ಬುಧವಾರ, ಡಿಸೆಂಬರ್ 21, 2016

ಮಸ್ಟ್ ರೀಡ್......
ಮಾನವ ಕಳ್ಳಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಮುರಿಯಿತು...!

ನೋಟು ಅಪಮೌಲ್ಯೀಕರಣದ ಕುರಿತು ಯಾರು ಎಷ್ಟೇ ವಿರೋಧಿಸಲಿ. ಬೊಬ್ಬಿರಿದು ಬಾಯಿ ಬಡಿದುಕೊಳ್ಳಲಿ. ಮನಸ್ಸೋ ಇಚ್ಛೆಯಾಗಿ ಬೈದುಕೊಳ್ಳಲಿ. ಆದರೆ, ಮಾನವೀಯತೆಯ ಒಳಗಣ್ಣಿನಿಂದ ನೋಡಿದಾಗ, ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೋ... ಎಷ್ಟೋ.... ಸಾವಿರ ಲೆಕ್ಕಾಚಾರದಲ್ಲಿ ನನ್ನ ಅಕ್ಕ, ತಂಗಿಯರು ಜತನವಾಗಿದ್ದಾರೆ. ಭಯಾನಕ ಕೂಪದೊಳಗೆ ಬಲವಂತವಾಗಿ ಬೀಳುವಂತ ಸನ್ನಿವೇಶದಿಂದ ತಪ್ಪಿಸಿಕೊಂಡಿದ್ದಾರೆ!

Yes... ಮಾನವ ಕಳ್ಳ ಸಾಗಾಣಿಕೆಯಿಂದ ಪ್ರತಿವರ್ಷ ಸಾವಿರಾರು ಅಪ್ರಾಪ್ತೆಯರು ವೇಶ್ಯಾವಾಟಿಕೆ ಗೃಹಕ್ಕೆ ನೂಕಲ್ಪಡುತ್ತಿದ್ದರು. ದೇಶಾದ್ಯಂತ ವ್ಯಾಪಿಸಿರುವ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ನಮ್ಮ ಸುತ್ತ ಮುತ್ತಲಿರುವ ಪುಟ್ಟ ಪುಟ್ಟ ಕಂದಮ್ಮಗಳೇ ಸಿಲುಕುತ್ತಿದ್ದವು. ಶಾಲೆಗೆ ಹೋಗುವಾಗ, ಬರುವಾಗ ಅವರನ್ನು ಅಪಹರಿಸುವುದು, ಬಡ ಮಕ್ಕಳಿಗೆ ಆಮೀಷ ತೋರಿಸಿ ಕರೆದೊಯ್ಯುವುದು, ಕೆಲಸದ ನೆಪದಲ್ಲಿ ಕರೆದುಕೊಂಡು ಹೋಗುವುದು....  ಹೀಗೆ ನಾನಾ ವಿಧದಲ್ಲಿ ಇನ್ನೂ ವಯಸ್ಸಿಗೆ ಬರದ ಹೆಣ್ಣು ಮಕ್ಕಳನ್ನು ದುರುಳರು ಹೊತ್ತೊಯ್ಯುತ್ತಿದ್ದರು. ದೆಲ್ಲಿ, ಓರಿಸ್ಸಾ, ಮುಂಬೈ ಸೇರಿದಂತೆ ಬಾಂಗ್ಲಾ, ನೇಪಾಳದಂತಹ ಹೊರ ರಾಷ್ಟ್ರಗಳಿಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸಾಗಾಣಿಕೆ ಮಾಡುತ್ತಿದ್ದರು. ಹೊಸವರ್ಷದ ಹಿನ್ನೆಲೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳ ಸಾಗಾಣಿಕೆ ವ್ಯವಹಾರ ಎಲ್ಲೆ ಮೀರುತ್ತಿತ್ತು. ಆದರೆ, ನವೆಂಬರ್ 8ರ ನಂತರ ಈ ವ್ಯವಹಾರ ಸಂಪೂರ್ಣ ನೆಲಕಚ್ಚಿದೆ! ಇದ್ದ ಬಿದ್ದ ವೇಶ್ಯಾಗೃಹಗಳೆಲ್ಲ ಅರಚಾಟ, ಗೂಗಾಟಗಳಿಂದ ಶಾಂತವಾಗಿದೆ. ಗಬ್ಬೆದ್ದು ನಾರುತ್ತಿದ್ದ ಹಾಸಿಗೆ, ದಿಂಬುಗಳೆಲ್ಲ ಮತ್ತಷ್ಟು ನಾರುತ್ತ, ಧೂಳು ತಿನ್ನುತ್ತ ಬಿದ್ದಿವೆ! ಕಾರಣ 500, 1000 ಮುಖಬೆಲೆಯ ನೋಟುಗಳ ಅಪಮೌಲ್ಯ!
ಇಂತಹ ವಿಭಿನ್ನ ದೃಷ್ಟಿಕೋನದ ಮಾಹಿತಿಯೊಂದನ್ನು POST.COM ಹೊರಹಾಕಿದೆ.

ಕಳ್ಳ ಸಾಗಾಣಿಕೆ ವ್ಯವಹಾರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೇ ಹೆಚ್ಚು ಬೇಡಿಕೆ. 10 ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 5 ಲಕ್ಷ ರು. ನಿಗದಿ ಪಡಿಸಿದರೆ, 13 ರಿಂದ 15 ವರ್ಷದೊಳಗಿನ ಮಕ್ಕಳಿಗೆ 4 ಲಕ್ಷ ರು.  ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 3, 2 ಲಕ್ಷ ರು.ನಂತೆ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡುತ್ತಾರೆ. ಅವರನ್ನು ಖರೀದಿಸಿದ ಮಾಲೀಕರು ಬಲವಂತವಾಗಿ ವೇಶ್ಯಾವೃತ್ತಿಗೆ ನೂಕುತ್ತಾರೆ. ಒಂದು ವೇಳೆ ತಪ್ಪಿಸಿಕೊಳ್ಳಲೇನಾದರೂ ಪ್ರಯತ್ನಿಸಿದರೆ ಕ್ರೂರವಾದ ಶಿಕ್ಷೆಗೆ ಒಳಪಡಿಸುತ್ತಾರೆ. ಇನ್ನೂ ಪ್ರಪಂಚದ ಅರಿವಿಲ್ಲದ ಮುಗ್ಧ ಕಂದಮ್ಮಗಳು ದುರುಳ ಹಣದಾಸೆಗೆ ತಮ್ಮ ಬದುಕನ್ನು ಒತ್ತೆ ಇಡಬೇಕು. ಪರಿಣಾಮ ಅವರು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಜರ್ಜರಿತವಾಗಿ ಹೋಗುತ್ತಾರೆ. ನಂತರ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಮೊದಲಿನ ಬದುಕು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರಮೇಣ ಕಷ್ಟವಾದರೂ ಸರಿಯೇ ಎಂದು ಹಗಲಿರುಳೆನ್ನದೆ ವೇಶ್ಯಾವೃತ್ತಿಯಲ್ಲಿಯೇ ಕಣ್ಣೀರು ಸುರಿಸುತ್ತ ಬದುಕುತ್ತಾರೆ. ಅಂದ ಹಾಗೆ, ಈ ಮಾನವ ಕಳ್ಳ ಸಾಗಾಣಿಕೆ ಆಡಳಿತ ಯಂತ್ರಕ್ಕೆ ತಿಳಿಯದ ವಿಷಯವೇನಲ್ಲ. ಪೊಲೀಸ್ ಹಾಗೂ ಸರಕಾರಿ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುವ ಕಾನೂನು ಬಾಹಿರ ವ್ಯವಹಾರವಿದು. ಇದಕ್ಕೆ ಬಿಳಿ ಬಟ್ಟೆ ತೊಟ್ಟ ಜನಪ್ರತಿನಿಧಿಗಳ ಕೃಪಾಕಟಾಕ್ಷವೂ ಇದೆ ಎನ್ನುವುದು ಕನ್ನಡಿಯಷ್ಟೇ ಸತ್ಯ.

ಒಂದು ಮಗುವಿನ ಕಳ್ಳ ಸಾಗಾಣಿಕೆಗೆ 2.5 ರಿಂದ 3 ಲಕ್ಷ ರು. ವೆಚ್ಚವಾಗುತ್ತದೆ. ಜನಪ್ರತಿನಿಧಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ, ಆಡಳಿತದಲ್ಲಿರುವ ಅಧಿಕಾರಿ ವರ್ಗದವರಿಗೆ ಹಾಗೂ ಮಕ್ಕಳನ್ನು ಅಂದಗೊಳಿಸುವ ಕೆಲಸಗಾರರಿಗೆಂದು ಕನಿಷ್ಠ ಇಷ್ಟಾದರೂ ಅವರು ವೆಚ್ಚಮಾಡಲೇಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಮಾತ್ರ ಕೇವಲ 20ಸಾವಿರ ರು. ಇರಬಹುದು. ಪ್ರತಿ ವರ್ಷ 19 ಕೋಟಿ ರು.ಗಳ ವ್ಯವಹಾರ ಮಕ್ಕಳ ಕಳ್ಳ ಸಾಗಾಣಿಕೆಯಿಂದ ನಡೆಯುತ್ತಿದೆ ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಸಂಸ್ಥೆ, ಕಾರ್ಮಿಕ ಸಂಘಗಳ ಜಾಲ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ನಡೆಸಿದ ಅಧ್ಯಯನ ಹೇಳುತ್ತದೆ. ಪ್ರತಿ ದಿನ ಹತ್ತರಿಂದ ಹದಿನೈದು ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದರು. ಆದರೆ, ನ. 8ರ ನಂತರ ಒಂದೇ ಒಂದು ಮಗು ಸಾಗಾಣಿಕೆಯಾದ, ಅಪಹರಣವಾದ ಕುರಿತು ಎಲ್ಲಿಯೂ ದೂರು ದಾಖಲಾಗಿಲ್ಲ. ಇದೊಂದು ಅದ್ಭುತ ಬೆಳವಣಿಗೆ ಅಲ್ಲವೇ? ಎಂದು ಬಚಪನ್ ಬಚಾವೋ ಆಂದೋಲನ ಸಂಸ್ಥೆಯ ರಾಕೇಶ ಸೆಂಗಾರರ ಅಭಿಪ್ರಾಯಪಡುತ್ತಾರೆ.

ಹಳೆ ನೋಟಿನ ಅಪಮೌಲ್ಯದಿಂದ ವೇಶ್ಯಾಗೃಹದ ಕಡೆಗೆ ಗ್ರಾಹಕರು ಮುಖಮಾಡುತ್ತಿಲ್ಲ. ಇದರಿಂದ ಮಾಲೀಕರು ತಮ್ಮ ವ್ಯಾಪಾರ ಕಳೆದುಕೊಂಡು ತೆಪ್ಪಗೆ ಕುಳಿತಿದ್ದಾರೆ. ಮಕ್ಕಳ ಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಕಪ್ಪು ಹಣ ಆಗಿತ್ತು. ಅದಕ್ಕೆ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದರಿಂದ, ಉದ್ಯಮದ ಮೂಳೆಯೇ ಮುರಿದು ಬಿದ್ದಂತಾಗಿದೆ. ಹೊಸ ನೋಟು ಬಂದಾಗ ಈ ವ್ಯವಹಾರಕ್ಕೆ ಅವಕಾಶ ಇಲ್ಲದಂತೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ನೊಬೆಲ್ ಪುರಸ್ಕೃತ ಕೈಲಾಸ ಸತ್ಯಾರ್ಥ ಹೇಳುತ್ತಾರೆ.....

ಮಂಗಳವಾರ, ನವೆಂಬರ್ 8, 2016

ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!

'ಸೋಲೇ ಗೆಲುವಿನ ಸೋಪಾನ' ಎಂದು ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಗಾದೆ ಮಾತು. ಆದರೆ ಆ ಸೋಲು ನೆರಳಿನಂತೆ ಜೀವನ ಪರ್ಯಂತ ಸದಾ ಹಿಂಬಾಲಿಸುತ್ತಲೇ ಇದ್ದರೆ ಸೋಪಾನ ಯಾವಾಗ ಬರಬೇಕು?

'ಒಳ್ಳೆಯದಾಗುತ್ತದೆ... ಭವಿಷ್ಯ ಚೆನ್ನಾಗಿದೆ... ಆತ್ಮವಿಶ್ವಾಸ ಕಳೆದುಕೊಳ್ಳಬೇಡ...' ಎನ್ನುವ ಮಾತಿನ ನಡುವೆಯೇ `ಸತ್ತರೂ ಬದುಕಿರಲಿ, ಆತ್ಮವಿಶ್ವಾಸ' ಎನ್ನುವ ಕವಿ ದಿನಕರ ದೇಸಾಯಿ ಅವರ ಕವನದ ಸಾಲುಗಳು ಧುತ್ತೆಂದು ಸುಳಿದಾಡುತ್ತದೆ. ಸೂಲು, ಸೋಪಾನ, ಜೀವನ, ಭವಿಷ್ಯ, ಆತ್ಮವಿಶ್ವಾಸ ಇವುಗಳ ಆಳಕ್ಕಿಳಿದು ಯೋಚಿಸುತ್ತಾ ಹೋದರೆ, 'ಸತ್ತ ಮೇಲೆ ಯಾಕೆ ಬೇಕು ಆತ್ಮವಿಶ್ವಾಸ' ಎನ್ನುವ ವಾಸ್ತವ ಅರಿವಾಗುತ್ತದೆ. ಯಾಕೆಂದರೆ, ಇದ್ದಾಗ ಮಾತ್ರ ಬದುಕಿಗೊಂದು ಅರ್ಥ. ಅದೊಂದು ಶೂನ್ಯದ ಹೊರಗಿನ ಬದುಕು. ಆದರೆ, ಹೋದಾಗ ಅದು ಶೂನ್ಯದೊಳಗೆ ಬಂಧಿ!


ಕೆಲವು ವೇಳೆ 'ಪರೋಪಕಾರ, ಒಳ್ಳೆಯತನ, ಪ್ರಾಮಾಣಿಕತೆಯ ಬದುಕೇ ಮಗ್ಗಲು ಮುಳ್ಳಾಗಿ ಬಿಡುತ್ತವೆ. ಎಂದೂ ಯಾರಿಗೂ ಕೆಡುಕನ್ನು ಬಯಸದೆ, ಎಲ್ಲರಲ್ಲಿಯೂ ಒಳಿತನ್ನೇ ಕಾಣುತ್ತ, ನನ್ನ ಜೊತೆ ನೀನೂ ಸುಖವಾಗಿರುವ` ಎನ್ನುವ ಬದುಕಿನ ಧ್ಯೇಯ ಇಂದಿನ ದಿನಮಾನಕ್ಕೆ ಸೂಕ್ತವಲ್ಲವೇನೋ? 'ನಾ ಮಾಡಿದ ಒಳ್ಳೆಯ ಕೆಲಸಕ್ಕೆ ಮುಂದೊಂದು ದಿನ ಪ್ರತಿಫಲ ದೊರೆಯುತ್ತದೆ' ಎನ್ನುವ ಆಶಾಭಾವನೆ, ಆಸೆಯನ್ನೇ ಹತ್ತಿಕ್ಕಿ ಬಿಡುತ್ತವೆ. ದಿನ, ತಿಂಗಳು, ವರ್ಷ ಕಳೆದರೂ ಆ `ಮುಂದೊಂದು ದಿನ' ಎದುರಾಗುವುದೇ ಇಲ್ಲ...! `ನನ್ನ ಜೊತೆ ನಿನಗೂ ಒಳ್ಳೆಯದಾಗಲಿ' ಎನ್ನುವ  ಪರೋಪಕಾರದ ಗುಣ ಬದುಕನ್ನೇ ಮಖಾಡೆ ಮಲಗಿಸಿಬಿಡುತ್ತದೆ. ಒಳ್ಳೆಯದಾಗಲಿ ಎಂದು ಪ್ರಾಮಾಣಿಕವಾಗಿ ಹರಸಿ, ಕೈ ಹಿಡಿದು ಕರೆದುಕೊಂಡು ಹೋದವನಿಗೆ `ಹಣೆ ಬರಹ'ದ ಗೋಡೆ ಎದುರಾದರೆ, ಕೈ ಹಿಡಿದು ನಡೆಯುವವನಿಗೆ 'ಅದೃಷ್ಟ' ದೇವತೆ ಹಿಂಬಾಲಿಸುತ್ತದೆ. ಇಲ್ಲಿ ದಾರಿ ತೋರಿದವನೇ ದಾರಿ ಕಾಣದಂತಾಗಿ ತಡವರಿಸುತ್ತ ಮುಗ್ಗರಿಸಿ ಬೀಳುತ್ತಾನೆ. ನನ್ನ ಬದುಕೇ ಇಷ್ಟು ಎಂದು ತನಗೆ ತಾನೇ ಶಾಪ ಹಾಕಿಕೊಳ್ಳುತ್ತ ಮೇಲೆದ್ದು, ಇನ್ನೊಂದು ಭರವಸೆಯ ಕಿರಣದ ಜಾಡು ಹಿಡಿಯಲು ಪ್ರಯತ್ನಿಸುತ್ತಾನೆ.
ಇನ್ನಿಲ್ಲ ಬದುಕು ಎಂದು ಕುಸಿದು ಬಿದ್ದಾಗ, ಭವಿಷ್ಯದ ಹಾದಿಯೇ ಮುಸುಕಾದಾಗ ಈ ಗಾದೆ ಮಾತು, ಕವನದ ಸಾಲು ಹಾಸ್ಯಾಸ್ಪದ ಎಂದೆನಿಸಿ ಬಿಡುತ್ತದೆ.(ಕೆಲವು ವೇಳೆ). ಯಾಕೆಂದರೆ ದಿನ, ಸಮಯ, ಕ್ಷಣ ಎಂದೂ ನಮಗಾಗಿ ಕಾಯುವುದಿಲ್ಲ. ಅದು ಸದಾ ಓಡುತ್ತಲೇ ಇರುತ್ತದೆ. ಆ ಓಟದ ಮಧ್ಯದಲ್ಲಿಯೇ ಯಾವುದೋ ಒಂದು ಸಮಯ ನಮ್ಮ ಬದುಕು ಕೂಡಾ ನಿಂತು ಬಿಡುತ್ತವೆ. ಆಗ ಪರೋಪಕಾರ, ಪ್ರಾಮಾಣಿಕತೆ, ಒಳ್ಳೆಯ ಗುಣಗಳು ನಮ್ಮ ಜೊತೆಯೇ ಲೀನವಾಗಿಬಿಡುತ್ತವೆ. ಕೈ ಹಿಡಿದು ನಡೆದಾತ 'ಅದೃಷ್ಟ' ಎಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುತ್ತಾನೆ. ಕೈ ಹಿಡಿದು ನಡೆಸಿದಾತ `ಹಣೆ ಬರಹ' ಎಂದು ಬದುಕಿಗೆ ಪೂರ್ಣ ವಿರಾಮ ಹಾಕಿರುತ್ತಾನೆ.
ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!
('ಅರ್ಥ'ಕ್ಕೆ ನಿಲುಕದ್ದು......)

ಗುರುವಾರ, ಆಗಸ್ಟ್ 25, 2016

ಈತ ದೇವರಲ್ಲ ನನ್ನಾತ್ಮ ಸಖ......  

ಎಲ್ಲವನ್ನು ಕಳೆದುಕೊಂಡು ಇನ್ನಿಲ್ಲ ಬದುಕು ಎಂದಾಗ, ಸುಮ್ಮನೆ ಬಂದು ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಅದಮುತ್ತಾನೆ. ಕುಸಿದು ಬೀಳುವ ಜೀವ-ಭಾವಕ್ಕೆ ಮನದಣಿಯೇ ಸಂತೈಸಿ ಮುಗುಳ್ನಗುತ್ತಾನೆ. ತಾನೊಬ್ಬ ಪರಮಾತ್ಮ ಎಂಬುದನ್ನು ಮರೆತು, ಜೀವಾತ್ಮ ಎಂದು ಸಾರುತ್ತಾನೆ. ಪೂಜಿಸುವುದಕ್ಕಿಂತ ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳುತ್ತಾನೆ. ಎಲ್ಲವನ್ನು ಕಳೆದುಕೊಂಡ ಭಾವ ನನಗೂ ಇದೆ ಎನ್ನುತ್ತ, ನೋವು ಬದುಕಲ್ಲ ಎಂದು ಹಸನ್ಮುಖಿಯಾಗಿರುವ ಪಾಠ ಹೇಳುತ್ತಾನೆ.
ಹಾಗಾದರೆ ಕೃಷ್ಣ ಯಾರು?
ಸಿಂಪಲ್..... ಆತ ಆತ್ಮ ಸಖ. ಅವನೊಬ್ಬ ನೆಚ್ಚಿನ ಗೆಳೆಯ. ಹೌದು, ಬಹುಶಃ ಕೃಷ್ಣ ಇದಕ್ಕೆ ಇಷ್ಟವಾಗುತ್ತಾನೆ. ಆತನ ಬದುಕಿನ ಒಂದೊಂದು ಹೆಜ್ಜೆಯೂ ಅರ್ಥಗರ್ಭಿತ ಹಾಗೂ ಅಷ್ಟೇ, ಅಖ್ಯಾನ! ಹೆತ್ತಾಕೆಯ ಎದೆ ಹಾಲನ್ನು ಆತ ಕುಡಿದಿಲ್ಲ. ಅವಳ ಮಡಿಲಲ್ಲಿ ಆಡಿ ನಲಿದಿಲ್ಲ. ಸಲುಹಿದ ತಾಯಿಗೆ ಆತ ಸಿಗಲಿಲ್ಲ. ಪ್ರೀತಿಸಿದ ರಾಧೆಗೂ ಸಂಪೂರ್ಣ ಸಿಗಲಿಲ್ಲ. ಸೋದರ ಮಾವನ ಪ್ರೀತಿಯೂ ಆತನಿಗೆ ದೊರೆಯಲಿಲ್ಲ. ಆತ ತನಗೆ ಸಿಕ್ಕಿದ ಅಂತ ಅಂದುಕೊಂಡವರಿಗೆ ಸುಳ್ಳಾದ. ಯಾವೊಂದು ಭವ-ಬಂಧನದ ಚೌಕಟ್ಟಿಗೂ ಆತ ಒಳಪಡಲಿಲ್ಲ. ಬದುಕಲ್ಲಿ ಎದುರಾದ ಪ್ರತಿಯೊಂದು ಸಂಬಂಧ-ಬಾಂಧವ್ಯವನ್ನು ಸಮರ್ಥವಾಗಿ ನಿಭಾಯಿಸಿದ. ಸಮಯ ದೊರೆತಾಗಲೆಲ್ಲ ಬದುಕಿನ ಪಾಠವನ್ನು ಹೇಳುತ್ತಲೇ ಹೋದ. ಸಂದರ್ಭದಲ್ಲಿ ಹೊಗಳಿಕೆ ಜತೆಗೆ, ಸಾಕಷ್ಟು ಟೀಕೆಗಳ ಕೊಂಕು ಮಾತುಗಳನ್ನು ಕೇಳಿದ. ತಂತ್ರ, ಕಪಟ, ಚಾಣಾಕ್ಷ್ಯತೆಯನ್ನು ಧರ್ಮ ಸಂಸ್ಥಾಪನೆಗೆ ಹೇಗೆ ಉಪಯೋಗಿಸಬೇಕೆನ್ನುವುದನ್ನು ತಿಳಿಸಿದ.
ಕೃಷ್ಣ ಹೀಗೆಯೇ.... ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಒಂದೊಮ್ಮೆ ಹೇಳಿದರೂ ಅದು ಅವರವರ ಕಲ್ಪನೆ, ಬುದ್ಧಿಮಟ್ಟದ ವ್ಯಾಖ್ಯಾನ. ಅರ್ಥಕ್ಕೆ ನಿಲುಕದ ವಿಭಿನ್ನ ವ್ಯಕ್ತಿಯಾತ. ದೇವಕಿ ಯಶೋದೆಗೆ ತಾಯಿಯಾದ, ದೇವರೆಂದು ಪೂಜಿಸುವ ಅಕ್ರೂರ-ವಿಧುರನಿಗೆ ಭಗವಂತನಾದ, ಹುಚ್ಚಿಯ ಹಾಗೆ ಪ್ರೀತಿಸುವ ರಾಧೆಗೆ ಪ್ರೇಮಿಯಾದ, ರುಕ್ಮಿಣಿ-ಸತ್ಯಭಾಮೆಗೆ ಮಡದಿಯಾದ, ದ್ರೌಪದಿಯಂಥ ಸಹೋದರಿಗೆ ಆತ್ಮ ಬಂಧುವಾದ, ಧರ್ಮಕ್ಕೆ ಗಂಟು ಬಿದ್ದು ವಿರೋಧಿಸುವ ಭೀಷ್ಮ-ದ್ರೋಣರಿಗೆ ನಿರ್ಲಿಪ್ತನಾದ, ಶಕುನಿ-ದುಶ್ಯಾಸನ-ಶಿಶುಪಾಲ-ಜರಾಸಂಧರ ಪಾಲಿಗೆ ಶಿಕ್ಷಕನಾದ, ಶಿಷ್ಟರಾದ ಕುಂತಿ ಪುತ್ರರ ಪಾಲಿಗೆ ರಕ್ಷಕನಾದ, ಮಗುವಿಗಿಂತ ಮುಗ್ಧನಾದ ಸುಧಾಮನಿಗೆ ಗೆಳೆಯನಾದ, ಗೋಕುಲದಲ್ಲಿ ಓಡಾಡುವ ಗೋಪಿಕೆಯರಿಗೆ ತುಂಟನಾದ........
ಒಂದೇ... ಎರಡೇ....! ಕೃಷ್ಣ ಯಾರಿಗೆ? ಏನು? ಆಗಿಲ್ಲ ಹೇಳಿ. ಅವರವರ ಭಾವಕ್ಕೆ, ಅವರವರ ಅರ್ಥಕ್ಕೆ ಆತ ಏನು ಆಗಬೇಕೋ ಅವೆಲ್ಲವನ್ನೂ ಆಗಿದ್ದಾನೆ. ಹಾಗೆಯೇ, ಚೌಕಟ್ಟಿನ ವ್ಯಾಪ್ತಿಗೆ ಸಿಗದೆ ಇನ್ನೂ ಏನೇನೋ ಆಗಿದ್ದಾನೆ. ಅಷ್ಟೊಂದು ಮಾಯಾವಿ, ವಿವೇಚನೆಗೆ ಸಿಗದಷ್ಟು ಪ್ರಬುದ್ಧ, ಬ್ರಹ್ಮಾಂಡವನ್ನೇ ತನ್ನೊಳಗಿಟ್ಟುಕೊಂಡ ಪ್ರಚಂಡ, ಕೊನೆಗೊಂದು ದಿನ ಮಿಥ್ಯದ ಭ್ರಮೆಯಲ್ಲಿ ಬದುಕುತ್ತೇವೆ ಎನ್ನುವ ಸೂಕ್ಷ್ಮವನ್ನು ತನ್ನ ಅಂತ್ಯದ ಮೂಲಕ ಸಾರಿಹೋದ ಮೇಧಾವಿ.
ಹೀಗೆ ಅರ್ಥಕ್ಕೆ ನಿಲುಕದ ತಂತ್ರಗಾರ, ಮಾಯಗಾರ ನನ್ನಾತ್ಮ ಸ್ನೇಹಿತ ಕೃಷ್ಣ. ಆತ ಜನ್ಮಿಸಿದ ಪವಿತ್ರ ದಿನವಿಂದು. ಬರಿಗೈಯಲ್ಲಿ ಹುಟ್ಟಿ, ಅಷ್ಟೇ ಬರಿಗೈಯ್ಯಲ್ಲಿ ಮರಳೋ ಬದುಕು ನಮ್ಮದು. ಕಣ್ಮುಂದೆ ಸಾವಿದೆ ಎನ್ನುವ ಕಟು ಸತ್ಯ ಮರೆತು, ಅಟ್ಟಹಾಸದಿಂದ ಮೆರೆದಾಡುವವರಿಗೆ ನನ್ನ ಗೆಳೆಯನ ಬದುಕು ಒಂದು ನಿದರ್ಶನ. ದೇಹದಲ್ಲಿ ಉಸಿರಿರುವವರೆಗೆ ಮಾತ್ರ ಅದಕ್ಕೊಂದು ಅರ್ಥ, ನಂತರ ಅದೊಂದು ಉಪಯೋಗಕ್ಕೆ ಬಾರದ ವಸ್ತು ಎನ್ನುವ ಸೂಕ್ಷ್ಮ ತಿಳಿಸಿದ ವಿಶ್ವಗುರು ನನ್ನಾತ್ಮ ಸಖ ಕೃಷ್ಣ.
ಹ್ಯಾಪಿ ಬಡ್ಡೆ ಹುಡುಗಾ........
-ನಾಗರಾಜ್ ಬಿ.ಎನ್.


