ಗುರುವಾರ, ನವೆಂಬರ್ 26, 2015

'ಇಷ್ಟ'ದ ಹುಡುಕಾಟದಲ್ಲಿ...!!
'ಇಷ್ಟ ಪಟ್ಟ ವಸ್ತು' ಬೇಕು ಎಂದಾಗ ಸಿಗದು. ಆದರೆ, ಬೇಡ ಎಂದೆನಿಸಿದಾಗ ಓಡೋಡಿ ಬಂದು ಅಪ್ಪಿಕೊಳ್ಳಲು ಹವಣಿಸುತ್ತದೆ. ಅದಾಗಲೇ ಬದುಕಿನ ಪಯಣ ಬಹು ದೂರ ಸಾಗಿ, ಹೊಸತನಕ್ಕೆ ಹೊಂದಿಕೊಂಡಿರುತ್ತದೆ.
ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಾಮಾನ್ಯವಾಗಿ ಸರಿದು ಹೋಗುವ ಘಟನೆಗಳು. ಸುಮ್ಮನೆ ಒಂದು ಬಾರಿ, ನಿಂತ ಜಾಗದಲ್ಲಿಯೇ ಕಣ್ಮುಚ್ಚಿಕೊಂಡು `ಈವರೆಗೆ ಸಾಗಿ ಬಂದ ದಾರಿ'ಯನ್ನು ನೆನಪಿಸಿಕೊಳ್ಳಿ. ಅಲ್ಲಿ ಏನುಂಟು... ಏನಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗ್ರಹಿಸಿ. ಸುಖ, ದುಃಖ, ನೋವು, ನಲಿವು, ನಿರಾಶೆ, ತುಂಟಾಟ, ಹುಡುಗಾಟಿಕೆ ಹೀಗೆ... ಒಂದೊಂದು ಸನ್ನಿವೇಶಗಳು ಸಾಲು ಸಾಲಾಗಿ ಕಣ್ಮುಂದೆ ಮೆರವಣಿಗೆ ಹೊರಡುತ್ತವೆ.
ಸಂತೋಷದ ಆ ದಿನಗಳು ಮತ್ತೆ ಬಾರದೆ ಎಂದೆನಿಸುತ್ತಿರುವಾಗಲೇ, ಧುತ್ತೆಂದು... ಬದುಕನ್ನೇ ಕಿತ್ತು ತಿನ್ನಲು ಹೊರಟ ಘೋರ ಘಟನೆಗಳು ನೆನಪಿನಂಗಳದಲ್ಲಿ ಪುಟಿದೇಳುತ್ತವೆ. ನಲಿವಿನ ಜೊತೆ ನೋವು ಸಹ ಆ 'ನೆನಪಿನ ಲೋಕ'ದಲ್ಲಿ ಸರಿಸಮಾನವಾಗಿ ಪಾಲುದಾರಿಕೆ ಪಡೆಯುತ್ತದೆ.
ಇಷ್ಟಪಟ್ಟಿದ್ದು ಬೇಕು ಎನ್ನುವ ಕಾರಣಕ್ಕೆ ಹಾಕಿದ ಮುಖವಾಡಗಳು ನೆನಪಿನ ಬುತ್ತಿಯಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದು ಬಿಟ್ಟಿರುತ್ತವೆ. ಆ 'ಇಷ್ಟ' ಬದುಕಿಗೊಂದು ಅರ್ಥ ಕಲ್ಪಿಸಿಕೊಡುವಲ್ಲಿಯೂ ಸಹಕಾರಿಯಾಗುತ್ತದೆ ಹಾಗೆಯೇ, ಬದುಕನ್ನು ದುರಂತಕ್ಕೆ ನೂಕುವಲ್ಲಿಯೂ ಕಾಣಿಕೆ ನೀಡುತ್ತದೆ.
ಏನೇ ಇರಲಿ, ಗತಿಸಿದ ದಿನಗಳಲ್ಲಿ ಹಾತೊರೆದ ವಸ್ತು, ಪ್ರಸ್ತುತ ದಿನಗಳಲ್ಲಿ ಕೆಲವು ಬಾರಿ ಬೇಡವೆಂದರೂ ಹತ್ತಿರಕ್ಕೆ ಬಂದು ಬಿಗಿದಪ್ಪಿಕೊಳ್ಳುತ್ತವೆ. ಅಷ್ಟರಲ್ಲಾಗಲೇ ಆ 'ಇಷ್ಟ' ಇನ್ನೊಂದು ರೂಪದಲ್ಲಿ ಬಂದು ಬದುಕನ್ನು ಹಸನಾಗಿಸಿರುತ್ತದೆ. ಕಾಲಚಕ್ರದ ಉರುಳಾದಲ್ಲಿ ಕೆಲವು 'ಬೇಕು'ಗಳ ಪ್ರಾಮುಖ್ಯತೆ ಗೌಣವಾಗುತ್ತ ಸಾಗುತ್ತದೆ. ಹಾಗಾದರೆ, 'ಇಷ್ಟ' ಎನ್ನುವುದು ಗೌಣವೇ....?
(ಇಷ್ಟ-ಅವರವರ ಭಾವಕ್ಕೆ ಬಿಟ್ಟಿದ್ದು )
-ನಾಗರಾಜ್ ಬಿ.ಎನ್. 

ಕಾಮೆಂಟ್‌ಗಳಿಲ್ಲ: