'ಅನಾರ್ಕಲಿ' ಬಟ್ಟೆಯಲ್ಲಿ ನೀ ಅಂದು ಕಂಡಾಗ!
ನನ್ನೊಲವಿನ ಪುಟ್ಟ ಪಾರಿಜಾತವೇ,
ನೀ ಒಂದು ಮುಗಿಯದ ಕವನ ಎಂದು ಭಾವಿಸಿದ್ದೆ ಗೆಳತಿ. ನಿನ್ನ ಬಗ್ಗೆ ಎಷ್ಟು ಬರೆದರೂ ಸಾಲದು ಎನ್ನುವಂತಿತ್ತು ನನ್ನ ಭಾವ. ಆದರೆ, ನಿನ್ನೀ ದೀರ್ಘ ಮೌನ, ಸರಾಗವಾಗಿ ಹರಿಯುತ್ತಿದ್ದ ಕವನಕ್ಕೆ ತಡೆಯೊಡ್ಡುತ್ತಿದೆ. ನೀ ನನಗೆ ಪರಿಚಯವಾಗಿದ್ದ ಘಳಿಗೆ ಬಹುಶಃ ಯಮಗಂಡ ಕಾಲವಿತ್ತೇನೋ ಎಂದೆನಿಸುತ್ತಿದೆ....!'ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯ ಬರಹ...
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ...' ಎನ್ನುವ ಸಿನೇಮಾದ ಪ್ಯಾಥೋ ಸಾಂಗಿನಂತೆ, ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಬ್ರಹ್ಮ ನನ್ನ ಹಣೆ ಬರಹ ಬರೆದಿರಬೇಕು. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಸುಮ್ಮನಿದ್ದ ನಾ, ಅರಿವಿಲ್ಲದೆ ನಿನ್ನ ಪ್ರೀತಿಸಿ ವಿಲವಿಲನೇ ಒದ್ದಾಡುತ್ತಿದ್ದೇನೆ. ಏನು ಮಾಡಬೇಕೆಂದು ತೋಚದೆ `ಮುಂಗಾರು ಮಳೆ' ಪ್ರೀತಮನ ಹಾಗೆ ತಲೆ ಕೆರೆದುಕೊಳ್ಳುತ್ತಿದ್ದೇನೆ.
ಅಲ್ಲಾ ಕಣೇ, ಪ್ರೀತಿ ಇಷ್ಟೊಂದು ಘೋರ ಎಂದು ತಿಳಿದಿದ್ದರೆ ಖಂಡಿತ ನಿನ್ನನ್ನು ಪ್ರೀತಿಸುವ ಸಾಹಸಕ್ಕೆ ಇಳಿಯುತ್ತಿರಲಿಲ್ವೆ. ರಾತ್ರೆ ನಿದ್ದೆನೂ ಸರಿಯಾಗಿ ಬರ್ತಾಯಿಲ್ಲ. ಊಟ-ತಿಂಡಿಯಂತೂ ರುಚಿನೇ ಇಲ್ಲದ ಹಾಗಾಗಿದೆ. ಏನು ಮಾಡಿದರೂ, ಎಲ್ಲೇ ಹೋದರೂ ನೆರಳಿನಂತೆ ನೀ ನನ್ನನ್ನೇ ಹಿಂಬಾಲಿಸಿದಂತೆ ಭಾಸವಾಗುತ್ತಿದೆ. ಹೌದು ಕಣೇ, ನೀ ನನ್ನ ಬದುಕೇ ಆಗಿ ಪರಿವರ್ತನೆ ಆಗ್ಬಿಟ್ಟಿದ್ದೀಯಾ. ನಿನ್ನ ಬಿಟ್ಟು ಬದುಕೋ ಸಾಮಥ್ರ್ಯವಂತೂ ನನ್ನಲ್ಲಿಲ್ಲ ಎನ್ನುವುದು ಅರಿವಾಗ್ಬಿಟ್ಟಿದೆ.