ಭಾನುವಾರ, ಆಗಸ್ಟ್ 21, 2016

ನೀಲ ಗಗನದಲ್ಲೊಂದು ಕಪ್ಪು ಚುಕ್ಕಿ........ 
ಮುಂಜಾನೆ ಏಳಲಾಗದ ಸ್ಥಿತಿ. ತಲೆ ಧೀಂ ಧೀಂ ಎನ್ನುತ್ತಿದೆ. ಅಂತೂ ಸಾವರಿಸಿಕೊಂಡು ಪ್ರಾತಃವಿಧಿಗಳನ್ನು ಮುಗಿಸಿದ ಗಗನ, ಬೈಕ್ ಸ್ಟಾರ್ಟ್ ಮಾಡಿ ಕಚೇರಿ ಕಡೆ ಮುಖ ಮಾಡಿದ.
ಆತನ ಮನಸ್ಸು ಯಾಕೋ ವಿಚಿಲಿತವಾಗುತ್ತಿತ್ತು. ಕಳೆದ ದಿನ ಬಾಕಿಯಿದ್ದ ಕೆಲಸಗಳನ್ನು ಲಗುಬಗೆಯಲ್ಲಿ ಮುಗಿಸಿ, ಯಾವುದೋ ಕಾರ್ಯದ ನಿಮಿತ್ತ ಹೊರಗಡೆ ಹೋಗುತ್ತಾನೆ. ಅಲ್ಲಿ ತನ್ನ ಕೆಲಸ ಮುಗಿಸಿ ವಾಪಸ್ ಕಚೇರಿಗೆ ಮರಳುವ ವೇಳೆ, ರಸ್ತೆಯ ಚರಂಡಿ ಬಳಿ ಶೂಟ್-ಬೂಟು ಹಾಕಿಕೊಂಡಿರುವ ವ್ಯಕ್ತಿಯೊಬ್ಬ ಅಂಗಾತ ಬಿದ್ದಿರುವುದು ಕಣ್ಣಿಗೆ ಕಾಣುತ್ತದೆ.
'ಅರೇ..... ಎಲ್ಲೋ ನೋಡಿದ್ದೀನಲ್ಲ ಈತನನ್ನ........?' ಎಂದು ಒಂದು ಕ್ಷಣ ಯೋಚನೆಗೆ ಬೀಳುತ್ತಾನೆ.
ಉಹೂಂ ..... ನೆನಪಿಗೆ ಬರುತ್ತಿಲ್ಲ. ಆತನನ್ನ ಹಿಂದಿರುಗಿ ನೋಡುತ್ತಲೇ ನಾಲ್ಕೈದು ಹೆಜ್ಜೆ ಇಟ್ಟಿರುತ್ತಾನೆ. ಮನಃಪಟಲದಲ್ಲಿ ಮಸುಕು ಮಸುಕಾದ ಮುಖವೊಂದು ಸ್ಪಷ್ಟರೂಪ ಪಡೆದುಕೊಳ್ಳುತ್ತದೆ. ಗಗನಗೆ ಒಮ್ಮೆಲೆ ಬರ ಸಿಡಿಲು ಬಡಿದಂತಾಗುತ್ತದೆ.
'ಭಗವಂತ...!' ಎಂದು ಉದ್ಘಾರ ತೆಗೆಯುತ್ತ, ಚರಂಡಿಯ ಪಕ್ಕದಲ್ಲಿ ಬಿದ್ದಿರುವ ಆತನಲ್ಲಿಗೆ ತಡವರಿಸುತ್ತ ಧಾವಿಸುತ್ತಾನೆ.
ಹತ್ತಿರ ಹೋಗುತ್ತಿದ್ದಂತೆ ಸಾರಾಯಿ ವಾಸನೆ ಗಬ್ಬೆಂದು ಮೂಗಿಗೆ ಬಡಿಯುತ್ತದೆ. ಸುತ್ತಮುತ್ತ ಒಮ್ಮೆ ಕಣ್ಣಾಡಿಸುತ್ತಾನೆ.
ಹಾದಿ ಹೋಕರು, 'ಏಯ್, ಬಿಡಪ್ಪ... ಕುಡ್ಕೊಂಡು ಬಿದ್ದವರಿಗೆ ಏನ್ ಸಹಾಯ ಮಾಡ್ತೀಯ' ಎಂದು ವ್ಯಂಗ್ಯವಾಡಿ ಮುಂದೆ ಸಾಗುತ್ತಾರೆ.
ಆತನನ್ನು ತನ್ನ ಕಾಲ ಮೇಲೆ ಮಲಗಿಸಿ, ತನ್ನ ಬ್ಯಾಗ್ನಲ್ಲಿದ್ದ ಬಾಟಲಿ ನೀರನ್ನು ತೆಗೆದು, ಆತನ ಮುಖಕ್ಕೆ ಸಿಂಪಡಿಸುತ್ತಾನೆ. ಅಮಲಿನಲ್ಲಿದ್ದಾತನ ಮುಖಕ್ಕೆ ತಣ್ಣನೆಯ ನೀರು ಬಿದ್ದಾಗ, ನಿಶೆಯ ಕಣ್ಣನ್ನು ಅರೆಬರೆಯಾಗಿ ತೆರೆಯುತ್ತಾನೆ.
'ಯಾರೋ ನೀನು, ಹೋಗಲೇ....' ಎನ್ನುತ್ತ, ಏನೇನೋ ಅಸಭ್ಯವಾಗಿ ಬೈಯ್ಯುತ್ತಾನೆ.
ಆತ ಭಾನು. ಮೂರುವರ್ಷದ ಹಿಂದೆ 'ಸಂದರ್ಭವೊಂದರಲ್ಲಿ' ಗಗನಗೆ ಆತನ ಮುಖ ಪರಿಚಯ. ಭಾನುವಿಗು ಕೂಡಾ ಗಗನ ಮುಖ ಪರಿಚಯವೇ. ಆದರೆ, ಭಾನುವಿಗೆ ಗಗನ ಯಾರು ಎಂದು ಈ ಸಂದರ್ಭದಲ್ಲಿ ಪರಿಚಯ ಹಿಡಿಯಲಾಗುತ್ತಿಲ್ಲ. ಯಾಕೆಂದರೆ, ಸಾರಾಯಿ ಆತನ ಮೈ-ಮನವೆಲ್ಲ ತುಂಬಿಕೊಂಡು, ಇಹದ ಪರಿವನ್ನೇ ಅಳಿಸಿಬಿಟ್ಟಿದೆ.(ಅಥವಾ ಮರೆತೂ ಇರಬಹುದು).
ಗಗನ ಒಳಗಗೊಳಗೆ ಅಳುತ್ತಿದ್ದಾನೆ. ಉಮ್ಮಳಿಸಿ ಬರುವ ದುಃಖವನ್ನು ತಡೆ ಹಿಡಿಯುತ್ತಿದ್ದಾನೆ.
'ಅಯ್ಯೋ..... ಎಂಥ ಅನ್ಯಾಯವಿದು?' ಎಂದು ವಿಧಿಯನ್ನು ಶಪಿಸುತ್ತಿದ್ದಾನೆ. ಮನದಲ್ಲಿ ಸಾವಿರ... ಸಾವಿರ ಆಲೋಚನೆಗಳು. ಅದಕ್ಕೆ ಪ್ರತಿಸ್ಪರ್ಧಿಯೆನ್ನುವಂತೆ ಹಿಪ್ಪಿ ಹಿಂಡುವಂತ ಯಾತನೆಗಳು.
ನೋವಿನಲ್ಲೂ ನಗುವನ್ನು ರೂಢಿಸಿಕೊಂಡ ಗಗನ, ನಗುತ್ತಲೇ ದಾರಿಹೋಕನೊಬ್ಬನನ್ನು ಕರೆದು ಸಹಾಯ ಕೇಳುತ್ತಾನೆ. ಆಟೋ ಎಂದು ಕೂಗಿ, ದಾರಿಹೋಕನ ಸಹಾಯದಿಂದ ಭಾನುವನ್ನು ರಸ್ತೆಗೆ ಕರೆತಂದು ಆಟೋ ಹತ್ತಿಸುತ್ತಾನೆ. ಗೋವರ್ಧನ ರಸ್ತೆಗೆ ಆಟೋ ತಿರುಗಿಸುವಂತೆ ಹೇಳಿ, ತಾನು ಪಯಣಿಸುತ್ತಾನೆ.
ಏನೇನೋ ಚಿತ್ರ ವಿಚಿತ್ರ ಯೋಚನೆಗಳು ಗಗನ ಮನದಾಳದಲ್ಲಿ ಸುಳಿದಾಡುತ್ತಿವೆ. ಎದೆಯಲ್ಲೊಂದು ಸಣ್ಣ ನಡುಕ. ಕಾರ್ಮೋಡಗಳೆಲ್ಲ ಒಂದೇ ಕಡೆ ಹೆಪ್ಪುಗಟ್ಟಿದಂಥ ಭಾವ. ಗಗನ ಮೊಗದಲ್ಲಿದ್ದ ನಗು ನಿಧಾನವಾಗಿ ಮಾಯವಾಗುತ್ತಿದೆ.
ತಲುಪಬೇಕಾದ ಗಮ್ಯ ಸ್ಥಳ ಸನಿಹವಾಗುತ್ತಿದೆ.
ಅದು ಭಾನುವಿನ ಮನೆ. 'ಸಂದರ್ಭ'ವೊಂದರಲ್ಲಿ ಆತನ ಮನೆ ಹಠ ಹಿಡಿದು ಹುಡುಕಿದ್ದ. ಆದರೆ, ಇಂತಹ ಸಂದರ್ಭದಲ್ಲಿ ಆ ಮನೆಯ ಹೊಸಿಲು ತುಳಿಯುತ್ತೇನೆ ಎಂದು ಆತ ಅಂದುಕೊಂಡಿರಲಿಲ್ಲ.
ಆಟೋ ಇಳಿದು ಭಾನುವಿನ ಒಂದು ಕೈಯ್ಯನ್ನು ತನ್ನ ಹೆಗಲ ಮೇಲಿಟ್ಟುಕೊಂಡು, ನಿಧಾನಕ್ಕೆ ಆತನ ಜತೆ ಹೆಜ್ಜೆ ಮನೆ ದಿಕ್ಕಿನತ್ತ ಹೆಜ್ಜೆ ಇಡುತ್ತಿದ್ದಾನೆ.
ಮನೆ ಮುಂದೆ ಬಂದು ಗಗನ ಕಾಲಿಂಗ್ ಬೆಲ್ ಒತ್ತಿ, ಭಾನುವಿನ ಹಿಂದೆ ಹಿಮ್ಮುಖ ಹಾಕಿಕೊಂಡು ನಿಲ್ಲುತ್ತಾನೆ. ಅಷ್ಟರಲ್ಲಿ ಒಳಗಿದ್ದ ನಾಯಿ ಒಂದೇ ಸಮನೆ ಕೂಗುತ್ತದೆ.
ಮನೆ ಬಾಗಿಲು ತೆರೆದ ಭಾನುವಿನ ಮಡದಿ, ಅಮಲಿನಲ್ಲಿ ಜೋಲಿ ಹೊಡೆಯುತ್ತಿದ್ದ ಗಂಡನನ್ನು ನೋಡಿ ಬಯ್ಯುತ್ತಾಳೆ.
'ಪ್ರತಿದಿನ ನಿಮ್ಮದು ಇದೇ ಹಣೆಬರಹ. ಹಾದಿ ಬೀದಿಲಿ ಹೋಗೋರು ನಿಮ್ಮನ್ನು ಕರ್ಕೊಂಡು ಮನೆಗೆ ತಂದು ಬಿಡೋದು. ಯಾಕಾದ್ರೂ ನಾ ನಿಮ್ಮನ್ನು ಮದ್ವೆ ಆದ್ನೋ?' ಎಂದು ತನ್ನ ಸಂಕಟವನ್ನು ಹೊರಹಾಕುತ್ತಾಳೆ.
ಆಕೆಯ ಮಾತನ್ನು ಕೇಳಿ ಗಗನ, ಬಿಕ್ಕಳಿಸಿ ಬರುವ ದುಃಖವನ್ನು ತಡೆಹಿಡಿದು ತನ್ನೆರಡು ತುಟಿಗಳನ್ನು ಬಲವಂತವಾಗಿ ಕಚ್ಚಿ ಹಿಡಿದಿದ್ದಾನೆ. ಏನು ಮಾಡಬೇಕೆಂದು ತೋಚದೆ ವಿಭ್ರಾಂತನಾಗಿದ್ದಾನೆ. ಸಾವರಿಸಿಕೊಳ್ಳಲು ಪಟ್ಟ ಪ್ರಯತ್ನವೆಲ್ಲ ಒಂದೊಂದಾಗಿ ವಿಫಲವಾಗುತ್ತಿದೆ. ನಿಶೆಯಲ್ಲಿದ್ದ ಭಾನುವಿನ ಓಲಾಟದ ಜತೆಗೆ, ನಿತ್ರಾಣಗೊಂಡ ತನ್ನ ದೇಹದ ನಿಶ್ಯಕ್ತಿ ಆತನನ್ನು ಅಲ್ಲಿಯೇ ಕುಸಿದು ಬೀಳುವಂತೆ ಮಾಡುತ್ತಿದೆ. ಉಸಿರನ್ನು ಗಟ್ಟಿಯಾಗಿ ಬಿಗಿಹಿಡಿದುಕೊಂಡು ........
'ಕ್ಷಮಿಸು ನೀಲಿ... ನಾನು ಗಗನ' ಎನ್ನುತ್ತ ಮುಖ ತಿರುಗಿಸುತ್ತಾನೆ...!
ಗಗನನನ್ನು ನೋಡಿದ್ದೇ ನೀಲಿಗೆ ಮಾತೇ ಬರದಂತಾಗಿ, ಗರ ಬಡಿದವಳಂಗಾಗುತ್ತಾಳೆ. ಬಿಟ್ಟು ಕಣ್ಣು ಬಿಟ್ಟಂತೆ, ಆಶ್ಚರ್ಯದಿಂದ ಗಗನನ್ನು ನೋಡುತ್ತಿದ್ದಾಳೆ. ಹಾಗೆ ಅರಿವಿಲ್ಲದೆ ಎರಡು ಕಣ್ಣಂಚಿನಿಂದ ನೀರು, ಆಕೆಯ ಗುಳಿಬಿದ್ದ ಕೆನ್ನೆಯನ್ನು ತೋಯಿಸುತ್ತಿದೆ. ತುಟಿ ಬಿಗಿಹಿಡಿದು ಬಿಕ್ಕಳಿಸುವ ಸರದಿ ಈಗ ನೀಲಿಯದ್ದು.
ಎರಡು ಕೈ ಜೋಡಿಸಿ...... ಅಳುತ್ತಲೇ ನೆಲಕ್ಕೆ ಕುಸಿದು ಬೀಳುತ್ತಾಳೆ.
'ಅಯ್ಯೋ...' ಎನ್ನುತ್ತ ತನ್ನೆರಡು ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಬಡಿದುಕೊಳ್ಳುತ್ತಿದ್ದಾಳೆ. ಭಾನುವನ್ನು ಹಿಡಿದುಕೊಂಡು ಎದುರಿಗೆ ನಿಂತ ಗಗನ, ಏನೂ ಹೇಳಲಾಗದಂತವನಾಗಿ ಮೂಗನ ಹಾಗೆ ಇವೆಲ್ಲವನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಿದ್ದಾನೆ.
'ಹುಚ್ಚುಕೋಡಿ ಮನಸ್ಸಿಗೆ ಬೆಲೆ ಕೊಟ್ಟು, ಈಗ ನೀನೇ ಬೆಲೆ ತೆರುವಂತಾಯಿತಲ್ಲ' ಎಂದು ಮನಸ್ಸಿನಲ್ಲಿಯೇ ಮಮ್ಮುಲ ಮರುಗುತ್ತಿದ್ದಾನೆ.
ಭಾನುವನ್ನು ಅಲ್ಲಿಯೇ ಇರುವ ಸೋಫಾದಲ್ಲಿ ಕುಳ್ಳರಿಸಿದ ಗಗನ, 'ಈತನಿಗೆ ತಣ್ಣೀರ ಸ್ನಾನ ಮಾಡಿಸು. ಊಟ ಮಾಡಿದ ಹಾಗೆ ಕಾಣುತ್ತಿಲ್ಲ, ಹಸಿದಿರುವ ಹಾಗಿದೆ' ಎನ್ನುತ್ತಾನೆ.
ನೀಲಿಯಿಂದ ಯಾವುದೇ ಪ್ರತ್ಯುತ್ತರವಿಲ್ಲ. 'ತಾ ಮಾಡಿದ ತಪ್ಪಿಗೆ, ತನ್ನ ನಿರ್ಧಾರಕ್ಕೆ, ತನ್ನ ಹಠಕ್ಕೆ ಭಗವಂತ ತಕ್ಕ ಶಿಕ್ಷೆ ನೀಡಿದ್ದಾನೆ' ಎಂದು ತನ್ನನ್ನು ತಾನೇ ಶಪಿಸಿಕೊಳ್ಳುತ್ತಿದ್ದಾಳೆ.
'ಸರಿ... ನಾ ಇನ್ನು ಹೊರಡುತ್ತೇನೆ' ಎಂದು ಎದ್ದ ಗಗನನಿಗೆ ಗೋಡೆ ಮೇಲೆ ತೂಗಿ ಹಾಕಿದ ಚಿಕ್ಕ ಮಗುವಿನ ಫೋಟೋ ಕಣ್ಣಿಗೆ ಬೀಳುತ್ತದೆ. ನೀಲಿಯ ನೋವನ್ನು ಮರೆ ಮಾಚಬೇಕೆಂದು,
'ಎಷ್ಟು ಮುದ್ದಾಗಿದೆಯಲ್ವಾ ಪಾಪು? ಇಂಥದ್ದೆ ಪಾಪು ನೀಲಿ ಮಡಿಲು ತುಂಬಲಿ' ಎನ್ನುತ್ತಾನೆ.
ಆತನ ಮಾತಿಗೆ ನೀಲಿ, ನಗುತ್ತ....
'ಥ್ಯಾಂಕ್ಸ್ ಗಗನ, ಅದು ನನ್ನದೇ ಮಗು, ಪ್ರಕೃತಿ ಅಂತ...... ಮುಂದೇನೋ ಹೇಳಲಿದ್ದ ಅವಳನ್ನು ಅಲ್ಲಿಯೇ ತಡಿದು, 'ವ್ಹಾವ್.... ನೀಲಿ, ತುಂಬಾ ಸಂತೋಷವಾಯ್ತು. ಎಲ್ಲಿದೆ ಕಂದಮ್ಮ?' ಎಂದು ಪ್ರಶ್ನಿಸುತ್ತಾನೆ.
ನೀಲಿ ಮತ್ತೆ ನಗುತ್ತಾಳೆ. ನಗು ದೊಡ್ಡದಾಗುತ್ತ ಹೋಗುತ್ತದೆ.
ಇತ್ತ ಗಗನ 'ಹೇಳು ನೀಲಿ.... ಪ್ರಕೃತಿ ಪಾಪು ಎಲ್ಲಿ?' ಎಂದು ಮತ್ತೆ ಕೇಳುತ್ತಾನೆ.
ನೀಲಿ ತಕ್ಷಣ ನಗು ನಿಲ್ಲಿಸಿ, 'ಪ್ರಕೃತಿ ಮಡಿಲು ತುಂಬಿ, ಬರಿದು ಮಾಡಿ ಹೋದಳು ಗಗನ' ಎಂದು ಶಾಂತವಾಗಿ ಉಸುರುತ್ತಾಳೆ.
ಗಗನ ತನ್ನೆರಡು ಕಣ್ಣುಗಳನ್ನು ನಿಧಾವಾಗಿ ಮುಚ್ಚಿ, ಉಸಿರನ್ನು ಒಳಗೆಳೆದುಕೊಂಡು 'ಶೂನ್ಯದತ್ತ' ಮನಸ್ಸನ್ನು ಕೇಂದ್ರಿಕರಿಸುತ್ತಾನೆ.
ಸಾವರಿಸಿಕೊಂಡಂತೆ ಮಾಡಿ, ತೊದಲಿಸುತ್ತ ಅರೆಬರೆ ಮುಚ್ಚಿದ ಕಣ್ಣಲ್ಲೆ, 'ಕ್ಷಮಿಸು ನೀಲಿ, ಹೋರಡುತ್ತೇನೆ' ಎಂದು ಭಾರವಾದ ಹೆಜ್ಜೆ ಹಾಕುತ್ತ ಮನೆಯ ಹೊಸ್ತಿಲಿನ ಹೊರಗೆ ಕಾಲಿಡುತ್ತಾನೆ.
-ನಾಗರಾಜ್ ಬಿ.ಎನ್. 

ಬುಧವಾರ, ಆಗಸ್ಟ್ 17, 2016

ಗೂಡು ತೊರೆದ ನೀಲಿ ಹಕ್ಕಿ....

ಕೊನೆಗೂ ಎದೆ ಗೂಡಿನ ಗೋಡೆಗೆ ಬಳಿದುಕೊಂಡ ನೀಲಿ ಬಣ್ಣ ರಂಗೇರಲೇ ಇಲ್ಲ.
ಇರಲಿ.... ಹುಚ್ಚು ಹಿಡಿಸೋ ಆ ನೀಲಿ ಬಣ್ಣ ಆತನ ಬದುಕನ್ನು ಆವರಿಸಿ ಬಾನಂಗಳದ ನೀಲಿಯಲ್ಲಿ ಬೆರೆತು ಹೋಗುತ್ತವೆ ಅಂದುಕೊಂಡಿದ್ದ. ಆದರೆ, ಬಣ್ಣಗಳ ಹೊಯ್ದಾಟದಲ್ಲಿ ನೀಲಿ ಕಡುಗಪ್ಪಾಗಿ ಕಾಪಿಟ್ಟ ಮೋಡಗಳಾಗುತ್ತವೆ ಅನ್ನೋ ಸತ್ಯ ಅರಿವಾಗಿದ್ದು ಅವನಿಗೆ ಆವಾಗಲೇ..! ಮೋಡ ಕಾಪಿಟ್ಟಿದೆಯೋ, ಬಣ್ಣ ಕಾಪಿಟ್ಟಿದ್ದೇ ಮೋಡವಾಗಿದೆಯೋ ಗೊತ್ತಿಲ್ಲ. ಎದೆಯ ಬಾನಲ್ಲಿ ಮಾತ್ರ ಅಕಾಲಿಕ ವರ್ಷೆ ಧೋ ಧೋ... ಎಂದು ಸುರಿಯುತ್ತಿದೆ. ಮುಷ್ಟಿಯಗಲಷ್ಟಿಲ್ಲದ ಪುಟ್ಟ ಎದೆಗೂಡು ವರ್ಷೆ ಆರ್ಭಟಕ್ಕೆ ನಲುಗಿ ಹೋಗಿದೆ. ಪ್ರಳಯದಂಚಿಗೆ ತಲುಪಿ, ಆಸರೆಯ ಹುಡುಕಾಟದಲ್ಲಿ ಕಣ್ಣಂಚಿಗೆ ಜೋತು ಬಿದ್ದಿದೆ. ನಾಡಿ ಬಡಿತ ಕ್ಷಣ ಕ್ಷಣಕ್ಕೂ ನಿಧಾನವಾಗುತ್ತಿದೆ. ಅನಿಶ್ಚಿತತೆಯ ಉಸಿರು, ನಿಶ್ಚಿತ ಅರ್ಥಕ್ಕೆ ಕಾದು ಕುಳಿತಿದೆ....!
ಒಂದೇ ಸಮನೆ ಎದೆಗೆ ನಾಟಿದ ಬಾಣಕ್ಕೆ ರಕ್ತವೂ ಒಸರುತ್ತಿಲ್ಲ. ನರನಾಡಿಗಳಲ್ಲಿ ಹರಿದಾಡುವ ರಕ್ತ ಸಹ ವರ್ಷೆಯ ಚಳಿಗೆ ಹೆಪ್ಪುಗಟ್ಟಿ ಬಿಟ್ಟಿವೆ. ಮಡುಗಟ್ಟಿದ ಕನಸು ಬಾವಾಗಿ ಕಾಣಿಸಿಕೊಂಡಿದೆ. ಸಹಿಸಲಾಗದ ಪ್ರಚಂಡ ನೋವು. ಮಿಡುಕಾಡಲು ಅಸಾಧ್ಯವಾದ ಯಾತನೆ. ನಿಂತ ಜಾಗವೇ ಕುಸಿದು ಬೀಳಲಿದೆಯೋ ಅನ್ನೋ ಭಾವ.
ಆದರೂ ಸಾವರಿಸಿಕೊಳ್ಳುತ್ತಿದ್ದಾನೆ. ನೋವಿನ ವಿರುದ್ಧವೆ ಸೆಣಸಾಡುತ್ತಿದ್ದಾನೆ. ಎದೆಯಾಳದಲ್ಲಿ ಬೆಂಕಿಹಚ್ಚಿ, ಹೆಪ್ಪುಗಟ್ಟಿದ ರಕ್ತವನ್ನು ತಿಳಿಗೊಳಿಸುತ್ತಿದ್ದಾನೆ. ನೋವಿನ ಬಾವು ಸುಟ್ಟು ಭಸ್ಮವಾಗುತ್ತಿದೆ. ಕನಸಿನ ಅರಮನೆ ಚಟಪಟನೆ ಉರಿದು ಹೋಗುತ್ತಿದೆ. ಆ ಉರಿವ ಜ್ವಾಲೆ ನಿನ್ನ ಬಾಳ ದಾರಿಗೆ ಬೆಳಕಾಗಿರಲಿ.... ಅದರ ಶಾಖ ನಿನ್ನ ಬದುಕನ್ನು ಬೆಚ್ಚಗಿರಿಸಲಿ..... ಎಂದು ಮನದಲ್ಲಿಯೇ ಪ್ರಾರ್ಥಿಸುತ್ತಿದ್ದಾನೆ.
ಆತ ಅಂದು ಎದೆಗೂಡಿಗೆ ಬಳಿದುಕೊಂಡ ನೀಲಿ ಬಣ್ಣವೆಲ್ಲ ಈಗ ಮಾಯವಾಗಿದೆ. ಬೆಂಕಿಯ ಕೆನ್ನಾಲಿಗೆ ಎದೆಗೂಡು ಬೆಂದು ಹೋಗಿದೆ. ಕಣ್ಣಾಡಿಸಿದಲ್ಲೆಲ್ಲ ದಟ್ಟ ಹೊಗೆ. ಮೂಗಿಗೆ ಬಡಿಯುವ ಅರೆಬರೆ ಬೆಂದ ಕನಸಿನ ವಾಸನೆ. ಇನ್ನೇನಿದ್ದರೂ ಅಳಿದುಳಿದ ಬೂದಿಯಲ್ಲಿ ಕೆದುಕಾಟ. ಗೂಡು ಬಿಟ್ಟು ನೀಲಾಕಾಶಕ್ಕೆ ಹಾರಿದ
ನೀಲಿ ಹಕ್ಕಿಯ ಹುಡುಕಾಟ. ನಿತ್ಯ... ನಿರಂತರ.
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಹಾಡು, ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು.........
-ನಾಗರಾಜ್ ಬಿ.ಎನ್. 

