹೇಳಿಕೊಂಡಿದ್ದ. ಅವಳು ಕೂಡಾ ಅವನನ್ನು ಮನಸಾರೆ ಇಷ್ಟಪಟ್ಟಿದ್ದಳು. ಆದರೆ, ಆಕೆ ಎಂದಿಗೂ ತಾನು ಪ್ರೀತಿಸುತ್ತಿರುವ ವಿಷಯ ಮಿಥುನನಲ್ಲಿ ಹೇಳಿರಲಿಲ್ಲ. ಒಂದಿಲ್ಲೊಂದು ಸಮಸ್ಯೆಗೆ ಒಳಪಡಿಸಿ, ಪರೀಕ್ಷೆಗೆ ಒಳಪಡಿಸುತ್ತಲೇ ಇದ್ದಳು. ಜೀವಕ್ಕಿಂತ ಹೆಚ್ಚಾಗಿ ಮಿಥುನ ತನ್ನನ್ನು ಪ್ರೀತಿಸ್ತಾ ಇದ್ದಾನೆ ಎನ್ನುವುದು ಅವಳಿಗೆ ಗೊತ್ತಿತ್ತು. ಆತ ಇಷ್ಟವಾಗಿದ್ದರೂ, ಆತನ ಪ್ರೀತಿಯ ಯಾವ ಕೋರಿಕೆಯನ್ನು ಅವಳು ಸ್ವೀಕರಿಸಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಅವನ ಮೇಲೆ ಸುಮ್ಮನೆ ರೇಗಾಡುತ್ತಿದ್ದಳು. 'ನಾನು ಈಗಾಗಲೆ ಒಬ್ಬನನ್ನು ಪ್ರೀತಿಸ್ತಾ ಇದ್ದೇನೆ. ನನಗೆ ಈಗಾಗಲೇ ಮದುವೆ ನಿಶ್ಚಯವಾಗಿದೆ' ಎಂದು ಸುಳ್ಳು ಹೇಳುತ್ತಿದ್ದಳು. ಇನ್ನು ಮುಂದೆ ಕರೆ, ಸಂದೇಶ ಏನು ಮಾಡಬೇಡ ಎಂದು ಮಿಥುನನ ದೂರವಿಡಲು ಪ್ರಯತ್ನಿಸುತ್ತಿದ್ದಳು. ಮಿಥುನನ ಪ್ರೇಮ ಒಂದೆರಡು ದಿನದಲ್ಲ... ಎರಡ್ಮೂರು ತಿಂಗಳಿನದ್ದೂ ಅಲ್ಲ... ಬರೋಬ್ಬರಿ ನಾಲ್ಕು ವರ್ಷದ ಪ್ರೇಮ....! ಆತ ತನ್ನೆಲ್ಲ ಭಾವವನ್ನು ಆಕೆಯಲ್ಲಿ ಹೇಳಿಕೊಂಡು, ಪ್ರೇಮ ಭಿಕ್ಷೆಗಾಗಿ ಎದುರು ನೋಡುತ್ತಿದ್ದ, ನಾಲ್ಕು ವರ್ಷಗಳ ಪರ್ಯಂತ.... ಪ್ರತಿ ದಿನ... ಪ್ರತೀ ಕ್ಷಣ......!
ಹೀಗಿದ್ದಾಗ ಆತನ ಪ್ರಾಣ ಸ್ನೇಹಿತ ರಾಕೇಶನೇ ಆಕೆಯನ್ನು ವರಿಸಲು ಸಿದ್ಧನಾಗದ್ದಾನೆ ಎನ್ನುವ ಸಂಗತಿ, ಮಿಥುನನಿಗೆ ಎಷ್ಟು ಘಾಸಿ ಮಾಡಿರಬೇಡ....!?
ನಾಲ್ಕು ವರ್ಷ ಪ್ರತಿ ಕ್ಷಣವೂ ಅವಳಿಗಾಗಿ ಮಿಡಿದ ಆತನ ಹೃದಯ ಸ್ತಬ್ಧವಾಗುತ್ತಿದೆ. ಏರಳಿತದ ಪ್ರತಿಯೊಂದು ಉಸಿರಿನಲ್ಲೂ ಪ್ರೇಯಸಿ ಎನ್ನುತ್ತಿದ್ದವ, ಅರಿವಲ್ಲದೆ 'ಅತ್ಗ್ಯಮ್ಮ' ಎಂದು 'ಅಮ್ಮ'ನ ಸ್ಥಾನ ನೀಡಿ ಬಿಟ್ಟಿದ್ದ. 'ಕಾಲಚಕ್ರದ ಉರುಳಾಟ.... ಇಲ್ಲಿ ನಾವೆಲ್ಲ ನಿಮಿತ್ತ ಮಾತ್ರ' ಎನ್ನುತ್ತ ಏನೇನೋ ಯೋಚನೆ ಮಾಡುತ್ತ ಮಿಥುನ ಆಕಾಶದೆಡೆ ದೃಷ್ಟಿ ಹಾಯಿಸಿದ್ದಾನೆ. ದಟ್ಟ ಕಾರ್ಗತ್ತಲ ನೀರವ ಮೌನದಲ್ಲಿ ಕೆನ್ನೆಯಿಂದ ಕಣ್ಣೀರ ಹನಿಗಳು ಒಂದೊಂದಾಗಿ ಜಾರುತ್ತಿವೆ. ಎರಡು ಕಣ್ಣಾಲಿಗಳು ತೋಯ್ದು ತೊಪ್ಪೆಯಾಗಿವೆ. ಆತನಿಗೆ ಸಮಾಧಾನಿಸಲು ಅಲ್ಲಿ ಇದ್ದದ್ದು ಮೌನದ ಜೊತೆ ಕವಿದ ಕತ್ತಲು ಮಾತ್ರ....!
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