ಅಲ್ವೆ, ಅದೆಷ್ಟು ಬಾರಿ ನಾ ನಿನಗೆ ಹೇಳಿಲ್ಲ ಹೇಳು, 'ನಾ ನಿನ್ನನ್ನು ಎಷ್ಟೊಂದು ಗಾಢವಾಗಿ ಪ್ರೀತಿಸ್ತಾ ಇದ್ದೀನಿ ಅಂತ. ಎಷ್ಟು ವಿಧದಲ್ಲಿ ತೋರಿಸಿಕೊಟ್ಟಿಲ್ಲ ಹೇಳು. ಆರು ತಿಂಗಳಿನಿಂದ ನಿರಂತರವಾಗಿ ನಿನ್ನ ಪ್ರೀತಿಯ ಹಿಂದೆ ಬಿದ್ದು, ಒಂದು ಹಿಡಿ ಪ್ರೀತಿಗಾಗಿ ಮಂಡಿಯೂರಿ ಅಂಗಲಾಚುತ್ತಿದ್ದೇನೆ. ಆ ನನ್ನ ವೇದನೆಗೆ, ತಾಕಲಾಟಕ್ಕೆ ನೀ ಒಂದಿನಿತು ಸ್ಪಂದನೆ ತೋರದೆ, ಮಾತೇ ಬರದ ಮೂಕಿಯಂತೆ ವತರ್ಿಸುತ್ತಿದ್ದೀಯಲ್ಲೇ. ಬೇಡ ಕಣೇ, 'ಪ್ರೀತಿಸ್ತೀನಿ' ಅಂತಾದ್ರೂ ಹೇಳು, ಇಲ್ಲಾ, 'ನೀ ನನಗೆ ಇಷ್ಟವಿಲ್ಲ' ಅಂತಾದ್ರೂ ಹೇಳು ಮಾರಾಯ್ತಿ. ಎಷ್ಟು ದಿನ ಅಂತ ಹೀಗೆ ಪರಿತಪಿಸ್ತಾ ಇರಬೇಕು? ಕಾದು ಕಾದು ನನ್ನನ್ನೇ ನಾ ಕಳೆದುಕೊಳ್ಳುತ್ತಿದ್ದೇನೆ. ಏನಾದ್ರೂ ಹೇಳೇ ಹುಡುಗಿ, ನಿನ್ನ ಉತ್ತರ ಕೇಳಿ ಎಲ್ಲಿಯಾದ್ರೂ, ಹೇಗಾದ್ರೂ ಬದುಕಿಕೊಳ್ತೇನೆ!ಅವತ್ತು ಕೇಳಿದ್ಯಲ್ಲಾ, ನಾ ನಿನಗೆ ಹೇಗೆ ಪರಿಚಯ? ನನ್ನ ಮೊಬೈಲ್ ನಂಬರ್ ಯಾರು ನಿನಗೆ ಕೊಟ್ಟಿದ್ದು? ಎಂತ. ಹೇಳ್ತೀನಿ ಕೇಳು. ಅಂದು ಯಾಕೋ ಮನಸ್ಸು ಅವ್ಯಕ್ತ ಭಾವದಲ್ಲಿ ತಿಣುಕಾಡುತ್ತಿತ್ತು. ತುಸು ಟೈಂ ಪಾಸಾದೀತೆಂದು ಕಣ್ಮುಂದೆ ಇದ್ದ ಲ್ಯಾಪಿಗೆ ಬಿಎಸ್ಎನ್ಎಲ್ ಡಾಟಾ ಕಾಡರ್್ ಕನೆಕ್ಟ್ ಮಾಡಿ ನೇರವಾಗಿ ಫೇಸ್ಬುಕ್ಗೆ ಲಾಗಿನ್ ಆದೆ. ವಾಲ್ ಪಕ್ಕದಲ್ಲಿ ನೀಲಿ ಬಣ್ಣದ ಅನಾರ್ಕಲಿ ಬಟ್ಟೆ ಧರಿಸಿದ ನೀ ಕಂಡು ಬಂದೆ. ಹಿಂದೆ-ಮುಂದೆ ಯೋಚಿಸದೆ ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಿಟ್ಟಿದ್ದೆ. ಒಂದು ದಿನ ಬಿಟ್ಟು ನೀ ನನ್ನ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಂಡಿದ್ದೆ.