ಶುಕ್ರವಾರ, ಜುಲೈ 29, 2016

ರೊಚ್ಚಿಗೆದ್ದ ಮಲಪ್ರಭೆ ಮಕ್ಕಳು
ಮಲಪ್ರಭೆ ಮಕ್ಕಳು ಮತ್ತೆ ರೊಚ್ಚಿಗೆದ್ದಿದ್ದಾರೆ. ತಾತ, ಅಪ್ಪಂದಿರು ಬುದುಕುವ ಹಕ್ಕಿಗಾಗಿ ಹಾಕಿಕೊಟ್ಟ ಹೋರಾಟದ ಹಾದಿಯನ್ನು ಮೊಮ್ಮಕ್ಕಳು, ಮಕ್ಕಳು ತುಳಿದು ಗಮ್ಯ ತಲುಪೇ ತೀರುತ್ತೇವೆ ಎಂದು ದಂಡ ಹಿಡಿದು ಹೊರಟಿದ್ದಾರೆ. ಅಂದು ಹೋರಾಡಿದ ಎಷ್ಟೋ ಜೀವಗಳು ಮಣ್ಣಲ್ಲಿ ಬೆರತುಹೋಗಿವೆ. ಉಳಿದ ಕೆಲವಷ್ಟು ತಲೆಗಳ ಕೂದಲುದುರಿ ಮಾಸಿ ಹೋಗಿವೆ. ಆದರೆ ಅವರ ಬೆನ್ನಹಿಂದೆಯೇ ಬಂದ ಕುಡಿಗಳು, ಹಿರಿತನದ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಲೇ ಬೇಕು ಅಬ್ಬರಿಸಿ ಹೂಂಕರಿಸುತ್ತಿದ್ದಾರೆ. ರಾಜ್ಯ, ಕೇಂದ್ರ ಸರಕಾರದ ವಿರುದ್ಧ ತೊಡೆ ತಟ್ಟಿ, ತಾಕತ್ತಿದ್ದರೆ ಕಣಕ್ಕಿಳಿಯಿರಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ!
ಪರಿಣಾಮ, ನಲವತ್ತು ವರ್ಷಗಳ ಕಾಲದ ಮಹದಾ ಯಿ-ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಹೋರಾಟದ ಕೆಂಡವೀಗ ನಿಗಿನಿಗಿಸುತ್ತಿವೆ. ಎದೆಯಲ್ಲಿಯೇ ಉಳಿದಿದ್ದ ದಾವಾಗ್ನಿ, ಅಪಧಮನಿ, ಅಭಿಧಮನಿಯನ್ನು ಸೀಳಿ ನರ ನಾಡಿಗಳ ಮೂಲಕ ಹೊರ ಬರುತ್ತಿವೆ. ಕಾಡ್ಗಿಚ್ಚಿನಂತೆ ಸುತ್ತೆಲ್ಲ ಪಸರಿಸಿ ಎದುರಿಗೆ ಬಂದ ಅಧಿಕಾರಶಾಹಿಗಳ ಹಾಗೂ ಅವರ ಕಚೇರಿಗಳನ್ನ ಆಪೋಶನ ತೆಗೆದುಕೊಳ್ಳುತ್ತಿವೆ!
ಇದು ಮಲಪ್ರಭೆ ಅಚ್ಚುಕಟ್ಟು ಪ್ರದೇಶಗಳಲ್ಲಿ ವಾಸಿಸುವ ರೈತ ಸಮುದಾಯದ ಆಕ್ರೋಶದ ಕಿಚ್ಚು. ಹಂತ ಹಂತವಾಗಿ ಹೊರಬಂದು, ಈಗ ಹೋಮದ ಅಗ್ನಿಕುಂಡವಾಗಿ ಮಾರ್ಪಟ್ಟಿದೆ. ಹುಣ್ಣಿಮೆ ಶರಧಿ ಎಲ್ಲೆ ಮೀರಿ ಉಕ್ಕುವಂತೆ, ಅಂತರಾಳದಲ್ಲಿ ಮಡುಗಟ್ಟಿದ್ದ ತಾಳ್ಮೆ ಕಟ್ಟೆ ಒಡೆದು ಜ್ವಾಲೆಯಾಗಿ ಬದಲಾಗಿದೆ. ತಾತ, ಅಪ್ಪಂದಿರ ಕಾಲದಿಂದ, ಮಕ್ಕಳು, ಮರಿ-ಮೊಮ್ಮಕ್ಕಳ ಕಾಲವಾದ ಇಂದಿನವರೆಗೂ ಕುಡಿಯುವ ನೀರಿಗಾಗಿ ಒತ್ತಾಯಿಸುತ್ತ ಬಂದರೂ, ಆಡಳಿತಾರೂಢ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೇ ಎನ್ನಲಿಲ್ಲ. ಹೋರಾಟ, ಪ್ರತಿಭಟನೆ, ಬಂದ್, ಗಲಭೆ ನಡೆದಾಗಲೆಲ್ಲ ಪಕ್ಷಗಳ ಪ್ರತಿಷ್ಠೆ, ಒಣ ರಾಜಕೀಯ ಮಾಡುತ್ತ ಕಾಲ ಕಳೆದರು. ಜತೆಗೆ, ರೈತ ಸಮುದಾಯದ ಹೋರಾಟ ಹತ್ತಿಕ್ಕಲು ತೆರೆಮರೆಯಲ್ಲಿ ಏನೇನು ಮಾಡಬೇಕೋ ಅವೆಲ್ಲವನ್ನು ಶಿಸ್ತುಬದ್ಧವಾಗಿ ಮಾಡಿದರು. ಇನ್ನೂ ಮುಂದುವರಿದರು, ಮೂರು ಪಕ್ಷದ ಮುಖಂಡರು ಪ್ರತ್ಯೇಕ ಪ್ರತಿಭಟನೆ ಮಾಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದರು. ಮೂರು ಪಕ್ಷಗಳ ಜನಪ್ರತಿನಿಧಿಗಳು ಪರಸ್ಪರ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತ ಪ್ರತಿಭಟನಾಕಾರರ ದಿಕ್ಕನ್ನು ಸಹ ಬದಲಿಸಲು ಪ್ರಯತ್ನಿಸಿದರು. ಕುಚೋದ್ಯವೆಂದರೆ ಅವರ ಅಂದಿನ ಆ ಪ್ರತಿಭಟನೆಗಳು ಯಾರ ವಿರುದ್ಧವಾಗಿತ್ತು ಎನ್ನುವುದು?
ಇರಲಿ, ಶಾಂತಿಯಿಂದಾಗದ್ದು ಕ್ರಾಂತಿಯಿಂದಾದರೂ ನಡೆಯಲೇಬೇಕು. ಅದೇ ಅಂತಿಮ ಎಂದಾದರೆ ಯಾರು ಏನೂ ಮಾಡಲು ಅಸಾಧ್ಯ. ಇನ್ನೊಬ್ಬರಿಗೆ ಅನ್ಯಾಯವಾಗಲೆನ್ನುವ ದುರುದ್ದೇಶವಿಟ್ಟುಕೊಂಡು ಭರತ ಭೂಮಿಯಲ್ಲಿ ಎಂದೂ ಜನಾಂದೋಲನ ನಡೆದಿಲ್ಲ. ಸಾರ್ವಜನಿಕ ಹಿತಾಸಕ್ತಿಗೋಸ್ಕರ ಮುಂದಿನ ದಿನಗಳನ್ನು ಅವಲೋಕಿಸಿ, ಅನಿವಾರ್ಯ ಸ್ವಾರ್ಥಗಳಿಂದ ಬೃಹತ್ ಪ್ರತಿಭಟನೆ, ಗಲಭೆಗಳು ಸರಕಾರದ ವಿರುದ್ಧ ನಡಿದಿವೆ. ಅಂತಹ ಬಹುತೇಕ ಹೋರಾಟವೆಲ್ಲ ಯಶಸ್ಫವಿಯೂ  ಆಗಿವೆ. ಆದರೆ, ನಲವತ್ತು ವರ್ಷಗಳ ಕಾಲದಷ್ಟು ಸುದೀರ್ಘವಾದ ನಡೆಯುತ್ತಿರುವ ಹೋರಾಟವೆಂದರೆ ಬಹುಶಃ ಇದೊಂದೆ ಇರಬೇಕು. ಹಾಗೆಯೇ, ರಾಜಕೀಯ ನೇತಾರರೆನಿಸಿಕೊಂಡವರ ಸ್ವಾರ್ಥದ ಗಂಜಿ ಬಟ್ಟಲಲ್ಲಿ ಬಿದ್ದ ನೊಣದ ಗತಿಯಂತಾದ್ದು ಸಹ ಇದೊಂದೆ ಯೋಜನೆಯಿರಬೇಕು.
ಮಾಡು ಇಲ್ಲವೇ ಮಡಿ ಎನ್ನುವ ಧ್ಯೇಯ ವಾಕ್ಯವನ್ನು ಹಸಿ ಎದೆಯಲ್ಲಿ ಕೊರೆಸಿಕೊಂಡು, ರಕ್ತ ಚಿಮ್ಮಿ ಹರಿದು ಉಸಿರು ನಿಲ್ಲುವವರೆಗೂ ಹೋರಾಟ ಕೈ ಬಿಡಲಾರೆವು ಎನ್ನುತ್ತ ರೈತರು ಬಂಡಾಯವೆದ್ದಿದ್ದಾರೆ. ನ್ಯಾಯ ದೇವತೆ ಎಂದು ಎರಡು ಕೈ ಕಟ್ಟಿ, ತಲೆ ಬಗ್ಗಿಸಿ ನಿಲ್ಲುತ್ತಿದ್ದವರು, ಈಗ ಅದೇ ಕೈಯ್ಯಲ್ಲಿ ಪಾಶು ಪತಾಸ್ತ್ರ ಹಿಡಿದು, ತಲೆಯಲ್ಲಿ ಕಿಚ್ಚು ತುಂಬಿಕೊಂಡು ನ್ಯಾಯ ದೇಗುಲವನ್ನು ಧ್ವಂಸ ಮಾಡಿದ್ದಾರೆ. ಗಂಟಲ ಪಸೆ ಒಣಗಿಸಿಕೊಳ್ಳಲು ನೀರು ನೀಡದೆ ನ್ಯಾಯ ದೇವತೆಯೇ ಅನ್ಯಾಯ ಎಸಗಿದ್ದಾಳೆಂದು, ಅವಳ ಮೇಲಿದ್ದ ನಂಬಿಕೆಯನ್ನು ಸಹ ಸುಟ್ಟು ಬೂದಿ ಮಾಡಿದ್ದಾರೆ. ಆ ಬೂದಿಯನ್ನೇ ಹಣೆಗೆ ಮೆತ್ತಿಕೊಂಡು ಗೆದ್ದೇ ಗೆಲ್ಲುತ್ತೇವೆ ಎಂದು ಸಪಥ ಗೈದಿದ್ದಾರೆ.
ಇಷ್ಟು ದಿನದ ಶಾಂತಿಯುತ ಹೋರಾಟಕ್ಕೆ ತೆರೆ ಎಳೆದ ಅವರು ಸಂಪೂರ್ಣ ಕಾನೂನನ್ನೇ ಕೈಗೆತ್ತಿಕೊಂಡು ನಟ್ಟ ನಡು ರಸ್ತೆಯಲ್ಲಿ ಹೊಟ್ಟೆ-ಬೆನ್ನು ಒಂದಾಗುವಂತೆ ಕೂಗುತ್ತ ಕೆಂಡದುಂಡೆಯನ್ನು ಉಗುಳುತ್ತಿದ್ದಾರೆ. ಅದರ ಕಾವಿಗೆ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಥರಥರನೆ ನಡುಗುತ್ತ, ಖುರ್ಚಿಯಿಂದ ಮೇಲೇಳುತ್ತಿದ್ದಾರೆ. ಸಾಕಪ್ಪ ಈ ರಾಜಕೀಯ ಎಂದು ರೈತರ ಹೆಗಲಿಗೆ ಹೇಗಲಾಗಿ, ದನಿಗೆ ದನಿ ಸೇರಿಸಿ ಕದನದ ಕಹಳೆ ಊದುತ್ತಿದ್ದಾರೆ. ಸಂಸತ್ ಭವನದಲ್ಲಿ ಆಸೀನರಾಗುವ ಉಕ ಭಾಗದ ಜಪ್ರತಿನಿಧಿಗಳು ಒಗ್ಗಟ್ಟಾಗಬೇಕು, ಇಲ್ಲ ಖುರ್ಚಿ ಬಿಟ್ಟು ಸಿಡಿದೇಳಬೇಕು ಎಂದು ಸ್ಪಷ್ಟ ಸಂದೇಶ ಸಾರಿದ್ದಾರೆ. ಇವೆಲ್ಲದರ ಪರಿಣಾಮ ನರಗುಂದ-ನವಲಗುಂದ ಬಂಡಾಯ ನೆಲದ ರೈತರ ರಕ್ತವೆಲ್ಲ ಕೊಪ್ಪರಿಗೆಯಲ್ಲಿ ಹಾಕಿದ ಎಣ್ಣೆಯಂತೆ ಕೊತಕೊತನೆ ಕುದಿಯುತ್ತಿದೆ.
ಮುಂದೇ........!! ಆ ಭಗವಂತನಿಗೂ ಊಹಿಸಲು ಅಸಾಧ್ಯವೇನೋ.....!!
-ನಾಗರಾಜ್ ಬಿ.ಎನ್ 

ಬುಧವಾರ, ಜುಲೈ 6, 2016

ಎಲೆಗಳ ಮೇಲೆ ಮಳೆ ಹನಿಗಳ ಥಕಧಿಮಿತ...

ಇವನು ನಮ್ಮ ಆತ್ಮೀಯ ದಿನು. ಹುಚ್ಚು ಪರಿಸರ ಪ್ರೇಮಿ. ಮರ ಎಂದರೆ ನೆರಳು, ಗಿಡ ಎಂದರೆ ಬದುಕು, ಹಸಿರು ಎಂದರೆ ಉಸಿರು, ಪರಿಸರ ಎಂದರೆ ಮನುಕುಲ ಎನ್ನುವ ಈತ ನಿಜಕ್ಕೂ ನಿಸ್ವಾರ್ಥ.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ, 'ಜಾ, ಕುಮಟಾ ಬಸ್ ಸ್ಟ್ಯಾಂಡಿನಲ್ಲಿ ಗಿಡ ಹಾಕೋಣ, ರೈಲ್ವೆ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಗಿಡ ನೆಡೋಣ, ಮಂಗಳೂರು-ಕಾರವಾರ ರಸ್ತೆ ಇಕ್ಕೆಲಗಳಲ್ಲಿ ಗಿಡ ಹಾಕಿದರೆ ಹೇಗೆ? ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಡಲು ಹೇಳೋಣ...... ಹೀಗೆ ಒಂದೇ ಓಘದಲ್ಲಿ ಆತನ ಮಾತುಗಳು ಸಾಗುತ್ತಿತ್ತು. ಮಳೆ ಹನಿ ಭೂಮಿಗೆ ಬೀಳುತ್ತಿದ್ದಂತೆ ಗಿಡ ನೆಡುವ ಆತನ ಕನಸು ಗರಿಗೆದರುತ್ತಿತ್ತು. ವಿಚಿತ್ರವೆಂದರೆ ಆತ ಕರೆ ಮಾಡಿದಾಗಲೆಲ್ಲ ಮೊದಲ ಮಾತು 'ಜಾ ಎಲ್ಲಿ ಗಿಡ ಹಾಕುವುದು?' ಎನ್ನುವುದೇ ಆಗಿರುತ್ತಿತ್ತು. ಉತ್ತರ-ದಕ್ಷಿಣ ದಿಕ್ಕಿನತ್ತಿರುವ ನಾವಿಬ್ಬರು ಸಂಧಿಸುವುದು ವರ್ಷಕ್ಕೆ ಮೂರು, ನಾಲ್ಕು ಬಾರಿ ಮಾತ್ರ! ಹಾಗಿದ್ದಾಗ, ಆತ ಗಿಡ ಹಾಕುವ ಮಾತಿಗೆಲ್ಲ ನನ್ನದು ಮೌನ ಹಾಗೂ 'ಮಾಡೋಣ' ಎನ್ನುವುದಾಗಿತ್ತು.
ಆದರೆ, ಛಲದಂಕ ಮಲ್ಲನಂತೆ ಈ ವರ್ಷ ಗಿಡ ನೆಟ್ಟೇ ನೆಡುತ್ತೇನೆ ಎನ್ನುವ ದೃಢ ಸಂಕಲ್ಪ ಮಾಡಿಕೊಂಡು, ಒಂದು ತಿಂಗಳಿನಿಂದ ಅಲ್ಲಿ, ಇಲ್ಲಿ ಎಂದು ಓಡಾಡಲು ಪ್ರಾರಂಭಿಸಿದ್ದ. ಕೆಲ ದಿನಗಳ ಹಿಂದೆ, ಸುರತ್ಕಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿರುವ ಎಟಿಎಂ ಅಧಿಕಾರಿಯಿಂದ ನಂದಿಕೂರ, ಸುರತ್ಕಲ್ ಹಾಗೂ ಇನ್ನೆರಡು ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕಪಕ್ಕ ಗಿಡ ನೆಡಲು ಅನುಮತಿ ಪಡೆದಿದ್ದ. ಒಂದು ದಿನ ರಾತ್ರಿ ದೂರವಾಣಿ ಕರೆ ಮೂಲಕ ಎರಡು ಗಂಟೆಗಳ ಕಾಲ ಮಾತನಾಡಿ ಪರವಾನಿಗೆ ದೊರೆತ ಸಂತೋಷವನ್ನು ಹಂಚಿಕೊಂಡಿದ್ದ. ಪರವಾನಿಗೆಯೇನೋ ಪಡೆದಿದ್ದ. ಆದರೆ, ಗಿಡ ಎಲ್ಲಿಂದ ಖರೀದಿಸುವುದು? ಎನ್ನುವ ಪ್ರಶ್ನೆ ಆತನ ತಲೆಯಲ್ಲಿ ನುಸುಳಿದಾಗ, ಯಾರೋ ಪರಿಸರ ಪ್ರೇಮಿ ಹೇಳಿದನಂತೆ, 'ಮಂಗಳೂರಿನ ಪಡೀಲ್ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಗಿಡ ದೊರೆಯುತ್ತದೆ' ಎಂದು. ಒಂದು ಸೋಮವಾರ ಕಂಪನಿಗೆ ರಜೆ ಹಾಕಿ, ಅಲ್ಲಿಗೆ ಹೋಗಿ ಮೂವತ್ತು ಗಿಡಗಳಿಗೆ ಅರ್ಜಿ ಸಲ್ಲಿಸಿದ್ದ. ಆತ ಇರುವುದು ಸುರತ್ಕಲ್ ಆಗಿರುವುದರಿಂದ, ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿರುವ ನರ್ಸರಿಯಿಂದ ಗಿಡ ತರವುದು ತುಸು ತ್ರಾಸದಾಯಕವೇ ಆಗಿತ್ತು. ಬಾಡಿಗೆ ರಿಕ್ಷಾ ಕೇಳಿದಾಗ ಅವರು 1,200 ರು. ಬೇಡಿಕೆ ಮುಂದಿಟ್ಟಿದ್ದರು. ನಂತರ, ತನ್ನ ಸ್ನೇಹಿತರಿಗೆ ಹೇಳಿ, ಅವರ ಕಾರಿನಲ್ಲಿ ಅಲ್ಲಿಂದ ಸುರತ್ಕಲ್ಗೆ ಗಿಡವನ್ನು ತಂದಿದ್ದ.
ಅಂತೂ... ಇಂದು ಬುಧವಾರ(ಜು. 6) ತನ್ನ ಕನಸನ್ನು ನನಸಾಗಿಸಿಕೊಂಡ. ತನ್ನ ಇಚ್ಛೆಯಂತೆ ಸುರತ್ಕಲ್ ಹಾಗೂ ನಂದಿಕೂರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಮಹಾಗನಿ, ಕಕ್ಕೆ, ಬಾಗೆ, ಅವಲಾಂಡ, ಸೀಮೆರೂಬ, ರೇಂಜ, ಹೂವರಸಿ ಎಂದು ಮೂವತ್ತು ಗಿಡಗಳನ್ನು ಭೂ ಮಾತೆ ಮಡಿಲಿಗೆ ಹಾಕಿದ. ಸರ್ವ ಸ್ವತಂತ್ರವಾಗಿ ಯಾರೊಬ್ಬರ ಸಹಾಯವೂ ಇಲ್ಲದೆ ಏಕಾಂಗಿಯಾಗಿ ಕನಸನ್ನು ಮೆಟ್ಟಿ ನಿಂತ. ಮೂವತ್ತು ಗಿಡ ಬೆಳೆದು ದೊಡ್ಡದಾಗುವವರೆಗೂ ಅದರ ಜವಾಬ್ದಾರಿ ತಾನೇ ಹೊರುತ್ತೇನೆ ಎಂದು ರೈಲ್ವೆ ಅಧಿಕಾರಿಗಳಿಗೆ ಮಾತು ಕೊಟ್ಟ. ಆತನಲ್ಲಿರುವ ಪರಿಸರ ಕಾಳಜಿ ಹಾಗೂ ಪ್ರಾಮಾಣಿಕತೆ ಅರಿತ ರೈಲ್ವೆ ಅಧಿಕಾರಿಗಳು, 'ನಾವೇ ಮಾಡಬೇಕಾದ ಕಾರ್ಯಕ್ಕೆ ನೀವು ಸಾಥ್ ನೀಡಿದ್ದೀರಿ. ಇದರ ಸಂಪೂರ್ಣ ಹೊಣೆ ರೈಲ್ವೆ ಇಲಾಖೆಯೇ ಹೊರುತ್ತದೆ' ಎಂದು ಅವನಿಗೆ ಅವರು ಪ್ರತಿ ಭರವಸೆ ನೀಡಿದರು.
ಸ್ನೇಹಿತ ದಿನುವಿನ ಮೊಗದಲ್ಲಿ ಆತ್ಮ ಸಂತೃಪ್ತಿಯ ನಗು. ಎದೆ ಗೂಡಿನ ಬಿಸಿ ಉಸಿರಲ್ಲಿ, ತಣ್ಣನೆಯ ಹಸಿ ಉಸಿರು. ಭೂ ಮಾತೆಯ ಮಡಿಲಲ್ಲಿರುವ ಆ ಪುಟ್ಟ ಗಿಡಗಳ ಎಲೆಗಳ ಮೇಲೆ ಮಳೆ ಹನಿಯ ಥಕಧಿಮಿತ. ಸುಂಯ್ಯನೆ ಬೀಸುವ ಕುಳಿರ್ಗಾಳಿಗೆ  ಓಲಾಡುವ ಭಾಗ್ಯ! ಮುಂದೊಂದು ದಿನ ಗಿಡ(ಬದುಕು) ಮರ(ನೆರಳು)ವಾಗಿ ಹಸಿರು(ಉಸಿರು) ಚೆಲ್ಲಲಿದೆ. ಈ ದಿನಕ್ಕೆ ಸಾಕ್ಷಿಯಾಗಿ ಇತಿಹಾಸ ಪುಟ ಸೇರಲಿದೆ. ಆಗ, ರೈಲಿನ ಮೇಲೆ ಪಯಣಿಸುವಾಗ, ಬಾಗಿಲ ಬಳಿ ನಿಂತು, 'ನಮ್ಮ ದಿನುವಿನ ಮರ' ಎಂದು ಕಣ್ತುಂಬಿಸಿಕೊಳ್ಳುತ್ತೇವೆ. 

ಶನಿವಾರ, ಜೂನ್ 25, 2016


ಮನ ತೋಯ್ದ ಘಳಿಗೆ....
ವರ್ಷೆಯ ಗುಣಗಾನ ಸಾಕು ಎಂದುಕೊಳ್ಳುತ್ತೇನೆ. ಆದರೆ, ಅವಳ ವಯ್ಯಾರ, ಮಂದ, ಬಿರುಸು, ತಂಪು; ಜೊತೆ ಜೊತೆಗೆ ಕಿವಿ ಇಂಪಾಗಿಸುವ ಆ ಜಿಟಿ ಜಿಟಿ ಸದ್ದು..... ಮತ್ತೆ ಅವಳೆಡೆಗೆ ಅರಿವಿಲ್ಲದೆ ಸೆಳೆದು ಬಿಡುತ್ತದೆ. ಇದೊಂಥರ 'ಇಷ್ಟಕಾಮ್ಯ' ಇದ್ದಂತೆ!
ಪ್ರತಿ ವರ್ಷ ಮುಂಗಾರಿನ ಮೊದಲ ಹನಿಗೆ ಹೊಳೆ ಅಂಚಿನ ಗದ್ದೆಯ ಬಯಲಲ್ಲಿ ಮೈಯೊಡ್ಡಬೇಕು ಅಂದುಕೊಳ್ಳುತ್ತೇನೆ. ಭೂಮಿ ಬಿರಿಯುವ ಸುಡು ಬಿಸಿಲಲ್ಲೇ ಲೆಕ್ಕಾಚಾರ ಹಾಕಿ, ಪುಳಕಿತನಾಗುತ್ತೇನೆ. ಆದರೆ ನನ್ನಿಷ್ಟದ ಪ್ರೀತಿಯ ಕಾಯಕ, ಆ ಮೊದಲ ಹನಿಯ ಸ್ಪರ್ಷದಿಂದ ವಂಚಿತನಾಗಿಸುತ್ತದೆ. ಆದರೂ, ಮುಂಗಾರು ತನ್ನ ಮೊದಲ ಪಾದ ತೆಗೆಯುವುದರೊಳಗೊಮ್ಮೆ ನಾ ಹೊಳೆಯಂಚಿನ ಗದ್ದೆಗೆ ಹೋಗುತ್ತೇನೆ. ಅಲ್ಲಿ ವರ್ಷೆಯ ಜೊತೆ ಆಟವಾಡಿ, ಮನಸೋ ಇಚ್ಛೆಯಾಗಿ ತೋಯ್ದು ತೊಪ್ಪೆಯಾಗುತ್ತೇನೆ. ಎರಡು ಕೈಗಳನ್ನು ಅಗಲಿಸಿ, ನೀಳುಸಿರು ಮೇಲಕ್ಕೆಳೆದುಕೊಂಡು, ಎರಡು ಕಣ್ಣುಗಳನ್ನು ಮುಚ್ಚಿ ಧ್ಯಾನಸ್ಥನಾಗುತ್ತೇನೆ. ಅನುಭವಾತೀತ ಕ್ಷಣವದು. ಪದಗಳಲ್ಲಿ ಕಟ್ಟಿಹಾಕಲಾಗದ ಎಲ್ಲೆಯಿರದ ಓಟವದು. ಎರಡು ದಿನದ ಹಿಂದಷ್ಟೆ ಆ ಪುನೀತ ಘಳಿಗೆಗೆ ಸಾಕ್ಷಿಯಾಗಿದ್ದೆ.

 
ಹೌದು, ಭೂಮಿ ಬಾನು ಒಂದಾದ ಘಳಿಗೆಯದು. ಧೋ ಎಂದು ಹುಚ್ಚೆದ್ದು ಸುರಿವ ವರ್ಷೆಗೆ, ತಂಗಾಳಿ ಅಲೆ ಅಲೆಯಾಗಿ ಬಂದು ಮೈ ಸವರುತ್ತದೆ. ಅವಳಲ್ಲಿ ಒಂದಾಗಿ ಬೆರೆತು, ಭುವಿಯೆಲ್ಲ ಬಾನೇ ಎಂದಿನಿಸುವಂತೆ ಕಣ್ಕಟ್ಟುತ್ತದೆ. ಹನಿಕಟ್ಟೋ ಕಾರ್ಮೋಡಕ್ಕೆ ಸವಾಲು ಎಸೆಯುವಂತೆ, ಇಬ್ಬನಿಯ ಮಂಜು ಸುತ್ತೆಲ್ಲ ಆವರಿಸಿ ಭುವಿಯೇ ನನ್ನದು ಎನ್ನುವ ಆ ಪರಿ ವರ್ಣನಾತೀತ. ಹಿಡಿದು ಬಚ್ಚಿಟ್ಟುಕೊಳ್ಳಬೇಕೆಂದು ಕೈ ಮುಷ್ಟಿ ಕಟ್ಟಿದರೆ, ಮೈ-ಮನವೆಲ್ಲ ತಂಪಾದ ಭಾವ. ದೂರದಲ್ಲಿ ಅರೆಬರೆಯಾಗಿ ಕಾಣುವ ಸಹ್ಯಾದ್ರಿ ಹಿಮಚ್ಛಾದ್ರಿತವಾಗಿ ಕಂಗೊಳಿಸುತ್ತದೆ. ಕಾಲಡಿಯೇ ಹಸಿರೊದ್ದು ಮೇಲೆದ್ದ ಸಾಲು ಸಾಲು ಭತ್ತದ ಸಸಿ, ಭೂರಮೆಗೆ ಹಸಿರು ಸೀರೆ ಉಡಿಸಿದಂತೆ. ಅಲ್ಲಿಯೇ ಪಕ್ಕದ ಗದ್ದೆಯಲ್ಲಿ ನಿಂತ ನೀರು, ಬಾನಂಗಳದಲ್ಲಿ ಓಡೋ ಮೇಘಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಆ ದೃಶ್ಯ ನಯನ ಮನೋಹರ. ತನ್ನಷ್ಟಕ್ಕೆ ತಾನು ಓರೆಯಾಗಿ ತಲೆ ಎತ್ತಿ ನಿಂತಿರುವ ಒಂಟಿ ಕಲ್ಪವೃಕ್ಷದ ಪ್ರತಿಬಿಂಬ ಇಳೆಯ ಎದೆ ಮೇಲೆ ಅಚ್ಚೊತ್ತಿ ಪ್ರತಿಫಲಿಸುತ್ತದೆ. ವರ್ಷೆಯ ಜಿಟಿ ಜಿಟಿ ಶಬ್ಧದ ನಡುವೆಯೂ, ದೂರದಲ್ಲಿ ಅಘನಾಶಿನಿಗಾಗಿ ಅಬ್ಬರಿಸುವ ಅರಬ್ಬೀಯ ಭೋರ್ಗರೆತ ಕಿವಿಗಪ್ಪಳಿಸುತ್ತವೆ.
ಮೈಗೆ ಬಿಗಿದಪ್ಪಿದ ತೋಯ್ದ ಬಟ್ಟೆ, ದುಕೂಲದಿಂದ ಹರಿದು ಕೆನ್ನೆಯಂಚಿಂದ ಜಾರುವ ಮುತ್ತಿನ ಹನಿ, ಒದ್ದೆಯಾದ ಕಣ್ರೆಪ್ಪೆಯ ಮೊನಚು, ಆಗೊಂದು, ಈಗೊಂದು ಎಂದು ಗಂಟಲಲ್ಲಿ ಇಳಿದ ಮಳೆಹನಿ, ತಂಗಾಳಿ ಜೊತೆ ಸೇರಿದ ಎದೆಯಾಳದ ಬಿಸಿಯುಸಿರು, ಒಲ್ಲೇ ಎನ್ನುತ್ತಲೇ ಕತ್ತು ತಿರುಗಿಸುತ್ತ ಮನೆಕಡೆ ಇಟ್ಟ ಹಸಿ ಹಸಿ ಹೆಜ್ಜೆ, ಮೈ ಮೇಲೆ ಬಿದ್ದ ಅಮ್ಮ ಕಾಸಿಟ್ಟ ಹಂಡೆ ನೀರು, ಆದೃ ಮನಸ್ಸಿಗೆ ಸಾಂತ್ವನ ನೀಡಿದ ವರ್ಷೆಯ ಆ ಒಡಲು.... ಸುಮ್ಮನೆ ಹೊತ್ತಲ್ಲದ ಹೊತ್ತಲ್ಲಿ ಬಂದು ಕಾಡುತ್ತಿರುತ್ತವೆ. ಅರೆಕ್ಷಣ ಕಣ್ಮುಚ್ಚಿ ಆನಂದಿಸುತ್ತೇನೆ. ನನ್ನ ಪ್ರೀತಿಯ ಬಿಡುವಿಲ್ಲದ ಕೆಲಸದ ನಡು ನಡುವೆಯೂ.....
-ನಾಗರಾಜ್ ಬಿ.ಎನ್.

ಮಂಗಳವಾರ, ಜೂನ್ 21, 2016

ಬಚ್ಚಿಟ್ಟ ಪ್ರೀತಿ...
ಎನ್ನೆದೆಯ ನೆಲದಲ್ಲಿ ನಿನ್ನ ನೆನಪು
ಹೂತು ಸಮಾಧಿಯಾಗಿದೆ
ಎಂದುಕೊಂಡಿದ್ದೆ
ಆದರೆ,
ಈ ಹಾಳು ಮಳೆ
ಹೃದಯವನ್ನೆ ಒದ್ದೆ ಮಾಡಿ
ನೆನಪನ್ನು ಮೆಲ್ಲನೆ ಚಿಗುರೊಡೆಸುತ್ತಿದೆ
ಹಸಿಮಣ್ಣ ಸೀಳಿ ಗರಿಕೆ ಮೇಲೆದ್ದಂತೆ
ಹಸಿರೆಲೆಯ ಮೇಲೆ ಇಬ್ಬನಿ ಬಿದ್ದಂತೆ
ಮೂಟೆಕಟ್ಟಿ ಮಣ್ಣಾಗಿಸಿದ ಭಾವ
ಸದ್ದಿಲ್ಲದೆ ತಲೆ ಎತ್ತಿದೆ ಸುರಿವ ಜಡಿಮಳೆಗೆ
ಮತ್ತೆ ಹೃದಯಂಗಳದಲ್ಲಿ,
ಹಸಿರು ಚಪ್ಪರದ ಸಾಲು ಮೆರವಣಿಗೆ
ಮುಂಜಾನೆ ಇಬ್ಬನಿಯ ಮುತ್ತಿನ ಮಾಲೆ
ಹುಣ್ಣಿಮೆ ಶರಧಿಯ ಭೋರ್ಗರೆವ ನರ್ತನ
ಏಳು ಸ್ವರಗಳ ಇಂಪಾದ ನಾದ ನಿನಾದ
ಬೆಚ್ಚನೆಯ ಉಸಿರಲ್ಲಿ ಕಾಲ್ಗೆಜ್ಜೆಯ ಸದ್ದು...
                                                         ಗೆಳತಿ,
ಮೋಡದ ಬಾನಿಗೆ ಎದೆ ಬಾಯಾನಿಸಿದೆ
ವರ್ಷೆಯ ಸ್ಪರ್ಶಕ್ಕೆ ಮನ ಹಸಿಯಾಗಿದೆ
ಹೂತಿಟ್ಟಿದ್ದೇನೆಂದು ಭ್ರಮಿಸಿದ ಪ್ರೀತಿ
ಬಚ್ಚಿಟ್ಟದ್ದೆಂದು ತೋಯ್ದು ಬೆತ್ತಲಾಗಿದೆ!
                                                - ನಾಗರಾಜ್ ಬಿ.ಎನ್.

ಭಾನುವಾರ, ಜೂನ್ 19, 2016

ಕನಸಿನ ಮೆಲುಕು...
ಬೆಚ್ಚನೆಯ ರಾತ್ರಿಯಲಿ ಬಿದ್ದ
ಸವಿಗನಸಿನಂತೆ,
ಸುಡು ಬಿಸಿಲಲ್ಲಿ ಮಳೆ ಧೋ ಎಂದು
ಸುರಿದಂತೆ,
ಮೋಡದ ಮರೆಯಲ್ಲಿ ಚುಕ್ಕಿ ಚಂದಮ
ನಸುನಕ್ಕಂತೆ,
ದಟ್ಟ ಕಾರಿರುಳ ಕತ್ತಲೆಗೆ ಭಾವನೆಯ
ಬಣ್ಣ ಬಳಿದಂತೆ,
ಕಿರು ಬೆರಳ ತುದಿಗೆ ತಂಗಾಳಿ
ಸೋಂಕಿ ಮರೆಯಾದಂತೆ....
ಇವೆಲ್ಲ ಕನಸಲ್ಲ,
ಕಲ್ಪನೆಯೂ ಅಲ್ಲ ಎನ್ನುವಷ್ಟರಲ್ಲಿ....
ಮಿಂಚಿ ಮರೆಯಾದ ಬದುಕು!
ಉತ್ಖನನ ಮಾಡಲಾಗದಷ್ಟು
ಆಳಕ್ಕಿಳಿದ ಪಳಯುಳಿಕೆ
ಈಗಿರುವುದು ಕನಸಿನ ನೆನಪೊಂದೆ
ನೆನಪಿನ ಮೆಲುಕೊಂದೆ!
                                      -ನಾಗರಾಜ್ ಬಿ.ಎನ್

ಸೋಮವಾರ, ಜೂನ್ 13, 2016

ಮುಂಗಾರು ಸೃಷ್ಟಿ...
ಈ ಮುಂಗಾರು, ಮೋಡ, ತಣ್ಣನೆಯ ಗಾಳಿ
ಅರೆಬರೆ ಬಿಸಿಲಿನ ಚೆಲ್ಲಾಟ...
ಆಹಾ! ಇವೆಲ್ಲ ನಿನ್ನ ಸನಿಹದ ಬಯಕೆಗೆ
ಕಿಚ್ಚು ಹತ್ತಿಸುತ್ತಿವೆ ಗೆಳತಿ.
ಹೂತು ಸಮಾಧಿ ಮಾಡಿದ್ದ ಭಾವನೆ,
ಹಸಿ ಮಣ್ಣಿನ ವಾಸನೆಗೆ ಮೇಲೆದ್ದಿವೆ
ಮತ್ತದೆ ತಾಳದ ವೇದನೆ
ಗರ್ಭಕ್ಕಿಳಿದು ಮಡುಗಟ್ಟಿದೆ
ಒಂದೇ ಸಮನೆ ಹಿಂಸಿಸುತ್ತಿದೆ
ಸಾಕು ಮಾಡಿನ್ನು ಗೆಳತಿ,
ನಿನ್ನ ಸಿಡುಕಿನ ಮುಸುಕಾಟ
ಮೊದಲ ಮಳೆಯ ಘಮಕ್ಕೆ ಮೈಯೊಡ್ಡಿ
ತೋಳಗಲಿಸಿ ಆಲಂಗಿಸಿಬಿಡು
ಹಸಿ ಮೈಯ್ಯ ಬಿಸಿ ಅಪ್ಪುಗೆಯಲಿ
ಬೆರೆತು ಒಂದಾಗೋಣ,
ಮುಂಗಾರು ಸೃಷ್ಟಿಗೆ ನಾಂದಿ ಹಾಡೋಣ!
                                                                                                 -ನಾಗರಾಜ್ ಬಿ. ಏನ್. 

ಭಾನುವಾರ, ಜೂನ್ 12, 2016

'ಇಬ್ಬನಿಯ ಮೂಗುತಿ' ನಾವಾಗಬೇಕು, ಆದರೆ...
ಒಳಗೊಳಗೆ ಬುಸುಗುಟ್ಟಿ ಕುದಿದು, ದಾವಾಗ್ನಿಯ ಹೊಗೆಯನ್ನು ಹೊರಹಾಕುತ್ತಿದ್ದ ಇಳೆ ನಿಧಾನವಾಗಿ ಶಾಂತವಾಗುತ್ತಿದ್ದಾಳೆ. ಕ್ಷಣ ಕ್ಷಣಕ್ಕೂ ದೂಳನ್ನೆಬ್ಬಿಸುತ್ತ, 'ಈ ಬಿಸಿಲಿನ ಉರಿ ನಾ ತಾಳೆನು' ಎನ್ನುತ್ತಿದ್ದ ಅವಳು ಈಗ ಹಸಿ ಮುದ್ದೆಯಾಗಿ ಸುಮ್ಮನೆ ಬಿದ್ದಿದ್ದಾಳೆ. ಸದ್ದಿಲ್ಲದೆ ತನ್ನ ಗರ್ಭದಲ್ಲಿ ಸಮರೋಪಾದಿಯಲ್ಲಿ ಸೃಷ್ಟಿ ಕ್ರಿಯೆಗೆ ಸನ್ನದ್ಧವಾಗುತ್ತಿದ್ದಾಳೆ.
ಮುಂಗಾರು ಪೂರ್ವವೇ ವರ್ಷೆ ಇಳೆಗೆ ಮುತ್ತಿಕ್ಕಿ ಬಿಟ್ಟಿದೆ. ಸೊರಗಿ, ಬರಡಾಗಿ ಹೋಗಿದ್ದ ನೆಲವೆಲ್ಲ ಹಸಿಯಾಗಿ, ಮೆದುವಾಗಿ ಅಸಂಖ್ಯಾತ ಕೋಟಿ, ಕೋಟಿ ಸೃಷ್ಟಿಗೆ ಅಣಿಯಾಗುತ್ತಿದೆ. ಕರಾವಳಿ, ಮಲೆನಾಡು, ಬಯಲುಸೀಮೆ ಎಂಬ ಯಾವೊಂದು ಬೇಧವಿಲ್ಲದೆ, ಬಾನಂಗಳದಲ್ಲಿ ಮೋಡಕಟ್ಟಿ ತೊಪ ತೊಪನೆ ವರ್ಷೆ ಧರೆಗಿಳಿದಿವೆ. ಅಧಿಕೃತ ವರ್ಷಾಗಮನದ ಪೂರ್ವ ಸುರಿದ ಈ ರಭಸದ ವರ್ಷೆಗೆ, ಇಳೆ ಫುಲ್ ಖುಷ್ ಆಗಿಬಿಟ್ಟಿದ್ದಾಳೆ. ನಿದ್ದೆಗಣ್ಣಿನಿಂದ ಎಚ್ಚೆತ್ತವಳಂತೆ, ಲಗುಬಗೆಯಲ್ಲಿ ಮೈ-ಮನವನ್ನೆಲ್ಲ ಸಿಂಗರಿಸಿಕೊಂಡು, ಗೋಣನ್ನು ಮೇಲಕ್ಕೆತ್ತಿ ಮೋಡಕ್ಕೆ ಮತ್ತೆ ಬಾಯಾನಿಸಿದ್ದಾಳೆ.
ವರ್ಷೆ ಬಲಗಾಲಿಟ್ಟು ಅಧಿಕೃತವಾಗಿ ಇಳೆಯ ಹೊಸಿಲು ತುಳಿಯುವುದೊಂದೆ ಬಾಕಿ. ಎಲ್ಲಿಯೋ ಅವಿತಿದ್ದ, ಇಷ್ಟು ದಿನ ಕಂಡೂ ಕಾಣದ ಹಾಗೆ ಮರೆಯಾಗಿದ್ದ ಹಸಿರು ಕಿರೀಟಧಾರಿಗಳು ನಿಧಾನವಾಗಿ ತಲೆ ಎತ್ತಲಿದ್ದಾರೆ. ಮುಂಜಾನೆದ್ದು ನೋಡಿದಾಗ, 'ಅರೇ, ಇವರೆಲ್ಲಿಂದ ಬಂದರಪ್ಪಾ?' ಎಂದು ಆಶ್ಚರ್ಯದಿಂದ ಹುಬ್ಬೇರಿಸಬೇಕು. ಹಾದಿ-ಬೀದಿ ನೋಡದೆ ಎಲ್ಲೆಂದರಲ್ಲಿ ಅವತರಿಸಿ, ದಿನಕಳೆದಂತೆ ಹಸಿರಿನ ಹಾಸಿಗೆಯನ್ನೇ ನೇಯುವ ಇವರು ಅಪ್ರತಿಮ ಕಲಾಕಾರರು. ಮೂಡಣದಿ ಬಾನು ರಂಗೇರುವಾಗ ಅವರು ಧಿರಿಸುವ ಇಬ್ಬನಿಯ ಮೂಗುತಿ ಫಳಫಳನೆ ಪ್ರತಿಫಲಿಸುತ್ತವೆ. ಅರೇ ಕ್ಷಣದಲ್ಲಿ ಆ ಮೂಗುತಿ ಅಲ್ಲಿಯೇ ಕರಗಿ ಮಾಯವಾಗಿ ಬಿಡುತ್ತದೆ. ಆಹಾ! ಎಂಥಹ ಸೌಂದರ್ಯ.
ತಂಗಾಳಿಗೆ ಮೈಯೊಡ್ಡಿ ಅವರು ತಲೆದೂಗುವ ಪರಿ ಪ್ರಕೃತಿ ಸೊಬಗಿನ ಅಚ್ಚರಿಯಲ್ಲೊಂದು. ರಭಸದ ವರ್ಷೆಗೂ ಒಂದಿನಿತು ಅಳಕದೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನೀತಿ ಪಾಠ ಹೇಳುವ ಅವರು ಯಾವ ತತ್ವಜ್ಞಾನಿಗೂ ಕಡಿಮೆಯೇನಿಲ್ಲ. ನೆತ್ತಿಯ ಮೇಲೆ ಭಾನು ಬಂದಾಗ, ನಸುನಕ್ಕು... ಬಾಯಗಲಿಸಿ ಅವನ ಜೊತೆ ಮಾತಿಗಿಳಿಯುವ ಪರಿ ವರ್ಣಿಸಲಸಾಧ್ಯ. ಅಲ್ಲಿಯೇ ಪಕ್ಕ ರಭಸದಿಂದ ಹರಿವ ತೊರೆ, ಅವರನ್ನು ಆಪೋಶನ ತೆಗೆದುಕೊಂಡು ಬಿಡುತ್ತವೆಯೇನೋ ಎಂದೆನಿಸುತ್ತದೆ. ಅಷ್ಟೇ ಹೊತ್ತು, ತೊರೆಯ ರಭಸ ನಿಧಾನವಾದಾಗ, ಫಳ್ಳ್ ಎಂದು ಮತ್ತೆ ನಗೆ ಬೀರಿ ತಲೆ ಎತ್ತುತ್ತವೆ.
ಮುಂಗಾರಿನ ಪ್ರಾರಂಭದ ದಿನಗಳಲ್ಲಿ ಮನೆಯ ಅಕ್ಕ-ಪಕ್ಕ ಸಾಮಾನ್ಯವಾಗಿ ಕಂಡು ಬರುವ ಪ್ರಕೃತಿಯ ಸೊಬಗಿನ ದೃಶ್ಯವಿದು. ಪ್ರಕೃತಿ ಸೊಬಗೆಲ್ಲವನ್ನು ಅನುಭವಿಸಬೇಕೆಂದರೆ ಮುಂಗಾರಿನ ವರ್ಷೆಯೇ ನಾವಾಗಬೇಕು... ಆ ವರ್ಷೆ ಚುಂಬಿಸುವ ಇಳೆ ನಾವಾಗಬೇಕು... ಆ ಚುಂಬನಕ್ಕೆ ತಲೆ ಎತ್ತುವ ಗರಿಕೆ ನಾವಾಗಬೇಕು... ಮುಂಜಾನೆಯ ಇಬ್ಬನಿಯ ಮೂಗುತಿ ನಾವಾಗಬೇಕು... ಹೊಳೆಯಾಗಿ ಹರಿಯುವ ತೊರೆ ನಾವಾಗಬೇಕು... ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ಪ್ರಕೃತಿ'ಯೇ ನಾವಾಗಬೇಕು! ಅದು ಸಾಧ್ಯವೇ?
-ನಾಗರಾಜ್ ಬಿ.ಎನ್. 

ಶುಕ್ರವಾರ, ಜೂನ್ 3, 2016


ಬಂದಳು ನನ್ನಾಕೆ ವರ್ಷೆ, ಮಡಿಲು ತುಂಬಲು...

------------------------------------------------------------------------
- ನಾಗರಾಜ್ ಬಿ .ಎನ್.
ಅಂತೂ ನಿರೀಕ್ಷಿಸಿದಂತೆಯೇ ವರ್ಷೆ ನಿಧಾನವಾಗಿ ಉಸಿರು ಬಿಡುತ್ತಿದ್ದಾಳೆ. ಕಾದು ಕೆಂಡವಾಗಿದ್ದ ಇಳೆಯ ಮೈಯ್ಯೆಲ್ಲ ತುಸು ತಂಪು ತಂಪು. ಎಲ್ಲಿಂದಲೋ ಬೀಸಿ ಬರುವ ತಣ್ಣನೆಯ ಗಾಳಿ, ಸೂರ್ಯನ ಶಾಖಕ್ಕೆ ಬಳಲಿ ಬೆಂಡಾಗಿದ್ದ ಮರ-ಗಿಡಗಳ ಮೈ-ಮನವನ್ನು ತಣಿಸುತ್ತಿದೆ. ಸುಳಿವೇ ಇಲ್ಲದ ಪುಟಾಣಿ ಹಕ್ಕಿಗಳು ಅಲ್ಲೊಂದು, ಇಲ್ಲೊಂದು ಹಾರಾಡುತ್ತ ಚಿಲಿಪಿಲಿ ಗುಟ್ಟುತ್ತಿವೆ. ಬೆಳ್ಳಂಬೆಳಿಗೆ ರೋಮದ ನಡುವೆ ಇಳಿಯುತ್ತಿದ್ದ ಝಳಗಳೆಲ್ಲ ಮಾಯ ಮಾಯ. ದೂರದಲ್ಲಿರುವ ಅರಬ್ಬೀಯ ಅಬ್ಬರ ನಿಧಾನವಾಗಿ ಏರುತ್ತಿದೆ. ಇನ್ನೇನೂ ನಾಪತ್ತೆಯಾಗಿಯೇ ಹೋಗುತ್ತೇನೆ ಎಂದು ಅಳುಕುತ್ತಿರುವ ಅಘನಾಶಿನಿ ಬಳುಕಲು ಸಿದ್ಧವಾಗಿದ್ದಾಳೆ......