ಆ ಒಂದು ದಿನದಲ್ಲಿಯೇ ನಾ ನಿನ್ನೆಲ್ಲ ಜಾತಕವನ್ನು ತಡಕಾಡಿ ಬಿಟ್ಟಿದ್ದೆ. ನೀ ಹುಟ್ಟಿದ ಊರು, ಅಆಇಈ ಕಲಿತ ಬಾಲವಾಡಿ, ಅಳು ಮುಂಜಿ ಮುಖ ಮಾಡಿಕೊಂಡು ಹೋದ ಕನ್ನಡ ಶಾಲೆ, ಠಾಕು-ಠೀಕಾಗಿ ಹತ್ತಿದ ಕಾಲೇಜ್ ಮೆಟ್ಟಿಲು, ಸ್ನಾತಕೋತ್ತರ ಪದವಿ ಪಡೆದು ಬಿಗುಮಾನದಿಂದ ಹೊರಬಿದ್ದ ವಿಶ್ವವಿದ್ಯಾಲಯ ಹೀಗೆ.... ನೀ ಹೆಜ್ಜೆ ಇಟ್ಟಲ್ಲೆಲ್ಲ ನಾ ಮಾನಸಿಕವಾಗಿ ಓಡಾಡಿಬಿಟ್ಟಿದ್ದೆ. ಅದೂ ಅಲ್ಲದೆ, ನಿನ್ನೆಲ್ಲ ಹತ್ತಿರದ ಸ್ನೇಹಿತರ, ಸಂಬಂಧಿಗಳ ಮಾಹಿತಿ ಸಂಗ್ರಹಿಸಿದ್ದೆ. ಅವರಲ್ಲಿ ಕೆಲವರು ನನಗೆ ಪರಿಚಯದವರಾಗಿದ್ದರೆ, ಇನ್ನು ಕೆಲವರು ನನ್ನಾತ್ಮೀಯರಾಗಿದ್ದರು. ಅವರೇ ಕಣೇ ನನಗೆ ನಿನ್ನ ಮಗುವಿನಂತ ಮುಗ್ದ ಗುಣದ ಬಗ್ಗೆ ಹೇಳಿದ್ದು, ಯಾರಿಗೂ ನೋವು ನೀಡದೆ ಬದುಕುವ ನಿನ್ನ ಸೌಮ್ಯತೆ ಬಗ್ಗೆ ಹೇಳಿದ್ದು, ಪ್ರಾಣಿ, ಪಕ್ಷಿ, ಪ್ರಕೃತಿ ಎಂದರೆ ನಿನಗಿಷ್ಟ ಎಂದು ಹೇಳಿದ್ದು....!
ಹುಡುಗಿ, ಅಷ್ಟರಲ್ಲಾಗಲೇ ನನ್ನೆದೆಯ ಕೊಳದಲ್ಲಿ ಪ್ರೇಮದಾವರೆಯ ದಳಗಳು ಮೆಲ್ಲನೆ ಚಿಗುರೊಡೆಯಲಾರಂಭಿಸಿದ್ದವು ಗೊತ್ತಾ? ನನಗಾಗಿ ಒಂದು ಹೃದಯ ಮಿಡಿಯಬೇಕು, ನನ್ನೊಲವ ಜೇನಿಗಾಗಿ ತುಡಿಯಬೇಕು ಎನ್ನುವ ಆಸೆ ಹೊತ್ತ ವಯಸ್ಸಿನಲ್ಲಿಯೇ ನಿನ್ನ ಮೇಲೆಪ್ರೇಮಾಂಕುರವಾಗಿತ್ತು. ನಿನಗೆ ನನ್ನದು ಮೊದಲ ಪ್ರೀತಿಯಾಗದಿರಬಹುದು, ಆದರೆ, ನನ್ನೆದೆಯ ಪ್ರೇಮದ ಬಾಗಿಲನ್ನು ತಟ್ಟಿದವಳು ನೀನೇ ಮೊದಲಿಗಳು ನೆನಪಿರಲಿ!
ಸರಿ, ನಿನ್ನ ದೀರ್ಘ ಮೌನಕ್ಕೆ ಉತ್ತರ ಬಯಸಿ, ಈ ಪತ್ರ ಬರೆದಿದ್ದೇನೆ. ಇಲ್ಲಿ ಬರೆದಿರುವ ಒಂದೊಂದು ಸಾಲುಗಳು ನಿನ್ನ ಪಾದದ ಮೇಲಿಟ್ಟ ಪುಟ್ಟ ಪಾರಿಜಾತ. ಅದನ್ನು ನೀ ಮುಡಿಗೇರಿಸಿಕೊಂಡು ಕಿರು ಬೆರಳು ಹಿಡಿಯುತ್ತೀಯೋ... ಅಥವಾ, ಕಾಲಲ್ಲಿಯೇ ಹೊಸಕಿಹಾಕಿ ಇತಿಶ್ರೀ ಹಾಡುತ್ತೀಯೋ.... ನಿನಗೆ ಬಿಟ್ಟಿದ್ದು!
-ಮಾಧವ