ಹೌದು, ನೊಂದು-ಬೆಂದ ಮನಕ್ಕೆ ಮುದ ನೀಡಲೆಂದು ನನ್ನವಳು ಬರುತ್ತಿದ್ದಾಳೆ. ಅವಳ ಆಗಮನವೇ ಒಂದು ಮನಮೋಹಕ. ಆಕೆ ಎಂದು ಬರುತ್ತಾಳೋ... ಎಂದು ಮನ ತುಂಬುತ್ತಾಳೋ... ಎಂದು ಬಾಚಿ ತಬ್ಬಿಕೊಳ್ಳುತ್ತಾಳೋ.... ಎಂದೆಲ್ಲ ಹುಚ್ಚು ಹಿಡಿಸಿತ್ತು. ಆದರೆ, ನಿರೀಕ್ಷೆಯಂತೆ ಅವಳು ತನ್ನಿನಿಯನ ತೋಳ ತೆಕ್ಕೆಗೆ ಸೇರಿಕೊಳ್ಳಲು ಅಂಕು-ಡೊಂಕು ಹೆಜ್ಜೆ ಹಾಕುತ್ತ ಬರುತ್ತಿದ್ದಾಳೆ. ಇಷ್ಟು ದಿನ ವಿರಹ ವೇದನೆಯಿಂದ ಬಳಲಿ, ಸೊರಗಿ, ಬೆಂಡಾಗಿದ್ದ ಮನದರಸನ ಮನಕ್ಕೆ, ಹನಿಯ ಸಿಂಚನಗೈಯ್ಯಲಿದ್ದಾಳೆ. ಮನದಣಿಯೇ ಕುಣಿಸಿ, ನಲಿಸಿ ಆಡಿಸಲಿದ್ದಾಳೆ. ಸಾಕು ಎಂದರೂ ಬಿಡದೆ, ಹಠಮಾರಿಯಂತೆ ರಚ್ಚೆ ಹಿಡಿದು ತನ್ನ ಪ್ರತಾಪ ಪ್ರದರ್ಶಿಸಲಿದ್ದಾಳೆ. ಇನ್ನೇನಿದ್ದರೂ ನಾನು ಅವಳ ಮುಂದೆ ಮೂಕ ಪ್ರೇಕ್ಷಕ. ಅವಳಾಡುವ, ಆಡಿಸುವ ಪ್ರತಿಯೊಂದು ಆಟವನ್ನು ಸುಮ್ಮನೇ ನೋಡುತ್ತ, ಒಮ್ಮೊಮ್ಮೆ ಕಣ್ಮುಚ್ಚಿ ಕೇಳುತ್ತಾ ಬಿದ್ದಿರಬೇಕು.
ವರ್ಷೆ ಎಂದರೆ ನನಗೊಂಥರ ಹುಚ್ಚು. ಅವಳಿಗು ಕೂಡಾ ನಾ ಎಂದರೆ ತುಂಬಾ ಅಚ್ಚುಮೆಚ್ಚು. ಒಮ್ಮೊಮ್ಮೆ ಸುಳಿರ್ಗಾಳಿ ಸಮೇತ ಬಂದು, ಮುಂಗುರಳನ್ನು ಸೋಂಕಿ ಮಾಯವಾಗುತ್ತಾಳೆ. ಮತ್ತೊಮ್ಮೆ, ಮೋಡದ ಮರೆಯಲ್ಲಿ ಭಾನು ಇಣುಕಿ ಹಾಕುತಿದ್ದರೂ, ನಾನು ಭಾನು ಮೀರಿದವಳು ಎಂದು ಹೊಳೆಯುವ ಮಿಂಚಿನಂತೆ ಎಳೆ ಎಳೆಯಾಗಿ ಧರೆಗಿಳಿಯುತ್ತಾಳೆ. ಆಗ ಅವಳಂದವನ್ನು ಕಣ್ಣಿಂದ ತುಂಬಿಕೊಳ್ಳಲೋ... ಅಥವಾ, ಎರಡು ಕೈ ಅಗಲಿಸಿ, ಕಣ್ಮುಚ್ಚಿಕೊಂಡು ಅವಳನ್ನು ಬಾಚಿ ತಬ್ಬಿಕೊಳ್ಳಲೋ... ಎಂದು ಒಂದೂ ಅರ್ಥವಾಗುವುದಿಲ್ಲ. ಕೆಲವು ಬಾರಿ, ಬಾನೇ ಕಣ್ಣಾಗಿ ಹೋಯಿತೋ ಎನ್ನುವಂತೆ ರಚ್ಚೆ ಹಿಡಿದು ಒಂದೇ ಸಮನೆ ಸುರಿಯುತ್ತಾಳೆ. 'ಸಾಕು ಮಾರಾಯ್ತಿ ನಿನ್ನ ಉಗ್ರ ರೂಪ, ಹೋಗಿನ್ನು' ಎಂದರೂ ಕೇಳಲೊಲ್ಲಳು. ಮತ್ತೆ ಕೆಲವು ಬಾರಿ, ಅವಳಿಗಾಗಿ ಎಷ್ಟೇ ಪರಿತಪಿಸಿದರೂ ಹತ್ತಿರ ಬರದೆ, ಸುಮ್ಮನೇ ಗೋಳು ಹೊಯ್ದುಕೊಳ್ಳುತ್ತಾಳೆ. 
ಏನೇ ಇರಲಿ..... ಈಗೇನಿದ್ದರೂ ನನ್ನಾಕೆಯ ಪರ್ವ. ಅವಳಾಡುವ ತುಂಟಾಟಕ್ಕೆ ನಾ ಗೋಣು ಅಲುಗಾಡಿಸಲೇಬೇಕು. ಸೋತು ಸುಣ್ಣವಾಗಿ, ನೆಲಕಚ್ಚಲೇಬೇಕು. ಅವಳ ಮುಂದೆ ನಾ ಎಂದೆಂದಿಗೂ ಚಿಕ್ಕ ಮಗುವೇ. ಕಷ್ಟಪಟ್ಟು, ಇಷ್ಟುಪಟ್ಟು ಬಾ... ಬಾ... ಎಂದು ಅತ್ತು, ಗೋಗರೆದು ಕರೆದರೂ ಬರದಾಕೆ; ಈಗ, ಅವಳಿಷ್ಟದಂತೆ ಬಿಂಕದಿಂದ ಬರುತ್ತಿದ್ದಾಳೆ. ಬರಲಿ.. ನನಗೂ ಸಾಕಾಗಿ ಹೋಗಿದೆ, ಎಷ್ಟು ದಿನಾಂತ ಅವಳಿಗಾಗಿ ಕಾದು ಹಂಬಲಿಸುವುದು? ಎಷ್ಟು ದಿನಾಂತ ಅವಳಿಗಾಗಿ ಮುಸ್ಸಂಜೆಯ ಹಾದಿ ಕಾಯುವುದು? ಅವಳ ಬಂದ ಮೇಲೆ, ಅವಳ ಜೊತೆ ಒಂದು ದಿನ ಪೂರ್ತಿ ಸುಮ್ಮನೇ ಕಾನನ ಸುತ್ತಬೇಕು. ಎಲೆಗಳ ಮೇಲೆ ಅವಳಾಡುವ ನಾಟ್ಯದ ಭಂಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು. ತಾಯಿ ಇರುವೆ ಜೊತೆ, ಮರಿ ಇರುವೆ ಹಾಗೂ ಅದರ ಬಳಗ ಸಾಲಾಗಿ ಮೆರವಣಿಗೆ ಹೋಗುವುದನ್ನು ಅಚ್ಚರಿಯಿಂದ ನೋಡಬೇಕು. ಅಲ್ಲಿಯೇ, ಪುಟ್ಟದಾಗಿ ನಾಚುತ್ತ ತಲೆ ಎತ್ತುವ ಗರಿಕೆಯ ಕಿರೀಟ ತದೇಕ ಚಿತ್ತದಿಂದ ನೋಡುತ್ತಾ ನಿಲ್ಲಬೇಕು...! ವರ್ಷೆ ನನ್ನ ಮೈ ಮನವನ್ನೆಲ್ಲ ಆವರಿಸಬೇಕು.... 
ಸದ್ಯ ನನ್ನವಳ ಬಗ್ಗೆ ಇಷ್ಟು ಸಾಕು.... ಮುಂದೆ, ಇನ್ನಷ್ಟು.

ಮಂಗಳವಾರ, ಮೇ 31, 2016


ಅಲ್ಲಾದರೂ ನಿನ್ನಾತ್ಮಕ್ಕೆ ಶಾಂತಿ ಸಿಗಲಿ.....

ಸಣ್ಣ ನಿದ್ದೆಗೆ ಜಾರಿದ ಹುಡುಗಿ, ಕೊನೆಗೂ ಮುಚ್ಚಿದ ಕಣ್ಣನ್ನು ತೆರೆಯಲೇ ಇಲ್ಲ. ಬದುಕಿನ ಜಂಜಾಟ ಸಾಕು ಸಾಕೆನ್ನುತ್ತ ಶಾಶ್ವತ ನಿದ್ದೆಗೆ ಜಾರಿಬಿಟ್ಟಳು......!
ಸಂಬಂಧದಲ್ಲಿ ಮಾವನ ಮಗಳಾದರೂ, ಅಣ್ಣ-ತಂಗಿಯಂಥ ಮಧುರ ಬಾಂಧವ್ಯದ ಲೇಪ. ಬಾಯ್ತುಂಬ 'ಅಣ್ಣ...' ಎಂದು ಅವಳು ಕರೆವಾಗ, 'ಮರಿ' ಎನ್ನುವ ಪ್ರತಿಕ್ರಿಯೆ. ಚಿಕ್ಕಂದಿನಿಂದಲೂ ಕಣ್ಮುಂದೆಯೇ ಆಡಿ, ಬೆಳೆದ ಹುಡುಗಿ. ನೋಡು ನೋಡುತ್ತಲೇ ದೊಡ್ಡವಳಾಗಿ, ಹಸೆಮಣೆ ಏರಿದ್ದಳು. ಕೈ ಹಿಡಿದಾತನ ಮನೆ ಬೆಳಗಿದ್ದಲ್ಲದೆ, ಪುಟ್ಟ ಕೃಷ್ಣನಿಂದ ತನ್ನ ಮಡಿಲನ್ನು ಸಹ ತುಂಬಿಕೊಂಡಿದ್ದಳು. ಈಗಷ್ಟೇ ಆ ಹಸುಳೆಗೆ ಒಂದು ವಸಂತ. ಅಮ್ಮನ ಕೈ ಬೆರಳು ಹಿಡಿದು ಓಡಾಡಿಕೊಂಡಿದ್ದ; ಚಂದಮಾಮನ ನೋಡಿ ಕೈ ತುತ್ತು ತಿಂದಿದ್ದ; ಬಿದ್ದಾಗ ಓಡೋಡಿ ಬಂದು ಅಮ್ಮನ ಮಡಿಲು ಹಿಡಿದುಕೊಂಡಿದ್ದ; ತೊದಲು ನುಡಿಯಿಂದ ಅಮ್ಮಮ್ಮ ಎನ್ನುತ್ತಿದ್ದ. ಎಲ್ಲ ಮರೆತು ಅಮ್ಮನೇ ಶಾಶ್ವತ ಎಂದು ಅವಳ ಕೈಯ್ಯಲ್ಲಿ ನಿದ್ದೆಗೆ ಜಾರುತ್ತಿದ್ದ... ಇನ್ನುಮುಂದೆ ಆ ಹಸುಳೆಗೆ ಅಮ್ಮನ ಸಾನ್ನಿಧ್ಯ ಮುಸುಕು.... ಮುಸುಕು.
ಮದುವೆಯಾಗಿ ಅಮ್ಮ ಆದರೂ ತನ್ನ ತುಂಟಾಟ ಇನ್ನೂ ಬಿಟ್ಟಿರದ ಹುಡುಗಿ. ಮಾತಿನ ಮಲ್ಲಿ. ಚೆನೈ ಎಕ್ಸಪ್ರೆಸ್ ನಂತೆ ಒಂದೇ ಓಘದಲ್ಲಿ ಮಾತು ಮಾತು ಮಾತು. ಮಾತಿನ ಮಧ್ಯೆಯೇ ಹಾಸ್ಯ ಚಟಾಕಿ. ಅವಳ ಮಾತಿಗೆ ಮನಸೋಲದವರೇ ಇಲ್ಲ. ಅವಳ ಮಾತು, ಹಾಸ್ಯ ಇನ್ನೊಬ್ಬರ ಮನಸ್ಸು ಅರಳಿಸುತ್ತಿತ್ತೇ ಹೊರತು, ಎಂದೂ ಮನಸ್ಸು ನೋಯಿಸುತ್ತಿರಲಿಲ್ಲ. ಈಗ ಅವೆಲ್ಲಕ್ಕೂ ಪೂರ್ಣವಿರಾಮ. 
'ಸಾವು' ಎಲ್ಲಿ, ಹೇಗೆ, ಯಾವಾಗ, ಯಾವ ರೂಪದಲ್ಲಿ ಹೊಂಚು ಹಾಕಿ ಕುಳಿತಿರುತ್ತದೆ ಎಂದು ಹೇಳಲು ಅಸಾಧ್ಯ. ಅದು ನಿಷ್ಕರುಣಿ, ಕ್ರೂರಿ, ಪಾಪಿ. ಯಾವ ಭೇದ-ಭಾವವೂ ಇಲ್ಲದೆ ತನ್ನ ನೀಳ ತೋಳ ತೆಕ್ಕೆಯಲ್ಲಿ ಹೊತ್ತು, ಗೊತ್ತಿಲ್ಲದೆ ಬಾಚಿ ಸೆಳೆದು ಬಿಡುತ್ತದೆ. ಅದರ ಕಪಿ ಮುಷ್ಟಿಯಲ್ಲಿ ಸಿಲುಕಿದ ಪುಟ್ಟ ಹುಡುಗಿ, ಉಸಿರುಗಟ್ಟಿ ಅಲ್ಲಿಯೇ ಕಣ್ಮುಚ್ಚಿದಳು. ನನ್ನಿಂದಾದ ತಪ್ಪನ್ನು ಮನ್ನಿಸಿ ಎಂದು ಬಾರದ ಲೋಕಕ್ಕೆ ಪಯಣಿಸಿಬಿಟ್ಟಳು. ಹೆತ್ತ ಕರುಳನ್ನು ಒಬ್ಬಂಟಿ ಮಾಡಿ....
ಇಲ್ಲಿ ಸಿಗದ ಶಾಂತಿ, ಕಾಣದ ಲೋಕದಲ್ಲಾದರೂ ನಿನ್ನಾತ್ಮಕ್ಕೆ ಸಿಗಲಿ....😭 😢

ಶುಕ್ರವಾರ, ಮೇ 13, 2016

ಬೀಡಿ ವೆಂಕ ಮತ್ತು ಸತ್ತ ಗಿಳಿ...

ತುಂಬಾ ದಿನಗಳ ನಂತರ ಆಕೆಗೆ ಫೋನ್ ಮಾಡಿದ್ದೆ. ಅವಳು ಬದಲಾಗಿದ್ದು ಗೊತ್ತಿತ್ತು. ಆದರೆ, ಆ ಬದಲಾವಣೆಯಲ್ಲಿ ನನ್ನ ಪ್ರೀತಿಯನ್ನೂ ಸಹ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾಳೆ ಎಂದುಕೊಂಡಿದ್ದೆ! ಆದರೆ ಅವೆಲ್ಲ ಹುಸಿಯೆಂದು, ಅವಳ ಮಾತಿನಿಂದಲೇ ಅರಿವಾಯಿತು. ಅರಿವಿಲ್ಲದೆ ಹೃದಯ ಭಾರವಾಗುತ್ತ, ಕಣ್ಣಂಚುಗಳು ತೇವಗೊಂಡವು.
ಜೊತೆ ಜೊತೆಯಾಗಿಯೇ ಅರ್ಥೈಸಿಕೊಂಡು ಬದುಕಿದವಳು. ಅರಿಯದ ವಯಸ್ಸಲ್ಲಿ ಪ್ರಬುದ್ಧತೆ ಮೆರೆದವಳು. ನನ್ನೆಲ್ಲ ಸರ್ವಸ್ವ ನೀನೆ ಎಂದು ನನ್ನಲ್ಲೇ ಒಂದಾದವಳು. ಅಗಲಿಕೆಯ ಸಹಿಸದೆ ಅತ್ತು ಕರಗಿ ಬಳಲಿ ಬೆಂಡಾದವಳು. ಪರಿಸ್ಥಿಯ ಕೈಗೊಂಬೆಯಾಗಿ ಪ್ರೀತಿಸುತ್ತಲೇ ದೂರ ದೂರಕೆ ಪಯಣಿಸಿದವಳು! ಅವಳ ಪಯಣದ ಹಾದಿಯಲಿ, ಪ್ರೀತಿ ಮಸುಕಾಗಿ ಹೋಗಿತ್ತು? ಪ್ರತೀ ನೋವಿಗೂ ಕಾಲವೇ ದಿವ್ಯೌಷಧ ಎಂಬಂತೆ, ಅವಳಿಗೆ ನನ್ನ ಅಗಲಿಕೆಯ ನೋವಿಗೂ ಸಹ `ಕಾಲ'ವೇ ಸಾಂತ್ವನ ಹೇಳಿ ಸಂತೈಸಿತ್ತು.
 ಅನಿರೀಕ್ಷಿತವಾಗಿ ಅಂದು ನನಗೆ ಅವಳ ದೂರವಾಣಿ ನಂ. ದೊರೆಯಿತು. ಪರಸ್ಪರ ದೂರವಾಗಿ ಹಲವು ವರ್ಷಗಳು ಸಂದಿದ್ದವು. 'ಹೇಗೂ ನಂ. ದೊರೆತಿದೆಯಲ್ಲಾ, ಸಂಪರ್ಕಿಸಿ ನೋಡೋಣ, ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ವಿಚಾರಿಸೋಣ' ಎಂದು ಅವಳ ನಂ.ಗೆ ಕರೆ ಮಾಡಿದೆ. ಒಮ್ಮೆಲೆ ನನ್ನ ಧ್ವನಿ ಗ್ರಹಿಸಿದ ಆಕೆ, 'ನೀನಾ...?' ಎಂದು ಉದ್ಗಾರ ತೆಗೆದು, ಒಂದೇ ಸಮನೆ ಹುಸಿಕೋಪದಿಂದ 'ಹೋಗೆಲೋ...' ಎಂದು ಎರ್ರಾಬಿರ್ರಿ ಬಯ್ಯತೊಡಗಿದಳು.
ನಂತರ ನಿಧಾನವಾಗಿ 'ಕಷ್ಟಪಟ್ಟು ಹಾಗೋ ಹೀಗೋ ಎಂದು ವಿದ್ಯಾಭ್ಯಾಸ ಮಾಡಿ ಒಂದು ಉದ್ಯೋಗಕ್ಕೆ ಸೇರಿದೆ. ಬದುಕಲ್ಲಿ ಅನುಭವಿಸಿದ ನೋವು ಹತಾಶೆಗಳೇ ನನ್ನ ಸಾಧನೆಯ ಮೆಟ್ಟಿಲುಗಳಾದವು. ಕಷ್ಟದಲ್ಲೇ ಬದುಕಿದ ನಾನು ಎಲ್ಲಿಯೂ ಸಂತೋಷದ ಬದುಕು ಕಂಡಿಲ್ಲ. ಓದು ಅಭ್ಯಾಸ ಎನ್ನುತ್ತಲೇ ಭವಿಷ್ಯದ ಗೂಡು ಹಣೆದೆ. ಅದರಲ್ಲಿ ಕೆಲವಷ್ಟು ಕನಸು ನನಸಾದರೂ... ಬಹಳಷ್ಟು ಕನಸು ಕನಸಾಗೇ ಉಳಿದು ಬಿಟ್ಟಿದೆ' ಎಂದು ನಿರಾಸೆಯಿಂದಲೇ ಏನೇನೋ ಹೇಳತೊಡಗಿದಳು.
'ಹುಂ........ ' `ಹಾಂ......... ' ಎನ್ನುತ್ತ ಸುಮ್ಮನೆ ಕೇಳುತಲಿದ್ದೆ.
'ಕೆಲವೊಮ್ಮೆ ಮನಸ್ಸು ಕಾರಣವಿಲ್ಲದೆ ಮೌನಕ್ಕೆ ಜಾರಿ ಬಿಡ್ತವೆ. ಆಗ ಅರಿವಿಲ್ಲದೆ ನನ್ನ ಕಣ್ಣಾಲಿಳು ತೇವಗೊಂಡು, ನೀರು ಜಿನುಗುತ್ತವೆ. ಆ ಸಂದರ್ಭದಲ್ಲೆಲ್ಲ ನೀನೇ ನೆನಪಾಗ್ತೀಯ. ಆಗ ಸುಮ್ಮನೆ ಆಕಾಶ ನೋಡುತ್ತ ಕುಳಿತು ಬಿಡ್ತೇನೆ' ಎಂದು ಮೌನಕ್ಕೆ ಜಾರಿಬಿಟ್ಟಳು.
ಆದರೆ ಅವಳಾಡಿದ ಬಹಳಷ್ಟು ಮಾತುಗಳಲ್ಲಿ, ಈ ಮಾತು ಮಾತ್ರ ನನ್ನ ಹೃದಯವನ್ನೇ ತಾಕುವಂತೆ ಮಾಡಿತು. ಬೇಡ ಬೇಡ ಎಂದರೂ ಮನಸ್ಸು ಹಿಂದಿನ ದಿನಗಳತ್ತ ಜಾರುತ್ತಿತ್ತು. ಬಲವಂತವಾಗಿ ಮನಸ್ಸನ್ನು ಹಿಡಿದಿಡಲು ಪ್ರಯತ್ನಿಸಿದೆ. ಇಲ್ಲ, ಅದು ಯಾವ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹಿಡಿದ ಹಠ ಸಾಧಿಸುವಂತೆ, ನನ್ನನ್ನು ಧಿಕ್ಕರಿಸಿ ಹಳೆಯ ನೆನಪಿನ ಗೂಡಿನ ಬಾಗಿಲಿಗೆ ತಂದು ನಿಲ್ಲಿಸಿ ಬಿಟ್ಟಿತು...!
ಅವಳ ಜೊತೆ ಕಳೆದ, ನಲಿದ, ಹರಟಿದ ಎಲ್ಲ ಕ್ಷಣಗಳನ್ನು ಮನಸ್ಸು ಒಂದಾದಾಗಿ ಮೆಲುಕು ಹಾಕತೊಡಗಿತು.
-------------------------------------------------------------------------------------------------------
ಕಡಲ ತಡಿಯಲಿ...
ಅವತ್ತು ಯಾರಿಗೂ ಹೇಳದೆ, ನಾವಿಬ್ಬರೂ ಅರಬ್ಬೀಯ ತಟಕ್ಕೆ ತೆರಳಿದ್ದೇವು. ಆಗ ತಾನೆ ಸೂರ್ಯ ತನ್ನ ಕಾರ್ಯ ಮುಗಿಸಿ ವಿಶ್ರಾಂತಿಗೆ ತೆರಳುತ್ತಿದ್ದ. ಭೋರ್ಗರೆವ ಕಡಲ ಮೊರೆತದ ನಡುವೆ, ತುಂತುರು ಮಳೆ ಹನಿಗಳು ಹನಿ ಹನಿಯಾಗಿ ಜಿನುಗುತ್ತ ಮುಸ್ಸಂಜೆಯ ಸೊಬಗನ್ನು ಹೆಚ್ಚಿಸಿದ್ದವು. ಏರಿಳಿತದ ಅಲೆಗಳ ಮೇಲೆ ನಮ್ಮಿಬ್ಬರದು ಭಾವ ಲಹರಿಯ ಪಯಣ. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ, ಕತ್ತಲಾವರಿಸಿಬಿಟ್ಟಿತ್ತು. ತುಸು ತಡವರಿಸಿದ ಆಕೆ, 'ಏನೋ... ಕತ್ತಲಾಯ್ತಲ್ಲೊ... ಭಯವಾಗ್ತಿದೆ, ಹೋಗೋಣ ಬಾ' ಎಂದಳು. 'ಇಲ್ಲ ಕಣೆ, ಇನ್ನೊಂದು ಹತ್ತು ನಿಮಿಷ ಬಿಟ್ಟು ಹೊರಡೋಣ' ಎಂದೆ.
ಅದೇ ವೇಳೆ ಆಕೆಗೆ ದೂರದಲ್ಲಿ ಯಾವುದೋ ಒಂದು ಆಕೃತಿ ಕಣ್ಣಿಗೆ ಗೋಚರಿಸಿತು! ಭಯಭೀತಳಾದ ಅವಳು ಏದುಸಿರು ಬಿಡುತ್ತ ಬಾಚಿ ನನ್ನನ್ನು ತಬ್ಬಿಕೊಂಡು, 'ಅಲ್ಲಿ ನೋಡು....' ಎಂದು ಬೆರಳು ತೋರಿಸಿದಳು. ಅವಳು ತೋರಿಸಿದ ಬೆರಳ ದಿಕ್ಕಿಗೆ ದಿಟ್ಟಿಸಿ ನೋಡಿದೆ! ನಮ್ಮೂರ ವೆಂಕ ಬೀಡಿ ಸೇದುತ್ತ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ!
ಮನಸ್ಸಲ್ಲೆ 'ವೆಂಕ'ನಿಗೊಂದು ಧನ್ಯವಾದ ಅರ್ಪಿಸಿ, ಇಂತಹ ಕ್ಷಣಗಳು ಸದಾ ಎದುರಾಗುತ್ತಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದೆ.
----------------------------------------------------------------------------------------------
ಹಣೆಯ ಮೇಲೊಂದು ಮುತ್ತು...
ಆಗ ತಾನೆ ಶಾಲೆಯಿಂದ ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಬಂದ ಆಕೆ, 'ನಾನು ಇಂದು ತುರ್ತಾಗಿ ಮನೆಗೆ ಹೋಗ್ತಾ ಇದ್ದೇನೆ. ಬರಲು ಎರಡು ದಿನ ತಡವಾಗಬಹುದು' ಎಂದಳು. ಯಾಕೆ? ಏನು? ಎಂದು ಕೇಳುವಷ್ಟರಲ್ಲಿ, ಭರಭರನೆ ಮನೆ ಕಡೆ ಹೆಜ್ಜೆ ಹಾಕಿದಳು. ಹುಚ್ಚು ಹಿಡಿದಂತಾಗ ಅವಳಿದ್ದ ಮನೆಯೆಡೆ ನಾನು ಕೂಡಾ ಹೆಜ್ಜೆ ಹಾಕಿದೆ. ಮನೆಯ ಮೂಲೆಯೊಂದರಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಒಮ್ಮೆ ಸುತ್ತಲೂ ಕಣ್ಣಾಡಿಸಿದೆ.... ಯಾರೂ ಇಲ್ಲದಿರುವದನ್ನು ಗಮನಿಸಿ, ಅವಳ ಪಕ್ಕ ಹೋಗಿ ಕುಳಿತು, ತಲೆ ನೇವರಿಸುತ್ತ 'ಏನಾಯ್ತೋ ಪಾಪು..? ಯಾಕೆ ಹೀಗೆ ಅಳ್ತಾ ಇದ್ದೀಯಾ.... ?' ಎಂದು ಕೇಳಿದೆ.
ಒತ್ತರಿಸಿ ಬರುವ ದುಃಖವನ್ನು ಹಿಡಿದುಕೊಳ್ಳುತ್ತ 'ನನ್ನ ಮುದ್ದಿನ ಗಿಳಿ ಸತ್ತೊಯ್ತಂತೆ! ಎಲ್ಲಿಯದೋ ಬೆಕ್ಕು ಬಂದು ಅದನ್ನು ಮುರಿದು ತಿಂದು ಬಿಟ್ಟಿದೆಯಂತೆ' ಎಂದಳು.
ನನ್ನವಳ ಮುಗ್ದತೆಗೆ ಮರುಗಿದೆ. ಅವಳಲ್ಲಿರುವ ಸ್ನಿಗ್ದ ಪ್ರೀತಿಗೆ ಸೋತು ಹೋದೆ. ಸಾಂತ್ವನಕ್ಕೆಂದು 'ನನಗೂ ಕೂಡಾ ತುಂಬಾ ನೋವಾಗ್ತಿದೆ ಪಾಪು. ಏನು ಮಾಡುವುದು? ಅದರ ಆಯುಷ್ಯಾನೇ ಅಷ್ಟು ಅಂತ, ಸುಮ್ಮನಾಗಬೇಕು. ಇವತ್ತು ನಿನ್ನ ಗಿಣಿ... ನಾಳೆ ಇನ್ನೇನೋ? ನಾಡಿದ್ದು ನಾನು....!' ಎನ್ನುವಷ್ಟರಲ್ಲಿ, ತನ್ನ ಕೈಯಿಂದ ನನ್ನ ಬಾಯಿಯನ್ನು ಬಲವಂತವಾಗಿ ಒತ್ತಿ ಹಿಡಿದಳು.
ಬೇಡ ಕಣೋ.... ಇನ್ಯಾವತ್ತೂ ಅಂಥಹ ಮಾತನ್ನು ಆಡ್ಬೇಡ. ಎಲ್ಲರೂ ಸಾಯಲೂ ಬಂದವರೇ! ಆದರೆ, ನೀನು ಮಾತ್ರ ಎಂದಿಗೂ ನಗು ನಗುತ್ತ ಇರ್ಬೇಕು. ಇನ್ಮುಂದೆ 'ತಮಾಷೆ'ಗೂ ಕೂಡಾ ಅಂತಹ ಮಾತುಗಳನ್ನಾಡಬೇಡ' ಎಂದು ಅಳುತ್ತಲೇ ತಾಕೀತು ಮಾಡಿದಳು.
ಹುಚ್ಚಿ.... ಅದಕ್ಕೆಲ್ಲ ಯಾಕೆ ಹೀಗಾಡ್ತಿಯಾ?' ಎಂದು ಪ್ರೀತಿಯಿಂದ ಅವಳ ಕೆನ್ನೆ ಸವರಿದೆ. ಕೆನ್ನೆ ಸವರಿದ ಕೈಯನ್ನೆ ಆಕೆ ಹಿಡಿದುಕೊಳ್ಳುತ್ತ, 'ಈ ಕೈ ಯಾವಾಗಲೂ ನನ್ನದೇ ಅಲ್ವಾ? ಇದೇ ಕೈ ನನ್ನ ಕೈಯನ್ನು ಹಿಡಿಯೋದು ಅಲ್ವಾ? ಈ ಕೈಯಲ್ಲೇ ಅಲ್ವಾ ನಾನು ನೆಮ್ಮದಿಯಾಗಿ ಬದುಕೋದು? ಎಂದು ತನ್ನೆದೆಗೆ ಒತ್ತಿಕೊಂಡು ಅರೆ ಕ್ಷಣ ಕಣ್ಮುಚ್ಚಿದಳು.
ಮಾತು ಬರದವನಾಗಿ ಅವಳನ್ನೇ ನೋಡುತ್ತ ಕುಳಿತು ಬಿಟ್ಟೆ.
'ನಿನಗೆ ಏನೋ ಕೊಡಬೇಕು ಎಂದುಕೊಂಡಿದ್ದೆ, ನೆನಪೇ ಇಲ್ಲ. ಕಣ್ಣು ಮುಚ್ಕೊ' ಎಂದು ತನ್ನ ಶಾಲಾ ಬ್ಯಾಗ್ ತೆರೆದಳು. ಅವಳ ಆಣತಿಯಂತೆ ನಾನು ಕಣ್ಣು ಮುಚ್ಚಿಕೊಂಡಿದ್ದೆ. ಏನು ಕೊಡುತ್ತಾಳೆ ಎಂದು ಊಹಿಸುವಷ್ಟರಲ್ಲಿ ಹಣೆಯ ಮೇಲೊಂದು ಅವಳ 'ಹೂ ಮುತ್ತು' ಇತ್ತು..!
ಬೆಕ್ಕು ತಿಂದ ನನ್ನವಳ ಗಿಳಿಯ ಆತ್ಮಕ್ಕೆ ಮನಸ್ಸಲ್ಲೆ ಶಾಂತಿ ಕೋರಿದೆ..!

ಶುಕ್ರವಾರ, ಮೇ 6, 2016

ಮುಂಜಾನೆಯ ಸಾರ್ಥಕ್ಯ ಬೈಗುಳ...!

ಕೌಶಲ್ಯಾ ಸುಪ್ರಜಾರಾಮ....... ಎಂದಿನಂತೆ ಇವತ್ತು ಕೂಡಾ ಬೆಳ್ಳಂಬೆಳ್ಳಿಗೆ ಮೊಬೈಲ್ ಸುಪ್ರಭಾತ ಹೇಳುತ್ತಿತ್ತು. ಮುಂಜಾನೆಯ ಜೊಂಪು ನಿದ್ದೆಯಲ್ಲಿಯೇ ಕರೆ ರಿಸೀವ್ ಮಾಡಿ ಕಿವಿ ಹತ್ತಿರ ತಂದೆ. ಆ ಕಡೆಯಿಂದ ಒಂದೇ ಸಮನೆ ಬೈಗುಳದ ಸುಪ್ರಭಾತ. ಅದು ಕೂಡಾ ಒಂದೇ ಓಘದಲ್ಲಿ. ಅಬ್ಬಾ...! ಅರೆ ಕ್ಷಣದಲ್ಲಿ ಜೊಂಪು ನಿದ್ದೆಯೆಲ್ಲ ಮಾಯ.
ಬಂಗಾಳಕೊಲ್ಲಿಯ ತಟದಲ್ಲಿರು ತಂಗಿ, ಪ್ರತಿದಿನವೂ ಕೆಲಸಕ್ಕೆ ಹೋಗುವ ವೇಳೆ ನನಗೆ ಕರೆ ಮಾಡುವುದು ಒಂದು ಪರಿಪಾಠ. ಇಂದು ಕೂಡಾ ಎಂದಿನಂತೆಯೇ ಕರೆ ಮಾಡಿದ್ದಳು. ಆದರೆ ಮಾತಿನ ಒರಸೆ ಬದಲಾಗಿತ್ತು. ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಳು. 'ಏನಾಯ್ತೋ... ನಿದ್ದೆ ಮಾಡ್ತಾ ಇದ್ದಂವ್ಗೆ ಎಬ್ಸಿ ಬೈತಾ ಇದ್ಯಲ್ಲೋ' ಎಂದೆ. ಉಹೂಂ... ಅದ್ಯಾವುದು ಅವಳು ಕೇಳೋ ಸ್ಥಿತಿಲೇ ಇರಲಿಲ್ಲ. ಒಂದೆರಡು ನಿಮಿಷ ಬಿಟ್ಟು, ಅವಳೇ ' ಜಾ..' ಎಂದು ಕರೆದಳು. ಅಷ್ಟರಲ್ಲಿ ಅವಳು ಶಾಂತ ಆಗಿದ್ಲು.
ಆಗಿದ್ದು ಇಷ್ಟೇ... ಆದರೂ ಚಿಂತನಾರ್ಹ.
ಪ್ರತಿದಿನ ಅವಳು ಕೆಲಸಕ್ಕೆ ಹೋಗುವಾಗ ಬೀದಿನಾಯಿಗಳಿಗೆಂದು ಒಂದೊಂದು ಬಿಸ್ಕೆಟ್ ಪ್ಯಾಕ್ ಖರೀದಿಸಿಕೊಂಡು ಹೋಗುತ್ತಾಳೆ. ಇವತ್ತು ಕೂಡಾ ಒಂದು ಬಿಸ್ಕೆಟ್ ಪ್ಯಾಕ್ ಖರೀದಿಸಿ ಸೈದಾಪೇಟೆ ಸಬರಬನ್ ರೈಲ್ವೆ ನಿಲ್ದಾಣ ಕಡೆ ಹೆಜ್ಜೆ ಹಾಕ್ತಾ ಇದ್ದಳು. ಮಾರ್ಗ ಮಧ್ಯದಲ್ಲಿರುವ ಶಿವಪ್ಪನ ದೇವಸ್ಥಾನದ ಬಳಿ ಒಂದು ಬೀದಿ ನಾಯಿ ಅವಳ ಕಣ್ಣಿಗೆ ಕಂಡಿದೆ. ಆ ನಾಯಿ ರಸ್ತೆ ದಾಟಿ ಇವಳಿದ್ದ ಕಡೆ ಆಗಮಿಸುತ್ತಿತ್ತು. ಅದೇ ವೇಳೆ ಬೈಕ್ ಸವಾರನೊಬ್ಬ ನಿಧಾನವಾಗಿ ಬಂದು, ಆ ನಾಯಿಯ ಕಾಲ ಮೇಲೆ ಬೈಕ್ ಹಾಯಿಸಿದ್ದಾನೆ. ನೋವು ತಾಳದ ಆ ಮೂಕಪ್ರಾಣಿ ಒಂದೇ ಸಮನೆ ಅಳುತ್ತಿತ್ತು. ಪುಣ್ಯಾತ್ಮ ಬೈಕ್ ಸವಾರನಿಗೆ ತಾನು ತಪ್ಪು ಮಾಡಿದ್ದೇನೆ ಎನ್ನುವ ಪಾಪ ಪ್ರಜ್ಞೆಯೂ ಕಾಡದೆ, ಯಾವುದೋ ಸಾಧನೆ ಮಾಡಿದ ನಗುಮೊಗದಿಂದ ಮುಂದೆ ಸಾಗಿದ್ದಾನೆ. ಇದೆಲ್ಲವನ್ನೂ ನೋಡುತ್ತಿದ್ದ ಸಹೋದರಿಗೆ, ಕೋಪ ನೆತ್ತಿಗೇರಿತ್ತು. ಹಿಂದೆ ಮುಂದೆ ನೋಡದೆ, 'nonsence, ರಾಕ್ಷಸ' ಎಂದು ಆತನ ಮೇಲೆ ರೇಗಾಡಿದ್ದಾಳೆ.
ನೋವು ತಾಳದ ಆ ನಾಯಿ, ಅಲ್ಲಿಯೇ ಇರುವ ಶಿವಪ್ಪನ ಗುಡಿಯ ಮೈದಾನದ ಮೂಲೆಯಲ್ಲಿ ಅಳುತ್ತಾ ಕೂತಿತ್ತು. ಸಹೋದರಿ ಅದಿದ್ದಲ್ಲಿಗೆ ಹೋಗಿ, ತನ್ನಲ್ಲಿರುವ ಬಾಟಲಿ ನೀರನ್ನು ತಲೆಗೆ, ಕಾಲಿಗೆ ಹಾಕಿ, ಮೈದವಡಿ... ಬಿಸ್ಕಿಟ್ ನೀಡಿ ಬಂದಿದ್ದಾಳೆ. ಬೈಕ್ ಸವಾರನ ಅಮಾನವೀಯತೆ ಅವಳ ಕೋಪಕ್ಕೆ ಕಾರಣವಾಗಿತ್ತು.
'ಬೈಕ್ ನಿಲ್ಲಿಸಿ, ಕಣ್ಣಲ್ಲಾದರೂ ತಾನು ತಪ್ಪು ಮಾಡಿದ್ದೇನೆ ಎಂದು ನಾಯಿ ನೋಡಿ ಮರುಕಪಡಬಹುದಿತ್ತು. ಅದು ಮಾಡದ ಆತ, ಅದಕ್ಕಿಂತ ಹೆಚ್ಚು ನೋವು ಅನುಭವಿಸುತ್ತಾನೆ. ಏನೂ ಅರಿಯದ ಮೂಕ ಪ್ರಾಣಿ ಮೇಲೆ ದೌರ್ಜನ್ಯ ಎಸಗುವ ಇವರು, ಮನುಷ್ಯರಾಗಿ ಜೀವಿಸಲು ಯೋಗ್ಯತೆಯಿಲ್ಲ. ರಾಕ್ಷಸ ಕುಲದವರು. ಅವುವೇಕಿಗಳು. ಛೀ.. ಥೂ...' ಎಂದು ಏನೇನೋ ಬೈಯ್ಯುತ್ತುದ್ದಳು.
ಹೌದು.... ನಾವು ಮನುಷ್ಯರು. ನಮ್ಮ ಭಾವನೆಯನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತೇವೆ. ಆದರೆ, ಮಾತು ಬರದ ಮೂಕ ಪ್ರಾಣಿಗಳು ಅದರದೇ ರಾಗ, ಸ್ವರದ ಮೂಲಕ ನೋವನ್ನು ಹೊರಹಾಕುತ್ತದೆ. ಮಾತು ಬರುವ ನಾವು, ಮಾತು ಬರದ ಅವರ ನೋವನ್ನು ಅರಿಯಬೇಕು. ನಮ್ಮ ಹಾಗೆ, ಆ ಮೂಕ ಪ್ರಾಣಿಗಳಿಗೂ ಹಸಿವೆ, ಸಂಸಾರ, ಬದುಕು, ನೋವು, ನಲಿವು ಎಂಬುದಿರುತ್ತದೆ. ಅದನ್ನು ಅರ್ಥೈಸಿಕೊಳ್ಳದಿದ್ದರೆ, ಮನುಷ್ಯನಾಗಿ ಹುಟ್ಟಿಯೂ ಪ್ರಯೋಜನವಿಲ್ಲ. ಇವೆಲ್ಲ ನೊಡಿದರೆ, ಪ್ರಾಣಿಗಳೇ ಎಷ್ಟೋ ಮೇಲು ಮನುಷ್ಯರಿಗಿಂತ.
ತಂಗಿಯ ಮಾನವೀಯ ಕಳಕಳಿಗೆ ಹೆಮ್ಮೆ ಪಡಲೇ, ಅಥವಾ, ಮನುಷ್ಯನಲ್ಲಿ ಮನುಷ್ಯತ್ವವೇ ಸತ್ತು ಹೋಗಿದೆ ಎಂದು ಮರುಕ ಪಡಲೇ...?

ಬುಧವಾರ, ಮೇ 4, 2016


ಗೆದ್ದಿದ್ದು ನನ್ನ ಪುಟ್ಟ ಸ್ನೇಹಿತನೆ...!

ಆತ ನನ್ನ ಸೂಪರ್, ಸೂಪರ್..... ಜ್ಯೂನಿಯರ್. ಹಾಗನ್ನುವುದಕ್ಕಿಂತ ಪುಟ್ಟ ಸ್ನೇಹಿತ ಎನ್ನಬಹುದು. ಅಗಷ್ಟೇ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಮುಗಿಸಿ, ಬದುಕಿಗೆ ನೆಲೆ ಕಂಡುಕೊಳ್ಳಲು ತರಬೇತಿಗೆಂದು ಪತ್ರಿಕಾಲಯದ ಕಚೇರಿಗೆ ಬಂದಿದ್ದ. ಕಲಿಕೆಯಬೇಕೆಂಬ ಬಯಕೆ ಅವನಲ್ಲಿ ಬೆಟ್ಟದಷ್ಟಿದ್ದರೂ, ಕ್ರಮೇಣ ಅದು ಕಡಿಮೆಯಾಗುತ್ತ ಬಂದಿತ್ತು.
ಪತ್ರಿಕೋದ್ಯಮದ ಕುರಿತಾಗಿ ಪಠ್ಯಪುಸ್ತಕದಲ್ಲಿರುವ ವಿಷಯವನ್ನು ಎರಡು ವರ್ಷಗಳ ಕಾಲ ನಾಲ್ಕು ಗೋಡೆಯೊಳಗೆ ಕುಳಿತು ಕಲಿತು ಬಂದ ಅವನಿಗೆ, ಕಚೇರಿ ಕಾರ್ಯ ಒಗ್ಗಿ ಬರುತ್ತಿರಲಿಲ್ಲ ಅಂದುಕೊಂಡಿದ್ದೆ. ಆದರೆ, ವಿಷಯವೇ ಬೇರೆಯಾಗಿತ್ತು.......!
ಆತ ಗೌರೀಶ( ಹೆಸರು ಬದಲಿಸಿದ್ದೇನೆ). ಗದಗ ಮೂಲದ ಬಡ ಕುಟುಂಬದ ಸುಂದರ ಹುಡುಗ. ಓದು, ಬರಹದಲ್ಲಿ ಆಸಕ್ತಿಯಿದ್ದರಿಂದ journalist ಆಗಬೇಕೆಂದು, ಪತ್ರಿಕೋದ್ಯಮ ಆಯ್ದುಕೊಂಡು, ಧಾರವಾಡದ ಶಾಲ್ಮಲೆಯ ತಟಕ್ಕೆ ಬಂದಿದ್ದ. ಮನಸ್ಸು ಬೇಡ ಅಂದರೂ ಹುಡುಗು ಬುದ್ಧಿ ಕೇಳಬೇಕಲ್ಲ; ಕಾಲೇಜ್ ಕ್ಯಾಂಪಸ್ ನಲ್ಲಿ ಕಂಡ ಚೆಲುವೆಯೊಬ್ಬಳ ಪ್ರೇಮ ಬಂಧನಕ್ಕೆ ಒಳಗಾದ. ಎರಡು ವರ್ಷಗಳಲ್ಲಿ ಆ ಪ್ರೇಮ ಬಲಿತು ಹೆಮ್ಮರವಾಗಿತ್ತು. ತನ್ನ ಅಪ್ಪ, ಅಮ್ಮರಿಗೆ, ಅವಳನ್ನು ಮದುವೆಯಾಗುವುದಾಗಿ ಹೇಳಿ ಅನುಮತಿಯನ್ನು ಸಹ ಪಡೆದಿದ್ದ.
ಎರಡು ವರ್ಷ ಅಭ್ಯಾಸ ಮುಗಿಸಿ ಅಂದು ನಮ್ಮ ಪತ್ರಿಕಾ ಕಚೇರಿಗೆ ಬಂದ ಆತನಲ್ಲಿ, ಕಲಿಯಬೇಕೆಂಬ ಉತ್ಸಾಹ ತುಂಬಿ ತುಳುಕುತ್ತಿತ್ತು. ಸಮಯ, ಸಂದರ್ಭ ನೋಡದೆ, ಒಂದೇ ಸಮನೆ ಎಡತಾಕಿ ತನ್ನ ಸಂದೇಹ ಪರಿಹರಿಸಿಕೊಳ್ಳುತ್ತಿತ್ತ. ಆದರೆ, ಅವತ್ತು ಯಾಕೋ ತೀರಾ ಎನ್ನುವಷ್ಟು ಮಂಕನಾಗಿದ್ದ. ಸಂದೇಹ ಬೇಡ, ಒಂದಕ್ಷರ ಸಹ ಆತನ ಬೆರಳಿನಿಂದ ಅಚ್ಚೊತ್ತುತ್ತಿರಲಿಲ್ಲ. ಕೋಪದಿಂದಲೇ ಬುದ್ಧಿ ಹೇಳಿದೆ. ಆದರೆ, ಬುದ್ಧಿ ಮಾತಿಗೆ ಕಿವಿಗೊಡುವ ಸಹನೆಯನ್ನೇ ಆತ ಕಳೆದುಕೊಂಡಿದ್ದ. ಎರಡು ದಿನಗಳಲ್ಲಿ ಆತನ ವಿಶ್ವಾಸಗಳಿಸಿ, ಕಣ್ಣಂಚಲ್ಲೆ 'ನಿನ್ನ ನೋವೇನು ಪುಟ್ಟಾ' ಎಂದು ಕೇಳಿದೆ. 'ಅಣ್ಣಾ, ಹುಡುಗಿ ಕೈ ಕೊಟ್ಟಳು' ಎಂದು ಗದ್ಗದಿತನಾದ.


ಆತನ ಎರಡೂ ಕೈಯ್ಯನ್ನು ಗಟ್ಟಿಯಾಗಿ ಅದುಮಿ, ಅವನನ್ನು ಎದೆಗಪ್ಪಿಕೊಂಡೆ. ಎರಡು ದಿನ ಬಿಟ್ಟು, ನನ್ನ ಒಡನಾಟದ ಅಕ್ಕನ ಮನೆಗೆ ಕರೆದೊಯ್ದೆ. ಆವರೆಗೆ ಗೊತ್ತಿಲ್ಲದ ಜಗತ್ತೊಂದನ್ನು ಆತ ಅಲ್ಲಿ ನೋಡಿದ್ದ. ನೋವಿನಲ್ಲಿ ನಗುವುದು ಹೇಗೆಂಬುದನ್ನು ಪ್ರತ್ಯಕ್ಷವಾಗಿ ಕಂಡಿದ್ದ. ಯಾರನ್ನು ಸಹ 'ಅವರು ಹೀಗೆಯೇ...' ಎಂದು ನಿರ್ಧರಿಸಬಾರದು ಎನ್ನುವ ಪಾಠ ಕಲಿತಿದ್ದ. ಅಲ್ಲಿಗೆ ಹೋಗುವಾಗ ಭಾರವಿದ್ದ ಆತನ ಹೃದಯ, ಬರುವಾಗ ಹತ್ತಿಯಂತಾಗಿತ್ತು. ವಿಚಿತ್ರ ಎಂದರೆ, ಅವತ್ತು ನಾ ಅವನ ಕೈ ಹಿಡಿದು, ತಬ್ಬಿಕೊಂಡರೆ, ಅಂದು ನನ್ನ ಕೈ ಅದುಮಿ, ಆತ ತಬ್ಬಿಕೊಂಡಿದ್ದ...!
ಹಂತ ಹಂತವಾಗಿ ಗೌರೀಶ, ತಾನು ಪ್ರೀತಿಸಿದವಳ ನೆನಪಿನಿಂದ ಹೊರಬರುತ್ತಿದ್ದ. ತರಬೇತಿ ಅವಧಿ ಮುಗಿದ ನಂತರ ಧಾರವಾಡದಲ್ಲಿಯೇ, ಪತ್ರಿಕೆಗೆ ಸಂಬಂಧಿಸಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸ್ವಲ್ಪ ದಿನಗಳ ನಂತರ ಕೈ ತುಂಬಾ ಸಂಬಳದ ಉದ್ಯೋಗ ಅವನನ್ನು ಹುಡುಕಿಕೊಂಡು ಬಂತು. ಹಿಂದೆ ಮುಂದೆ ನೋಡದೆ, ಗಂಟು, ಮೂಟೆ ಕಟ್ಟಿಕೊಂಡು ' ರೈಟ್' ಅಂದ. ಯಾವೊಂದು ತಾಕಲಾಟ, ತೊಳಲಾಟವಿಲ್ಲದೆ ಪುಟ್ಟ ಸ್ನೇಹಿತ ಅಲ್ಲಿ ನಿಶ್ಚಿಂತೆಯಿಂದ ಇದ್ದಾನೆ. ಪ್ರತಿದಿನ ಸಂಪರ್ಕದಲ್ಲಿದ್ದು, 'ಅಣ್ಣಾ, ಹೇಗಿದ್ಯಾ?' ಎಂದು ಕೇಳುತ್ತಾನೆ. ಸುಮ್ಮನೆ, ಹರಟೆ ಹೊಡೆದು 'good night' ಹೇಳಿ ಮಲಗುತ್ತೇವೆ.
ಪುಟ್ಟ ಸ್ನೇಹಿತನನ್ನು ಎರಡು ವರ್ಷ ಕಾಲ ಪ್ರೀತಿಸಿದ ಹುಡುಗಿಯ ಮದುವೆ ಆಯಿತು ಎನ್ನುವ ಸುದ್ದಿ ಎರಡು ದಿನದ ಹಿಂದೆ ಕಿವಿಗೆ ಬಿದ್ದಿತ್ತು. ಆ ಕುರಿತು ಅವನಲ್ಲಿ ಕೇಳಿದರೆ, 'ಅಣ್ಣಾ, ನನ್ನದು ಪವಿತ್ರ ಪ್ರೀತಿ. ಅವಳಿಗಾಗಿ ಕೊರಗಿದ್ದು, ಕನವರಿಸಿದ್ದು ಹೌದು. ಮದುವೆ ಆಗುವ ನಿರ್ಧಾರ ತೆಗೆದುಕೊಂಡು, ಅಪ್ಪ, ಅಮ್ಮನನ್ನು ಸಹ ಒಪ್ಪಿಸಿದ್ದೆ. ಅದಾಗಲಿಲ್ಲ. ಅವಳು ಎಲ್ಲೇ ಇರಲಿ; ನಗ್ತಾ ಇದ್ರೆ ಸಾಕು. ದೂರದಿಂದಲೇ ಅವಳಿಗಾಗಿ ಭಗವಂತನಲ್ಲಿ ಕೈ ಜೋಡಿಸ್ತೀನಣ್ಣಾ' ಅಂತಾನೆ.
ಅವಳು ಚೆನ್ನಾಗಿರಲಿ. ಬಾಳು ಬೆಳಗುತ್ತಿರಲಿ. ಆದರೆ, ಪ್ರೀತಿಯ ಚದುರಂಗದಾಟದಲ್ಲಿ ಗೆದ್ದಿದ್ದು ಮಾತ್ರ ನನ್ನ ಪುಟ್ಟ ಸ್ನೇಹಿತನೆ. ಹ್ಯಾಟ್ಸ್ ಅಪ್ ಅಪ್ಪಿ....!

ಭಾನುವಾರ, ಮೇ 1, 2016

ಕಾಡಿಗೆ ಬೆಂಕಿಯಿಡುವ 'ನಂಬಿಕೆ'ಯ ಕಥೆಯಿದು...!

ಕಾಡಂಚಿನ ನಿವಾಸಿಗಳ ನಂಬಿಕೆಯೊಂದು, ಕಾಡಿಗೆ ಕಾಡೇ ಸಂಪೂರ್ಣ ಭಸ್ಮಮಾಡಿಬಿಡುತ್ತದೆ ಎನ್ನುವ ಭಯಾನಕ ಸುದ್ದಿಯೊಂದು ಇಲ್ಲಿದೆ. ಬಿರು ಬೇಸಿಗೆಯಲ್ಲಿ ಹುಲ್ಲು ಬೆಳೆಯುವ ಕಾಡಿನ ಪ್ರದೇಶಕ್ಕೆ ತರಗೆಲೆಯಿಂದ ಬೆಂಕಿ ಇಟ್ಟರೆ, ಮಳೆ ಬಿದ್ದಾಗ ಅಲ್ಲಿ ಹುಲುಸಾಗಿ ಹುಲ್ಲು ಬೆಳೆಯುತ್ತದಂತೆ!
ಇಂಥಹ ನಂಬಿಕೆಯೊಂದು ಕಾಡಂಚಿನ ನಿವಾಸಿಗಳಲ್ಲಿ ಬಲವಾಗಿ ಬೇರೂರಿದೆ. ಸುಟ್ಟ ತರಗೆಲೆ ಬೆಳೆಯುವ ಹುಲ್ಲಿಗೆ ಗೊಬ್ಬರ. ಅದರಿಂದ ಮುಂಗಾರಿನ ಮೊದಲ ಮಳೆ ಭೂಮಿಗೆ ಬೀಳುತ್ತಿದ್ದಂತೆ ಹುಲ್ಲು ಮೊಳಕೆಯೊಡೆದು, ವಾರದಲ್ಲಿ ಯಥೇಚ್ಛವಾಗಿ ಎದ್ದು ನಿಲ್ಲುತ್ತದೆ. ಬೆಂಕಿ ಹಾಕದ ಪ್ರದೇಶಗಳಲ್ಲಿ ಹುಲ್ಲು ಎದ್ದು ನಿಲ್ಲಲು ತಿಂಗಳುಗಳ ಕಾಲ ಕಾಯಬೇಕು. ಹೀಗೆ ಬೆಂಕಿ ಹಾಕಿದರೆ ದನ-ಕರುಗಳಿಗೆ ಮೇವು ಭರಪೂರ ದೊರೆಯುತ್ತದೆ ಎನ್ನುವುದು ಅವರ ಬಲವಾದ ನಂಬಿಕೆ. ಪರಿಣಾಮ, ಸುಡು ಬೇಸಿಗೆಯಲ್ಲಿ ಕಾಡಿನ ತರಗೆಲೆಗಳನ್ನೆಲ್ಲ ಒಂದೆಡೆ ಕಲೆಹಾಕಿ ಬೆಂಕಿ ಇಡುತ್ತಾರೆ. ಮೊದಲೇ ಬಿಸಿಲಿನ ಉರಿಗೆ ಗರಿಗರಿಯಾದ ತರಗೆಲೆಗಳು, ಕಾಡಿನ ಚಿಕ್ಕಪುಟ್ಟ ಮರಗಳು ಬೆಂಕಿಯ ಪ್ರಖರತೆಗೆ ಕ್ಷಣಾರ್ಧದಲ್ಲಿ ಪಟಪಟನೆ ಉರಿದು ಬಿಡುತ್ತವೆ. ಅಲ್ಲದೆ, ಆ ಬೆಂಕಿಯ ತೀವ್ರತೆ ಅಕ್ಕ ಪಕ್ಕ ಬಿದ್ದಿರುವ ತರಗೆಲೆ, ಒಣ ಮರಗಳಿಗೆಲ್ಲ ವ್ಯಾಪಿಸಿ ಕಾಡ್ಗಿಚ್ಚಾಗಿ ಪರಿವರ್ತಿತವಾಗುತ್ತದೆ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರ, ದಾಂಡೇಲಿ ಭಾಗದ ಹುಣಶೆಟ್ಟಿಕೊಪ್ಪ, ಯಲ್ಲಾಪುರ, ಕಿರುವತ್ತಿ, ಕಾತೂರ, ಮುಂಡಗೋಡ, ಮಂಚಿಕೇರಿ, ಇಡಗುಂದಿ, ಅರಬೈಲ, ರಾಮಗುಳಿ, ಕತಗಾಲ, ದೇವಿಮನೆ ಹೀಗೆ ಅನೇಕ ಅರಣ್ಯ ಪ್ರದೇಶಗಳಲ್ಲಿ ಇಂಥಹ ಘಟನೆ ಪ್ರತಿ ಬೇಸಿಗೆಯಲ್ಲಿ ಪುನರಾವರ್ತಿತವಾಗುತ್ತಲೇ ಇರುತ್ತದೆ. ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಎಷ್ಟೇ ಹರಸಾಹಸ ಪಟ್ಟರೂ ಅವರಿಂದ ಸಾಧ್ಯವಾಗದು. ನಿರೀಕ್ಷೆ ಮೀರಿ ಅನಾಹುತ ಘಟಿಸಿರುತ್ತದೆ. ಲಕ್ಷಾಂತರ, ಕೋಟ್ಯಾಂತರ ರು. ಮೌಲ್ಯದ ಅರಣ್ಯ ಸಂಪತ್ತು ಬೆಂಕಿಗಾಹುತಿ ಆಗಿರುತ್ತದೆ. ಅಲ್ಲದೆ, ಹತ್ತಾರು ವನ್ಯಜೀವಿಗಳು, ಅಪರೂಪದ ಜೀವ ಸಂಕುಲಗಳು, ಗಿಡಮೂಲಿಕೆ ಸಸ್ಯಗಳು ಸುಟ್ಟು ಕರಕಲಾಗಿರುತ್ತವೆ.
ಹೊಂದಾಣಿಕೆ ಎಂದರೆ ಬೆಂಕಿ ಇಡುವುದಲ್ಲ!
ಕಾಡಂಚಿನಲ್ಲಿ ವಾಸಿಸುವ ಬಹುತೇಕ ಕುಟುಂಬಗಳಿಗೆ ಕಾಡೇ ಜೀವನಾಧಾರ. ಅರಣ್ಯ ಸಿಬ್ಬಂದಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅನಿವಾರ್ಯವಾಗಿ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಯಾಕೆಂದರೆ, ಅನಾದಿ ಕಾಲದಿಂದಲೂ ಅಲ್ಲಿನ ನಿವಾಸಿಗಳು ಕಾಡನ್ನು ಆಶ್ರಯಿಸಿ ಬದುಕು ಕಟ್ಟಿಕೊಂಡು ಬಂದವರು. ಅರಣ್ಯ ಸಂರಕ್ಷಣೆ, ಕಾನೂನು ಪಾಲನೆ ಎಂದರೆ ಸಾವಿರಾರು ಕುಟುಂಬ ಅನ್ನಾಹಾರ ಇಲ್ಲದೆ ಬೀದಿಗೆ ಬೀಳಬೇಕಾಗುತ್ತದೆ. ಹಾಗಂತ, ಕಾಡಿಗೆ ಬೆಂಕಿ ಇಟ್ಟು ಬದುಕು ಕಟ್ಟಿಕೊಳ್ಳಬೇಕೆನ್ನುವ ಹೊಂದಾಣಿಕೆ ಅರಣ್ಯ ಸಿಬ್ಬಂದಿಯದಲ್ಲ. ಇರುವ ಅರಣ್ಯ ಸಂಪತ್ತನ್ನು ಹಿತಮಿತವಾಗಿ ಬಳಸಿ, ನೀವೂ ಬದುಕಿ, ಅವುಗಳನ್ನೂ ಸಂರಕ್ಷಿಸಿ ಎಂಬುದು. ಆದರೆ, ಕಾಡನ್ನು ರಕ್ಷಿಸುವ ಬದಲು ಅವೈಜ್ಞಾನಿಕ ನಂಬಿಕೆಯಿಂದ ಅವರು ಕಾಡಿಗೆ ಬೆಂಕಿ ಇಡುತ್ತಾರೆ ಎನ್ನುವುದು ವಿಪರ್ಯಾಸ.
ಇವರೂ ಬೆಂಕಿ ಇಡುತ್ತಾರೆ...
ರಸ್ತೆ ಅಂಚಿನಲ್ಲಿ ಬಿದ್ದಿರುವ ತರಗೆಲೆಗಳನ್ನು ಅರಣ್ಯ ಸಿಬ್ಬಂದಿ ಸಾಲಾಗಿ ಒಟ್ಟುಗೂಡಿಸಿ ಅವುಗಳಿಗೆ ಬೆಂಕಿ ಇಡುತ್ತಾರೆ. ಯಾರಾದರೂ ಸಿಗರೇಟ್, ಬೀಡಿ ಸೇದು ಅಲ್ಲಿಯೇ ಬೀಸಾಡಿದರೆ, ಒಣಗಿದ ತರಗೆಲೆಗೆ ಹತ್ತಿಕೊಂಡ ಸಣ್ಣ ಕಿಡಿ, ಕಾಡೆಲ್ಲ ವ್ಯಾಪಿಸುವ ಸಾಧ್ಯತೆಯಿರುತ್ತದೆ. ಮುಂಜಾಗ್ರತ ಕ್ರಮವಾಗಿ ಅರಣ್ಯ ಸಿಬ್ಬಂದಿ ಬೇಸಿಗೆ ದಿನಗಳು ಹತ್ತಿರ ಬಂದಂತೆ, ಕಾಡಿನ ಮೂಲಕ ಹಾದುಹೋಗುವ ರಸ್ತೆಯ ಅಕ್ಕಪಕ್ಕ ಬಿದ್ದಿರುವ ತರಗೆಲೆಗಳಿಗೆ ಬೆಂಕಿ ಇಡುತ್ತಾರೆ.
ಬೆಂಕಿ ಇಡುವವರೇ ಹೆಚ್ಚು!
ಎರಡು ಸಾವಿರದಿಂದ ಐದು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒಂದು ಬೀಟ್(ಗಸ್ತು) ಎಂದು ಗುರುತಿಸಿ ಒಬ್ಬ ಗಾಡರ್್ನನ್ನು ನೇಮಕ ಮಾಡಲಾಗುತ್ತದೆ. ಇಂಥಹ ಮೂರು-ನಾಲ್ಕು ಬೀಟ್ಗೆ ಒಬ್ಬ ಫಾರೆಸ್ಟರ್ ಹಾಗೂ ಒಬ್ಬ ಬೆಂಕಿ ವೀಕ್ಷಕನನ್ನು ನಿಯೋಜಿಸಲಾಗುತ್ತದೆ. ಈ ಮೊದಲು ದಟ್ಟ ಕಾಡುಗಳು ಇರುತ್ತಿದ್ದರಿಂದ ಬೇಸಿಗೆಯಲ್ಲಿ ಮರಗಳ ತಿಕ್ಕಾಟದಿಂದ ಕಾಡಿಗೆ ಬೆಂಕಿ ಬೀಳುತ್ತಿತ್ತು. ಆದರೆ, ಇತ್ತೀಚೆಗೆ ಕಾಡುಗಳು ಕ್ಷೀಣವಾಗುತ್ತಿರುವುದರಿಂದ ಆಕಸ್ಮಿಕವಾಗಿ ಬೆಂಕಿ ಬೀಳುವುದು ಕಡಿಮೆಯಾಗಿದೆ. ಆದರೆ, ಕಾಡಂಚಿನ ಜನರು ಉದ್ದೇಶಪೂರ್ವಕವಾಗಿ ಹಾಗೂ ಮೂಢನಂಬಿಕೆಗೆ ಜೋತು ಬಿದ್ದು ಬೆಂಕಿ ಇಡುತ್ತಿದ್ದಾರೆ. ಐದಾರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲ್ಲಿ, ಯಾವಾಗ ಬೆಂಕಿ ಇಡುತ್ತಾರೆ ಎನ್ನುವುದು ಗಾರ್ಡ್ ಗಳಿಗಾಗಲಿ, ಬೆಂಕಿ ವೀಕ್ಷಕ ಸಿಬ್ಬಂದಿಗಾಗಲಿ ತಿಳಿಯದು. ದಟ್ಟ ಹೊಗೆ ಮೇಲೆದ್ದಾಗಲೇ ನಿರ್ದಿಷ್ಟ ಪ್ರದೇಶದ ಗುರುತು ಸಿಗುತ್ತದೆ. ಅಷ್ಟರಲ್ಲಾಗಲೇ ಕಾಡಿನ ಬಹುತೇಕ ಭಾಗ ಸುಟ್ಟು ಹೋಗಿರುತ್ತದೆ. ವ್ಯಾಪಿಸುವ ಬೆಂಕಿ ನಂದಿಸಬೇಕೆಂದರೆ ಯಾವುದೇ ಆಧುನಿಕ ಉಪಕರಣಗಳಿಲ್ಲ. ಮರಗಳ ಟೊಂಗೆಯನ್ನು ಮುರಿದು ಬೆಂಕಿಗೆ ಬಡಿಯಬೇಕು. ಅದು ಪ್ರಾಣಾಪಾಯದ ಕಾಯರ್ತವೇ.
ಕೆಂದಳಿಲಿನ ಗೂಡಿಗೆ ಬೆಂಕಿ
ಉತ್ತರ ಕನ್ನಡ ಅರಣ್ಯದಲ್ಲಿ ಕಾಣ ಸಿಗುವ ಬಹು ಅಪರೂಪದ ಜೀವ ಸಂಕುಲಗಳಲ್ಲಿ ಕೆಂದಳಿಲು(ಕೆಂಪು ಅಳಿಲು) ಒಂದು. ಅವು ಹೆಚ್ಚಾಗಿ ಬಾಂಬು(ಬಿದುರು)ಗಳ ಒಳಗೆ ಗೂಡು ಕಟ್ಟಿ ಬದುಕುತ್ತವೆ. ಬಿರು ಬೇಸಿಗೆಯ ತಾಪಕ್ಕೆ ಬಾಂಬು ತಂಪನೆಯ ವಾತಾವರಣ ನೀಡುತ್ತದೆ. ಆದರೆ, ಬೆಂಕಿ ಇಟ್ಟಾಗ ಮೊದಲು ಆಹುತಿಯಾಗುವುದು ಈ ಬಾಂಬು ಗಿಡಗಳೇ. ಯಾಕೆಂದರೆ, ಇವುಗಳ ಬುಡಕ್ಕೆ ಬೆಂಕಿ ತಗುಲಿದಾಗ ಒಂದೇ ಸಮನೆ ಅದರ ಗಾವು ಮೇಲಿನವರೆಗೂ ಹಬ್ಬಿ ಬಡುತ್ತದೆ. ಅದರ ಒಳಗಡೆ ಗೂಡು ಕಟ್ಟಿಕೊಂಡಿರುವ ಕೆಂದಳಿಲು ಹಾಗೂ ಅದರ ಸಂಸಾರ ಅಲ್ಲಿಯೇ ಕರಕಲಾಗುತ್ತದೆ.

ಮಂಗಳವಾರ, ಮಾರ್ಚ್ 22, 2016

ಶಿವಪ್ಪನಿಗೊಂದು ಓಲೆ......
ಪ್ರೀತಿಯ ಅಪ್ಪಾ,
ಹೇಗಿದ್ದೀಯಾ...? ಪಾರ್ವತಮ್ಮ ಏನ್ಮಾಡ್ತಾ ಇದ್ದಾಳೆ. ನಿನ್ನ ಗಣಗಳೆಲ್ಲ ಸೌಖ್ಯ ತಾನೆ? ನೀನು ಮತ್ತು ನಿನ್ನ ಸುತ್ತೆಲ್ಲ ಇರೋರು ಸಕತ್ತಾಗಿಯೇ ಇರ್ತಿರಿ ಬಿಡಿ. ಮೃಷ್ಟಾನ್ನ ಭೋಜನ ತಿನ್ಕೋತಾ, ಅಡ್ಡಾಡ್ತಾ ಕೈಲಾಸವಷ್ಟೇ ಅಲ್ಲದೆ, ಭೂಲೋಕದ ಮೇಲೂ ಒಂದು ಕಣ್ಣು ಇಟ್ಟಿರ್ತೀರಿ. ಅದ್ರಲ್ಲೂ ನೀನಂತೂ ಹಣೆ ಮೇಲಿರುವ ಮೂರನೇ ಕಣ್ಣನ್ನು ಇಲ್ಲೇ ಇಟ್ಟಿರ್ತಿಯಾ ಬಿಡು.. ಯಾರ್ಯಾರು ಏನೇನು ಮಾಡ್ತಾ ಇದ್ದಾರೆ? ಒಳ್ಳೆ ಕೆಲಸ ಎಷ್ಟ ಮಾಡಿದ್ರು, ಪಾಪದ ಕಾರ್ಯ ಎಷ್ಟ ಮಾಡಿದ್ರು ಅಂತ ಲೆಕ್ಕ ಹಾಕ್ತಾ ಇರ್ತಿಯ. ಶಿಷ್ಟ ರಕ್ಷಕ, ದುಷ್ಟ ಶಿಕ್ಷಕನಾಗಿ ನಮ್ಮನ್ನೆಲ್ಲ ಪರಿಪಾಲನೆ ಮಾಡ್ತಾ ಇರ್ತಿಯಾ.
ಆದ್ರೂ ನೀ ಏನೇ ಹೇಳು ಅಪ್ಪಾ, ಇಲ್ಲಿ ಪಾಪ ಮಾಡಿದವ್ರೆ ಝೇಂಕರಿಸಿ ಮೆರೆದಾಡುತ್ತಾರೆ. ಪುಣ್ಯ ಮಾಡಿದವ್ರೆಲ್ಲ ಬೇಗನೇ ನಿನ್ನ ಪಾದ ಸೇರ್ಕೋತಾರೆ...! ಇದೆಂಥ ನ್ಯಾಯನೋ ಅಪ್ಪ? ಹೀಗಾದ್ರೆ ಪುಣ್ಯದ ಕೆಲಸ ಯಾಕೆ ಮಾಡ್ಬೇಕು ಹೇಳು? ಸ್ವಲ್ಪ ಯೋಚನೆ ಮಾಡು. ಮಗನೇ ನಿಂಗೆ ಹೇಳ್ತಾನೆ ಅಂತ ಬೇಜಾರು ಮಾಡ್ಕೋಬೇಡ.
ಶಿವಪ್ಪ, ಇತ್ತೀಚೆಗೆ ಈ ಭೂಲೋಕದಲ್ಲಿ ಶಾಂತಿ ಅನ್ನೋದೆ ಮರೆಯಾಗ್ಬಿಟ್ಟದ್ಯೊ. ಎಲ್ಲ ನೋಡಿದ್ರಲ್ಲಿ ಕಚ್ಚಾಟ, ಹಿಂಸೆ, ಕೊಲೆ, ಸುಲಿಗೆ ಇದ್ರದ್ದೆ ಪಾರುಪಥ್ಯ. ಬೆಳಿಗ್ಗೆ ಮನೆಯಿಂದ ಕೆಲ್ಸಕ್ಕೆ ಹೋದವ್ರು, ರಾತ್ರಿ ಸರಿಯಾಗಿ ಮನೆಗೆ ಬರ್ತಾರೆ ಅಂತ ಹೇಳೋಕು ಆಗಲ್ವೊ. ಎಲ್ಲಿ ಬಾಂಬ್ ಬ್ಲಾಸ್ಟ್ ಆಗತ್ತೋ, ಎಲ್ಲಿ ಎದೆಗೆ ಗುಂಡು ಬೀಳತ್ತೋ, ಯಾರು ಹಿಂಬದಿಯಿಂದ ಬಂದು ಹಲ್ಲೆ ಮಾಡ್ತಾರೋ ಅಂತ ಒಂದೂ ಗೊತ್ತಾಗಲ್ಲ ಅಪ್ಪ. ಅಷ್ಟೊಂದು ಆತಂಕದ ವಾತಾವರಣ. ಒಂದ್ಕಡೆ ಹೊರಗಡೆ ಭಯೋತ್ಪಾದಕರ ಆತಂಕ, ಇನ್ನೊಂದಕಡೆ ನಮ್ಮೊಳಗೇ ಭಯೋತ್ಪಾದನೆ ಮಾಡುವ ರಾಜಕಾರಣಿಗಳ ಆತಂಕ. ಒಟ್ಟಾರೆ, ನೆಮ್ಮದಿ, ಸಮಾಧಾನ ಅನ್ನೋದೆ ಇಲ್ಲ. ಇದನ್ನೆಲ್ಲ ನೀ ನೋಡ್ತಾ ಇದ್ರೂ ಯಾಕೋ ಅಪ್ಪಾ, ಏನೂ ಗೊತ್ತಾಗದೆ ಇರೋ ಥರ ಇರ್ತಿಯಾ..? ಅದ್ರಲ್ಲೂ ಯಾರಿಗೂ ಇಲ್ದೆ ಇರೋ ಎಕ್ಸಟ್ರಾ ಕಣ್ಣು ಬೇರೆ ಇದೆ ನಿಂಗೆ. ಹೀಗಿದ್ದಾಗ್ಲೂ ನೀ ಸುಮ್ನೆ ಇರೋದು ನಂಗೆ ಯಾಕೋ ಸರಿ ಕಾಣ್ಸತಾ ಇಲ್ಲ.
ಅದೆಲ್ಲ ಬಿಡು ಅಪ್ಪಾ, ಇವತ್ತು ನಾಳೆ ನಿನ್ನ ಹಬ್ಬ. ನಿನ್ನ ಗುಡಿಯನ್ನೆಲ್ಲ ಸಕತ್ತಾಗಿ ಅಲಂಕಾರ ಮಾಡಿದ್ದಾರೆ. ಇವತ್ತು ರಾತ್ರಿ ಪೂರ್ತಿ ನಿನ್ನ ಭಜನೆ ಮಾಡ್ತಾ ಜಾಗರಣೆ ಮಾಡ್ತಾರೆ. ಕೋಟಿ ಕೋಟಿ ಭಕ್ತರು ನಿನ್ನ ಒಲಿಸಿಕೊಳ್ಳೋಕೆ, ನಿನ್ನ ಕೃಪೆಗೆ ಪಾತ್ರರಾಗೋಕೆ ಕರ ಮುಗಿದು ಪ್ರಾರ್ಥಿಸುತ್ತಾರೆ. ಆತ್ಮಶುದ್ಧಿಯಿಂದ, ನಿಜ ಭಕ್ತಿಯಿಂದ ನಿನ್ನಲ್ಲಿ ಬೇಡ್ಕಳ್ಳೋ ಭಕ್ತರಿಗೆ ನೀ ಆಶೀರ್ವಾದ ಮಾಡ್ಲೇಬೇಕು ಅಪ್ಪ. ನಾ ಹೇಳದಿದ್ರು ನೀ ಹರಸಿ, ಹಾರೈಸ್ತೀಯಾ. ಯಾಕೆಂದ್ರೆ ನೀ ಯಾವತ್ತೂ 'ನಿಜ ಭಕ್ತಿ' ಗೆ ಸೋಲುವ ಶಿವಪ್ಪ.
ಅಂದಹಾಗೆ ಅಪ್ಪ, ಮರ್ತೆ ಹೋಗಿತ್ತು ನೋಡು. ಇವತ್ತು ಉಪವಾಸ, ಜಾಗರಣೆ. ನಾಳೆ ಅಮವಾಸ್ಯೆ, ಅಂದ್ರೆ ನಿನ್ನ ಹಬ್ಬ. ಈ ಎರಡು ದಿನಗಳಲ್ಲಿ ನೀ ಯಾವಾಗ, ಎಲ್ಲಿ ಬರ್ತಿಯಾ ಅಂತ ಹೇಳು. ಪಾರ್ವತಮ್ಮಗೆ ನಾನೇ ಕಟ್ಟಿರುವ ದುಂಡು ಮಲ್ಲಿಗೆ ಹೂವಿನ ದಂಡೆ ಕೊಡ್ಬೇಕಿದೆ. ಅವಳಿಗೆ ಹೇಳಿದ್ದೀನಿ, ಶಿವಪ್ಪ ಇಲ್ಲಿಗೆ ಬಂದಾಗ ಮಲ್ಲಿಗೆ ದಂಡೆ ಕಳ್ಸಿ ಕೊಡ್ತೀನಿ ಅಂತ. ನೀ ಏನಾದ್ರೂ ನಂಗೆ ಸಿಗದೆ ವಾಪಾಸ್ ಹೋದೆ ಅಂದ್ರೆ ಪಾರ್ವತಮ್ಮ ಮಾತ್ರ ನಿಂಗೆ ಬಿಡಲ್ಲ...! ಅದೆಲ್ಲ ಯಾಕೆ ಬೇಕು ಅಲ್ವಾ ಅಪ್ಪಾ.. ನಾ ಇದ್ದಲ್ಲಿಯೇ ಬಂದು ನಿನ್ನ ಮಗನ ನೋಡ್ಕೊಂಡು, ಮಲ್ಲಿಗೆ ದಂಡೆ ತಗೊಂಡು ಹೋಗ್ಬಿಡು. ನನಗೂ ನಿನ್ನ ನೋಡಿದ ಹಾಗೆ ಆಗುತ್ತೆ. ಜೊತೆಗೆ, ಮುನಿಸಿಕೊಂಡಿರುವ ಅಮ್ಮನನ್ನು ನೀ ಒಲಿಸಿಕೊಳ್ಳಬಹುದು. ಅಲ್ವೇನಪ್ಪಾ....?
- ನಿನ್ನ ಮಗ
ನಾಗರಾಜ್ ಬಿ.ಎನ್.

ಸ್ವಾರ್ಥ.... ಅವರವರ ದೃಷ್ಟಿಕೋನ

ಅಂಕೋಲಾದ ಸಾಹಿತಿ ವಿಷ್ಣು ನಾಯ್ಕ ಸಂಪಾದನೆ ಮಾಡಿರುವ 'ಗೌರೀಶ ಕಾಯ್ಕಿಣಿ ಅವರ ಆಯ್ದ ಲೇಖನಗಳು' ಅತ್ಯಂತ ಇಷ್ಟ ಪಡುವ ಹಲವು ಹೊತ್ತಿಗೆಗಳಲ್ಲಿ ಒಂದು. ಅದರಲ್ಲಿಯ ತೆನೆ- 1ರ ಭಾಗದಲ್ಲಿನ ವಿಚಾರವಾದದಲ್ಲಿ ಗೌರೀಶ ಕಾಯ್ಕಿಣಿಯವರು ಭಯ, ಪೂರ್ವಗ್ರಹಿಕೆ, ಅಜ್ಞಾನ, ಅರೆಬರೆಜ್ಞಾನ, ಸ್ವಾರ್ಥ, ಅಭಿನಿವೇಷ, ಬಗೆಗುದುರೆಯ ಪಟ್ಟಿ, ಮನೋದೌರ್ಬಲ್ಯ, ಭಾವೋದ್ರೇಕ ಮತ್ತು ಅನುಮಾನದ ಕುರಿತು ಅರ್ಥವತ್ತಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿಯ ' ಸ್ವಾರ್ಥ' ಭಾಗದ ಅವರ ಬರವಣಿಗೆ ಮನುಷ್ಯನ ದೃಷ್ಟಿಕೋನದ ಕುರಿತು ಮಾರ್ಮಿಕವಾಗಿ ತಿಳಿಸುತ್ತದೆ. ಕಾಯ್ಕಿಣಿಯವರ ಆ ಬರಹ ಯಥಾರೂಪದಲ್ಲಿ......
ಪ್ರತಿಯೊಬ್ಬನೂ ಒಂದಲ್ಲ ಒಂದು ಅರ್ಥಕ್ಕೆ ಕಟ್ಟುಬಿದ್ದಿರುತ್ತಾನೆ. ಅದು ಆತನ ಕೇವಲ ಸಂಕುಚಿತ ಸ್ವಾರ್ಥವೇ ಆಗಬೇಕೆಂದಿಲ್ಲ. ಪ್ರತಿಷ್ಠೆ, ಅಭಿಮಾನ, ಭಾವಾವೇಶಗಳಿಂದ, ಅಭಿರುಚಿ, ಆಸಕ್ತಿ, ವ್ಯಾಮೋಹ ಇವೆಲ್ಲವೂ ಆತನ ಮನೋದಾಸ್ಯಕ್ಕೆ ಕಾರಣವಾಗುವ 'ಅರ್ಥಟಗಳು' ಆಗಬಲ್ಲವು. ಈ ಕೆಳಗಿನ ಒಂದು ಸಂವಾದ ಇದರದೊಂದು ಪರಿಚಯ ಕೊಡಬಹುದು.
ಮಗ ತನ್ನ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕೆಂಬ ಹಟದಿಂದ ತಂದೆಯನ್ನು ಕೇಳಿದ.
'ಅಪ್ಪಾ, ಧರ್ಮಾಂತರ ಅಂದರೇನು?'
ತಂದೆ ಹೇಳಿದ. 'ಮಗು, ಯಾವನೊಬ್ಬನು ಬೇರೊಂದು ಧರ್ಮ ಬಿಟ್ಟು ನಮ್ಮ ಧರ್ಮಕ್ಕೆ ಬಂದರೆ ಅದಕ್ಕೆ ಧರ್ಮಾಂತರ ಎನ್ನುವರು. ತಿಳಿಯಿತೇ?'
ಮಗನ ಜ್ಞಾನ ಪಿಪಾಸೆ ಅಷ್ಟಕ್ಕೇ ತಣಿಯಲಿಲ್ಲ. ' ಹಾಗಾದರೆ ಅಪ್ಪಾ, ಯಾವನೊಬ್ಬ ನಮ್ಮ ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಸೇರಿದರೆ....?'
ತಂದೆ ತಾಳ್ಮೆಗೆಟ್ಟು ಹೆದರಿಸಿದ, 'ಛೀ ಮಂಕೇ, ಆ ಮಾತೇ ಬಿಡು. ಅದು ಶುದ್ಧ ಧರ್ಮದ್ರೋಹ! ಅಂಥವರನ್ನು ನಂಬಬಾರದು. ದ್ರೋಹಿ ಮುಂಡೆ ಮಕ್ಕಳು!'
ಒಟ್ಟಾರೆ ಎಲ್ಲವೂ ದೃಷ್ಟಿಕೋನದಲ್ಲಿದೆ. ಅದು ಧರ್ಮಾಂತರ. ಇದು ಧರ್ಮದ್ರೋಹ. ಕ್ರಿಯೆ ಎರಡೂ ಕಡೆಗೆ ಒಂದೇ. ಧರ್ಮವನ್ನು ಬದಲಿಸುವವರು ಯಾವ ನಿಟ್ಟಿನಿಂದ ನೋಡುತ್ತಾರೆ ಎಂಬುದನ್ನು ಹೊಂದಿಕೊಂಡಿದೆ. ಹೀಗೆ ನಮ್ಮ ವಿಚಾರಸರಣಿಯ ಸ್ವರೂಪವನ್ನೇ ಬೇರೆ ಮಾಡುವ ಶಕ್ತಿ ನಮ್ಮ ಸ್ವಾರ್ಥದ, ಸ್ವಾಭಿಮಾನದ- ಸ್ವಜನಾಭಿಮಾನದ ಸೆಳೆತದಲ್ಲಿದೆ.

ಮಂಗಳವಾರ, ಮಾರ್ಚ್ 1, 2016

ಸುಮ್ಮನೆ ಅಳುತ್ತಿದ್ದಳು... ನಕ್ಕು ನಲಿಯುತ್ತಿದ್ದಳು... 
ಏನೂ ಅರಿಯದ ಎರಡು ವರ್ಷದ ಆ ಮಗು ಒಮ್ಮೊಮ್ಮೆ ಅಳುತ್ತಿತ್ತು. ಮತ್ತೆ ಕೆಲವೊಮ್ಮೆ ಸುಮ್ಮನೆ ಕೇಕೇ ಹಾಕಿ ನಗುತ್ತಿತ್ತು. ಅತ್ತಾಗ ಬಿಸ್ಕಿಟ್ ನೀಡಿ ಸುಮ್ಮನಿರಿಸಿದರೆ, ನಕ್ಕಾಗಿ ಗಲ್ಲ ಹಿಡಿದು ಇನ್ನಷ್ಟು ನಗಿಸುತ್ತಿದ್ದರು. ಬಂದ ಕೆಲ ಗಣ್ಯರು ಆಕೆಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು. ಗುರುಗಳು ತಲೆ ಮೇಲೆ ಕೈ ಇಟ್ಟು ನೂರ್ಕಾಲ ಬಾಳವ್ವ ಎಂದು ಆಶೀರ್ವದಿಸುತ್ತಿದ್ದರು.
ಇದು ಶುಕ್ರವಾರ ನಗರದ ನೆಹರು ಮೈದಾನದಲ್ಲಿ ಹನುಮಂತಪ್ಪನ ಪ್ರಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವೇಳೆ ಕಂಡು ಬಂದ ಮಾನವೀಯ ದೃಶ್ಯಗಳು. ಆಕೆ ಮೃತ ಯೋಧ ಹನುಮಂತಪ್ಪನ ಮಗಳು ನೇತ್ರಾ. ಕುಟುಂಬ ವರ್ಗದವರಿಗಾಗಿ ಅಲ್ಲಿ ವಿಶೇಷ ಆಸನಗಳ ವ್ಯವಸ್ಥೆ ಮಾಡಿ ಗ್ಯಾಲರಿ ನಿರ್ಮಿಸಲಾಗಿತ್ತು.  ಹನುಮಂತಪ್ಪನ ತಾಯಿ ಬಸಮ್ಮ, ಪತ್ನಿ ಮಾದೇವಿ ಸೇರಿದಂತೆ ಆತನ ಅಣ್ಣ, ಅತ್ತಿಗೆ, ಮಕ್ಕಳು ಹಾಗೂ ಇತರ ಸಂಬಂಧಿಗಳೆಲ್ಲ ಅಲ್ಲಿ ಆಗಮಿಸಿದ್ದರು. ಅವರಲ್ಲಿ ಈ ಪುಟ್ಟ ಮಗು ನೇತ್ರಾ ಎಲ್ಲರ ಕೇಂದ್ರ ಬಿಂದು.
ಕೆಲವು ಗಣ್ಯರು ಕೊಪ್ಪದ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಗ್ಯಾಲರಿಯೊಳಗೆ ಬಂದು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುತ್ತಿದ್ದರು. ಹನುಮಂತಪ್ಪರ ಮಗಳು ಎಂದು ತಿಳಿಯುತ್ತಿದ್ದಂತೆ, ಆಕೆಯನ್ನು ಎತ್ತಿ ಮುದ್ದು ಮಾಡುತ್ತಿದ್ದರು. ಅವರು ಎತ್ತಿಕೊಳ್ಳುತ್ತಿದ್ದಂತೆ ಆಕೆ ಜೋರಾಗಿ ಅಳುತ್ತಿದ್ದಳು. ಸಂದರ್ಭದಲ್ಲಿ ಬಿಸ್ಕಿಟ್ ನೀಡಿ ಅವಳನ್ನು ಸುಮ್ಮನಿರಿಸಲಾಗುತ್ತಿತ್ತು.
ಮೂರುಸಾವಿರ ಮಠದ ಶ್ರೀಗಳು, ರಂಭಾಪುರಿ ಶ್ರೀಗಳು, ವಚನಾನಂದ ಸ್ವಾಮೀಜಿ, ಆನಂದ ಗುರೂಜಿ ಅವಳ ತಲೆಯ ಮೇಲೆ ಕೈಯಿಟ್ಟು 'ಸುಖ ಸಂತೋಷದಿಂದ ನೂಕರ್ಾಲ ಬಾಳಿ ಬದುಕವ್ವ. ಹೆಮ್ಮೆಯ ದೇಶಭಕ್ತನ ಮಗಳಾಗಿ ಜನಿಸಿದ ನೀನು ಪುಣ್ಯವಂತೆ' ಎಂದು ಹರಸಿ ಹಾರೈಸಿದ್ದರು.
ಕೆಲ ಜನಪ್ರತಿನಿಧಿಗಳು ಆಕೆಯನ್ನು ಎತ್ತಿಕೊಳ್ಳಲು ಮುಂದಾದಾಗ ಒಲ್ಲೆ ಎಂದು ವರಾತ ತೆಗೆದವಳು, ಆರ್ಮಿ ಅಧಿಕಾರಿಗಳು ಎತ್ತಿಕೊಂಡಾಗ ಸುಮ್ಮನೆ ಇರುತ್ತಿದ್ದಳು. ಸಂದರ್ಭದಲ್ಲಿ 'ನನ್ನಪ್ಪನೂ ಆರ್ಮಿಯಲ್ಲಿದ್ದ' ಎನ್ನುವ ಭಾವ ಆಕೆಯ ಒಳಮನಸ್ಸಿಗೆ ಅರ್ಥವಾಗುತ್ತಿತ್ತೇ ಎನ್ನುವ ಪ್ರಶ್ನೆ ಅಲ್ಲಿದ್ದವರನ್ನು ಕಾಡುತ್ತಿತ್ತು.
ಆಕೆ ಒಂದೇ ಸಮನೆ ಅಳುತ್ತಿದ್ದದ್ದನ್ನು ಗಮನಿಸಿದ ಹಿರಿಯ ಆರ್ಮಿ ಅಧಿಕಾರಿಯೊಬ್ಬರು ಸುಮ್ಮನಿರಿಸಲು ಅವಳನ್ನು ಎತ್ತಿಕೊಂಡರು. ಅವರ ತೋಳಲ್ಲಿ ಬಂಧಿಯಾಗುತ್ತಿದ್ದಂತೆ ಅವಳು ಅಳು ನಿಲ್ಲಿಸಿದಳು. ಸುಮ್ಮನೇ ಕತ್ತೆತ್ತಿ ಅವರ ಮುಖ ನೋಡಿದ ಆಕೆ, ನಸುನಕ್ಕು ಎದೆ ಭಾಗದ ಮೇಲೆ ಕಣ್ಣಾಡಿಸಿದಳು. ಅಲ್ಲಿ ಮಿಲಿಟರಿ ಸಂಕೇತದ ಪದಕ ಜೋತಾಡುತ್ತಿತ್ತು. ಕೈಯ್ಯಲ್ಲಿ ಬಿಗಿಯಾಗಿ ಹಿಡಿದು, ಅವರ ಮುಖವನ್ನು ಪದೆ ಪದೇ ನೋಡುತ್ತಿದ್ದಳು. 'ನನ್ನಪ್ಪನ ಆಫೀಸರ್ಸ್ ನೀವು' ಎಂದು ಆಂಗಿಕ ಭಾವದಿಂದ, ಮೂಕ ಸಂವೇದನೆ ಮೂಲಕ ಆಕೆ ಹೇಳಿದಂತೆ ಭಾಸವಾಗಿತ್ತು.
ತನ್ನ ತುಂಟಾದಿಂದ, ಅರ್ಥ ಗರ್ಭಿತ ಭಾವದಿಂದ, ಸೂಕ್ಷ್ಮ ಸಂವೇದನೆಯಿಂದ ಭಾವನೆ ತೋರ್ಪಡಿಸುತ್ತಿದ್ದ ಪುಟ್ಟ ನೇತ್ರಾಳಿಗೆ, 'ಅಪ್ಪ ಇನ್ನಿಲ್ಲ' ಎನ್ನುವ ನೋವು ಕಾಡುತ್ತಿತ್ತೇನೋ ಎಂದೆನಿಸುತ್ತಿತ್ತು.
ಆದರೂ, ಪ್ರಪಂಚ ಅರಿಯದ ಮುಗ್ಧ ಮಗುವದು. ಅಳು, ನಗು, ತುಂಟಾಟ ಬಿಟ್ಟು ಇನ್ನೇನು ಅರ್ಥವಾದೀತು? ಒಟ್ಟಾರೆ, ಆ ನೇತ್ರಾ ನೆಹರು ಮೈದಾನದಲ್ಲಿ ನೆರೆದ ಪ್ರತಿಯೊಬ್ಬರ ಕೇಂದ್ರ ಬಿಂದುವಾಗಿದ್ದಂತು ಸತ್ಯ.
ನಿಮ್ಮ ರಾಜಕೀಯಕ್ಕೆ ಕಸಾಪನೇ ಬೇಕಾ...?

ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಅಕ್ಷರಶಃ ರಾಜಕೀಯ ಮನೆಯಾಗಿಬಿಟ್ಟಿದೆ. ಅದರಲ್ಲೂ ಧಾರವಾಡದ ಕಸಾಪ ಸಾಹಿತಿಗಳ ಬಣವಂತೂ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆಯಿಲ್ಲ ಎನ್ನುವಂತಾಗಿದೆ. ಒಳಗೊಳಗೆ ಪರಸ್ಪರ ಕತ್ತಿ ಮಸೆಯುತ್ತಿದ್ದವರು ಈಗ, ಬೀದಿಗೆ ಬಂದು ಅದನ್ನು ಪ್ರಯೋಗ ಮಾಡುತ್ತಿದ್ದಾರೆ. ಇವರ ಸ್ವಾರ್ಥಲೋಲುಪತೆ, ಅಧಿಕಾರ ದಾಹ, ನಿಸ್ವಾರ್ಥದಿಂದ ಹುಟ್ಟಿಕೊಂಡ ಕಸಾಪ ಎನ್ನುವ ಸಾಹಿತ್ಯ ಸಂಸ್ಥೆಗೆ ಅವಮಾನ!
-----------------
ಕನ್ನಡ ಕಟ್ಟುವ ಕೆಲಸ ಮಾಡಬೇಕಿದ್ದ ಕಸಾಪ ಅಧ್ಯಕ್ಷರು, ಯಾರಯಾರ ಅವಧಿಯಲ್ಲಿ ಎಷ್ಟೆಷ್ಟು ಹಣ ಖಚರ್ು ಮಾಡಿದ್ದಾರೆ, ಎಲ್ಲೆಲ್ಲಿ ಉಪಯೋಗಿಸಿದ್ದಾರೆ, ಹೇಗೆ ಅವ್ಯವಹಾರ ಮಾಡಿದ್ದಾರೆ ಎನ್ನುವುದನ್ನು ದುಬರ್ೀನು ಹಾಕಿಕೊಂಡು ಲೆಕ್ಕಾಚಾರದ ಕೂಡುಕಳೆಯುವಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಅವ್ಯವಹಾರ ನಡೆದಿದ್ದರೆ ಒಂದರ್ಥದಲ್ಲಿ ಇದು ಉತ್ತಮ ಬೆಳವಣಿಗೆ. ಹಾಗೆ ನಿಷ್ಪಕ್ಷಪಾತ ತನಿಖೆಯೂ ನಡೆಯಬೇಕು. ಆದರೆ, ನಿಜವಾಗಿಯೂ ಇದು ಕಸಾಪ ಅಧ್ಯಕ್ಷ ಗಾದಿಗೆ ನಡೆಯುತ್ತಿರುವ ರಾಜಕೀಯ ತಂತ್ರವಾಗಿದ್ದರೆ ಅಕ್ಷರ ಸರಸ್ವತಿಗೆ ಮಾಡುವ ದೊಡ್ಡ ಅವಮಾನ. ಇದನ್ನು ಸಾಹಿತ್ಯಾರಾಧಕರು ಅವಶ್ಯವಾಗಿ ಗಮನಿಸಬೇಕಿದೆ.
ಏನೇ ಇರಲಿ. ಸರಸ್ವತಿಯ ಆರಾಧನೆಗೆ ಪ್ರೋತ್ಸಾಹ ನೀಡುತ್ತ ಬೆನ್ನು ತಟ್ಟಿ ಗುರುತರ ಜವಾಬ್ದಾರಿ ಸ್ಥಾನದಲ್ಲಿ ನಿಲ್ಲಬೇಕಾದ ಅಧ್ಯಕ್ಷರೇ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಿರುವುದು ನೋವಿನ ಸಂಗತಿ.
ಕಳೆದ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಅಧ್ಯಕ್ಷ ಡಿ.ಎಂ. ಹಿರೇಮಠ ಹೇಳಿದರೆ, ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿಲ್ಲ, ತನಿಖೆ ನಡೆಸುವುದಾದರೆ ಈ ಹಿಂದಿನ ಅವಧಿಯ ವ್ಯವಹಾರವೂ ತನಿಖೆಯಾಗಲಿ ಎಂದು ಹಾಲಿ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳುತ್ತಾರೆ. ಅಂದರೆ, ಇಲ್ಲಿ ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು? ಇವರಿಬ್ಬರ ಅವಧಿಯಲ್ಲೂ ಅವ್ಯವಹಾರ ಆಗಿದೆಯಾ? ಇಲ್ಲ ಅಂದರೆ ಯಾರನ್ನು ಮಂಗ ಮಾಡಲು ಹೊರಟಿದ್ದಾರೆ?
ಬೆಂಕಿ ಇಲ್ಲದೆ ಹೊಗೆಯಾಡದು! ಅಕ್ಷರ ದೇವಿಗೆ ಅವಮಾನ ಮಾಡುವ, ಅಧಿಕಾರಕ್ಕಾಗಿ ಕೆಸರೆರಚಾಡುವ, ಹಣಕ್ಕಾಗಿ ಲಾಬಿ ಮಾಡುವ ಸಾಹಿತಿ ಮುಖವಾಡ ಧರಿಸಿದವರಿಗೆ ಧಿಕ್ಕಾರ! ಯಾರೇ ಆಗಿರಲಿ, ಕನ್ನಡ ಭಾಷೆಯ ಹೆಸರಲ್ಲಿ ರಾಜಕಾರಣ ಮಾಡುವವರನ್ನು ಹೆಡೆಮುರಿಕಟ್ಟಿ ಮೇಲೇಳದಂತೆ ಮಾಡಬೇಕು.
ರಾಜಕೀಯ ಮಾಡುವುದೇ ಆದರೆ, ಹಣಗಳಿಕೆ ಮಾಡುವುದೇ ಉದ್ದೇಶವಾಗಿದ್ದರೆ, ಕೆಸರೆರಚಾಡುವುದೇ ಮಜಾ ಎನ್ನುವುದಾದರೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇಕರ್ೊಳ್ಳಿ ಸ್ವಾಮಿ. ಕನ್ನಡ ಭಾಷೆ ಕಟ್ಟಿ, ಬೆಳೆಸುವಂಥ ಕನ್ನಡ ಸಾಹಿತ್ಯ ಪರಿಷತ್ ಗೆ ಯಾಕೆ ಬತರ್ೀರಾ. ಪವಿತ್ರ ದೇವಸ್ಥಾನದಂತಿರುವ ಕಸಾಪ ಮನೆಯನ್ನು ಯಾಕೆ ಅಪವಿತ್ರ ಮಾಡ್ತೀರಾ. ನಿಮ್ಮಥವರ ಅವಶ್ಯಕತೆ ಇಲ್ಲಿ ಇಲ್ಲಾರೀ....
ಪ್ರಾಮಾಣಿಕ, ಪರಿಶುದ್ಧ ಸಾಹಿತಿಗಳು ಲೆಕ್ಕವಿಲ್ಲದಷ್ಟು ಜನ ಇಲ್ಲಿದ್ದಾರೆ. ಸಾಹಿತಿ ಎಂದು ಗುರುತಿಸಿಕೊಂಡವರಿಗಿಂತಲೂ ಉತ್ತಮವಾಗಿ, ಸಾಹಿತ್ಯ ರಚನೆ ಮಾಡುವವರು ಇಲ್ಲಿ ಸಾಕಷ್ಟು ಜನರಿದ್ದಾರೆ. ಕಸಾಪ ಸದಸ್ಯರಾಗದೆ ಇರುವ ಸಾವಿರಾರು ಜನರು ನಮ್ಮ-ನಿಮ್ಮ ನಡುವೆ ಇದ್ದಾರೆ. ಎಲೆಮರೆ ಕಾಯಿಯಾಗಿರುವ ಅಂಥಹ ಸರಸ್ವತಿ ಆರಾಧಕರಿಗೆ ನಿಮ್ಮ ಕಸಾಪ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ. ನಿಮಗೆ ಶೆಡ್ಡು ಹೊಡೆಯುವಂತೆ ಅವರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುತ್ತಾರೆ. ಅದು ಬಿಟ್ಟು ರಾಜಕೀಯ ಮಾಡುತ್ತ ಯಾಕ್ರೀ ಇನ್ನೊಬ್ಬರಿಗೆ ಊಟದ ಉಪ್ಪಿನಕಾಯಿ ಆಗ್ತೀರಾ? ಇದೇನಾ ನಿಮ್ಮ ನಾಡು, ನುಡಿ ಕೆಲಸ... ಛೀ.

'ದಂಡುಪಾಳ್ಯ'ದ ಮಹಾರಾಯ...!

'ದೊಡ್ಡ ಮಗ ಇಲ್ಲೇ ಕೂಗಳತೆ ದೂರದಲ್ಲಿದ್ದಾನೆ. ನಾಲ್ಕು ವರ್ಷದ ಹಿಂದೆ ಆಕಸ್ಮಿಕವಾಗಿ ಎದುರಾಗಿದ್ದ. ಅಂದಿನಿಂದ ಇಲ್ಲಿಯವರೆಗೂ ಆತನ ಮುಖ ನಾ ನೋಡಿಲ್ಲ'
ಇದು ದಂಡುಪಾಳ್ಯ ಹೊಟೆಲ್(ನಮ್ಮ ಸಹದ್ಯೋಗಿಗಳು ಇಟ್ಟ ಹೆಸರು)ನಲ್ಲಿರುವ ವೇರ್ಟ ನಾರಾಯಣನ ಹತಾಶೆ ನುಡಿಗಳು.
ಈತ ಮುಗ್ದ, ಬಡಕಲು ದೇಹದವನಾದರೂ ಸದಾ ನಗುಮೊಗದ ವ್ಯಕ್ತಿ. ಹೊಟೆಲ್ಗೆ ಬಂದವರನ್ನು ಮನೆಯವರಂತೆ ಸತ್ಕರಿಸಿ ಆದರಿಸುವ ಅಪರೂಪದ ಮನುಷ್ಯ. ನಯ, ವಿನಯ, ಸೌಜನ್ಯ, ಪ್ರೀತಿ, ವಿಶ್ವಾಸ ಹೀಗೆ ಎಲ್ಲವನ್ನೂ ಮೈಗೂಡಿಸಿಕೊಂಡ ಮಹಾರಾಯ!
ಎಂದಿನಂತೆ, ಮಧ್ಯಾಹ್ನ ಊಟಕ್ಕೆ ಹೋದಾಗ ನಗುನಗುತ್ತಲೇ ಸ್ವಾಗತಿಸಿ 'ಅನ್ನ-ಸಾಂಬಾರ' ಮುಂದಿಟ್ಟ. ಸುಮ್ಮನೆ ಮಾತಿಗೆಳೆದೆ. ಆತ, ಒಂದೊಂದಾಗಿ ತನ್ನ ಬದುಕಿನ ಕಥೆಯನ್ನೇ ಬಿಚ್ಚಿಡುತ್ತ ಹೋದ. ಅದನ್ನು ಕೇಳುತ್ತಿದ್ದ ನನಗೆ ಬಾಯಿಗೆ ಹಾಕುತ್ತಿರುವ ತುತ್ತೆಲ್ಲ, ಗಂಟಲಲ್ಲಿಯೇ ಉಳಿದಿದ್ದವು. ಕಣ್ಣಂಚು ಒದ್ದೆಯಾಗುತ್ತಿದ್ದರೂ, ಬಲವಂತವಾಗಿ ತಡೆದುಕೊಳ್ಳುತ್ತಿದ್ದೆ. ಆದರೆ ಆತ ಮಾತ್ರ ಒಂದೇ ಓಘದಲ್ಲಿ ಯಾವ ಮುಚ್ಚು-ಮರೆಯಿಲ್ಲದೆ ತನ್ನ ಬದುಕನ್ನು ಬೆತ್ತಲಾಗಿಸುತ್ತಿದ್ದ. ಸಂದರ್ಭದಲ್ಲಿ ಆತ ನೋವನ್ನು ನುಂಗಿಕೊಳ್ಳುವ ಪರಿ, ಭಾವನೆಯ ಏರುಪೇರು ಮನಸ್ಸನ್ನು ಶಾಂತತೆಗೆ ನೂಕಿತ್ತು.
ನಾರಾಯಣ ಮಂಗಳೂರಿನಿಂದ ಹುಬ್ಬಳ್ಳಿಗೆ ಬಂದು ಒಂಬತ್ತು ವರ್ಷಗಳು ಗತಿಸಿವೆ. ದುಡಿದು ತಿಂದರೆ ಮಾತ್ರ ಹೊಟ್ಟೆಗೆ ಕೂಳು ಎನ್ನುವ ಪರಿಸ್ಥಿತಿ ಮನೆಯದ್ದಾಗಿತ್ತು. ಹೆಂಡತಿ ಜೊತೆ ಎರಡು ಜನ ಗಂಡು ಮಕ್ಕಳು. ಒಬ್ಬ ಮಗ ಹುಬ್ಬಳ್ಳಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದರೆ, ಇನ್ನೊಬ್ಬ ಊರಲ್ಲಿ ಹೊಟೆಲ್ ಉದ್ಯಮದಲ್ಲಿ ತೊಡಗಿದ್ದಾನೆ.
ನಾಲ್ಕು ವರ್ಷದ ಹಿಂದೆ ದೊಡ್ಡ ಮಗ ತನ್ನದಲ್ಲದ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದ. ಅದಕ್ಕೆ ನಾರಾಯಣ ವಿರೋಧ ವ್ಯಕ್ತಪಡಿಸಿದರು ಎಂದು, ಮನೆಯವರನ್ನೆಲ್ಲ ದೂರ ಮಾಡಿಕೊಂಡು ಪ್ರೀತಿಸಿದವಳನ್ನೇ ಮದುವೆಯಾಗಿ ಹುಬ್ಬಳ್ಳಿಯಲ್ಲಿಯೇ ನೆಲೆಸಿದ್ದಾನೆ. ಕೈತುಂಬ ಸಂಬಳ ಪಡೆಯುವ ಆ ಮಗ, ಐಷಾರಾಮಿ ಜೀವನ ನಡೆಸುತ್ತಿದ್ದಾನೆ!
'ಮಗನ ಇಚ್ಛೆಯ ವಿರುದ್ಧವಾಗಿ ಅಂದು ನಾನು ನಡೆದುಕೊಂಡ ಪರಿಣಾಮ, ಕೂಗಳತೆ ದೂರದಲ್ಲಿ ಮಗ-ಸೊಸೆ ಇದ್ದರೂ ಅವರನ್ನು ನೋಡಲಾಗದ ಪರಿಸ್ಥಿತಿ ನನ್ನದು. ಅಂದು ಆಕಸ್ಮಿಕವಾಗಿ ಅಂಗಡಿಯೊಂದರಲ್ಲಿ ಭೇಟಿಯಾಗಿದ್ದ. ಜನ್ಮ ನೀಡಿದ ತಂದೆ ಎನ್ನುವ ಭಾವವೂ ಆತನಲ್ಲಿ ಕಂಡು ಬಂದಿಲ್ಲ. ನಾನು ಮಾಡಿದ್ದು ತಪ್ಪು ಎಂದು ಹೇಳಬೇಕೆಂದು ಬಾಯಿ ತೆರೆಯುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದ' ಎಂದು ನಾಲ್ಕು ವರ್ಷದ ಹಿಂದೆ ಮಗನನ್ನು ಕಣ್ತುಂಬಿಸಿಕೊಂಡ ಕ್ಷಣ ನೆನಪಿಸಿಕೊಂಡಿದ್ದ ವೇರ್ಟ ನಾರಾಯಣ.
ದೊಡ್ಡ ಮಗ ಸಣ್ಣ ಮಗನ ಸಂಪರ್ಕದಲ್ಲಿದ್ದಾನಂತೆ. ಕರೆ ಮಾಡಿದಾಗ ತಾಯಿಯ ಯೋಗ-ಕ್ಷೇಮವಷ್ಟೇ ವಿಚಾರಿಸುತ್ತಾನಂತೆ. ಆದರೆ, 'ಅಪ್ಪ ಹೇಗಿದ್ದಾನೆ, ಎಲ್ಲಿದ್ದಾನೆ' ಎಂದು ಎಂದೂ ಕೇಳಿಲ್ಲವಂತೆ. 'ಇಲ್ಲೇ ಇರುವ ಮಗನನ್ನು ಒಮ್ಮೆ ನೋಡಿಕೊಂಡು ಬರಬೇಕು ಎಂದೆನಿಸಿದರೂ, ಅವನಿಗೆ ನಾ ಬೇಡವಾದ ಮೇಲೆ ಮತ್ಯಾಕೆ ಅಲ್ಲಿಗೆ ಹೋಗಿ ಅವನ ನೆಮ್ಮದಿ ಹಾಳು ಮಾಡಲಿ' ಎಂದು ತನಗೆ ತಾನೇ ನಾರಾಯಣ ಸಾಂತ್ವನ ಹೇಳಿಕೊಳ್ಳುತ್ತಾನೆ.
--------------------------------------------
ವಿಷಯವಿಷ್ಟೇ.... ಬೆಳೆದು ನಿಂತ ಮಕ್ಕಳನ್ನು ಸ್ನೇಹಿತರ ಹಾಗೆ ಕಾಣಬೇಕು ಎನ್ನುವ ಹಿತೋಕ್ತಿಯಿದೆ. ಅವರ ಇಚ್ಛೆಯ ವಿರುದ್ಧವಾಗಿ ನಡೆದುಕೊಂಡರೆ, ಹೆತ್ತವರನ್ನೂ ದೂರ ತಳ್ಳಿಬಿಡುತ್ತಾರೆ. ಇದು ಮಕ್ಕಳ ತಪ್ಪು, ಹೆತ್ತವರ ತಪ್ಪು ಎನ್ನುವ ವಿಮಶರ್ೆಗಿಂತ.... ಬೆಳೆದು ಬಂದ ಸಂಸ್ಕಾರ ಎಂತಹದ್ದು ಎಂದು ಯೋಚಿಸಬೇಕು. ಹಾಗಂತ ಇಲ್ಲಿ ನಾರಾಯಣನ ನಿಧರ್ಾರ ತಪ್ಪು ಎಂದಲ್ಲ, ಸರಿ ಎಂತಲೂ ಅಲ್ಲ. ನಾರಾಯಣ ಬೆಳೆದು ಬಂದ ಪರಿಸರ ಹಾಗಿತ್ತು, ಅದಕ್ಕೆ ತನ್ನ ಜಾತಿಯ ಹುಡುಗಿಯಲ್ಲ ಎಂದು ಮಗನ ಆಯ್ಕೆಯನ್ನು ವಿರೋಧಿಸಿದ್ದ.
ಈಗ ನಾರಾಯಣನಿಗೆ ತನ್ನ ತಪ್ಪಿನ ಅರಿವಾಗಿದೆ. ಬದಲಾಗಿದ್ದಾನೆ. ಮಗ ಆಧುನಿಕ ಜಗತ್ತಿಗೆ ತೆರದುಕೊಂಡಿದ್ದಾನೆ. ಕೈ ತುಂಬಾ ದುಡಿದು, ಸುಖಿ ಜೀವನ ನಡೆಸುತ್ತಿದ್ದಾನೆ. ಆದರೆ ಮನದಲ್ಲಿ ಇನ್ನೂ ಅಪ್ಪನ ಬಗ್ಗೆ ತಾತ್ಸಾರ ಪುಟಿದೇಳುತ್ತಲೇ ಇದೆ.
ಈಗ ಹೇಳಿ ತಪ್ಪು ಯಾರದ್ದು...? ತಪ್ಪಿಗೆ ಕ್ಷಮೆ ಎನ್ನುವುದೇ ಇಲ್ಲವೇ..? ಇಂತಹ ಎಷ್ಟೋ ಕಥೆಗಳು ನಮ್ಮ ಕಣ್ಮುಂದೆಯೇ ಇವೆ.